Tuesday, 3 December 2013

ಅಗ್ಗದ ಡಯಾಲಿಸಿಸ್, ಇದು ಉಮಾ ಬದುಕಿನ ಥೀಸೀಸ್


ಅಗ್ಗದ ಡಯಾಲಿಸಿಸ್, ಇದು ಉಮಾ ಬದುಕಿನ ಥೀಸೀಸ್

ಭಾವತೀರಯಾನ- ಎ.ಆರ್.ಮಣಿಕಾಂತ್

ಇವರ ಹೆಸರು ಉಮಾ ಪ್ರೇಮನ್. ಈಕೆಯನ್ನು ಜೂನಿಯರ್ ಮದರ್ ಥೆರೇಸಾ ಎಂದೇ ಕರೆಯಬಹುದೇನೋ. ಕಾರಣ, ಈಕೆಯೂ ಸೇವೆಯೇ ಜೀವನ ಎಂದು ನಂಬಿದ್ದಾರೆ. ಬಡ ರೋಗಿಗಳ ಸೇವೆಯಲ್ಲಿಯೇ ಭಗವಂತನನ್ನು ಕಾಣುತ್ತಿದ್ದಾರೆ. ಕೇರಳದ ಗುರುವಾಯೂರಿನಲ್ಲಿ ಶಾಂತಿ ಮೆಡಿಕಲ್ ಇನ್‌ಫರ್ಮೇಷನ್ ಸೆಂಟರ್ ಸ್ಥಾಪಿಸಿದ್ದಾರೆ. ಅದರ ಮೂಲಕ ಡಯಾಲಿಸಿಸ್, ಕಿಡ್ನಿ ಕಸಿಯಂಥ ದುಬಾರಿ ಚಿಕಿತ್ಸೆಗಳನ್ನು ಅತ್ಯಂತ ಕಡಿಮೆ ದರದಲ್ಲಿ ಒದಗಿಸುತ್ತಿದ್ದಾರೆ. ಕಳೆದ 15 ವರ್ಷಗಳಲ್ಲಿ 640 ಮಂದಿಗೆ ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಿಸಿದ, 20 ಸಾವಿರಕ್ಕೂ ಹೆಚ್ಚು ಮಂದಿಗೆ ಅತ್ಯಂತ ಕಡಿಮೆ ದರದಲ್ಲಿ ಡಯಾಲಿಸಿಸ್ ಚಿಕಿತ್ಸೆ ನೀಡಿರುವ ಹೆಗ್ಗಳಿಕೆ ಉಮಾ ಪ್ರೇಮನ್ ಅವರದ್ದು. ಇವತ್ತು, ಒಂದು ಬೃಹತ್ ಸಂಸ್ಥೆಯ ಮುಖ್ಯಸ್ಥೆ ಎನ್ನಿಸಿಕೊಂಡಿರುವ ಉಮಾ ಓದಿರುವುದು ಜಸ್ಟ್ ಸೆಕೆಂಡ್ ಪಿಯುಸಿ! ಹೇಳಿಕೊಳ್ಳುವಂಥ ಶೈಕ್ಷಣಿಕ ಅರ್ಹತೆ ಇಲ್ಲದಿದ್ದರೂ ಒಂದು ವೈದ್ಯಕೀಯ ಚಿಕಿತ್ಸಾ ಕೇಂದ್ರ ಆರಂಭಿಸಲು ಹೇಗೆ ಸಾಧ್ಯವಾಯಿತು? ಈ ಸೇವೆಯ ಹಿಂದಿರುವ ಉದ್ದೇಶವೇನು? 'ಬಡ ರೋಗಿಗಳ' ಸೇವೆ ಮಾಡಬೇಕೆಂಬ ನಿರ್ಧಾರಕ್ಕೆ ಇದ್ದ ಕಾರಣವಾದರೂ ಏನು ಎಂಬ ಪ್ರಶ್ನೆಗಳಿಗೆ ಉತ್ತರವೆಂಬಂತೆ, ತಮ್ಮ ಬದುಕಿನ ಕಥೆಯನ್ನು ವಿವರವಾಗಿ ಹೇಳಿಕೊಂಡರು ಉಮಾ. ಅದನ್ನು, ಅವರ ಮಾತುಗಳಲ್ಲಿಯೇ ಕೇಳೋಣ ಬನ್ನಿ.