ವ್ಹೀಲ್‌ಚೇರ್‌ನಲ್ಲಿಯೇ ಬದುಕಿನ ವ್ಹೀಲ್ ತಿರುಗಿಸಿದ ಛಲಗಾತಿ!

ಭಾವತೀರಯಾನ
ಪ್ರವಾಹಕ್ಕೆ ಎದುರಾಗಿ ಈಜಬೇಕಾದರೆ, ಗುಡ್ಡಗಾಡು ಪ್ರದೇಶದಲ್ಲಿ ಬೈಕ್ ಓಡಿಸಬೇಕಾದರೆ, ಶಾಟ್‌ಪುಟ್, ಜಾವಲಿನ್ ಅಥವಾ ಡಿಸ್ಕಸ್ ಎಸೆಯಬೇಕಾದರೆ-ಕೈಗಳು ಮಾತ್ರವಲ್ಲ, ಕಾಲುಗಳೂ ಗಟ್ಟಿಯಾಗಿರಬೇಕು. ಇದು ಎಲ್ಲರ ಅನುಭವ ಮತ್ತು ನಂಬಿಕೆ. ಇಂಥ ನಂಬಿಕೆಗಳನ್ನೆಲ್ಲ ಉಲ್ಟಾ ಮಾಡಿರುವ ಸಾಧಕಿಯೊಬ್ಬಳ ಕಥನವಿದು. ಈಕೆಯ ಹೆಸರು ದೀಪಾ ಮಲ್ಲಿಕ್. ವಯಸ್ಸು 43 ವರ್ಷ. 14 ವರ್ಷಗಳ ಹಿಂದೆಯೇ ಈಕೆಯ ದೇಹದ ಅರ್ಧಭಾಗ, ಅಂದರೆ ಎದೆಯಿಂದ ಕೆಳಗಿನ ಭಾಗ ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ತುತ್ತಾಗಿದೆ. ಪರಿಣಾಮ, ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ಇಂಥ ಅವಸ್ಥೆಯಲ್ಲೂ ಈಕೆ, ಯಮುನಾ ನದಿಯಲ್ಲಿ ಪ್ರವಾಹಕ್ಕೆ ಎದುರಾಗಿ 1ಕಿ.ಮೀಟರ್ ದೂರ ಈಜಿ ದಾಖಲೆ ಮಾಡಿದ್ದಾಳೆ. ವಿಶ್ವ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಶಾಟ್‌ಪುಟ್ ಎಸೆತದಲ್ಲಿ ಬೆಳ್ಳಿಯ ಪದಕ ಪಡೆದಿದ್ದಾಳೆ! ಆ ಮೂಲಕ, ಮನೋಬಲವೊಂದಿದ್ದರೆ, ದೈಹಿಕ ನೂನ್ಯತೆಯನ್ನು ಮೆಟ್ಟಿ ನಿಲ್ಲಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ!ಇದಿಷ್ಟನ್ನೂ ಓದಿದವರಿಗೆ, ಈ ದೀಪಾ ಮಲ್ಲಿಕ್ ಯಾರು? ಈಕೆ ಪಾರ್ಶ್ವವಾಯುವಿಗೆ ತುತ್ತಾಗಿದ್ದು ಏಕೆ? ದೇಹದ ಅರ್ಧ ಭಾಗವೇ ಸ್ವಾಧೀನದಲ್ಲಿಲ್ಲ ಎಂದಾಗಲೂ ಈಕೆ ಆಟದ ಅಂಗಳಕ್ಕೆ ಇಳಿದಿದ್ದಾದರೂ ಏಕೆ? ಆನಂತರದಲ್ಲಿ ಎದುರಾದ ಸವಾಲುಗಳನ್ನು ಈಕೆ ಎದುರಿಸಿದ್ದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಕಾಡಬಹುದು. ಅವುಗಳಿಗೆಲ್ಲಾ ಇಲ್ಲಿ ಉತ್ತರವಿದೆ, ಓದಿಕೊಳ್ಳಿ:ದೀಪಾಳ ತಂದೆಯ ಹೆಸರು ಬಿ.