ಚಿತ್ರಹಿಂಸೆಗೆ ಅಂಜದೆ ಹೋರಾಡುತ್ತಿರುವ ದಿಟ್ಟೆ!

ಭಾವತೀರಯಾನ
ನಾವೀಗ ಬದುಕುತ್ತಿರುವುದು, ಬಹಳ ಮುಂದುವರಿದಿದೆ ಎನ್ನಲಾದ 21ನೇ ಶತಮಾನದಲ್ಲಿ. ತಾಂತ್ರಿಕ ಸಾಧನೆ, ಹಣ ಸಂಪಾದನೆ ಹಾಗೂ ಜನಸಂಖ್ಯೆಯ ಲೆಕ್ಕಾಚಾರದಲ್ಲಿ ನಾವು ಬಹಳ ಮುಂದುವರಿದಿದ್ದೇವೆ. ಆದರೆ, ಮಹಿಳೆಯನ್ನು ಶೋಷಿಸುವ, ಜಾತಿ ಪದ್ಧತಿಯನ್ನು ಆಚರಿಸುವ ಹಾಗೂ ಸಂಪ್ರದಾಯದ ಹೆಸರಿನಲ್ಲಿ ಅನಿಷ್ಟ ಪದ್ಧತಿಗಳನ್ನು ಬೆಂಬಲಿಸುವ ಕೆಲಸವನ್ನು ಹಲವರು ಈಗಲೂ ತುಂಬ ಶ್ರದ್ಧೆಯಿಂದ ಉಳಿಸಿಕೊಂಡು ಬಂದಿದ್ದಾರೆ. ಇಂಥ ಜನ, ಸಮಾನತೆ ಬಯಸುವ, ಸ್ವಾತಂತ್ರ್ಯಕ್ಕಾಗಿ ಹಂಬಲಿಸುವ, ಅನ್ಯಾಯವನ್ನು ಪ್ರತಿಭಟಿಸುವ ಹೆಂಗಸರನ್ನು ಅನುಮಾನದಿಂದ ನೋಡುತ್ತಾರೆ. ಅವರನ್ನು ಹೆಜ್ಜೆ ಹೆಜ್ಜೆಗೂ ಅವಮಾನಿಸುತ್ತಾರೆ. ಅವಕಾಶ ಸಿಕ್ಕಾಗ ಹೊಡೆದೂ ಬಿಡುತ್ತಾರೆ. ಆನಂತರ-ನ್ಯಾಯ ಬೇಕೇನೆ ನಿಂಗೆ ನ್ಯಾಯಾ? ಎಂದು ಅಬ್ಬರಿಸುತ್ತಾರೆ. ಅಂಥವರ ಕ್ರೌರ್ಯಕ್ಕೆ ದಶಕದಿಂದ ತುತ್ತಾದರೂ ಹೆದರದೆ, ನ್ಯಾಯಕ್ಕಾಗಿ ಪಟ್ಟುಬಿಡದೆ ಹೋರಾಡುತ್ತಿರುವ ಚಿತ್ರಲೇಖಾ ಎಂಬ ದಿಟ್ಟೆಯ ಹೋರಾಟದ ಬದುಕಿನ ಕಥೆಯ ವಿವರಣೆ ಇಲ್ಲಿದೆ.
