Tuesday, 3 December 2013

ಜೀವನದ ಜೀಕುಗಳಲ್ಲಿ ಜವೇರಿ ದಾಖಲಿಸಿದ 'ಛಂದ' ಯಶೋಗಾಥೆ

ಜೀವನದ ಜೀಕುಗಳಲ್ಲಿ ಜವೇರಿ ದಾಖಲಿಸಿದ 'ಛಂದ' ಯಶೋಗಾಥೆ

ಭಾವತೀರಯಾನ- ಎ.ಆರ್.ಮಣಿಕಾಂತ್
ಈಕೆ, ಕೋಲ್ಕತಾದಲ್ಲಿ ನೆಲೆಗೊಂಡಿದ್ದ ಮಾರ್ವಾಡಿ ಕುಟುಂಬದ ಹುಡುಗಿ. ಓದಿನಲ್ಲಿ ಮುಂದಿದ್ದಳು. ಭವಿಷ್ಯದಲ್ಲಿ ವಿಜ್ಞಾನಿಯಾಗಬೇಕು, ಪ್ರಶಸ್ತಿಗಳನ್ನು ಪಡೆಯಬೇಕು ಎಂದೆಲ್ಲಾ ಕನಸು ಕಂಡಿದ್ದಳು. ಆದರೆ 17 ವರ್ಷ ತುಂಬುತ್ತಿದ್ದಂತೆಯೇ, ಗಂಡ, ಮನೆ- ಮಕ್ಕಳು ಎಂಬ ಸೆಂಟಿಮೆಂಟಿನ ಮಧ್ಯೆ ಮೂಲೆಗುಂಪಾಗಿ ಬಿಡ್ತೀನಿ. ಗೃಹಿಣಿಯಾದರೆ ಮಹತ್ಸಾಧನೆ ಮಾಡಲು ಸಾಧ್ಯವಾಗೋದಿಲ್ಲ ಎಂದುಕೊಂಡ ಈಕೆ, ಮನೆಯಲ್ಲಿ ಒಂದು ಮಾತೂ ಹೇಳದೆ ಅಮೆರಿಕದ ವಿಮಾನ ಹತ್ತಿಬಿಟ್ಟಳು! ನಂತರದ ಮೂರು ದಶಕಗಳಲ್ಲಿ, ಯಶಸ್ಸಿನ ಒಂದೊಂದೇ ಮೆಟ್ಟಿಲು ಹತ್ತಿ, ಅದೇ ಅಮೆರಿಕದಲ್ಲಿ ಕೋಟ್ಯಧಿಪತಿ ಅನ್ನಿಸಿಕೊಂಡಳು!!   ಅಂದ ಹಾಗೆ, ಈಕೆಯ ಹೆಸರು ಛಂದಾ ಜವೇರಿ. ಈಕೆಯ ಯಶೋಗಾಥೆ, ಯಾವುದೇ ಸಿನಿಮಾ ಕಥೆಯನ್ನು ಮೀರಿಸುವಂತಿದೆ. "ಈಗ ಹಿಂತಿರುಗಿ ನೋಡಿದ್ರೆ, ಅಬ್ಬಾ... ನಾನು ನಡೆದು ಬಂದ ದಾರಿ ಎಷ್ಟೊಂದು ವಿಚಿತ್ರ ತಿರುವುಗಳಿಂದ, ಅಚ್ಚರಿಗಳಿಂದ ಕೂಡಿದೆಯಲ್ಲ ಅನ್ನಿಸಿ ನನಗೇ ಬೆರಗಾಗುತ್ತಿದೆ ಎನ್ನುವ ಛಂದಾ, ತಮ್ಮ ಬದುಕಿನ ಕಥೆಯನ್ನು ತೆರೆದಿಟ್ಟಿದ್ದು ಹೀಗೆ:'ನಮ್ಮ ತಂದೆ-ತಾಯಿಗೆ ನಾಲ್ಕು ಮಕ್ಕಳು: ಎರಡು ಹೆಣ್ಣು. ಎರಡು ಗಂಡು. ನಾನೇ ಮೊದಲನೆಯವಳು. ನಾನು, ಓದಿನಲ್ಲಿ ಚುರುಕಾಗಿದ್ದೆ. ಡಿಗ್ರಿ ಓದಿ ವಿಜ್ಞಾನಿಯಾಗಬೇಕು, ಸಂಶೋಧನೆ ಮಾಡಬೇಕು ಎಂದೆಲ್ಲಾ ಕನಸು ಕಂಡಿದ್ದೆ. ಜೀವಶಾಸ್ತ್ರ, ನನ್ನ ಫೇವರಿಟ್ ಸಬ್ಜೆಕ್ಟ್. ಕೋಲ್ಕತಾದಲ್ಲಿ ನಮ್ಮ ಮನೆಗೆ ತುಂಬ ಹತ್ತಿರದಲ್ಲೇ ಅಮೆರಿಕನ್ ಲೈಬ್ರರಿಯಿತ್ತು. 10ನೇ ತರಗತಿಯ ನಂತರ, ಆ ಲೈಬ್ರರಿಗೆ ನಿಯಮಿತವಾಗಿ ಹೋಗುತ್ತಿದ್ದೆ. ಅಮೆರಿಕನ್ ಪತ್ರಿಕೆಗಳನ್ನು ಓದುವುದು ನನ್ನ ಮೆಚ್ಚಿನ ಹವ್ಯಾಸವಾಯಿತು. ಇದೆಲ್ಲಾ 1982ರ ಮಾತು. ಅವತ್ತೊಂದು ದಿನ ಏನಾಯಿತೆಂದರೆ, ಅಮೆರಿಕನ್ ಲೈಬ್ರರಿಯಿಂದ ಮನೆಗೆ ಹಿಂದಿರುಗುತ್ತಿದ್ದೆ. ಮಧ್ಯಾಹ್ನದ ಹೊತ್ತು. ವಿಪರೀತ ಬಿಸಿಲಿತ್ತು. ಅವಸರದಿಂದ ನಡೆಯುತ್ತಿದ್ದಾಗಲೇ, ವಿದೇಶಿ ಹೆಂಗಸೊಬ್ಬಳು, ರಸ್ತೆಯ ಒಂದು ಬದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಾಣಿಸಿತು. ಆಟೋದವರ ನೆರವಿನಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದೆ. ಆಕೆ ಅಮೆರಿಕದವಳೆಂದೂ, ಕರೇನ್ ಎಂಬುದು ಆಕೆಯ ಹೆಸರೆಂದೂ, ಹಸಿವು, ನೀರಡಿಕೆ ಹಾಗೂ ಬಿರುಬಿಸಿಲ ತಾಪದಿಂದ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆಂದೂ, ಆನಂತರದಲ್ಲಿ ತಿಳಿಯಿತು. ಕೋಲ್ಕತಾದ ಮತ್ತೊಂದು ದಿಕ್ಕಿನಲ್ಲಿ ಪ್ರದಕ್ಷಿಣೆ ಹೊರಟಿದ್ದ ಕರೇನ್‌ಳ ಗಂಡ ಡೇವಿಡ್‌ಗೆ ಸಂಜೆಯ ಹೊತ್ತಿಗೆ ವಿಷಯ ತಿಳಿಯಿತು. ಆತ ಓಡೋಡಿ ಬಂದ. ನಡೆದುದನ್ನೆಲ್ಲಾ ವೈದ್ಯರಿಂದ ತಿಳಿದ ಡೇವಿಡ್-ಕರೇನ್ ದಂಪತಿ, ತಮ್ಮ ವಿಳಾಸ ಮತ್ತು ಫೋನ್ ನಂಬರ್ ಕೊಟ್ಟು ಕೇಳಿದರು: 'ನಮ್ಮ ಜೀವ ಉಳಿಸಿದ್ದೀಯ. ಥ್ಯಾಂಕ್ಸ್. ಮುಂದೆ ನಿನಗೇನಾದ್ರೂ ಕಷ್ಟ ಎದುರಾದ್ರೆ ನಮಗೆ ಫೋನ್ ಮಾಡು. ಸಹಾಯ ಮಾಡ್ತೇವೆ.ಅಮೆರಿಕಕ್ಕೆ ಹೋದ ಡೇವಿಡ್ -ಕರೇನ್ ದಂಪತಿ ನನ್ನನ್ನು ಮರೆಯಲಿನಲ್ಲ. ಆಗಿಂದ್ದಾಗ್ಗೆ, ಪತ್ರ ಬರೆದರು. ನಾನೂ ಉತ್ತರಿಸಿದೆ. ಈ ಪತ್ರ ಮೈತ್ರಿಯಿಂದ ನಮ್ಮ ಬಾಂಧವ್ಯ ಗಟ್ಟಿಯಾಯಿತು. ಈ ವೇಳೆಗೆ ನನ್ನ ಪಿಯುಸಿ ಮುಗಿದಿತ್ತು. ಡಿಗ್ರಿ ಓದುವ ಕನಸಲ್ಲಿ ನಾನಿದ್ದೆ. ಆದರೆ ಹೆತ್ತವರ ಯೋಚನೆಯೇ ಬೇರೆಯಿತ್ತು. 