ಕೆ. ನಾಗ್ಪಾಲ್. ಹರ್ಯಾಣ ಮೂಲದ ಈತ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿದ್ದವರು. ಬಾಲ್ಯದಲ್ಲಿ ದೀಪಾ, ಉಳಿದೆಲ್ಲ ಮಕ್ಕಳಂತೆಯೇ ಇದ್ದಳು. ಚಿಕ್ಕಂದಿನಿಂದಲೂ ಆಕೆಗೆ ಆಟೋಟವೆಂದರೆ ಪ್ರಾಣ. ಅದನ್ನು ಕಂಡವರೆಲ್ಲ -'ವಯಸ್ಸಿಗೆ ಮೀರಿದ ಪ್ರತಿಭೆ ಈಕೆಯದು' ಎಂದು ಹೊಗಳುತ್ತಿದ್ದರಂತೆ. ಹೀಗಿರುವಾಗಲೇ, ದೀಪಾಗೆ ಏಳು ವರ್ಷ ತುಂಬಿದ್ದಾಗಲೇ ಬೆನ್ನಿನ ಮೇಲ್ಭಾಗದಲ್ಲಿ ಗಡ್ಡೆಯೊಂದು ಕಾಣಿಸಿಕೊಂಡಿದೆ. ತಕ್ಷಣವೇ ಮಿಲಿಟರಿ ಆಸ್ಪತ್ರೆಗೆ ಸೇರಿಸಿದಾಗ ಸಣ್ಣದೊಂದು ಆಪರೇಷನ್ ಮಾಡಿದ ವೈದ್ಯರು-'ಎಲ್ಲಾ ಸರಿಹೋಯ್ತು ಬಿಡಿ' ಅಂದರಂತೆ. ಮುಂದೆ ಏನೇನಾಯಿತು ಎಂಬುದನ್ನು ದೀಪಾ ಮಲ್ಲಿಕ್ ವಿವರಿಸುವುದು ಹೀಗೆ:
'ಆಸ್ಪತ್ರೆಯಿಂದ ಹೊರಬಂದ ಕ್ಷಣದಲ್ಲಿಯೇ ಆಪರೇಷನ್ ಆಗಿದೆ ಎಂಬುದನ್ನು ಮರೆತುಬಿಟ್ಟೆ. ಸಂಭ್ರಮದಿಂದ ಶಾಲೆಗೆ ಹೋದೆ. ಪ್ರತಿ ವರ್ಷದ ಕ್ರೀಡಾಕೂಟದಲ್ಲೂ ನಾನೇ ಫಸ್ಟ್. ಬಗೆಬಗೆಯ ಪ್ರಶಸ್ತಿಗಳಿಂದ ಕಪಾಟುಗಳು ತುಂಬಿ ಹೋದವು. ಪಿಯುಸಿಗೆ ಹೋಗುವ ವೇಳೆಗೆ ಲೂನಾ ಓಡಿಸುವ ಹುಚ್ಚು ಅಂಟಿಕೊಂಡಿತ್ತು. ನಾಲ್ಕೇ ತಿಂಗಳಿಗೆ ಲೂನಾ, ಬೋರ್ ಹೊಡೆಸಿತು. ಹುಡುಗರು ಓಡಿಸುವ ಬೈಕ್‌ಗಳನ್ನು ಓಡಿಸಬೇಕು ಎಂಬ ಆಸೆಯಾಯಿತು. ಇಂಥ ಸಂದರ್ಭದಲ್ಲಿ ಪರಿಚಯವಾದವನೇ ವಿಕ್ರಂಸಿಂಗ್ ಮಲ್ಲಿಕ್. ಮಿಲಿಟರಿಯಲ್ಲಿದ್ದ ಆತ ತರಬೇತಿಗೆಂದು ಬಂದಿದ್ದ. ಕೆಲವೇ ದಿನಗಳಲ್ಲಿ ನಮ್ಮ ಪರಿಚಯ ಗಾಢವಾಯಿತು. ಅದೊಂದು ದಿನ-'ವಿಕ್ರಂ, ಹುಡುಗರ ಬೈಕ್ ಓಡಿಸಬೇಕೆಂದು ಆಸೆಯಾಗಿದೆ. ಯಾರಾದ್ರೂ ಹುಡುಗ ಒಂದು ಬೈಕ್ ಕೊಡಿಸಿದ್ರೆ ಅವನನ್ನು ಮದುವೆ ಆಗಿಬಿಡ್ತೀನಿ' ಅಂದೆ. ಆತ ಬೆರಗಿನಿಂದ -ಹೌದಾ? ನಿಜವಾಗ್ಲೂ... ಎಂದು ಪ್ರಶ್ನಿಸಿದ. ನಾನು ಹಿಂದೆ ಮುಂದೆ ಯೋಚಿಸದೆ-'ಗಾಡ್ ಪ್ರಾಮಿಸ್' ಎಂದುಬಿಟ್ಟೆ.