ಕೊಲ್ಲಲು ಬಂದವನಿಗೇ ಆತ ಕರುಣೆಯ ಪಾಠ ಹೇಳಿಕೊಟ್ಟ!
ಭಾವತೀರಯಾನ
ಕ್ರಿಮಿನಲ್ ಹಿನ್ನೆಲೆ ಹೊಂದಿದ ಆಸಾಮಿಯೊಬ್ಬ ನಮ್ಮ ಮೇಲೆ ವಿನಾಕಾರಣ ಗುಂಡು ಹಾರಿಸಿದ ಎಂದಿಟ್ಟುಕೊಳ್ಳಿ. ಆನಂತರದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಸುದೈವವಶಾತ್ ಬದುಕುಳಿದ ಮೇಲೆ ನಾವು ಏನು ಮಾಡ್ತೇವೆ ಹೇಳಿ? ಮೊದಲಿಗೆ, ನಮ್ಮ ಮೇಲೆ ಗುಂಡು ಹಾರಿಸಿದ ವ್ಯಕ್ತಿ ಈಗ ಯಾವ ಜೈಲಿನಲ್ಲಿದ್ದಾನೆ ಎಂದು ತಿಳಿದುಕೊಳ್ಳುತ್ತೇವೆ. ಅವನ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗುತ್ತೇವೆ. ವಿಚಾರಣೆಯ ನೆಪದಲ್ಲಿ, ಆತ ನ್ಯಾಯಾಲಯಕ್ಕೆ ಬಂದಾಗ, ಕೋರ್ಟ್‌ನ ಹೊರಗೆ ಅವನ ಮೇಲೆ ಅಟ್ಯಾಕ್ ಮಾಡಿಸಲು ಸಾಧ್ಯವಾ ಎಂದು ಯೋಚಿಸುತ್ತೇವೆ. ಆಕಸ್ಮಾತ್ ಮುಖಾಮುಖಿಯಾಗಿ ಬಿಟ್ಟರೆ, ಅವನ ಸುತ್ತ ಪೊಲೀಸರು ಇದ್ದರೂ ಲೆಕ್ಕಿಸದೆ ಮನಸ್ಸಿಗೆ ಬಂದಂತೆ ಬಾರಿಸುತ್ತೇವೆ. ಇಲ್ಲವಾದರೆ, ಒಮ್ಮೆ ತೊಡೆ ತಟ್ಟಿ, ತಾಕತ್ತಿದ್ರೆ ಈಗ ಬಾರೋ ಬೋ... ಮಗನೆ ಎಂದು ಅಬ್ಬರಿಸುತ್ತೇವೆ. ಅಪರಾಧಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದು ವಾದ ಮಂಡಿಸುತ್ತೇವೆ. ಒಂದು ವೇಳೆ ಆರೋಪಿಗೆ ಜಾಮೀನು ಸಿಕ್ಕರೆ ಅದನ್ನು ವಿರೋಧಿಸಿ ಮೇಲ್ಮನವಿ ಸಲ್ಲಿಸುತ್ತೇವೆ.
ಆದರೆ ನೀವೀಗ ಓದಲಿರುವ 'ಸ್ಟೋರಿ' ಮೇಲಿನ ಎಲ್ಲಾ ಮಾತುಗಳಿಗೂ ವಿರುದ್ಧವಾಗಿದೆ. ಟೋಟಲಿ ಡಿಫರೆಂಟ್ ಎನ್ನುವಂತಿದೆ. ಏಕೆಂದರೆ, ತನ್ನನ್ನು ಕೊಲ್ಲಲು ಪ್ರಯತ್ನಿಸಿ ಅದೇ ಕಾರಣಕ್ಕೆ ಮರಣ ದಂಡನೆಗೆ ಗುರಿಯಾದವನನ್ನು ಕಾಪಾಡಲು, ಅವನ ಜೀವ ಉಳಿಸಲು ಹೋರಾಡಿದ ರಿಯಾಸ್ ಭಯಾನ್ ಎಂಬ ಯುವಕ ಈಗ ಪಾಶ್ಚಾತ್ಯ ರಾಷ್ಟ್ರಗಳ ಮಂದಿಯ ಪಾಲಿಗೆ 'ಹೀರೋ' ಆಗಿದ್ದಾನೆ. 'ಕ್ಷಮೆಗಿಂತ ಮಿಗಿಲಾದುದು ಯಾವುದೂ ಇಲ್ಲ' ಎಂಬ ಅವನ ಮಾತು, ಅವನಿಗೆ ಜಗತ್ತಿನಾದ್ಯಂತ ಸಾವಿರಾರು ಅಭಿಮಾನಿಗಳನ್ನು ದೊರಕಿಸಿಕೊಟ್ಟಿದೆ. ಅಂದ ಹಾಗೆ, ಇಡೀ ಕಥೆಯನ್ನು ರಿಯಾಸ್ ಭಯಾನ್ ವಿವರಿಸುವುದು ಹೀಗೆ:
