ಶಗುಫ್ತಾ ರಫೀಕ್: ಬೆಂಕಿಯಲ್ಲಿ ಅರಳಿದ ಹೂವು

ಭಾವತೀರಯಾನ
ಪರಿಸ್ಥಿತಿಯ ಒತ್ತಡದಿಂದಾಗಿ ಆಕೆ 5ನೇ ತರಗತಿಗೇ ಶಾಲೆ ಬಿಟ್ಟಳು. ನಂತರ, ಹೊಟ್ಟೆಪಾಡಿನ ಕಾರಣಕ್ಕೆ ಬಾರ್ ಡ್ಯಾನ್ಸರ್ ಆದಳು. ಮುಂದೆ ವೇಶ್ಯೆಯಾದಳು. ನಂತರ ದುಬೈನ ಶೇಕ್‌ಗಳ ಪಾಲಿನ ಫೇವರಿಟ್ ಸಿಂಗರ್ ಆದಳು. ನಂತರ, ಬಾಲಿವುಡ್‌ಗೆ ಬಂದು ಸ್ಟೋರಿ-ಡೈಲಾಗ್ ರೈಟರ್ ಆಗಿ, ದೊಡ್ಡ ಯಶಸ್ಸು ಕಂಡಳು. ಈಗ, ನಿರ್ದೇಶಕಿಯಾಗಲು ಹೊರಟಿದ್ದಾಳೆ. ಕರುಳು ತಾಕುವಂತಿರುವ ಅವಳ ಕಥೆಯನ್ನು, ಆಕೆಯ ಮಾತುಗಳಲ್ಲೇ ಕೇಳಿ:
----
'ನನಗೆ ಬುದ್ಧಿ ತಿಳಿದಾಗಿನಿಂದ ಮನೇಲಿದ್ದವರು ನಾವು ಮೂರೇ ಜನ: ಅಮ್ಮ, ಅಕ್ಕ ಮತ್ತು ನಾನು. ಅಮ್ಮನ ಹೆಸರು ಅನ್ವರಿ ಬೇಗಂ. ಆಕೆ, ಬಾಲಿವುಡ್‌ನ ಪೋಷಕ ನಟಿ. ಅಕ್ಕ ಸಯೀದಾ ಖಾನ್. ಆಕೆ 80ರ ದಶಕದಲ್ಲಿ ಬಾಲಿವುಡ್‌ನ ನಾಯಕಿಯಾಗಿದ್ದವಳು. ಕೊನೆಯವಳಾಗಿ ನಾನಿದ್ದೆ: ನನ್ನ ಹೆಸರು ಶಗುಫ್ತಾ ರಫೀಕ್.
ಬಾಲ್ಯವೆಂಬುದು ನನ್ನ ಪಾಲಿಗೆ ಕೆಟ್ಟದಾಗಿತ್ತು. ಕ್ರೂರವಾಗಿತ್ತು. ನನ್ನ ಪಾಲಿಗೆ ಬಾಲ್ಯದ ಮಧುರ ಕ್ಷಣಗಳು ಇಲ್ಲವೇ ಇಲ್ಲ. ಅವಮಾನಗಳ ಮಧ್ಯೆ, ಹಂಗಿಸುವವರ ಮಧ್ಯೆ, ಸಂಕಟಗಳ ಮಧ್ಯೆಯೇ ನನ್ನ ಬಾಲ್ಯ ಕಳೆದುಹೋಯಿತು. ಪರಿಚಯದ ಜನ ನನ್ನನ್ನು ಹರಾಮಿ ಎಂದು ಕರೆದು ಗೊಳ್ಳನೆ ನಗುತ್ತಿದ್ದರು. ಮತ್ತೆ ಕೆಲವರು ರಸ್ತೇಲಿ ಅಡ್ಡ ನಿಂತು-'ನೀನು ಯಾರ ಮಗಳು?' ಎಂದು ಕೇಳುತ್ತಿದ್ದರು. ಮನೇಲಿ ಅಪ್ಪ ಇರಲಿಲ್ಲವಲ್ಲ: ಹಾಗಾಗಿ ಆತ ಯಾರೆಂದು ನನಗೂ ಗೊತ್ತಿರಲಿಲ್ಲ. ಈ ಕಾರಣದಿಂದಲೇ, ನಾನು ಅನ್ವರಿಬೇಗಂ ಮಗಳು ಎನ್ನುತ್ತಿದ್ದೆ. ಎದುರಿಗಿದ್ದವರು ತಕ್ಷಣವೇ-'ಹೋಗಿ ಕನ್ನಡೀಲಿ ಮುಖ ನೋಡ್ಕೋ. ಅನ್ವರಿ ಬೇಗಂಗೂ ನಿನಗೂ ಚಿಕ್ಕಾಸಿನ ಹೋಲಿಕೆಯಿಲ್ಲ. ಹೀಗಿರುವಾಗ ನೀನು ಅದು ಹೇಗೆ ಬೇಗಂಳ ಮಗಳಾಗ್ತೀಯ? ಎನ್ನುತ್ತಿದ್ದರು. ಏನು ಉತ್ತರಿಸಬೇಕೆಂದೇ ಗೊತ್ತಾಗದೆ, ನಾಚಿಕೆ-ಅವಮಾನಗಳಿಂದ ಬಿಕ್ಕಳಿಸುತ್ತಾ ಹೆಜ್ಜೆ ಮುಂದಿಡುತ್ತಿದ್ದೆ.
