ಸಲ್ಮಾ ಹಚ್ಚಿದ ಹಣತೆ, ಸಾಲುದೀಪವಾಗಿ ಉರಿಯುತ್ತಿದೆ!
ಭಾವತೀರಯಾನ
ಸಂಪ್ರದಾಯಸ್ತ ಮುಸ್ಲಿಂ ಕುಟುಂಬಕ್ಕೆ ಸೇರಿದ, 9ನೇ ತರಗತಿಗೇ ಶಾಲೆಗೆ ಗುಡ್‌ಬೈ ಹೇಳಿದ ಬಾಲೆಯೊಬ್ಬಳು ಆನಂತರದಲ್ಲಿ ಏನಾಗಬಹುದು ಎಂಬ ಪ್ರಶ್ನೆಗೆ ಹೆಚ್ಚಿನವರ ಉತ್ತರ ಹೀಗಿರುತ್ತದೆ: 'ಆಕೆ ಮದುವೆಯಾಗಿ, ಮೂರ್ನಾಲ್ಕು ಮಕ್ಕಳ ತಾಯಿಯಾಗಬಹುದು. ಹೊಟ್ಟೆಪಾಡಿನ ಕಾರಣಕ್ಕೆ ಯಾವುದಾದರೂ ಕೆಲಸ ಮಾಡಬಹುದು. ಆನಂತರದಲ್ಲಿ, ನನ್ನ ಪಾಲಿಗೆ ಬಂದದ್ದು ಇಷ್ಟೇ ಅಂದುಕೊಂಡು, ಯಾವುದೋ ಒಂದು ಹಳ್ಳಿ ಅಥವಾ ನಗರದಲ್ಲಿ ಕಳೆದು ಹೋಗಬಹುದು...'
ಇಂಥ ಎಲ್ಲ ಅಂದಾಜುಗಳನ್ನೂ ಉಲ್ಟಾ ಮಾಡಿರುವ ದಿಟ್ಟೆಯೊಬ್ಬಳ ಹೋರಾಟದ ಬದುಕಿನ ವಿವರಗಳನ್ನು ನೀವೀಗ ಓದಲಿದ್ದೀರಿ. ಅಂದ ಹಾಗೆ, ಈಕೆಯ ಹೆಸರು-ರಾಸಾಥಿ ಅಲಿಯಾಸ್ ರೊಕ್ಕಯ್ಯ ಉರುಫ್ ಸಲ್ಮಾ. ಈಕೆಗೆ ಮೂರು ಹೆಸರುಗಳಿವೆಯಲ್ಲ; ಅದಕ್ಕೂ ಸ್ವಾರಸ್ಯಕರ ವಿವರಣೆಯಿದೆ. 9ನೇ ತರಗತಿಗೇ ಓದು ನಿಲ್ಲಿಸಿರುವ ಈಕೆ, ಈಗಲೂ ತಮಿಳಿನ ಬಹುಜನ ಪ್ರಿಯ ಕವಯಿತ್ರಿ! ಪದ್ಯಗಳ ಜೊತೆ ಜೊತೆಗೇ ಈಕೆ ಕಥೆ ಬರೆದಿದ್ದಾರೆ. ಕಾದಂಬರಿ ಬರೆದಿದ್ದಾರೆ. ಭಾರತದ ಪ್ರತಿನಿಧಿಯಾಗಿ ವಿದೇಶಗಳಿಗೆ ಹೋಗಿ ಬಂದಿದ್ದಾರೆ. ಈಕೆಯ ಹೋರಾಟದ ಬದುಕಿನ ಕಥೆ, ಸಿನಿಮಾ ಆಗಿದೆ. ಸಾಕ್ಷ್ಯ ಚಿತ್ರವಾಗಿ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ! ತಮಿಳು ನಾಡಿನಾದ್ಯಂತ ಜಾಗೃತಿಗೆ ಕಾರಣವಾಗಿರುವ 'ಸಲ್ಮಾ'ಳ ಯಶೋಗಾಥೆ ಆರಂಭವಾಗುವುದು ಹೀಗೆ: ಸಲ್ಮಾಳ ಮೂಲ ಹೆಸರು ರಾಸಾಥಿ. ತಿರುಚಿನಾಪಳ್ಳಿ ಜಿಲ್ಲೆಯ ತಿರುವಾಂಕುರಿಚ್ಚಿ, ಈಕೆಯ ಹುಟ್ಟೂರು. ಈಕೆ ಹುಟ್ಟಿದ್ದು 1968ರಲ್ಲಿ. ರಾಸಾಥಿ ಎಂದರೆ ತಮಿಳಿನಲ್ಲಿ, ರಾಜಕುಮಾರಿ ಎಂದರ್ಥ. ಮುದ್ದಿನ ಮಗಳು ಎಂಬ ಕಾರಣದಿಂದ ಈಕೆಗೆ ರಾಸಾಥಿ ಎಂದೇ ಹೆಸರಿಡಲಾಯಿತು. ಉಳಿದವರೆಲ್ಲ ರಾಸಾಥಿ ಎಂದು ಕರೆದರೆ ತಂದೆ ಮಾತ್ರ ರೊಕ್ಕಯ್ಯ ಅನ್ನುತ್ತಿದ್ದರಂತೆ! ಅವರು ಹೀಗೆ ಕರೆಯುವುದಕ್ಕೂ ಕಾರಣವಿತ್ತು. ಏನೆಂದರೆ, ರೊಕ್ಕಯ್ಯ ಎಂಬುದು ಅವರ ಮೊದಲ ಹೆಂಡತಿಯ ಹೆಸರಾಗಿತ್ತು! ಮದುವೆಯಾದ ಕೆಲವೇ ದಿನಗಳಲ್ಲಿ ಆಕೆ ತೀರಿಹೋಗಿದ್ದಳು. ಆಕೆಯ ಹೆಸರನ್ನೇ ಎರಡನೇ ಹೆಂಡತಿಯ ಮಗಳಾದ ರಾಸಾಥಿಗೆ ಇಡಲಾಗಿತ್ತು.
ಇದು 80ರ ದಶಕದ ಮಾತು. ಅವತ್ತಿನ ಸಂದರ್ಭದಲ್ಲಿ, ದೊಡ್ಡವರಾದ ನಂತರ ಮುಸ್ಲಿಂ ಹೆಣ್ಣು ಮಕ್ಕಳು ಓದುವುದನ್ನು ನಿಲ್ಲಿಸಬೇಕು. ಆನಂತರದಲ್ಲಿ ಮದುವೆಯಾಗಿ ಗಂಡನ ಮನೆಗೆ ಹೋಗಿ ಬಿಡಬೇಕು ಎಂಬ ನಂಬಿಕೆಯೊಂದು ಪ್ರಚಲಿತದಲ್ಲಿತ್ತು. ಪರಿಣಾಮ, ದೊಡ್ಡವಳಾಗುತ್ತಿದ್ದಂತೆಯೇ ರಾಸಾಥಿಯನ್ನು ಶಾಲೆ ಬಿಡಿಸಲಾಯಿತು. ಒಂಟಿಯಾಗಿ ಹೊರಗೆ ಹೋಗದಂತೆ ನಿರ್ಬಂಧ ಹೇರಲಾಯಿತು. ಆ ಚಿಕ್ಕ ವಯಸ್ಸಿಗೇ ಮದುವೆ ಮಾಡಲೂ ನಿರ್ಧರಿಸಲಾಯಿತು. ವಿಷಯ ಗೊತ್ತಾದಾಗ ರಾಸಾಥಿ ಪ್ರತಿಭಟಿಸಿದಳು. ಮದುವೆಗೆ ಒತ್ತಾಯಿಸಬೇಡಿ ಎಂದು ಹಠ ಹಿಡಿದಳು. ಉಪವಾಸ ಕೂತಳು. ಹೀಗೆಲ್ಲ ಒತ್ತಾಯ ಮಾಡಿದ್ರೆ ಸತ್ತು ಹೋಗ್ತೇನೆ ಎಂದು ಹೆದರಿಸಿದಳು. ಪರಿಣಾಮ, ಪೋಷಕರು ತೆಪ್ಪಗಾದರು. ಇಡೀ ದಿನ ಮನೆಯಲ್ಲೇ ಇರುವುದು ಬೋರ್ ಅನ್ನಿಸಿದಾಗ, ಹತ್ತಿರವೇ ಇದ್ದ ಗ್ರಂಥಾಲಯಕ್ಕೆ ನಡೆದು ಬಂದಳು ರಾಸಾಥಿ. ಆ ದಿನಗಳಲ್ಲಿ ರಷ್ಯನ್ ಸಾಹಿತ್ಯದ ಅನುವಾದಿತ ಕೃತಿಗಳು ಲೈಬ್ರರಿಗಳಲ್ಲಿ ಹೇರಳವಾಗಿದ್ದವು. ಕೆಲವೇ ತಿಂಗಳುಗಳಲ್ಲಿ ಟಾಲ್‌ಸ್ಟಾಯ್, ದಾಸ್ತೋವ್ ಸ್ಕಿ ಸೇರಿದಂತೆ ಎಲ್ಲ ರಷ್ಯನ್ ಲೇಖಕರು ಹಾಗೂ ಖಲೀಲ್ ಗಿಬ್ರಾನ್‌ನ ಸಮಗ್ರ ಸಾಹಿತ್ಯವನ್ನೂ ಓದಿ ಮುಗಿಸಿದಳು. ಓದುವ ಹಂಬಲ ಹೆಚ್ಚಿದಾಗ ಅಂಗಡಿಯಿಂದ ರೇಷನ್ ಕಟ್ಟಿಸಿಕೊಂಡು ಬಂದಾಗ ಸಿಗುತ್ತಿದ್ದ ಕವರ್‌ಗಳನ್ನೂ ಬಿಡಿಸಿ ಓದುತ್ತಿದ್ದಳು. ಹೀಗೆ, ಎಲ್ಲವನ್ನೂ ಓದಿಕೊಂಡಾಗಲೇ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳಲು ನಾನೂ ಬರೆಯಬಾರದೇಕೆ ಅನ್ನಿಸಿತು. ಈಕೆ ತಡ ಮಾಡಲಿಲ್ಲ: ಛಂದಸ್ಸು, ವ್ಯಾಕರಣದ ಬಗ್ಗೆ ತಲೆಕೆಡಿಸಿಕೊಳ್ಳದೆ, ತನಗೆ ತೋಚಿದಂತೆ ಬರೆದು ತಂದೆಯ ಮೂಲಕ ಒಂದು ಪತ್ರಿಕೆಗೆ ಕಳಿಸಿಯೇ ಬಿಟ್ಟಳು. ಸಂಪಾದಕರು ಕೆಲವೊಂದು ತಿದ್ದುಪಡಿಗಳೊಂದಿಗೆ ಅವುಗಳನ್ನು ಪ್ರಕಟಿಸಿದರು.
ಕಮ್ಯೂನಿಸ್ಟ್ ಸಾಹಿತ್ಯವನ್ನು ಹೆಚ್ಚಾಗಿ ಓದಿಕೊಂಡಿದ್ದರ ಪರಿಣಾಮ, ತನ್ನ ಹಕ್ಕುಗಳ ಬಗ್ಗೆ ಪ್ರಶ್ನಿಸುವುದು ರಾಸಾಥಿಗೆ ಅಭ್ಯಾಸವೇ ಆಗಿಹೋಯಿತು. ಸಂಪ್ರದಾಯ ಹಾಗೂ ಕಟ್ಟುಪಾಡುಗಳ ಹೆಸರಿನಲ್ಲಿ ಹೆಣ್ಣು ಮಕ್ಕಳ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳಲಾಗಿದೆ ಎಂದು ಈಕೆ ವಾದಿಸುತ್ತಿದ್ದಳು. ಪೋಷಕರೇನೋ ಈಕೆಯ ಬೆಂಬಲಕ್ಕಿದ್ದರು. ಆದರೆ, ಇಡೀ ಸಮಾಜ, ರಾಸಾಥಿಗೆ ಎದುರು ನಿಂತಿತ್ತು. ಪರಿಣಾಮವಾಗಿ, ಹಳ್ಳಿಯೊಂದರ ಮುಖಂಡ ಕಂ ಪಾರ್ಟ್‌ಟೈಂ ರಾಜಕಾರಣಿಯಾಗಿದ್ದ ಮಲ್ಲಿಕ್ ಎಂಬಾತನಿಗೆ ರಾಸಾಥಿ ಅಲಿಯಾಸ್ ರೊಕ್ಕಯ್ಯಳನ್ನು ಮದುವೆ ಮಾಡಲಾಯಿತು. ಈ ದಾಂಪತ್ಯಕ್ಕೆ ಎರಡು ಗಂಡು ಮಕ್ಕಳಾದವು.