'ನಾನು ಬಾಂಗ್ಲಾ ದೇಶದವನು. ಅಲ್ಲಿನ ವೈಮಾನಿಕ ಇಲಾಖೆಯಲ್ಲಿ ಟ್ರೈನಿ ಪೈಲೆಟ್ ಆಗಿದ್ದೆ. ನನ್ನ ತಂದೆ, ಅರಬ್ ರಾಷ್ಟ್ರಗಳಲ್ಲಿ ಎಂಜಿನಿಯರ್ ಆಗಿದ್ದವರು. ಮನೆಯಲ್ಲಿ ಅಮ್ಮ, ಅಕ್ಕಂದಿರಿದ್ದರು. ಮನೆಯಲ್ಲಿ ನನ್ನ ಮದುವೆಯ ಮಾತುಕತೆ ನಡೆಯುತ್ತಿತ್ತು. ಹುಡುಗಿಯನ್ನು ನೋಡಿ ಒಪ್ಪಿದ್ದೂ ಆಯ್ತು. ಆಕೆಯೊಂದಿಗೆ ಐದಾರು ಬಾರಿ ಸಂಜೆಯ ವಿಹಾರ ಹೋಗಿ ಖುಷಿಪಟ್ಟಿದ್ದೂ ಆಯಿತು. ಆಗಲೇ, ಮನೆಮಂದಿಯ ಎದುರು ನನ್ನದೊಂದು ಆಸೆಯನ್ನು ತೆರೆದಿಟ್ಟೆ. ನ್ಯೂಯಾರ್ಕ್‌ನಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್‌ಗೆ ಸಂಬಂಧಿಸಿದ ಎರಡು ವರ್ಷದ ಕೋರ್ಸ್ ಮಾಡಬೇಕು ಎಂದೆ. ಇದೆಲ್ಲಾ ಇಸವಿ 2000ದಲ್ಲಿ ನಡೆದದ್ದು. ಆ ಸಂದರ್ಭದಲ್ಲಿ, ಲಾಟರಿಯ ಮೂಲಕ ಅಮೆರಿಕದ ಪೌರತ್ವ ಪಡೆವ ವಿಶೇಷ ಯೋಜನೆಯೊಂದು ಆರಂಭವಾಗಿತ್ತು. ಹೀಗೆ ಪೌರತ್ವದ ಹಕ್ಕು ದಕ್ಕಿಸಿಕೊಂಡ ಅದೃಷ್ಟವಂತರಲ್ಲಿ ನಾನೂ ಒಬ್ಬನಾಗಿದ್ದೆ. ಮನೆಯವರೆಲ್ಲ- 'ಆಲ್ ದಿ ಬೆಸ್ಟ್. ಹೋಗಿ ಬಾ' ಅಂದರು. ನನ್ನ ಭಾವೀ ಪತ್ನಿ - 'ಒಂದೆರಡು ವರ್ಷ ತಾನೆ? ನಾನು ಕಾಯ್ತೇನೆ. ಓದು ಮುಗಿಸಿ, ದೊಡ್ಡ ಹುದ್ದೆ ಹುಡುಕಿಕೊಳ್ಳಿ' ಎಂದಳು.
ಬಾಂಗ್ಲಾದೇಶದ ಬದುಕಿಗೂ, ನ್ಯೂಯಾರ್ಕ್‌ನ ಜೀವನ ಶೈಲಿಗೂ ಅಜಗಜಾಂತರವಿತ್ತು. ಮುಖ್ಯವಾಗಿ, ನ್ಯೂಯಾರ್ಕ್‌ನಲ್ಲಿ ನಿಶ್ಚಿತ ಆದಾಯದ ನೌಕರಿಯಿರಲಿಲ್ಲ. ಉಳಿಯಲು ಜಾಗವಿರಲಿಲ್ಲ. ಸ್ವಂತದ್ದೊಂದು ಕಾರ್ ಇಲ್ಲದೆ ಅಲ್ಲಿ ಬದುಕಲು ಸಾಧ್ಯವೇ ಇರಲಿಲ್ಲ. ಖರ್ಚುಗಳು ವಿಪರೀತ ಇದ್ದವು.
