ಭಾನುಮತಿ ಎಂಬ ಅಮ್ಮನಿಗೆ 51 ಮಕ್ಕಳು!

ಭಾವತೀರಯಾನ
ಇವರ ಹೆಸರು ಪಿ. ಭಾನುಮತಿ. ಈಕೆ, ಕೇರಳದ ತ್ರಿಶ್ಶೂರ್‌ನಲ್ಲಿರುವ ಶ್ರೀ ಕೇರಳವರ್ಮ ಕಾಲೇಜಿನಲ್ಲಿ ಪ್ರಾಣಿ ಜೀವಶಾಸ್ತ್ರ ವಿಭಾಗದ ಪ್ರೊಫೆಸರ್. ವಿಶೇಷವೇನು ಗೊತ್ತೆ? ಭಾನುಮತಿಯವರಿಗೆ ಒಟ್ಟು 51 ಮಕ್ಕಳು! ಆ ಪೈಕಿ 12 ವರ್ಷದ ಮೊದ್ಮಣಿ ಇದ್ದಾನೆ. ಹದಿನೆಂಟು ವರ್ಷದ ಚಿಗುರು ಮೀಸೆಯವನಿದ್ದಾನೆ. 58 ತುಂಬಿದ ಅಜ್ಜನೂ ಇದ್ದಾನೆ. ಇವರನ್ನೆಲ್ಲ ಭಾನುಮತಿಯವರು 'ಮಗೂ/ಮಕ್ಕಳೇ' ಎಂದೇ ಕರೆಯುತ್ತಾರೆ. ಪ್ರತಿಯಾಗಿ ಆ ಕಡೆಯಿಂದ 'ಅಮ್ಮಾ' ಎಂಬ ದನಿಗಳು ಕೇಳಿ ಬರುತ್ತವೆ. ಈಗ ಹುಷಾರಾಗಿ ಕೇಳಿಸಿಕೊಳ್ಳಿ: ಭಾನುಮತಿಯವರ ಮಡಿಲಲ್ಲಿರುವ ಎಲ್ಲ 51 ಮಕ್ಕಳೂ ಬುದ್ಧಿಮಾಂದ್ಯರು. ಈ ಮಕ್ಕಳನ್ನು ತುಂಬ ಮುತುವರ್ಜಿಯಿಂದ ಸಾಕಬೇಕು ಎಂಬ ಮಹದಾಸೆಯಿಂದ ಸ್ವಂತ ಮಕ್ಕಳೇ ಬೇಡ ಎಂಬ ಮಹತ್ವದ ನಿರ್ಧಾರ ಕೈಗೊಂಡವರು ಭಾನುಮತಿ. ಕಳೆದ 15 ವರ್ಷಗಳಿಂದಲೂ ಅವರು ಬುದ್ದಿಮಾಂದ್ಯ ಮಕ್ಕಳ ಅಮ್ಮನಾಗಿದ್ದಾರೆ. ನಿಜ ಹೇಳಬೇಕೆಂದರೆ, ಒಂದು ಸರ್ಕಾರದಿಂದ ಮಾಡಲು ಸಾಧ್ಯವಾಗದಂತಹ ಅಪರೂಪದ, ಶ್ಲಾಘನೀಯ ಕೆಲಸವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಡಾ॥ ಭಾನುಮತಿ ಮಾಡುತ್ತಿದ್ದಾರೆ. ಈ ಸತ್ಕಾರ್ಯಕ್ಕಾಗಿ ಅವರಿಗೆ ಸಾವಿರ ಅಭಿನಂದನೆಗಳನ್ನು ಹೇಳಿದರೂ ಸಾಲದು...ಇಂಟರ್‌ನೆಟ್‌ನಲ್ಲಿ ಈ ವಿವರಣೆ ಓದಿದಾಗ ಅಚ್ಚರಿಯೆನಿಸಿತು. ಏಕೆಂದರೆ, ಸಾಮಾನ್ಯವಾಗಿ ಹೆಣ್ಣು ಮಕ್ಕಳು, ಅದರಲ್ಲೂ ನೌಕರಿಗೆ ಸೇರಿದ ಹೆಣ್ಣು ಮಕ್ಕಳು, ಗಂಡ-ಮನೆ-ಮಕ್ಕಳು ಎಂದು ಯೋಚಿಸುತ್ತಾ ಕುಟುಂಬದ ಮಧ್ಯೆಯೇ ಕಳೆದು ಹೋಗುವುದುಂಟು. ಒಂದಷ್ಟು ಹಣ ಜೊತೆಯಾದರೆ ಸೈಟ್ ಖರೀದಿಸುವ/ಮನೆ ಕಟ್ಟಿಸುವ ಅಥವಾ ಒಡವೆ ಖರೀದಿಸುವ ವಿಷಯವಾಗಿ ಯೋಚಿಸುವುದುಂಟು. ವಾಸ್ತವ ಹೀಗಿರುವಾಗ, ಒಂದು ಕಾಲೇಜಿನಲ್ಲಿ ಪ್ರೊಫೆಸರ್ ಎಂಬಂಥ ದೊಡ್ಡ ಹುದ್ದೆ ಪಡೆದ ನಂತರವೂ ಬುದ್ಧಿಮಾಂದ್ಯರನ್ನು ಸಾಕಬೇಕೆಂಬ ಮನಸ್ಸು ಭಾನುಮತಿಯವರಿಗೆ ಬಂದಿದ್ದಾದರೂ ಏಕೆ? ಹೆತ್ತವರಿಗೆ 'ಹೊರೆ' ಅನ್ನಿಸುವ ಈ ಮಕ್ಕಳನ್ನು ಅವರು ಹೇಗೆ ಸಾಕುತ್ತಾರೆ? ಇಂಥದೊಂದು ಸೇವೆಗೆ ಮುಂದಾಗುವಂತೆ ಅವರನ್ನು ಪ್ರೇರೇಪಿಸಿದ ಘಟನೆಯಾದರೂ ಯಾವುದು? ಇಂಥ ಪ್ರಶ್ನೆಗಳನ್ನು ಅಂಗೈಲಿ ಹಿಡಿದುಕೊಂಡೇ ಭಾನುಮತಿಯವರನ್ನು ಸಂಪರ್ಕಿಸಿದಾಗ ಆಕೆ ತಮ್ಮ ಬದುಕಿನ ಕಥೆ ಹೇಳಿಕೊಂಡರು. ಆ ವಿವರಣೆ ಇಲ್ಲಿದೆ; ಓದಿಕೊಳ್ಳಿ:ಕೇರಳದ ಒಂದು ಶ್ರೀಮಂತ ಕುಟುಂಬದಿಂದ ಬಂದಾಕೆ ನಾನು. ಅಪ್ಪ ಬ್ರಿಟಿಷರ ಕಾಲದಲ್ಲಿ ಸೇನೆಯಲ್ಲಿದ್ದವರು. ನಾವು ಎಂಟು ಮಂದಿ ಮಕ್ಕಳು. ವಿಪರ್ಯಾಸವೇನು ಗೊತ್ತೆ? ಈ ಪೈಕಿ ಮೂವರು ಬುದ್ಧಿಮಾಂದ್ಯರು. ಭವಿಷ್ಯದಲ್ಲಿ ಆಸರೆಯಾಗಬೇಕಿದ್ದ ಮಕ್ಕಳ ಬದುಕು ಯಾಕೆ ಹೀಗಾಯ್ತು ಎಂಬ ಯೋಚನೆಯಲ್ಲಿಯೇ ತಂದೆಯವರು ಇಳಿದು ಹೋದರು. ಮಕ್ಕಳನ್ನು ಮೇಲಿಂದ ಮೇಲೆ ಚಿಕಿತ್ಸೆಗಾಗಿ ಕರೆದೊಯ್ದರು. ಮಕ್ಕಳು ಉಳಿದೆಲ್ಲರಂತಾಗಲಿ ಎಂದು ಪ್ರಾರ್ಥನೆಗೆ ಕೂತರು. ಹರಕೆ ಕಟ್ಟಿಕೊಂಡರು. ಯಾವುದೇ ಪ್ರಯೋಜನವಾಗಲಿಲ್ಲ. ಇಂಥ ಸಂದರ್ಭದಲ್ಲಿ ಎಲ್ಲ ಸಂಕಟವನ್ನೂ ನುಂಗಿಕೊಂಡು, ಅಮ್ಮ ಮಕ್ಕಳ ಸೇವೆಗೆ ನಿಲ್ಲುತ್ತಿದ್ದಳು. ಬುದ್ಧಿಮಾಂದ್ಯರು ಅಂದ ಮೇಲೆ ವಿವರಿಸಿ ಹೇಳಬೇಕಿಲ್ಲ ತಾನೆ? ಹೆಚ್ಚಿನ ಸಂದರ್ಭದಲ್ಲಿ ಅವರಿಗೆ ಸುತ್ತಲಿನ ಪ್ರಪಂಚದ ಅರಿವೇ ಇರುತ್ತಿರಲಿಲ್ಲ. ಆಗೆಲ್ಲ ಅಮ್ಮ ದುಃಖವನ್ನು ತಡೆ ಹಿಡಿದು ಮಕ್ಕಳ ಸೇವೆ ಮಾಡುತ್ತಿದ್ದಳು. ಆನಂತರದಲ್ಲಿ ದೇವರ ಮುಂದೆ ನಿಂತು ಕೇಳುತ್ತಿದ್ದಳು: 'ಭಗವಂತಾ ನಾವು ಯಾವ ತಪ್ಪು ಮಾಡಿದ್ವಿ ಅಂತ ಈ ಶಿಕ್ಷೆ ಕೊಟ್ಟಿದ್ದೀಯ?'