ಸಂಪ್ರದಾಯದ ಸಂಕೋಲೆಗಳಿಂದ, ಕಟ್ಟುಪಾಡುಗಳಿಂದ ಗಂಡನ ಮನೆಯೂ ಮುಕ್ತವಾಗಿರಲಿಲ್ಲ. ಆಗ ಮತ್ತೆ ಪದ್ಯ ಬರೆಯಲು ಆರಂಭಿಸಿದಳು ರಾಸಾಥಿ. ಶೋಷಣೆಯನ್ನು ವಿರೋಧಿಸುವ, ಸಂಪ್ರದಾಯವನ್ನು ಧಿಕ್ಕರಿಸುವ, ಸ್ವಾತಂತ್ರ್ಯಕ್ಕಾಗಿ ಹಂಬಲಿಸುವ, ಮಾತುಗಳೇ ಆಕೆಯ ಪದ್ಯಗಳಿಲ್ಲಿದ್ದವು. ಇದನ್ನು ಓದಿದ ಕೆಲವರು ಅದೊಮ್ಮೆ ಮನೆಗೇ ನುಗ್ಗಿ ಗಲಾಟೆ ಮಾಡಿದರು. ಆಗ ಈಕೆಯ ಬರಹಗಳನ್ನೆಲ್ಲ ನೋಡಿದ ಗಂಡ ಸಿಟ್ಟಿನಿಂದ ಕಿಡಿಕಿಡಿಯಾದ. ಇಂಥದ್ದಕ್ಕೆಲ್ಲ ನಮ್ಮ ಮನೇಲಿ ಅವಕಾಶವಿಲ್ಲ. ಬರವಣಿಗೇನ ನಾಳೆಯಿಂದ ನಿಲ್ಲಿಸಬೇಕು ಎಂದು ಆದೇಶ ಹೊರಡಿಸಿದ. ಅವನ ಮಾತನ್ನು ಧಿಕ್ಕರಿಸಿ ಈಕೆ ಬರೆಯಲು ಕೂತಳು. ಆಗ ಏನಾಯಿತು ಗೊತ್ತೇ? ಆ ಮಹರಾಯ, ಈಕೆ ಬರೆದಿದ್ದನ್ನೆಲ್ಲ ಚೂರು ಚೂರಾಗಿ ಹರಿದು ಹಾಕಿದ. ನೋಟ್ಸ್ ಮಾಡಿಟ್ಟುಕೊಂಡ ಹಾಳೆಗಳನ್ನು ಗಾಳಿಗೆ ತೂರಿದ. ಕೆಲವೊಂದನ್ನು ಬೆಂಕಿಗೂ ಹಾಕಿದ. ಅಷ್ಟಕೇ ಸುಮ್ಮನಾಗದೆ, ನೀನು ಬರೆಯೋದನ್ನು ನಿಲ್ಲಿಸದೇ ಹೋದ್ರೆ ಸೀಮೆಎಣ್ಣೆ ಸುರಿದುಕೊಂಡು ನಾನೇ ಸತ್ತು ಹೋಗ್ತೇನೆ ಎಂದು ಬೆದರಿಸಿದ. ಮಲಗಿದ್ದಾಗ ನಿನ್ನ ಮುಖಕ್ಕೆ ಆಸಿಡ್ ಹಾಕಿಬಿಡ್ತೀನಿ ಎಂದೂ ಧಮಕಿ ಹಾಕಿದ. ಅದನ್ನು ನೆನಪಿಸಿಕೊಂಡು ಸಲ್ಮಾ ಹೇಳುತ್ತಾರೆ:'ಗಂಡ ಹೀಗೆಂದಾಗ ಭಯವಾಯಿತು. ಮರುದಿನದಿಂದ ಮಗನ ಮಗ್ಗುಲಲ್ಲೇ ಮಲಗಲು ಆರಂಭಿಸಿದೆ. ನನ್ನ ಮೇಲೆ ಎಷ್ಟೇ ಸಿಟ್ಟಿದ್ದರೂ ಮಗನಿಗೆ ಸಣ್ಣ ತೊಂದರೆಯಾಗುವುದನ್ನೂ ಗಂಡ ಸಹಿಸಲಾರ ಎಂದು ನನಗೆ ಗ್ಯಾರಂಟಿಯಿತ್ತು. ಮಗ ಜೊತೆಗಿದ್ದರೆ ನನ್ನ ಮೇಲೆ ಆಸಿಡ್ ಎರಚುವ ಪ್ರಯತ್ನಕ್ಕೆ ಆತ ಖಂಡಿತ ಮುಂದಾಗಲಾರ ಅನಿಸಿದ್ದರಿಂದಲೇ ಮಗನನ್ನು ತಬ್ಬಿಕೊಂಡೇ ಮಲಗುತ್ತಿದ್ದೆ...'
