Tuesday, 3 December 2013
ನೀರು, ಬೆಳಕು, ಗಾಳಿಗಿಲ್ಲದ ಜಾತಿ ನಮಗೇಕೆಂದ ಹ್ಯಾಲಿ
ನೀರು, ಬೆಳಕು, ಗಾಳಿಗಿಲ್ಲದ ಜಾತಿ ನಮಗೇಕೆಂದ ಹ್ಯಾಲಿ
1940- 50ರ
ದಶಕದಲ್ಲಿ ಇಂಗ್ಲೆಂಡ್-ಅಮೆರಿಕ ಸೇರಿದಂತೆ ಎಲ್ಲ ಯುರೋಪ್ ರಾಷ್ಟ್ರಗಳಲ್ಲಿಯೂ ವರ್ಣಬೇಧ
ನೀತಿ ಒಂದು ಆಚರಣೆಯಂತೆಯೇ ಜಾರಿಯಲ್ಲಿತ್ತು. ನಾವೇ ಶ್ರೇಷ್ಠರು ಎಂಬ ಭಾವನೆ ಬಹುಪಾಲು
ಬಿಳಿಯರಿಗಿತ್ತು. ಕರಿಯ ಮೈಬಣ್ಣದ ಜನ ಬಿಳಿಯರ ಸೇವೆ ಮಾಡಲೆಂದೇ ಹುಟ್ಟಿದವರು ಎಂದು
ಹೆಚ್ಚಿನ ಬಿಳಿಯರು ನಂಬಿದ್ದರು. ಹಾಗಂತಲೇ ವಾದಿಸುತ್ತಿದ್ದರು. ಕರಿಯ ಜನಾಂಗದ
ವಿದ್ಯಾರ್ಥಿಗಳು ಶಾಲೆಗೆ ಹೋದರೆ, ಅವರ ಮೇಲೆ ಹಲ್ಲೆ ಮಾಡುತ್ತಿದ್ದರು,
ಹೆದರಿಸುತ್ತಿದ್ದರು. ಹೀಯಾಳಿಸುತ್ತಿದ್ದರು. ಹಿಂಸಿಸುತ್ತಿದ್ದರು. ವರ್ಣಬೇಧ ನೀತಿಯನ್ನು
ಆಚರಿಸುವಂತಿಲ್ಲ ಎಂಬ ಕಾನೂನು ಕಾಗದದ ಮೇಲೆ ಮಾತ್ರ ಜಾರಿಯಲ್ಲಿತ್ತು. ಬಿಳಿಯ
ವಿದ್ಯಾರ್ಥಿಗಳ ದಬ್ಬಾಳಿಕೆ ತಡೆಯಲಾಗದೆ, ಕರಿಯ ಜನಾಂಗದ ಅದೆಷ್ಟೋ ವಿದ್ಯಾರ್ಥಿಗಳು
ಅರ್ಧಕ್ಕೇ ಶಾಲೆ ಬಿಟ್ಟರು. ದೈಹಿಕ ಹಲ್ಲೆಯ ಕಾರಣದಿಂದ ಹಲವರು ಅಂಗವಿಕಲರಾದರು. ತಿರುಗಿ
ಬಿದ್ದ ಕೆಲವರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ಜೈಲಿಗೆ ತಳ್ಳಲಾಯಿತು. ಪರಿಸ್ಥಿತಿ
ಹೀಗಿದ್ದಾಗಲೇ ಜಾರ್ಜ್ ಹ್ಯಾಲಿ ಎಂಬ ನೀಗ್ರೋ ಯುವಕ, ಬಿಳಿಯರ ಎಲ್ಲ ಕಿರುಕುಳವನ್ನು
ಸಹಿಸಿಕೊಂಡು ಕಾನೂನು ಪದವಿ ಓದಿದ. ಮುಂದೆ ಅಮೆರಿಕದ ಸರ್ಕಾರದಲ್ಲಿ ಅತ್ಯಂತ ಪ್ರಮುಖ
ಹುದ್ದೆಗಳನ್ನು ಅಲಂಕರಿಸಿದ. ರಿಚರ್ಡ್ ನಿಕ್ಸನ್‌ನಿಂದ ಆರಂಭಿಸಿ, ಬಿಲ್
ಕ್ಲಿಂಟನ್‌ವರೆಗೆ ಎಲ್ಲ ಅಧ್ಯಕ್ಷರ ಅಚ್ಚುಮೆಚ್ಚಿನ ಅಧಿಕಾರಿಯಾಗಿದ್ದ. ವಿದ್ಯಾರ್ಥಿ
ಜೀವನದಲ್ಲಿ ಆತ ಸವಾಲುಗಳಿಗೆ ಎದೆಯೊಡ್ಡಿ ಗೆದ್ದನಲ್ಲ; ಆ ಯಶೋಗಾಥೆಯ ಅನಾವರಣ ಇಲ್ಲಿದೆ.ಜಾರ್ಜ್‌ಹ್ಯಾಲಿ,
ಅಟ್ಲಾಂಟಾದಲ್ಲಿನ ಮೋರ್‌ಹೌಸ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದ. ಅದಕ್ಕೂ ಮೊದಲು ಆತ