ಕೇರಳ ರಾಜ್ಯದ ಕಣ್ಣೂರು ಜಿಲ್ಲೆಗೆ ಸೇರಿದ ಪಯ್ಯನ್ನೂರ್ ಎಂಬ ಊರಿನವಳು ಚಿತ್ರಲೇಖಾ. ದಲಿತ ಕುಟುಂಬದವಳು ಎಂಬ ಕಾರಣದಿಂದ ಅವಳ ಮನೆ ಊರಿಂದ ಹೊರಗಿತ್ತು. ತನ್ನ ಬಾಲ್ಯ ಮತ್ತು ಬದುಕನ್ನು ನೆನಪಿಸಿಕೊಂಡು ಚಿತ್ರಲೇಖಾ ವಿಷಾದದಿಂದ ಹೇಳುತ್ತಾಳೆ: 'ಇಡೀ ಊರಲ್ಲಿ ದಲಿತ ಕುಟುಂಬ ಅಂತ ಇದ್ದುದು ನಾವು ಮಾತ್ರ... ಜಾತಿಯ ಲೆಕ್ಕಾಚಾರದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಐವತ್ತಕ್ಕೂ ಹೆಚ್ಚು ಕುಟುಂಬಗಳು ನಮ್ಮ ಊರಲ್ಲಿದ್ದವು ನಿಜ. ಆದರೆ, ಅವರೆಲ್ಲ ನಮ್ಮನ್ನು ಹಿಂದುಳಿದವರಲ್ಲಿಯೇ ಹಿಂದುಳಿದವರು ಎಂದು ಕರೆಯುತ್ತಿದ್ದರು. ಪರಿಣಾಮ, ಕೆರೆಯಿಂದ ಅಥವಾ ಊರ ಬಾವಿಯಿಂದ ನೀರು ತರುವ ಸ್ವಾತಂತ್ರ್ಯವೂ ನಮಗಿರಲಿಲ್ಲ. ಮನೆಗೆ ನೀರು ಬೇಕೆಂದರೆ, ಬಾವಿಯಿಂದ ತುಂಬ ದೂರದಲ್ಲಿಯೇ ಬಿಂದಿಗೆ ಇಟ್ಟು, ಸ್ವಾಮೀ, ನಮಗೆ ನೀರು ಬೇಕು ಎಂದು ಕೂಗಬೇಕಿತ್ತು. ಆಗ ಬಾವಿಯ ಬಳಿ ಇದ್ದವರು ನೀರು ತಂದು ನಮ್ಮ ಬಿಂದಿಗೆಗೆ ಎತ್ತರದಿಂದ ಸುರಿಯುತ್ತಿದ್ದರು. ಇದನ್ನೆಲ್ಲ ಕಂಡಾಗ ತುಂಬಾ ಸಂಕಟವಾಗುತ್ತಿತ್ತು. ಊರಲ್ಲಿರುವ ಬೇರೆ ಯಾರಿಗೂ ಹೀಗೆ ಮಾಡಲ್ಲ. ನಮಗೆ ಮಾತ್ರ ಯಾಕೆ ಹೀಗೆ ಮಾಡ್ತಾರೆ ಎಂದು ಅಮ್ಮನನ್ನು, ಅಜ್ಜಿಯನ್ನು ಪ್ರಶ್ನಿಸುತ್ತಿದ್ದೆ. ಅವರು-'ದೊಡ್ಡವರ ಇಂಥ ಕ್ರಮದಿಂದ ನಮಗೆ ಬಾವಿಯಿಂದ ನೀರು ಸೇದುವ ಶ್ರಮವೇ ತಪ್ಪಿಹೋಗಿದೆ. ಅದಕ್ಕಾಗಿ ಖುಷಿಪಡು ಮಗಳೇ' ಎಂದು ಹೇಳಿ ಮಾತು ತೇಲಿಸುತ್ತಿದ್ದರು.
ನನಗೆ ಐದು ವರ್ಷ ಆಗಿದ್ದಾಗಲೇ ನಮ್ಮ ತಂದೆ ಮನೆಯಿಂದ ಓಡಿ ಹೋದ. ಪರಿಣಾಮ, ಮೂರು ಮಕ್ಕಳನ್ನು ಸಾಕುವ ಹೊಣೆ ಅಮ್ಮನ ಹೆಗಲಿಗೆ ಬಿತ್ತು.ಅಮ್ಮ, ಶ್ರೀಮಂತರ ಜಮೀನಿನಲ್ಲಿ ಕೂಲಿಗೆ ಹೋದಳು. ನಮ್ಮನ್ನು ಶಾಲೆಗೆ ಸೇರಿಸಿದಳು. ಶಾಲೆಯಲ್ಲಿ, ಜೊತೆಗಿದ್ದ ವಿದ್ಯಾರ್ಥಿಗಳು ನನ್ನನ್ನು ಮುಟ್ಟುತ್ತಿರಲಿಲ್ಲ. ಒಂದು ಮೂಲೆಯಲ್ಲಿ ವರ್ಷವಿಡೀ ಏಕಾಂಗಿಯಾಗಿಯೇ ಕಳೆದೆ. ಇಂಥ ಸಂಕಟದ ಬದುಕು 10ನೇ ತರಗತಿಯವರೆಗೂ ಮುಂದುವರಿಯಿತು. ಇದೆಲ್ಲ ನಡೆದದ್ದು ಬರೀ 20 ವರ್ಷದ ಹಿಂದೆ. ಎಸ್ಸೆಸ್ಸೆಲ್ಸಿ ಮುಗಿದ ನಂತರ ನರ್ಸಿಂಗ್ ಕೋರ್ಸ್ ಮುಗಿಸಿದೆ. ಈ ಸಂದರ್ಭದಲ್ಲಿಯೇ ನನಗೆ ಮದುವೆಯಾಯಿತು. ಮೂರು ವರ್ಷ ಮುಗಿಯುವುದರೊಳಗೆ ಎರಡು ಮಕ್ಕಳಾದವು. ಸಂಭ್ರಮದ ಬದುಕು ನನ್ನದಾಯಿತು ಎಂದು ಬೀಗುತ್ತಿದ್ದಾಗಲೇ ಅನಾಹುತವೊಂದು ನಡೆದುಹೋಯಿತು. ಅದೊಂದು ಬೆಳಿಗ್ಗೆ ಯಾವುದೋ ವಿಷಯಕ್ಕೆ ಜಗಳ ಆರಂಭಿಸಿದ ಗಂಡ, ವಾರದ ನಂತರ ಹೇಳದೇ ಕೇಳದೆ ಓಡಿಹೋದ.