ಈ ಸಂದರ್ಭದಲ್ಲಿ, ಕಾಲೇಜಿಗೆ ಸೇರುವುದನ್ನು ಸ್ವಲ್ಪ ಕಾಲ ಮುಂದೂಡಿ ನಾಲ್ಕಾರು ಕಡೆಗಳಲ್ಲಿ ಕೆಲಸ ಮಾಡಿ ಹಣ ಸಂಪಾದಿಸಬೇಕು ಅನ್ನಿಸಿತು. ವಾರದ ನಂತರ ಒಂದು ಪಕ್ಕಾ ಪ್ಲಾನ್ ತಯಾರಿಸಿದೆ. ಅದರ ಪ್ರಕಾರ ಹೋಟೆಲಿನಲ್ಲಿ ಸಪ್ಲೈಯರ್, ಅಂಗಡಿಯಲ್ಲಿ ಬಿಲ್ ಕ್ಲರ್ಕ್, ಕಂಪ್ಯೂಟರ್ ಆಪರೇಟರ್, ಗಾರ್ಡನ್ ಒಂದರ ಕಾವಲುಗಾರ... ಹೀಗೆ ನಾಲ್ಕು ಕಡೆ ಕೆಲಸ ಮಾಡಲು ಆರಂಭಿಸಿದೆ. ಈ ಸಂದರ್ಭದಲ್ಲಿಯೇ ಅಮೆರಿಕದ ಇನ್ನೊಂದು ಪ್ರಮುಖ ನಗರವಾದ ಟೆಕ್ಸಾಸ್‌ನಲ್ಲಿದ್ದ ಗೆಳೆಯ ಫೋನ್ ಮಾಡಿ ಹೇಳಿದ: 'ನ್ಯೂಯಾರ್ಕ್‌ಗೆ ಹೋಲಿಸಿದರೆ ಟೆಕ್ಸಾಸ್‌ನಲ್ಲಿ ಖರ್ಚು ಕಡಿಮೆ. ನನ್ನದೇ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಕೊಡ್ತೇನೆ. ತಕ್ಷಣ ಹೊರಟು ಬಾ...' ಊರಲ್ಲಿದ್ದ ಕುಟುಂಬಗಳವರಿಗೆ, ಅಮೆರಿಕದಲ್ಲಿದ್ದ ಕೆಲವು ಹಿತೈಷಿಗಳಿಗೆ ವಿಷಯ ತಿಳಿಸಿದಾಗ ಅವರೆಲ್ಲ ತಕ್ಷಣವೇ ಹೇಳಿದರು: 'ಟೆಕ್ಸಾಸ್‌ನಲ್ಲಿ ಸುಲಿಗೆ, ದರೋಡೆಯಂಥ ಪ್ರಕರಣಗಳು ಜಾಸ್ತಿ. ಅಲ್ಲಿಗೆ ಹೋಗುವ ಮುಂಚೆ ಎರಡೆರಡು ಬಾರಿ ಯೋಚಿಸು...'
ಅವತ್ತಿನ ಸಂದರ್ಭದಲ್ಲಿ ಕಡಿಮೆ ಆದಾಯದ ನೌಕರಿಗಳಿಂದ ನ್ಯೂಯಾರ್ಕ್‌ನಲ್ಲಿ ಬದುಕುವುದು ಸಾಧ್ಯವೇ ಇರಲಿಲ್ಲ. ಆಗಿದ್ದಾಗಲಿ ಎಂದುಕೊಂಡು ಟೆಕ್ಸಾಸ್‌ಗೆ ಹೋಗಿಬಿಟ್ಟೆ. ಅಲ್ಲಿದ್ದ ಗೆಳೆಯ ಆದರದಿಂದ ಬರ ಮಾಡಿಕೊಂಡ. ಗ್ಯಾಸ್ ಸ್ಟೇಷನ್‌ನಲ್ಲಿ ಕ್ಲರ್ಕ್ ಕಂ ಕ್ಯಾಷಿಯರ್ ಹುದ್ದೆ ನೀಡಿದ. ಉಳಿದುಕೊಳ್ಳಲು ಜಾಗ ತೋರಿದ. ಅಮೆರಿಕದಲ್ಲಿ ಎಲ್ಲರ ಬಳಿಯೂ ಗನ್‌ಗಳಿರುತ್ತವೆ. ಅಕಸ್ಮಾತ್ ಯಾರಾದ್ರೂ ದರೋಡೆ ಮಾಡಲು ಬಂದರೆ ಸಂಗ್ರಹವಾದ ಹಣವನ್ನೆಲ್ಲ ಕೊಟ್ಟು ಜೀವ ಉಳಿಸಿಕೋ. ದರೋಡೆಕೋರರು ಯಾರೆಂದು ಸಿಸಿ ಟಿವಿಯಲ್ಲಿ ಹೇಗಿದ್ರೂ ದಾಖಲಾಗಿರುತ್ತೆ. ಹಾಗಾಗಿ ಯೋಚನೆಯಿಲ್ಲ ಎಂದಿದ್ದ. ಮುಂದಿನ ಕೆಲವೇ ದಿನಗಳಲ್ಲಿ ಟೆಕ್ಸಾಸ್ ನಗರದ ಜೀವನ ಶೈಲಿಗೆ ಹೊಂದಿಕೊಂಡೆ. ಮುಂದೆ ಇಲ್ಲಿಯೇ ಮನೆ ಮಾಡಿ, ಹೆಂಡತಿಯನ್ನು ಕರೆತರಬೇಕು ಎಂದೆಲ್ಲಾ ಕನಸು ಕಾಣುತ್ತಿದ್ದಾಗಲೇ ಪೆಂಟಗಾನ್ ಕೇಂದ್ರದ ಮೇಲೆ ಬಿನ್ ಲಾಡೆನ್ ಕಡೆಯವರಿಂದ ದಾಳಿ ನಡೆದುಹೋಯಿತು. ಆನಂತರದ ದಿನಗಳಲ್ಲಿ ಅಮೆರಿಕನ್ ಅಲ್ಲದವರ ಬದುಕು ದುರ್ಭರವಾಯಿತು. ಕೆಲವರ ಮೇಲೆ ಹಲ್ಲೆಗಳಾದವು. ಹತ್ಯಾ ಪ್ರಯತ್ನಗಳೂ ನಡೆದವು. ಪರಿಸ್ಥಿತಿ ಹೀಗಿದ್ದಾಗಲೇ, ನಮ್ಮ ರಕ್ಷಣೆಗೆ ಭದ್ರತಾ ಸಿಬ್ಬಂದಿಯನ್ನು ನೇಮಿಸು ಎಂದು ಗೆಳೆಯನನ್ನು ಪ್ರಾರ್ಥಿಸಿದೆ. ಆತ ನಿಷ್ಠುರವಾಗಿ 'ಅದೆಲ್ಲಾ ಸಾಧ್ಯವಿಲ್ಲ' ಎಂದುಬಿಟ್ಟ.
ಅದು 2001ರ ಸಪ್ಟೆಂಬರ್ 21, ಶುಕ್ರವಾರ. ಮಧ್ಯಾಹ್ನ 12 ಗಂಟೆಗೆ ವ್ಯಕ್ತಿಯೊಬ್ಬ ಅಸಹನೆಯಿಂದ ನನ್ನೆದುರು ಪಿಸ್ತೂಲು ಹಿಡಿದು ನಿಂತ. ಬಹುಶಃ ಆತ ದರೋಡೆಕೋರ ಇರಬಹುದೆಂದು ಭಾವಿಸಿದೆ. ಸಂಗ್ರಹವಾಗಿದ್ದ ಹಣವನ್ನೆಲ್ಲ ಅವನಿಗೆ ತೋರಿಸಿ, 'ಇದನ್ನೆಲ್ಲಾ ತಗೊಂಡು ಹೋಗಿ. ಪ್ಲೀಸ್, ನನಗೇನೂ ಮಾಡಬೇಡಿ' ಎಂದೆ. ಆತ ನನ್ನನ್ನೇ ದುರುದುರು ನೋಡುತ್ತಾ-'ಯಾವ ದೇಶ ನಿನ್ನದು?' ಎಂದ. ನಾನು ಉತ್ತರಿಸುವ ಮೊದಲೇ ಗುಂಡು ಹಾರಿಸಿ ಬಿಟ್ಟ!
ಅಷ್ಟೆ: ಮರುಕ್ಷಣವೇ ಸಾವಿರ ಹೆಜ್ಜೇನುಗಳು ಏಕಕಾಲಕ್ಕೆ ಕಚ್ಚಿದ ಅನುಭವವಾಯಿತು. ಭರ್ಜಿಯಂಥ ಚೂಪಾದ ವಸ್ತುವೊಂದು ಹಣೆಯನ್ನು ಛೇದಿಸಿ ತಲೆಯೊಳಗೆ ತೂರಿದಂತಾಯಿತು. ಮರುಕ್ಷಣವೇ ಹಣೆಯಿಂದ ರಕ್ತ ಛಿಲ್ಲನೆ ಹರಿಯಿತು. ಹಣೆಯನ್ನು ಒತ್ತಿ ಹಿಡಿದು ಹೆಲ್ಪ್ ಹೆಲ್ಪ್ ಎಂದು ಚೀರುತ್ತಾ ಎದುರಿಗಿದ್ದ ಬಾರ್ಬರ್‌ಶಾಪ್‌ಗೆ ನುಗ್ಗಿ ಬಿಟ್ಟೆ. ಗುಂಡೇಟು ಬಿದ್ದ ರಭಸಕ್ಕೆ ಮಿದುಳಿನ ಭಾಗವೇ ಬೇರ್ಪಟ್ಟು ಬಿದ್ದು ಹೋಗಬಹುದೇನೋ ಎನಿಸಿತ್ತು. ಆನಂತರದಲ್ಲಿ ಏನಾಯ್ತೋ ನನಗೆ ಗೊತ್ತಾಗಲಿಲ್ಲ.
ಮತ್ತೆ ಎಚ್ಚರವಾದಾಗ ನಾನು ಆಸ್ಪತ್ರೆಯಲ್ಲಿದ್ದೆ. 'ನಿಮಗೆ ಗುಂಡು ಹಾರಿಸಿದವನ ಹೆಸರು ಮಾರ್ಕ್ ಸ್ಟ್ರೋಮನ್. ಪೆಂಟಗಾನ್ ದುರಂತದಲ್ಲಿ ಆತನ ತಂಗಿ ಸತ್ತು ಹೋದಳಂತೆ. ಅವಳ ಸಾವಿಗೆ ಪ್ರತೀಕಾರವಾಗಿ ಅರಬ್ ರಾಷ್ಟ್ರದವರನ್ನು ಕೊಲ್ಲಬೇಕು ಎಂದು ಎದ್ದು ಬಂದನಂತೆ. ಈವರೆಗೆ ಒಬ್ಬ ಭಾರತೀಯ, ಒಬ್ಬ ಪಾಕಿಸ್ತಾನಿಯನ್ನು ಕೊಂದಿದ್ದಾನೆ. ಅವನ ಗುಂಡೇಟಿಗೆ ಸಿಕ್ಕ ಮೂರನೆಯವನೇ ನೀನು...' ಎಂದು ವೈದ್ಯರು ವಿವರಣೆ ನೀಡಿದರು. ಘಟನೆ ದಿನವೇ ಸ್ಟ್ರೋಮನ್‌ನನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ ಎಂದೂ ತಿಳಿಸಿದರು.
ಮುಂದಿನದೆಲ್ಲ, ನಾನು ಎಂದೆಂದೂ ಊಹಿಸದಿದ್ದ, ಎಂದೆಂದೂ ಮರೆಯಲಾಗದ ಭಯಾನಕ ಕ್ಷಣಗಳ ಬದುಕು. ಗುಂಡೇಟಿನ ತೀವ್ರತೆಗೆ ನನ್ನ ತಲೆಯ ಒಂದು ಭಾಗವೇ ಹರಿದು ಹೋಗಿತ್ತು. ಕೆನ್ನೆಯ ಭಾಗದಲ್ಲಿ ಹತ್ತಕ್ಕೂ ಹೆಚ್ಚು ಕುಳಿಗಳು ಸೃಷ್ಟಿಯಾದವು. ಬಲಗಣ್ಣಿನ ದೃಷ್ಟಿ ಸಂಪೂರ್ಣವಾಗಿ ಹೋಗಿಬಿಟ್ಟಿತು. ತೋಳು, ತೊಡೆಯ ಭಾಗದಿಂದೆಲ್ಲಾ ಚರ್ಮವನ್ನು ಕತ್ತರಿಸಿ ತೆಗೆದು ತಲೆಯ ಭಾಗಕ್ಕೆ ತೇಪೆ ಹಾಕಲು ಬಳಸಲಾಯಿತು. ಎರಡು ತಿಂಗಳಿಗೆ ಒಂದರಂತೆ ಆಪರೇಷನ್‌ಗಳಾದವು. ನನಗೆ ಆಗಿರುವ ಗಾಯ, ಅದರ ತೀವ್ರತೆ ಹಾಗೂ ವಿರೂಪಗೊಂಡ ನನ್ನ ಸೌಂದರ್ಯದ ಬಗ್ಗೆ ತಿಳಿಯುತ್ತಿದ್ದಂತೆಯೇ ಕೈ ಹಿಡಿಯಬೇಕಿದ್ದ ಹುಡುಗಿ ಮಾತು ಬದಲಿಸಿ ಹೋಗಿ ಬಿಟ್ಟಿದ್ದಳು. ತಿಂಗಳುಗಳ ಕಾಲ ಆಸ್ಪತ್ರೆಯಲ್ಲೇ ಉಳಿದಿದ್ದರಿಂದ ಓದಲಿಕ್ಕೆಂದು ಕೂಡಿಟ್ಟಿದ್ದ ಹಣವೆಲ್ಲಾ ಖರ್ಚಾಗಿ ಹೋಯಿತು. ಇಂಥ ಸಂದರ್ಭದಲ್ಲಿ ನನ್ನ ಯೋಗಕ್ಷೇವುದ ಜವಾಬ್ದಾರಿ ಹೊತ್ತರೆ ವಿಪರೀತ ಖರ್ಚು ಬರುತ್ತದೆ ಎನ್ನಿಸಿದ ತಕ್ಷಣ, ನೌಕರಿ ನೀಡಿದ್ದ ಗೆಳೆಯನೂ ಮೆಲ್ಲನೆ ಕಳಚಿಕೊಂಡ!