ಮಾನಸಿಕ ಸ್ಥಿಮಿತ ಕಳೆದುಕೊಂಡವರು ಅರ್ಥಾತ್ ಬುದ್ಧಿಮಾಂದ್ಯರ ವಿಷಯವಾಗಿ ನಮ್ಮ ಜನರಿಗೆ ತಾತ್ಸಾರವಿದೆ. ನಾನಂತೂ ಇದನ್ನು ಪ್ರತ್ಯಕ್ಷವಾಗಿ ಕಂಡೆ. ಬುದ್ಧಿಮಾಂದ್ಯರಾಗಿದ್ದ ನಮ್ಮ ಸೋದರರನ್ನು ಜನರು ಬಗೆಬಗೆಯಲ್ಲಿ ಆಡಿಕೊಂಡರು. ಹಂಗಿಸಿದರು. ಒಂದೇ ಕುಟುಂಬದ ಮೂರು ಮಂದಿಗೆ ತಲೆ ಸರಿಯಿಲ್ಲ ಎಂದರು. ಇಂಥ ಸಂದರ್ಭದಲ್ಲಿ ವಿಪರೀತ ಸಂಕಟವಾಗುತ್ತಿತ್ತು. ಭವಿಷ್ಯದಲ್ಲಿ ಒಳ್ಳೆಯ ನೌಕರಿಗೆ ಸೇರಬೇಕು. ಆನಂತರ ಬುದ್ಧಿಮಾಂದ್ಯರಿಗೆ ಆಶ್ರಯ ಒದಗಿಸಬೇಕು ಎಂದು ಕಾಲೇಜಿನ ದಿನಗಳಲ್ಲಿಯೇ ನಿರ್ಧರಿಸಿದೆ.ಮುಂದೆ, ಕಾಲೇಜಿನ ಲೆಕ್ಚರರ್ ಆಗಿದ್ದಾಯ್ತು. ಆ ಸಂದರ್ಭದಲ್ಲಿಯೇ, ಅಂದರೆ 1997ರಲ್ಲಿ ನಾನು ಎಂದೆಂದೂ ಮರೆಯಲಾಗದ ದುರಂತವೊಂದು ನಡೆದು ಹೋಯಿತು. ಅವತ್ತಿಗಾಗಲೇ 40 ವರ್ಷ ದಾಟಿದ್ದ, ಆ ವಯಸ್ಸಿನಲ್ಲೂ ಬುದ್ಧಿಮಾಂದ್ಯನಾಗಿಯೇ ಉಳಿದಿದ್ದ ನನ್ನ ಅಣ್ಣನೊಬ್ಬ ಗಂಟಲು ನೋವಿನಿಂದ ಬಳಲುತ್ತಿದ್ದ. ತನಗೆ ಹೇಗೆಲ್ಲಾ ತೊಂದರೆಯಾಗುತ್ತದೆ ಎಂಬುದನ್ನು ವಿವರಿಸುವಂಥ ತಿಳಿವಳಿಕೆ ಕೂಡ ಅವನಿಗೆ ಇರಲಿಲ್ಲ. ಅವನನ್ನು ನಾನೇ ಆಸ್ಪತ್ರೆಗೆ ಕರೆದೊಯ್ದೆ. ಆತನ ಸಮಸ್ಯೆಯ ಬಗ್ಗೆ ವಿವರಿಸಿದೆ. ಆತ ಬುದ್ಧಿಮಾಂದ್ಯ ಎಂದು ಗೊತ್ತಾದ ನಂತರ ವೈದ್ಯರ ವರಸೆಯೇ ಬದಲಾಯಿತು. ನನ್ನ ಸೋದರನನ್ನು ಅವರು ಸೌಜನ್ಯಕ್ಕೂ ಮಾತಾಡಿಸಲಿಲ್ಲ. ಅವನಿಗೆ ಯಾವ ರೀತಿಯ ತೊಂದರೆಯಿದೆ ಎಂದೂ ಹೇಳಲಿಲ್ಲ. ಬದಲಾಗಿ- ಇಂಥ ಹುಚ್ಚರನ್ನೆಲ್ಲ ಬದುಕಿಸಿಕೊಂಡು ಮಾಡುವುದೇನಿದೆ ಎಂದು ಗೊಣಗಿಕೊಂಡರು. ನಂತರ ಬೇಕಾಬಿಟ್ಟಿ ಎಂಬಂತೆ ಚಿಕಿತ್ಸೆ ನೀಡಿದರು. ಪರಿಣಾಮ ಏನಾಯಿತೆಂದರೆ, ಅಣ್ಣ, ನನ್ನ ತೊಡೆಯ ಮೇಲೆ ಮಲಗಿದ್ದಾಗಲೇ ಸತ್ತು ಹೋದ. ಆ ಸಂದರ್ಭದಲ್ಲಿ ನಾನು ಏನೂ ಮಾಡಲು ತೋಚದಷ್ಟು ಅಸಹಾಯಕಳಾಗಿದ್ದೆ.