ಬರಹಕ್ಕೆ ಸಂಬಂಧಿಸಿದಂತೆ, ಗಂಡನ ನಿರ್ಬಂಧ ಹೆಚ್ಚಿದಂತೆಲ್ಲ, ಬರೆಯಲೇಬೇಕು ಎಂಬ ಹಠವೂ ರಾಸಾಥಿಗೆ ಬಂತು. ಬರೆಯಲು ಆಕೆ ನಡುರಾತ್ರಿಯನ್ನು ಆಯ್ದುಕೊಂಡಳು. ಗಂಡ ಗಡದ್ದಾಗಿ ನಿದ್ರಿಸುವ ಹೊತ್ತಲ್ಲಿ, ಅಡುಗೆ ಮನೆಯಲ್ಲಿ ಕೂತು ಬರೆದಳು. ಕಥೆಯ ವಸ್ತು ಅಥವಾ ಕವಿತೆಯ ಸಾಲು ಬೆಳಗಿನ ಹೊತ್ತು ಕೈ ಜಗ್ಗಿದರೆ, ತಕ್ಷಣವೇ ಟಾಯ್ಲೆಟ್‌ಗೆ ಹೋಗುವ ನೆಪ ಹೇಳಿ, ಟಾಯ್ಲೆಟ್‌ನಲ್ಲಿಯೇ ನಿಂತು ಬರೆದಳು. ಅಲ್ಲಿ ಯಾರಿಗೂ ಗೊತ್ತಾಗದಂತೆ ಪೆನ್ನು, ಪೆನ್ಸಿಲ್ ಹಾಗೂ ಹಾಳೆಯನ್ನು ಅಡಗಿಸಿಟ್ಟಿದ್ದಳು. ಹೀಗೆ ಬರೆದ ಪದ್ಯ/ಕಥೆಗಳನ್ನು ಸೀರೆಗಳ ಮಧ್ಯೆ ಅಡಗಿಸಿಟ್ಟಳು. ನಂತರ-'ಒಮ್ಮೆ ಬಂದು ಹೋಗಿ' ಎಂದು ಹೆತ್ತವರಿಗೆ ಪತ್ರ ಬರೆಯುತ್ತಿದ್ದಳು. ಪದ್ಯಗಳಿಗೆ ಸಲ್ಮಾ ಎಂಬ ಕಾವ್ಯನಾಮ ಹಾಕಿ, ತನ್ನ ಹೆಸರನ್ನು ಬಹಿರಂಗಪಡಿಸಬಾರದೆಂದು ಮನವಿ ಪತ್ರವನ್ನೂ ಸೇರಿಸಿ, ಅವನ್ನು ಪೋಷಕರ ಕೈಗಿಡುತ್ತಿದ್ದಳು. ಅವರು ಎಲ್ಲ ಪತ್ರಗಳನ್ನೂ ಪೋಸ್ಟ್ ಮಾಡಿ ಮೌನವಾಗುತ್ತಿದ್ದರು.
ಹೆಣ್ಣಿನ ಅಂತರಂಗದ ಭಾವನೆಗಳನ್ನೆಲ್ಲ ತೆರೆದಿಡುತ್ತಿದ್ದ, ಪುರುಷರ ದಬ್ಬಾಳಿಕೆಯನ್ನು ಕಟುವಾಗಿ ಟೀಕಿಸುತ್ತಿದ್ದ ಸಲ್ಮಾಳ ಪದ್ಯಗಳು, ಇಸವಿ 2000ದ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಭಾರೀ ವಾಗ್ವಾದಕ್ಕೆ ಕಾರಣವಾದವು. ಸಲ್ಮಾಳ ವಿರುದ್ಧ ಪ್ರತಿಭಟನೆಗಳು ನಡೆದವು. ಈಕೆಗೆ ಬಹಿಷ್ಕಾರ ಹಾಕಬೇಕೆಂಬ ಮಾತುಗಳೂ ಕೇಳಿ ಬಂದವು. ಆದರೆ, ಆಕೆ ಎಲ್ಲಿದ್ದಾಳೆಂದೇ ಯಾರಿಗೂ ಗೊತ್ತಿರದಿದ್ದರಿಂದ ಏನೂ ಮಾಡುವಂತಿರಲಿಲ್ಲ. ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳೆಲ್ಲ ಸಲ್ಮಾಳ ಪರವಾಗಿಯೂ, ಗಂಡಸರೆಲ್ಲ ವಿರುದ್ಧವಾಗಿಯೂ ಮಾತಾಡಲು ಆರಂಭಿಸಿದರು. ಎಲ್ಲ ಕಡೆಯಲ್ಲೂ ಅದೇ ಮಾತು; ಸಲ್ಮಾ, ಸಲ್ಮಾ, ಸಲ್ಮಾ!!! ರಾಸಾಥಿಯ ಮನೆಯಲ್ಲೂ ಅದೊಮ್ಮೆ ಈ ವಿಷಯ ಬಂಧುಗಳ ಮಧ್ಯೆ ಚರ್ಚೆಯಾಗಿ ಹೋಯಿತು. ಎಲ್ಲರದೂ ಒಂದೇ ಪ್ರಶ್ನೆ: ಯಾರವಳು? ಯಾರವಳು?
ಪರಿಸ್ಥಿತಿ ಹೀಗಿದ್ದಾಗಲೇ, ಆನಂದವಿಕಟನ್ ಪತ್ರಿಕೆಯ ವರದಿಗಾರನೊಬ್ಬ, ಬೇರೊಂದು ಪತ್ರಿಕೆಯ ಸಂಪಾದಕರೊಂದಿಗೆ ಹರಟೆಗೆ ಕೂತಿದ್ದ.ಅವರ ಮಾತಿನ ಮಧ್ಯೆಯೂ ಸಲ್ಮಾಳ ಪದ್ಯ, ಅವುಗಳ ಹಿಂದಿರುವ ತಲ್ಲಣದ ವಿಷಯ ಪ್ರಸ್ತಾಪವಾಯಿತು. ಸಂಪಾದಕರು ಬಾಯಿತಪ್ಪಿ, ಸಲ್ಮಾ ಎಂಬ ಕಾವ್ಯನಾಮದಲ್ಲಿ ಬರೆಯುವಾಕೆ ರಾಸಾಥಿ ಎಂದು ಹೇಳಿಬಿಟ್ಟರು. ಆ ವರದಿಗಾರ ತಡಮಾಡಲಿಲ್ಲ. ಕೆಲವೇ ದಿನಗಳಲ್ಲಿ ರಾಸಾಥಿಯನ್ನು ಭೇಟಿಯಾದ. ಸಂದರ್ಶನಕ್ಕಾಗಿ ಪ್ರಾರ್ಥಿಸಿದ. ನಂತರ, ರಾಸಾಥಿ ಅಲಿಯಾಸ್ ರೊಕ್ಕಯ್ಯ ಎಂಬ ಹೆಣ್ಣು ಮಗಳು ಸಲ್ಮಾ ಎಂದು ಹೆಸರು ಬದಲಿಸಿಕೊಂಡಿದ್ದು ಹಾಗೂ ಅದಕ್ಕೆ ಇದ್ದ ಕಾರಣಗಳನ್ನು ವಿವರಿಸಿ ಸವಿಸ್ತಾರ ಚಿತ್ರ-ಲೇಖನ ಪ್ರಕಟಿಸಿ ಬಿಟ್ಟ. ಅದಕ್ಕೆ ಓದುಗರಿಂದ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಯಿತು. 'ಸಲ್ಮಾ, ನೀನು ನಮ್ಮೆಲ್ಲರ ಧ್ವನಿ. ನಮ್ಮ ಮನಸ್ಸಿನ ಸಂಕಟಗಳೆಲ್ಲ ನಿನ್ನ ಪದ್ಯಗಳ ಮೂಲಕ ಹೊರಹೊಮ್ಮಿವೆ. ಬರೆಯುವುದನ್ನು ಮುಂದುವರಿಸು. ಸ್ತ್ರೀ ಜಾಗೃತಿಗೆ ಕಾರಣಳಾಗು' ಎಂಬ ಮಾತುಗಳ ಶುಭಾಶಯ ಪತ್ರಗಳು ಸಾವಿರದ ಸಂಖ್ಯೆಯಲ್ಲಿ ಬಂದವು. ನೋಡ ನೋಡುತ್ತಲೇ ಎಲ್ಲ ಮಹಿಳೆಯರ ಪಾಲಿನ ರೆಬೆಲ್ ಸ್ಟಾರ್ ಆಗಿ ಹೋದಳು ಸಲ್ಮಾ. ಇದೆಲ್ಲಾ ನಡೆದದ್ದು 2001ರಲ್ಲಿ.
ಕೆಲವೇ ದಿನಗಳಲ್ಲಿ ತಾಲೂಕು ಪಂಚಾಯ್ತಿ ಚುನಾವಣೆಗಳು ಬಂದವು. ಸಲ್ಮಾ ವಾಸವಿದ್ದ ಕ್ಷೇತ್ರ ಮಹಿಳೆಯರಿಗೆ ಮೀಸಲಾಗಿತ್ತು. ಅಲ್ಲಿಂದ ತಂಗಿ ಅಥವಾ ತಾಯಿಯನ್ನು ಕಣಕ್ಕಿಳಿಸಲು ಸಲ್ಮಾಳ ಗಂಡ ನಿರ್ಧರಿಸಿದ್ದ. ಅವರಿಬ್ಬರೂ ನಿರಾಕರಿಸಿದರು. ಈ ಸಂದರ್ಭದಲ್ಲಿ, ಹೆಂಡತಿಯನ್ನು ಕಣಕ್ಕಿಳಿಸದೆ ಅನ್ಯ ಮಾರ್ಗವೇ ಇರಲಿಲ್ಲ. ಆಗ, ಸಲ್ಮಾ ಚುನಾವಣೆಯಲ್ಲಿ ಗೆದ್ದದ್ದು ಮಾತ್ರವಲ್ಲ, ತಾಲೂಕು ಪಂಚಾಯ್ತಿ ಅಧ್ಯಕ್ಷೆಯಾಗಿಯೂ ಆಯ್ಕೆಯಾದರು. ಆನಂತರದಲ್ಲಿ ಈಕೆ ತೋರಿದ ಜನಪರ ಕಾಳಜಿ ಮತ್ತು ಕೆಲಸದಲ್ಲಿನ ಶ್ರದ್ಧೆ, ಅಂದಿನ ಮುಖ್ಯಮಂತ್ರಿ ಕರುಣಾನಿಧಿಯವರ ಗಮನಕ್ಕೂ ಬಂತು. ತಾ. ಪಂಚಾಯ್ತಿ ಅಧ್ಯಕ್ಷ ಪದವಿಯ ಅವಧಿ ಮುಗಿಯುತ್ತಿದ್ದಂತೆಯೇ, ಸಲ್ಮಾಳನ್ನು ಸಮಾಜ ಕಲ್ಯಾಣ ಇಲಾಖಯ ರಾಜ್ಯಾಧ್ಯಕ್ಷೆಯನ್ನಾಗಿ ಮಾಡಿ ಆದೇಶ ಹೊರಡಿಸಿದರು ಕರುಣಾನಿಧಿ.
ಈ ಹೊತ್ತಿಗೆ ಸಲ್ಮಾಳ ಹೋರಾಟದ ಬದುಕಿನ ಕಥೆ ಎಲ್ಲರನ್ನೂ ತಲುಪಿತ್ತು. ಇಂಗ್ಲೆಂಡಿನ ಹೆಸರಾಂತ ನಿರ್ದೇಶಕ ಕಿಂ ಲೊಂಗಿನಾಟ್ಟೋ 'ಸಲ್ಮಾ' ಎಂಬ ಹೆಸರಿನ ಸಾಕ್ಷ್ಯ ಚಿತ್ರ ತೆಗೆದ. ಅದು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿತು. ಸಲ್ಮಾಳ ಪದ್ಯಗಳು ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಗೊಂಡವು. ಈ ಹೊತ್ತಿಗೆ ಅರಳು ಹುರಿದಂತೆ ಇಂಗ್ಲಿಷ್ ಮಾತಾಡುವ, ಬರೆಯುವ ಸಾಮರ್ಥ್ಯ ಸಲ್ಮಾಗೆ ಸಿದ್ದಿಸಿತ್ತು. ಶ್ರೀಲಂಕಾ, ಷಿಕಾಗೋ, ಫ್ರಾಂಕ್‌ಫರ್ಟ್, ಅಲ್ಬೇನಿಯಾ ರಾಷ್ಟ್ರಗಳಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅಪೂರ್ವ ಅವಕಾಶವೂ ಒದಗಿ ಬಂತು. ಅಷ್ಟೇ ಅಲ್ಲ, ಸಲ್ಮಾಳ 'ಇರಂಡಂ ಜಾಮಂಗಳಿನ್ ಕಥೈ' ಎಂಬ ಹೆಸರಿನ ಕಥಾ ಸಂಕಲನ 2006ರಲ್ಲಿ ಬೂಕರ್ ಪ್ರಶಸ್ತಿಯ ಅಂತಿಮ ಸುತ್ತಿನವರೆಗೂ ಹೋಗಿತ್ತು!
ಈಗ ಏನಾಗಿದೆಯೆಂದರೆ, ಸಲ್ಮಾಳ ಶಕ್ತಿ ಏನೆಂಬುದು ಆಕೆಯ ಕುಟುಂಬದ ಎಲ್ಲರಿಗೂ ಗೊತ್ತಾಗಿದೆ. ಒಂದು ಕಾಲದಲ್ಲಿ ಆಕೆಯನ್ನು ನಾಲ್ಕು ಗೋಡೆಗಳ ಮಧ್ಯೆ ಕೂಡಿ ಹಾಕಿದ್ದವರೇ, ಈಗ ಸಲ್ಮಾ ಎಂದರೆ ಇಡೀ ಕುಟುಂಬದ ಹೆಮ್ಮೆ ಎಂದು ಉದ್ಗರಿಸುತ್ತಿದ್ದಾರೆ. ಯಾವುದೇ ಕೆಲಸ ಮಾಡಬೇಕಾದರರೂ ಆಕೆಯ ಅನುಮತಿ ಕೇಳುತ್ತಿದ್ದಾರೆ. ಸಲ್ಮಾಳ ಯಶೋಗಾಥೆಯಿಂದ ಸ್ಫೂರ್ತಿ ಪಡೆದ ಅದೆಷ್ಟೋ ಮುಸ್ಲಿಂ ಹೆಣ್ಣು ಮಕ್ಕಳು, ಚಿಕ್ಕ ವಯಸ್ಸಿಗೇ ಮದುವೆ ಮಾಡುವ ನಿರ್ಧಾರಕ್ಕೆ ಧಿಕ್ಕಾರ ಕೂಗಿದ್ದಾರೆ. ತಮ್ಮ ಹಕ್ಕುಗಳಿಗಾಗಿ ಒತ್ತಾಯಿಸಿದ್ದಾರೆ. 'ಸಲ್ಮಾ'ಳ ಹೆಸರಲ್ಲಿ ಆಕಸ್ಮಿಕವಾಗಿ ಹೊತ್ತಿಕೊಂಡ ಕ್ರಾಂತಿಯ ಕಿಡಿ ತಮಿಳುನಾಡಿನಾದ್ಯಂತ ಈಗಲೂ ಪ್ರಜ್ವಲಿಸುತ್ತಲೇ ಇದೆ.