ಈ ಸಂದರ್ಭದಲ್ಲಿ, ಮಕ್ಕಳನ್ನು ಸಾಕುವುದಕ್ಕಾದರೂ ನಾನು ಬದುಕಲೇಬೇಕಿತ್ತು. ದುಡಿಮೆಗೆ ಇಳಿಯಲೇಬೇಕಾಗಿತ್ತು. ನರ್ಸಿಂಗ್ ಕೋರ್ಸ್ ಮುಗಿದಿತ್ತಲ್ಲ; ಅದೇ ಕಾರಣದಿಂದ ನರ್ಸಿಂಗ್ ಹೋಂನಲ್ಲಿ ಕೆಲಸಕ್ಕೆ ಸೇರಿಕೊಂಡೆ. ಕೆಲಸ ಸಿಕ್ಕಿತು ಎಂಬ ಕಾರಣಕ್ಕೆ ಮಕ್ಕಳೊಂದಿಗೆ ತಾಲ್ಲೂಕು ಕೇಂದ್ರಕ್ಕೆ ಬಂದೆ. ಆದರೆ, ಸಿಕ್ಕಿದ ಕೆಲಸ ನನ್ನ ಸಡಗರವನ್ನು ಹೆಚ್ಚಿಸಲಿಲ್ಲ. ಏಕೆಂದರೆ, ನರ್ಸಿಂಗ್ ಹೋಂನಲ್ಲಿ ಹೆಚ್ಚಾಗಿ ರಾತ್ರಿ ಪಾಳಿಗೆ ಹಾಕುತ್ತಿದ್ದರು. ತಿಂಗಳಿಗೆ ಎರಡು ದಿನ ಮಾತ್ರ ರಜೆ ಕೊಡುತ್ತಿದ್ದರು. ಅಮ್ಮ- ಅಜ್ಜಿ ಇಬ್ಬರೂ ಊರಲ್ಲಿದ್ದುದರಿಂದ ಮಕ್ಕಳಿಬ್ಬರನ್ನೇ ಮನೆಯಲ್ಲಿ ಬಿಟ್ಟು ನಾನು ಕೆಲಸಕ್ಕೆ ಹೋಗಬೇಕಿತ್ತು. ರಾತ್ರಿ ವೇಳೆ ಮಕ್ಕಳ ಜೀವಕ್ಕೆ ತೊಂದರೆಯಾದರೆ ಗತಿ ಏನು ಎಂಬ ಪ್ರಶ್ನೆ ಪದೇ ಪದೆ ಕಾಡತೊಡಗಿದಾಗ, ವಾಪಸ್ ಊರಿಗೆ ಹೋಗಿಬಿಡುವ, ಏನಾದರೂ ಸ್ವಂತ ಕೆಲಸ ಮಾಡಿ ಬದುಕುವ ನಿರ್ಧಾರಕ್ಕೆ ಬಂದೆ.
