ಒಳ್ಳೆಯತನ ಇದ್ರೆ ಆಕಾಶಕ್ಕೂ ಏಣಿ ಹಾಕ್ಬಹುದು!

ಭಾವತೀರಯಾನ
ಗಂಗಾಧರ ಒಂದು ಕಂಪನಿ ಆರಂಭಿಸುತ್ತಾನೆ ಎಂದು ಉಳಿದವರು ಹಾಗಿರಲಿ; ಅವನ ಕುಟುಂಬದವರೇ ಊಹಿಸಿರಲಿಲ್ಲ. ಬಹುಶಃ ಇಂಥದೊಂದು ನಿರೀಕ್ಷೆ ಸ್ವತಃ ಗಂಗಾಧರನಿಗೂ ಇರಲಿಲ್ಲ ಅನಿಸುತ್ತದೆ. ಆದರೆ, ಬದುಕಲ್ಲಿ ಒಂದರ ಹಿಂದೆ ಒಂದರಂತೆ ಎದುರಾದ ಧಕ್ಕಡಿಗಳು, ಸ್ವಂತ ಕಂಪನಿ ಆರಂಭಿಸುವಂಥ ಅನಿವಾರ್ಯತೆಗೆ ಗಂಗಾಧರನನ್ನು ತಂದು ನಿಲ್ಲಿಸಿದ್ದವು. ಪರಿಣಾಮವಾಗಿ, ಬ್ಯಾಂಕ್ ಲೋನ್ ಹಾಗೂ ಆಪ್ತಮಿತ್ರರ ಸಹಕಾರದೊಂದಿಗೆ ಒಂದು ಪುಟ್ಟ ಕಂಪನಿಯನ್ನು ಆತ ಆರಂಭಿಸಿ ಬಿಟ್ಟಿದ್ದ. ಈ ಹೊಸ ಸಾಹಸದಲ್ಲಿ ಆತ ಯಶಸ್ಸು ಕಾಣಬಹುದು ಎಂದು ಹೆಚ್ಚಿನವರಿಗೆ ನಂಬಿಕೆಯಿರಲಿಲ್ಲ. ಕಾರಣ, ರಾಜಧಾನಿ ಬೆಂಗಳೂರಿನ ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ, ಗಂಗಾಧರ ಆರಂಭಿಸಿದ್ದನಲ್ಲ; ಅದೇ ಥರದ ಫ್ಯಾಕ್ಟರಿಗಳು ಹತ್ತಕ್ಕೂ ಹೆಚ್ಚಿದ್ದವು. ತಮ್ಮ ಉತ್ಪನ್ನಗಳನ್ನು ಮಾರುವ ವಿಷಯದಲ್ಲಿ ಅವುಗಳ ಮಧ್ಯೆ ಜಿದ್ದಾ ಜಿದ್ದಿನ ಸ್ಪರ್ಧೆ ಇತ್ತು. ಈ ತುರುಸಿನ ಸ್ಪರ್ಧೆಯಲ್ಲಿ, ಆಗಷ್ಟೇ ಫ್ಯಾಕ್ಟರಿ ಆರಂಭಿಸಿದ್ದ ಗಂಗಾಧರ ಗೆಲ್ಲುತ್ತಾನೆ ಎಂದು ಹೇಳಲು ಯಾರೂ ಸಿದ್ಧರಿರಲಿಲ್ಲ.ಹೀಗೆಲ್ಲ ಅನುಮಾನ ಪಡುವುದಕ್ಕೂ ಕಾರಣಗಳಿದ್ದವು. ಏನೆಂದರೆ, ಬಾಲ್ಯದಿಂದಲೂ ಗಂಗಾಧರ 'ಪೆದ್ದ' ಎಂದೇ ಹೆಸರಾಗಿದ್ದ. ಅದೇನು ಕಾರಣವೋ; ತನಗೆ ತೊಂದರೆ ನೀಡಿದವರ ವಿರುದ್ಧವೂ ಆತ ತಿರುಗಿ ಬೀಳುತ್ತಿರಲಿಲ್ಲ. ಅದನ್ನು ಗಮನಿಸಿಯೇ ಸೀನಿಯರ್‌ಗಳೆಲ್ಲ ಅವನನ್ನು ಗೂಸ್ಲು ನನ್ಮಗ ಎನ್ನುತ್ತಿದ್ದರು. ಅಧ್ಯಾಪಕರೆಲ್ಲ -'ಪಾಪ ಕಣ್ರೀ. ಆ ಹುಡುಗ ಪುಣ್ಯಕೋಟಿ ಇದ್ದ ಹಾಗೆ. ಹಿಂದೆ ಬಂದ್ರೆ ಒದೆಯೋದಿಲ್ಲ. ಮುಂದೆ ಬಂದ್ರೆ ಹಾಯೋದಿಲ್ಲ' ಎನ್ನುತ್ತಿದ್ದರು. ಅದರರ್ಥ ಗಂಗಾಧರನಿಗೆ ಸಿಟ್ಟೇ ಬರುತ್ತಿರಲಿಲ್ಲ ಎಂದಲ್ಲ. ಅಂಥ ಸಂದರ್ಭಗಳಲ್ಲಿ ಅವನ ನೆರೆಮನೆಯಲ್ಲಿಯೇ ವಾಸವಿದ್ದ, ಅವನ ಮೆಚ್ಚಿನ ಶಿಕ್ಷಕರೂ ಆಗಿದ್ದ ನರಸಿಂಹಮೂರ್ತಿಯವರು ಅವನನ್ನು ಸಮಾಧಾನಿಸುತ್ತಿದ್ದರು. 