ಅಣ್ಣನ ಅಂತ್ಯಸಂಸ್ಕಾರದ ವಿಧಿಗಳನ್ನು ಮುಗಿಸಿ ತ್ರಿಶ್ಶೂರ್‌ನ ಕಾಲೇಜಿಗೆ ಹಿಂದಿರುಗುವ ವೇಳೆಗೆ, ಬುದ್ಧಿಮಾಂದ್ಯ ಮಕ್ಕಳನ್ನು ಸಾಕಬೇಕು. ಅವರಿಗೊಂದು ಭದ್ರ ನೆಲೆ ಒದಗಿಸಬೇಕು. ನಮ್ಮ ಅಣ್ಣನಿಗೆ ಬಂದಂಥ ದುರ್ಗತಿ ಬೇರೆ ಯಾರಿಗೂ ಬಾರದಂತೆ ನೋಡಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬಂದಿದ್ದೆ. ಈ ಉದ್ದೇಶದಿಂದಲೇ 1997ರಲ್ಲಿ Association for Mentally Handicapped Adults (AMHA)ಸಂಸ್ಥೆ ಆರಂಭಿಸಿದೆ. ಮುಂದೆ, ಔಷಧ ಕಂಪನಿಯೊಂದರಲ್ಲಿ ಪ್ರಮುಖ ಹುದ್ದೆಯಲ್ಲಿದ್ದ ಸಲೀಶ್ ಎಂಬುವವರೊಂದಿಗೆ ಮದುವೆಯಾಯಿತು. ಅವರೊಂದಿಗೆ ನನ್ನ ಆಸೆ, ಕನಸುಗಳನ್ನು ಹೇಳಿಕೊಂಡೆ. ಅಣ್ಣನ ಸಾವು, ಅದಕ್ಕೆ ಕಾರಣವಾದ ವೈದ್ಯರ ನಿರ್ಲಕ್ಷ್ಯ, ಬುದ್ಧಿಮಾಂದ್ಯ ಎಂಬ ಕಾರಣಕ್ಕೇ ಅವರು ತೋರಿದ ತಾತ್ಸಾರ ಮತ್ತು ಈ ಘಟನೆಗಳು ನನ್ನ ಮನಸ್ಸಿಗೆ ನೀಡಿದ ಶಾಕ್‌ನ ಬಗ್ಗೆ ಹೇಳಿಕೊಂಡೆ. ಮುಂದುವರಿದು- ಬುದ್ಧಿಮಾಂದ್ಯರು, ಸಮಾಜದಿಂದ ಮಾತ್ರವಲ್ಲ, ಹೆತ್ತವರಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ಎಷ್ಟೇ ವಯಸ್ಸಾದರೂ ಅವರ ಮನಸ್ಸು 'ಮಗು'ವಾಗಿಯೇ ಉಳಿದು ಬಿಡುತ್ತದೆ. ಅಂಥವರನ್ನು ನಾವು ಸಾಕೋಣ. ಅವರೇ ನಮ್ಮ ಮಕ್ಕಳು ಎಂದು ಭಾವಿಸೋಣ. ಒಂದು ವೇಳೆ ನಮಗೆ ಸ್ವಂತ ಮಕ್ಕಳಾದರೆ, ಅವರ ಆರೈಕೆ, ಅವರ ಭವಿಷ್ಯದ ಬಗ್ಗೆ ಯೋಚಿಸುತ್ತಾ, ಬುದ್ಧಿಮಾಂದ್ಯರನ್ನು ನಾವೂ ನಿರ್ಲಕ್ಷಿಸಿ ಬಿಡಬಹುದು. ಹಾಗಾಗಿ, ಸ್ವಂತ ಮಕ್ಕಳಿಗಾಗಿ ನಾವು ಆಸೆ ಪಡುವುದು ಬೇಡ ಎಂದು ಪ್ರಾರ್ಥಿಸಿದೆ. ನಮ್ಮ ಯಜಮಾನರದು