ನಾನು ಊರಿಗೆ ಬಂದ ಸಂದರ್ಭದಲ್ಲಿಯೇ ಸ್ವಾವಲಂಬಿಗಳಂತೆ ಬದುಕುವವರಿಗೆ ನೆರವಾಗುವ ಪ್ರಧಾನ ಮಂತ್ರಿಗಳ ರೋಜ್‌ಗಾರ್ ಯೋಜನೆ ಜಾರಿಯಾಗಿತ್ತು. ಅವರಿವರ ಕೈಕೆಳಗೆ ದುಡಿಯುವ ಬದಲು ರೋಜ್‌ಗಾರ್ ಯೋಜನೆಯಲ್ಲಿ ಸಾಲ ಪಡೆದು ಆಟೋ ಖರೀದಿಸಿ, ಅಟೋ ಓಡಿಸಿಕೊಂಡು ಬದುಕಬಾರದೇಕೆ ಎಂಬ ಯೋಚನೆ ಬಂತು. ಮರುದಿನದಿಂದಲೇ ಆಟೋ ಓಡಿಸುವ ತರಬೇತಿ ಪಡೆದೆ. ಮೂರು ತಿಂಗಳ ನಂತರ ಲೈಸೆನ್ಸ್ ಕೂಡ ಸಿಕ್ಕಿತು. ನಂತರದ ಕೆಲವೇ ದಿನಗಳಲ್ಲಿ ಸಾಲ ಮಂಜೂರಾಗಿ ಮನೆಯ ಮುಂದೆ ಆಟೋ ಬಂದೇಬಿಟ್ಟಿತು. ಇದಿಷ್ಟೂ ನಡೆದದ್ದು 2004ರಲ್ಲಿ.
ಸಂಜೆಯವರೆಗೆ ಆಟೋ ಓಡಿಸುವುದು, ಆನಂತರ ಕುಟುಂಬವನ್ನು ಸಲಹುವುದು ನನ್ನ ಉದ್ದೇಶವಾಗಿತ್ತು. ಆದರೆ, ದಲಿತ ಕುಟುಂಬದ ಹೆಣ್ಣೊಬ್ಬಳು ತಮಗೆ ಸರಿಸಮ ಎಂಬಂತೆ ಆಟೋ ಓಡಿಸಲು ನಿಂತಿದ್ದು ಊರಿನ ಯಾರಿಗೂ ಇಷ್ಟವಾಗಲಿಲ್ಲ. ಪರಿಣಾಮವಾಗಿ, ನನ್ನ ಆಟೋಗೆ ಉಳಿದ ರಿಕ್ಷಾ ಚಾಲಕರು ಜಾಗವನ್ನೇ ಕೊಡಲಿಲ್ಲ. ವಿಪರ್ಯಾಸ ನೋಡಿ: ಇಡೀ ಕೇರಳದಲ್ಲಿ ಸಿಪಿಎಂನ ಪ್ರಾಬಲ್ಯವಿದೆ. ಎಲ್ಲರೂ ಸಮಾನರು. ಇರುವುದನ್ನು ಎಲ್ಲರೂ ಹಂಚಿಕೊಂಡು ತಿನ್ನಬೇಕು ಎಂಬುದು ಕಮ್ಯುನಿಸ್ಟ್ ಪಕ್ಷದ ಸಿದ್ಧಾಂತ. ಆದರೆ, ನಮ್ಮ ಊರಲ್ಲಿದ್ದ ಕಮ್ಯುನಿಸ್ಟ್ ನಾಯಕರು ಈ ಸಿದ್ಧಾಂತಕ್ಕೆ ಎಳ್ಳು ನೀರು ಬಿಟ್ಟಿದ್ದರು. ಅವರ ವರ್ತನೆಯಿಂದ ಆಘಾತವಾಯಿತು. ಯಾಕೆ ಹೀಗೆ ಮಾಡ್ತಿದ್ದೀರಾ? ನನ್ನ ಹೊಟ್ಟೆಯ ಮೇಲೆ ಕಲ್ಲು ಹಾಕಲು ನಿಮಗೇನು ಹಕ್ಕಿದೆ ಎಂದು ಜಗಳಕ್ಕೆ ನಿಂತೆ. ಪರಿಣಾಮ ಏನಾಯ್ತು ಗೊತ್ತೆ? ಕೀಳು ಜಾತಿಯ ನೀನು ಆಟೋ ಓಡಿಸುವುದೆಂದರೆ ನಮಗೆಲ್ಲ ಅವಮಾನ ಎಂದು ಎಲ್ಲ ರಿಕ್ಷಾ ಡ್ರೈವರ್‌ಗಳೂ ಒಟ್ಟಾಗಿ ಹೇಳಿದರು. ನಾಳೆಯಿಂದಲೇ ಈ ಕೆಲಸ ನಿಲ್ಸು ಎಂದರು. ನಿಲ್ಲಿಸದೇ ಹೋದ್ರೆ ಏನ್ಮಾಡ್ತೀರ ಅಂತ ಕೇಳಿದೆ ನೋಡಿ: ಮರುಕ್ಷಣವೇ ಒಬ್ಬ ಡ್ರೈವರ್ ನನ್ನ ಪಾದದ ಮೇಲೇ ಆಟೋ ಹತ್ತಿಸಿ ಬಿಟ್ಟ.