ಅಮೆರಿಕದ ಸೇನೆಯಲ್ಲೂ ಸೇವೆ ಸಲ್ಲಿಸಿದ್ದ. ಮೋರ್‌ಹೌಸ್ ಕಾಲೇಜಿನ ಪ್ರಾಂಶುಪಾಲರಾಗಿದ್ದ
ಬೆಂಜಮಿನ್ ಮೇಸ್ ಅವರ ಜೀವನಾದರ್ಶಗಳಿಂದ ಹ್ಯಾಲಿ ಪ್ರಭಾವಿತನಾಗಿದ್ದ. 'ಜೀವನದಲ್ಲಿ
ಮಹತ್ವದ್ದನ್ನು ಸಾಧಿಸಬೇಕೆಂಬ ಕನಸುಗಳಿದ್ದಾಗ, ಒಂದೊಮ್ಮೆ ಸಾವು ಸಂಭವಿಸಿದರೂ ಅದು
ದುರಂತವಲ್ಲ. ಆದರೆ, ಕನಸುಗಳೇ ಇಲ್ಲದೆ ಬದುಕುವುದಿದೆಯಲ್ಲ, ಅದಕ್ಕಿಂತ ದೊಡ್ಡ ದುರಂತ
ಇನ್ನೊಂದಿಲ್ಲ' ಎಂಬ ಬೆಂಜಮಿನ್ ಮೇಸ್‌ರ ಮಾತುಗಳನ್ನು ಹ್ಯಾಲಿ ತುಂಬಾ ಹಚ್ಚಿಕೊಂಡಿದ್ದ. ಈ
ಮಾತುಗಳನ್ನು ಕನವರಿಸುತ್ತಲೇ ಕಾನೂನು ಪದವಿ ಗಳಿಸಬೇಕು ಎಂಬ ಕನಸೊಂದಕ್ಕೆ ಹ್ಯಾಲಿ ಕೈ
ಚಾಚಿದ್ದ.ಹ್ಯಾಲಿಗೆ, ಅಮೆರಿಕದ ಪ್ರಖ್ಯಾತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ
ಕಾನೂನು ಪದವಿಗೆ ಸೀಟ್ ಸಿಗುವುದು ಖಂಡಿತ ಕಷ್ಟವಿರಲಿಲ್ಲ. ಆದರೆ, ಜಾರ್ಜ್ ಹ್ಯಾಲಿಯ
ತಂದೆಯ ಸಂಕಲ್ಪ ಬೇರೆಯೇ ಇತ್ತು. ಮಗ ಕಾನೂನು ಪದವಿ ಪಡೆಯುವುದಾದರೆ, ಅದೇ ಅಮೆರಿಕದ
ಅರ್ಕನ್ಸಾಸ್ ರಾಜ್ಯದ ವಿಶ್ವವಿದ್ಯಾಲಯದಲ್ಲಿಯೇ ಓದಲಿ ಎಂಬುದು ಅವರ ಆಸೆಯಾಗಿತ್ತು.
ಕಾರಣ, ಆ ರಾಜ್ಯದಲ್ಲಿ ವರ್ಣಬೇಧ ನೀತಿ ವ್ಯಾಪಕವಾಗಿ ಜಾರಿಯಲ್ಲಿತ್ತು. ತನ್ನ ಧೀರ ಮಗ
ಅದಕ್ಕೆ ಸೆಡ್ಡು ಹೊಡೆಯಲಿ. ಕರಿಯರೂ ಉಳಿದೆಲ್ಲರಂತೆಯೇ ಮನುಷ್ಯರು. ಅವರು ಎಲ್ಲ
ಕೆಲಸಕ್ಕೂ ಸಮರ್ಥರು ಎಂದು ಎಲ್ಲ ಬಿಳಿಯರಿಗೂ ನನ್ನ ಮಗ ತೋರಿಸಿಕೊಡಲಿ ಎಂಬುದು ಆ ತಂದೆಯ
ಕನಸಾಗಿತ್ತು. ಈ ಕಾರಣದಿಂದಲೇ-'ನಾನು ಕಾನೂನು ಪದವಿಗೆ ಸೇರ್ತೇನೆ' ಎಂದು ಹ್ಯಾಲಿ
ಹೇಳಿದಾಗ, ಅವರು ಅರ್ಕನ್ಸಾಸ್ ವಿ.ವಿ.ಗೆ ಸೇರು ಎಂದು ಒತ್ತಾಯ ಮಾಡಿದರು. ಈ ಒತ್ತಾಯದ
ಹಿಂದಿರುವ ಕಾರಣಗಳನ್ನೂ ತಿಳಿಸಿದರು. 'ಪದವಿ ಮುಗಿಸುವ ಹೊತ್ತಿಗೆ ಈ ರಾಜ್ಯದಲ್ಲಿ ಒಂದು
ಕ್ರಾಂತಿಕಾರಕ ಬೆಳವಣಿಗೆ ಆಗಬೇಕು. ಅದಕ್ಕೆ ನೀನು ಕಾರಣನಾಗಬೇಕು. ಒಂದು ಮಾತು
ನೆನಪಿರಲಿ: ಹಿಂಸೆಯಿಂದ, ಸೇಡಿನ ಭಾವನೆಯಿಂದ ಸಮಾಜದಲ್ಲಿ ಖಂಡಿತ ಕ್ರಾಂತಿಯಾಗುವುದಿಲ್ಲ.