ಅದೆಷ್ಟು ಒಳ್ಳೆಯ ಮನಸ್ಸು ಎಂದರೆ- ನಿನ್ನ ಇಷ್ಟವೇ ನನ್ನಿಷ್ಟ. ನಿಂಗೆ ಹೇಗೆ ಸರಿ ಅನ್ನಿಸ್ತದೋ ಹಾಗೇ ಬದುಕೋಣ ಎಂದರು. ಮೊದಲಿಗೆ ಕಡು ಬಡ ಕುಟುಂಬದ ಮೂರು ಬುದ್ಧಿಮಾಂದ್ಯ ಮಕ್ಕಳನ್ನು ಜೊತೆಗಿಟ್ಟುಕೊಂಡು ಅಮ್ಹಾ ಸಂಸ್ಥೆ ಆರಂಭಿಸಿದೆ. ವಾಸ್ತವ್ಯಕ್ಕೆ ಬಾಡಿಗೆ ಮನೆ ಹುಡುಕಿ ಹೊರಟಾಗ ಜನ ತಲೆಗೊಂದು ಮಾತಾಡಿದರು. ಹುಚ್ಚರಿಗೆ ನಾವು ಮನೆ ಕೊಡಲ್ಲ ಅಂದುಬಿಟ್ರು. ಹತ್ತಾರು ಕಡೆಗಳಲ್ಲಿ ಇಂಥದೇ ಮಾತು ಕೇಳಿದಾಗ ತುಂಬಾ ಬೇಸರವಾದದ್ದು ನಿಜ. ಈ ಸಂದರ್ಭದಲ್ಲಿಯೇ ನನ್ನ ಕಾಲೇಜು ವಿದ್ಯಾರ್ಥಿಯ ಬಂಧುವೊಬ್ಬರು, ನೆರವಿಗೆ ಬಂದರು. ನಗರದ ಹೊರವಲಯದಲ್ಲಿದ್ದ ಪುಟ್ಟ ಮನೆಯೊಂದನ್ನು ಬಾಡಿಗೆಗೆ ಕೊಡಿಸಿದರು. ಈ ಸಂದರ್ಭದಲ್ಲಿ ಆರ್ಥಿಕವಾಗಿ ಯಾರ ನೆರವೂ ಇರಲಿಲ್ಲ. ಪ್ರತಿಯೊಂದು ಖರ್ಚಿಗೂ ನಾವು ಸಂಬಳವನ್ನೇ ನಂಬಿಕೊಂಡಿದ್ದೆವು. ಈ ಮಧ್ಯೆ ಬುದ್ಧಿಮಾಂದ್ಯ ಮಕ್ಕಳನ್ನು ನೋಡಿಕೊಳ್ಳುವ ಮನೆಯೊಂದನ್ನು ನಾವು ತೆರೆದಿರುವ ಸಂಗತಿ ಬಾಯಿ ಮಾತಿನ ಮೂಲಕವೇ ಸಾವಿರಾರು ಮಂದಿಯನ್ನು ತಲುಪಿತು. ಪರಿಣಾಮವಾಗಿ, ಬಡ ಕುಟುಂಬಗಳಿಗೆ ಸೇರಿದ ಎಂಟು ಬುದ್ಧಿಮಾಂದ್ಯರು ಆಶ್ರಯ ಕೋರಿ ಬಂದರು. ವರ್ಷದೊಳಗೆ ಈ ಸಂಖ್ಯೆ 18ಕ್ಕೇರಿತು. ಹೀಗೆ ಬಂದವರ ಪೈಕಿ ವಯಸ್ಸಿನಲ್ಲಿ ನನಗಿಂತ ಹಿರಿಯರಾಗಿದ್ದವರೂ ಇದ್ದರು. ಆರ್ಥಿಕವಾಗಿ ನಾನು ಗಟ್ಟಿಯಾಗಿಲ್ಲದ ಕಾರಣದಿಂದ, ಬುದ್ಧಿಮಾಂದ್ಯರಾಗಿದ್ದ ನನ್ನ ಇಬ್ಬರು ಅಣ್ಣಂದಿರನ್ನು ಅಮ್ಮನೇ ನೋಡಿಕೊಳ್ಳುತ್ತಿದ್ದಳು.ಮನೆಯಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿದಂತೆ ಖರ್ಚೂ ಹೆಚ್ಚಿತು. ಒಂದು ಸಂದರ್ಭದಲ್ಲಿ ಮೂರು ಹೊತ್ತಿನ ಊಟ ಹೊಂದಿಸುವುದಕ್ಕೂ ಕಷ್ಟವಾಯಿತು. ಆಗ ದಿಕ್ಕು ತೋಚದೆ ತ್ರಿಶ್ಶೂರ್‌ನ ಅಂಗಡಿಗಳಿಗೆ ಹೋದೆ. ಅಲ್ಲಿನ ಮಾಲೀಕರ ಬಳಿ ಅಕ್ಕಿಯನ್ನು ದಾನ ಮಾಡುವಂತೆ ಪ್ರಾರ್ಥಿಸಿದೆ. ಅವರು 'ಕೊಡಲ್ಲ ಹೋಗು' ಅಂದು ಬಿಟ್ಟರು. ನಿನ್ನ ಸೇವೆಯ ಹಿಂದೆ ಏನೋ ಸೀಕ್ರೆಟ್ ಇದೆ. ಹೆಸರು ಮಾಡಲು, ಯಾವುದಾದ್ರೂ ಪ್ರಶಸ್ತಿ ಗಿಟ್ಟಿಸಲು ನೀನು ಹೀಗೆಲ್ಲಾ ಮಾಡ್ತಾ ಇದೀಯ ಎಂದು ಅನುಮಾನಿಸಿದರು. ಹೆಜ್ಜೆ ಹೆಜ್ಜೆಗೂ ಅವಮಾನಿಸಿದರು. ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡೆ. ಹೀಗಿರುವಾಗಲೇ ಮಲಯಾಳಂನ ಕೈರಳಿ ಚಾನೆಲ್‌ನವರು ನನ್ನ ಕೆಲಸದ ಬಗ್ಗೆ ಒಂದು ಕಾರ್ಯಕ್ರಮ ಪ್ರಸಾರ ಮಾಡಿದರು. ನನ್ನ ಪಾಲಿಗೆ ಅದು ನಿಜವಾದ ಟರ್ನಿಂಗ್ ಪಾಯಿಂಟ್. ನಮ್ಮ ಸೇವೆ, ಅದರ ಪ್ರಾಮುಖ್ಯತೆಯನ್ನು ಗಮನಿಸಿದ ಶ್ರೀಮಂತರೊಬ್ಬರು 16 ಲಕ್ಷ ರೂ.ಗಳ ನೆರವು ನೀಡಿದರು. ಈ ಹಣದಿಂದ ತ್ರಿಶ್ಶೂರ್‌ನ ಹೊರವಲಯದಲ್ಲಿ ಒಂದು ಸೈಟ್ ಖರೀದಿಸಿ ಸ್ವಂತ ಮನೆ ಕಟ್ಟಿಕೊಂಡೆವು. ಆನಂತರದಲ್ಲಿ ಆಶ್ರಯ ಬಯಸಿ ಬರುವ ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚತೊಡಗಿತು. ಈಗ ನಮ್ಮೊಂದಿಗೆ 51 ಮಂದಿ ಮಕ್ಕಳಿದ್ದಾರೆ. ಇವರನ್ನೆಲ್ಲ, ತಜ್ಞ ವೈದ್ಯರ ಶಿಫಾರಸ್ಸಿನ ನಂತರವೇ ಸೇರಿಸಿಕೊಂಡಿದ್ದೇವೆ. ಇವರ ಪೈಕಿ 4 ಹೆಣ್ಣು ಮಕ್ಕಳು. ಹೆಚ್ಚಿನವರು ಕಡು ಬಡವರ ಮನೆಯ ಮಕ್ಕಳು. ಈಗ ನನ್ನ ಪತಿಯೂ ತಮ್ಮ ನೌಕರಿಗೆ ರಾಜೀನಾಮೆ ನೀಡಿ ಬುದ್ಧಿಮಾಂದ್ಯ ಮಕ್ಕಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಮಗೆ ಸಿಎನ್‌ಎನ್- ಐಬಿಎನ್ ಚಾನೆಲ್‌ನವರು ಕೊಡುವ ರಿಯಲ್ ಹೀರೋಸ್ ಪ್ರಶಸ್ತಿ ಬಂದಿದೆ. ಈಗ ತ್ರಿಶ್ಶೂರ್‌ನ ಜನ ನಮ್ಮನ್ನು, ನನ್ನೊಂದಿಗಿರುವ ಮಕ್ಕಳನ್ನು ನೋಡುವ ದೃಷ್ಟಿಯೇ ಬದಲಾಗಿದೆ. ಈ ಹಿಂದೆ ಅವಮಾನಿಸಿದವರೇ ಈಗ ಪ್ರೀತಿ, ಗೌರವದಿಂದ ಮಾತಾಡಿಸುತ್ತಾರೆ. ಒಂದು ಸರ್ಕಾರ ಮಾಡಲಾಗದಂಥ ಕೆಲಸವನ್ನು ನೀವು ಏಕಾಂಗಿಯಾಗಿ ಮಾಡ್ತಿದ್ದೀರಿ. ಮುಂದುವರಿಸಿ ಎನ್ನುತ್ತಿದ್ದಾರೆ. ಬುದ್ಧಿಮಾಂದ್ಯ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಕೆಲವರು ಆಟೋ/ವ್ಯಾನ್ ಒದಗಿಸಿದ್ದಾರೆ.ಹೀಗಿದ್ದರೂ ಒಂದಷ್ಟು ಸಮಸ್ಯೆಗಳಿವೆ. ಏನೆಂದರೆ, ಬುದ್ಧಿಮಾಂದ್ಯ ಮಕ್ಕಳನ್ನು ಉಳಿದೆಲ್ಲರಂತೆ ನೋಡುವ ಮನಸ್ಸು ನಮ್ಮ ಸಮಾಜಕ್ಕೆ ಬಂದೇ ಇಲ್ಲ. ಅದನ್ನು ಕಂಡಾಗೆಲ್ಲ ಸಂಕಟವಾಗುತ್ತೆ. ಒಂದು ವೇಳೆ ಉಳಿದ ಹೆಂಗಸರಂತೆ, ಮಕ್ಕಳನ್ನು ಹೆತ್ತಾಗಲೇ ಹೆಣ್ಣಿನ ಬಾಳು ಪರಿಪೂರ್ಣ ಎಂದು ನಾನೂ ಬದುಕಿದ್ದರೆ ಎರಡು/ಮೂರು ಮಕ್ಕಳಿಗೆ ಅಮ್ಮ ಆಗುತ್ತಿದ್ದೆ. ಅಷ್ಟೆ. ಆದರೆ ಈಗ 51 ಮಕ್ಕಳ ತಾಯಿ ಆಗಿದ್ದೀನಿ. ದಿನವೂ ಕಾಲೇಜಿನಿಂದ ಬರುತ್ತಿದ್ದಂತೆಯೇ ಎಲ್ಲ ಮಕ್ಕಳೂ ಒಕ್ಕೊರಲಿನಿಂದ 'ಅಮ್ಮಾ' ಎಂದು ಕೂಗುತ್ತಾರೆ. ಅವರ ಸಮಸ್ಯೆಯನ್ನು ಅವರದೇ ಭಾಷೆಯಲ್ಲಿ ಹೇಳಿಕೊಳ್ಳುತ್ತಾರೆ. ಒಂದೊಂದು ಸಂದರ್ಭದಲ್ಲಿ ನಗಿಸುತ್ತಾರೆ. ನಾನು ತಮಾಷೆಗೆಂದು ಮುಖ ಊದಿಸಿಕೊಂಡರೂ ಬಿಕ್ಕಳಿಸಿ ಅಳಲು ಶುರು ಮಾಡುತ್ತಾರೆ. ಬುದ್ಧಿಮಾಂದ್ಯರು ಅಂದಾಕ್ಷಣ ಅವರೆಲ್ಲ ಸೋಮಾರಿಗಳು ಎಂಬ ಪೂರ್ವಾಗ್ರಹ ಹಲವರಿಗಿದೆ. ಆದರೆ ನನ್ನ ಮಕ್ಕಳು ಅಂಥವರಲ್ಲ. ಕೆಲವರು ಶಾಲೆಗೆ ಹೋಗುತ್ತಾರೆ. ಉಳಿದವರು ಸೋಪ್, ಗಂಧದ ಕಡ್ಡಿ, ಡೋರ್ ಮ್ಯಾಟ್, ಕವರ್‌ಗಳನ್ನು ತಯಾರಿಸುತ್ತಾರೆ. ಇವುಗಳನ್ನು ಮಾರಿ ಸಂಸ್ಥೆಯ ಖರ್ಚು ನಿಭಾಯಿಸುತ್ತೇವೆ. ನಾನು ಬದುಕಿರುವ ತನಕ ಮಾತ್ರವಲ್ಲ, ನನ್ನ ಸಾವಿನ ನಂತರ ಕೂಡ ಎಲ್ಲ ಮಕ್ಕಳೂ ನೆಮ್ಮದಿಯಿಂದ ಬದುಕಬೇಕು ಎಂಬ ಮಹದಾಸೆಯಿಂದಲೇ ಅಮ್ಹಾ ಸಂಸ್ಥೆಯನ್ನು ಚಾರಿಟಬಲ್ ಟ್ರಸ್ಟ್ ಮಾಡಿದ್ದೇನೆ. ಟ್ರಸ್ಟಿಗಳ ಮಾರ್ಗದರ್ಶನದಲ್ಲಿ ಸಂಸ್ಥೆ ಮುಂದುವರಿಯುತ್ತದೆ. 