----'ನಮ್ಮ ತಂದೆ ಹತ್ತಿ ಗಿರಣಿಯೊಂದರಲ್ಲಿ ಕಾರ್ಮಿಕನಾಗಿದ್ದರು. ಅಮ್ಮ ಹೌಸ್‌ವೈಫ್. ಬಡ ರೋಗಿಗಳನ್ನು ಉಪಚರಿಸುವುದು ತಂದೆಯವರ ಪ್ರವೃತ್ತಿಯಾಗಿತ್ತು. ಒಬ್ಬ ನಾಗರಿಕನಾಗಿ ಈ ಸಮಾಜಕ್ಕೆ ನಾನು ಮಾಡಲೇಬೇಕಾದ ಸೇವೆ ಇದು ಎಂದೇ ಅವರು ಹೇಳುತ್ತಿದ್ದರು. ತಂದೆಯ ಕೆಲಸ ನೋಡಿದ ಪರಿಣಾಮ, ನನಗೂ ಸಮಾಜ ಸೇವೆಯಲ್ಲಿ ಆಸಕ್ತಿ ಬಂತು. ಸೆಕೆಂಡ್ ಪಿಯುಸಿ ಮುಗಿದ ತಕ್ಷಣ ಕೋಲ್ಕತಾಗೆ, ಮದರ್ ಥೆರೇಸಾ ಬಳಿಗೆ ಹೋದೆ. ಅವರಿಗೆ ನನ್ನ ಉದ್ದೇಶ ತಿಳಿಸಿದೆ. 'ನಿನ್ನ ನಿರ್ಧಾರ ತುಂಬಾ ಒಳ್ಳೆಯದು. ಆದರೆ ಬಡರೋಗಿಗಳ ಸೇವೆ ಮಾಡಲು ಇಷ್ಟು ದೂರ ಬರುವ ಅಗತ್ಯವಿಲ್ಲ. ಮುಖ್ಯವಾಗಿ ನಿನಗೆ ಬಂಗಾಲಿಯಾಗಲಿ, ಇಂಗ್ಲಿಷ್ ಆಗಲಿ ಬರುವುದಿಲ್ಲ. ಹಾಗಾಗಿ ರೋಗಿಗಳ ಜೊತೆ ವ್ಯವಹರಿಸಲು ಕಷ್ಟವಾಗುತ್ತೆ. ಊರಿಗೆ ಹೋಗು. ಅಲ್ಲಿದ್ದುಕೊಂಡೇ ಸೇವೆ ಮಾಡು' ಎಂದರು. ನನಗೂ ಅದೇ ಸರಿ ಅನ್ನಿಸಿತು. ಅಲ್ಲಿಂದ ಕೇರಳದ ತ್ರಿಶ್ಶೂರ್‌ನಲ್ಲಿರುವ ಪೋಪ್ ಪಾಲ್ ಪೀಸ್ ಹೋಂಗೆ ಬಂದು ಬಡರೋಗಿಗಳ ಸೇವೆಯಲ್ಲಿ ತೊಡಗಿಕೊಂಡೆ. ಆಗ ನನ್ನ ವಯಸ್ಸು 17 ವರ್ಷ.
ಹೀಗೇ ಎರಡು ವರ್ಷಗಳು ಕಳೆದವು. ಆ ಸಂದರ್ಭದಲ್ಲಿಯೇ ನಮ್ಮಲ್ಲಿ ಚಿಕಿತ್ಸೆಗೆಂದು ಪ್ರೇಮನ್ ಎಂಬ ಉದ್ಯಮಿ ದಾಖಲಾಗಿದ್ದರು. ಅವರಿಗೆ ಕುಡಿತ ಹಾಗೂ ಸಿಗರೇಟಿನ ದುಶ್ಚಟವಿತ್ತು. ಚಿಕಿತ್ಸೆ ಹಾಗೂ ಕ್ಷೇಮ ಸಮಾಚಾರ ವಿಚಾರಿಸುವ ನೆಪದಲ್ಲಿ ಅವರೊಂದಿಗೆ ಸಲುಗೆ ಬೆಳೆಯಿತು. ಒಂದು ಸಂದರ್ಭದಲ್ಲಿ ಅದು ಇದೂ ಮಾತನಾಡುತ್ತಾ -'ನೀವು ದುಶ್ಚಟಗಳ ದಾಸ. ನೀವು ಎಂದೆಂದೂ ಬದಲಾಗೋದಿಲ್ಲ' ಎಂದುಬಿಟ್ಟೆ. ಈ ಮಾತನ್ನು ಆತ ಸವಾಲಾಗಿ ಸ್ವೀಕರಿಸಿದರು. ನಂತರದ ಕೆಲವೇ ದಿನಗಳಲ್ಲಿ ಧೂಮಪಾನ ಹಾಗೂ ಮದ್ಯಪಾನವನ್ನು ತ್ಯಜಿಸಿದರು. ಮುಂದೆ ನಮ್ಮ ಗೆಳೆತನ ಗಾಢವಾಯಿತು. 19ನೇ ವಯಸ್ಸಿನಲ್ಲಿ ಅವರನ್ನೇ ಮದುವೆಯಾದೆ. ಪರಿಣಾಮ, ಅದುವರೆಗೂ ಉಮಾ ಎಂದಷ್ಟೇ ಇದ್ದ ಹೆಸರು, ಮದುವೆಯ ನಂತರ ಉಮಾ ಪ್ರೇಮನ್ ಎಂದಾಯಿತು.ಮುಂದಿನ ಐದು ವರ್ಷಗಳು ಹಾಂ ಹೂಂ ಎನ್ನುವುದರೊಳಗೆ ಕಳೆದು ಹೋದವು. ಈ ವೇಳೆಗೆ ನನಗೆ ಮಗ ಹುಟ್ಟಿದ್ದ. ಗಂಡನ ಆರೋಗ್ಯ ಪದೇ ಪದೆ ಕೆಡುತ್ತಿತ್ತು. ಆಸ್ಪತ್ರೆಗೆ ಹೋದಾಗ ಅವರಿಗೆ ಕ್ಷಯ ರೋಗ ಎಂದು ಗೊತ್ತಾಯಿತು. ಹಣಕ್ಕೆ ಖಂಡಿತ ಕೊರತೆಯಿರಲಿಲ್ಲ. ಅತ್ಯುತ್ತಮ ಚಿಕಿತ್ಸೆ ಪಡೆಯುವ ಉದ್ದೇಶದಿಂದ ದೇಶದ ಎಲ್ಲ ಹೆಸರಾಂತ ಆಸ್ಪತ್ರೆಗಳಿಗೂ ಹೋಗಿ ಬಂದೆವು. ಹೀಗೆ, ಆಸ್ಪತ್ರೆಯಿಂದ ಆಸ್ಪತ್ರೆಗೆ ಹೋಗಿ ಬಂದ ಕಾರಣ, ಕೂಡಿಟ್ಟಿದ್ದ ಹಣವೆಲ್ಲಾ ನೀರಿನಂತೆ ಖರ್ಚಾಗಿ ಹೋಯಿತು. ವಿಪರ್ಯಾಸವೆಂದರೆ, ಯಾವ ವೈದ್ಯರೂ ರೋಗ ಈಗ ಯಾವ ಹಂತದಲ್ಲಿದೆ ಎಂದು ನಮಗೆ ಹೇಳಲೇ ಇಲ್ಲ. ಈ ಬಗ್ಗೆ ವಿಚಾರಿಸಿದರೆ, ಕೆಲವೇ ದಿನಗಳಲ್ಲಿ ಎಲ್ಲಾ ಸರಿ ಹೋಗುತ್ತೆ ಎನ್ನುತ್ತಿದ್ದರು. ಆದರೆ ಹಾಗಾಗಲಿಲ್ಲ. ವಿವಿಧ ಆಸ್ಪತ್ರೆಗಳ ಔಷಧ ಸೇವನೆಯ ಕಾರಣದಿಂದ ಹಾಗೂ ಕ್ಷಯರೋಗ ಅಪಾಯದ ಹಂತ ದಾಟಿದ್ದರಿಂದ ನನ್ನ ಗಂಡನಿಗೆ ಕಿಡ್ನಿ ಫೇಲ್ ಆಯಿತು. ಈ ಸಂದರ್ಭದಲ್ಲಿ ತಕ್ಷಣವೇ ಮೇಲಿಂದ ಮೇಲೆ ಡಯಾಲಿಸಿಸ್ ಮಾಡಿಸಬೇಕಿತ್ತು. ಆದರೆ, ನಮಗೆ ಮಾರ್ಗದರ್ಶನ ಮಾಡುವವರೇ ಇರಲಿಲ್ಲ. ತಿರುವನಂತಪುರಂನ ಆಸ್ಪತ್ರೆಗೆ ಬಂದಿದ್ದಾಗ ಗಂಡನಿಗೆ ಹೇಳಿದೆ: 'ನಮ್ಮಲ್ಲಿ ಹಣವಿದೆ. ಸ್ವಲ್ಪಮಟ್ಟಿಗಿನ ತಿಳಿವಳಿಕೆಯಿದೆ. ಆದ್ರೂ ನಮಗೆ ಚಿಕಿತ್ಸೆ ಪಡೆಯುವುದು ಕಷ್ಟವಾಗುತ್ತಿದೆ. ನಮಗೇ ಹೀಗಾದರೆ ಬಡವರು ಹಾಗೂ ಅನಕ್ಷರಸ್ಥರ ಗತಿ ಏನು? ನಿಮಗೆ ಪೂರ್ತಿ ಹುಷಾರಾದ ಮೇಲೆ ಬಡ ರೋಗಿಗಳ ಸೇವೆಯಲ್ಲಿ ನಾನು ತೊಡಗಿಕೊಳ್ತೇನೆ...' ನನ್ನ ಯಜಮಾನರು ತಕ್ಷಣವೇ ಹೇಳಿದರು: ಬಹಳ ಒಳ್ಳೆಯ ನಿರ್ಧಾರ ನಿನ್ನದು. ಖಂಡಿತ ಹಾಗೇ ಮಾಡು. ನಿನ್ನ ಬೆಂಬಲಕ್ಕೆ ನಾನಿರ್ತೇನೆ...' ಹೀಗೆ ಭರವಸೆ ನೀಡಿದ ಅರ್ಧ ಗಂಟೆಯ ಬಳಿಕ ನನ್ನ ಯಜಮಾನರು ಕೋಮಾ ಸ್ಥಿತಿಗೆ ಹೋಗಿ ಬಿಟ್ಟರು. ಎರಡು ದಿನಗಳ ಬಳಿಕ ತೀರಿಕೊಂಡರು. ಸರಿಯಾದ ಸಮಯಕ್ಕೆ ಡಯಾಲಿಸಿಸ್ ಮಾಡಿಸದಿದ್ದುದೇ ಅವರ ಸಾವಿಗೆ ಕಾರಣ ಎಂದು ಆನಂತರದಲ್ಲಿ ತಿಳಿದು ಬಂತು.