ಎರಡು ದಿನಗಳ ನಂತರ ಅಚ್ಚರಿಯೊಂದು ಕಾದಿತ್ತು; ಹೊಚ್ಚ ಹೊಸ ಕವಾಸಾಕಿ ಬಜಾಜ್ 100ಸಿಸಿ ಬೈಕ್‌ನೊಂದಿಗೆ ವಿಕ್ರಂಸಿಂಗ್ ನನ್ನೆದುರು ನಿಂತಿದ್ದ. ನಾನು ಪ್ರಶ್ನಿಸುವ ಮೊದಲೇ, ಈ ಬೈಕ್ ನಿನಗೆ. ನನ್ನನ್ನು ಮದುವೆಯಾಗ್ತಿ ತಾನೆ? ಎಂದು ಕೇಳಿಬಿಟ್ಟ. ಅವನನ್ನು ತಿರಸ್ಕರಿಸಲು ನನಗೆ ಕಾರಣಗಳೇ ಇರಲಿಲ್ಲ. ಪರಿಣಾಮ, 19 ವರ್ಷದ ಚಿಕ್ಕ ಪ್ರಾಯದಲ್ಲೇ ಕರ್ನಲ್ ವಿಕ್ರಂಸಿಂಗ್‌ನ ಹೆಂಡತಿಯಾದೆ. ಅವತ್ತಿನ ಸಂದರ್ಭದಲ್ಲಿ ದಿನವೂ ಮುದ್ದುಮುದ್ದಾಗಿ ಕಾಣಿಸಬೇಕು ಎಂಬ ಆಸೆಯಿತ್ತು. ಹಾಗಾಗಿ ದಿನಕ್ಕೊಂದು ವೇಷ ಧರಿಸುತ್ತಿದ್ದೆ. ವಿಕ್ರಂಗೆ ರಜೆ ಸಿಕ್ಕರೆ ಸಾಕು; ಬೈಕ್‌ನಲ್ಲಿ ಅವನನ್ನು ಹಿಂದೆ ಕೂರಿಸಿಕೊಂಡು ಪಿಕ್‌ನಿಕ್‌ಗೆ ಹೊರಡುತ್ತಿದ್ದೆ. ಮಾರ್ಗಮಧ್ಯೆ ಸಿಗುವ ನದಿಯಲ್ಲಿ ಈಜಾಡಿ ಖುಷಿಪಡುತ್ತಿದ್ದೆ. ಇಂಥ ಸಡಗರದ ಮಧ್ಯೆಯೇ ಹತ್ತು ವರ್ಷಗಳು ಕಳೆದುಹೋದವು. ಈ ಹೊತ್ತಿಗೆ ಅಂಬಿಕಾ ಮತ್ತು ದೇವಿಕಾ ಎಂಬ ಮಕ್ಕಳು ನಮ್ಮ ಬಾಳಲ್ಲಿ ಬಂದಿದ್ದರು.ಇದು 1999ರ ಮಾತು. ವಿಕ್ರಂಸಿಂಗ್, ಆಗ ದೇಶದ ಗಡಿಯಲ್ಲಿದ್ದ. ನಾನು, ಮಕ್ಕಳೊಂದಿಗೆ ತವರಿನಲ್ಲಿದ್ದೆ. ಅಪ್ಪ ವಿದೇಶಕ್ಕೆ ಹೋಗಿದ್ದರು. ತಮ್ಮ ಊಟಿಯಲ್ಲಿ ನೌಕರಿ ಮಾಡುತ್ತಿದ್ದ. ಇಂಥ ಸಂದರ್ಭದಲ್ಲಿಯೇ ಹತ್ತು ನಿಮಿಷ ನಿಂತುಕೊಂಡರೆ ಸಾಕು, ಬೆನ್ನಿನ ಹಿಂಭಾಗಕ್ಕೆ ಭರ್ಜಿಯಿಂದ ಚುಚ್ಚಿದ್ದಷ್ಟು ನೋವಾಗುತ್ತಿತ್ತು. ಬವಳಿ ಬಂದು ಬೀಳುವಂತಾಗುತ್ತಿತ್ತು. ಆರೋಗ್ಯದಲ್ಲಿ ಏನೋ ಏರುಪೇರಾಗಿರಬಹುದು. ಒಮ್ಮೆ ಚೆಕಪ್ ಮಾಡಿಸೋಣ ಎಂದುಕೊಂಡೇ ದಿಲ್ಲಿಯಲ್ಲಿದ್ದ ಮಿಲಿಟರಿ ಆಸ್ಪತ್ರೆಗೆ ಬಂದೆ. ಅಲ್ಲಿನ ವೈದ್ಯರು ಕೂಲಂಕಶವಾಗಿ ಪರೀಕ್ಷಿಸಿ ಹೇಳಿದರು: 'ಬೆನ್ನಹುರಿಯ ಮೇಲೆ ಗೆಡ್ಡೆಯಿದೆ. ಅದು ತುಂಬಾ ದೊಡ್ಡದಾಗಿದೆ. ಅದನ್ನು ತೆಗೆಯದಿದ್ದರೆ ಜೀವಕ್ಕೆ ಅಪಾಯ. ಮೇಜರ್ ಆಪರೇಷನ್ ಆಗಬೇಕು. ಈ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು. ಗೆಡ್ಡೆ ತುಂಬಾ ದೊಡ್ಡದಿರುವುದರಿಂದ ಅದನ್ನು ತೆಗೆಯುವ ಸಂದರ್ಭದಲ್ಲಿ ಬೆನ್ನು ಮೂಳೆಯ ಐದಾರು ಪ್ರತ್ಯೇಕ ಭಾಗಗಳಿಗೂ ದೊಡ್ಡ ಪ್ರಮಾಣದ ಪೆಟ್ಟು ಬೀಳುತ್ತದೆ. ಈ ಸಂದರ್ಭದಲ್ಲಿ ಮಿದುಳಿನೊಂದಿಗೆ ಸಂಪರ್ಕ ಹೊಂದಿರುವ ಕೆಲವು ನರವ್ಯೂಹಗಳೂ ನಾಶವಾಗುತ್ತವೆ. ಇದರ ಒಟ್ಟು ಪರಿಣಾಮವಾಗಿ ದೇಹದ ಒಂದು ಭಾಗಕ್ಕೆ ಪಾರ್ಶ್ವವಾಯು ಹಿಡಿಯಬಹುದು. ಈ ಶಸ್ತ್ರಚಿಕಿತ್ಸೆಯಿಂದ ಪ್ರಾಣಕ್ಕೂ ಎರವಾಗಬಹುದು. ಒಂದು ವೇಳೆ ಶಸ್ತ್ರಚಿಕಿತ್ಸೆ ಯಶಸ್ವಿಯಾದರೆ, ದೇಹದ ಒಂದು ಭಾಗ ಸ್ವಾಧೀನ ಕಳೆದುಕೊಳ್ಳುವುದು ಗ್ಯಾರಂಟಿ. ಆನಂತರದಲ್ಲಿ ನಡೆದಾಡಲು ಸಾಧ್ಯವೇ ಇಲ್ಲ...'ಅವರ ಮಾತುಗಳನ್ನೆಲ್ಲ ಕೇಳಿದ ನಂತರ ಹೇಳಿದೆ: 'ಸರ್, ಆಗಿದ್ದಾಗ್ಲಿ. ಆಪರೇಷನ್ ಮಾಡಿಸ್ಕೋತೇನೆ. ನನಗೆ ಒಂದು ವಾರ ಟೈಂ ಕೊಡಿ. ಅಷ್ಟೂ ದಿನ ಸಮಾಧಾನ ಆಗುವಷ್ಟು ಓಡಾಡಿಬಿಡ್ತೀನಿ...' ಈ ಮಾತಿಗೆ ಡಾಕ್ಟರ್ ಒಪ್ಪಿದರು. ಮನೆಗೆ ಬಂದವಳೇ ಅಮ್ಮ ಮತ್ತು ಮಕ್ಕಳಿಂದ ವಿಷಯ ಮುಚ್ಚಿಟ್ಟೆ. ಆದರೆ ನನ್ನ ಪರಿಸ್ಥಿತಿಯನ್ನೆಲ್ಲ ವಿವರಿಸಿ ವಿಕ್ರಂಸಿಂಗ್‌ಗೆ ಸುದೀರ್ಘ ಪತ್ರ ಬರೆದೆ. ಆಪರೇಷನ್ ನಡೆದಾಗ ಒಂದು ವೇಳೆ ನಾನು ಸತ್ತು ಹೋದ್ರೆ ಆನಂತರದಲ್ಲಿ ಮಕ್ಕಳನ್ನು ಹೇಗೆ ಸಾಕಬೇಕು ಎಂದೂ ಅದರಲ್ಲಿ ವಿವರಿಸಿದ್ದೆ. ಪತ್ರವನ್ನು ಪೋಸ್ಟ್ ಮಾಡಿದ ಎರಡೇ ದಿನಕ್ಕೆ ಕಾರ್ಗಿಲ್ ಯುದ್ಧ ಶುರುವಾಗಿಬಿಟ್ಟಿತು.ಹಾಂ ಹೂಂ ಎನ್ನುವುದರೊಳಗೆ ಒಂದು ವಾರ ಕಳೆದುಹೋಯಿತು. ರೂಟೀನ್ ಚೆಕಪ್‌ಗೆ ಹೋಗಿ ಬರ್ತೇನೆ ಎಂದಷ್ಟೇ ಅಮ್ಮನಿಗೆ ತಿಳಿಸಿ ಆಸ್ಪತ್ರೆಗೆ ಬಂದಿದ್ದೆ. 'ಆಪರೇಷನ್ ಮಾಡೋಣ. ನಿನ್ನೊಂದಿಗೆ ಯಾರು ಬಂದಿದ್ದಾರಮ್ಮಾ?' ಎಂದು ವೈದ್ಯರು ಕೇಳಿದರು. 'ಗಂಡ ಯುದ್ಧ ಭೂಮಿಯಲ್ಲಿದ್ದಾನೆ. ತಂದೆ ವಿದೇಶಕ್ಕೆ ಹೋಗಿದ್ದಾರೆ. ತಮ್ಮ ಟ್ರೈನಿಂಗ್‌ನಲ್ಲಿದ್ದಾನೆ. ಅಮ್ಮ ಮೊಮ್ಮಕ್ಕಳೊಂದಿಗೆ ಊರಲ್ಲಿದ್ದಾರೆ. ಈಗ ನನ್ನೊಂದಿಗೆ ಇರೋದು ದೇವರು ಮತ್ತು ನೀವು. ಅಷ್ಟೆ. ಆಗಿದ್ದಾಗ್ಲಿ. ಆಪರೇಷನ್ ಮಾಡಿ. ಅದಕ್ಕೂ ಮುಂಚೆ ಕೊನೆಯದಾಗಿ ನನ್ನ ಗಂಡನ ಜೊತೆ ಮಾತಾಡಬೇಕು ಅನ್ನಿಸ್ತಿದೆ. ಅದಕ್ಕೆ ಅವಕಾಶ ಮಾಡಿಕೊಡಿ ಸಾರ್, ಪ್ಲೀಸ್...' ಅಂದೆ.ಆ ವೈದ್ಯರು, ಸ್ಯಾಟಲೈಟ್ ಫೋನ್ ಮೂಲಕ ವಿಕ್ರಂಸಿಂಗ್‌ನೊಂದಿಗೆ ಮಾತಾಡಲು ಅವಕಾಶ ಮಾಡಿಕೊಟ್ಟರು. 'ವಿಕ್ರಂ, ಈ ಯುದ್ಧದಲ್ಲಿ ನೀನು ಗೆಲ್ಲಬೇಕು. ನೀನು ಗೆದ್ದು ಬರುವುದನ್ನು ನೋಡಲು ನಾನು ಇರ್ತೀನೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ನಾನು ಸತ್ತು ಹೋದ್ರೆ...'ನನ್ನ ಮಾತುಗಳನ್ನು ಅಷ್ಟಕ್ಕೇ ತಡೆದ ವಿಕ್ರಂಸಿಂಗ್ ಹೇಳಿದ: 'ಆಪರೇಷನ್ ಸಕ್ಸಸ್ ಆಗಲಿ. ನಿನ್ನ ದೇಹದ ಒಂದು ಭಾಗ ನಿಷ್ಕ್ರಿಯವಾದ್ರೆ ಚಿಂತೆ ಬೇಡ. ನನ್ನ ತೋಳುಗಳು ಗಟ್ಟಿಯಾಗಿವೆ. ಸಾಯುವತನಕ ನಿನ್ನನ್ನು ಮಗುವಿನ ಥರಾ ಎತ್ತಿಕೊಂಡು ತಿರುಗಾಡ್ತೇನೆ. ಆದ್ರೆ ಸತ್ತು ಹೋಗ್ತೇನೆ ಅಂತ ಮಾತ್ರ ಹೇಳಬೇಡ ಪ್ಲೀಸ್...' ಆನಂತರದಲ್ಲಿ ನನಗೆ ಎಚ್ಚರವಾದಾಗ ಹತ್ತು ದಿನಗಳು ಕಳೆದುಹೋಗಿದ್ದವು. ಆ ಕಡೆ ಯುದ್ಧರಂಗದಲ್ಲಿ ನನ್ನ ಗಂಡ ಕರ್ನಲ್ ವಿಕ್ರಂಸಿಂಗ್ ಗೆಲವಿನ ಕೇಕೆ ಹಾಕಿದ್ದ. ಈ ಸಂದರ್ಭದಲ್ಲೇ ನನಗೆ ಒಂದರ ಹಿಂದೆ ಒಂದರಂತೆ ಮೂರು ಮೇಜರ್ ಆಪರೇಷನ್‌ಗಳಾಗಿದ್ದವು. ಬೆನ್ನಹುರಿಯ ಭಾಗದಲ್ಲಿದ್ದ ಗೆಡ್ಡೆಯನ್ನು ಸಂಪೂರ್ಣವಾಗಿ ತೆಗೆದು ಹಾಕುವ ವೇಳೆ, ಬೆನ್ನು ಮೂಳೆಯ ಹಲವು ಭಾಗವನ್ನು ಕತ್ತರಿಸಿ ಹಾಕಲಾಗಿತ್ತು. ಪರಿಣಾಮವಾಗಿ, ಆಪರೇಷನ್ ಮುಗಿದಾಗ, ನನ್ನ ಭುಜದ ಸುತ್ತ 183 ಹೊಲಿಗೆಗಳು ಬಿದ್ದಿದ್ದವು! ಎದೆಯಿಂದ ಕೆಳಗಿನ ಭಾಗ ನಿಷ್ಕ್ರಿಯಗೊಂಡಿತ್ತು. ಇಷ್ಟೆಲ್ಲಾ ಆಗಿದ್ದಾಗ ನನ್ನ ವಯಸ್ಸೆಷ್ಟು ಗೊತ್ತೆ? ಕೇವಲ 30 ವರ್ಷ!ಈ ಸಂದರ್ಭದಲ್ಲಿ ಉಳಿದೆಲ್ಲರಿಗಿಂತ ಬೇಗ ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಾತ ನನ್ನ ಗಂಡ. ಆತ ತಕ್ಷಣವೇ ವಿಆರ್‌ಎಸ್ ಪಡೆದುಕೊಂಡ. ಮಹಾರಾಷ್ಟ್ರದ ಅಹಮದ್‌ನಗರದಲ್ಲಿ ಆತನಿಗೆ ಪಿತ್ರಾರ್ಜಿತ ಆಸ್ತಿಯಿತ್ತು. ಇಡೀ ಕುಟುಂಬವನ್ನು ಅಲ್ಲಿಗೆ ಶಿಫ್ಟ್ ಮಾಡಿದ.ಆರೋಗ್ಯದಿಂದಿದ್ದ ಸಂದರ್ಭದಲ್ಲಿ ಮನೆಯ ತುಂಬಾ ಜಿಂಕೆಯಂತೆ ಜಿಗಿದಾಡುತ್ತಿದ್ದವಳು ನಾನು. ಆದರೆ ಈಗ ಎದ್ದು ನಿಲ್ಲಲು ಸಾಧ್ಯವೇ ಇರಲಿಲ್ಲ. ಇಡೀ ದಿನ ವ್ಹೀಲ್ ಚೇರ್‌ನ ಆಶ್ರಯದಲ್ಲೇ ಬದುಕಬೇಕಿತ್ತು. ಬಹಿರ್ದೆಸೆಗೆ ಹೋಗಬೇಕು ಅನ್ನಿಸಿದಾಗೆಲ್ಲ ಮತ್ತೊಬ್ಬರನ್ನು ಆಶ್ರಯಿಸಬೇಕಿತ್ತು. ಇದೊಂದು ಯಾತನೆ ಅನ್ನಿಸದಂತೆ ನನ್ನ ಗಂಡ ಮತ್ತು ಮಕ್ಕಳು ನೋಡಿಕೊಂಡರು. ಓಡಾಡಲು ಆಗುವುದಿಲ್ಲ ನಿಜ. ಆದರೆ ಕೈಗಳಂತೂ ಗಟ್ಟಿಯಾಗಿವೆ. ಹಾಗಾಗಿ, ಅಂಗವಿಕಲರಿಗೆಂದೇ ಇರುವ ಬೈಕ್ ಓಡಿಸಬಾರದೇಕೆ ಅನ್ನಿಸಿದ್ದೇ ಆಗ. ಕೈಗಳಿಂದಲೇ ನಿಯಂತ್ರಿಸಬಲ್ಲ ಕಾರ್ ಓಡಿಸಿದರೆ ಹೇಗೆ ಎಂಬ ಯೋಚನೆಯೂ ಆಗಲೇ ಬಂತು. ಹಲವು ಗಣ್ಯರು ಭಾಗವಹಿಸಿದ್ದ ಒಂದು ಕಾರ್ಯಕ್ರಮದಲ್ಲಿ ನನ್ನ ಅನಿಸಿಕೆಯನ್ನು ಸ್ಪಷ್ಟವಾಗಿ ಹೇಳಿಬಿಟ್ಟೆ. ಯಾರಾದ್ರೂ ಒಂದು ಕಾರ್ ಕೊಡಿಸಿದರೆ, ಅದರಲ್ಲಿ ಸಾಹಸ ಮೆರೆಯಲು ನಾನಂತೂ ಸಿದ್ಧ ಎಂದೂ ಸೇರಿಸಿದೆ. ನನ್ನ ಮಾತು ಕೇಳಿಸಿಕೊಂಡ ಉದ್ಯಮಿ ವಿಜಯ್ ಮಲ್ಯ, ಕೈಗಳಿಂದ ನಿಯಂತ್ರಿಸಬಲ್ಲ ಕಾರ್ ಕೊಡಿಸಿದರು. ನಾಲ್ಕು ಚಕ್ರಗಳನ್ನು ಹೊಂದಿದ ಬೈಕ್‌ಗೆ ಪ್ರಾಯೋಜಕರಾದರು. ಅಷ್ಟೆ. ನನ್ನ ಉತ್ಸಾಹಕ್ಕೆ ರೆಕ್ಕೆಗಳು ಸೇರಿಕೊಂಡವು. ಮೊದಲಿಗೆ, ಪ್ರತೀಕ್ ಗೆಹ್ಲೋಟ್ ಎಂಬ ಚಾಲಕನನ್ನು ಜತೆಗಿಟ್ಟುಕೊಂಡು ದಿಲ್ಲಿಯಿಂದ ಲೇಹ್‌ಗೆ 3000 ಕಿ.ಮಿ. ದೂರವನ್ನು ಪ್ರಯಾಣಿಸಿದೆ. ಅದರ ಹಿಂದೆಯೇ ಬೈಕ್‌ನಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಸುತ್ತಾಡಿ ಬಂದೆ.