ದಿನಗೂಲಿಗೆ ದುಡಿದವಳ ಕೈಯಲ್ಲೀಗ ಕೋಟಿ ಕೋಟಿ...

ಭಾವತೀರಯಾನ
ದಲಿತ ಕುಟುಂಬದ ಈ
ಹೆಣ್ಣು ಮಗಳಿಗೆ 12 ವರ್ಷಕ್ಕೇ ಮದುವೆಯಾಯಿತು. ಬ್ಯಾಡಲಕ್. ಒಂದೇ ವರ್ಷದ ಅವಧಿಯಲ್ಲಿ
ಮದುವೆ ಮುರಿದು ಬಿತ್ತು. ಪರಿಣಾಮ, ಆಕೆ ತವರಿಗೆ ಬಂದಳು. ಹೊಟ್ಟೆಪಾಡಿಗೆಂದು ಟೈಲರಿಂಗ್
ಶಾಪ್‌ವೊಂದರಲ್ಲಿ 2 ರುಪಾಯಿ ದಿನಗೂಲಿಯ ನೌಕರಿಗೆ ಸೇರಿಕೊಂಡಳು. ಇದೆಲ್ಲಾ 1979-80ರ
ದಶಕದ ಮಾತು. ಈಗ ಏನಾಗಿದೆ ಗೊತ್ತೆ? ಅದೇ ದಲಿತ ಮಹಿಳೆ 1000 ಕೋಟಿ ರೂ. ವ್ಯವಹಾರದ
ಉದ್ಯಮವೊಂದರ ಮುಖ್ಯಸ್ಥೆಯಾಗಿದ್ದಾಳೆ. ಈಕೆಯ ಒಡೆತನದಲ್ಲಿ ಶಾಲೆ-ಕಾಲೇಜುಗಳಿವೆ. ಸಕ್ಕರೆ
ಕಾರ್ಖಾನೆಯಿದೆ. ರಿಯಲ್ ಎಸ್ಟೇಟ್ ಏಜೆನ್ಸಿಯಿದೆ. ಕಮನಿ ಟ್ಯೂಬ್ಸ್ ಲಿಮಿಟೆಡ್ ಎಂಬ
ಬಹುದೊಡ್ಡ ಫ್ಯಾಕ್ಟರಿಯಿದೆ. ಮುಂಬಯಿಯಲ್ಲಿ ಮುಖೇಶ್ ಅಂಬಾನಿಯ ಆಫೀಸ್ ಇದೆಯಲ್ಲ; ಅದೇ
ರಸ್ತೆಯಲ್ಲಿ ಈಕೆಯ ಕಚೇರಿಯೂ ಇದೆ. ಈಕೆಯ ಹೆಸರು ಕಲ್ಪನಾ ಸರೋಜ್.ಇಂಟರ್‌ನೆಟ್‌ನಲ್ಲಿ
ಹೀಗೆಂದು ವಿವರಣೆ ಕಂಡಾಗ, ಆಶ್ಚರ್ಯ- ಸಂತೋಷ ಒಟ್ಟೊಟ್ಟಿಗೇ ಆಯಿತು. ಪುರುಷರ ದರ್ಬಾರು
ಜೋರಾಗಿರುವ ಉದ್ಯಮ ಕ್ಷೇತ್ರದಲ್ಲಿ ಹೆಂಗಸೊಬ್ಬಳು ಯಶಸ್ಸು ಕಂಡಿರುವುದು ಅಚ್ಚರಿಗೆ
ಕಾರಣವಾದರೆ, ಇಡೀ ದೇಶದ ಹೆಣ್ಣು ಮಕ್ಕಳಿಗೆ ರೋಲ್ ಮಾಡೆಲ್ ಆಗುವಂಥ ವ್ಯಕ್ತಿತ್ವದ ಈಕೆ
ದಲಿತ ಕುಟುಂಬದಿಂದ ಬಂದವಳು ಎಂಬುದು ಸಂತೋಷಕ್ಕೆ ಕಾರಣವಾಯಿತು. ಈವರೆಗೂ ನಡೆದು ಬಂದ
ಹಾದಿಯ ಬಗ್ಗೆ ಅವರಿಂದಲೇ ಕೇಳಿದರೆ ಚೆಂದ ಎಂದುಕೊಂಡು, 15 ದಿನಗಳ ಸತತ ಪ್ರಯತ್ನದಿಂದ
ಕಲ್ಪನಾ ಅವರ ಮೊಬೈಲ್ ನಂಬರ್ ಪಡೆದಿದ್ದಾಯ್ತು. ಈ ಕಡೆಯಿಂದ 'ಹಲೋ' ಅನ್ನುತ್ತಿದ್ದಂತೆಯೇ
ತುದಿಯಲ್ಲಿದ್ದ ಕಲ್ಪನಾ ಹೇಳಿದರು: 'ನಂಗೆ ಅಷ್ಟೊಂದು ಒಳ್ಳೆಯ ಇಂಗ್ಲಿಷ್ ಬರಲ್ಲ.