ಗಂಡನ ಹಠಾತ್ ನಿಧನದಿಂದಾಗಿ ವಿಧವೆಯ ಹಣೆಪಟ್ಟಿ ಅಂಟಿಕೊಂಡಿತ್ತು. ಎದುರಿಗೆ ಪುಟ್ಟ ಮಗನಿದ್ದ. ಅವತ್ತಿಗಿನ್ನೂ ನನ್ನ ವಯಸ್ಸು 27 ವರ್ಷ. ಪತಿಯ ಅಗಲಿಕೆಯ ಡಿಪ್ರೆಷನ್‌ನಿಂದ ಆಚೆ ಬರಬೇಕೆಂದರೆ, ವೈದ್ಯಕೀಯ ಮಾಹಿತಿ ನೀಡುವ ಸಲಹಾ ಕೇಂದ್ರವೊಂದನ್ನು ಆರಂಭಿಸಬೇಕು. ನನ್ನ ಗಂಡನಿಗೆ ಬಂದಂಥ ಸಾವು ಬೇರೆಯವರಿಗೆ ಬರದಂತೆ ನೋಡಿಕೊಳ್ಳಬೇಕು ಎಂದು ನಿರ್ಧರಿಸಿದೆ. ಶ್ರಾದ್ಧದ ಕಾರ್ಯ ಮುಗಿಯುತ್ತಿದ್ದಂತೆಯೇ ದೆಹಲಿ, ಕೋಲ್ಕತ್ತಾ, ಹೈದ್ರಾಬಾದ್, ಮದ್ರಾಸ್‌ಗಳಲ್ಲಿರುವ ಎಲ್ಲ ಹೆಸರಾಂತ ಆಸ್ಪತ್ರೆಗಳಿಗೂ ಹೋಗಿ ಬಂದೆ. ಡಯಾಲಿಸಿಸ್ ಹಾಗೂ ಕಿಡ್ನಿ ಕಸಿ ಮಾಡಿಸುವುದು ಹೇಗೆ? ಈ ಚಿಕಿತ್ಸೆಗೆ ತಗುಲುವ ಖರ್ಚು ಎಷ್ಟು? ಚಿಕಿತ್ಸೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳೇನು ಎಂಬ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದೆ. ನಂತರ 1997ರ ಆಗಸ್ಟ್ 24ರಂದು, ಗುರುವಾಯೂರ್‌ನಲ್ಲಿ ಶಾಂತಿ ಮೆಡಿಕಲ್ ಇನ್‌ಫರ್ಮೇಷನ್ ಸೆಂಟರ್ ಆರಂಭಿಸಿದೆ.ನಾನು ಆರಂಭಿಸಿದ ಸಂಸ್ಥೆ ಹೊಸದಿತ್ತು. ನನ್ನ ಬಗ್ಗೆ, ನನ್ನ ಉದ್ದೇಶ ಹಾಗೂ ಯೋಜನೆಗಳ ಬಗ್ಗೆ, ಜನರಿಗೆ ನಾನೇ ಹೇಳಿಕೊಳ್ಳಬೇಕಿತ್ತು. ಹಾಗಾಗಿ ಊರೂರು ಸುತ್ತಿದೆ. ನನ್ನ ಕಷ್ಟಗಳು ಮಗನಿಗೆ ತಿಳಿಯದಿರಲಿ ಎಂದು ಅವನನ್ನು ಹಾಸ್ಟೆಲ್‌ಗೆ ಸೇರಿಸಿದೆ. ಆಗ ಪರಿಚಯದವರು ಹಾಗೂ ಬಂಧುಗಳು ತುಂಬಾ ಕೆಟ್ಟದಾಗಿ ಮಾತಾಡಿದರು. ನೇರವಾಗಿ ನನ್ನ ಮಗನನ್ನೇ ಸಂಪರ್ಕಿಸಿ-'ನಿನ್ನನ್ನು ಹಾಸ್ಟೆಲ್‌ನಲ್ಲಿ ಬಿಟ್ಟು, ನಿಮ್ಮಮ್ಮ ಊರೂರು ಸುತ್ತುತ್ತಾ ಮಜಾ ಮಾಡ್ತಿದಾಳೆ ' ಎಂದರು. ಅದೊಮ್ಮೆ, ರಜೆಗೆಂದು ಬಂದ ಮಗ-'ನೀನು ಊರೂರು ತಿರುಗ್ತಾ ಮಜಾ ಮಾಡ್ತೀಯಂತೆ ಹೌದಾ?' ಎಂದ. ಅವನಿಗೆ ನನ್ನ ಉದ್ದೇಶ ವಿವರಿಸಿದೆ. 'ನಿಮ್ಮ ತಾಯಿ ಯಾವತ್ತೂ ಹಾದಿ ತಪ್ಪೋದಿಲ್ಲ ಕಂದಾ' ಎಂದು ಬಿಕ್ಕಳಿಸಿದೆ. ಅವತ್ತು ನನ್ನ ಅಪ್ಪುಗೆ ಅವನನ್ನು, ಅವನ ಕಣ್ಣೀರು ನನ್ನನ್ನು ಸಮಾಧಾನಪಡಿಸಿತು.ದೇಹದ ಅಶುದ್ಧ ರಕ್ತವನ್ನು ಡಯಾಲಿಸಿಸ್ ಯಂತ್ರಕ್ಕೆ ಕಳಿಸುವುದು. ಅಲ್ಲಿ ಶುದ್ಧೀಕರಿಸಿದ ನಂತರ ರಕ್ತವನ್ನು ಮತ್ತೆ ದೇಹಕ್ಕೆ ಸೇರಿಸುವುದು... ಇದೇ ಡಯಾಲಿಸಿಸ್. ಹತ್ತು ಯೂನಿಟ್‌ಗಳಿರುವ ಒಂದು ಡಯಾಲಿಸಿಸ್ ಸೆಂಟರ್ ಆರಂಭಿಸಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಅದಕ್ಕೆ 75 ಲಕ್ಷ ರೂ. ಖರ್ಚು ಬೀಳುತ್ತೆ ಎನ್ನಿಸಿದಾಗ ಚಿಂತೆಯಾಯಿತು.  27 ವರ್ಷದ ವಿಧವೆ ನಾನು. ಅಂಥವಳು ಈ ಭಾರಿ ಮೊತ್ತವನ್ನು ಹೊಂದಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾಗಲೇ ಪರಿಚಯದ ಒಬ್ಬರು -'ಅರಬ್ ರಾಷ್ಟ್ರಗಳಿಗೆ ಹೋಗಿ ಬಾ. ಅಲ್ಲಿ ಮಲೆಯಾಳಿಗಳಿದ್ದಾರೆ. ಅವರೆಲ್ಲಾ ಖಂಡಿತ ಸಹಾಯ ಮಾಡ್ತಾರೆ' ಎಂದಿದ್ದರು. ವಿದೇಶದಲ್ಲಿ ವ್ಯವಹರಿಸಲು ಇಂಗ್ಲೀಷ್ ಗೊತ್ತಿರಬೇಕು. ನನಗೋ, ಮಲಯಾಳಂ ಹಾಗೂ ತಮಿಳು ಬಿಟ್ಟರೆ ಬೇರೊಂದು ಭಾಷೆ ಗೊತ್ತಿರಲಿಲ್ಲ. ಆದರೂ ಗಟ್ಟಿ ಮನಸ್ಸು ಮಾಡಿ ಅರಬ್ ದೇಶಗಳಿಗೆ ಹೋದೆ. ನನ್ನ ಸೌಭಾಗ್ಯಕ್ಕೆ ಅಲ್ಲಿದ್ದ ಕಾನ್ಸುಲೇಟ್ ಅಧಿಕಾರಿ ಕೇರಳದವರೇ ಆಗಿದ್ದರು. ಅವರಿಂದ ತುಂಬಾ ಸಹಾಯವಾಯಿತು. ಗಲ್ಫ್ ರಾಷ್ಟ್ರಗಳಲ್ಲಿದ್ದ ಎಲ್ಲ ಮಲಯಾಳಿಗಳೂ ತುಂಬು ಮನದಿಂದ ಸಹಾಯ ಮಾಡಿದ್ರು. ಹೀಗೆ ದಾನದ ರೂಪದಲ್ಲಿ ಹಣ ದೊರಕಿದ್ದರಿಂದ ಅದನ್ನು ಮೂಲ ಬಂಡವಾಳದ ಥರಾ ಉಳಿಸಿಕೊಂಡು ಕೇವಲ 450 ರು. ಶುಲ್ಕ ಪಡೆದು ಬಡವರಿಗೆ ಡಯಾಲಿಸಿಸ್ ಸೇವೆ ಒದಗಿಸ್ತಾ ಇದೀವಿ. (ವಾಸ್ತವವಾಗಿ, ಒಮ್ಮೆ ಡಯಾಲಿಸಿಸ್ ಮಾಡಿಸಬೇಕು ಅಂದ್ರೆ ಕಡಿಮೆ ಅಂದ್ರೂ 3000 ರು. ಖರ್ಚು ಬೀಳುತ್ತೆ!) ಹೀಗೆ ತಲಾ 450 ರು. ಶುಲ್ಕ ಪಡೆದು ತಿಂಗಳಿಗೆ 1000ಕ್ಕೂ ಹೆಚ್ಚು ಮಂದಿಗೆ ನಾವು ಡಯಾಲಿಸಿಸ್ ಚಿಕಿತ್ಸೆ ಕೊಡಿಸ್ತೇವೆ.
1999ರಲ್ಲಿ ರೋಗಿಯೊಬ್ಬನಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಕೊಯಮತ್ತೂರಿಗೆ ಹೋಗಿದ್ದೆ. ಹೀಗೆ ಹೋದಾಗೆಲ್ಲ ಆಸ್ಪತ್ರೇಲಿರುವ ಇತರೆ ರೋಗಿಗಳನ್ನು ಮಾತಾಡಿಸುವುದು ನನ್ನ ಅಭ್ಯಾಸ. ಹೀಗೆ ಮಾತಾಡಿಸುವಾಗ ಸಲೀಲ್ ಎಂಬಾತನ ಪರಿಚಯವಾಯ್ತು. ಹೇಗಿದೀಯ ಎಂದೆ. ಆತ, ನನಗೆ ಅಪ್ಪ-ಅಮ್ಮ ಇಲ್ಲ. ತಂಗಿ ಇದ್ದಾಳೆ. ನನ್ನ ಕಿಡ್ನಿಗಳು ಫೇಲ್ ಆಗಿವೆ. ತಂಗಿಯ ರಕ್ತದ ಗುಂಪು ಬೇರೆ ಇರುವುದರಿಂದ ಅವಳು ಕಿಡ್ನಿ ದಾನ ಮಾಡುವಂತಿಲ್ಲ. ಇನ್ನು ಕೆಲವೇ ದಿನಗಳಲ್ಲಿ ನಾನು ಸತ್ತು ಹೋಗ್ತೇನೆ' ಅಂದ. ಅವನ ಮಾತು ಕೇಳಿ ಕರುಳು ಚುರ್ ಎಂದಿತು. ತಕ್ಷಣವೇ ಅವನ ಹಣೆ ನೇವರಿಸುತ್ತಾ 'ಹೆದರಬೇಡ. ನಾನು ನಿನಗೆ ಕಿಡ್ನಿ ದಾನ ಮಾಡ್ತೇನೆ' ಎಂದೆ. ನಂತರ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವೈದ್ಯರೊಂದಿಗೆ ಮಾತಾಡಿದೆ. ಅವರು ನೇರವಾಗಿ ಕೇಳಿದರು:' ನೀವು ಅಪರಿಚಿತನಿಗೆ ಅಂಗದಾನ ಮಾಡ್ತಾ ಇದೀರ. ನಿಮಗಿನ್ನೂ 29 ವರ್ಷ ವಯಸ್ಸು. ಇಷ್ಟು ಚಿಕ್ಕ ವಯಸ್ಸಿಗೇ ಅಂಗದಾನ ಮಾಡ್ತಿದೀರ ಅಂದ್ರೆ ನಿಮ್ಗೆ ಭಾರಿ ಮೊತ್ತದ ಹಣ ಸಿಗ್ತಾ ಇರಬೇಕು ಅಲ್ವಾ?'