ಈ ಸಂದರ್ಭದಲ್ಲಿಯೇ ನಮಗಿಂತ ಸ್ವಲ್ಪ ಮೇಲ್ಜಾತಿಯವರಾಗಿದ್ದ ಶ್ರೀಕಾಂತ್ ಎಂಬಾತನೊಂದಿಗೆ ನನ್ನ ಮದುವೆಯಾಯಿತು. ಮದುವೆಯ ಮರುದಿನವೇ, ನಮ್ಮೂರಿನ ಸಿಪಿಎಂ ಕಾರ್ಯಕರ್ತರು ಹಾಗೂ ಶ್ರೀಕಾಂತ್‌ನ ಬಂಧುಗಳು ಆತನನ್ನು ದರದರನೆ ಬೀದಿಗೆ ಎಳೆ ತಂದು ಹಲ್ಲೆ ಮಾಡಿದರು. ಅವಳನ್ನು ಬಿಟ್ಟು ಬಾ ಎಂದು ಒತ್ತಾಯಿಸಿದರು. ನಂತರ, ಒಂದು ದಿನದ ವಾರ್ನಿಂಗ್ ಕೊಟ್ಟರು. ಈ ನಡುವೆ ನನ್ನ ಆಟೋಗೆ ಬೆಂಕಿ ಹಚ್ಚಿಬಿಟ್ಟರು. ಊರಲ್ಲಿಯೇ ಇದ್ದರೆ ಈ ಜನ ಜೀವಂತ ಸುಡುವುದಕ್ಕೂ ಹೇಸುವುದಿಲ್ಲ ಅನ್ನಿಸಿದಾಗ ನಾವು ರಾತ್ರೋ ರಾತ್ರಿ ಮನೆ ಬಿಟ್ಟೆವು. ನಂತರದ ಎರಡು ವರ್ಷ ಬೇರೊಂದು ಜಿಲ್ಲೆಯಲ್ಲಿ ಅಕ್ಷರಶಃ ಭೂಗತರಾಗಿ ಬದುಕಿದೆವು. ಈ ಸಂದರ್ಭದಲ್ಲಿಯೇ ಮಾನವ ಹಕ್ಕುಗಳ ಹೋರಾಟಗಾರ ಸಿ.ಕೆ. ಜಾನು, ನಮ್ಮ ನೆರವಿಗೆ ಬಂದರು. ತಮ್ಮ ಗೆಳೆಯರ ಬಳಗದಿಂದ ಚಂದಾ ಸಂಗ್ರಹಿಸಿ ನನಗೆ ಹೊಸ ಆಟೋ ತೆಗೆಸಿಕೊಟ್ಟರು. ಜೊತೆಗೆ, ಪೊಲೀಸ್ ರಕ್ಷಣೆಯೊಂದಿಗೆ ನಮ್ಮನ್ನು ಮತ್ತೆ ಪಯ್ಯನ್ನೂರ್‌ಗೆ ಕರೆ ತಂದುಬಿಟ್ಟರು.
ನನ್ನೂರಿನ ಆಟೋ ಡ್ರೈವರ್‌ಗಳು ಹಾಗೂ ಸಿಪಿಎಂ ಕಾರ್ಯಕರ್ತರು ಈಗ ಹೊಸ ವರಸೆ ಆರಂಭಿಸಿದರು. ಚಿತ್ರಲೇಖಾ ಮಾದಕ ವ್ಯಸನಿಯಾಗಿದ್ದಾಳೆ. ಕುಡಿದು ಆಟೋ ಓಡಿಸುತ್ತಾಳೆ. ಕಾಲ್‌ಗರ್ಲ್ ಆಗಿಯೂ ಕೆಲಸ ಮಾಡುತ್ತಾಳೆ ಎಂದೆಲ್ಲಾ ಸುದ್ದಿ ಹಬ್ಬಿಸಿದರು. ಪೊಲೀಸರಿಗೆ ದುಡ್ಡು ಕೊಟ್ಟು, ಮೇಲಿಂದ ಮೇಲೆ ನನ್ನ ಆಟೋ ತಡೆಯುವಂತೆ, ನೂರಾರು ಮಂದಿಯ ಎದುರಿನಲ್ಲಿ ವಿಚಾರಣೆ ನಡೆಸುವಂತೆ ಪ್ರಚೋದಿಸಿದರು. ಒಂದು ಬಾರಿಯೂ ನನ್ನನ್ನು ತಪ್ಪಿತಸ್ಥೆಯ ಸ್ಥಾನದಲ್ಲಿ ನಿಲ್ಲಿಸಲು ಅವರಿಂದ ಆಗಲಿಲ್ಲ. ಆನಂತರವೂ ಪೊಲೀಸರು ಆಟೋ ತಡೆಯುವ ಕೆಲಸ ಮುಂದುವರಿಸಿದಾಗ ನಾನು ಪ್ರತಿಭಟಿಸಿದೆ. ಮೇಲಧಿಕಾರಿಗಳಿಗೆ ದೂರು ಕೊಡುವುದಾಗಿ ಸಿಟ್ಟಿನಿಂದ ಹೇಳಿದೆ. ಬಹುಶಃ ಅದೇ ನಾನು ಮಾಡಿದ ತಪ್ಪಾಯಿತು. ಪೊಲೀಸರೂ ನನ್ನನ್ನು ಹಣಿಯಲು ಸಮಯ ಕಾಯತೊಡಗಿದರು.
