Tuesday, 3 December 2013

ಸ್ವಗತಕ್ಕೆ ಹಾಡಿದ ಹಾಡು ಸಿರಿಸಂಪತ್ತಿಗೆ ಸ್ವಾಗತ ಹಾಡಿತು!

ಸ್ವಗತಕ್ಕೆ ಹಾಡಿದ ಹಾಡು ಸಿರಿಸಂಪತ್ತಿಗೆ ಸ್ವಾಗತ ಹಾಡಿತು!

ಭಾವತೀರಯಾನ- ಎ.ಆರ್.ಮಣಿಕಾಂತ್


'ಅವಳು ಬಡವರ ಮನೆಯ ಹುಡುಗಿ. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡವಳು. ಬಹಳ ಒಳ್ಳೆಯವಳು. ಅಪಾರ ದೈವಭಕ್ತೆ. ಈ ಹುಡುಗಿಗೆ, ರಾಜಕುಮಾರಿ ಆಗಬೇಕೆಂಬ ಆಸೆಯಿತ್ತಂತೆ. ಅದೊಮ್ಮೆ ಗೆಳೆಯರೊಂದಿಗೆ ವಿಹಾರ ಹೊರಟಾಗ ಆಕೆ ದಾರಿ ತಪ್ಪಿದಳಂತೆ. ಮನೆ ತಲುಪುವ ದಾರಿ ಗೊತ್ತಾಗದೆ ಕಂಗಾಲಾಗಿದ್ದಾಗಲೇ ಆಕೆಗೆ ಒಂದು ಜೊತೆ ಪಾದರಕ್ಷೆಗಳು ಕಾಣಿಸಿದವಂತೆ. ಕುತೂಹಲದಿಂದ ಅವುಗಳನ್ನು ಧರಿಸಿದಾಕ್ಷಣವೇ ಈ ಬಡವರ ಮನೆಯ ಹುಡುಗಿ ರಾಜಕುಮಾರಿಯಾಗಿ ಬದಲಾದಳಂತೆ. ಕೆಲವೇ ಕ್ಷಣಗಳ ನಂತರ ಅದೇ ದಾರಿಯಲ್ಲಿ ಕುದುರೆಯೇರಿ ಬಂದ ರಾಜಕುಮಾರ, ಈಕೆಯನ್ನು ಕರೆದೊಯ್ದನಂತೆ ...' ಇಂಥ ವಿವರಣೆಯ ಚಂದಮಾಮ ಕಥೆಗಳಿಗೆ ನಮ್ಮಲ್ಲಿ ಬರವಿಲ್ಲ. ಸ್ವಾರಸ್ಯವೆಂದರೆ, ಈ ಕಥೆಯಲ್ಲಿರುವ ಪವಾಡದಂಥ ಪ್ರಸಂಗಗಳು ಕೆಲವೊಮ್ಮೆ ನಿಜ ಜೀವನದಲ್ಲೂ ನಡೆದು ಹೋಗುವುದುಂಟು. ಅಂಥದೊಂದು ಪ್ರಸಂಗದ ಆಪ್ತ ವಿವರಣೆಯನ್ನು ನೀವೀಗ ಓದಲಿದ್ದೀರಿ.ಅಂದ ಹಾಗೆ, ನಮ್ಮ ಕಥಾನಾಯಕಿಯ ಹೆಸರು ಚಂದ್ರಲೇಖಾ. ಕೇರಳ ಮೂಲದ ಈಕೆ, ಮಗುವನ್ನು ಮಲಗಿಸುವ ನೆಪದಲ್ಲಿ ಬಾಯಿಪಾಠವಾಗಿ ಹೋಗಿದ್ದ ಚಿತ್ರಗೀತೆಯೊಂದನ್ನು ಹಾಡಿದ್ದಾಳೆ. ಅದೇ ವೇಳೆಗೆ ಮನೆಗೆ ಬಂದ ಚಂದ್ರಲೇಖಾಳ ಬಂಧು, ಆ ಸನ್ನಿವೇಶವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡು, ಅದನ್ನು ಯು-ಟ್ಯೂಬ್ಗೆ ಅಪ್ಲೋಡ್ ಮಾಡಿದ್ದಾನೆ. ಆನಂತರದಲ್ಲಿ ಪವಾಡ ನಡೆದು ಹೋಗಿದೆ. ಒಂದೇ ವಾರದ ಅವಧಿಯಲ್ಲಿ ಚಂದ್ರಲೇಖಾಳ ಧ್ವನಿ ಲಕ್ಷಾಂತರ ಮಂದಿಯನ್ನು