'ನೋಡಯ್ಯಾ ನಾವು ಮಾಡುವ ಒಳ್ಳೆಯ ಕೆಲಸ ಹಾಗೂ ಕೆಟ್ಟ ಕೆಲಸಗಳೆಲ್ಲಾ ಕೌಂಟ್ ಆಗ್ತಾ ಹೋಗ್ತವೆ. ಒಳ್ಳೆಯ ಕೆಲಸಗಳನ್ನು ಮಾಡಿದ್ರೆ ಬದುಕಲ್ಲಿ ನಮಗೂ ಒಳ್ಳೆಯದಾಗುತ್ತೆ. ಕೆಟ್ಟದನ್ನೇ ಮಾಡ್ತಾ ಹೋದ್ರೆ ಕೆಟ್ಟದ್ದೇ ಆಗುತ್ತೆ. ನೆನಪಿಟ್ಕೋ: ಕಾಯುವುದು ದೇವರ ಕೆಲಸ. ಕೊಲ್ಲುವುದು ರಾಕ್ಷಸರ ಕೆಲಸ...! ಎಂದೆಲ್ಲಾ ಬುದ್ಧಿ ಹೇಳುತ್ತಿದ್ದರು. ಮೇಷ್ಟ್ರ ಮಾತಲ್ಲಿ ತುಂಬ ನಂಬಿಕೆ ಹೊಂದಿದ್ದ ಗಂಗಾಧರ, ಎಂಥದೇ ಸಂದರ್ಭ ಬಂದರೂ ಇನ್ನೊಬ್ಬರಿಗೆ ಕೇಡು ಬಯಸಲೇಬಾರದೆಂದು ನಿರ್ಧರಿಸಿದ್ದ.ಇಂಥ ಹಿನ್ನೆಲೆಯ ಗಂಗಾಧರ, ಬ್ಯಾಂಕ್‌ನಲ್ಲಿ ನೌಕರಿ ಪಡೆಯಬೇಕು ಎಂಬ ಸದಾಶಯದಿಂದಲೇ ಬಿ.ಕಾಂ. ಮುಗಿಸಿದ್ದ. ದುರಾದೃಷ್ಟ; ಐದು ಬಾರಿ ಬ್ಯಾಂಕ್ ಎಕ್ಸಾಂ ಬರೆದರೂ ಅವನು ಆಯ್ಕೆಯಾಗಲಿಲ್ಲ. ಒಂದೆರಡು ಖಾಸಗಿ ಬ್ಯಾಂಕುಗಳಲ್ಲಿ - 'ಐದು ಲಕ್ಷ ಕೊಟ್ರೆ ಕೆಲಸ ಕೊಡುವ' ಭರವಸೆ ಸಿಕ್ಕಿತು. ಆದರೆ, ಗಂಗಾಧರನ ಬಳಿ ಅಷ್ಟು ಹಣ ಇರಲಿಲ್ಲ. ಈ ಕಾರಣದಿಂದಲೇ ಆತ ಫ್ಯಾಕ್ಟರಿಗಳ ಬಾಗಿಲು ಬಡಿದ. ಅಲ್ಲಿ- 'ಓದಿದ್ದೇ ಒಂದು, ಬದುಕು ಇನ್ನೊಂದು' ಎಂಬಂತೆ ಜೀವಿಸುತ್ತಿದ್ದ ನೂರಾರು ಮಂದಿಯ ಪರಿಚಯವಾಯಿತು. ನೀರಿಗಿಳಿದ ಮೇಲೆ ಮಳೆಯೇನು ಚಳಿಯೇನು ಎಂಬಂತೆ ಗಂಗಾಧರ ಎಲ್ಲವನ್ನೂ ಮರೆತು ದುಡಿಯಲು ನಿಂತ. ಒಂದೆರಡು ವರ್ಷಗಳ ನಂತರ ಅವನಿಗೆ ಮದುವೆಯಾಯಿತು. ಮಕ್ಕಳೂ ಆದವು.