17ನೇ ವರ್ಷಕ್ಕೆ ಮದುವೆ ಮಾಡಲು ಅವರು ನಿರ್ಧರಿಸಿದ್ದರು. ಒಳ್ಳೆಯ ಸಂಬಂಧ ಇದ್ರೆ ಹೇಳಿ ಎಂದು ಬಂಧುಗಳಲ್ಲಿ ವಿನಂತಿಸಿದ್ದರು. ವಿಷಯ ತಿಳಿದಾಗ ಪ್ರತಿಭಟಿಸಿದೆ. ಈಗಲೇ ನಂಗೆ ಮದುವೆ ಬೇಡ. ಡಿಗ್ರಿ ಮುಗಿಸೋಕೆ ಅವಕಾಶ ಕೊಡಿ ಎಂದು ಪ್ರಾರ್ಥಿಸಿದೆ. ಆಗ ಎದುರು ನಿಂತ ತಂದೆ ಕಡ್ಡಿ ಮುರಿದಂತೆ ಹೇಳಿಬಿಟ್ಟರು: 'ಹೆಣ್ಣು ಮಕ್ಕಳನ್ನು17-18ನೇ ವಯಸ್ಸಿಗೇ ಮದುವೆ ಮಾಡುವುದು ಮಾರವಾಡಿ ಜನಾಂಗದ ಸಂಪ್ರದಾಯ. ಅದನ್ನು ನಾವು ಪಾಲಿಸ್ತೇವೆ. ನೀನು ಡಿಗ್ರಿ ಮಾಡಿ ಏನಾಗಬೇಕಿದೆ. ಏನೇನೋ ಕನಸು ಕಾಣಬೇಡ. ಸುಮ್ನೆ ಮದುವೆಗೆ ಒಪ್ಪಿಕೋ...'ಮನೆಯಲ್ಲೇ ಉಳಿದು ವಿಜ್ಞಾನಿಯಾಗಬೇಕು ಎಂಬ ಕನಸು ನನಸಾಗೋದಿಲ್ಲ ಅನಿಸಿದ್ದೇ ಆಗ. ಆ ಕ್ಷಣಕ್ಕೆ ನೆನಪಾದವರು ಡೇವಿಡ್-ಕರೇನ್ ದಂಪತಿ. ತಕ್ಷಣವೇ ಅವರಿಗೆ ಪತ್ರ ಬರೆದೆ. ಮದುವೆಯಲ್ಲಿ ನನಗೆ ಆಸಕ್ತಿಯಿಲ್ಲ. ಓದಬೇಕು ಅನ್ನೋದಷ್ಟೇ ನನ್ನ ಆಸೆ. ಅಮೆರಿಕಕ್ಕೆ ಬಂದು ಬಿಡ್ತೀನಿ. ದಯವಿಟ್ಟು ಆಶ್ರಯ ಕೊಡಿ. ಅಲ್ಲಿಗೆ ಬರಬೇಕಾದರೆ ಏನೇನೆಲ್ಲಾ ಸಿದ್ಧತೆ ಮಾಡ್ಕೋಬೇಕು ತಿಳಿಸಿ ಎಂದು ವಿನಂತಿಸಿದ್ದೆ. 'ಕಷ್ಟ ಬಂದಾಗ ನಮ್ಮನ್ನು ನೆನಪಿಸಿಕೋ. ಸಹಾಯ ಮಾಡ್ತೇವೆ' ಎಂದಿದ್ದ ಅವರ ಮಾತನ್ನು ನೆನಪಿಸಿದ್ದೆ. ಮದುವೆಯನ್ನು ವಿರೋಧಿಸಿ ಕೋಲ್ಕತಾದ ಆಸುಪಾಸಿನಲ್ಲಿರುವ ಬಂಧುಗಳ ಮನೆಗೆ ಹೋದರೆ ಅದರಿಂದ ಏನೂ ಪ್ರಯೋಜನವಿಲ್ಲವೆಂದೂ ಪತ್ರದಲ್ಲಿ ವಿವರಿಸಿದ್ದೆ.ಆ ಕಡೆಯಿಂದ ತಕ್ಷಣವೇ ಉತ್ತರ ಬಂತು. ಹೆದರಬೇಡ. ಅಮೆರಿಕಕ್ಕೆ ಬಂದು ಬಿಡು ಎಂದು ಡೇವಿಡ್-ಕರೇನ್ ದಂಪತಿ ಉತ್ತರಿಸಿದ್ದರು. ಅಷ್ಟೇ ಅಲ್ಲ, ವೀಸಾ ಪಡೆಯಲು ಅನುಕೂಲವಾಗುವಂತೆ ತಮ್ಮ ಕಂಪನಿಯಿಂದ ಎಜುಕೇಷನ್ ಸ್ಪಾನ್ಸರ್‌ಶಿಪ್‌ನ ಪತ್ರವನ್ನು ಕಳಿಸಿದ್ದರು. ಮಾರ್ವಾಡಿ ಕುಟುಂಬಗಳಲ್ಲಿ ಮಕ್ಕಳು ಚಿಕ್ಕವರಿದ್ದಾಗಲೇ ಪಾಸ್‌ಪೋರ್ಟ್ ಮಾಡಿಸಿ ಬಿಡುತ್ತಾರೆ. ಅಪ್ಪನೇ ನನಗೆ ಪಾಸ್‌ಪೋರ್ಟ್ ಮಾಡಿಸಿದ್ದರು. ಮುಂದೆ, ಕಾಲೇಜಿಗೆ ಹೋಗಿ ಬರುವ ನೆಪದಲ್ಲಿಯೇ ವೀಸಾ ಸಂದರ್ಶನಕ್ಕೆ ಹೋಗಿ ಬಂದೆ. ಡೇವಿಡ್-ಕರೇನ್ ವಾಸವಿದ್ದ ಅಮೆರಿಕದ ಬಾಸ್ಟನ್‌ಗೆ ಹೋಗಲು ತುಂಬ ರಹಸ್ಯವಾಗಿ ಸಿದ್ಧತೆ ಮಾಡಿಕೊಂಡೆ. ನಾನು ಮನೆಯಿಂದ ಪರಾರಿಯಾಗುವ ವಿಷಯ ಮೂವರು ಗೆಳತಿಯರನ್ನು ಬಿಟ್ಟರೆ ಇನ್ಯಾರಿಗೂ ಗೊತ್ತಿರಲಿಲ್ಲ. ನನ್ನಲ್ಲಿದ್ದ ಕಿವಿಯೋಲೆ ಮತ್ತು ಚಿನ್ನದ ಸರವನ್ನು ಮಾರಿ ಬ್ರಿಟಿಷ್ ಏರ್‌ವೇಸ್‌ನಲ್ಲಿ ಟಿಕೆಟ್ ಖರೀದಿಸಿದೆ. ಪುಟ್ಟ ಲಗೇಜಿನೊಂದಿಗೆ, ಮನೆಯಲ್ಲಿ ಒಂದು ಮಾತೂ ಹೇಳದೆ ಅದೊಂದು ದಿನ ಬಾಸ್ಟನ್‌ನ ವಿಮಾನ ಹತ್ತಿ ಬಿಟ್ಟೆ.ವಿಮಾನ ಆಗಸಕ್ಕೇರಿದ ಮರುಕ್ಷಣವೇ ಮನೆಯವರೆಲ್ಲಾ ನೆನಪಾಗಿ ಬಿಟ್ಟರು. ಮತ್ತೆ ಅವರನ್ನೆಲ್ಲಾ ನೋಡ್ತೀನೋ ಇಲ್ಲವೋ ಅನ್ನಿಸಿದಾಗ ದುಃಖ ಒತ್ತರಿಸಿಕೊಂಡು ಬಂತು. ಅಮೆರಿಕದಲ್ಲಿ ನನ್ನವರೆಂದು ಯಾರೂ ಇಲ್ಲ. ಖರ್ಚಿಗೆ ನಯಾಪೈಸೆಯೂ ಇಲ್ಲ. ಸಂದರ್ಭ ಹೀಗಿರುವಾಗ, ಬೈ ಛಾನ್ಸ್ ಡೇವಿಡ್-ಕರೇನ್ ದಂಪತಿ ಏರ್‌ಪೋರ್ಟ್‌ಗೆ ಬರದೇ ಹೋದ್ರೆ ಗತಿಯೇನು ಅನ್ನಿಸಿದಾಗ ಮಾತ್ರ ಭಯದಿಂದ ನಡುಗಿ ಹೋದೆ. ಆದರೆ ಹಾಗೇನೂ ಆಗಲಿಲ್ಲ. ಬಾಸ್ಟನ್ ಏರ್‌ಪೋರ್ಟ್‌ನಲ್ಲಿ ಡೇವಿಡ್- ಕರೇನ್ ದಂಪತಿ ಕಾದು ನಿಂತಿದ್ದರು.ಮೊದಲು ನನ್ನ ಖರ್ಚಿಗೆ ಕೆಲಸ ಹುಡುಕಬೇಕು. ಒಂದೆರಡು ವರ್ಷ ದುಡಿದು, ನಂತರ ಡಿಗ್ರಿ ಮಾಡಬೇಕು ಎಂಬುದು, ಅಮೆರಿಕಕ್ಕೆ ಬಂದ ಕೆಲವೇ ದಿನಗಳಲ್ಲಿ ಅರ್ಥವಾಗಿ ಹೋಯಿತು. ನನ್ನಲ್ಲಿ ಎಂಪ್ಲಾಯರ್ ವೀಸಾ ಇರಲಿಲ್ಲ. ಹಾಗಾಗಿ, ಹೆಸರಾಂತ ಕಂಪನಿಗಳಲ್ಲಿ ಕೆಲಸ ಕೇಳಲು ಸಾಧ್ಯವೇ ಇರಲಿಲ್ಲ. ಹಾಗಾಗಿ, ವಯಸ್ಸಾದವರನ್ನು ಅವರ ಮನೆಯಲ್ಲಿದ್ದುಕೊಂಡೇ ಉಪಚರಿಸುವ 'ಹೌಸ್ ಕೀಪರ್‌' ಕೆಲಸಕ್ಕೆ ಸೇರಿಕೊಂಡೆ. 