ಆರು ತಿಂಗಳ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಯಿತು. ಈ ಸಂದರ್ಭದಲ್ಲಿ ಟೆಕ್ಸಾಸ್‌ನಲ್ಲಿದ್ದ ಮಾನವ ಹಕ್ಕುಗಳ ಆಯೋಗದ ಸದಸ್ಯರು ನನ್ನ ಪರವಾಗಿ ವಾದ ಮಂಡಿಸಿ, ಸರ್ಕಾರದಿಂದ ಪರಿಹಾರ ಧನ ಕೊಡಿಸಿದರು. ಈ ಹಣದಿಂದ ಪುಟ್ಟದೊಂದು ಮನೆಯನ್ನು ಬಾಡಿಗೆಗೆ ಹಿಡಿದೆ. ಓಡಾಡಲು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದೆ. ಬಾರ್ ಒಂದರಲ್ಲಿ ವೈಯ್ಟರ್ ಆಗಿ ನೌಕರಿಗೆ ಸೇರಿದೆ. ಸ್ಟ್ರೋಮನ್‌ನಿಂದ ಹತರಾದ ಭಾರತ ಹಾಗೂ ಪಾಕಿಸ್ತಾನಿ ಪ್ರಜೆಯ ಕುಟುಂಬದ ಸದಸ್ಯರು ಗೋಳಾಡುತ್ತಿರುವ ಚಿತ್ರಗಳು ಅಮೆರಿಕದ ಪತ್ರಿಕೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಪ್ರಕಟವಾಗುತ್ತಿದ್ದವು. ಅವುಗಳನ್ನು ನೋಡಿದಾಗೆಲ್ಲ ಸಂಕಟವಾಗುತ್ತಿತ್ತು. ಈ ಸಂದರ್ಭದಲ್ಲಿಯೇ ಸ್ಟ್ರೋಮನ್‌ಗೆ ಮರಣದಂಡನೆ ವಿಧಿಸಿರುವ ಸುದ್ದಿಯೂ ಪ್ರಕಟವಾಯಿತು. ಆತನಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ ಎಂಬ ವಿವರಣೆ ಕೂಡ ಅದೇ ಸುದ್ದಿಯಲ್ಲಿತ್ತು.
ಒಂದೇ ಒಂದು ಗುಂಡು ಹಾರಿಸಿ ನನ್ನ ಬದುಕಿನ ಚಿತ್ರವನ್ನೇ ಸ್ಟ್ರೋಮನ್ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದ್ದ. ಆದರೂ ಯಾಕೋ ಕಾಣೆ: ಮಾರ್ಕ್ ಸ್ಟ್ರೋಮನ್‌ನ ಮೇಲೆ ನನಗೆ ದ್ವೇಷ ಹುಟ್ಟಲೇ ಇಲ್ಲ. ಹುಚ್ಚು ಆವೇಶದಲ್ಲಿ, ತಂಗಿಯನ್ನು ಕಳೆದುಕೊಂಡ ಸಂಕಟದಲ್ಲಿ ಆತ ತಪ್ಪು ಮಾಡಿದನೇನೋ ಅನ್ನಿಸಿತು. ಒಂದು ವೇಳೆ ಅವನಿಗೆ ಮರಣದಂಡನೆ ವಿಧಿಸಿದರೆ, ಒಂದು ಜೀವ ತೆಗೆದಂತಾಗುತ್ತದೆಯೇ ವಿನಃ ಅದಕ್ಕಿಂತ ಹೆಚ್ಚಿನ ಸಾಧನೆಯಾಗುವುದಿಲ್ಲ ಅನ್ನಿಸಿತು. ಅದಕ್ಕಿಂತ ಮುಖ್ಯವಾಗಿ, ಸ್ಟ್ರೋಮನ್ ಸತ್ತು ಹೋದರೆ, ಅವನ ಕುಟುಂಬದವರು- ಮುಖ್ಯವಾಗಿ ಅವನ ಹೆಂಡತಿ -ಮಕ್ಕಳು ಗೋಳಾಡುವ, ತಬ್ಬಲಿಗಳಾಗುವ ದೃಶ್ಯ ಕಣ್ಮುಂದೆ ಬಂತು. ಈ ತೊಳಲಾಟದಲ್ಲಿಯೇ ತಂದೆಗೆ ಫೋನ್ ಮಾಡಿ ಎಲ್ಲವನ್ನೂ ವಿವರಿಸಿದೆ. ಅವರು-'ಕ್ಷಮೆಗಿಂತ ದೊಡ್ಡದು ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಸ್ಟ್ರೋಮನ್‌ನನ್ನು ಕ್ಷಮಿಸಿ ಬಿಡು. ಅವನಿಗೆ ಒಳಿತಾಗುವಂತೆ ಪ್ರಾರ್ಥಿಸು' ಎಂದರು.
ಮರುದಿನವೇ -'ಸ್ಟ್ರೋಮನ್‌ನ ಅಪರಾಧವನ್ನು ನಾನು ಕ್ಷಮಿಸಿದ್ದೇನೆ. ದಯವಿಟ್ಟು ಆತನಿಗೆ ಮರಣದಂಡನೆ ವಿಧಿಸಬೇಡಿ. ಆತನಿಗೆ ಕ್ಷಮೆ ನೀಡಿ' ಎಂದು ಟೆಕ್ಸಾಸ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡೆ. ಈ ವೇಳೆಗೆ ದುರ್ಘಟನೆ ನಡೆದು ಎಂಟು ವರ್ಷಗಳೇ ಕಳೆದು ಹೋಗಿದ್ದವು. ನನ್ನ ಮನವಿಯನ್ನು ಒಪ್ಪದ ನ್ಯಾಯಾಲಯ, ಅಪರಾಧಿಗೆ ಶಿಕ್ಷೆ ಆಗಲೇ ಬೇಕು ಎಂದಿತು. 2011ರ ಜುಲೈ 20ರಂದು ಸ್ಟ್ರೋಮನ್‌ಗೆ ಮರಣದಂಡನೆ ವಿಧಿಸಬೇಕೆಂದು ಆದೇಶವನ್ನೂ ಹೊರಡಿಸಿತು. ಆದರೂ, ನನ್ನ ಪಾಲಿಗೆ ಒಂದು ಅಸ್ಪಷ್ಟ ಚಿತ್ರವಾಗಿದ್ದ ಸ್ಟ್ರೋಮನ್, ನನ್ನ ಮನಸ್ಸನ್ನು ಪದೇ ಪದೆ ತಟ್ಟುತ್ತಲೇ ಇದ್ದ. ಆತನನ್ನು ಹೇಗಾದರೂ ಬದುಕಿಸಿಕೊಳ್ಳಬೇಕೆಂದು ನಾನು ಪತ್ರಿಕೆಗಳಿಗೆ ಲೇಖನ ಬರೆದೆ. ಟಿ.ವಿ.ಗಳಿಗೆ ಸಂದರ್ಶನ ನೀಡಿದೆ. ದುಡುಕಿ ಮಾಡಿರುವ ತಪ್ಪಿಗೆ ಕ್ಷಮೆಯಿರಲಿ ಎಂದು ವಿನಂತಿಸಿದೆ. ಸ್ಟ್ರೋಮನ್‌ನನ್ನು ಉಳಿಸಿಕೊಳ್ಳುವ ಸಲುವಾಗಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ. ಟೆಕ್ಸಾಸ್‌ನ 12000ಕ್ಕೂ ಹೆಚ್ಚು ಮಂದಿ ನನ್ನನ್ನು ಬೆಂಬಲಿಸಿದರು. ಆದರೆ ಟೆಕ್ಸಾಸ್‌ನ ನ್ಯಾಯಾಲಯ, ತನ್ನ ನಿಲುವನ್ನು ಬದಲಿಸಲಿಲ್ಲ.