ಸಂಸಾರ ಜೊತೆಯಾದ ನಂತರ, ಖರ್ಚೂ ಹೆಚ್ಚಿತು. ಈ ಸಂದರ್ಭದಲ್ಲಿಯೇ, ಸಂಬಳ ಮತ್ತು ಇತರೆ ಸೌಲಭ್ಯಗಳನ್ನು ಹೆಚ್ಚಿಸುವಂತೆ ಒತ್ತಾಯಿಸಿ ಫ್ಯಾಕ್ಟರಿಯ ನೌಕರರೆಲ್ಲ ಮುಷ್ಕರಕ್ಕೆ ಮುಂದಾದರು. ಒಂದು ವಾರ ಕಳೆದರೂ ಮುಷ್ಕರ ನಿಲ್ಲಲಿಲ್ಲ. ಈ ಸಂದರ್ಭದಲ್ಲಿ ಒಂದಿಬ್ಬರು ನೌಕರರನ್ನ ಡಿಸ್‌ಮಿಸ್ ಮಾಡಿ, ಸ್ಟ್ರೈಕ್ ಮಾಡಿದರೆ ಎಲ್ಲರಿಗೂ ಇದೇ ಗತಿ ಎಂಬ ಎಚ್ಚರಿಕೆಯ ಸಂದೇಶ ರವಾನಿಸಲು ಫ್ಯಾಕ್ಟರಿಯ ಆಡಳಿತ ಮಂಡಳಿ ನಿರ್ಧರಿಸಿತು. ಹೆಚ್ಚಿನ ಗಲಾಟೆ ಆಗದಂತೆ ಕೆಲಸ ಸಾಧಿಸಬೇಕೆಂದರೆ, ದುರ್ಬಲರು ಅನ್ನಿಸಿದ ನೌಕರರನ್ನು ಡಿಸ್‌ಮಿಸ್ ಮಾಡಬೇಕಿತ್ತು. ಆಗ ಕಂಪನಿಯ ಜನರಲ್ ಮೆನೇಜರ್‌ಗೆ ಕಾಣಿಸಿದವನೇ ಗಂಗಾಧರ. ಅವನ ಬೆಂಬಲಕ್ಕೆ ಹೆಚ್ಚಿನ ನೌಕರರಿಲ್ಲ ಎಂಬುದು ಗ್ಯಾರಂಟಿಯಾಗುತ್ತಿದ್ದಂತೆಯೇ, ಯಾವುದೇ ಮುನ್ಸೂಚನೆ ನೀಡದೆ ಗಂಗಾಧರನನ್ನು ಡಿಸ್ಮಿಸ್ ಮಾಡಲಾಯಿತು.ಆನಂತರದ ಮೂರು ತಿಂಗಳು ಗಂಗಾಧರ ಹತ್ತಾರು ಕಷ್ಟಗಳಿಂದ ಕುಗ್ಗಿ ಹೋದ. ಬೆಂಗಳೂರಿನ ಬದುಕು ಅಂದ ಮೇಲೆ ವಿವರಿಸಿ ಹೇಳಬೇಕೆ? ಕಡೆಗೊಮ್ಮೆ ಖರ್ಚಿಗೆ ಹಣವಿಲ್ಲದೆ ಹೆಂಡತಿಯ ಮಾಂಗಲ್ಯವನ್ನೂ ಮಾರಿಬಿಟ್ಟ. ಈ ಮಧ್ಯೆಯೇ ಒಮ್ಮೆ ಊರಿಗೆ ಹೋಗಿ, ವೃದ್ಧಾಪ್ಯದಿಂದ ಹಣ್ಣಾಗಿದ್ದ ನರಸಿಂಹಮೂರ್ತಿ ಮೇಷ್ಟ್ರಿಗೆ ತನ್ನ ಸಂಕಟ ಹೇಳಿಕೊಂಡ. ನಿಮ್ಮ ದೇವ್ರಿಗೆ ನನ್ನ ಕಷ್ಟ ಕಾಣಿಸೋದಿಲ್ವಾ ಸಾರ್ ಎಂದು ಪ್ರಶ್ನೆ ಹಾಕಿದ. 'ನೆನಪಲ್ಲಿ ಇಟ್ಕೊಳಯ್ಯಾ. ಒಳ್ಳೆಯ ಕೆಲಸ ನಿನ್ನನ್ನು ಖಂಡಿತ ಕಾಪಾಡುತ್ತೆ; ಯಾವುದೇ ಸಂದರ್ಭದಲ್ಲೂ ಆವೇಶದ ಕೈಗೆ ಬುದ್ಧಿ ಕೊಡಬೇಡ' ಎಂದು ಮೇಷ್ಟ್ರು ಸಮಾಧಾನ ಹೇಳಿದ್ದರು.ಆನಂತರದಲ್ಲಿ ಗಂಗಾಧರನಿಗೆ ಮೊದಲಿಗಿಂತ ಹೆಚ್ಚು ಸಂಬಳದ ನೌಕರಿಯೇ ಸಿಕ್ಕಿತು. ಈ ಹಿಂದೆ ಆತ ಫ್ಯಾಕ್ಟರಿಯಲ್ಲಿ ಮುಷ್ಕರ ಹೂಡಿದ್ದ ಮತ್ತು ಅದೇ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದ ಎಂಬುದು ಅವರಿವರ ಕಿವಿಗೆ ಬಿದ್ದು, ಗಂಗಾಧರನಿಗೆ ಕಾರ್ಮಿಕ ನಾಯಕ ಎಂಬ ಅಡ್ಡ ಹೆಸರೂ ಅಂಟಿಕೊಂಡಿತು. ಎಲ್ಲಕ್ಕಿಂತ ಹೆಚ್ಚಾಗಿ ಗಂಗಾಧರನ ಮುಗ್ಧತೆ ಫ್ಯಾಕ್ಟರಿಯ ಹೆಣ್ಣು ಮಕ್ಕಳಿಗೆ ಇಷ್ಟವಾಯಿತು. ಅವರು ಇವನೊಂದಿಗೆ ಮುಕ್ತವಾಗಿ ಮಾತಿಗೆ ನಿಲ್ಲುತ್ತಿದ್ದರು. ಹಲವು ಸಮಸ್ಯೆಗಳಿಗೆ ಪರಿಹಾರ ಕೇಳುತ್ತಿದ್ದರು. ಈ ಮಧ್ಯೆ, ತನ್ನ ಶ್ರಮದ ದುಡಿಮೆಯಿಂದ ಎರಡು ಪ್ರಮೋಶನ್‌ಗಳಿಗೂ ಗಂಗಾಧರ ಪಾತ್ರನಾಗಿದ್ದ. ಅವನ ಬೆಳವಣಿಗೆ, ಸಹಜವಾಗಿಯೇ, ಅದೇ ಫ್ಯಾಕ್ಟರಿಯಲ್ಲಿದ್ದ ಹಳೆಯ ನೌಕರರಿಗೆ ಹೊಟ್ಟೆ ಕಿಚ್ಚು ಮೂಡಿಸಿತು. ಅವರೆಲ್ಲ ಒಟ್ಟಾಗಿ, ಗಂಗಾಧರನ ವಿರುದ್ಧ ಮೆನೇಜ್‌ಮೆಂಟ್‌ಗೆ ದೂರು ಹೇಳಿದರು. ಆತ ಕಾರ್ಮಿಕ ಸಂಘಟನೆಯೊಂದಿಗೆ ನಿರಂತರ ಸಂಪರ್ಕ ಹೊಂದಿರುವನೆಂದೂ, ಮುಂದೊಂದು ದಿನ ಫ್ಯಾಕ್ಟರಿಯ ವಿರುದ್ಧ ಮುಷ್ಕರ ಹೂಡಿ ನಷ್ಟಕ್ಕೆ ಕಾರಣವಾಗುತ್ತಾನೆಂದೂ ತೀರ್ಪು ಕೊಟ್ಟರು.ಇಂಥದೊಂದು ದೂರು ತಲುಪಿ 15 ದಿನ ಕಳೆದಿರಲಿಲ್ಲ; ಆಗಲೇ ಓ.ಟಿ. ಮಾಡಲು ತಮಗೆ ಸಾಧ್ಯವಿಲ್ಲವೆಂದೂ, ಅದರಿಂದ ವಿನಾಯ್ತಿ ನೀಡಬೇಕೆಂದೂ ಮಹಿಳಾ ಸಿಬ್ಬಂದಿ ಬೇಡಿಕೆ ಇಟ್ಟರು. ಈ ಸಂದರ್ಭದಲ್ಲೇ ಹಲವು ಕಂಪನಿಗಳಿಂದ ಹೆಚ್ಚು ಉತ್ಪನ್ನಗಳಿಗೆ ಆರ್ಡರ್ ಬಂದಿತ್ತು. ಹಾಗಾಗಿ ಮೆನೇಜ್‌ಮೆಂಟ್ ಒಪ್ಪಲಿಲ್ಲ. ವಿಷಯ ಗೊತ್ತಿದ್ದರೂ, ಮಾನವೀಯತೆಯ ದೃಷ್ಟಿಯಿಂದ ಗಂಗಾಧರ ಮಹಿಳಾ ನೌಕರರ ಪರ ದನಿ ಎತ್ತಿದ. ಓಹ್, ಇವನನ್ನು ಹೀಗೆ ಬಿಟ್ಟರೆ ತೊಂದರೆ ಗ್ಯಾರಂಟಿ ಎಂದು ಭಾವಿಸಿದ ಆಡಳಿತ ಮಂಡಳಿ, ಇಬ್ಬರು ಮಹಿಳಾ ನೌಕರರಿಗೆ ಪ್ರಮೋಷನ್ ಹಾಗೂ ಹೆಚ್ಚು ಸಂಬಳದ ಆಮಿಷ ಒಡ್ಡಿತು. ಪರಿಣಾಮ, ಅದುವರೆಗೂ ಗಂಗಾಧರನೊಂದಿಗೆ 'ಕ್ಲೋಸ್' ಆಗಿದ್ದ ಆ ಹೆಂಗಸರು ದಿಢೀರನೆ ವರಸೆ ಬದಲಿಸಿದರು. ಗಂಗಾಧರ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದನೆಂದು, ಮೇಲಿಂದ ಮೇಲೆ ಮೈ ಕೈ ಮುಟ್ಟಲು ಬಂದನೆಂದೂ ಆರೋಪಿಸಿ ಬಿಟ್ಟರು. ಪರಿಣಾಮ, ದೂರು ತಲುಪಿದ ಮರುದಿನವೇ ಗಂಗಾಧರನನ್ನು ಡಿಸ್ಮಿಸ್ ಮಾಡಲಾಯಿತು.