Tuesday, 3 December 2013

ಅವಹೇಳನ ನುಂಗಿ ಬದುಕು 'ಕಟ್ಟಿ'ಕೊಂಡ ಶ್ವೇತಾ

ಅವಹೇಳನ ನುಂಗಿ ಬದುಕು 'ಕಟ್ಟಿ'ಕೊಂಡ ಶ್ವೇತಾ


ಭಾವತೀರಯಾನ- ಎ.ಆರ್.ಮಣಿಕಾಂತ್


'ನಮ್ಮ ತಾತ ಬೆಳಗಾವಿ ಜಿಲ್ಲೆಯ ಒಂದು ಹಳ್ಳಿಯವನಂತೆ. ಪಿತ್ರಾರ್ಜಿತ ಆಸ್ತಿಯೆಂಬುದು ಅವನಿಗೆ ಏನೇನೂ ಇರಲಿಲ್ಲ. ಹಾಗಾಗಿ, ಉದ್ಯೋಗ ಹುಡುಕಿಕೊಂಡು ಸೀದಾ ಮುಂಬಯಿಗೆ ಬಂದ. ಒಂದಷ್ಟು ದಿನ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದ. ಅದರಿಂದ ಹೆಚ್ಚಿನ ಲಾಭವಿಲ್ಲ ಅನ್ನಿಸಿದಾಗ, ಸೀದಾ ಕಾಮಾಟಿಪುರಕ್ಕೆ ಬಂದು ವೇಶ್ಯಾವಾಟಿಕೆಯ ಅಡ್ಡೆ ಆರಂಭಿಸಿಬಿಟ್ಟ. ಈ ದಂಧೆಯಿಂದ ಸಾಕಷ್ಟು ಹಣ ಬಂತು. ಜನ ಅವನನ್ನು 'ಸಾಹೇಬರೇ' ಅಂದರು.
ವೇಶ್ಯಾವಾಟಿಕೆಯ ವ್ಯವಹಾರದಿಂದ ಅಜ್ಜನ ಜೇಬು ಭರ್ತಿಯಾಯಿತು. ಹೀಗೆ, ಅನಾಯಾಸವಾಗಿ ಬಂದ ಹಣ, ಅಜ್ಜನ ತಲೆ ತಿರುಗಿಸಿತು. ಆತ ಶೋಕಿಗೆ ಬಿದ್ದ. ಕುಡಿತದ ದಾಸನಾದ. ಹೆಂಡತಿಯ ಎಚ್ಚರಿಕೆಯ ಮಾತುಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ. ಮುಂದೆ  ಅತಿಯಾದ ಕುಡಿತ ಹಾಗೂ ಶೋಕಿಯ ಕಾರಣದಿಂದ ಕೆಲವೇ ವರ್ಷಗಳಲ್ಲಿ ಅಜ್ಜನ ಕೈ ಖಾಲಿಯಾಯಿತು. ಈತನ ವೇಶ್ಯಾವಾಟಿಕೆ ಅಡ್ಡೆ ಬೇರೊಬ್ಬರ ಪಾಲಾಯಿತು. ಅಜ್ಜ ಕಂಗಾಲಾದ. ಡಿಪ್ರೆಶ್‌ನ್‌ಗೆ ತುತ್ತಾದ. ನಂತರದ ಕೆಲವೇ ದಿನಗಳಲ್ಲಿ ಭಿಕಾರಿಯಾದ. ಆರೆಂಟು ತಿಂಗಳುಗಳ ನಂತರ ಸತ್ತೂ ಹೋದ.ಈ ದುರ್ಘಟನೆ ನಡೆದಾಗ, ಅಜ್ಜಿಯ ಮಡಿಲಲ್ಲಿ  ವಂದನಾ ಎಂಬ ಮಗಳಿದ್ದಳು. ಹೊಟ್ಟೆಪಾಡಿನ ಕಾರಣಕ್ಕೆ ಅಜ್ಜಿಯೂ ದುಡಿಮೆಗೆ ನಿಂತಳು. ಮುಂದೆ ಯಾವುದೇ ಏರುಪೇರುಗಳಿಲ್ಲದೆ ಹತ್ತು ವರ್ಷಗಳು ಕಳೆದು ಹೋದವು. ಅದೊಮ್ಮೆ ಏನಾಯಿತೆಂದರೆ, ವಂದನಾ ಆಕಸ್ಮಿಕವಾಗಿ ಕಾಯಿಲೆ ಬಿದ್ದಳು. ದಿನಗಳು ಕಳೆದಂತೆಲ್ಲಾ ಆರೋಗ್ಯ ಹದಗೆಟ್ಟಿತು. ನೆರೆಹೊರೆಯವರೆಲ್ಲ-'ಮಗಳನ್ನು ಹುಟ್ಟೂರಿಗೆ ಕಳಿಸಿಬಿಡು. ಹವಾ ಬದಲಾವಣೆಯ ಕಾರಣದಿಂದ ಕಾಯಿಲೆ ಗುಣವಾಗುತ್ತೆ. ಈ ಕಾಮಾಟಿಪುರದ ಕೊಳಕರಿಂದ ದೂರ ಇದ್ದಂತೆಯೂ ಆಗುತ್ತೆ' ಎಂದು ಸಲಹೆ ಮಾಡಿದರು. ಅಜ್ಜಿ ಹಾಗೆಯೇ ಮಾಡಿದಳು. ಹುಟ್ಟೂರಲ್ಲಿ ಇದ್ಕೊಂಡು ಹೊಸ ಬದುಕು ಶುರು ಮಾಡು ಎಂದೂ ಮಗಳಿಗೆ ಕಿವಿಮಾತು ಹೇಳಿದರು.ಪ್ರಾಯದ ಹುಡುಗಿ ವಂದನಾ, ಕನಸುಗಳನ್ನು ಎದೆಯೊಳಗಿಟ್ಟುಕೊಂಡೇ ಹುಟ್ಟೂರಿಗೆ ಬಂದಳು. ನೆರೆಹೊರೆಯವರೊಂದಿಗೆ ಮದುವೆಯ ಬಗ್ಗೆ ಮಾತಾಡಿದಾಗ-'ನಮ್ದು ದೇವದಾಸಿ ಜನಾಂಗ. ನಮ್ಮನ್ನು ಯಾರಮ್ಮಾ ಮದುವೆಯಾಗ್ತಾರೆ? ನಮ್ಮದೇನಿದ್ರೂ ಕೂಡಾವಳಿ ಮಾಡಿಕೊಂಡು, ಎರಡನೇ ಹೆಂಡ್ತಿ ಥರಾ ಬದುಕಬೇಕು. ಅದಷ್ಟೇ ನಮ್ಮ ಪಾಲಿಗೆ ಇರುವ ಸೌಭಾಗ್ಯ' ಎಂದುಬಿಟ್ಟರು. ಹೀಗೇ ಒಂದೆರಡು ವರ್ಷಗಳು ಕಳೆದಾಗ, ಆಗಲೇ ಬೇರೊಬ್ಬರೊಂದಿಗೆ ಮದುವೆ ನಿಶ್ಚಯವಾಗಿದ್ದ ಸುರೇಶ ಹೊಸಮನಿ ಎಂಬಾತ ವಂದನಾಳ ಮುಂದೆ ನಿಂತ. ನಿನ್ನನ್ನು ಎರಡನೇ ಹೆಂಡ್ತಿ ಅಂದ್ಕೋತೇನೆ. ಚನ್ನಾಗಿ ನೋಡ್ಕೋತೇನೆ. ದುಡಿಯಲಿಕ್ಕೆ ಬಾಂಬೆಗೆ ಹೋಗ್ತೇನೆ. ನೀನೂ ಜೊತೆಗೆ ಬಾ ಎಂದ. ಈ ಹುಡುಗಿ ವಂದನಾ, ಎರಡನೇ ಯೋಚನೆಯನ್ನೇ ಮಾಡದೆ ಎದ್ದು ಬಂದಳು! ಹಾಗೆ ಅವರು ತಲುಪಿಕೊಂಡದ್ದು, ಅದೇ ಕಾಮಾಟಿಪುರದ ಕೊಳೆಗೇರಿಗೆ! ಈ ದಾಂಪತ್ಯಕ್ಕೆ ಹುಟ್ಟಿದಾಕೆಯೇ ನಾನು. ನನ್ನ ಹೆಸರು ಶ್ವೇತಾ ಕಟ್ಟಿ!ಮುಂದಿನ ಕೆಲವೇ ತಿಂಗಳುಗಳಲ್ಲಿ ನಮ್ಮಮ್ಮ ವಂದನಾಳ ಬದುಕು ಬೀದಿಗೆ ಬಿತ್ತು. ಕಾರಣ, ಈಕೆಗೆ ಆಶ್ರಯ ನೀಡುವುದಾಗಿ ಹೇಳಿದ್ದ ಸುರೇಶ ಹೊಸಮನಿ, ತೀರಾ ಆಕಸ್ಮಿಕವಾಗಿ ಸತ್ತು ಹೋದ. ಈಗಾಗಲೇ ದೇವದಾಸಿಯ ಪಟ್ಟ ದಕ್ಕಿರುವುದರಿಂದ, ಊರಿಗೆ ಹೋದರೆ ಬದುಕಲು ಕಷ್ಟವಾಗುತ್ತದೆ ಅನಿಸಿದ್ದರಿಂದ, ಅಮ್ಮ ಕಾಮಾಟಿಪುರದ ಕೊಳೆಗೇರಿಯಲ್ಲೇ ಉಳಿದಳು. ಫ್ಯಾಕ್ಟರಿಗಳಲ್ಲಿ ದಿನಗೂಲಿಗೆ ಸೇರಿಕೊಂಡಳು. ಗಂಡಸಿನ ಆಶ್ರಯ ಇಲ್ಲದಿದ್ದರೆ, ಕಾಮಾಟಿಪುರದಂಥ ಏರಿಯಾದಲ್ಲಿ ಬದುಕುವುದು ಕಷ್ಟ ಅಂದುಕೊಂಡಾಗಲೇ ಅಮ್ಮನಿಗೆ ಹೊಸದೊಂದು ನೆರಳು ಕಾಣಿಸಿತು. ಹೀಗೆ ಅಮ್ಮನ 'ಯಜಮಾನ' ಆದವನೇ ರವೀಂದ್ರ ಕಟ್ಟಿ. ಈ ದಾಂಪತ್ಯಕ್ಕೆ ಎರಡು ಹೆಣ್ಣು ಮಕ್ಕಳಾದವು.