ತಲುಪಿದೆ. ಆನಂತರದಲ್ಲಿ ಚಂದ್ರಲೇಖಾಳ ಬದುಕಿನ ಚಿತ್ರವೇ ಬದಲಾಗಿ ಹೋಗಿದೆ. ಎರಡು ವರ್ಷಗಳ ಹಿಂದೆ ಯಾರೆಂದರೆ ಯಾರಿಗೂ ಪರಿಚಯವಿರದಿದ್ದ ಈಕೆ, ಇವತ್ತು ಕೇರಳದ ಸೆಲೆಬ್ರಿಟಿ ಅನ್ನಿಸಿಕೊಂಡಿದ್ದಾಳೆ. ಮಲಯಾಳಂನ ಹೆಸರಾಂತ ಹಿನ್ನೆಲೆ ಗಾಯಕಿಯರ ಪೈಕಿ ಒಬ್ಬರಾಗಿದ್ದಾರೆ. ಥೇಟ್ ಸಿನಿಮಾ ಕಥೆಯಂತಿರುವ ಚಂದ್ರಲೇಖಾರ ಯಶೋಗಾಥೆ ಆರಂಭವಾಗುವುದು ಹೀಗೆ:ಕೇರಳದ ಅಡೂರಿಗೆ ಸಮೀಪವಿರುವ ಪರಕೋಡ್ ಎಂಬ ಹಳ್ಳಿಯಲ್ಲಿ ಹುಟ್ಟಿದಾಕೆ ಚಂದ್ರಲೇಖಾ. ಸೋದರ-ಸೋದರಿಯರಿಂದ ಕೂಡಿದ್ದ ತುಂಬು ಕುಟುಂಬ ಈಕೆಯದು. ಸ್ವಾರಸ್ಯವೆಂದರೆ, ಚಂದ್ರಲೇಖಾಳ ಮನೆಯಲ್ಲಿ ಯಾರೊಬ್ಬರಿಗೂ ಸಂಗೀತದ ಗಂಧ -ಗಾಳಿ ಇರಲಿಲ್ಲ. ಆದರೆ ಎಲ್ಲರೂ ಹಾಡುತ್ತಿದ್ದರು. ಒಂದರ್ಥದಲ್ಲಿ ಆ ಮನೆಯ ಎಲ್ಲರಿಗೂ ರೇಡಿಯೋವೇ ಮೊದಲ ಗುರು.  ಚಿತ್ರಗೀತೆಗಳನ್ನು ಹೊರತುಪಡಿಸಿದರೆ ಜಾನಪದ ಗೀತೆಗಳು ಹಾಗೂ ದೇವರ ನಾಮಗಳನ್ನು ಹಾಡುವುದು ಚಂದ್ರಲೇಖಾ ಮತ್ತು ಕುಟುಂಬದವರ ಹವ್ಯಾಸವಾಗಿತ್ತು. ಅವತ್ತಿನ ಸಂದರ್ಭದಲ್ಲಿ ಎಲ್ಲ ಮನೆಯ ಮಕ್ಕಳೂ ಹಾಡುತ್ತಿದ್ದ ಕಾರಣದಿಂದ ಚಂದ್ರಲೇಖಾ ಹಾಗೂ ಅವರ ಕುಟುಂಬದವರ ಹಾಡುಗಾರಿಕೆ ಯಾರಿಗೂ ವಿಶೇಷ ಅನ್ನಿಸಲಿಲ್ಲ.ಹೀಗಿರುವಾಗಲೇ, ಚಂದ್ರಲೇಖಾಳ ತಂದೆ ತೀರಿ ಹೋದರು. ಆಗಿನ್ನೂ ಚಂದ್ರಲೇಖಾ ಚಿಕ್ಕ ಹುಡುಗಿ. ಮನೆಯ ಯಜಮಾನನೇ ಹೋಗಿ ಬಿಟ್ಟ ಮೇಲೆ ಇಡೀ ಸಂಸಾರದ ಹೊರೆ ಚಂದ್ರಲೇಖಾರ ತಾಯಿಯ ಮೇಲೆ ಬಿತ್ತು. ಮನೆಮಂದಿಗೆಲ್ಲ ದಿಕ್ಕು ದೆಸೆಯಂತೆ ಯಜಮಾನರು ಇದ್ದಾಗಲೇ ಬಡತನದೊಂದಿಗೆ ಬದುಕುತ್ತಿದ್ದ ಕುಟುಂಬ ಅದು. ಅವರು ಕಣ್ಮರೆಯಾದ ನಂತರದ ಪರಿಸ್ಥಿತಿಯನ್ನು ವಿವರಿಸಿ ಹೇಳಬೇಕಿಲ್ಲ ತಾನೆ? ಅದೊಂದು ದಿನ ಮಕ್ಕಳನ್ನೆಲ್ಲ ಎದುರು ಕೂರಿಸಿಕೊಂಡು ಚಂದ್ರಲೇಖಾರ ಅಮ್ಮ ಹೇಳಿದರಂತೆ: 'ಈವರೆಗೂ ಅನುಭವಿಸಿದೆವಲ್ಲ; ಅದಕ್ಕಿಂತ ಹೆಚ್ಚಿನ ಕಷ್ಟಗಳು ಮುಂದೆ ಎದುರಾಗಬಹುದು. ಯಾವ ಸಂದರ್ಭದಲ್ಲೂ ಧೈರ್ಯ ಕಳೆದುಕೊಳ್ಳಬೇಡಿ. ನಮ್ಮಿಂದ ಪಡೆಯಲು ಆಗದಂತಿರುವ ಯಾವುದೇ ಸವಲತ್ತಿಗೂ ಆಸೆಪಡಬೇಡಿ. ನಮಗಿರುವ ಇತಿಮಿತಿಗಳು ಏನೇನು ಎಂಬುದನ್ನು ಅರ್ಥಮಾಡಿಕೊಂಡು ಹೆಜ್ಜೆ ಮುಂದಿಡಿ...'ಚಂದ್ರಲೇಖಾರ ತಾಯಿ ಮಾಡಿದ ಒಳ್ಳೆಯ ಕೆಲಸವೆಂದರೆ, ತಾವು ಬಡತನದಿಂದ ಕಂಗಾಲಾಗಿದ್ದರೂ ಎದೆಗುಂದದೆ ಮಕ್ಕಳನ್ನು ಶಾಲೆಗೆ ಕಳಿಸಿದ್ದು. ಸೆಕೆಂಡ್ ಕ್ಲಾಸ್ಗೆ ಮೋಸವಿಲ್ಲ ಎಂಬಂಥ ಬುದ್ಧಿವಂತಿಕೆ ಹೊಂದಿದ್ದ ಚಂದ್ರಲೇಖಾ, ಹಾಡುಗಾರಿಕೆಯಲ್ಲಿ ಮಾತ್ರ ಪ್ರತಿ ಬಾರಿಯೂ ಮೊದಲ ಬಹುಮಾನದೊಂದಿಗೇ ಮನೆಗೆ ಬರುತ್ತಿದ್ದಳು. ನಾಲ್ಕು ಬಾರಿ ಕೇಳಿದರೆ ಸಾಕು, ಹಾಡೆಂಬುದು ಆಕೆಗೆ ಬಾಯಿಪಾಠ ಆಗಿ ಬಿಡುತ್ತಿತ್ತು. ಪ್ರತಿಯೊಂದು ಸ್ಪರ್ಧೆಯಲ್ಲೂ ಈಕೆ ಮೊದಲ ಬಹುಮಾನ ಪಡೆಯುತ್ತಿದ್ದುದನ್ನು ಕಂಡು ನೆರೆಹೊರೆಯವರೆಲ್ಲ-'ಚಂದ್ರಾಳನ್ನು ಸಂಗೀತದ ತರಗತಿಗೆ ಸೇರಿಸಿ. ಶಾಸ್ತ್ರೀಯವಾಗಿ ಸಂಗೀತ ಕಲಿತರೆ ಆಕೆಯ ಭವಿಷ್ಯಕ್ಕೆ ಒಳ್ಳೆಯದಾಗುತ್ತೆ' ಎಂದು ಸಲಹೆ ಮಾಡುತ್ತಿದ್ದರು. ಆದರೆ, ಒಂದೊಂದು ಹೊತ್ತಿನ ಅನ್ನ ಸಂಪಾದನೆಗೇ ಕಷ್ಟವಾಗಿರುವಾಗ, ಸಂಗೀತದ ತರಗತಿಗೆ ಹಣ ಹೊಂದಿಸುವುದಾದರೂ ಹೇಗೆ? ಈ ಕಹಿ ಸತ್ಯವನ್ನೇ ವಿವರಿಸಿ ಹೇಳಿದ ಚಂದ್ರಲೇಖಾರ ತಾಯಿ, ನನ್ನ ಸಂಕಟವನ್ನು, ಅಸಹಾಯಕತೆಯನ್ನು ಅರ್ಥಮಾಡ್ಕೋ ಮಗಳೇ ಎನ್ನುತ್ತಾ ಕಣ್ಣೀರಿಟ್ಟರಂತೆ.'ಶಾಸ್ತ್ರೀಯವಾಗಿ ಸಂಗೀತ ಕಲಿಯುವ ಅದೃಷ್ಟವಾಗಲಿ, ವಾದ್ಯಗೋಷ್ಠಿಯ ಮಧ್ಯೆ ಸಂಭ್ರಮದಿಂದ ಹಾಡುವ ಯೋಗವಾಗಲಿ ನನಗಿಲ್ಲ. ನಾನೇನಿದ್ರೂ ಅಡುಗೆ ಮನೆ ಗಾಯಕಿ ಆಗಲಿಕ್ಕೇ ಲಾಯಕ್ಕು...' ಎಂದು ಸ್ವಗತದಲ್ಲಿ ಹೇಳಿಕೊಂಡ ಚಂದ್ರಲೇಖಾ, ಆ ಕ್ಷಣದಲ್ಲೇ ಒಂದು ಮಹತ್ವದ ನಿರ್ಧಾರಕ್ಕೆ ಬಂದಳು: ಬೇಗ ಡಿಗ್ರಿ ಮುಗಿಸಬೇಕು. ನಂತರ, ಸ್ಕಾಲರ್ಶಿಪ್ನ ಸಹಾಯದಿಂದ ಮಾಸ್ಟರ್ ಡಿಗ್ರಿ ಮಾಡಬೇಕು. ನೌಕರಿಗೆ ಸೇರಿಕೊಂಡು ಅಮ್ಮನ ಕಷ್ಟವನ್ನು ಕಡಿಮೆ ಮಾಡಬೇಕು...ನೋಡ ನೋಡುತ್ತಲೇ ಚಂದ್ರಲೇಖಾರ ಡಿಗ್ರಿ ಮುಗಿಯಿತು. ಮಾಸ್ಟರ್ ಡಿಗ್ರಿಗೆ ಪ್ರವೇಶವೂ ದೊರೆಯಿತು. ಮುಂದಿನ ವರ್ಷಗಳಲ್ಲಿ ಯಾವ್ಯಾವ ಇಲಾಖೆಯಲ್ಲಿ ನೌಕರಿಗೆ ಪ್ರಯತ್ನಿಸಬಹುದು ಎಂದೆಲ್ಲಾ ಚಂದ್ರಲೇಖಾ ಲೆಕ್ಕಾಚಾರ ಹಾಕುತ್ತಿದ್ದಾಗಲೇ ಮದುವೆಯ ಪ್ರಸ್ತಾಪ ಬಂತು. ಗಂಡಿನ ಕಡೆಯವರು ತಮಗಿಂತ ಅನುಕೂಲವಾಗಿದ್ದಾರೆ ಎಂಬುದು ಗೊತ್ತಾದ ತಕ್ಷಣ, ಎರಡನೇ ಯೋಚನೆ ಮಾಡದ ಚಂದ್ರಲೇಖಾರ ತಾಯಿ ಮಗಳ ಮದುವೆ ಮುಗಿಸಿದರು. ತಮ್ಮೊಂದಿಗಿದ್ದು ಬಡತನದ ಮಧ್ಯೆಯೇ ಕಳೆದು ಹೋಗುವ ಬದಲು ಗಂಡನ ಮನೆಯಲ್ಲಿ ಮಗಳು ನೆಮ್ಮದಿಯಿಂದಿರಲಿ ಎಂಬುದು ಆಕೆಯ ಆಸೆಯಾಗಿತ್ತು.ಹೀಗೆ, 2006ರಲ್ಲಿ ಪರಂಗಿ ಮಾಮುಟ್ಟಿಲ್ ಎಂಬ ಊರಿಗೆ ಸೊಸೆಯಾಗಿ ಹೋದಳು ಚಂದ್ರಲೇಖಾ. ಈಕೆಯ ಗಂಡನ ಹೆಸರು ರಘುನಾಥನ್. ಈತ ಎಲ್ಐಸಿಯಲ್ಲಿ ಗುತ್ತಿಗೆ ಆಧಾರದಲ್ಲಿ ಎರಡನೇ ದರ್ಜೆ ಗುಮಾಸ್ತನಾಗಿದ್ದ. ಟೆಂಪರರಿ ನೌಕರಿಯ ಕಾರಣದಿಂದ ಹೆಚ್ಚಿನ ಸಂಬಳದ ಅನುಕೂಲವಿರಲಿಲ್ಲ. ಆದರೇನಂತೆ? ಈ ಬಡತನ ಗಂಡ-ಹೆಂಡಿರ ಮಧುರ ಬಾಂಧವ್ಯಕ್ಕೆ ಅಡ್ಡಿಯಾಗಲಿಲ್ಲ. ಅವರಿಬ್ಬರೂ ಕೆ.ಎಸ್. ನರಸಿಂಹಸ್ವಾಮಿಯವರ ಪದ್ಯದಲ್ಲಿ ಬರುವ ಆದರ್ಶ ದಂಪತಿಗಳಂತೆ ಬದುಕಿಬಿಟ್ಟರು. ಗಂಡನ ಮಗ್ಗುಲಲ್ಲಿ ಕೂತು, ಒಂದೊಂದೇ ಹಾಡಿಗೆ ದನಿಯಾಗುತ್ತಿದ್ದಳು ಚಂದ್ರಲೇಖಾ. ಆತ ಮೆಚ್ಚುಗೆಯಿಂದ ತಲೆದೂಗಿ, ಒನ್ಸ್ ಮೋರ್ ಅನ್ನುತ್ತಿದ್ದ. ನಿನ್ನ ಕಂಠದೊಳಗೆ ಕೋಗಿಲೆ ಅಡಗಿ ಕೂತಿದೆ ಎಂದು ಹೇಳಿ ಸಂಭ್ರಮಿಸುತ್ತಿದ್ದ. ಕೌಟುಂಬಿಕ ಕಾರ್ಯಕ್ರಮಗಳಲ್ಲಂತೂ ಚಂದ್ರಲೇಖಾರಿಂದ ಹಾಡಿಸುವುದು ಆಕೆಯ ಬಂಧುಗಳ ಪಾಲಿಗೆ 'ಸಂಪ್ರದಾಯವೇ' ಆಗಿ ಹೋಗಿತ್ತು.