ಇಷ್ಟಾದ ಮೇಲೆ, ಮತ್ತೆ ಮೂರು ತಿಂಗಳು ಕೇರಾಫ್ ಪುಟ್‌ಪಾತ್ ಆಗಿದ್ದ ಗಂಗಾಧರ, ಆನಂತರದಲ್ಲಿ ಬೇರೊಂದು ಉದ್ಯೋಗ ಹುಡುಕಿಕೊಂಡ. ಹೊಸ ಕಂಪನಿಯಲ್ಲೂ ಆತ ಹೆಚ್ಚು ದಿನ ಉಳಿಯಲಿಲ್ಲ. ಹಿಂತಿರುಗಿ ಮಾತಾಡುತ್ತಾನೆ. ಕಾನೂನಿನ ಪ್ರಕಾರ ಲಭ್ಯವಿರುವ ಸವಲತ್ತುಗಳಿಗಾಗಿ ಒತ್ತಾಯಿಸುತ್ತಾನೆ ಎಂಬ ಕಾರಣಕ್ಕೆ, ಬೇರ್ಯಾವುದೋ ಕುಂಟು ನೆಪ ನೀಡಿ ಅವನನ್ನು ಮತ್ತೆ ನೌಕರಿಯಿಂದ ಕಿತ್ತು ಹಾಕಲಾಯಿತು.ಮೇಲಿಂದ ಮೇಲೆ ಕೆಲಸ ಕಳೆದುಕೊಂಡನಲ್ಲ; ಅದೇ ಕಾರಣಕ್ಕೆ ಗಂಗಾಧರ ಮಾನಸಿಕವಾಗಿ ತತ್ತರಿಸಿ ಹೋದ. ಅದುವರೆಗೂ ಇರದೇ ಇದ್ದ ಸೇಡಿನ ಕಿಡಿಯೊಂದು ಅವನ ಎದೆಯೊಳಗೆ ಧಿಗ್ಗನೆ ಹೊತ್ತಿಕೊಂಡಿತು. ಈ ಸಂದರ್ಭದಲ್ಲಿಯೇ ಆತ ಎರಡು ಅನಾಹುತಕಾರಿ ನಿರ್ಣಯಗಳಿಗೆ ಬಂದದ್ದು. ಆ ಪೈಕಿ ಮೊದಲನೆಯದು-ತನ್ನನ್ನು ನೌಕರಿಯಿಂದ ತೆಗೆಸಿದ ಎರಡೂ ಕಂಪನಿಯ ಮೆನೇಜರ್‌ಗಳಿಗೆ ರೌಡಿಗಳಿಂದ ಹೊಡೆಸುವುದು ಅಥವಾ ತಾನೇ ಮುಂದಾಗಿ ಚಾಕು ಹಾಕುವುದು! ಎರಡನೆಯದು-ತನ್ನ ವಿರುದ್ಧ ಅಸಭ್ಯ ವರ್ತನೆಯ ದೂರು ನೀಡಿದ ಮಹಿಳೆಯರನ್ನು ಅದೇ ಫ್ಯಾಕ್ಟರಿಯ ಮುಂದೆ ಅಥವಾ ಬಸ್‌ಸ್ಟಾಪಿನಲ್ಲಿ ಸಾರ್ವಜನಿಕವಾಗಿ ಅವಮಾನಿಸುವುದು!ಮೆನೇಜರ್‌ಗಳಿಗೆ ರೌಡಿಗಳಿಂದ ಹೊಡೆಸುವುದು ಅಂದುಕೊಂಡಷ್ಟು ಸುಲಭವಿರಲಿಲ್ಲ. ಮುಖ್ಯವಾಗಿ, ರೌಡಿಗಳನ್ನು ಹುಡುಕುವುದು, ಅವರೊಂದಿಗೆ ಮಾತಾಡುವುದು, ಡೀಲ್ ಕುದುರಿಸುವುದು ಹೇಗೆಂದೇ ಗಂಗಾಧರನಿಗೆ ಗೊತ್ತಿರಲಿಲ್ಲ. ಹಾಗಾಗಿ, ಇಬ್ಬರಿಗೂ ಚಾಕು ಹಾಕುವುದೇ ಸರಿ ಎಂದು ನಿರ್ಧರಿಸಿದ. ಚಾಕುವಿನೊಂದಿಗೆ ಹೇಗೆ ನುಗ್ಗಬೇಕು, ಹೇಗೆ ತಿವಿಯಬೇಕು, ಆನಂತರ ಹೇಗೆ ತಪ್ಪಿಸಿಕೊಳ್ಳಬೇಕೆಂದು ರಿಹರ್ಸಲ್ ಮಾಡಿದ. ನಂತರ ಊರಲ್ಲಿದ್ದ ಮೇಷ್ಟ್ರಿಗೆ ಫೋನ್ ಮಾಡಿ, ಎಲ್ಲವನ್ನೂ ವಿವರಿಸಿದ. ಮೇಷ್ಟ್ರು ತಕ್ಷಣವೇ-'ಬ್ಯಾಡ ಕಣೋ. ದ್ವೇಷ ಯಾವತ್ತೂ ನಿನ್ನನ್ನೇ ಸುಟ್ಟು ಹಾಕುತ್ತೆ. ಒಳ್ಳೇತನದೊಂದಿಗೆ ಬದುಕು. ತಪ್ಪು ಮಾಡಿದವರು ಅನುಭವಿಸ್ತಾರೆ. ನೀನೂ ಅಡ್ಡ ದಾರಿ ಹಿಡೀಬೇಡ. ದ್ವೇಷದ ಹಾದೀಲಿ ಹೋದ್ರೆ ಸರ್ವನಾಶ ಆಗಿಬಿಡ್ತೀಯ ಕಣೋ. ಒಳ್ಳೆಯವನಾಗಿ ಬದುಕೋಕೆ ನೂರು ದಾರಿ ಇವೆ. ಆ ಕಡೆಗೆ ತಿರುಗಿ ನೋಡೋ. ನನ್ನ ಮಾತು ತೆಗೆದು ಹಾಕ್ಬೇಡ ಕಣೋ...' ಎಂದರು. ಮುಂದಿನ ಎರಡು ದಿನ ಗಂಗಾಧರನ ಮನಸ್ಸಿನೊಳಗೆ ಮಹಾಯುದ್ಧವೇ ನಡೆಯಿತು. ಆನಂತರವೇ ಆತ ತನಗೆ ತೊಂದರೆ ನೀಡಿದ್ದವರ ಚಿತ್ರಗಳನ್ನು ಮನಸ್ಸಿನಿಂದ ಕಿತ್ತುಹಾಕಿ, ತಾನೇ ಹೊಸದೊಂದು ಫ್ಯಾಕ್ಟರಿ ಆರಂಭಿಸುವ ನಿರ್ಧಾರಕ್ಕೆ ಆತ ಬಂದಿದ್ದು... ಅದುವರೆಗಿನ ಅನುಭವ ಜೊತೆಗಿತ್ತಲ್ಲ: ಹಾಗಾಗಿ ಗಂಗಾಧರನಿಗೆ ಚಿಂತೆಯಿರಲಿಲ್ಲ. ಆಗಷ್ಟೇ ಓದು ಮುಗಿಸಿ ಬಂದವರನ್ನು, ಕೆಲಸದ ಅಗತ್ಯವಿದ್ದ ತರುಣರನ್ನು ಆತ ನೇಮಕ ಮಾಡಿಕೊಂಡ. ಹೆಚ್ಚಿನ ಲಾಭ ಬೇಡವೇ ಬೇಡ. ಹೂಡಿದ ಬಂಡವಾಳ ಹಿಂತಿರುಗಿದರೆ ಸಾಕು ಎಂದುಕೊಂಡ ಗಂಗಾಧರ, ಪ್ರತಿಸ್ಪರ್ಧಿ ಕಂಪನಿಗಳಿಗಿಂತ ಕಡಿಮೆ ಬೆಲೆಗೆ, ತನ್ನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟ. ನೌಕರರು ಮತ್ತು ಅವರ ಸಂಬಳವೂ ಕಡಿಮೆ ಇದ್ದುದರಿಂದ ಹೀಗೆಲ್ಲ ರಿಸ್ಕ್ ತಗೊಳ್ಳಲು ಅವನಿಗೆ ಸಾಧ್ಯವಾಯಿತು. ಇಂಥದೇ ಕೆಲಸಕ್ಕೆ ಉಳಿದ ದೊಡ್ಡ ಕಂಪನಿಗಳೂ ಮುಂದಾಗಿದ್ದರೆ ಅವರಿಗೆ ವಿಪರೀತ ಲಾಸ್ ಆಗುತ್ತಿತ್ತು. ಹಾಗಾಗಿ ಯಾರೂ ಅಂಥ ಸಾಹಸಕ್ಕೆ ಕೈ ಹಾಕಲಿಲ್ಲ. ಪರಿಣಾಮ, ಫ್ಯಾಕ್ಟರಿ ಆರಂಭಿಸಿದ ಮೂರೇ ವರ್ಷದಲ್ಲಿ ಗಂಗಾಧರ ಲಕ್ಷಾಧಿಪತಿಯಾದ. ಮುಂದಿನ ಐದು ವರ್ಷದಲ್ಲಿ ಯಾವುದೇ ತೊಂದರೆಯಿಲ್ಲದೆ ಫ್ಯಾಕ್ಟರಿ ನಡೆಸುವಷ್ಟು ಲಾಭ ಬಂತು. ಅದಕ್ಕಿಂತ ಹೆಚ್ಚಾಗಿ, ಅವನ ಪುಟ್ಟ ಫ್ಯಾಕ್ಟರಿಯಿಂದ 48 ಮಂದಿಗೆ ನೌಕರಿ ದೊರಕಿ, ಅಷ್ಟೂ ಕುಟುಂಬಗಳ ಹೊಟ್ಟೆಪಾಡಿಗೆ ಒಂದು ದಾರಿಯಾಯಿತು.