ಇಂಥ ಅವಮಾನಗಳಿಂದ ಜರ್ಝರಿತಳಾಗಿ ಅಮ್ಮನ ಎದುರು ನಿಂತು-'ಅಮ್ಮಾ, ನಾನು ಯಾರ ಮಗಳು?' ಎಂದು ಕೇಳಿದರೆ, ಆಕೆ ಬಾಚಿ ತಬ್ಬಿಕೊಂಡು -'ನನ್ನ ಮಗಳು ಕಂದಾ. ನೀನು ನನ್ನ ಮಗಳು' ಎಂದಷ್ಟೇ ಹೇಳಿ ಮೌನವಾಗುತ್ತಿದ್ದಳು. ಆಕೆಗೆ ಎರಡನೇ ಪ್ರಶ್ನೆ ಕೇಳಲು ನನಗೆ ಧೈರ್ಯವಾಗುತ್ತಿರಲಿಲ್ಲ. ಅಮ್ಮನೇನೋ-'ನೀನು ನನ್ನ ಮಗಳು' ಎಂದಿದ್ದಳು. ಆದರೆ ನೆರೆಹೊರೆಯವರ ವಾದವೇ ಬೇರೆಯಿತ್ತು. ಕೆಲವರು-'ಕೊಳೆಗೇರಿಯಲ್ಲಿದ್ದ ದಂಪತಿಗೆ ಹುಟ್ಟಿದ್ದಾಕೆ ನೀನು. ಅವರಿಗೆ ಸಾಕುವ ತ್ರಾಣ ಇಲ್ಲದ್ದರಿಂದ ಅನಾಥಾಶ್ರಮಕ್ಕೆ ಕೊಟ್ಟು ಹೋದರು. ಈ ಅನ್ವರಿ ಬೇಗಂ ನಿನ್ನನ್ನು ದತ್ತು ತಗೊಂಡಿದ್ದಾಳೆ' ಎಂದರು. ಮತ್ತೆ ಕೆಲವರು-'ಶ್ರೀಮಂತನೊಬ್ಬ ನಿಗರ್ತಿಕ ಹೆಂಗಸೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಅದರ ಪ್ರತಿಫಲವೇ ನೀನು. ಆ ನಿರ್ಗತಿಕ ಹೆಂಗಸು ನಿನ್ನನ್ನು ಅನ್ವರಿ ಬೇಗಂಳ ಕೈಗಿಟ್ಟು ಓಡಿಹೋದಳಂತೆ. ಅಂದಿನಿಂದ ನೀನು ಇಲ್ಲಿದ್ದೀಯ' ಅನ್ನುತ್ತಿದ್ದರು. ಮತ್ತಷ್ಟು ಜನ-'ನಿಮ್ಮ ಅಕ್ಕ ಸಯೀದಾ, ಮದುವೆಗೂ ಮುಂಚೆ ಒಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಆ ಪ್ರೀತಿಗೆ ಹುಟ್ಟಿದವಳೇ ನೀನು. ವಾಸ್ತವವಾಗಿ ನೀನು ಸಯೀದಾಳ ಮಗು. ಅನ್ವರಿ ಬೇಗಂ ನಿನಗೆ ಅಜ್ಜಿಯಾಗಬೇಕು. ಬೇಕಿದ್ರೆ ಕನ್ನಡೀಲಿ ಮುಖ ನೋಡಿಕೋ. ನಿನ್ನ ಕಣ್ಣು, ಮೂಗು, ಹಣೆ, ತುಟಿ ಎಲ್ಲವೂ ಸಯೀದಾಳ ಥರಾನೇ ಇದೆ. ನೀನು ಸಯೀದಾಳ ಮಗಳು ಅನ್ನಲಿಕ್ಕೆ ಬೇರೆ ಯಾವ ಸಾಕ್ಷಿ ಬೇಕು? ಆದರೆ, ಘಾಟಿ ಮುದುಕಿ ಅನ್ವರಿ ಬೇಗಂ ಸತ್ಯಾಂಶವನ್ನು ಮುಚ್ಚಿಟ್ಟು, ಸುಳ್ಳು ಸುಳ್ಳೇ ಕಥೆ ಕಟ್ತಾ ಇದಾಳೆ' ಅನ್ನುತ್ತಿದ್ದರು.