ಶಾಂತಿಯಿಂದ ಮಾತ್ರ ನಾವು ಎದುರಾಳಿಗಳ ಮನಸ್ಸು ಗೆಲ್ಲಲು ಸಾಧ್ಯ. ಕಾಲೇಜಿಗೆ ಸೇರಿದ
ನಂತರ, ಯಾವುದೇ ಸಂದರ್ಭದಲ್ಲೂ ನೀನು ದುಡುಕಬೇಡ...' ಎಂದು ಹೇಳಿಯೇ ಬೀಳ್ಕೊಟ್ಟಿದ್ದರು.ತಂದೆಯ
ಮಾತುಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಲೇ ಜಾರ್ಜ್ ಹ್ಯಾಲಿ, ಅರ್ಕನ್ಸಾಸ್
ವಿಶ್ವವಿದ್ಯಾಲಯದ ಮುಖ್ಯಸ್ಥರ ಮುಂದೆ ನಿಂತಿದ್ದ. ಅವರು, ಜಾರ್ಜ್‌ಹ್ಯಾಲಿಯ ಹಿನ್ನೆಲೆ
ಹಾಗೂ ಆತ ಪದವಿಯಲ್ಲಿ ಪಡೆದ ಅಂಕಗಳು ಹಾಗೂ ಪ್ರಶಸ್ತಿಗಳನ್ನು ಗಮನಿಸಿ ಮೆಚ್ಚುಗೆ
ವ್ಯಕ್ತಪಡಿಸಿ ಹೇಳಿದರು: 'ವರ್ಣಬೇಧ ನೀತಿಯ ಆಚರಣೆ ತಪ್ಪು ಎಂದು ನಾವು ಹಲವು ಬಾರಿ
ತಿಳಿಸಿದ್ದಾಗಿದೆ. ಏನೂ ಪ್ರಯೋಜನವಾಗಿಲ್ಲ. ಬಿಳಿಯ ವಿದ್ಯಾರ್ಥಿಗಳು ಏನು ಮಾಡುವುದಕ್ಕೂ
ಹೇಸುವುದಿಲ್ಲ. ಈಗ ಒಂದು ಕೆಲಸ ಮಾಡೋಣ. ಕಾಲೇಜಿದೆಯಲ್ಲ, ಅಲ್ಲಿಗೆ ಸಮೀಪದ
ನೆಲಮಾಳಿಗೆಯಲ್ಲಿ ಒಂದು ಕೊಠಡಿಯಿದೆ. ಅಲ್ಲಿ ನಿಮ್ಮ ವಾಸಕ್ಕೆ ವ್ಯವಸ್ಥೆ ಮಾಡುತ್ತೇನೆ.
ಕಾಲೇಜಿನಿಂದ ಆ ನೆಲಮಹಡಿಗೆ ಹೋಗಿ ಬರಲು ಒಂದು ಇಕ್ಕಟ್ಟಾದ ದಾರಿಯಿದೆ. ಆ ಮೂಲಕವೇ ನೀವು
ಓಡಾಡಿ. ಮುಖ್ಯದಾರಿಯಲ್ಲಿ ಓಡಾಡಿದರೆ ಹಲ್ಲೆಯಾಗಬಹುದು. ಬೆಳಗ್ಗೆ ಎಲ್ಲರಿಗಿಂತ ಮೊದಲೇ
ಸಮೀಪದ ಅಂಗಡಿಗೆ ಹೋಗಿ ತಿಂಡಿ,-ಊಟದ ಪಾರ್ಸೆಲ್ ತಂದು ಬಿಡಿ. ಹೋಟೆಲುಗಳಲ್ಲಿಯೇ ನೀವು
ಊಟಕ್ಕೆ ಕೂತರೆ ಅಲ್ಲೂ ಗಲಾಟೆಯಾಗಬಹುದು. ಹಾಗಾಗಿ ಅಂಥ ಪ್ರಯತ್ನಕ್ಕೆ ಮುಂದಾಗಬೇಡಿ...'