ಹೀಗಿರುವಾಗಲೇ, 2010ರ ಒಂದು ದಿನ ನನ್ನ ಮಗನಿಗೆ ಹೆಜ್ಜೇನು ಕಚ್ಚಿತು. ಅವನಿಗೆ ಚಿಕಿತ್ಸೆ ಕೊಡಿಸಿ ಮಾತ್ರೆ ಖರೀದಿಸಲೆಂದು ಬಂದೆವು. ನನ್ನ ಗಂಡ ಮಾತ್ರೆ ತರಲೆಂದು ಶಾಪ್‌ಗೆ ಹೋದ. ಡ್ರೈವರ್ ಸೀಟ್‌ನಲ್ಲಿ ನಾನಿದ್ದೆ. ಆಗಲೇ ಅಲ್ಲಿಗೆ ಬಂದ ಆಟೋ ಚಾಲಕರು, ತಕ್ಷಣವೇ ಇಲ್ಲಿಂದ ಬೇರೆ ಕಡೆಗೆ ಆಟೋ ತಗೊಂಡು ಹೋಗು. ಇದು ಪಾರ್ಕಿಂಗ್ ಜಾಗ ಅಲ್ಲ ಎಂದರು. ನಾನು ಪರಿಸ್ಥಿತಿ ವಿವರಿಸಿದೆ. ಐದು ನಿಮಿಷದಲ್ಲಿ ಗಂಡ ಬರ್ತಾನೆ. ಹಿಂದಿನ ಸೀಟಿನಲ್ಲಿ ಕೂತಿರುವ ಮಗುವಿಗೆ ಜ್ವರ ಇದೆ. ದಯವಿಟ್ಟು ತೊಂದರೆ ಕೊಡಬೇಡಿ ಎಂದೆ. ನಮಗೇ ಎದುರು ಮಾತಾಡ್ತಿಯೇನೇ ಎಂದು ಅವರಲ್ಲೊಬ್ಬ ನನ್ನ ಕೆನ್ನೆಗೆ ಹೊಡೆದ. ನನ್ನನ್ನು ಬಿಡಿಸಿಕೊಳ್ಳಲು ಓಡೋಡಿ ಬಂದ ಗಂಡನಿಗೂ ಏಟು ಬಿದ್ದವು. ಈ ಮಧ್ಯೆಯೇ ಒಬ್ಬಾತ ಪೊಲೀಸರಿಗೆ ಫೋನ್ ಮಾಡಿದ. ಅವರು ತರಾತುರಿಯಲ್ಲಿ ಬಂದು ನಮ್ಮನ್ನು ಠಾಣೆಗೆ ಎಳೆದೊಯ್ದರು. ಅಲ್ಲಿ ನಮ್ಮಿಬ್ಬರಿಗೂ ದನಕ್ಕೆ ಹೊಡೆದಂತೆ ಹೊಡೆದರು. ಮೇಲಧಿಕಾರಿಗಳಿಗೆ ದೂರು ಕೊಡ್ತೀನಿ ಅಂತ ಬಡ್ಕೋತಿದ್ದೆ ಅಲ್ವ? ಹಂಗೇನಾದ್ರೂ ಮಾಡಿದ್ರೆ ನಿನ್ನನ್ನು ಮುಗಿಸಿಬಿಡ್ತೇವೆ ಹುಷಾರ್ ಎಂದು ಎಚ್ಚರಿಸಿ ಬಿಡುಗಡೆ ಮಾಡಿದರು.