ನೆರೆಹೊರೆಯವರು ಹಾಗಿರಲಿ; ಶಾಲೆಯಲ್ಲಿನ ಸಹಪಾಠಿಗಳೂ ಇದೇ ವಿಷಯವನ್ನು ಮಾತಾಡಲು ಆರಂಭಿಸಿದರು. ನನ್ನ ತಾಳ್ಮೆಯ ಕಟ್ಟೆಯೊಡೆದದ್ದು ಆಗಲೇ. ಸಹಪಾಠಿಗಳೊಂದಿಗೆ ಜಗಳಕ್ಕೆ ಬಿದ್ದೆ. ಹಂಗಿಸಿದವರನ್ನು ಶಾಲೆಯ ಅಂಗಳದಲ್ಲೆಲ್ಲ ಓಡಾಡಿಸಿಕೊಂಡು ಹೊಡೆದೆ. ಪರಿಣಾಮ; ಪ್ರಾಚಾರ್ಯರಿಗೆ ದೂರು ಹೋಯಿತು. ಅವರೂ ನನ್ನನ್ನು ಹಂಗಿಸಿದರು. ಥತ್, ಇವರ ಸಹವಾಸವೇ ಬೇಡ ಅನಿಸಿದ್ದೇ ಆಗ. ಮರುದಿನದಿಂದಲೇ ಶಾಲೆಗೆ ಗುಡ್‌ಬೈ ಹೇಳಿದೆ. ಆಗ ನಾನು 5ನೇ ತರಗತಿಯಲ್ಲಿದ್ದೆ.
ನನಗೆ ಎರಡು ವರ್ಷವಿದ್ದಾಗಲೇ ಅಕ್ಕ ಸಯೀದಾಳಿಗೆ ಬ್ರಿಜ್ ಸಾಧನಾ ಎಂಬಾತನೊಂದಿಗೆ ಮದುವೆಯಾಯಿತು. ಅವತ್ತಿನ ಸಂದರ್ಭದಲ್ಲಿ ಅಕ್ಕ ನಟಿಯಾಗಿ ದೊಡ್ಡ ಹೆಸರು ಮಾಡಿದ್ದಳು. ಅಕ್ಕನ ಗಂಡ ಬ್ರಿಜ್ ಸಾಧನಾ ಕೂಡ ನಟ. ಈ ದಂಪತಿಗೆ ಕಮಲ್ ಮತ್ತು ನಮ್ರತಾ ಎಂಬ ಮಕ್ಕಳಾದವು. ಅಕ್ಕನಿಗೆ ನಮ್ಮ ಮೇಲೆ ತುಂಬಾ ಅಕ್ಕರೆಯಿತ್ತು. ಆಕೆ ಪ್ರತಿ ತಿಂಗಳೂ ಮನೆ ಖರ್ಚಿಗೆಂದು ಹಣ ಕೊಡುತ್ತಿದ್ದಳು. ನನ್ನನ್ನು ಯಾರಾದರೂ ಹಂಗಿಸಿದರೆ, ಅವರ ಮೇಲೆ ಜಗಳಕ್ಕೆ ಹೋಗುತ್ತಿದ್ದಳು. ಯಾರಾದರೂ ಕೊಳಕು ಮಾತಾಡಿದರೆ, ಅವರ ಕಪಾಳಕ್ಕೆ ಹೊಡೆದು ಬಾ ಎಂದು ನನಗೂ ಹೇಳಿಕೊಟ್ಟಿದ್ದಳು.