ಮೊದಲ ಐದಾರು ವರ್ಷ ಎಲ್ಲವೂ ಚೆನ್ನಾಗಿತ್ತು. ಆನಂತರದಲ್ಲಿ ರವೀಂದ್ರಕಟ್ಟಿಯ ವರ್ತನೆ ಬದಲಾಯಿತು. ದೇವದಾಸಿ ಅನ್ನಿಸಿಕೊಂಡಿದ್ದರೂ, ಅಮ್ಮ ಮಾಂಗಲ್ಯ ಧರಿಸುತ್ತಿದ್ದಳು. ಆತನನ್ನು ಯಜಮಾನರೇ ಎನ್ನುತ್ತಿದ್ದಳು. ಆದರೆ, ಆತ ಎಂದೂ ನನ್ನ ಪಾಲಿಗೆ 'ಅಪ್ಪ' ಅನ್ನಿಸಲೇ ಇಲ್ಲ. ಯಾವ ಸಂದರ್ಭದಲ್ಲೂ ಆತ ನನ್ನನ್ನು ಅಕ್ಕರೆಯಿಂದ 'ಮಗಳೇ' ಅನ್ನಲಿಲ್ಲ. ಮುದ್ದು ಮಾಡಲಿಲ್ಲ. ನಿನಗೇನು ಬೇಕೆಂದು ಕೇಳಲೂ ಇಲ್ಲ. ಆತ ಯಾವಾಗಲೂ ನನ್ನನ್ನು ದುರುಗುಟ್ಟಿಕೊಂಡು ನೋಡುತ್ತಿದ್ದ. ವಿನಾಕಾರಣ ಹಂಗಿಸುತ್ತಿದ್ದ. ಇಂಥ ಸಂದರ್ಭಗಳಲ್ಲಿ ಅಮ್ಮ ನನ್ನ ಪರವಾಗಿ ನಿಲ್ಲುತ್ತಿದ್ದಳು. ನಂತರದ ದಿನಗಳಲ್ಲಿ ಕಂಠಪೂರ್ತಿ ಕುಡಿದು ಬರುವುದು ರವೀಂದ್ರ ಕಟ್ಟಿಯ ಕೆಲಸವಾಯಿತು. ಹೀಗೆ ಬಂದಾಗಲೆಲ್ಲ ಆತ ವಿನಾಕಾರಣ ಜಗಳ ತೆಗೆಯುತ್ತಿದ್ದ. ಅಮ್ಮನನ್ನು ಮನಬಂದಂತೆ ಥಳಿಸುತ್ತಿದ್ದ. ಬಿಡಿಸಿಕೊಳ್ಳಲು ಹೋದರೆ ನಮಗೂ ಏಟು ಬೀಳುತ್ತಿದ್ದವು. ಪರಿಣಾಮ, ಮನೆಯೆಂಬುದು ಅಕ್ಷರಶಃ ನರಕವಾಯಿತು.
ಇಷ್ಟಾದರೂ ರವೀಂದ್ರ ಕಟ್ಟಿಯೊಂದಿಗಿನ ಸಂಬಂಧಕ್ಕೆ ಗುಡ್‌ಬೈ ಹೇಳಲು ಅಮ್ಮ ಸಿದ್ಧಳಿರಲಿಲ್ಲ. ಹಾಗೇನಾದರೂ ಮಾಡಿದರೆ, ಮನೆಯ ಮಗ್ಗುಲಲ್ಲೇ ಇರುವ ಕಾಮುಕರು ಹಿಂದೆ ಬೀಳುತ್ತಾರೆಂಬ ಭಯ ಆಕೆಯದಿತ್ತು. ಫ್ಯಾಕ್ಟರಿಯಲ್ಲಿ ಅಮ್ಮನಿಗೆ ಸಿಗುತ್ತಿದ್ದುದು ಕೆಲವೇ ನೂರು ರೂಪಾಯಿ. ಮನೆಯ ಖರ್ಚಿಗೆ ಹಣ ಸಾಲುತ್ತಿಲ್ಲ ಅನ್ನಿಸಿದಾಗ ಆಕೆ, ವೇಶ್ಯಾವಾಟಿಕೆ ಅಡ್ಡೆಯಲ್ಲೂ ಕೆಲವೊಮ್ಮೆ ಕ್ಲೀನಿಂಗ್ ಕೆಲಸಕ್ಕೆ ಹೋಗಿ ಬಂದಳು. ನನ್ನನ್ನು ದಿನವೂ ಎದುರು ಕೂರಿಸಿಕೊಂಡು-'ನೀನು ಚೆನ್ನಾಗಿ ಓದಬೇಕು ಮಗಳೇ. ಮುಂದೆ ನಿನಗೊಂದು ನೌಕರಿ ಸಿಕ್ಕಿಬಿಟ್ಟರೆ, ಆ ಕ್ಷಣವೇ ಈ ನರಕದಿಂದ ದೂರ ಹೋಗಿ ಬಿಡೋಣ. ನೀನು ಚೆನ್ನಾಗಿ ಓದು' ಎಂದು  ಬುದ್ಧಿ ಹೇಳುತ್ತಿದ್ದಳು. ಆಗ ಏಳನೇ ತರಗತಿಯಲ್ಲಿದ್ದ ನನಗೆ, ಅಮ್ಮನ ಮಾತಿನಂತೆ ನಡೆಯಬೇಕು ಎಂದು ಒಮ್ಮೆಯೂ ಅನ್ನಿಸಲಿಲ್ಲ. ಮನೆಯಲ್ಲಿ ಒಂದೇ ಒಂದು ಸಣ್ಣ ಕೆಲಸವನ್ನೂ ನಾನು ಮಾಡುತ್ತಿರಲಿಲ್ಲ. ಶಾಲೆ ಮುಗಿದರೆ ಸಾಕು; ಮನೆಗೆ ಬಂದವಳೇ ಟಿ.ವಿ.ಯ ಮುಂದೆ ಕೂತು ಬಿಡುತ್ತಿದ್ದೆ.ಅವತ್ತೊಂದು ದಿನ ಅಮ್ಮ ತುಂಬಾ ಬೇಗ ಮನೆಗೆ ಬಂದಳು. ನಾನು ಯಥಾಪ್ರಕಾರ ಟಿ.ವಿ.ಯ ಮುಂದೆ ಕೂತಿದ್ದೆ. ನನ್ನ ಅಶಿಸ್ತು ಕಂಡು ಅಮ್ಮನಿಗೆ ರೇಗಿ ಹೋಯ್ತು. ಆಕೆ ಮನಸ್ಸಿಗೆ ಬಂದಂತೆ ಬೈದಳು. ನಿಂಗೆ ಜವಾಬ್ದಾರಿ ಬರೋದು ಯಾವಾಗ? ನನ್ನ ಕಷ್ಟ ಅರ್ಥವಾಗೋದು ಯಾವಾಗ ಎನ್ನುತ್ತಾ ಎರಡು ಏಟು ಹಾಕಿದಳು. ಉಹುಂ, ಆಗಲೂ ನಾನು ಕಮಕ್ ಕಿಮಕ್ ಎನ್ನದೆ ಟಿ.ವಿ.ಯ ಮುಂದೆ ಕೂತಿದ್ದೆ. ಆಗ, ಅಮ್ಮನ ಕೂಗಾಟವನ್ನು ಕೇಳಿ, ನೆರೆಮನೆಯ ಹೆಂಗಸು ಬಂದಳು. ಆಕೆ, ಅದೇ ಕಾಮಾಟಿಪುರದಲ್ಲಿದ್ದ ವೇಶ್ಯೆ. ಅಮ್ಮನಿಂದ ಎಲ್ಲ ವಿಷಯ ತಿಳಿದ ಆಕೆ, ನನ್ನೆದುರು ಕೂತು 'ಶ್ವೇತಾ' ಅಂದಳು. ಆನಂತರ, ತನ್ನ ಕುತ್ತಿಗೆಯನ್ನೊಮ್ಮೆ ತೋರಿಸಿದಳು. ಅಲ್ಲಿ ಕಚ್ಚಿದ ಗುರುತಿತ್ತು. ತೋಳಿನ ಭಾಗ ತೋರಿಸಿದಳು. ಅಲ್ಲಿ ಪರಚಿದ್ದಕ್ಕೆ ಸಾಕ್ಷಿಯಿತ್ತು. ಯಾರೋ ಬಲವಾಗಿ ಕಚ್ಚಿದ್ದಕ್ಕೋ ಏನೋ; ತುಟಿ ಊದಿಕೊಂಡಿತ್ತು. ಅದನ್ನೆಲ್ಲ ಕಂಡು ನಾನು ನಿಬ್ಬೆರಗಾಗಿ ಕೂತಿದ್ದಾಗಲೇ ಆಕೆ ಹೇಳಿದಳು: 'ಓದುವುದನ್ನು ನಿಲ್ಲಿಸಿ ಈ ಕಾಮಾಟಿಪುರದಲ್ಲೇ ಉಳಿದುಕೊಂಡರೆ, ಮುಂದೊಂದು ದಿನ ನಿನಗೆ ಸಿಕ್ಕುವ ಉಡುಗೊರೆಯೂ ಇದೇ. ಈ ಏರಿಯಾದಲ್ಲಿ ಹೆಂಗಸರನ್ನು ಹಸಿಮಾಂಸದ ಥರಾ ಮಾರಾಟ ಮಾಡಿಬಿಡ್ತಾರೆ. ನಿಮ್ಮ ಅಮ್ಮನ ಸಂಕಟವನ್ನು ಇನ್ನಾದರೂ ಅರ್ಥ ಮಾಡ್ಕೋ. ಚೆನ್ನಾಗಿ ಓದಿ ಕೆಲಸಕ್ಕೆ ಸೇರಿಕೋ. ಆಮೇಲೆ ಒಳ್ಳೆಯ ಏರಿಯಾಕ್ಕೆ ಶಿಫ್ಟ್ ಆಗಿಬಿಡು...'