51 ಬುದ್ಧಿಮಾಂದ್ಯ ಮಕ್ಕಳನ್ನು ಸಾಕುವ ಮೂಲಕ ನಾನೊಂದು ಸಾಧನೆ ಮಾಡಿದೀನಿ ಎಂಬ ಹಮ್ಮು ಖಂಡಿತ ನನಗಿಲ್ಲ. ಜೊತೆಗಿದ್ದ ಮಕ್ಕಳಿಗೆಲ್ಲಾ ನೆಮ್ಮದಿಯ ಬದುಕು ಕೊಟ್ಟೆ. ಅವರ ಮೂಲಕ ತಾಳ್ಮೆ ಕಲಿತೆ. ಬೇರೆ ಯಾರಿಗೂ ಕಾಣದ ಹೊಸದೊಂದು ಬದುಕನ್ನು, ಬುದ್ಧಿಮಾಂದ್ಯ ಮಕ್ಕಳ ಕಂಗಳಲ್ಲಿ ನಮ್ಮ ಅಣ್ಣನನ್ನು ಕಂಡೆ. ಅವರೆಲ್ಲಾ ಒಟ್ಟಾಗಿ 'ಅಮ್ಮಾ' ಎಂದು ಕೂಗಿದಾಗ ತಾಯ್ತನದ ಸುಖ ಅನುಭವಿಸಿದೆ. ಈಗ ನಮ್ಮ ಸಂಸ್ಥೆಯಲ್ಲಿ ಬೆಳಗಿನ ಹೊತ್ತು 8 ಜನ ಆಯಾಗಳು ಹಾಗೂ ರಾತ್ರಿಯ ವೇಳೆ ಒಬ್ಬರು ಸಹಾಯಕರು ಇರ್ತಾರೆ. ಮಕ್ಕಳೊಂದಿಗೇ ನಾವೂ ಇರ್ತೇವೆ. ಬುದ್ಧಿಮಾಂದ್ಯ ಮಕ್ಕಳಿಗೆ ವಿವಿಧ ಬಗೆಯಲ್ಲಿ ತರಬೇತಿ ಕೊಡುವಂಥ ಶಿಕ್ಷಕರ ಅಗತ್ಯವಿದೆ. ನನ್ನ ಸಂಬಳದೊಂದಿಗೆ ಆಕಸ್ಮಿಕವಾಗಿ ಜೊತೆಯಾಗುವ ನೆರವಿನ ಹಸ್ತದೊಂದಿಗೆ ಬದುಕು ಸಾಗ್ತಾ ಇದೆ. ಆರ್ಥಿಕವಾಗಿ ಸ್ವಲ್ಪ ತೊಂದರೆಯಿದೆ ನಿಜ. ಆದರೆ 51 ಮಕ್ಕಳ ಅಮ್ಮನಾಗಿ ನಾನು ಸಂತೃಪ್ತೆ...' ಹೀಗೆನ್ನುತ್ತಾ ತಮ್ಮ ಯಶೋಗಾಥೆಯ ವಿವರಣೆಗೆ ಫುಲ್‌ಸ್ಟಾಪ್ ಹಾಕಿದರು ಭಾನುಮತಿ.
ತುಂಬ ಚಟುವಟಿಕೆಯಿಂದಿರುವ ಇಬ್ಬರು ಮಕ್ಕಳನ್ನು ಸಾಕುವುದರೊಳಗೇ ಎಂಥವರೂ ಸುಸ್ತೆದ್ದು ಹೋಗುತ್ತಾರೆ. ಹೀಗಿರುವಾಗ 51 ಬುದ್ಧಿಮಾಂದ್ಯ ಮಕ್ಕಳ ಸೇವೆಯಲ್ಲಿಯೇ ಸಾರ್ಥಕ್ಯ ಪಡೆದುಕೊಂಡಿರುವ ಭಾನುಮತಿಯವರು ಎಲ್ಲ ಅರ್ಥದಲ್ಲೂ ಪರಿಪೂರ್ಣ ಅಮ್ಮ. ಅವರಿಗೊಂದು ಅಭಿನಂದನೆ ಹೇಳಬೇಕು ಅನ್ನಿಸಿದರೆ: bhanusaleesh@gmail.com
- ಎ.ಆರ್. ಮಣಿಕಾಂತ್armanikanth@gmail.com
No comments:
Post a Comment