ಖ್ಯಾತಿಯನ್ನು ಹೆಗಲಿಗೇರಿಸಿಕೊಂಡ ನಂತರ ಸಲ್ಮಾ ಮೈ ಮರೆತಿಲ್ಲ. Your Hope is Remaining ಎಂಬ ಎನ್‌ಜಿಒ ಆರಂಭಿಸಿರುವ ಆಕೆ, ಸಮಾಜ ಸೇವೆಯತ್ತ ಮುಖ ಮಾಡಿದ್ದಾರೆ. ಅನಾಥ ಮಕ್ಕಳು, ವೇಶ್ಯಾವಾಟಿಕೆಗಳಿಂದ ರಕ್ಷಿಸಲ್ಪಟ್ಟ ಬಾಲೆಯರಿಗೆ ಆಶ್ರಯ ನೀಡಿದ್ದಾರೆ. ಮಹಿಳೆಯರ ಹಲವು ಸಮಸ್ಯೆಗಳಿಗೆ ಪರಿಹಾರ ಸೂಚಿಸುವ 'ಸಹೋದರಿ' ಎಂಬ ಕೌನ್ಸಿಲಿಂಗ್ ಕೇಂದ್ರವನ್ನೂ ನಡೆಸುತ್ತಿದ್ದಾರೆ. ಈ ಮಮತಾಮಯಿಯನ್ನು ಕುರಿತು ರೀಡರ್ಸ್ ಡೈಜೆಸ್ಟ್ ಸೇರಿದಂತೆ ಹಲವು ಪತ್ರಿಕೆಗಳು ವಿಶೇಷ ವರದಿಗಳನ್ನು ಪ್ರಕಟಿಸಿವೆ.
ಹೋರಾಟದ ಬದುಕಿನ ಇವೆಲ್ಲಾ ವಿವರಗಳನ್ನು ಸಲ್ಮಾ ಅವರಿಂದಲೇ ತಿಳಿದ ನಂತರವೂ ಒಂದು ಪ್ರಶ್ನೆಗೆ ಉತ್ತರ ಸಿಕ್ಕಿರಲೇ ಇಲ್ಲ. ಕೊನೆಗೊಮ್ಮೆ ಕೇಳಿಬಿಟ್ಟೆ:'ಸಲ್ಮಾ ಎಂಬ ಹೆಸರಿನ ಮೇಲೆ ನಿಮಗೆ ಯಾಕೆ ಮೋಹ? ಕಾವ್ಯ ನಾಮವಾಗಿ ಅದನ್ನೇ ಇಟ್ಟುಕೊಂಡಿದ್ದಕ್ಕೆ ಕಾರಣವೇನು?' ಈ ಪ್ರಶ್ನೆಗೆ ರಾಸಾಥಿ ಅಲಿಯಾಸ್ ರೊಕ್ಕಯ್ಯ ಉತ್ತರಿಸಿದ್ದು ಹೀಗೆ: ಖಲೀಲ್ ಗಿಬ್ರಾನ್, ನನ್ನ ಪ್ರೀತಿಯ ಬರಹಗಾರ. ಆತನ ಬರಹಗಳಲ್ಲಿ 'ಸಲ್ಮಾ' ಎಂಬ ಹೆಸರು ತುಂಬಾ ಕಡೆ ಬರುತ್ತೆ. ಸಲ್ಮಾ ಎಂದಾಕ್ಷಣ, ಗಿಬ್ರಾನ್ ಕೂಡ ನೆನಪಾಗ್ತಾನೆ ಎಂಬ ಕಾರಣದಿಂದಲೇ ಆ ಹೆಸರನ್ನೇ ಕಾವ್ಯನಾಮ ಮಾಡಿಕೊಂಡೆ...'
ಒಂಭತ್ತನೇ ತರಗತಿಗೇ ಶಾಲೆ ಬಿಟ್ಟರೂ, ಒಂದು ಮೌನ ಕ್ರಾಂತಿಗೆ ಶ್ರೀಕಾರ ಹಾಕಿದ ಸಲ್ಮಾಗೆ ಅಭಿನಂದನೆ ಹೇಳಬೇಕು ಅನ್ನಿಸಿದರೆ: tamilpoetsalma@gmail.com
- ಎ.ಆರ್. ಮಣಿಕಾಂತ್
armanikanth@gmail.com
No comments:
Post a Comment