ನನ್ನ ಪ್ರತಿಯೊಂದು ಕೆಲಸವನ್ನೂ ಇಸ್ರೇಲಿ ಚಿತ್ರ ನಿರ್ದೇಶಕ ಇಯಾನ್ ಝಿವ್ ಎಂಬಾತ ಗಮನಿಸುತ್ತಿದ್ದರು. ಜೊತೆಗೇ, ಸ್ಟ್ರೋಮನ್ ಇದ್ದ ಜೈಲಿನ ಅಧಿಕಾರಿಗಳೊಂದಿಗೂ ಅವರು ಸಂಪರ್ಕ ಇಟ್ಟುಕೊಂಡಿದ್ದರು. ಮರಣದಂಡನೆ ವಿಧಿಸಲು ಎರಡು ದಿನ ಬಾಕಿಯಿದ್ದಾಗ, ಸ್ಟ್ರೋಮನ್‌ನೊಂದಿಗೆ ಫೋನ್‌ನಲ್ಲಿ ಮಾತಾಡಲು ಅವಕಾಶ ಮಾಡಿಕೊಟ್ಟರು. ನಾನು 'ಹಲೋ' ಎಂದೆ. ಅಷ್ಟೆ: ಆ ತುದಿಯಲ್ಲಿದ್ದ ಸ್ಟ್ರೋಮನ್ ಬಿಕ್ಕಿ ಬಿಕ್ಕಿ ಅಳತೊಡಗಿದ. ನಂತರ ಸಾವರಿಸಿಕೊಂಡು, ನನ್ನ ಜೀವ ಉಳಿಸಲು ನೀನು ಮಾಡುತ್ತಿರುವ ಎಲ್ಲ ಪ್ರಯತ್ನಗಳ ವಿಷಯವೂ ನನ್ನನ್ನು ತಲುಪಿದೆ. ನಿನಗೆ ಧನ್ಯವಾದಗಳು ಸೋದರಾ...' ಎಂದ. 'ನಿನ್ನ ವಿಷಯವಾಗಿ ನನಗೆ ಸಾಸಿವೆಯಷ್ಟೂ ದ್ವೇಷವಿಲ್ಲ. ಲವ್ ಯೂ ಬ್ರದರ್' ಎಂದೆ. ಮತ್ತೊಂದು ಮಾತಾಡುವ ಮೊದಲೇ ಅತ್ತಲಿನ ಸಂಪರ್ಕ ಕಟ್ ಆಯಿತು. ಎರಡು ದಿನಗಳ ನಂತರ, ವಿಷದ ಚುಚ್ಚು ಮದ್ದು ನೀಡಿ ಸ್ಟ್ರೋಮನ್‌ನನ್ನು ಸಾಯಿಸಿದ ಸುದ್ದಿ ಬಂತು. ಅವನನ್ನು ಉಳಿಸಿಕೊಳ್ಳಬೇಕೆಂಬ ನನ್ನ ಆಸೆ ಕೊನೆಗೂ ಈಡೇರಲೇ ಇಲ್ಲ...'
***
ರಿಯಾಸ್ ಭಯಾನ್ ಹೇಳುವ ಕಥೆ ಇಲ್ಲಿಗೆ ಮುಗಿಯುತ್ತದೆ. ಆಮೇಲೆ ಏನಾಗಿದೆ ಎಂದರೆ, ಸ್ಟ್ರೋಮನ್‌ನಿಂದ ಹತರಾದ ಕುಟುಂಬ ಹಾಗೂ ಸ್ಟ್ರೋಮನ್‌ನ ಕುಟುಂಬಕ್ಕೆ ಪರಿಹಾರ ನಿಧಿ ಸಂಗ್ರಹಿಸಲೂ ಈ ಹುಡುಗ ರಿಯಾಸ್ ಭುಯಾನ್ ಮುಂದಾಗಿ, ತನ್ನ ಪ್ರಯತ್ನದಲ್ಲಿ ದೊಡ್ಡ ಯಶಸ್ಸು ಕಂಡಿದ್ದಾನೆ. ಜಗತ್ತಿನಲ್ಲಿ ನಾವೇ ಶ್ರೇಷ್ಠರು ಎಂದು ಬೀಗುವ ಅಮೆರಿಕದ ಜನ ಈ ಹುಡುಗನ ಹೃದಯವಂತಿಕೆಯ ಮುಂದೆ ಕುಬ್ಜರಾಗಿ ಮಾತಿಲ್ಲದೆ ನಿಂತಿದ್ದಾರೆ. ಕ್ರೌರ್ಯವನ್ನು ಕರುಣೆಯಿಂದಲೇ ಗೆಲ್ಲಲು ಹೊರಟ ರಿಯಾಸ್‌ನ ಕಥೆಯನ್ನು ರೀಡರ್ಸ್ ಡೈಜೆಸ್ಟ್ ಸೇರಿದಂತೆ ಜಗತ್ತಿನ ಎಲ್ಲ ಪತ್ರಿಕೆಗಳೂ ಪ್ರಕಟಿಸಿವೆ. ಇಂಥ ಪ್ರಯತ್ನಗಳು ಸಾವಿರವಾಗಲಿ ಎಂದು ಹಾರೈಸಿವೆ.
ಕೈಗೆ ಕೈ, ತಲೆಗೆ ತಲೆ, ಹಿಂಸೆಗೆ ಪ್ರತಿ ಹಿಂಸೆ ಎನ್ನುತ್ತಿರುವ ಈ ದಿನಗಳಲ್ಲಿ, ಕೊಲ್ಲಲು ಬಂದವನಿಗೇ ಕರುಣೆಯ ಪಾಠ ಹೇಳಿಕೊಟ್ಟ ರಿಯಾಸ್‌ನ ಕಥೆ ಟೋಟಲಿ ಡಿಫರೆಂಟ್. ಹೌದಲ್ಲವೆ?
-ಎ.ಆರ್. ಮಣಿಕಾಂತ್
armanikanth@gmail.com
No comments:
Post a Comment