ಇಷ್ಟು ಹೇಳಿದ ಮುಖ್ಯಸ್ಥರು, ಎದ್ದು ಬಂದು ನೆಲಮಾಳಿಗೆಗೆ ತಲುಪಲು ಇದ್ದ
ಗುಪ್ತದಾರಿಯನ್ನು ತೋರಿಸಿದರು. ಅದು ಕತ್ತಲ ಗವಿಯಂತಿತ್ತು. ಉಸಿರು ಬಿಗಿಹಿಡಿದೇ ಆ
ದಾರಿಯಲ್ಲಿ ನಡೆಯಬೇಕಿತ್ತು.ಮೊದಲ ದಿನ ಹ್ಯಾಲಿ ತರಾತುರಿಯಿಂದ ತರಗತಿಗೆ ಬಂದ.
ಆತ ಕ್ಲಾಸ್‌ರೂಂ ತಲುಪುವ ವೇಳೆಗೆ ಒಳಗಿದ್ದವರೆಲ್ಲ ಜೋರಾಗಿಯೇ ಚರ್ಚೆಗೆ ತೊಡಗಿದ್ದರು.
ಒಬ್ಬ ನೀಗ್ರೋ ಬಂದಿದಾನಂತೆ. ನಮ್ಮ ಜೊತೇಲಿ ಓದ್ತಾನಂತೆ... ಹೀಗೆಲ್ಲ
ಮಾತನಾಡುತ್ತಿದ್ದವರು, ಬಾಗಿಲಲ್ಲಿ ಜಾರ್ಜ್ ಹ್ಯಾಲಿಯನ್ನು ಕಂಡು ಕ್ಷಣ ಮೌನವಾದರು.
ಹ್ಯಾಲಿ, ಎಲ್ಲರನ್ನೂ ಒಮ್ಮೆ ಸೂಕ್ಷ್ಮವಾಗಿ ಗಮನಿಸಿದ. ನಂತರ, ತನಗೆ ಮೀಸಲಾಗಿದ್ದ
ಜಾಗದಲ್ಲಿ ಹೋಗಿ ಕೂತ. ಮೂಲೆಯಲ್ಲಿ ಅವನಿಗೆ ಜಾಗ ಮಾಡಲಾಗಿತ್ತು. ಅಲ್ಲಿ ಅವನು ಒಬ್ಬಂಟಿ.
ಅಧ್ಯಾಪಕರು ಪಾಠ ಆರಂಭಿಸಿದರೆ, ಸುತ್ತಮುತ್ತ ಕುಳಿತಿದ್ದ ಬಿಳಿಯರೆಲ್ಲ ಕೊಂಕು ಮಾತು,
ಗೇಲಿಗಳಿಂದ ಹ್ಯಾಲಿಯ ಮನಸ್ಸನ್ನು ಇಂಚಿಂಚಾಗಿ ಕೊಲ್ಲಲು ನಿಂತು ಬಿಟ್ಟರು.ಎರಡನೇ
ದಿನ ಮತ್ತೂ ಘೋರವಿತ್ತು. ಅವತ್ತು ತರಗತಿ ಮುಗಿದ ತಕ್ಷಣ ಹ್ಯಾಲಿಯನ್ನು ಸುತ್ತುವರಿದ
ಬಿಳಿಯ ವಿದ್ಯಾರ್ಥಿಗಳು-'ಹೇ ಕರಿಯಾ, ನಮ್ಮ ದೇಶಕ್ಕೆ ಯಾಕೆ ಬಂದಿದೀಯ? ನೀನು ಓದಿ
ಏನಾಗಬೇಕಿದೆ? ತೊಲಗು ಇಲ್ಲಿಂದ...' ಎಂದು ಅಬ್ಬರಿಸಿದರು. ಮುಂದೆ ಹ್ಯಾಲಿಯನ್ನು
ದಿನದಿನವೂ ಅವಮಾನಿಸುವುದು ಬಿಳಿಯರ ಅಭ್ಯಾಸವೇ ಆಗಿಹೋಯಿತು. ಒಮ್ಮೆಯಂತೂ ಆರು ಮಂದಿ
ಪುಂಡರು, ಹ್ಯಾಲಿಯ ಮೇಲೆ ಕಾರು ಹರಿಸಿಬಿಟ್ಟರು. ತತ್ತರಿಸಿದ ಈತ ನೆಲಕ್ಕೆ ಬಿದ್ದು
ನರಳುತ್ತಿದ್ದರೆ, ಅವರೆಲ್ಲ ಕಾರಿನಲ್ಲಿ ಕೂತು ಕೇಕೆ ಹಾಕುತ್ತಿದ್ದರು.ಹ್ಯಾಲಿಯ
ವಾಸಕ್ಕೆಂದು ನೆಲಮಾಳಿಗೆಯಲ್ಲಿ ರೂಮ್ ಇತ್ತಲ್ಲ; ಅಲ್ಲಿ, ಯಾವುದೇ ಮೂಲಭೂತ ಸೌಲಭ್ಯವೂ