ಈ ಮಧ್ಯೆ ನನ್ನ ಮಗಳನ್ನು ಈಜು ಸ್ಪರ್ಧೆಗೆ ಕಳಿಸಬೇಕಿತ್ತು. ಅದಕ್ಕೂ ಮುಂಚೆ ತರಬೇತಿಗೆಂದು ಸ್ವಿಮ್ಮಿಂಗ್ ಫೂಲ್‌ಗೆ ಕರೆದೊಯ್ದರೆ, ಆಕೆ ನೀರಿಗಿಳಿಯಲು ಹೆದರಿಕೊಂಡಳು. ಮಗಳಿಗೆ ಧೈರ್ಯ ತುಂಬುವ ಉದ್ದೇಶದಿಂದ ನಾನೇ ನೀರಿಗಿಳಿದರೆ ಹೇಗೆ ಅನ್ನಿಸಿತು. ತಕ್ಷಣವೇ ಸುತ್ತಮುತ್ತ ಇದ್ದವರನ್ನು ಕರೆದು, ನನ್ನನ್ನು ನೀರಿಗೆ ಇಳಿಸಿ ಪ್ಲೀಸ್ ಎಂದೆ. ಅವತ್ತು, ಕಾಲುಗಳಲ್ಲಿ ಚಲನೆಯಿರಲಿಲ್ಲ ನಿಜ, ಆದರೆ ಕೈಗಳ ನೆರವಿನಿಂದಲೇ ಈಜಬಹುದು ಎಂದು ತೋರಿಸಿಕೊಟ್ಟಿದ್ದೆ. ಮರುದಿನದಿಂದ ಮಗಳೊಂದಿಗೆ ನಾನೂ ತರಬೇತಿಗೆ ಹೊರಟೆ. ಒಂದು ತಿಂಗಳ ತರಬೇತಿಯ ನಂತರ ಪ್ರವಾಹಕ್ಕೆ ಎದುರಾಗಿ ಈಜಬಲ್ಲೆ ಅನ್ನಿಸಿದಾಗ ಯಮುನಾ ನದಿಯಲ್ಲಿ ಒಂದು ಕಿ.ಮಿ. ದೂರದವರೆಗೂ ಈಜಿದೆ. ಅದು ಲಿಮ್ಕಾ ಬುಕ್‌ನಲ್ಲಿ ದಾಖಲೆಯಾಯಿತು.ಹೀಗೆ, ಒಂದೊಂದೇ ಪುಟ್ಟ ಯಶಸ್ಸು ಕಂಡಾಗಲೇ, ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಬಾರದೇಕೆ ಅನಿಸಿದ್ದು. ಇಂಥದೊಂದು ಯೋಚನೆ ಬಂದಾಗ ನನಗೆ 34 ವರ್ಷ! ಕ್ರೀಡಾಪಟುಗಳ ಪಾಲಿಗೆ ಅದು ನಿವೃತ್ತಿಯ ವಯಸ್ಸು! ಅದು ಗೊತ್ತಿದ್ದರೂ ನನ್ನ ಒಳಮನಸ್ಸು, ಆಗಿದ್ದಾಗಲಿ, ಒಮ್ಮೆ ಪ್ರಯತ್ನಿಸು ಎಂದು ಪಿಸುಗುಡುತ್ತಿತ್ತು. ಎದ್ದು ನಿಲ್ಲುವ ತ್ರಾಣವೇ ನನಗಿರಲಿಲ್ಲವಾದ್ದರಿಂದ ವ್ಹೀಲ್ ಚೇರ್‌ನಲ್ಲಿ ಕೂತು ಶಾಟ್‌ಪುಟ್, ಡಿಸ್ಕಸ್, ಜಾವೆಲಿನ್ ಎಸೆಯುವ ಆಟಗಳು ಮಾತ್ರ ನನ್ನ ಪಾಲಿಗಿದ್ದವು. ವ್ಹೀಲ್‌ಚೇರ್‌ನಲ್ಲಿ ಕೂತು ಡಿಸ್ಕಸ್ ಎಸೆವ ಸಂದರ್ಭದಲ್ಲಿ ಕಾಲುಗಳನ್ನು ಚೇರ್‌ಗೆ ಬಿಗಿದು ಕಟ್ಟಲಾಗಿತ್ತು. ಇಂಥ ಸಂದರ್ಭದಲ್ಲಿ ಸಮಸ್ತ ಬಲವನ್ನೂ ಬಳಸಿ ಡಿಸ್ಕಸ್ ಎಸೆಯಬೇಕು. ಆಗ, ಇಡೀ ದೇಹವೇ ಜಗ್ಗಿದಂತಾಗಿ, ಮೂತ್ರಕ್ಕೆ ಹೋಗುವಂತಾಗುತ್ತಿತ್ತು. ತರಬೇತಿಗೆ ಹೊರಟಾಗ, ಇಂಥ ತೊಂದರೆಗಳನ್ನೆಲ್ಲ ನಾನುನಿವಾರಿಸಿಕೊಳ್ಳಬೇಕಿತ್ತು. ಇರಲಿ, ಒಂದು ಕೈ ನೋಡೋಣ ಎಂದು, ಮೊದಲಿಗೆ ಮಹಾರಾಷ್ಟ್ರವನ್ನು ಪ್ರತಿನಿಧಿಸಿ ದೇಶೀ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಯಾವುದೇ ತರಬೇತಿ ಇಲ್ಲದಿದ್ದರೂ ಅಲ್ಲಿ ನಾಲ್ಕನೇ ಸ್ಥಾನ ಲಭಿಸಿತು. ಟ್ರೈನಿಂಗ್‌ಗೆ ಹೋದರೆ ಖಂಡಿತ ದೊಡ್ಡ ಸಾಧನೆ ಮಾಡಬಲ್ಲೆ ಅನ್ನಿಸಿದಾಗ ದಿಲ್ಲಿಯ ವಿಮಾನ ಹತ್ತಿದೆ. ಕಾಲುಗಳು ಸ್ವಾಧೀನದಲ್ಲಿಲ್ಲ ಎಂಬುದನ್ನು ಮರೆತು ತರಬೇತಿಯಲ್ಲಿ ಮೈ-ಮನಸ್ಸನ್ನು ಗಟ್ಟಿಗೊಳಿಸಿಕೊಂಡೆ. ಪರಿಣಾಮ, 2011ರಲ್ಲಿ ನಡೆದ ವಿಶ್ವ ಪ್ಯಾರಾಲಿಂಪಿಕ್ ಕ್ರೀಡಾ ಕೂಟದಲ್ಲಿ ಶಾಟ್‌ಪುಟ್ ಎಸೆತದಲ್ಲಿ ಬೆಳ್ಳಿಪದಕ ಲಭಿಸಿತು. ಅದೇ ವರ್ಷ, ಮಲೇಷ್ಯಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಡಿಸ್ಕಸ್, ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಸಿಕ್ಕಿತು. ಅರ್ಜುನ ಪ್ರಶಸ್ತಿಯೂ ಒಲಿದು ಬಂತು. ಬಹುಶಃ ಆಪರೇಷನ್ ಆಗದೆ ಹೋಗಿದ್ದರೆ, ದೇಹದ ಅರ್ಧ ಭಾಗ ಸ್ವಾಧೀನ ಕಳೆದುಕೊಳ್ಳದೆ ಹೋಗಿದ್ದರೆ, ನಾನು ಇಂಥದೊಂದು ಸಾಧನೆ ಮಾಡಲು ಆಗ್ತಾ ಇರಲಿಲ್ಲ ಅನ್ನಿಸ್ತಿದೆ. ನೋವು-ನಲಿವನ್ನು ಸಮಪ್ರಮಾಣದಲ್ಲಿ ಕೊಟ್ಟ ಈ ಬದುಕಿಗೆ; ನನ್ನ ಅಂಗವೈಕಲ್ಯವನ್ನು ಗಮನಕ್ಕೆ ತೆಗೆದುಕೊಳ್ಳದೆ ಮಗುವಿಗಿಂತ ಹೆಚ್ಚಾಗಿ ನನ್ನನ್ನುನೋಡಿಕೊಳ್ಳುತ್ತಿರುವ ಗಂಡ ಮತ್ತು ಮಕ್ಕಳಿಗೆ ಋಣಿ...'----ಸ್ವಾಧೀನದಲ್ಲಿಲ್ಲದ ಭಾಗವನ್ನು ವ್ಹೀಲ್‌ಚೇರ್‌ಗೆ ಬಿಗಿದು ಕಟ್ಟಿ, ಜಾವೆಲಿನ್, ಡಿಸ್ಕಸ್, ಶಾಟ್‌ಪುಟ್‌ಗಳನ್ನು ದೂರದೂರ ಎಸೆದು ಪದಕ ಗೆದ್ದ, ಆ ಮೂಲಕ ಬದುಕನ್ನೂ ಗೆದ್ದ ಈ ದಿಟ್ಟೆಗೆ ಅಭಿನಂದನೆ ಹೇಳಬೇಕು ಅನ್ನಿಸಿದರೆ deesplace115@yahoo.com
- ಎ.ಆರ್. ಮಣಿಕಾಂತ್armanikanth@gmail.com
No comments:
Post a Comment