ನನ್ನ ರಕ್ಷಣೆಗೆ ಯಾರೂ ಇಲ್ಲ ಅನ್ನಿಸಿದಾಗ ಪತ್ರಿಕೆಗಳ ಮೊರೆ ಹೋದೆ. ನನ್ನ ಸಂಕಟದ ಕಥೆಯನ್ನು ಹಲವರು ಬ್ಲಾಗ್‌ಗಳಲ್ಲಿ ಬರೆದರು. ಹಲವು ಪತ್ರಿಕೆಗಳು ಸುದ್ದಿ ಪ್ರಕಟಿಸಿ, ಪಯ್ಯನ್ನೂರಿನ ಪುರುಷರು ಹಾಗೂ ಸಿಪಿಎಂ ಮುಖಂಡರ ದಬ್ಬಾಳಿಕೆಯನ್ನು ಖಂಡಿಸಿದವು. ಇದರಿಂದ ಮತ್ತೂ ಕೆರಳಿದ ಜನ ಅದೊಂದು ರಾತ್ರಿ ನಮ್ಮ ಗುಡಿಸಲು ಮತ್ತು ಆಟೋಗೆ ಬೆಂಕಿ ಹಚ್ಚಿ ಕೇಕೆ ಹಾಕಿದರು. ಕೆಲ ದಿನಗಳ ನಂತರ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಪಯ್ಯನ್ನೂರ್‌ಗೆ ಬಂದು- ಈ ಹೆಂಗಸು ಮಾಡಿರುವ ತಪ್ಪಾದ್ರೂ ಏನ್ರಪ್ಪ? ನೀವು ಯಾಕೆ ಅವಳಿಗೆ ಪದೇ ಪದೆ ಕಿರುಕುಳ ಕೊಡ್ತೀರಿ?' ಎಂದು ಪ್ರಶ್ನಿಸಿದಾಗ ಊರಿನ ಮುಖಂಡನೊಬ್ಬ ತುಂಬ ಸ್ಪಷ್ಟವಾಗಿ ಹೇಳಿದ: 'ಚಿತ್ರಲೇಖಳ ಅಜ್ಜಿ ಮತ್ತು ತಾಯಿ, ಇಡೀ ಊರಿನ ಮನೆಗಳಲ್ಲಿ ಕೂಲಿ ಮಾಡಿಕೊಂಡು ಇದ್ದವರು. ಈ ಹೆಂಗಸೂ ಹಾಗೇ ಇರಬೇಕಿತ್ತು. ಇವಳು ಗಂಡಸರಿಗೆ ಸರಿಸಮನಾಗಿ ನಿಲ್ಲುವ ಮಾತಾಡ್ತಾಳೆ. ಹಿಂತಿರುಗಿ ವಾದಿಸ್ತಾಳೆ. ಎರಡೇಟು ಹಾಕಿದ್ರೆ ಪೊಲೀಸರಿಗೆ ದೂರು ಕೊಡ್ತಾಳೆ. ನಮ್ಮ ಊರಲ್ಲಿ ಅದಕ್ಕೆಲ್ಲ ಅವಕಾಶ ಕೊಡೋದಿಲ್ಲ. ದೇಶ ಎಷ್ಟೇ ಮುಂದುವರಿದಿರಬಹುದು. ಆದರೆ ನಮ್ಮ ಊರಿನ ಕಾನೂನಿನ ಪ್ರಕಾರ ಹೆಂಗಸರು ಗಂಡಸಿಗೆ ಸರಿಸಮಾನವಾಗಿ ನಿಲ್ಲುವಂತೆಯೇ ಇಲ್ಲ...'