ಇರಲಿಲ್ಲ. ಕನಿಷ್ಠ ಶೌಚಾಲಯದ ಅನುಕೂಲವಿರಲಿಲ್ಲ. ಎಲ್ಲರೂ ಉಪಯೋಗಿಸುವ ಶೌಚಾಲಯವನ್ನೇ
ಒಮ್ಮೆ ಹೊಕ್ಕಿದ್ದಕ್ಕೆ ಸಿಟ್ಟಿಗೆದ್ದ ಬಿಳಿಯ ವಿದ್ಯಾರ್ಥಿಗಳು, ಗುಂಪಾಗಿ ಬಂದು, ಮೂತ್ರ
ತುಂಬಿದ ಪ್ಯಾಕ್ ಒಂದನ್ನು ಹ್ಯಾಲಿಯ ಮುಖದ ಮೇಲೆ ಎಸೆದಿದ್ದರು. ಓದುವುದನ್ನು ಇಷ್ಟಕ್ಕೇ
ನಿಲ್ಲಿಸಿ ಹೋಗಿಬಿಟ್ರೆ ಸರಿ; ಇಲ್ಲಾಂದ್ರೆ ನಿನ್ನನ್ನು ಮುಗಿಸಿಬಿಡ್ತೇವೆ ಎಂದು ಪದೇ
ಪದೆ ಪತ್ರ ಬರೆದು ಹೆದರಿಸಿದರು. ಕಾರಣವಿಲ್ಲದೇ ಜಗಳಕ್ಕೆ ಬರುತ್ತಿದ್ದರು. ರೂಂನಲ್ಲಿ
ಅವನಿಲ್ಲದ ಸಮಯ ನೋಡಿ, ನೇಣಿನ ಕುಣಿಕೆಯನ್ನು ಇಳಿಬಿಟ್ಟು, ನಿನ್ನನ್ನು ಇದಕ್ಕೆ
ನೇತುಹಾಕ್ತೇವೆ ಎಂದು ಚೀಟಿ ಬರೆದಿಟ್ಟು ಹೋಗುತ್ತಿದ್ದರು. ಇಂಥ ಸಂದರ್ಭಗಳಲ್ಲೆಲ್ಲ
ತಿರುಗಿ ಬೀಳಲು ಹ್ಯಾಲಿ ಯೋಚಿಸುತ್ತಿದ್ದ. ಈ ಸಂಬಂಧವಾಗಿ ದೂರದ ಊರಲ್ಲಿದ್ದ ತಂದೆಗೆ
ಪತ್ರ ಬರೆದು ವಿವರಿಸಿದ್ದ. ಅವರು ತಕ್ಷಣವೇ ಉತ್ತರಿಸುತ್ತಿದ್ದರು: 'ಸೇಡಿನಿಂದ ಶಾಂತಿ
ಸಾಧ್ಯವಿಲ್ಲ. ಹೊಡೆದಾಟದಿಂದ ಪ್ರಯೋಜನವಿಲ್ಲ. ಶಾಂತಿಯಿಂದ ಅವರನ್ನು ಗೆಲ್ಲಲು
ಪ್ರಯತ್ನಿಸು. ನೀನು ಅಲ್ಲಿಗೆ ಹೋಗಿರುವುದು ಓದುವುದಕ್ಕೇ ವಿನಃ ಹೊಡೆದಾಡುವುದಕ್ಕಲ್ಲ.
ನೆನಪಿಡು...'ಹ್ಯಾಲಿಗೆ ಅಪ್ಪನ ಮಾತೆಂದರೆ ವೇದವಾಕ್ಯ. ಬಿಳಿಯರ ಎಲ್ಲ
ಉಪಟಳವನ್ನೂ ಆತ ತುಟಿಕಚ್ಚಿ ಸಹಿಸಿಕೊಂಡ. ಪದೇ ಪದೆ ಮೂತ್ರಾಲಯಕ್ಕೆ ಹೋಗಬೇಕಾಗುತ್ತದೆ
ಎಂಬ ಕಾರಣಕ್ಕೆ ನೀರು ಕುಡಿಯುವುದನ್ನೇ ನಿಲ್ಲಿಸಿದ. ಊಟವನ್ನು ಕಡಿಮೆ ಮಾಡಿದ. ಅಭ್ಯಾಸದ
ಮಧ್ಯೆಯೇ ಕಳೆದುಹೋದ. ವಿಪರೀತ ದೇಹ ದಂಡನೆಯ ಪರಿಣಾಮವಾಗಿ ಒಂದು ವರ್ಷದಲ್ಲಿ 15 ಕೆ.ಜಿ.
ತೂಕ ಕಳೆದುಕೊಂಡ. ಈ ಮಧ್ಯೆ ಮೊದಲ ವರ್ಷದ ಪರೀಕ್ಷೆ ಮುಗಿದಿತ್ತು. ಹ್ಯಾಲಿ, ಉತ್ತಮ
ಅಂಕಗಳೊಂದಿಗೆ ಪಾಸಾಗಿದ್ದ.ಎರಡನೇ ವರ್ಷ ಮತ್ತೆ ಬಿಳಿಯರ ಉಪಟಳ ಶುರುವಾಯಿತು.
ಅವರ ಚುಚ್ಚುಮಾತುಗಳ ಕಾರಣದಿಂದ , ಅಧ್ಯಾಪಕರ ಪಾಠವೇ ಅರ್ಥವಾಗುತ್ತಿರಲಿಲ್ಲ. ಈ ಮೊದಲು
ಸೇನೆಯಲ್ಲಿದ್ದ ಸಂದರ್ಭದಲ್ಲಿ ಶಾರ್ಟ್ ಹ್ಯಾಂಡ್ ಕಲಿತಿದ್ದ. ಅದು ಈಗ ಉಪಯೋಗಕ್ಕೆ ಬಂತು.
ತರಗತಿಯಲ್ಲಿ ಅಧ್ಯಾಪಕರು ಹೇಳುವ ಪ್ರತಿಯೊಂದು ಮಾತನ್ನೂ ಶಾರ್ಟ್ ಹ್ಯಾಂಡ್ ಭಾಷೆಯಲ್ಲಿ
ಬರೆದುಕೊಂಡು, ರೂಂಗೆ ಬಂದಾಕ್ಷಣ ಅದನ್ನು ಮತ್ತೆ ವಿಸ್ತಾರವಾಗಿ ಬರೆಯುತ್ತಿದ್ದ.
ಪರಿಣಾಮ, ಒಂದೇ ವಿಷಯವನ್ನು ಎರಡು ಬಾರಿ ಓದಿದಂತಾಯಿತು. ವರ್ಷದ ಕೊನೆಗೆ ಫಲಿತಾಂಶ ಬಂದಾಗ
ಎಲ್ಲ ವಿದ್ಯಾರ್ಥಿಗಳು ಬೆಚ್ಚಿಬಿದ್ದರು. ಕಾರಣ, ಎಲ್ಲರ ಗೇಲಿಗೆ ವಸ್ತುವಾಗಿದ್ದ,
ಎಲ್ಲರಿಂದ ಟೀಕೆಗೆ ಗುರಿಯಾಗುತ್ತಿದ್ದ ಹ್ಯಾಲಿ, ಇಡೀ ವಿಶ್ವವಿದ್ಯಾಲಯಕ್ಕೆ ಟಾಪರ್
ಅನ್ನಿಸಿಕೊಂಡಿದ್ದ.ಇದೆಲ್ಲಾ ನಡೆದದ್ದು 1950ರಲ್ಲಿ. ಆ ಸಂದರ್ಭದಲ್ಲಿ ಸಂತೋಷ
ಹಂಚಿಕೊಳ್ಳಲಿಕ್ಕೂ ಹ್ಯಾಲಿಯ ಸುತ್ತ ಜನರಿರಲಿಲ್ಲ. ಈತ ತನ್ನ ಸ್ಥಿತಿಗಾಗಿ ಮರುಗುತ್ತ
ಕೂತಿದ್ದಾಗಲೇ ಬಾಗಿಲು ಬಡಿದ ಸದ್ದಾಯಿತು. ಎದ್ದು ಹೊರ ಬಂದ ಹ್ಯಾಲಿ ಮಾತೇ ಹೊರಡದೆ
ನಿಂತುಬಿಟ್ಟ: ಕಾರಣ, ಎದುರಿಗೆ ಅವನ ತರಗತಿಯ ಬಿಳಿಯ ವಿದ್ಯಾರ್ಥಿಗಳಿದ್ದರು. ಇವನ
ಯಶಸ್ಸು ಅವರ ಕಣ್ತೆರೆಸಿತ್ತು. ಅವರೆಲ್ಲ ಹ್ಯಾಲಿಯನ್ನು ಅಭಿನಂದಿಸಲು ಬಂದಿದ್ದರು.ಮರುದಿನದಿಂದ
ವಾತಾವರಣ ದಿಢೀರ್ ಬದಲಾಯಿತು. ಎಲ್ಲ ವಿದ್ಯಾರ್ಥಿಗಳೂ ಹ್ಯಾಲಿಯನ್ನು ಗೌರವಿಸತೊಡಗಿದರು.