1993ರಲ್ಲಿ ಬಿಡುಗಡೆಯಾದ ಮಲಯಾಳಂ ಸಿನಿಮಾ 'ಚಮಯಂ'ನಲ್ಲಿ ಗಾಯಕಿ ಚಿತ್ರಾ ಹಾಡಿರುವ 'ರಾಜಹಂಸಮೇ ಮಳವಿಲ್ ಕುಡಿಲಿಲ್...' ಎಂಬ 4 ನಿಮಿಷದ ಅವಧಿಯ ಗೀತೆಯೊಂದಿದೆ. ಅದು ಚಂದ್ರಲೇಖಾರ ಫೇವರಿಟ್ ಸಾಂಗ್. ಅದನ್ನು ಎಷ್ಟು ಬಾರಿ ಹೇಳಿದರೂ ಈಕೆಗೆ ಸಮಾಧಾನವಿಲ್ಲ. ವಿಶೇಷವೇನೆಂದರೆ ಚಿತ್ರಾ ಹಾಡಿದ್ದರಲ್ಲ; ಅಷ್ಟೇ ಮಧುರವಾಗಿ ಈಕೆಯೂ ಹಾಡುತ್ತಿದ್ದರು. ಈ ವೇಳೆಗೆ ಚಂದ್ರಲೇಖಾರ ಬದುಕಿಗೆ ಪುಟ್ಟ ಕಂದಮ್ಮನೂ ಬಂದಿತ್ತು. ಮಗುವಿಗೆ ಲಾಲಿ ಹಾಡಬೇಕು ಅನ್ನಿಸಿದಾಗ, ಮಲಗಿಸಬೇಕು ಅನ್ನಿಸಿದಾಗ, ಗಂಡನನ್ನು ಖುಷಿಪಡಿಸಬೇಕು ಅನ್ನಿಸಿದಾಗ, ಏಕಾಂತದಿಂದ ಮುಕ್ತಿ ಪಡೆಯಬೇಕು ಅನ್ನಿಸಿದಾಗೆಲ್ಲ ಮೂಲ ಗಾಯಕಿ ಚಿತ್ರಾಗೆ ಮನದಲ್ಲೇ ಕೈ ಮುಗಿದು ಚಂದ್ರಲೇಖಾ ಹಾಡುತ್ತಿದ್ದರು: ' ರಾಜಹಂಸಮೇ ಮಳವಿಲ್ ಕುಡಿಲಿಲ್...' ಹಾಡು ಮುಗಿವ ವೇಳೆಗೆ ಎದುರಿಗಿದ್ದವರ ಕಂಗಳಲ್ಲಿ ಆನಂದಭಾಷ್ಪ ತುಂಬಿರುತ್ತಿತ್ತು.ಅವತ್ತು 2012ರ ಸೆಪ್ಟೆಂಬರ್ 22, ಶನಿವಾರ. ಕೇರಳದ ಜನರೆಲ್ಲಾ ಓಣಂ ಹಬ್ಬದ ಸಡಗರದಲ್ಲಿದ್ದರು. ಹಬ್ಬದ ನೆಪದಲ್ಲಿ ರಘುನಾಥನ್ರ ಮನೆಗೆ, ಹತ್ತಿರದ ಬಂಧು ದರ್ಶನ್ ಎಂಬಾತ ಬಂದ. ಆ ವೇಳೆಗೆ, ಮುದ್ದು ಕಂದನನ್ನು ಎತ್ತಿಕೊಂಡು, ಅಡುಗೆ ಮನೆಯಲ್ಲಿ ಅತ್ತಿಂದಿತ್ತ ತಿರುಗುತ್ತಾ 'ರಾಜಹಂಸ ಮೇ ಮಳವಿಲ್ ಕುಡಿಲಿಲ್... ' ಎಂದು ಹಾಡುತ್ತಿದ್ದರು ಚಂದ್ರಲೇಖಾ. ಆಕೆಯ ಧ್ವನಿಯ ಏರಿಳಿತ, ಶುದ್ಧ, ಸ್ಪಷ್ಟ ಉಚ್ಚಾರಣೆ ಮತ್ತು ಆಕೆಯ ಮಧುರ ದನಿಗೆ ಮಾರುಹೋದ ಆತ, 'ಅಕ್ಕಾ, ಇನ್ನೊಮ್ಮೆ ಹಾಡಿ ಪ್ಲೀಸ್ ' ಎಂದಿದ್ದಾನೆ. ಈ ಬಾರಿ ಚಂದ್ರಲೇಖಾ ಹಾಡುತ್ತಿದ್ದಂತೆಯೇ ಆ ಕ್ಷಣಗಳನ್ನು ತನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾನೆ. ಮನೆಯಿಂದ ಎದ್ದು ಬರುವ ಮುನ್ನ,- 'ಈ ಹಾಡು ನಿನ್ನ ಜೀವನಕ್ಕೆ ಒಂದು ಟರ್ನ್ ಕೊಡುತ್ತೆ ಅಕ್ಕಾ. ಈ ಮಾತು ನೆನಪಿಟ್ಕೋ' ಎಂದಿದ್ದಾನೆ. ಆನಂತರ ರೆಕಾರ್ಡ್ ಮಾಡಿಕೊಂಡಿದ್ದನ್ನು ಯು-ಟ್ಯೂಬ್ಗೆ ಅಪ್ಲೋಡ್ ಮಾಡಿ-'ಈ ಗೀತೆಯನ್ನು ಒರಿಜಿನಲ್ ಗಾಯಕಿ ಚಿತ್ರಾ ಅವರಂತೆಯೇ ಹಾಡಿರುವಾಕೆ ನನ್ನ ಹತ್ತಿರದ ಬಂಧು. ನೀವೊಮ್ಮೆ ಈ ಹಾಡು ಕೇಳಿ. ಅಭಿಪ್ರಾಯ ದಾಖಲಿಸಿ' ಎಂದು ವಿನಂತಿಸಿದ್ದಾನೆ.ನಂತರದ ಮೂರೇ ದಿನಗಳಲ್ಲಿ ಪವಾಡ ನಡೆದು ಹೋಗಿದೆ. ಈ ಅವಧಿಯಲ್ಲಿ ಯು-ಟ್ಯೂಬ್ನಲ್ಲಿದ್ದ ಚಂದ್ರಲೇಖಾರ ಹಾಡನ್ನು 3 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದರು!ಮೂಲಗಾಯಕಿಗಿಂಥ ಈಕೆಯೇ ಚೆನ್ನಾಗಿ ಹಾಡಿದ್ದಾಳೆ ಎಂದೂ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆಯಿಂದ ಖುಷಿಯಾದ ದರ್ಶನ್, ಮರುದಿನವೇ ಯು-ಟ್ಯೂಬ್ನಲ್ಲಿದ್ದ ಮಾಹಿತಿಯೊಂದಿಗೆ ಚಂದ್ರಲೇಖಾರ ಮೊಬೈಲ್ ನಂಬರನ್ನು ಹಾಕಿಬಿಟ್ಟ. ಮರುದಿನದಿಂದಲೇ ಚಂದ್ರಲೇಖಾರ ಫೋನ್ ಮೊರೆಯತೊಡಗಿತು. ಕೇರಳ ಮಾತ್ರವಲ್ಲ, ದಿಲ್ಲಿ, ಕೋಲ್ಕತಾ, ದುಬೈ, ಇಟಲಿ, ಫ್ರಾನ್ಸ್, ಜರ್ಮನಿ, ಅಮೆರಿಕಗಳಿಂದಲೂ ಜನ ಫೋನ್ ಮಾಡಿದರು. ಎಲ್ಲರದ್ದೂ ಒಂದೇ ಮನವಿ; 'ಒಂದೇ ಒಂದ್ಸಲ ರಾಜಹಂಸಮೇ... ಹಾಡು ಹೇಳಿ ಪ್ಲೀಸ್...' ನಡೆಯುತ್ತಿರುವುದೆಲ್ಲಾ ಕನಸೋ, ಭ್ರಮೆಯೋ ಎಂದು ನಿರ್ಧರಿಸಲಾಗದೆ ಸುಸ್ತಾಗುವವರೆಗೂ ಫೋನ್ ಕರೆ ಸ್ವೀಕರಿಸುತ್ತಾ, ಫೋನ್ನಲ್ಲಿಯೇ ಹಾಡು ಹೇಳುತ್ತಾ ದಿನಗಳನ್ನು ಕಳೆದರು ಚಂದ್ರಲೇಖಾ.
ನಾಲ್ಕೇ ನಿಮಿಷಗಳ ಹಾಡಿನ ಕಾರಣದಿಂದ ಚಂದ್ರಲೇಖಾರ ಹೆಸರು ಎಲ್ಲ ಮನೆ-ಮನಗಳನ್ನು ತಲುಪಿ ವಾರ ಕಳೆದಿರಲಿಲ್ಲ; ಆಗಲೇ ಕೈರಳಿ ಚಾನೆಲ್ನವರು ಈಕೆಯ ಸಂದರ್ಶನದ ನೇರ ಪ್ರಸಾರ ಇಟ್ಟುಕೊಂಡರು. ಅವತ್ತು ತನ್ನ ಕುಟುಂಬದ ಬಡತನ, ರೇಡಿಯೋದ ನೆರವಿನಿಂದಲೇ ಕಲಿತ ಹಾಡುಗಾರಿಕೆ, ಅರ್ಧಕ್ಕೆ ನಿಂತ ಓದು, ಗಂಡನಿಂದ ದೊರೆತ ಪ್ರೋತ್ಸಾಹವನ್ನು ಹೇಳಿಕೊಂಡಳು. ಈಗಲೂ ನನಗೆ ಮೇಲ್, ಯು-ಟ್ಯೂಬ್, ಫೇಸ್ಬುಕ್ನ ಪರಿಚಯವಿಲ್ಲ. ಹೀಗಿರುವಾಗ, ನನ್ನನ್ನು ಹೊಸದೊಂದು ಪ್ರಪಂಚಕ್ಕೆ ಪರಿಚಯಿಸಿದಾತ ನಮ್ಮ ಬಂಧು ದರ್ಶನ್. ಅವನಿಗೆ ಕೋಟಿ ಕೋಟಿ ಪ್ರಣಾಮಗಳು ಎಂದೆಲ್ಲಾ ಹೇಳಿದ ಚಂದ್ರಲೇಖಾ, ಕಡೆಗೆ, ಸಂಕೋಚದಿಂದ ಹೇಳಿದರಂತೆ: ನನ್ನ ಹಾಡನ್ನು ಎಷ್ಟೊಂದು ಜನ ಮೆಚ್ಚಿಕೊಂಡಿದ್ದಾರೆ. ಅಂಥದೇ ಒಂದು ಮೆಚ್ಚುಗೆಯ ಮಾತನ್ನು ಈ ಹಾಡಿನ ಮೂಲ ಗಾಯಕಿಯೂ, ನನ್ನ ಮಾನಸ ಗುರುವೂ ಆದ ಚಿತ್ರಾ ಅವರಿಂದ ಕೇಳಿ ಬಿಟ್ಟರೆ, ಜೀವನ ಸಾರ್ಥಕ ಆಯ್ತು ಅಂದ್ಕೋತೇನೆ...ಚಂದ್ರಲೇಖಾರ ಮಾತು ಮುಗಿದು ಎರಡು ನಿಮಿಷ  ಕಳೆವ ಮೊದಲೇ ಕೈರಳಿ ಚಾನೆಲ್ನವರು ಗಾಯಕಿ ಚಿತ್ರಾ ಅವರನ್ನು ಸಂಪರ್ಕಿಸಿದರು. ಆಗ ಚಿತ್ರಾ ಹೇಳಿದರಂತೆ:'ಚಂದ್ರಾ, ರಾಜಹಂಸಮೇ... ಹಾಡನ್ನು ನನಗಿಂತ ಎರಡು ಪಟ್ಟು ಚೆನ್ನಾಗಿ ಹಾಡಿದೀಯ. ನನಗೂ ಒಮ್ಮೆ ಕೇಳಬೇಕು ಅನ್ನಿಸ್ತಿದೆ. ಹಾಡಮ್ಮಾ, ಪ್ಲೀಸ್...' ಈ ಮಾತು ಕೇಳಿ ಭಾವುಕರಾದ ಚಂದ್ರಲೇಖಾ, ಕಂಬನಿ ಒರೆಸಿಕೊಳ್ಳುವುದನ್ನೂ ಮರೆತು ಹಾಡಿದರು. ನಂತರ ಸ್ಮರಣೀಯ ಮಾತು ಮತ್ತು ಕ್ಷಣಗಳೊಂದಿಗೆ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗಲೇ ಚಂದ್ರಲೇಖಾರ ಮೊಬೈಲ್ ಮೊರೆಯಿತು. ಆ ಕಡೆಯಿಂದ ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮಾತಾಡುತ್ತಿದ್ದರು. ಅವರದ್ದೂ ಅದೇ ವಿನಂತಿ:'ರಾಜಹಂಸಮೇ... ಹಾಡು ಕೇಳಬೇಕಲ್ಲಮ್ಮಾ... ಈಗಲೇ ಒಮ್ಮೆ ಹಾಡ್ತೀಯ?'