ಆ ಹೆಂಗಸಿನ ಮೈ ಮೇಲಿನ ಗಾಯದ ಗುರುತು ನೋಡಿದೆನಲ್ಲ; ಆಗ, ಮೈ ತುಂಬಾ ಮುಳ್ಳೆದ್ದಂತೆ ಭಾಸವಾಯಿತು. ಅಂಥದೊಂದು ಸಂದರ್ಭ ನನ್ನ ಪಾಲಿಗೂ ಬರುವುದನ್ನು ಕಲ್ಪಿಸಿಕೊಂಡು ನಿಂತಲ್ಲೇ ನಡುಗಿ ಹೋದೆ. ಆ ಕ್ಷಣದಿಂದಲೇ ಎಲ್ಲವನ್ನೂ, ಎಲ್ಲರನ್ನೂ ಮರೆತು ಓದಿದೆ. ಪರಿಣಾಮವಾಗಿ 10ನೇ ತರಗತಿಯಲ್ಲಿ ಶೇ.70 ಅಂಕಗಳೊಂದಿಗೆ ಪಾಸಾದೆ.ಹೇಳಿ ಕೇಳಿ ನಾನಿದ್ದುದು ಕಾಮಾಟಿಪುರ ತಾನೆ? ಅಲ್ಲಿ ಪ್ರತಿದಿನವೂ ರೇಡ್‌ಗಳಾಗುತ್ತಿದ್ದವು. ಹೆಂಗಸರು, 'ಹೋ ' ಎಂದು ಚೀರುತ್ತಾ ತಪ್ಪಿಸಿಕೊಳ್ಳಲು ಓಡುತ್ತಿದ್ದರು. ಪೊಲೀಸರು ಅಶ್ಲೀಲವಾಗಿ ಬೈಯುತ್ತಾ, ಅವರನ್ನು ಅಟ್ಟಿಸಿಕೊಂಡು ಹೋಗುತ್ತಿದ್ದರು. ಇಂಥ ದೃಶ್ಯಗಳನ್ನೇ ಪದೇ ಪದೇ ನೋಡಿದ ಕಾರಣದಿಂದ ಓದಿನಲ್ಲಿ ಆಸಕ್ತಿ ವಹಿಸಲು ಸಾಧ್ಯವಾಗಲೇ ಇಲ್ಲ. ಇದನ್ನೇ ಅಮ್ಮನೊಂದಿಗೆ ಹೇಳಿಕೊಂಡೆ. ಆಕೆ ಐದಾರು ಮಂದಿಯ ಸಲಹೆ ಪಡೆದು ಆಪ್ನೆ ಆಪ್ ಎಂಬ ಎನ್‌ಜಿಒಗೆ ಸೇರಿಸಿದಳು. ಅಲ್ಲಿ ಕಾಮಾಟಿಪುರದ ಮಕ್ಕಳಿಗೆ, ಉಚಿತವಾಗಿ ಪಾಠ ಹೇಳಿಕೊಡುತ್ತಿದ್ದರು. ಈ ವಿಷಯ ತಿಳಿದಾಗ ಸಿಟ್ಟಿನಿಂದ ಕಿಡಿಕಿಡಿಯಾಗಿದ್ದು ನನ್ನ ಮಲತಂದೆ ರವೀಂದ್ರ ಕಟ್ಟಿ. 'ಅಲ್ಲ ಕಣೇ, ಕಾಮಾಟಿಪುರದ ಈ ಹುಡುಗಿ ಓದಿ ಏನಾಗಬೇಕಿದೆ? ಟ್ಯೂಶನ್‌ಗೆ ಹೋಗುವುದನ್ನು ನಿಲ್ಸಿ ತೆಪ್ಪಗೆ ಮನೇಲಿ ಇರಲಿಕ್ಕೆ ಹೇಳು' ಎಂದು ಆತ ಅಮ್ಮನ ಮುಂದೆ ಅಬ್ಬರಿಸಿದ. ಕೆಲ ದಿನಗಳ ನಂತರ ನನ್ನೊಂದಿಗೇ ಅಸಭ್ಯವಾಗಿ ವರ್ತಿಸಿದ. ಎಲ್ಲವನ್ನೂ ಅಮ್ಮನಿಗೆ ಹೇಳಿದೆ. ಒಂದು ಕಡೆಯಲ್ಲಿ ಇಬ್ಬರು ಮಕ್ಕಳು ಮತ್ತು ಗಂಡ. ಮತ್ತೊಂದು ಕಡೆಯಲ್ಲಿ ನಾನು! ಯಾರನ್ನೂ ಬಿಟ್ಟಿರಲಾಗದಂಥ ಅಸಹಾಯಕ ಸ್ಥಿತಿಯಲ್ಲಿ ಅಮ್ಮ! ಆಕೆ ತನ್ನ ದುರಾದೃಷ್ಟ ನೆನೆದು ಗೋಳಾಡಿದಳು. ಹಣೆ ಚಚ್ಚಿಕೊಂಡಳು. ನನ್ನನ್ನು ಕ್ಷಮಿಸು ಮಗಳೇ ಎಂದು ಕೈ ಮುಗಿದಳು. ಮನೆಯಲ್ಲಿ ಇದ್ದರೆ, ಮಲತಂದೆಯಿಂದಲೂ ಕಿರುಕುಳ ಎದುರಾಗಬಹುದು. ಅಂಥ ರಿಸ್ಕ್ ಬೇಡವೇ ಬೇಡ. ಉಳಿದುಕೊಳ್ಳಲು ಅವಕಾಶ ಕೊಡುವ ಯಾವುದಾದರೂ ಎನ್‌ಜಿಒ ಹುಡುಕೋಣ ಎಂದಳು.