ಯಾವುದೇ ಸಮಸ್ಯೆ ಎದುರಾದರೂ ಆತನ ಸಲಹೆ ಪಡೆಯಲು ಮುಂದಾದರು. ಕಾಲೇಜಿನ ಟಾಪರ್‌ಗಳಿಗೆ
ಮಾತ್ರ ಮೀಸಲಾಗಿದ್ದ ಲಾ ಮ್ಯಾಗಝಿನ್‌ಗೆ ಆತನಿಂದ ಲೇಖನ ಕೇಳಿದರು. ಮ್ಯಾಗಝಿನ್ ವಿಭಾಗದ
ಮುಖ್ಯ ಸಲಹೆಗಾರನಾಗುವಂತೆ ಬೇಡಿಕೆ ಇಟ್ಟರು. ಹ್ಯಾಲಿ, ಎಲ್ಲ ಸವಾಲುಗಳನ್ನೂ
ಸ್ವೀಕರಿಸಿದ. ಪ್ರತಿ ಸಂದರ್ಭದಲ್ಲೂ ಶ್ರದ್ಧಾಸಕ್ತಿಯಿಂದ ದುಡಿದ. ಮುಂದೆ ಏನಾಯಿತೆಂದರೆ,
ಅದೇ ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡುವಂತೆ, ಈ ಹಿಂದೆ
ಹೀಯಾಳಿಸುತ್ತಿದ್ದ ಬಿಳಿಯರೇ ಆಹ್ವಾನಿಸಿದ್ದರು. ಅವತ್ತು, ಸಿದ್ಧಪಡಿಸಿದ್ದ ಭಾಷಣವನ್ನು
ಬದಿಗಿಟ್ಟ ಹ್ಯಾಲಿ, ಕರುಳು ತಾಕುವಂಥ ಭಾಷೆಯಲ್ಲಿ ಹೀಗೆಂದ:ಬಂಧುಗಳೇ, ಈ
ಸಂದರ್ಭದಲ್ಲಿ ತೋರಿಸುತ್ತಿರುವ ಪ್ರೀತಿಗಾಗಿ ಋಣಿ. ಆದರೆ, ಕರಿಯರನ್ನು ನೀವೇಕೆ
ಮನುಷ್ಯರಂತೆ ಕಾಣುವುದಿಲ್ಲ? ತುಂಬ ಹಿಂದೇನಲ್ಲ, ಬರೀ ಒಂದು ವರ್ಷದ ಹಿಂದೆ
ಪ್ರಾಣಿಗಳಿಗಿಂತ ಕೀಳಾಗಿ ನನ್ನನ್ನು ನಡೆಸಿಕೊಂಡಿರಿ. ನಮ್ಮ ಮೈಯಲ್ಲಿ ಹರಿವ ರಕ್ತದ ಬಣ್ಣ
ಕೆಂಪು. ನಾವೆಲ್ಲ ಕುಡಿವ ನೀರು, ಉಸಿರಾಡುವ ಗಾಳಿ, ಆಹಾರ ಸುಡಲು ಬಳಕೆಯಾಗುವ ಬೆಂಕಿ...
ಇದಕ್ಕಿಲ್ಲದ ಕಟ್ಟುಪಾಡು, ಮೈ ಬಣ್ಣದ ವಿಷಯಕ್ಕೆ ಯಾಕೆ ಬೇಕು? ನೀಗ್ರೋ ಯುವಕರೂ
ಅಮೆರಿಕದ ಬಗ್ಗೆ ಗೌರವ ಭಾವನೆ ಹೊಂದಿದ್ದಾರೆ. ಸೇನೆ ಸೇರಿದ್ದಾರೆ. ದೇಶಕ್ಕಾಗಿ
ದುಡಿದಿದ್ದಾರೆ. ಕ್ರೀಡೆಗಳಲ್ಲಿ ಗೆದ್ದು ದೇಶದ ಗೌರವ ಹೆಚ್ಚಿಸಿದ್ದಾರೆ. ಇದನ್ನೆಲ್ಲ
ನೀವು ಯಾಕೆ ಯೋಚಿಸುವುದಿಲ್ಲ. ಟೀಕೆಯಿಂದ, ಹಿಂಸೆಯಿಂದ ಕರಿಯರ ಕಂಗಳಲ್ಲಿ ಕಣ್ಣೀರು
ಮತ್ತು ರಕ್ತ ಒಟ್ಟಿಗೇ ಬರುತ್ತದೆ ಎಂದು ನಿಮಗೇಕೆ ಅರ್ಥವಾಗುವುದಿಲ್ಲ? ಬಿಳಿಯ-ಕರಿಯ
ಎಂದು ಪ್ರತ್ಯೇಕಿಸುವ ಮನಸ್ಸುಗಳಿಗೆ ಧಿಕ್ಕಾರ ಹೇಳುತ್ತಲೇ ಮಾತು ಮುಗಿಸುತ್ತೇನೆ.