ದಿನಗಳು ಉರುಳಿದಂತೆ ಅಕ್ಕನಿಗೆ ಬೇಡಿಕೆ ಕುಸಿಯಿತು. ಭಾವ ನಟಿಸಿದ ಎಲ್ಲ ಚಿತ್ರಗಳೂ ಪ್ಲಾಪ್ ಆದವು. ಆತ ಹತಾಶೆಯಿಂದ ಕುಡಿತದ ಮೊರೆ ಹೋದ. ಇಷ್ಟಾದರೂ ಅಕ್ಕ ನಮ್ಮನ್ನು ಮರೆಯಲಿಲ್ಲ. ತಿಂಗಳಿಗೆ ಇಂತಿಷ್ಟು ಎಂದು ತಪ್ಪದೇ ಹಣ ಕೊಡುತ್ತಿದ್ದಳು. ಈ ವಿಷಯಕ್ಕೇ ಭಾವ ಜಗಳ ಮಾಡುತ್ತಿದ್ದ. ಆದರೆ ಅಕ್ಕ ಅದಕ್ಕೆ ಕೇರ್ ಮಾಡುತ್ತಿರಲಿಲ್ಲ. ಈ ವೇಳೆಗೆ ನಾನು ಸಂಗೀತ-ನೃತ್ಯದ ತರಗತಿಗೆ ಹೋಗುತ್ತಿದ್ದೆ. ಹೀಗಿರುವಾಗಲೇ ನಡೆಯಬಾರದ ಅನಾಹುತ ನಡೆದು ಹೋಯಿತು. ಅದೊಂದು ದಿನ ಕುಡಿದ ಅಮಲಿನಲ್ಲಿ ಅಕ್ಕನೊಂದಿಗೆ ಭಾವ ಜಗಳಕ್ಕೆ ನಿಂತಿದ್ದಾನೆ. ಮಾತಿಗೆ ಮಾತು ಬೆಳೆದಿದೆ. ತಾಳ್ಮೆ ಕಳೆದುಕೊಂಡ ಭಾವ ಮೊದಲು ಹೆಂಡತಿ-ಮಗಳ ಮೇಲೆ ಗುಂಡು ಹಾರಿಸಿದ್ದಾನೆ. ನಂತರ ತಾನೂ ಗುಂಡು ಹಾರಿಸಿಕೊಂಡು...
ಈ ದುರಂತದ ನಂತರ ಅಮ್ಮ ಮಂಕಾದಳು. ನಮ್ಮ ಬದುಕಿಗಿದ್ದ ಆಸರೆಯೇ ತಪ್ಪಿ ಹೋಯಿತು. ಅಕ್ಕನ ಮಗ ಕಮಲ್ ಸಾಧನಾ ಆಗಿನ್ನೂ ಚಿಕ್ಕವನು. ಕಷ್ಟ ಎಲ್ಲಿಗೆ ಬಂತೆಂದರೆ, ಬದುಕಲಿಕ್ಕಾಗಿ ಅಮ್ಮ ಮನೆ ಮಾರಿದಳು. ತನ್ನಲಿದ್ದ ಚಿನ್ನಾಭರಣ ಮಾರಿದಳು. ಕಡೆಗೆ ಮನೆಯಲ್ಲಿದ್ದ ಪಾತ್ರೆಗಳನ್ನೆಲ್ಲ ಮಾರಿದಳು. ಮಾರುವುದಕ್ಕೆ ಬೇರೇನೂ ಇಲ್ಲ ಅನ್ನಿಸಿದಾಗ ನಾನು ಮನೆಯಿಂದ ಹೊರಗೆ ಬರಲೇಬೇಕಾಯಿತು. ಹೀಗೆ ಎದ್ದು ಬಂದಾಗ ನನಗೆ 12 ವರ್ಷ. ಆ ವೇಳೆಗೆ ನೃತ್ಯ-ಹಾಡುಗಾರಿಕೆ ಒಲಿದಿತ್ತು. ನೈಟ್ ಕ್ಲಬ್‌ಗಳಲ್ಲಿ, ಶ್ರೀಮಂತರ ಮನೆಯ ಪಾರ್ಟಿಗಳಲ್ಲಿ ಹಾಡುತ್ತಾ ನರ್ತಿಸುವ ಕೆಲಸ ಆರಂಭಿಸಿದೆ. ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೂ ಹಾಡಿ-ಕುಣಿವ ಕೆಲಸ. ಹಾಡು ಕೇಳಿದ ಜನ ಖುಷಿಯಿಂದ ನೋಟು ಎಸೆಯುತ್ತಿದ್ದರು. ಕೆಲವರು ಹಣ ಕೊಡುವ ನೆಪದಲ್ಲಿ ಮೈ ಸವರುತ್ತಿದ್ದರು. ಮೊದಲಿಗೆ ಹಿಂಸೆಯಾಗುತ್ತಿತ್ತು. ಆನಂತರದಲ್ಲಿ ಎಲ್ಲವೂ ಅಭ್ಯಾಸವಾಗಿ ಹೋಯಿತು. ಮುಂದೆ 17 ವರ್ಷ ತುಂಬುತ್ತಿದ್ದಂತೆಯೇ ಹೈ ಸೊಸೈಟಿಯ ಜನ ನಡೆಸುತ್ತಿದ್ದ ವೇಶ್ಯಾವಾಟಿಕೆಗೆ ಸೇರಿ ಹೋದೆ. ಅದುವರೆಗೂ ದಿನಕ್ಕೆ 100 ರೂ. ಇದ್ದ ನನ್ನ ಸಂಪಾದನೆ ಈಗ ದಿಢೀರನೆ 400 ರೂ.ಗಳಿಗೆ ಏರಿತು. ಅಮ್ಮನ ಎರಡನೇ ಗಂಡನ ಹೆಸರು ಮೊಹಮ್ಮದ್ ರಫೀಕ್. ಅದೇ ಹೆಸರಿನ ಅರ್ಧಭಾಗ ವಿನಾಕಾರಣ ನನ್ನ ಹೆಸರೊಂದಿಗೆ ಸೇರಿದೆ ಎಂಬ ಗುಟ್ಟೂ ಈ ವೇಳೆಗೆ ಗೊತ್ತಾಗಿತ್ತು. ನಾನು ಬಾರ್ ಗರ್ಲ್ ಕೆಲಸದಿಂದ ವೇಶ್ಯೆ ಎಂಬ ಹೊಸ ಕೆಲಸಕ್ಕೆ ಎದ್ದು ಹೋದೆ ಎಂದು ಅಮ್ಮನಿಗೆ ಗೊತ್ತಾಯಿತು. ಆದರೆ, ಆಕೆ ನನ್ನನ್ನು ತಡೆಯುವ, ಇದು ಕೆಟ್ಟ ಕೆಲಸ ಎಂದು ಬುದ್ಧಿ ಹೇಳುವ ಪ್ರಯತ್ನವನ್ನೇ ಮಾಡಲಿಲ್ಲ.
ಕನ್ಯತ್ವ ಕಳೆದುಕೊಳ್ಳುವ ವಿಷಯವಾಗಿ ಹುಡುಗಿಯರಿಗೆ ಒಂಥರಾ ಖುಷಿಯಿರುತ್ತದೆ. ಇಂಥವನೊಂದಿಗೇ ಬದುಕಬೇಕು ಎಂಬ ಆಸೆಯಿರುತ್ತದೆ. ಮೊದಲ ಬಾರಿ ನನ್ನ ಕಣ್ಣಲ್ಲಿ ಆಸೆ ಹುಟ್ಟಿಸಿದ್ದು ಇವನೇ ಎಂದು ನಾಚುತ್ತಾ ಹೇಳಿಕೊಳ್ಳುವ ಹಂಬಲವಿರುತ್ತದೆ. ಆದರೆ ಅಂಥ ಮಧುರ ಕ್ಷಣಗಳು ನನ್ನ ಪಾಲಿಗೆ ಬರಲೇ ಇಲ್ಲ. ಒಂದೊಂದು ದಿನಕ್ಕೆ ಇಬ್ಬರು, ಮೂವರು ನನ್ನ ಮೈ ಮೇಲೆ ಏರಿ ಬಂದರು. ಹೀಗೆ ಬಂದವರಲ್ಲಿ ವಜ್ರದ ವ್ಯಾಪಾರಿಯಿದ್ದ. ಮಂತ್ರಿ ಮಹಾಶಯನಿದ್ದ. ಪೊಲೀಸ್ ಅಧಿಕಾರಿಯಿದ್ದ. ಆದಾಯ ತೆರಿಗೆ ಇಲಾಖೆಯ ಮುಖ್ಯಸ್ಥನಿದ್ದ. ಹೀಗೆ, ಗುರುತು ಪರಿಚಯವೇ ಇಲ್ಲದವರಿಗೆ ದೇಹ ಕೊಡುವುದಿದೆಯಲ್ಲ; ಅದಕ್ಕಿಂತ ನೋವಿನ ಸಂಗತಿ ಬೇರೊಂದಿಲ್ಲ. ನನ್ನಲ್ಲಿಗೆ ಬಂದ ಪ್ರಖ್ಯಾತರಲ್ಲಿ ಹಲವರು ಸುಮ್ಮನೇ ಬಿಕ್ಕಳಿಸುತ್ತಿದ್ದರು. ಯಾರನ್ನೋ ಬೈಯ್ಯುತ್ತಿದ್ದರು. ಇಲ್ಲವಾದರೆ, ನಾನೊಂದು ಮಾಂಸದ ತುಂಡೇನೋ ಎಂಬಂತೆ ಚರ್ಮ ಕಿತ್ತು ಬರುವಂತೆ ಕಚ್ಚುತ್ತಿದ್ದರು. ಈ ಸಂದರ್ಭದಲ್ಲಿ, ಬೇರೆ ದುಡಿಮೆಯ ಹಾದಿಯೇ ಗೊತ್ತಿರಲಿಲ್ಲ. ಹಾಗಾಗಿ ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡಿದ್ದೆ. ಹೀಗೆ ದುಡಿದ ಹಣದಿಂದಲೇ ಒಂದು ಪುಟ್ಟ ಮನೆ ಖರೀದಿಸಿದೆ. ಅಮ್ಮನಿಗೆ ಚಿನ್ನದ ಬಳೆ ಮಾಡಿಸಿಕೊಟ್ಟೆ. ಹೀಗೇ ಹತ್ತು ವರ್ಷ ಕಳೆಯಿತು. ನನ್ನ ಸಂಪರ್ಕಕ್ಕೆ ಬರುತ್ತಿದ್ದವರೆಲ್ಲ ಪ್ರತಿಷ್ಠಿತರೇ ಆಗಿದ್ದುದರಿಂದ, ವ್ಯವಹಾರವೆಲ್ಲ ಸ್ಟಾರ್ ಹೋಟೆಲುಗಳಲ್ಲಿಯೇ ನಡೆಯುತ್ತಿದ್ದರಿಂದ ಯಾರಿಗೂ ಅನುಮಾನ ಬರಲಿಲ್ಲ. ವೇಶ್ಯೆಯಾದರೇನಂತೆ? ಆಕೆಗೂ ಮನಸ್ಸಿರುವುದಿಲ್ಲವೇ? ಹೀಗೆ ದಿನವೂ ಬಂದು ಹೋಗುವವರ ಮಧ್ಯೆಯೇ ನನ್ನ ಮೈಯನ್ನಲ್ಲ, ಮನಸ್ಸನ್ನು ಪ್ರೀತಿಸುವ ವ್ಯಕ್ತಿಯೂ ಬಂದೇ ಬರ್ತಾನೆ ಎಂದು ಚಾತಕ ಪಕ್ಷಿಯಂತೆ ಕಾದೆ. ಆದರೆ, ಅಂಥದೊಂದು ಸಂದರ್ಭ ನನ್ನ ಪಾಲಿಗೆ ಬರಲೇ ಇಲ್ಲ.
27 ವರ್ಷ ತುಂಬುವುದರೊಳಗೆ ನನ್ನ ದೇಹ ಮತ್ತು ವೃತ್ತಿಯ ಬಗ್ಗೆ ನನಗೇ ಹೇಸಿಗೆ ಬಂದು ಬಿಟ್ಟಿತ್ತು. ದಿನವೂ ಅದೇ ಕತ್ತಲು, ಅದೇ ಹಾಸಿಗೆ, ಅಪರಿಚಿತ ಗಂಡುಗಳೊಂದಿಗೆ ಹೊರಳಾಟ... ಛೀ, ಇದೆಂಥಾ ಹೀನ ಬದುಕು ನನ್ನದು ಅನ್ನಿಸಲು ಶುರುವಾಯಿತು. ಅದೇ ಸಂದರ್ಭಕ್ಕೆ ಹಿತೈಷಿಯೊಬ್ಬರು-'ದುಬೈಗೆ ಹೋಗಿ ಬಿಡು. ಅಲ್ಲಿನ ಬಾರ್‌ಗಳಲ್ಲಿ ಹಾಡಿ ಕುಣಿದರೆ ಸಾಕು, ಇಲ್ಲಿಗಿಂತ ಹತ್ತು ಪಟ್ಟು ಜಾಸ್ತಿ ಸಂಪಾದಿಸಬಹುದು' ಅಂದರು. ವಾರದ ನಂತರ ದುಬೈನ ವಿಮಾನ ಹತ್ತಿದೆ. ಹಿಂದಿ ಚಿತ್ರಗೀತೆಗಳು ನಾಲಿಗೆಯ ತುದಿಯಲ್ಲಿದ್ದವು. ಸುಶ್ರಾವ್ಯ ಕಂಠವಿತ್ತು. ಪರಿಣಾಮ, ಒಂದೇ ವಾರದಲ್ಲಿ ದುಬೈನಲ್ಲಿದ್ದ ಎಲ್ಲ ಬಾರ್‌ಗಳನ್ನೂ ನನ್ನ ಹೆಸರು ತಲುಪಿ ಬಿಟ್ಟಿತು. ಎರಡೇ ತಿಂಗಳ ಅವಧಿಯಲ್ಲಿ ಎರಡು ವರ್ಷ ಕೂತು ತಿನ್ನಲು ಆಗುವಷ್ಟು ಹಣ ಬಂತು. ಈ ಮಧ್ಯೆಯೇ, ನನ್ನನ್ನು ಬಳಸಿಕೊಂಡು ಶ್ರೀಮಂತ ಉದ್ಯಮಿಗಳನ್ನು ಕಿಡ್ನಾಪ್ ಮಾಡಲು ದುಬೈನಲ್ಲಿರುವ ಮಾಫಿಯಾ ದೊರೆಗಳು ಪ್ಲಾನ್ ಮಾಡಿರುವ ಸುದ್ದಿ ಕಿವಿಗೆ ಬಿತ್ತು. ಈ ವಿಷ ವರ್ತುಲದಿಂದ ತಪ್ಪಿಸಿಕೊಳ್ಳುವುದು ಹೇಗೆಂದು ಯೋಚಿಸುತ್ತಿದ್ದಾಗಲೇ, ಕರುಳಿನ ಕ್ಯಾನ್ಸರ್‌ನಿಂದ ಅಮ್ಮ ಆಸ್ಪತ್ರೆ ಸೇರಿರುವ ಸುದ್ದಿ ಬಂತು. ತಕ್ಷಣವೇ ನನಗೆ ನೌಕರಿ ಕೊಟ್ಟಿದ್ದವರ ಕಾಲು ಹಿಡಿದೆ. ಅಮ್ಮನಿಲ್ಲದೆ ನನಗೆ ಬದುಕಿಲ್ಲ. ದಯವಿಟ್ಟು ಕಳಿಸಿಕೊಡಿ ಎಂದು ಪ್ರಾರ್ಥಿಸಿದೆ. ಕಡೆಗೂ ಅವರು ಒಪ್ಪಿದರು. ಅಲ್ಲಿಂದ ದಡಬಡಸಿ ಬಂದು ಅಮ್ಮನ ಸೇವೆಗೆ ನಿಂತೆ. ಆದರೆ ಪ್ರಯೋಜನವಾಗಲಿಲ್ಲ. 1999ರಲ್ಲಿ ಅಮ್ಮ ತೀರಿಕೊಂಡಳು.
ದುಬೈನಲ್ಲಿ ಇದ್ದೆನಲ್ಲ; ಆಗಲೇ ಪಾಕಿಸ್ತಾನದ ಶ್ರೀಮಂತನೊಬ್ಬ ಪರಿಚಯವಾದ. ಹತ್ತಾರು ಭೇಟಿಯ ನಂತರ ಅದೊಂದು ದಿನ-'ನನ್ನನ್ನು ಮದುವೆಯಾಗ್ತೀಯ?' ಎಂದ. ನಾನು, ನನ್ನ ಬದುಕಿನ ಕಥೆಯನ್ನೆಲ್ಲ ಹೇಳಿಕೊಂಡೆ. ಹಳೆಯ ಪುರಾಣ ನನಗೆ ಬೇಡ. ದಯವಿಟ್ಟು ಮದುವೆಗೆ ಒಪ್ಪಿಕೋ' ಎಂದ. ಅದು ನನ್ನ ಬದುಕಿನ ಅಮೃತ ಘಳಿಗೆ. ನನ್ನ ಮದುವೆಯಾದಂತೆ, ಅವನೊಂದಿಗೆ ಹನಿಮೂನ್‌ಗೆ ಹೋದಂತೆ, ಡ್ಯುಯೆಟ್ ಹಾಡಿದಂತೆಲ್ಲಾ ನಾನು ಕನಸು ಕಾಣುತ್ತಲೇ ಇದ್ದೆ. ವಿಪರ್ಯಾಸ ನೋಡಿ: ಹೀಗೆ ಪ್ರಪೋಸ್ ಮಾಡಿದ್ದ ವ್ಯಕ್ತಿ, ನಂತರದ ಒಂದೇ ತಿಂಗಳಲ್ಲಿ ಹಾರ್ಟ್ ಅಟ್ಯಾಕ್‌ನಿಂದ ತೀರಿ ಹೋದ. ಪರಿಣಾಮ, ನನ್ನೆದೆಯಲ್ಲಿ ಮೊಗ್ಗಾಗಿದ್ದ ಹೂವು, ಅರಳುವ ಮೊದಲೇ ಬಾಡಿ ಹೋಯಿತು.