ಹೀಗಿರುವಾಗಲೇ ಅದೊಂದು ದಿನ ಫ್ಯಾಕ್ಟರಿಯ ನೌಕರರೆಲ್ಲ ಒಟ್ಟಾಗಿ ಬಂದರು. 'ಯಜಮಾನ್ರೆ, ನೀವೀಗ ಗೆದ್ದಿದ್ದೀರಿ. ಈ ಖುಷಿಗೆ ಒಂದು ಕಾರ್ಯಕ್ರಮ ಮಾಡಿ ಎಂದು ಒತ್ತಾಯಿಸಿದರು. ಅದುವರೆಗೂ ತುರುಸಿನ ಸ್ಪರ್ಧೆಯ ಲೆಕ್ಕಾಚಾರದಲ್ಲಿಯೇ ಮುಳುಗಿ ಹೋಗಿದ್ದ ಗಂಗಾಧರನಿಗೆ ನೌಕರರ ಮಾತಲ್ಲೂ ಸತ್ಯವಿದೆ ಅನ್ನಿಸಿತು. ಕಾರ್ಯಕ್ರಮ ಅಂದ ಮೇಲೆ, ಅದಕ್ಕೆ ಅತಿಥಿಗಳು ಬೇಡವೆ? ಅವನನ್ನು ಸದಾ ಎಚ್ಚರಿಸುತ್ತಿದ್ದ ಮೇಷ್ಟ್ರು ತಿಂಗಳ ಹಿಂದೆ ತೀರಿಹೋಗಿದ್ದರು. ಸಂದರ್ಭ ಹೀಗಿರುವಾಗ, ತನ್ನ ಯಶಸ್ಸಿಗೆ ಕಾರಣರಾದವರನ್ನು ಕಾರ್ಯಕ್ರಮಕ್ಕೆ ತರಬೇಕು ಎಂದು ಗಂಗಾಧರ ನಿರ್ಧರಿಸಿದ. ಆಗಲೇ ಅವನಿಗೆ ಮಿಂಚು ಹೊಳೆದಂತಾಗಿ ಅವರ ನೆನಪಾಗಿ ಹೋಯಿತು. ತನ್ನ ಮೇಲೆ ತಪ್ಪು ಮಾಹಿತಿ ನೀಡಿ ಕೆಲಸದಿಂದ ತೆಗೆಸಿದ ಮೆನೇಜರ್‌ಗಳು ಹಾಗೂ ಮಹಿಳೆಯರು! ಗಂಗಾಧರ ಸ್ವಗತದಲ್ಲಿ ಎಂಬಂತೆ ಹೇಳಿಕೊಂಡ: 'ಹೌದಲ್ಲವಾ? ಈ ನಾಲ್ಕು ಜನರ ಕಾರಣದಿಂದ ನೌಕರಿ ಕಳೆದುಕೊಳ್ಳದೇ ಹೋಗಿದ್ದರೆ, ಇವತ್ತಿಗೂ ನಾನು ಅದೇ ಫ್ಯಾಕ್ಟರಿಯಲ್ಲಿ ಆರ್ಡಿನರಿ ನೌಕರನಾಗಿಯೇ ಇರಬೇಕಿತ್ತು. ನಿಜ ಹೇಳಬೇಕೆಂದರೆ, ಇವತ್ತಿನ ನನ್ನ ಯಶಸ್ಸಿಗೆ, ಈ ಮೊದಲು ಕೆಲಸದಿಂದ ತೆಗೆಸಿದವರೇ ಕಾರಣ. ಪಾಪ, ಅವತ್ತಿನ ಸಂದರ್ಭದಲ್ಲಿ ಅವರ ಅನಿವಾರ್ಯತೆಗಳು ಏನೇನಿದ್ದವೋ? ಒಂದು ವೇಳೆ ನಾನು ಅವಿವೇಕದಿಂದ ಕೈಗೆ ಬುದ್ಧಿ ನೀಡಿದ್ದರೆ, ಈ ಹೊತ್ತಿಗೆ ಜೈಲಿನಲ್ಲಿ ಇರಬೇಕಾಗುತ್ತಿತ್ತು. ಅಂಥದೊಂದು ಅಪಾಯದಿಂದ ಮೇಷ್ಟ್ರು ನನ್ನನ್ನು ಪಾರು ಮಾಡಿದರು. ಕಾರ್ಯಕ್ರಮದ ದಿನ ಇದನ್ನೆಲ್ಲ ಹೇಳಬೇಕು...' ಗಂಗಾಧರ ತಡ ಮಾಡಲಿಲ್ಲ. ಅದೇ ಪೀಣ್ಯ ಇಂಡಸ್ಟ್ರಿಯಲ್ ಏರಿಯಾದ ದೊಡ್ಡ ಸಭಾಂಗಣದಲ್ಲಿ ಅದ್ದೂರಿ ಕಾರ್ಯಕ್ರಮ ಏರ್ಪಡಿಸಿದ. ತಾನು ನೌಕರಿ ಕಳೆದುಕೊಳ್ಳಲು ಕಾರಣವಾಗಿದ್ದವರನ್ನೇ ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಿದ.ಗಂಗಾಧರನೇನೋ ಹೊಸ ಕಂಪನಿಯ ನೆಪದಲ್ಲಿ ಯಶಸ್ಸಿನ ಏಣಿ ಹತ್ತಿದ್ದ. ಉದ್ಯಮಿ ಅನ್ನಿಸಿಕೊಂಡಿದ್ದ. ಆದರೆ ಹಿಂದೊಮ್ಮೆ ಅವನ ಪತನಕ್ಕೆ ಕಾರಣರಾಗಿದ್ದವರು ಹಿಂದಿನ ಸ್ಥಿತಿಯಲ್ಲೇ ಉಳಿದಿದ್ದರು. ಬಗೆಬಗೆಯ ಕಷ್ಟಗಳಿಗೆ ಸಿಕ್ಕಿಕೊಂಡಿದ್ದರು. ಈಗ, ಗಂಗಾಧರನ ಆಹ್ವಾನವನ್ನು ತಿರಸ್ಕರಿಸುವ ಸ್ಥಿತಿಯಲ್ಲಿ ಅವರಿರಲಿಲ್ಲ. ಮುಖ್ಯವಾಗಿ, ನೌಕರಿ ಕಳೆದುಕೊಂಡ ನಂತರವೂ ಇವರ ಮೇಲೆ ಹರಿಹಾಯುವ, ಕೆಟ್ಟದಾಗಿ ಕಮೆಂಟ್ ಮಾಡುವ ಪ್ರಯತ್ನಕ್ಕೆ ಗಂಗಾಧರ ಮುಂದಾಗಿರಲಿಲ್ಲ. ಐದಾರು ಬಾರಿ ಮುಖಾಮುಖಿಯಾದಾಗಲೂ ಸ್ನೇಹದ ನಗೆ ಬೀರಿ ಆತ ಹೋಗಿ ಬಿಟ್ಟಿದ್ದ. ಹಾಗಾಗಿ ಅವರೆಲ್ಲ, ಪಶ್ಚಾತ್ತಾಪದ ಭಾವದೊಂದಿಗೇ ಕಾರ್ಯಕ್ರಮಕ್ಕೆ ಬಂದಿದ್ದರು. ನಮ್ಮ ತಪ್ಪುಗಳನ್ನು ಮರೆತು ವೇದಿಕೇಲಿ ಕೂರಿಸಿದ್ದೀರ. ನಿಮ್ಮ ಮನಸ್ಸು ದೊಡ್ಡದು ಸಾರ್. ನಮ್ಮನ್ನು ಕ್ಷಮಿಸಿ ಬಿಡಿ ಎನ್ನುತ್ತಾ ಗದ್ಗದಿತರಾದರು. ಆ ಮಾತು ಕೇಳುತ್ತಿದ್ದಂತೆಯೇ, ಎಲ್ಲ ಬದಲಾವಣೆಗೂ ಕಾರಣವಾಗಿ, ಈಗ ಭಾವಚಿತ್ರದಲ್ಲಿ ನೆಲೆಯಾಗಿದ್ದ ಮೇಷ್ಟ್ರನ್ನೇ ಗಂಗಾಧರ ತದೇಕ ದೃಷ್ಟಿಯಿಂದ ನೋಡಿದ: ಅವರು-'ಒಳ್ಳೆಯವರಿಗೆ ಯಾವತ್ತೂ ಕೆಟ್ಟದಾಗೋದಿಲ್ಲ ಕಣೋ. ಒಳ್ಳೇತನವೆಂಬುದು ಆಕಾಶಕ್ಕೆ ಗುರಿ ಮಾಡಿ ನಿಲ್ಲುವ ಏಣಿ ಎಂಬುದು ಈಗಲಾದ್ರೂ ಅರ್ಥವಾಯ್ತೇನೋ' ಎಂದು ನಕ್ಕಂತೆ ಭಾಸವಾಯಿತು...
- ಎ.ಆರ್. ಮಣಿಕಾಂತ್armanikanth@gmail.com
No comments:
Post a Comment