ಧನ್ಯವಾದ...'ಹ್ಯಾಲಿ ಮಾತು ಮುಗಿಸುತ್ತಿದ್ದಂತೆಯೇ ಕ್ಷಣಕಾಲ ಮೌನ. ಮರುಕ್ಷಣವೇ
ಸಭಾಂಗಣವೇ ಒಡೆದು ಹೋಗುವಂಥ ಸದ್ದಿನ ಚಪ್ಪಾಳೆ. ಒಂದು ನಿಮಿಷದ ನಂತರ ಕೂತಿದ್ದವರೆಲ್ಲ
ಒಕ್ಕೊರಲಿನಿಂದ ಹೇಳಿದರು: ಹ್ಯಾಲೀ, ವೆರಿ ಸಾರಿ. ಇನ್ಮುಂದೆ ನಾವು ವರ್ಣಬೇಧ ನೀತಿಯಿಂದ
ದೂರ ಇರ್ತೇವೆ...ಆನಂತರದ ದಿನಗಳಲ್ಲಿ ಅಂದುಕೊಂಡಷ್ಟು ಬೇಗ ಮತ್ತು ಸುಲಭವಾಗಿ
ವರ್ಣಬೇಧ ನೀತಿ ಕೊನೆಯಾಗಲಿಲ್ಲ ನಿಜ. ಆದರೆ ಜಾರ್ಜ್ ಹ್ಯಾಲಿಯ ಖ್ಯಾತಿ ಹಿಮಾಲಯದೆತ್ತರ
ಬೆಳೆಯಿತು. ರಿಚರ್ಡ್ ನಿಕ್ಸನ್‌ನಿಂದ ಆರಂಭಿಸಿ ಬಿಲ್ ಕ್ಲಿಂಟನ್‌ವರೆಗೆ
ರಾಷ್ಟ್ರಾಧ್ಯಕ್ಷರ ಹುದ್ದೆಯಲ್ಲಿ ಕೂತವರೆಲ್ಲಾ ಹ್ಯಾಲಿಯನ್ನು ತಮ್ಮ ವಿಶೇಷ ಕಾನೂನು
ಸಲಹೆಗಾರ ಎಂದು ನೇಮಿಸಿಕೊಂಡಿದ್ದರು. ಹಲವು ರಾಷ್ಟ್ರಗಳ ವಿದೇಶಾಂಗ ರಾಯಭಾರಿಯೆಂದು
ಹ್ಯಾಲಿಯನ್ನು ನೇಮಿಸಿದರು. ವರ್ಷದ ವ್ಯಕ್ತಿ, ಸಿಲ್ವರ್ ಆಫ್ ಅಮೆರಿಕಾ ಎಂದೆಲ್ಲ ಕರೆದು
ಗೌರವಿಸಿದರು.ಅಮೆರಿಕ ಸರ್ಕಾರದ ಅತಿ ಪ್ರಮುಖ ಹುದ್ದೆಗಳಲ್ಲಿ 40 ವರ್ಷಗಳ ಕಾಲ
ಸೇವೆ ಸಲ್ಲಿಸಿದ ಜಾರ್ಜ್ ಹ್ಯಾಲಿ, ಈಗ ಸೋದರನ ಎಸ್ಟೇಟ್‌ನ ಉಸ್ತುವಾರಿ ನೋಡುತ್ತಾ
ವಿಶ್ರಾಂತಿ ಜೀವನ ನಡೆಸುತ್ತಿದ್ದಾನೆ. ಈವರೆಗಿನ ಬದುಕನ್ನು ಹಿಂತಿರುಗಿ ನೋಡಿದರೆ
ಏನನ್ನಿಸುತ್ತೆ ಎಂದರೆ, ಅದೆಲ್ಲಾ ಮಧುರ ನೆನಪು ಎಂದು ನಗೆಯಾಡುತ್ತಾನೆ. ಶಾಂತಿಯಿಂದಲೇ
ಕ್ರಾಂತಿ ಎಂದಿದ್ದ ನಮ್ಮ ತಂದೆಯ ಮಾತು ಕೊನೆಗೂ ನಿಜವಾಯಿತು ಎನ್ನುತ್ತಾ
ಬೆರಗಾಗುತ್ತಾನೆ. ಈ ಛಲದಂಕಮಲ್ಲನ ಯಶೋಗಾಥೆಯನ್ನು "ರೀಡರ್ಸ್ ಡೈಜೆಸ್ಟ್" ಮೂರು ಬಾರಿ
ಪ್ರಕಟಿಸಿದೆ. ಅಂದ ಹಾಗೆ, ಫೆಬ್ರವರಿ ತಿಂಗಳಲ್ಲಿ ಅಮೆರಿಕದಲ್ಲಿ Black History month
ಎಂದು ಆಚರಿಸುತ್ತಾರೆ. ಜೀವನದಲ್ಲಿ ತುಂಬಾ ಕಷ್ಟಪಟ್ಟು ಮುಂದೆ ಬಂದ ಹ್ಯಾಲಿಯಂಥ
ಕರಿಯರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತಾರೆ.ಜಾರ್ಜ್ ಹ್ಯಾಲಿಯ ಹೋರಾಟದ ಬದುಕು, ಉಳ್ಳವರ ಕಿರಿಕಿರಿಯಿಂದ ಕಂಗಾಲಾಗುವ ಎಲ್ಲರಿಗೂ ಒಂದು ದಾರಿದೀಪದಂತಿದೆ. ಅಲ್ಲವೇ?- ಎ.ಆರ್. ಮಣಿಕಾಂತ್armanikanth@gmail.com
Subscribe to:
Post Comments (Atom)
No comments:
Post a Comment