ಇಂಥ ಸಂದರ್ಭದಲ್ಲಿ, ದೇವರು ಬಂದ ಹಾಗೆ ನನ್ನ ಬದುಕಲ್ಲಿ ಬಂದಾಕೆಯೇ ರಾಬಿನ್ ಚೌರಾಸಿಯಾ. ಆಕೆ 'ಕ್ರಾಂತಿ' ಎಂಬ ಎನ್‌ಜಿಒದ ಮುಖ್ಯಸ್ಥೆ. ಕಾಮಾಟಿಪುರದ ವೇಶ್ಯೆಯರ ಮಕ್ಕಳು, ವೇಶ್ಯಾವಾಟಿಕೆಯಿಂದ ತಪ್ಪಿಸಿಕೊಂಡು ಬಂದ ಹೆಣ್ಣು ಮಕ್ಕಳಿಗೆ ಆಶ್ರಯ ಕಲ್ಪಿಸುವುದೇ ಆಕೆಯ ಉದ್ದೇಶವಾಗಿತ್ತು. ಆಕೆಯೊಂದಿಗೆ ನನ್ನ ಬದುಕಿನ ಕಥೆಯನ್ನೆಲ್ಲ ಹೇಳಿಕೊಂಡೆ. ಆಶ್ರಯಕ್ಕಾಗಿ ಪ್ರಾರ್ಥಿಸಿದೆ. ನನ್ನ ಪಾಲಿಗೆ ಆಕೆ, ಅಮ್ಮನೇ ಆದಳು. ಈ ಮೊದಲು ಮನೆ ಹಾಗೂ ಶಾಲೆಯಲ್ಲಿ, ನಾನು ಕಪ್ಪಗಿರುವುದನ್ನೇ ಮೇಲಿಂದ ಮೇಲೆ ನೆನಪಿಸಿ ಎಲ್ಲರೂ ಹಂಗಿಸುತ್ತಿದ್ದರು. ರವೀಂದ್ರ ಕಟ್ಟಿಯನ್ನು ತೋರಿಸಿ 'ಈತ ನನ್ನ ತಂದೆ' ಅಂದರೆ, ಸಾಧ್ಯವೇ ಇಲ್ಲ. ಆತ ಕೆಂಪಗಿದ್ದಾನೆ. ನೀನು ಇದ್ದಲಿನಷ್ಟೇ ಕಪ್ಪಾಗಿದ್ದೀಯ. ಹೀಗಿರುವಾಗ ಆತ ನಿನ್ನ ತಂದೆಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಿದ್ದರು. ಅವರ ಮಾತು ಹಾಗಿರಲಿ; ನನ್ನ ಮಲತಂದೆಯೇ ಸಮಯ ಸಿಕ್ಕಾಗಲೆಲ್ಲಾ- ಕರಿಯಮ್ಮಾ, ಕರ್ಕೀ ಎಂದೆಲ್ಲ ಕರೆದು ಹಂಗಿಸುತ್ತಿದ್ದ. ಇಂಥವೇ ಮಾತುಗಳನ್ನು ಕೇಳಿ, ಕೇಳಿ, ಕಾಲೇಜಿಗೆ ಹೋಗುವಾಗಲೂ ನಾನು ಡಿಪ್ರೆಶನ್‌ನ ಮಧ್ಯೆಯೇ ಬದುಕುತ್ತಿದ್ದೆ.ಕ್ರಾಂತಿ ಎನ್‌ಜಿಒಗೆ ಬಂದೆನಲ್ಲ; ಅದು ನನ್ನ ಬದುಕಿನ ಮಹಾಸಂಭ್ರಮದ ಕಾಲ. ಅಲ್ಲಿ ಯಾರೂ ನನ್ನ ಇತಿಹಾಸವನ್ನು ಕೆದಕಲಿಲ್ಲ. ಬಣ್ಣ ಕಂಡು ಹಂಗಿಸಲಿಲ್ಲ. ಅಲ್ಲಿದ್ದವರೆಲ್ಲ ನನ್ನಂತೆಯೇ ಕಷ್ಟಗಳಿಂದ ನರಳಿದ್ದವರು. ಅವರೆಲ್ಲ ನನ್ನ ಕಂಬನಿ ಒರೆಸಿದರು. ಧೈರ್ಯ ಹೇಳಿದರು. ಜೊತೆಗೆ ಕೂತು ಓದಿದರು. ನನ್ನ ಪಾಲಿನ ಗಾಡ್‌ಮದರ್ ಆದ ರಾಬಿನ್ ಚೌರಾಸಿಯಾ, ಚೆಂದದ ಇಂಗ್ಲಿಷ್ ಕಲಿಸಿದರು. ನಿನಗೊಂದು ಭವಿಷ್ಯ ರೂಪಿಸುವ ಹೊಣೆ ನನ್ನದು. ಒಂದು ವರ್ಷ ನನ್ನೊಂದಿಗಿರು ಎಂದರು. ಮರುಮಾತಿಲ್ಲದೆ ಒಪ್ಪಿಕೊಂಡೆ. ಆ ಅವಧಿಯಲ್ಲಿ ದೇಶದ ವಿವಿಧ ನಗರಗಳಲ್ಲಿ ನಡೆದ ಎಂಟು ಮಹಿಳಾ ಸಮಾವೇಶಗಳಿಗೆ ಕರೆದೊಯ್ದರು. ಎಲ್ಲ  ಕಡೆಗಳಲ್ಲೂ ನನ್ನನ್ನೇ ಮುಂದೆ ಬಿಟ್ಟು ಭಾಷಣ ಮಾಡಿಸಿದರು. ಲೇಖನ ಬರೆಸಿ ಹಲವು ಸೆಮಿನಾರ್‌ಗಳಿಗೆ ಕಳಿಸಿದರು. ವಿದೇಶದಲ್ಲಿ ಡಿಗ್ರಿ ಓದಲಿಕ್ಕೆ ವ್ಯವಸ್ಥೆ ಮಾಡ್ತೇನೆ. ಅಲ್ಲಿಗೆ ಹೋಗಲಿಕ್ಕೆ ಮಾನಸಿಕವಾಗಿ ಸಿದ್ಧಳಾಗು ಎಂದದ್ದಲ್ಲದೆ, ಪಾಸ್‌ಪೋರ್ಟ್‌ಗೆ ಅರ್ಜಿಯನ್ನೂ ಹಾಕಿಸಿದರು. ಈ ಸಂದರ್ಭದಲ್ಲೇ ಒಂದು ಸ್ವಾರಸ್ಯ ನಡೆಯಿತು. ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಶ್ರೀಮಂತ ಕುಟುಂಬದವರ ಹೆಸರನ್ನು ರೆಫರೆನ್ಸ್‌ಗೆ ಹಾಕಿದ್ದೆವು. ಪೊಲೀಸರು ವಿಚಾರಿಸಿದಾಗ, ಆ ಶ್ರೀಮಂತರು ಸಿಡಿಮಿಡಿಯಿಂದ ಹೇಳಿದರಂತೆ: ನಮ್ಮ ಮಕ್ಕಳಿಗೆ ಸಿಕ್ಕದ ಅವಕಾಶ, ಆ ಕಾಮಾಟಿಪುರದ ಸ್ಲಂ ಹುಡುಗಿಗೆ ಸಿಕ್ತಾ ಇದೆಯಾ? ನಾವು ಸಹಿ ಹಾಕೋದಿಲ್ಲ ಹೋಗಿ...'ಇಂಥ ಎಡರುತೊಡರುಗಳಿಗೆ ರಾಬಿನ್ ಚೌರಾಸಿಯಾ ಕೇರ್ ಮಾಡಲಿಲ್ಲ. ಆಕೆ, ನನ್ನ ಬದುಕಿನ ಕಥೆಯನ್ನೆಲ್ಲ ಪಟ್ಟಿ ಮಾಡಿ, ಅಮೆರಿಕದ ವಿವಿಗಳಿಗೆ ಹಾಗೂ ನ್ಯೂಸ್‌ವೀಕ್ ಪತ್ರಿಕೆಗೆ ಕಳಿಸಿಯೇ ಬಿಟ್ಟರು. ಮುಂದೆ ಏನಾಯಿತೆಂದರೆ, ತೊಂದರೆ-ಸವಾಲುಗಳನ್ನು ಮೆಟ್ಟಿ ನಿಂತ ದಿಟ್ಟೆಯರು ಎಂಬ ಶೀರ್ಷಿಕೆಯಲ್ಲಿ ವಿಶ್ವದ 25 ಮಂದಿಯನ್ನು ನ್ಯೂಸ್‌ವೀಕ್ ಪತ್ರಿಕೆ ಗುರುತಿಸಿತು. ಈ ಪಟ್ಟಿಯಲ್ಲಿ ಪಾಕಿಸ್ತಾನದ ಮಲಾಲಾ ಇದ್ದಳು. ನಾನೂ ಇದ್ದೆ! ಈ ಖುಷಿಯಲ್ಲಿ ತೇಲುತ್ತಿದ್ದಾಗಲೇ, ಪದವಿ ಓದಲು ಅಮೆರಿಕದ ಮೂರು ವಿ.ವಿ.ಗಳಿಂದ ಆಹ್ವಾನ ಪತ್ರ ಬಂತು. ಕಡೆಗೆ, ನ್ಯೂಯಾರ್ಕ್‌ನ ಬರ್ಡ್ ವಿ.ವಿ.ಯಲ್ಲಿ ಮನಶ್ಯಾಸ್ತ್ರ ಕೋರ್ಸ್ ಆಯ್ಕೆ ಮಾಡಿಕೊಂಡೆ. ಮನಶ್ಯಾಸ್ತ್ರವೇ ಯಾಕೆ? ಬೇರೆ ಕೋರ್ಸ್ ಇರಲಿಲ್ವಾ ಎಂದು ಹಲವರು ಪ್ರಶ್ನಿಸಿದರು.