ಹಿಂದೀಲಿ ಮಾತಾಡೋಣ. ಆಗಬಹುದಾ?' 'ಖಂಡಿತ ಮೇಡಂ' ಅನ್ನುತ್ತಿದ್ದಂತೆಯೇ ಆಕೆ ತುಸು
ಸಂಕೋಚದಿಂದಲೇ ತಮ್ಮ ಬದುಕಿನ ಕಥೆ ಹೇಳಲು ಆರಂಭಿಸಿದರು:----'ಮಹಾರಾಷ್ಟ್ರದ
ಅಕೋಲಾ ಜಿಲ್ಲೆಯ ರೂಪರ್‌ಖೇಡಾ ಎಂಬ ಹಳ್ಳಿ ನನ್ನ ಹುಟ್ಟೂರು. ನಮ್ಮ ತಂದೆಗೆ ಪೊಲೀಸ್
ಇಲಾಖೆಯ ದಫೇದಾರ್ ನೌಕರಿಯಿತ್ತು. ದಲಿತರು ಎಂಬ ಕಾರಣಕ್ಕೆ ಶಾಲೆಯಲ್ಲಿ ನನಗೆ ದಿನವೂ
ಅವಮಾನವಾಗುತ್ತಿತ್ತು. ಸಹಪಾಠಿಗಳು ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಆಟಕ್ಕೂ
ಸೇರಿಸಿಕೊಳ್ಳುತ್ತಿರಲಿಲ್ಲ. ಮನೆಯಲ್ಲಿ ಈ ವಿಷಯ ತಿಳಿಸಿದರೆ- 'ಅದನ್ನೆಲ್ಲ ಮನಸ್ಸಿಗೆ
ತಗೋಬೇಡ ಮಗಳೇ. ಚೆನ್ನಾಗಿ ಓದು. ವಿದ್ಯೆ ಇವತ್ತಲ್ಲ ನಾಳೆ ನಿನ್ನ ಕೈ ಹಿಡಿಯುತ್ತೆ'
ಅನ್ನುತ್ತಿದ್ದರು ಅಪ್ಪ. ಮುಂದೆ ನಮ್ಮ ಕುಟುಂಬಕ್ಕೆ ಒಂದರ ಹಿಂದೊಂದು ಕಷ್ಟಗಳು ಬಂದವು.
ಹಣಕಾಸಿನ ಮುಗ್ಗಟ್ಟು ಕಾಣಿಸಿಕೊಂಡಿತು. ಈ ಸಂದರ್ಭದಲ್ಲಿಯೇ, ಕುಟುಂಬದ ಹಿರಿಯರ
ಒತ್ತಡಕ್ಕೆ ಮಣಿದು 1973ರಲ್ಲಿ ನನಗೆ ಮದುವೆ ಮಾಡಿಬಿಟ್ಟರು. ಆಗ ನನಗೆ ಬರೀ 12 ವರ್ಷ.
ನನ್ನ ಗಂಡ ಅನ್ನಿಸಿಕೊಂಡಿದ್ದವನಿಗೆ 22 ವರ್ಷ! ಗಂಡನ ಕುಟುಂಬದವರಿದ್ದುದು
ಮುಂಬಯಿಯ ಸ್ಲಂನಲ್ಲಿ. ಆ ಮಹಾನಗರಕ್ಕೆ ಬಂದ ದಿನ ಗಾಬರಿಯಿಂದ ನಡುಗಿಹೋಗಿದ್ದೆ. ಕಾರಣ,
ನಮ್ಮ ಊರಲ್ಲಿ ಇದ್ದುದು ಒಂದೇ ರಸ್ತೆ. ಆದರೆ ಮುಂಬಯಿಯಲ್ಲಿ ಯಾವ ಕಡೆಗೆ ತಿರುಗಿದರೂ
ರಸ್ತೆಗಳೇ ಕಾಣುತ್ತಿದ್ದವು. ಯಾವತ್ತಾದ್ರೂ ಒಮ್ಮೆ ದಾರಿ ತಪ್ಪಿಬಿಟ್ಟರೆ ಗತಿ ಏನು
ಎಂಬುದು ನನ್ನ ಗಾಬರಿಗೆ ಕಾರಣವಾಗಿತ್ತು.