ಈಗ ಏನಾಗಿದೆ ಗೊತ್ತೆ? ಚಂದ್ರಲೇಖಾರ ಸಿರಿಕಂಠಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ತಮಿಳು ಹಾಗೂ ಮಲಯಾಳಂನ ಸಂಗೀತ ನಿರ್ದೇಶಕರು ಆಕೆಯ ಮನೆಯ ಮುಂದೆ ಕ್ಯೂ ನಿಂತಿದ್ದಾರೆ. ನನಗೆ ಸಂಗೀತ ಹಾಗೂ ರಾಗಗಳ ಪರಿಚಯವಿಲ್ಲ. ವಾದ್ಯಗೋಷ್ಠಿಯ ಮಧ್ಯೆ ಹಾಡಿ ಅಭ್ಯಾಸವಿಲ್ಲ ಎಂದು ಆಕೆ ಹೇಳಿದರೆ, ಅದನ್ನೆಲ್ಲ ನಾವು ಸರಿ ಮಾಡ್ಕೋತೇವೆ. ಅದರ ಬಗ್ಗೆ ಯೋಚಿಸಬೇಡಿ. ನಮಗೆ ನಿಮ್ಮ ವಾಯ್ಸ್ ಬೇಕು ಅಷ್ಟೇ ಎಂದಿದ್ದಾರೆ. ಭಕ್ತಿಗೀತೆಗಳನ್ನು ಹಾಡುವಂತೆ ಹಲವು ದೇವಾಲಯಗಳ ಪ್ರಮುಖರು ವಿನಂತಿಸಿದ್ದಾರೆ. ಸಂಗೀತ ಕಾರ್ಯಕ್ರಮ ನೀಡುವಂತೆ ವಿದೇಶಗಳಿಂದಲೂ ಆಹ್ವಾನ ಬರತೊಡಗಿವೆ. ಈವರೆಗೂ ಹಿನ್ನೆಲೆಗಾಯಕಿ ಎಂದಾಕ್ಷಣ, ಶ್ರೇಯಾ ಘೋಷಾಲ್ ಬೇಕು ಎನ್ನುತ್ತಿದ್ದ ನಿರ್ಮಾಪಕರು ಈಗ ಥಟ್ಟನೆ ವರಸೆ ಬದಲಿಸಿ, ಶ್ರೇಯಾ ಬದಲು ಚಂದ್ರಲೇಖಾ ಇರಲಿ ಅನ್ನುತ್ತಿದ್ದಾರೆ! ಪರಿಣಾಮ, ಮೊನ್ನೆ ಮೊನ್ನೆಯವರೆಗೂ ಅಡುಗೆ ಮನೆಯಲ್ಲಿ ನಿಂತು ಸಂಕೋಚದಿಂದ ಹಾಡುತ್ತಿದ್ದ ಚಂದ್ರಲೇಖಾ, ಈಗ ರೆಕಾರ್ಡಿಂಗ್ ಸ್ಟುಡಿಯೋಗಳಲ್ಲಿ ಜಗತ್ತನ್ನೇ ಮರೆತು ಹಾಡತೊಡಗಿದ್ದಾರೆ.
ನಾಲ್ಕೇ ನಿಮಿಷದ ಹಾಡು ಒಬ್ಬರ ಬದುಕಲ್ಲಿ ಹೀಗೆಲ್ಲಾ ಪವಾಡಗಳನ್ನು ಮಾಡಲು ಸಾಧ್ಯವಾ ಎಂಬ ಕೌತುಕವನ್ನು ಅಂಗೈಲಿ ಹಿಡಿದುಕೊಂಡೇ ಯು-ಟ್ಯೂಬ್ನಲ್ಲಿ ಚಂದ್ರಲೇಖಾರ ಹಾಡು ಕೇಳಿ. ಪ್ರಾಮಿಸ್: ಹಾಡು ಕೇಳುತ್ತಿದ್ದಂತೆಯೇ ಖುಷಿಯಾಗುತ್ತದೆ. ಅದು ಮುಗಿದಾಗ- ಕಣ್ತುಂಬಿಕೊಳ್ಳುತ್ತದೆ!

- ಎ.ಆರ್. ಮಣಿಕಾಂತ್armanikanth@gmail.com

















No comments:

Post a Comment