ದುಬೈನಿಂದ ಮುಂಬಯಿಗೆ ಬಂದ ಮೇಲೆ, ನನ್ನ ಮನದ ತಳಮಳವನ್ನೆಲ್ಲ ಬರೆದಿಡಬೇಕು. ಚಿತ್ರರಂಗ ಸೇರಬೇಕು. ನನ್ನ ಪ್ರತಿಭೆ ತೋರಿಸಬೇಕು ಎಂಬ ಮನಸ್ಸಾಯಿತು. ತಕ್ಷಣವೇ ಹಿರಿಯ ನಿರ್ದೇಶಕ ಮಹೇಶ್ ಭಟ್ ಅವರನ್ನು ಭೇಟಿಯಾದೆ. ನನ್ನ ಹಳೆಯ ಪುರಾಣ ತೆರೆದಿಟ್ಟೆ. ನಾನೀಗ ಬದಲಾಗಿದ್ದೇನೆ ಎಂದು ಸ್ಪಷ್ಟಪಡಿಸಿದೆ. ನಿಮ್ಮ ಬ್ಯಾನರ್‌ನ ಚಿತ್ರಗಳಿಗೆ ಕಥೆ-ಸಂಭಾಷಣೆ ಬರೆಯಲು ಅವಕಾಶ ಕೊಡಿ ಎಂದು ಪ್ರಾರ್ಥಿಸಿದೆ. ಮಹೇಶ್‌ಭಟ್, ಎರಡನೇ ಯೋಚನೆ ಮಾಡದೆ, ಕೆಲ್ಸ ಶುರು ಮಾಡು ಅಂದರು. ಅದರ ಪರಿಣಾಮವಾಗಿಯೇ ಆಶಿಖಿ ಪಾರ್ಟ್2, ಮರ್ಡರ್ ಪಾರ್ಟ್2, ರಾಝ್ ಪಾರ್ಟ್2, ವೋ ಲಮ್ಹೇ ಚಿತ್ರಗಳು ಬಂದವು. ನನಗೆ ಹೆಸರು ಬಂತು. ಪುಣ್ಯಕ್ಕೆ, ಬಾಲಿವುಡ್‌ನ ಮಂದಿ ನನ್ನ ಹಳೆಯ ಕಥೆಯನ್ನು ಕೆದಕಲು ಹೋಗಲಿಲ್ಲ. ಬದಲಿಗೆ, ಈಕೆ ಅನ್ವರಿ ಬೇಗಂಳ ದತ್ತು ಪುತ್ರಿಯಂತೆ ಎಂದು ಮಾತಾಡಿ ಸುಮ್ಮನಾದರು.
ಈಗ, ಸಿನಿಮಾದ ಗ್ರಾಮರ್ ನನಗೂ ಅರ್ಥವಾಗಿದೆ. ಎಂಥ ಸಂಭಾಷಣೆಗಳಿಂದ ಸಿನಿಮಾ ಗೆಲ್ಲಿಸಬಹುದು ಎಂಬ ಗುಟ್ಟೂ ಗೊತ್ತಾಗಿದೆ. ಖ್ಯಾತನಾಮರ ತಾರಾಗಣವಿರುವ ಮೂರು ಚಿತ್ರಗಳನ್ನು ನಿರ್ದೇಶಿಸುವ ಅವಕಾಶ ಸಿಕ್ಕಿದೆ. ಒಂದು ಕಾಲದಲ್ಲಿ ಬರೀ 100 ರೂಪಾಯಿಗಾಗಿ ಇಡೀ ರಾತ್ರಿ ಹಾಡಿದ್ದಾಕೆ ನಾನು. ನಂತರ ವೇಶ್ಯೆಯಾಗಿ ನೂರಾರು ಮಹಲುಗಳ ಮೆಟ್ಟಿಲು ಹತ್ತಿಳಿದಾಕೆ ನಾನು. ಈಗ, ಹಳೆಯದನ್ನೆಲ್ಲ ಮರೆತು ಹೊಸ ಬದುಕಿಗಾಗಿ, ಗೆಲುವುಗಳಿಗಾಗಿ ಕಾತರಿಸುತ್ತಿರುವಾಕೆ ನಾನು. ಅವತ್ತಿಗೆ ಅದೇ ಸತ್ಯ ಈ ಕ್ಷಣಕ್ಕೆ ಇದೇ ಸತ್ಯ. ಮುಂದೆ, ಮೆಚ್ಚಿದವನ ಮಡದಿಯಾಗಿ, ಮುದ್ದು ಮಗುವಿನ ತಾಯಿಯಾಗಿ ಬದುಕಬೇಕು ಎಂಬುದು ನನ್ನಾಸೆ. ಆದರೆ ವಿಧಿ ಎಂಬುದು ನಮ್ಮೊಂದಿಗೆ ಯಾವಾಗ, ಹೇಗೆ ಆಟವಾಡುತ್ತದೆಯೋ ಬಲ್ಲವರಾರು?'
-----------
ಹೀಗೆ ಮಾತಾಡುತ್ತಾ ಹೋಗುತ್ತಾಳೆ ಶಗುಫ್ತಾ ರಫೀಕ್. ಸಿನಿಮಾಕ್ಕೆ ಕಥೆ ಬರೆಯುವ ಈಕೆಯ ಬದುಕೇ ಒಂದು ಸಿನಿಮಾ ಕಥೆಯಂತಿದೆ. ಅಲ್ಲವೇ?
- ಎ.ಆರ್. ಮಣಿಕಾಂತ್
armanikanth@gmail.com
No comments:
Post a Comment