90 ವರ್ಷ ದಾಟಿದ್ದ ಲೆಸ್ಸಿ ಎಂಬಾಕೆಯನ್ನು ನಾನು ನೋಡಿಕೊಳ್ಳಬೇಕಿತ್ತು. ಕೋಲ್ಕತ್ತಾದಲ್ಲಿ ಆಳು-ಕಾಳುಗಳ ಮಧ್ಯೆ ರಾಣಿಯಂತೆ ಬೆಳೆದಿದ್ದಾಕೆ ನಾನು. ಆದರೆ ಅಮೆರಿಕದಲ್ಲಿ ನಾನೇ ಸೇವಕಿಯಾಗಬೇಕಾಯಿತು. ಡಿಗ್ರಿ ಓದಬೇಕೆಂದರೆ, ಇಂಥ ಅನುಭವಗಳೆಲ್ಲ ಆಗಲೇಬೇಕು ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಹೀಗಿರುವಾಗಲೇ- 'ಕುರಿ ಮಾಂಸದ ಅಡುಗೆ ತಯಾರಿಸು' ಎಂದು ಯಜಮಾನಿ ಆದೇಶಿಸಿದಳು. ಅಪ್ಪಟ ಸಸ್ಯಾಹಾರಿಯಾಗಿದ್ದ ನನಗೆ ಮಾಂಸಹಾರ ತಯಾರಿಸಲು ಬರುತ್ತಿರಲಿಲ್ಲ. ಯಜಮಾನಿಗೆ ಅದನ್ನೇ ಹೇಳಿದೆ. ನನ್ನನ್ನೊಮ್ಮೆ ಮರುಕದಿಂದ ನೋಡಿದ ಆಕೆ, ಹೋಟೆಲಿನಿಂದ ತರಿಸೋಣ ಬಿಡು ಎಂದರು. ನಂತರದ ದಿನಗಳಲ್ಲಿ ಬಹಳ ಆತ್ಮೀಯರಾದರು. ನನ್ನ ಆಸೆ ಮತ್ತು ಕನಸುಗಳ ಬಗ್ಗೆ ತಿಳಿದು, ಅದೊಂದು ದಿನ 30 ಸಾವಿರ ಡಾಲರ್ ಹಣವನ್ನು ಕೊಟ್ಟು- 'ಈ ಹಣದಲ್ಲಿ ಡಿಗ್ರಿ ಮುಗಿಸು. ನಿನಗೆ ಒಳ್ಳೆಯದಾಗಲಿ' ಎಂದು ಹಾರೈಸಿದರು.ಈ ಮಧ್ಯೆ, ಕೋಲ್ಕತಾದಲ್ಲಿದ್ದ ನನ್ನ ಹೆತ್ತವರಿಗೆ ಡೇವಿಡ್-ಕರೇನ್ ದಂಪತಿ ಪತ್ರ ಬರೆದಿದ್ದರು. ನಮ್ಮ ಕಣ್ಗಾವಲಿನಲ್ಲಿ ಛಂದಾ ಕ್ಷೇಮವಾಗಿದ್ದಾಳೆ. ಅವಳ ಬಗ್ಗೆ ಚಿಂತೆ ಬೇಡ ಎಂದು ವಿವರಿಸಿದ್ದರು. ಹೀಗಿರುವಾಗಲೇ, ಲೆಸ್ಸಿಯವರಿಂದ ಸಿಕ್ಕ ಆರ್ಥಿಕ ನೆರವಿನ ಬಗ್ಗೆ ಡೇವಿಡ್-ಕರೇನ್ ದಂಪತಿಗೆ ತಿಳಿಸಿದೆ. ಅವರಿಗೂ ಖುಷಿಯಾಯಿತು. ಯಾವುದೇ ತೊಂದರೆಯಿಲ್ಲದೇ ಡಿಗ್ರಿ ಮುಗಿಸಿದೆ. ಮುಂದೆ ಮಾಸ್ಟರ್ ಡಿಗ್ರಿ ಮಾಡಬೇಕು ಎಂದುಕೊಂಡಾಗಲೇ, ತಮ್ಮ ಕುಟುಂಬದವರಿಗೆಲ್ಲಾ ನನ್ನನ್ನು ಪರಿಚಯಿಸಿದರು ಡೇವಿಡ್. ಕೋಲ್ಕತಾದಲ್ಲಿ ನನ್ನ ಹೆಂಡತಿಯ ಪ್ರಾಣ ಉಳಿಸಿದ್ದು ಈಕೆ. ಅವಳಿಗೆ ಎಲ್ಲ ರೀತಿಯಲ್ಲೂ ನೆರವಾಗಬೇಕಾದದ್ದು ನಮ್ಮ ಕರ್ತವ್ಯ ಎಂದರು. ಈ ಸಂದರ್ಭದಲ್ಲಿ ಎದ್ದು ನಿಂತ ಡೇವಿಡ್‌ರ ಮಾಮ-'ನನ್ನ ಮಗಳ ಜೀವ ಉಳಿಸಿದವಳು' ನನಗೂ ಮಗಳೇ ಆಗ್ತಾಳೆ. ಅವಳ ಮಾಸ್ಟರ್ಸ್ ಡಿಗ್ರಿ ಓದಿಸುವ ಹೊಣೆ ನನಗಿರಲಿ' ಅಂದರು. ಮುಂದೆ, ಅವರೊಂದಿಗೇ ಕ್ಯಾಲಿಫೋರ್ನಿಯಾಕ್ಕೆ ಬಂದೆ. ಅಲ್ಲಿನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಬಯೋ ಕೆಮಿಸ್ಟ್ರಿಯಲ್ಲಿ ಮಾಸ್ಟರ್ ಡಿಗ್ರಿ ಸಂಪಾದಿಸಿದೆ.ಹೀಗೆ, ಒಂದೊಂದೇ ಯಶಸ್ಸು ಜೊತೆಯಾದಂತೆಲ್ಲಾ ವಯಸ್ಸೂ ಆಗುತ್ತಿತ್ತು. ಬಾಲ್ಯದಿಂದಲೂ ಮುಂದೆ ವಿಜ್ಞಾನಿಯಾಗಬೇಕು. ಮದರ್ ಥೆರೆಸಾ ಥರಾ ಸೇವೆ ಸಲ್ಲಿಸಬೇಕು ಎಂದು ಕನಸು ಕಂಡಿದ್ದವಳು ನಾನು. ಈ ನಿರ್ಧಾರವೇ ಮನದಲ್ಲಿ ಉಳಿದದ್ದಕ್ಕೆ ಏನೋ; ಅಮೆರಿಕಕ್ಕೆ ಬಂದು ಹತ್ತು ವರ್ಷ ಕಳೆದ ನಂತರವೂ ಮದುವೆಯಾಗಬೇಕೆಂದು ಅನ್ನಿಸಲೇ ಇಲ್ಲ. ಬದಲಿಗೆ, ಸಂಶೋಧನೆ ನಡೆಸಬೇಕು ಅನ್ನಿಸಿತು. ನನ್ನ ಅದೃಷ್ಟಕ್ಕೆ, ರಸಾಯನ ಶಾಸ್ತ್ರದಲ್ಲಿ ನಡೆಸಿದ ಸಂಶೋಧನೆಗಾಗಿ ಒಮ್ಮೆ, ಶಾಂತಿ ಸ್ಥಾಪನೆಗೆಂದು ಹೋರಾಡಿದ್ದಕ್ಕೆ ಮತ್ತೊಮ್ಮೆ -ಹೀಗೆ ಎರಡು ಬಾರಿ ನೊಬೆಲ್ ಪ್ರಶಸ್ತಿ ಪಡೆದಿದ್ದ ಲೀನಸ್ ಪೌಲಿಂಗ್‌ರ ಮಾರ್ಗದರ್ಶನದಲ್ಲಿ, ಬಯೋ ಕೆಮಿಸ್ಟ್ರಿಯಲ್ಲಿ ರಿಸರ್ಚ್ ವಿದ್ಯಾರ್ಥಿನಿಯಾಗುವ ಅವಕಾಶ ಸಿಕ್ಕಿತು. ಪೌಲಿಂಗ್ ಅವರ ಶಿಷ್ಯೆಯಾಗಬೇಕು, ಅವರ ಸಂಶೋಧನೆಯನ್ನೆಲ್ಲ ಅರ್ಥಮಾಡಿಕೊಳ್ಳಬೇಕು ಅನ್ನಿಸಿತು. ಅದೊಮ್ಮೆ ಪೌಲಿಂಗ್‌ರ ಎದುರು ನಿಂತು ನನ್ನ ಆಸೆ ಹೇಳಿಕೊಂಡೆ. ಯಾವ ಕೆಲಸ ಇದ್ರೂ ಹೇಳಿ ಸರ್. ಸಂತೋಷದಿಂದ ಮಾಡ್ತೇನೆ ಎಂದೆ. ನನ್ನ ವಿದ್ಯಾರ್ಥಿಗಳು ಪ್ರಯೋಗ ನಡೆಸಿದ ನಂತರ ಬಿಟ್ಟು ಹೋಗುವ ಟೆಸ್ಟ್ ಟ್ಯೂಬ್‌ಗಳನ್ನು ತೊಳೆದು ಇಡುವುದು ಹಾಗೂ ಲ್ಯಾಬ್‌ನ ಕಸ ಗುಡಿಸುವುದು...ಇದಿಷ್ಟೇ ಸದ್ಯಕ್ಕೆ ಉಳಿದಿರುವ ಕೆಲಸ ಅಂದರು ಪೌಲಿಂಗ್. ತುಂಬ ಶ್ರದ್ಧೆಯಿಂದ ಆ ಕೆಲಸ ಮಾಡಿದೆ. ಈ ಸಂದರ್ಭದಲ್ಲಿ ನನಗೆ ಅನಿಸಿದ್ದನ್ನೆಲ್ಲಾ ನೋಟ್ಸ್ ಥರಾ ಬರೆದಿಡುತ್ತಿದ್ದೆ. 