ಅದಕ್ಕೆ ನನ್ನ ಉತ್ತರವಿಷ್ಟೆ: ಡಿಗ್ರಿ ಮುಗಿದ ನಂತರ ಮುಂಬಯಿಗೆ, ಇದೇ ಕಾಮಾಟಿಪುರಕ್ಕೆ ವಾಪಸ್ ಬರಬೇಕು. ಅಲ್ಲಿರುವ ವೇಶ್ಯೆಯರು, ಅವರ ಮಕ್ಕಳಿಗೆ ಹೊಸ ಬದುಕು ಕಲ್ಪಿಸಬೇಕು. ಆ ಮೂಲಕ ಸಮಾಜದ ಋಣ ತೀರಿಸಬೇಕು ಎಂಬ ಸದಾಶಯ ನನ್ನದು. ಕಾಮಾಟಿಪುರದಂಥ ಪ್ರದೇಶದಲ್ಲಿ ಇದ್ದವರನ್ನು ಹೊಸದೊಂದು ಬದಲಾವಣೆಗೆ ತರಬೇಕೆಂದರೆ ಸೈಕಾಲಜಿಯ ಜ್ಞಾನ ಅತ್ಯಗತ್ಯ ಅನ್ನಿಸಿತು. ಹಾಗಾಗಿ, ಅದೇ ವಿಷಯದಲ್ಲಿ ಡಿಗ್ರಿ ಪಡೆಯುತ್ತೇನೆ. ಅಮೆರಿಕದಿಂದ ಬಂದ ನಂತರ, ಅಮ್ಮನನ್ನು ಕಣ್ಣರೆಪ್ಪೆಗಿಂತ ಹೆಚ್ಚು ಕಾಳಜಿಯಿಂದ ನೋಡ್ಕೋತೇನೆ. ಪ್ರಾಮಿಸ್...'----'ಕಾಮಾಟಿಪುರದ ಬಾಲೆಗೆ ಅಮೆರಿಕದಲ್ಲಿ  ಡಿಗ್ರಿ ಓದುವ ಯೋಗ' ಎಂಬ ಶೀರ್ಷಿಕೆಯಲ್ಲಿ ಮೂರು ತಿಂಗಳ ಹಿಂದೆ ವರದಿಗಳು ಪ್ರಕಟವಾಗಿದ್ದವು. ಆ ಬಾಲೆಯ ಹೆಸರೇ ಶ್ವೇತಾಕಟ್ಟಿ. ಈವರೆಗೂ ನೀವು ಓದಿದ್ದು, ಅಮೆರಿಕಕ್ಕೆ ಹೋಗುವ ಮುನ್ನ ನಡೆದ ಸಂದರ್ಶನಗಳಲ್ಲಿ ಆಕೆ ಹೇಳಿದ ಮಾತುಗಳನ್ನು. ಕಲ್ಲೆದೆಯವರನ್ನೂ ಕರಗಿಸುವಂತಿರುವ ಆಕೆಯ ಸಂದರ್ಶನದ ತುಣುಕುಗಳು ಯು-ಟ್ಯೂಬ್‌ನಲ್ಲಿವೆ. ಸಾಧ್ಯವಾದರೆ ಒಮ್ಮೆ ನೋಡಿ. ಈಗ ನ್ಯೂಯಾರ್ಕ್‌ನಲ್ಲಿ ಪದವಿ ಓದುತ್ತಿರುವ ಶ್ವೇತಾಗೆ ಒಳಿತಾಗಲಿ ಎಂದು ಹಾರೈಸಿ. ಅದೇ ಸಂದರ್ಭದಲ್ಲಿ,  ಶ್ವೇತಾಕಟ್ಟಿಯಂಥ ಅಸಹಾಯಕಿಯರ ಏಳಿಗೆಗೆ ಶ್ರಮಿಸುವ ರಾಬಿನ್ ಚೌರಾಸಿಯಾರಂಥ ದಿಟ್ಟೆಯರಿಗೂ ಒಂದು ಲಾಲ್‌ಸಲಾಂ ಹೇಳಿ.


- ಎ.ಆರ್. ಮಣಿಕಾಂತ್
armanikanth@gmail.com



















No comments:

Post a Comment