ಗಂಡನ ಮನೆ ನನ್ನ ಪಾಲಿಗೆ ಅಕ್ಷರಶಃ ನರಕವಾಯಿತು. ಆ ಕುಟುಂಬದವರೆಲ್ಲ ಒಟ್ಟಾಗಿ ನನ್ನನ್ನು ಥಳಿಸುತ್ತಿದ್ದರು. ಚುಚ್ಚು ಮಾತುಗಳಿಂದ ಹಂಗಿಸುತ್ತಿದ್ದರು. ಹಿಂತಿರುಗಿ ಮಾತನಾಡಿದರೆ ರೂಂನಲ್ಲಿ ಕೂಡಿ ಹಾಕುತ್ತಿದ್ದರು. ಉಪವಾಸ ಕೆಡವುತ್ತಿದ್ದರು. ಅದೊಮ್ಮೆ ಇದ್ದಕ್ಕಿದ್ದಂತೆ ಮುಂಬಯಿಗೆ ಬಂದ ತಂದೆಯವರು, ನನ್ನ ಪರಿಸ್ಥಿತಿ ಕಂಡು ಕಣ್ಣೀರಾದರು. ನನ್ನ ಗಂಡನನ್ನು ಕರೆದು-'ನನ್ನ ಮಗಳು ನನಗೆ ಹೊರೆಯಲ್ಲ. ನಿಮ್ಮ ಸಂಬಂಧ ನಮಗೆ ಬೇಕಾಗಿಲ್ಲ. ಮಗಳನ್ನು ಕರ್ಕೊಂಡ್ ಹೋಗ್ತೇನೆ' ಅಂದರು. ನಾನು ಹಿಂದೆ ಮುಂದೆ ಯೋಚಿಸದೆ ಎದ್ದುಬಂದೆ.ಹೊಸ ಬದುಕಿನ ಕನಸು ನುಚ್ಚು ನೂರಾಗಿತ್ತು. ಮುಂದೇನು ಎಂದು ಯೋಚಿಸುತ್ತಿದ್ದಾಗಲೇ ತಮ್ಮ ಇಲಾಖೆಯಲ್ಲಿ ಏನಾದರೂ ಕೆಲಸ ಕೊಡಿಸಿ, ಬದುಕಿಗೆ ದಾರಿ ತೋರಲು ಅಪ್ಪ ಮುಂದಾದರು. ಅಪ್ರಾಪ್ತೆ ಎಂಬ ಕಾರಣಕ್ಕೆ ಅಲ್ಲಿ ಕೆಲಸ ಕೊಡಲಿಲ್ಲ. ಮನೇಲಿದ್ದುಕೊಂಡು ಮಾಡುವುದೇನು ಅನ್ನಿಸಿದಾಗ ಮತ್ತೆ ಶಾಲೆಗೆ ಸೇರಿದೆ. 9ನೇ ತರಗತಿಯ ಪರೀಕ್ಷೆ ಬರೆದೆ. ಈ ವೇಳೆಗೆ, ಊರಿನ ಎಲ್ಲರಿಗೂ ನಾನು ಗಂಡನ ಮನೆಯಿಂದ ಹೊರಬಂದಿರುವ ವಿಷಯ ತಿಳಿದಿತ್ತು. ಅವತ್ತಿನ ಸಂದರ್ಭದಲ್ಲಿ, ಗಂಡನ ಮನೆಬಿಟ್ಟು ಬರುವುದೇ ಮಹಾಪರಾಧ ಎಂಬ ನಂಬಿಕೆಯಿತ್ತು. ಈ ಕಾರಣದಿಂದಲೇ ಊರಿನ ಜನರೆಲ್ಲ ಬಾಯಿಗೆ ಬಂದಂತೆ ಹಂಗಿಸಿದರು. ಏನೇನೋ ಕಥೆ ಕಟ್ಟಿ ನನ್ನ ಚಾರಿತ್ರ್ಯವಧೆಗೆ ಮುಂದಾದರು. ಅವರಿವರಿಂದ ಹೀಗೆಲ್ಲ ಅನ್ನಿಸಿಕೊಂಡು ಬದುಕಿರುವುದಕ್ಕಿಂತ ಸತ್ತು ಹೋಗುವುದೇ ಮೇಲು ಅನ್ನಿಸಿತು. ಅದೊಂದು ದಿನ ಗಟ್ಟಿ ನಿರ್ಧಾರ ಮಾಡಿ ಮನೇಲಿದ್ದ ಕೀಟನಾಶಕವನ್ನು ಕುಡಿದುಬಿಟ್ಟೆ. ಅರ್ಧಗಂಟೆಯ ನಂತರ ನಾನು ಗೊರಗೊರ ಸದ್ದು ಹೊರಡಿಸುತ್ತಾ, ನೊರೆ ಕಕ್ಕುತ್ತಾ ಬಿದ್ದಿರುವುದನ್ನು ಕಂಡ ಮನೆಯವರು ತಕ್ಷಣವೇ ಆಸ್ಪತ್ರೆಗೆ ಸೇರಿಸಿದರಂತೆ. ಹಾಗಾಗಿ ಬದುಕಿಕೊಂಡೆ.