ನಾನು ತಕ್ಷಣವೇ ಹೇಳಿದೆ: 'ಸರ್, ಕಿಡ್ನಿ ದಾನ ಮಾಡುವುದರಿಂದ ನನಗೆ ದುಡ್ಡು ಸಿಗಲ್ಲ. ಆದ್ರೆ ಒಬ್ಬ ತಮ್ಮ ಸಿಕ್ತಾನೆ!' ಈ ಉತ್ತರ ಅಲ್ಲಿದ್ದ ಎಲ್ಲರ ಕಣ್ಣನ್ನೂ ಮಂಜಾಗಿಸಿತು. ಈ ವಿಷಯ ಕೇರಳ ಹಾಗೂ ತಮಿಳ್ನಾಡಿನ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಯಿತು. ಇದರಿಂದ ಪ್ರೇರಣೆ ಪಡೆದ 150ಕ್ಕೂ ಹೆಚ್ಚು ಮಂದಿ, ತಾವೂ ಕಿಡ್ನಿ ದಾನ ಮಾಡಲು ಮುಂದೆ ಬಂದರು. ಸಲೀಲ್, ಈಗ ನಮ್ಮ ಸಂಸ್ಥೆಯ ಒಂದು ಭಾಗವಾಗಿದ್ದಾನೆ. ನನ್ನ ಬಲಗೈ ಥರಾ ಕೆಲಸ ಮಾಡುತ್ತಿದ್ದಾನೆ.ಸಲೀಲ್‌ನ ಪ್ರಕರಣದ ನಂತರ ಎಲ್ಲ ಪತ್ರಿಕೆ ಹಾಗೂ ಟಿ.ವಿ. ಚಾನೆಲ್‌ಗಳು  ನನ್ನನ್ನು, ನಮ್ಮ ಸಂಸ್ಥೆಯ ಕೆಲಸವನ್ನು ಗುರುತಿಸಿದವು. ಸಾಕಷ್ಟು ಪ್ರಚಾರ ನೀಡಿದವು. ಸಿಎನ್‌ಎನ್-ಐಬಿಎನ್ ಚಾನೆಲ್ ನನ್ನನ್ನು ರಿಯಲ್ ಹೀರೋ ಆಫ್ ಇಂಡಿಯಾ ಎಂದು ಗೌರವಿಸಿತು. ಎರಡು ಬಾರಿ ಸಂದರ್ಶನ ಮಾಡಿತು. ಅದನ್ನು ನೋಡಿ ಇಂಪ್ರೆಸ್ ಆದ ತಮಿಳು ಚಿತ್ರ ನಟ ಶರತ್‌ಕುಮಾರ್, ತಾವೇ ಮುಂದೆ ಬಂದು ನಮ್ಮ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆದರು. ಮಲಯಾಳಂ ಚಿತ್ರರಂಗದ ದಿಗ್ಗಜರಾದ ಮೋಹನ್‌ಲಾಲ್, ಮಮ್ಮುಟ್ಟಿ, ಸುರೇಶ್ ಗೋಪಿ ಮುಂತಾದವರು ನಮ್ಮ ಆಸ್ಪತ್ರೆಗೆ ಬಂದದ್ದು ಮಾತ್ರವಲ್ಲ, ಮರಣಾನಂತರ ಅಂಗಾಂಗ ದಾನ ಮಾಡುವುದಾಗಿ ಘೋಷಿಸಿದರು.ಮೊದಲೇ ಹೇಳಿದಂತೆ, ಬಡ ರೋಗಿಗಳಿಗೆ ಉಚಿತವಾಗಿ ಅಥವಾ ಅಗ್ಗದ ದರದಲ್ಲಿ ಡಯಾಲಿಸಿಸ್ ಹಾಗೂ ಕಿಡ್ನಿ ಕಸಿಯಂಥ ಚಿಕಿತ್ಸೆಗೆ ನೆರವಾಗುವುದು ನನ್ನ ಉದ್ದೇಶ. ಈಗ ನನ್ನೊಂದಿಗೆ ವೈದ್ಯರು ಹಾಗೂ ದಾದಿಯರು ಸೇರಿ 50 ಮಂದಿ ಇದ್ದಾರೆ. ಇವರಲ್ಲದೆ ದೇಶ-ವಿದೇಶದ 30ಕ್ಕೂ ಹೆಚ್ಚು ವೈದ್ಯರು ಆಗಿಂದಾಗ್ಗೆ ಉಚಿತವಾಗಿ ಕೆಲಸ ಮಾಡಲು ಬರುತ್ತಾರೆ. ಸಂಸ್ಥೆಯ ಎಲ್ಲ ಖರ್ಚುಗಳನ್ನೂ ದಾನಿಗಳಿಂದ ಪಡೆದ ಹಣದಿಂದಲೇ ನಿಭಾಯಿಸ್ತೇನೆ. ಗಂಡನ ಮನೆಯವರಿಂದ ಯಾವುದೇ ರೀತಿಯ ಸಹಾಯ ದೊರೆತಿಲ್ಲ. ನನ್ನ ಪಾಡಿಗೆ ನಾನಿದ್ದೇನೆ. ಅವರ ಪಾಡಿಗೆ ಅವರಿದ್ದಾರೆ.