ಇಷ್ಟಾದ ಮೇಲೆ, ಅಧಿಕಾರಿಗಳ ತಂಡವು ಸರ್ಕಾರಕ್ಕೆ ವರದಿ ಸಲ್ಲಿಸಿತು. ಗ್ರಾಮದ ಜನತೆಯಿಂದ, ಸಿಪಿಎಂ ನಾಯಕರಿಂದ, ಆಟೋ ಡ್ರೈವರ್‌ಗಳಿಂದ ಚಿತ್ರಲೇಖಾಳ ಕುಟುಂಬದ ಮೇಲೆ ನಿರಂತರವಾಗಿ ದೌರ್ಜನ್ಯ ನಡೆದಿದೆ. ಆಕೆಯ ಕುಟುಂಬಕ್ಕೆ ರಕ್ಷಣೆ ನೀಡುವ ಕೆಲಸ ತುರ್ತಾಗಿ ಆಗಬೇಕು ಎಂದು ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿತ್ತು. ಆದರೆ, ಕೇರಳದ ಸರ್ಕಾರ ಆ ವರದಿಯನ್ನು ಕಸದ ಬುಟ್ಟಿಗೆ ಹಾಕಿಬಿಟ್ಟಿತು. ನಮ್ಮ ರಾಜ್ಯದಲ್ಲಿ ನೈತಿಕ ಪೊಲೀಸ್‌ಗಿರಿ ನಡೆದೇ ಇಲ್ಲ ಎಂದು ಅಲ್ಲಿನ ಮುಖ್ಯಮಂತ್ರಿಯೇ ಹೇಳುವುದರೊಂದಿಗೆ, ಚಿತ್ರಲೇಖಾಳ ಸಂಕಟಗಳಿಗೆ 'ಶುಭಂ'ನ ಪರದೆ ಬೀಳಬಹುದೆಂಬ ನಿರೀಕ್ಷೆ ಸುಳ್ಳಾಗಿ ಹೋಯಿತು.
ಈಗ, ತೆಂಗಿನ ಗರಿಗಳ ಒಂದು ಪುಟ್ಟ ಜೋಪಡಿಯಲ್ಲಿ ಬದುಕುತ್ತಿದ್ದಾಳೆ ಚಿತ್ರಲೇಖಾ. ಅವಳ ಮನೆಯ ಮುಂದೆ ಖಾಸಗಿ ಕಂಪನಿಗೆ ಸೇರಿದ ತೆಂಗಿನ ತೋಟವಿದೆ. ಮರದಿಂದ ಬಿದ್ದ ಗರಿಗಳನ್ನು ಆಯ್ದು ತಂದು, ಅವುಗಳಿಂದ ಚಾಪೆ ಹೆಣೆದು ಮಾರುತ್ತಾ ಆಕೆ ಬದುಕು ಸಾಗಿಸುತ್ತಿದ್ದಾಳೆ. ಪೊಲೀಸರ ಹೊಡೆತದಿಂದ ಬೆನ್ನಿನ ಹಿಂಭಾಗಕ್ಕೆ ತೀವ್ರ ಪೆಟ್ಟಾಗಿ ಆಕೆಯ ಗಂಡ ಶಾಶ್ವತ ಅಂಗವಿಕಲನಂತೆ ಬದುಕುತ್ತಿದ್ದಾನೆ. ಊರಲ್ಲಿಯೇ ಬಿಟ್ಟರೆ ಮಕ್ಕಳ ಭವಿಷ್ಯ ಕಮರಿ ಹೋಗಬಹುದು ಎಂದು ಯೋಚಿಸಿ, ಅವರನ್ನು ದೂರದ ಜಿಲ್ಲೆಗಳ ಹಾಸ್ಟೆಲ್‌ಗೆ ಸೇರಿಸಿದ್ದಾಳೆ ಚಿತ್ರಲೇಖಾ. ಈ ಮಧ್ಯೆಯೂ ಆಕೆಯ ಕುಟುಂಬದ ಮೇಲೆ ಸಿಪಿಎಂ ನಾಯಕರು ಹಾಗೂ ಮೇಲ್ವರ್ಗದವರ ಗೂಂಡಾಗಿರಿ ನಡೆಯುತ್ತಲೇ ಇದೆ. ಅದೇ ಹೊತ್ತಿನಲ್ಲಿ ಫೇಸ್‌ಬುಕ್, ಗೂಗಲ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಲೇಖಾಗೆ ನ್ಯಾಯ ಕೊಡಿಸಿ ಎಂಬ ಆಗ್ರಹವೂ ಕೇಳಿ ಬರುತ್ತಿದೆ. ಎಲ್ಲವನ್ನೂ ಅಸಹಾಯಕಳಾಗಿ ನೋಡುತ್ತಿರುವ ಚಿತ್ರಲೇಖಾ, ದಿಕ್ಕು ತೋಚದೆ ಕಣ್ಣೀರು ಸುರಿಸುತ್ತಿದ್ದಾಳೆ. ಮನುಷ್ಯನ ಎದೆಯೊಳಗಿರುವ ಕ್ರೌರ್ಯ ಹೇಗೆಲ್ಲ ಅನಾವರಣಗೊಳ್ಳುತ್ತದೆಯಲ್ಲವೆ, ಛೆ...
\- ಎ.ಆರ್. ಮಣಿಕಾಂತ್
armanikanth@gmail.com