ನಾನು ಸಾವಿನ ಮನೆಯ ಬಾಗಿಲು ತಟ್ಟಿ ತಿಂಗಳು ಕಳೆದಿರಲಿಲ್ಲ. ಆಗಲೇ, ಯಾವುದೋ ಕಾರಣಕ್ಕೆ ಅಪ್ಪನನ್ನು ನೌಕರಿಯಿಂದ ಸಸ್ಪೆಂಡ್ ಮಾಡಲಾಯಿತು. ಪರಿಣಾಮ, ನಮ್ಮ ಕುಟುಂಬಕ್ಕೆ ಅನ್ನದ ದಾರಿಯೇ ಬಂದ್ ಆದಂತಾಯ್ತು. ಹೊಟ್ಟೆಪಾಡಿನ ಕಾರಣಕ್ಕೆ ಬಂಧುಗಳೊಬ್ಬರ ಜೊತೆ ಮತ್ತೆ ಮುಂಬಯಿಗೆ ಬಂದೆ. ಒಂದು ಟೈಲರಿಂಗ್ ಶಾಪ್‌ನಲ್ಲಿ 2 ರೂ. ದಿನಗೂಲಿಯ ನೌಕರಿಗೆ ಸೇರಿದೆ. ಈ ಸಂದರ್ಭದಲ್ಲಿಯೇ ತೀವ್ರ ಅನಾರೋಗ್ಯದಿಂದ ತಂಗಿ ಆಸ್ಪತ್ರೆ ಸೇರಿದಳು. ಅವತ್ತು ನಮ್ಮಲ್ಲಿ ಹತ್ತು ಮಾತ್ರೆ ಖರೀದಿಗೆ ಆಗುವಷ್ಟೂ ಹಣವಿರಲಿಲ್ಲ. ನೆಮ್ಮದಿಯ ಬದುಕಿಗೆ ದುಡ್ಡು ತುಂಬಾ ಮುಖ್ಯ ಅನಿಸಿದ್ದೇ ಆಗ. ಟೈಲರಿಂಗ್ ಶಾಪ್‌ನಲ್ಲಿ ತುಂಬ ಶ್ರದ್ಧೆಯಿಂದ ದುಡಿದೆ. ಅದನ್ನು ಗಮನಿಸಿದ ಮಾಲೀಕರು ತಿಂಗಳ ಸಂಬಳವನ್ನು 60 ರೂ.ಗಳಿಂದ 400 ರೂ.ಗೆ ಏರಿಸಿದರು. ಇದಿಷ್ಟೂ ನಡೆದದ್ದು 1978-79ರಲ್ಲಿ.ಈ ಸಂದರ್ಭದಲ್ಲಿಯೇ ಅಲ್ಮೇರಾ ತಯಾರಿಸಿ ಮಾರುವ ವ್ಯಕ್ತಿಯೊಬ್ಬನ ಪರಿಚಯವಾಯಿತು. ಅದೇ ಮುಂದೆ ಸ್ನೇಹವಾಗಿ, ಮದುವೆಯಲ್ಲಿ ಕೊನೆಗೊಂಡಿತು. ನಮ್ಮ ದಾಂಪತ್ಯಕ್ಕೆ ಅಮರ್-ಸೀಮಾ ಎಂಬ ಮಕ್ಕಳಾದರು. ಗಂಡನ ಸಹವಾಸದಲ್ಲಿ ಅಲ್ಮೇರಾ ಬಿಜಿನೆಸ್‌ನ ಗುಟ್ಟುಗಳನ್ನೆಲ್ಲ ನಾನೂ ತಿಳಿದುಕೊಂಡೆ. ಈ ಸಂದರ್ಭದಲ್ಲಿ ನಮ್ಮ ಸಂಪಾದನೆ ಸಾವಿರದ ಗಡಿದಾಟಿ ಲಕ್ಷ ರೂಪಾಯಿಗೆ ತಲುಪಿತು. ಅಬ್ಬಾ, ಕೊನೆಗೂ ಲೈಫ್‌ನಲ್ಲಿ ಸೆಟ್ಲಾದೆ ಎಂದು ನಾನು ಉದ್ಗರಿಸುವ ಮೊದಲೇ ಅನಾಹುತ ನಡೆದು ಹೋಯಿತು. 1989ರ ಅದೊಂದು ಮುಂಜಾನೆ, ತೀವ್ರ ಹೃದಯಾಘಾತದಿಂದ ಗಂಡ ತೀರಿಕೊಂಡ.ಈ ಸಂದರ್ಭದಲ್ಲಿ ಮತ್ತೆ ಚುಚ್ಚು ಮಾತುಗಳ ದಾಳಿ ಶುರುವಾಯಿತು. 