90ರ ಇಳಿ ವಯಸ್ಸಿನಲ್ಲಿದ್ದ ಪೌಲಿಂಗ್ ಇದನ್ನೆಲ್ಲಾ ಗಮನಿಸಿದರು. ನಾಲ್ಕು ವರ್ಷ ಪ್ರತಿಫಲಾಪೇಕ್ಷೆಯಿಲ್ಲದೆ ಲ್ಯಾಬ್‌ನ ಪರಿಚಾರಿಕೆಯಾಗಿ ದುಡಿದೆ. ಕಡೆಗೊಂದು ದಿನ ನನ್ನನ್ನು ಕರೆದ ಪೌಲಿಂಗ್, 70 ಸಾವಿರ ಡಾಲರ್‌ಗಳನ್ನು ಕೈಗಿಟ್ಟು, ನನ್ನ ಶ್ರದ್ಧೆಯ ದುಡಿಮೆಗೆ ಇದು ಬಹುಮಾನ ಎಂದರು. ತಾವೇ ಶಿಫಾರಸು ಮಾಡಿ ಅಮೆರಿಕದ ಪೌರತ್ವ ಕೊಡಿಸಿದರು. ಅಷ್ಟೇ ಅಲ್ಲ. ಗಿಡಮೂಲಿಕೆಗಳನ್ನು ಬಳಸಿ ವಿಟಮಿನ್ ಸಿ ಯನ್ನು ಹೊಂದಿರುವ ಕ್ರೀಂ ತಯಾರಿಸುವ ವಿಧಾನವನ್ನು ಹೇಳಿಕೊಟ್ಟರು. ಈ ಕ್ರೀಂ ಬಳಸಿ ಚರ್ಮ ಒಣಗುವುದನ್ನು, ಸುಕ್ಕುಗಟ್ಟುವುದನ್ನು, ಬಿರುಕು ಬಿಡುವುದನ್ನು, ಒರಟಾಗುವುದನ್ನು ತಪ್ಪಿಸಬಹುದಿತ್ತು. 1993ರಲ್ಲಿಯೇ ಈ ಮಹತ್ವದ ಸಂಗತಿಯನ್ನು ಪೌಲಿಂಗ್ ಹೇಳಿಕೊಟ್ಟಿದ್ದರು.ಪೌಲಿಂಗ್ ಹೇಳಿಕೊಟ್ಟಿದ್ದ ತಂತ್ರಜ್ಞಾನ ಬಳಸಿ, ಚರ್ಮವನ್ನು ಹಲವು ಬಗೆಯಲ್ಲಿ ರಕ್ಷಿಸುವ ಕ್ರೀಂ ತಯಾರಿಸಬಾರದೇಕೆ ಅನ್ನಿಸಿತು. ಗುರುಗಳ ಕಡೆಯಿಂದ ಭಕ್ಷೀಸ್‌ನ ರೂಪದಲ್ಲಿ ದೊರಕಿದ್ದ ಹಣವನ್ನೇ ಬಂಡವಾಳವಾಗಿಟ್ಟುಕೊಂಡು 1995ರಲ್ಲಿ ಆಕ್ಟಿಯೋ ಜೆನ್ ಎಂಬ ಕ್ರೀಂ ತಯಾರಿಸಿ, ಆನ್‌ಲೈನ್‌ನಲ್ಲಿ ಮಾರುಕಟ್ಟೆಗೆ ಬಿಟ್ಟೆ. ಆರೋಗ್ಯ ಕಾಪಾಡಿಕೊಳ್ಳುವ ವಿಷಯದಲ್ಲಿ ಸದಾ ಮುಂಚೂಣಿಯಲ್ಲಿರುವ ಅಮೆರಿಕದ ಜನ, ನಮ್ಮ ಕಂಪನಿಯ ಉತ್ಪನ್ನವನ್ನು ಮುಗಿಬಿದ್ದು ಖರೀದಿಸಿದರು. ಆನಂತರದಲ್ಲಿ ಗಾಯವನ್ನು ಒಣಗಿಸುವ, ಬಿಸಿಲಿಗೆ ಚರ್ಮದ ಬಣ್ಣ ಕೆಡದಂತೆ ನೋಡಿಕೊಳ್ಳುವ, ಸುಕ್ಕು ಕಾಣದಂತೆ ಮಾಡುವ ಕ್ರೀಂಗಳನ್ನು ಒಂದರ ಹಿಂದೊಂದರಂತೆ ತಯಾರಿಸಿ ಮಾರುಕಟ್ಟೆಗೆ ಬಿಟ್ಟೆ. ಗ್ರಾಹಕರಿಂದ ಅದ್ಭುತ ಎಂಬಂಥ ಪ್ರತಿಕ್ರಿಯೆ ಸಿಕ್ಕಿತು. ಪರಿಣಾಮ, ನಮ್ಮ ಉತ್ಪನ್ನಗಳಿಗೆ ಭಾರೀ ಡಿಮ್ಯಾಂಡ್ ಬಂದು ವರ್ಷದಿಂದ ವರ್ಷಕ್ಕೆ ಲಾಭದ ಮೊತ್ತ ಹೆಚ್ಚುತ್ತಲೇ ಹೋಯಿತು. ತತ್ಫಲವಾಗಿ, 1984ರಲ್ಲಿ ಬರಿಗೈಯಲ್ಲಿ ಬಾಸ್ಟನ್‌ಗೆ ಬಂದಿದ್ದ ನಾನು, ನಂತರದ 16 ವರ್ಷದಲ್ಲಿ ಅಮೆರಿಕದ ಉದ್ಯಮಿ ಅನ್ನಿಸಿಕೊಂಡಿದ್ದೆ. ಲಕ್ಷ ಡಾಲರ್‌ಗಳ ಲೆಕ್ಕಾಚಾರದಲ್ಲಿ ಬಿಜಿನೆಸ್ ನಡೆಸಿದೆ.ಗಿಡಮೂಲಿಕೆಗಳನ್ನು ಬಳಸಿ ವಿಟಮಿನ್ ಸಿ ಅಂಶ ಹೊಂದಿರುವ ಕ್ರೀಂ ತಯಾರಿಸಲು ನಾನು 1993ರಲ್ಲಿ ಬಳಸಿದೆನಲ್ಲ; ಅದೇ ತಂತ್ರಜ್ಞಾನವನ್ನು ಈಗ ಜಗತ್ತಿನ ಎಲ್ಲ ಔಷಧ ತಯಾರಕರೂ ಬಳಸುತ್ತಿದ್ದಾರೆ. ಭಾರತದಲ್ಲಿ ಹೆಚ್ಚಾಗಿ ಬಳಕೆಯಾಗುವ ಇಮಾಮಿ ಕ್ರೀಂ ತಯಾರಿಕೆಯಲ್ಲೂ ಈ ಹಿಂದೆ ನಾವು ರೂಪಿಸಿದ್ದ ತಂತ್ರಜ್ಞಾನ ಮತ್ತು ಕಚ್ಚಾ ವಸ್ತುಗಳೇ ಬಳಕೆಯಾಗುತ್ತಿವೆ. ನನಗೀಗ ಲಾಸ್ ಏಂಜಲೀಸ್‌ನಲ್ಲಿ ಮನೆಯಿದೆ. ಕೋಲ್ಕತಾದಲ್ಲೂ ಒಂದು ಮನೆಯಿದೆ. ವ್ಯವಹಾರದಲ್ಲಿ ಸ್ಪರ್ಧೆ ಹಾಗೂ ನನ್ನ ವಯಸ್ಸೂ, ಎರಡೂ ಹೆಚ್ಚಿರುವ ಕಾರಣ, ಸದ್ಯಕ್ಕೆ ಬಿಜಿನೆಸ್‌ಗೆ ತಾತ್ಕಾಲಿಕ ವಿರಾಮ ಘೋಷಿಸಿದ್ದೇನೆ. ಈಗ, ಒಮ್ಮೆ ಹಿಂತಿರುಗಿ ನೋಡಿದರೆ, ಯಶಸ್ಸು ಕಾಣಬೇಕೆಂಬ ಹಂಬಲದಿಂದ ಇಷ್ಟೆಲ್ಲಾ ಮೆಟ್ಟಿಲು ಹತ್ತಿಳಿದದ್ದು ನಾನೇನಾ ಅನಿಸಿ ಆಶ್ಚರ್ಯವಾಗುತ್ತದೆ. ನನ್ನ ವಿಷಯದಲ್ಲಿ ದೇವರು ಕರುಣಾಮಯಿ. ಬದುಕಿನುದ್ದಕ್ಕೂ ಒಳ್ಳೆಯವರೇ ಎದುರಾಗುವಂತೆ ಆತ ನೋಡಿಕೊಂಡ. ಎಲ್ಲರ ಹಾರೈಕೆಯಿಂದಲೇ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ನನಗೆ ಸಾಧ್ಯವಾಯಿತು. ಈಗ ಬಿಜಿನೆಸ್ ಮಾಡಬೇಕೆಂಬ ಆಕೆ ಖಂಡಿತ ಇಲ್ಲ. ಚರ್ಮದ ಕ್ಯಾನ್ಸರ್‌ಗೆ ಔಷಧ ತಯಾರಿಸಲು ನೆರವಾಗಬೇಕು ಎಂಬುದಷ್ಟೇ ನನ್ನಾಸೆ' ಎಂದು ಮಾತು ಮುಗಿಸುತ್ತಾರೆ ಛಂದಾ ಜವೇರಿ.

- ಎ.ಆರ್. ಮಣಿಕಾಂತ್armanikanth@gmail.com














No comments:

Post a Comment