ಬಡ ರೋಗಿಗಳಿಗೆ ಚಿಕಿತ್ಸೆ ಕೊಡಿಸುವುದು ಅಂದರೆ, ನಾವು ಖಂಡಿತ ಹಣಕಾಸಿನ ಸಹಾಯ ಮಾಡುವುದಿಲ್ಲ. ಆದರೆ ಎಲ್ಲಿಂದ ಹಣಕಾಸಿನ ನೆರವು ಪಡೆಯಬೇಕು? ಯಾವ ರೋಗಕ್ಕೆ ಯಾವ ರೀತಿಯ ಚಿಕಿತ್ಸೆ ಪಡೆಯಬೇಕು? ಯಾವ ಆಸ್ಪತ್ರೆಗೆ ಹೋಗಬೇಕು? ಏನೇನು ಮುನ್ನೆಚ್ಚರಿಕೆ ವಹಿಸಬೇಕು ಎಂಬಂಥ ಮಾಹಿತಿಗಳನ್ನು ಒದಗಿಸುತ್ತೇವೆ. ನಮ್ಮಲ್ಲಿ ಡಯಾಲಿಸಿಸ್ ಮಾಡಿಸಿಕೊಂಡ ಸಾವಿರಾರು ಮಂದಿ ತುಂಬ ಸಂತೋಷದಿಂದ, ನೆಮ್ಮದಿಯಿಂದ ಬದುಕ್ತಾ ಇದ್ದಾರೆ. ಡಯಾಲಿಸಿಸ್ ಚಿಕಿತ್ಸೆ ಯಶಸ್ವಿಯಾಗಿ ಒಂದು ಜೀವ ಉಳಿಯಿತು ಎಂದು ಸುದ್ದಿ ಬಂದಾಗಲೆಲ್ಲ-'ಬಹಳ ಒಳ್ಳೆಯ ಕೆಲಸ ಮಾಡಿದೆ. ನಂಗೆ ತುಂಬಾ ಖುಷಿಯಾಯ್ತು' ಎಂದು ನನ್ನ ಗಂಡ ಪಿಸುಗುಟ್ಟಿದ ಹಾಗಾಗುತ್ತೆ. ಅವು ನನ್ನ ಬದುಕಿನ ಹೆಮ್ಮೆಯ ಕ್ಷಣಗಳು.ಮೊದಲೇ ಹೇಳಿದಂತೆ ಈವರೆಗೂ 20 ಸಾವಿರಕ್ಕೂ ಹೆಚ್ಚು ಮಂದಿಗೆ ಡಯಾಲಿಸಿಸ್, 640 ಮಂದಿಗೆ ಕಿಡ್ನಿ ಕಸಿ ಚಿಕಿತ್ಸೆಗೆ ನೆರವಾದ ಹೆಮ್ಮೆ ನನ್ನದು. 'ನಿಮಗೆ ಹೇಗಾದ್ರೂ ಸಹಾಯ ಮಾಡಬೇಕು ಎಂದು ಹಲವರು ಹೇಳುತ್ತಾರೆ. ಅವರಿಗೆ ನನ್ನ ಸಂದೇಶವಿಷ್ಟೆ:  'ನಿಮ್ಮ ಊರಲ್ಲಿ ನೀವೇ ಒಂದು ಆರೋಗ್ಯ ಸಲಹಾ ಕೇಂದ್ರ ಆರಂಭಿಸಿ. ಬಡ ರೋಗಿಗಳ ಸೇವೆ ಮಾಡಿ. ಡಯಾಲಿಸಿಸ್ ಆಗಬೇಕಿರುವ ಬಡ ಕುಟುಂಬದ ರೋಗಿಗಳಿದ್ದರೆ ತಪ್ಪದೇ ನಮ್ಮಲ್ಲಿಗೆ ಕಳಿಸಿ...' ಈ ಸುದೀರ್ಘ ವಿವರಣೆಯೊಂದಿಗೆ ಮಾತು ಮುಗಿಸಿದ ಉಮಾ ಪ್ರೇಮನ್ ಅವರ ಸಂಸ್ಥೆಯ ವೆಬ್‌ಸೈಟ್ ವಿಳಾಸ ಇದು: www.santhimedicalinfo.org.

-ಎ.ಆರ್. ಮಣಿಕಾಂತ್armanikanth@gmail.com

















No comments:

Post a Comment