'ಇವಳ ಕಾಲ್ಗುಣ ಚನ್ನಾಗಿಲ್ಲ, ಗಂಡನನ್ನು ತಿನ್ಕೊಂಡ್ಳು' ಎಂದೆಲ್ಲಾ ಜನ ಹಂಗಿಸಿದರು. ಆಗೆಲ್ಲಾ ನಾನು ಕಿವುಡಿಯಂತೆ ಉಳಿದುಬಿಟ್ಟೆ. ಒಂದು ಮಹತ್ವದ ಸಾಧನೆಯೊಂದಿಗೆ ಎಲ್ಲರಿಗೂ ಉತ್ತರ ಕೊಡಬೇಕು ಎಂದು ನಿರ್ಧರಿಸಿದೆ. ಅಲ್ಮೇರಾ ಬಿಜಿನೆಸ್‌ನಲ್ಲಿ ಉಳಿಸಿದ್ದ 5 ಲಕ್ಷ ರೂ. ಹಣದಿಂದ ಒಂದು ಕಡೆ ಸೈಟ್ ಖರೀದಿಸಿ, ಬ್ಯಾಂಕ್ ಸಾಲ ಪಡೆದು ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಿಸಿದೆ. ಕಟ್ಟಡ ಎದ್ದು ನಿಂತ ಮೇಲೆ ಅಂಡರ್‌ವರ್ಲ್ಡ್‌ನ ರೌಡಿಯೊಬ್ಬ ಬಂದು- 'ನಿನ್ನನ್ನು ಮುಗಿಸೋಕೆ ಐದು ಲಕ್ಷಕ್ಕೆ ಸುಪಾರಿ ಕೊಟ್ಟಿದ್ದಾರೆ. ನೀನು ಈ ಕಾಂಪ್ಲೆಕ್ಸ್‌ನ ಮರೆತು ಎದ್ದು ಹೋಗು. ಇಲ್ಲಾಂದ್ರೆ ಎರಡೇ ದಿನದಲ್ಲಿ ಹೆಣ ಬೀಳುತ್ತೆ' ಅಂದ. ನನ್ನ ಭವಿಷ್ಯಕ್ಕೆ ಬೆಂಕಿ ಹಾಕಲು ಬಂದವರನ್ನು ಕಂಡು ಸಿಟ್ಟುಬಂತು. ಆಗಿದ್ದಾಗಲಿ ಎಂದು ನಿರ್ಧರಿಸಿ ಅವತ್ತೇ ಪೊಲೀಸ್ ಕಮಿಷನರ್‌ಗೆ ದೂರು ಕೊಟ್ಟೆ. ಬೆದರಿಸಲು ಬಂದಿದ್ದವನು ಜೈಲು ಪಾಲಾದ. ನಂತರ, ದೊಡ್ಡ ಲಾಭಕ್ಕೆ ಶಾಪಿಂಗ್ ಕಾಂಪ್ಲೆಕ್ಸ್ ಮಾರಿದೆ.ಆ ವೇಳೆಗೆ ಕೈಗಾರಿಕಾ ಕ್ಷೇತ್ರದ ಗುಟ್ಟುಗಳು ಅರ್ಥವಾಗಿದ್ದವು. ಒಂದು ಕಂಪನಿಯ ಲಾಭ-ನಷ್ಟವನ್ನು ಹೇಗೆ ಅಂದಾಜು ಮಾಡಬೇಕು ಎಂಬ ಸೂಕ್ಷ್ಮವೂ ತಿಳಿದಿತ್ತು. ಅದಕ್ಕಿಂತ ಹೆಚ್ಚಾಗಿ, ಮಾರ್ಕೆಟಿಂಗ್ ವಿಭಾಗದಲ್ಲಿ ಪಳಗಿದ ಕೈ ಅನ್ನಿಸಿಕೊಂಡಿದ್ದ ಅಧಿಕಾರಿಗಳ ಪರಿಚಯವಾಗಿತ್ತು. ಅವರೆಲ್ಲರ ಸಲಹೆ ಪಡೆದು ಮೊದಲಿಗೆ ಅಹಮದ್‌ನಗರದಲ್ಲಿರುವ ಸಾಯಿಕೃಪಾ ಸಕ್ಕರೆ ಕಾರ್ಖಾನೆಯಲ್ಲಿ ಶೇ.60 ರಷ್ಟು ಷೇರು ಖರೀದಿಸಿದೆ. ಕೆಲವೇ ದಿನಗಳಲ್ಲಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕಿಯಾದೆ. ಕಲ್ಪನಾ ಸರೋಜ್ ಅಸೋಸಿಯೇಟ್ಸ್ ಎಂಬ ನನ್ನದೇ ಸಂಸ್ಥೆ ಆರಂಭಿಸಿದೆ. ಹೀಗಿರುವಾಗಲೇ ನನ್ನ ಸತ್ವ ಪರೀಕ್ಷೆ ನಡೆಸುವಂಥ ಒಂದು ಸಂದರ್ಭ ಎದುರಾಯ್ತು. ಇದಾದದ್ದು 2006ರಲ್ಲಿ.ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರ ಪರಮಾಪ್ತರಾಗಿದ್ದ ರಾಮ್‌ಜಿ ಕಮನಿ, 1975ರಲ್ಲಿ ಮುಂಬಯಿನ ಕುರ್ಲಾದಲ್ಲಿ ಕಮನಿ ಟ್ಯೂಬ್ಸ್ ಎಂಬ ಫ್ಯಾಕ್ಟರಿ ಆರಂಭಿಸಿದ್ದರು. ಐದಾರು ವರ್ಷ ಲಾಭದಲ್ಲಿ ನಡೆದ ಫ್ಯಾಕ್ಟರಿ ನಂತರ ನಷ್ಟಕ್ಕೆ ಬಿತ್ತು. ಆಡಳಿತ ಮಂಡಳಿಯ ನಿರಾಸಕ್ತಿಯಿಂದ ಸಮಸ್ಯೆ ದಿನೇ ದಿನೆ ಹೆಚ್ಚಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಧೋರಣೆಯನ್ನು ಪ್ರತಿಭಟಿಸಿ ಕಾರ್ಮಿಕರು ಕೋರ್ಟ್‌ಗೆ ಹೋದರು. ಆಗ, ಕಾರ್ಮಿಕ ಮಂಡಳಿಯೇ ಫ್ಯಾಕ್ಟರಿ ನಡೆಸಲಿ ಎಂದು ನ್ಯಾಯಾಲಯ ಆದೇಶಿಸಿತು. ಎರಡು ವರ್ಷದ ನಂತರ ಈ ಪ್ರಯೋಗವೂ ವಿಫಲವಾಗಿ ಫ್ಯಾಕ್ಟರಿಗೆ ಶಾಶ್ವತವಾಗಿ ಬೀಗ ಬಿತ್ತು. ಈ ಫ್ಯಾಕ್ಟರಿಯನ್ನು ಖರೀದಿಸಿ ಮತ್ತೆ ಆರಂಭಿಸಬಾರದೇಕೆ ಅನ್ನಿಸಿತು. ನನ್ನೊಂದಿಗಿದ್ದ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತುಕತೆಗೆ ಮುಂದಾದೆ. ಇದು 2006ರ ಮಾತು. ಆ ಸಂದರ್ಭದಲ್ಲಿ ಕಮನಿ ಟ್ಯೂಬ್ಸ್ ಕಂಪನಿಯ ಮೇಲೆ 140 ಕೇಸ್‌ಗಳಿದ್ದವು. 116 ಕೋಟಿ ಸಾಲದ ಹೊರೆಯಿತ್ತು. 500ಕ್ಕೂ ಹೆಚ್ಚು ನೌಕರರಿಗೆ ಪಿ.ಎಫ್. ನೀಡಬೇಕಿತ್ತು. ಆಗಿದ್ದು ಆಗಿಹೋಗಲಿ ಎಂದು ಭಂಡ ಧೈರ್ಯದೊಂದಿಗೆ ಹಳೆಯ ಫ್ಯಾಕ್ಟರಿ ಖರೀದಿಗೆ ಮುಂದಾದೆ. ಕಂಪನಿಯ ಮಾಲೀಕರು ಮೊದಲ ಕಂತಾಗಿ 65 ಲಕ್ಷದ ಚೆಕ್ ಕೇಳಿದರು. ತಕ್ಷಣವೇ ಬರೆದುಕೊಟ್ಟೆ. ನನ್ನ ಹಿನ್ನೆಲೆ ತಿಳಿದು-'ಒಬ್ಬ ದಲಿತ ಮಹಿಳೆಯಾಗಿ ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆದಿದ್ದೀಯಾ? ವೆರಿಗುಡ್' ಎಂದರು. ಮುಂದೆ ಫ್ಯಾಕ್ಟರಿ ಪುನರಾರಂಭವಾಯಿತು. ಈ ವೇಳೆಗೆ ಹಲವು ನೌಕರರು ನಿಧನರಾಗಿದ್ದರು. ಅವರಿಗೆಲ್ಲಾ ಕಾನೂನಿನ ಪ್ರಕಾರ ಪರಿಹಾರ ನೀಡಿದ್ದಾಯ್ತು.ಈಗ ನಮ್ಮ ಫ್ಯಾಕ್ಟರಿಯಲ್ಲಿ ಹಳೆಯ ನೌಕರರಿದ್ದಾರೆ. ಹೊಸದಾಗಿ ಸೇರಿದ ಯುವಕರೂ ಇದ್ದಾರೆ. ರೆಫ್ರಿಜರೇಟರ್‌ನಲ್ಲಿ ಬಳಕೆಯಾಗುವ ಹವಾನಿಯಂತ್ರಿತ ಟ್ಯೂಬ್‌ಗಳು ಹಾಗೂ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹೆಚ್ಚಾಗಿ ಬಳಕೆಯಾಗುವ ಕಾಪರ್ ಕಾಯಿಲ್‌ಗಳನ್ನು ಕಮನಿ ಟ್ಯೂಬ್ಸ್ ಕಂಪನಿ ಉತ್ಪಾದಿಸುತ್ತದೆ. 2006ರಲ್ಲಿ ಮೈತುಂಬಾ ಸಾಲದ ಹೊರೆ ಹೊತ್ತಿದ್ದ ನಮ್ಮ ಕಂಪನಿ, ಇವತ್ತು ಬಹುದೊಡ್ಡ ಲಾಭದೊಂದಿಗೆ ಮುನ್ನಡೆಯುತ್ತಿದೆ. ಒಂದು ಕಾಲದಲ್ಲಿ ಕೇವಲ 2 ರೂಪಾಯಿ ಸಂಬಳಕ್ಕೆ ಹತ್ತು ಗಂಟೆ ದುಡಿದವಳು ನಾನು. ಬಡತನದ ಸಂಕಟ ಎಂಥದೆಂದು ಉಳಿದವರಿಗಿಂತ ನನಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ನಮ್ಮ ಕಂಪನಿಯಲ್ಲಿರುವ ಎಲ್ಲ ನೌಕರರಿಗೂ ಕೈ ತುಂಬ ಸಂಬಳ ಕೊಡ್ತೇನೆ.ನೌಕರರೂ ಅಷ್ಟೆ: ತುಂಬ ಸಂಭ್ರಮದಿಂದ ದುಡಿಯುತ್ತಿದ್ದಾರೆ. ಪರಿಣಾಮವಾಗಿ ಇವತ್ತು ಕಮನಿ ಟ್ಯೂಬ್ಸ್‌ನ ಉತ್ಪನ್ನಗಳಿಗೆ ದೇಶ-ವಿದೇಶಗಳಲ್ಲಿ ವಿಪರೀತ ಬೇಡಿಕೆ ಸೃಷ್ಟಿಯಾಗಿದೆ. ಪುನರ್ ಪ್ರಾರಂಭವಾದ ಆರು ವರ್ಷಗಳಲ್ಲಿ ಕಂಪನಿಯ ಲಾಭ 200 ಕೋಟಿ ದಾಟಿದೆ. ಈಗ ಅಹಮದಾಬಾದ್‌ನಲ್ಲಿರುವ ಸಾಯಿಕೃಪಾ ಸಕ್ಕರೆ ಕಾರ್ಖಾನೆಯ ಒಡೆತನವೂ ನನ್ನದಾಗಿದೆ.
ಕಲ್ಪನಾ ಸರೋಜ್ ಅಸೋಸಿಯೇಟ್ಸ್ ಹೆಸರಲ್ಲಿ ರಿಯಲ್ ಎಸ್ಟೇಟ್ ಏಜೆನ್ಸಿಯಿದೆ. ಅಂಬೇಡ್ಕರ್, ಜ್ಯೋತಿ ಬಾಪುಲೆಯವರ ಹೆಸರಲ್ಲಿ ಶಾಲೆ-ಕಾಲೇಜುಗಳಿವೆ. ಸ್ಟೀಲ್ ತಯಾರಿಕಾ ಕಂಪನಿ ಆರಂಭಿಸಿದ್ದೇನೆ. ದೇಶ- ವಿದೇಶ ತಿರುಗಿ ಬಂದಿದ್ದೇನೆ. ನೂರಾರು ಪ್ರಶಸ್ತಿ ಸ್ವೀಕರಿಸಿದ್ದೇನೆ. ಕೈಗಾರಿಕಾ ಕ್ಷೇತ್ರದ ದಂತಕತೆಯಾಗಿರುವ ರತನ್‌ಟಾಟಾ ಹಾಗೂ ಮುಖೇಶ್ ಅಂಬಾನಿ, ನನ್ನ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತುಗಳಾಡಿದ್ದಾರೆ. ಒಂದು ಕಾಲದಲ್ಲಿ ಮುಂಬಯಿಯ ರಸ್ತೆಗಳನ್ನು ಕಂಡು ಗಡಗಡ ನಡುಗಿದ್ದವಳು ನಾನು. ಆದರೆ ಇವತ್ತು ಕಮನಿ ಟ್ಯೂಬ್ಸ್ ರೋಡ್ ಎಂದೇ ಒಂದು ರಸ್ತೆಯನ್ನು ಗುರುತಿಸಲಾಗುತ್ತಿದೆ. ಮುಖೇಶ್ ಅಂಬಾನಿಯವರ ಕಚೇರಿಗೆ ತುಂಬ ಹತ್ತಿರದಲ್ಲಿಯೇ ಆಫೀಸ್ ಆರಂಭಿಸುವಷ್ಟು ಶ್ರೀಮಂತೆಯಾಗಿದೀನಿ. ನಮ್ಮ ಕಂಪನಿಯ ಒಟ್ಟು ವ್ಯವಹಾರ ಕೋಟಿ ಕೋಟಿಗಳ ಗಡಿ ದಾಟುತ್ತದೆ ಎಂದು ಹೆಮ್ಮೆಯಿಂದ ಹೇಳ್ಕೋತೇನೆ.ಈ ಸಮಾಜ ನನಗೆ ಎಲ್ಲವನ್ನೂ ಕೊಟ್ಟಿದೆ. ಪ್ರತಿಯಾಗಿ ನಾನೂ ಏನಾದ್ರೂ ಕೊಡಬೇಕು ಅನಿಸಿದ್ದರಿಂದ ಸಾವಿರಕ್ಕೂ ಹೆಚ್ಚು ಮಕ್ಕಳ ಶಿಕ್ಷಣಕ್ಕೆ, ಬಡ ಕುಟುಂಬಗಳ ಆಸ್ಪತ್ರೆಗೆ ಖರ್ಚಿಗೆ ಸಹಾಯ ಮಾಡ್ತಾ ಇದೀನಿ. ಇಷ್ಟಾದರೂ ನೆರವು ನೀಡುವ ಆಸೆಯಿಂದ ನಾನು ಹೊರಟು ನಿಂತರೆ ಕೆಲವೊಂದು ಶಾಲೆಯ ಶಿಕ್ಷಕರು- ಆ ದಲಿತರ ಹೆಂಗಸು ಇಲ್ಲಿಗೆ ಬರೋದೆ ಬೇಡ' ಎಂದದ್ದಿದೆ. ಕೆಲವು ಶ್ರೀಮಂತ ಉದ್ಯಮಿಗಳು ಆ ಹೆಂಗಸು ಈ ಲೆವೆಲ್‌ಗೆ ಬಂದುಬಿಟ್ಳಾ ಎಂದು ಅಸೂಯೆ ಪಟ್ಟದ್ದಿದೆ. ಅಂಥ ಸಂದರ್ಭದಲ್ಲೆಲ್ಲ ಮನಸ್ಸಿಗೆ ನೋವಾಗುತ್ತೆ. ಏನೂ ಮಾಡೋಕಾಗಲ್ಲ...ಮಹಾರಾಷ್ಟ್ರದ ಸದ್ಗುರು ವಾಮನರಾವ್ ಪೈ ಅವರ 'ತು ಹಿ ಹೈ ತೇರೆ ಜೀವನ್ ಕಾ ಶಿಲ್ಪಕಾರ್ (ನೀನೇ ನಿನ್ನ ಜೀವನದ ಶಿಲ್ಪಿ) ಎಂಬ ಮಾತುಗಳು ನನ್ನನ್ನು ಸದಾ ಕೈ ಹಿಡಿದು ನಡೆಸುತ್ತಿವೆ. ಮಕ್ಕಳು ಪ್ರಾಪ್ತ ವಯಸ್ಕರಾಗಿದ್ದಾರೆ. 9ನೇ ತರಗತಿಗೆ ಓದು ನಿಲ್ಲಿಸಿದೆ ಎಂಬ ನೋವು ಬಿಟ್ಟರೆ, ಬದುಕಲ್ಲಿ ಮಹತ್ವದ ಸಾಧನೆ ಮಾಡಿದ ಹೆಮ್ಮೆ ನನಗಿದೆ...'---ಅಂದ ಹಾಗೆ, ಕಲ್ಪನಾ ಅವರಿಗೆ ಅಭಿನಂದನೆ ಹೇಳಬೇಕು ಅನ್ನಿಸಿದರೆ, ಅವರ ಕಂಪನಿಯ ಸಿಇಒ ಅಶೀಶ್ ಅವರ ashishdeshpande_kamani@hotmail.com ಗೆ ಜ-ಮೇಲ್ ಕಳಿಸಬಹುದು.-ಎ.ಆರ್. ಮಣಿಕಾಂತ್armanikanth@gmail.com
No comments:
Post a Comment