ಕೈಗಳೇ 'ಕಾಲುಗಳಾಗಿ' ಕುಣಿಯುತ್ತವೆ, ಕುಣಿಸುತ್ತವೆ!

ಭಾವತೀರಯಾನ
ಈತನ ಎರಡೂ ಕಾಲುಗಳು ಬಿದಿರು ಕಡ್ಡಿಯ ಗಾತ್ರಕ್ಕಿವೆ. ತಿರುಚಿಕೊಂಡಿವೆ. ಸ್ವಾಧೀನ ಕಳೆದುಕೊಂಡಿವೆ. ಇನ್ನೂ ವಿವರಿಸಿ ಹೇಳುವುದಾದರೆ, ಈತನ ದೇಹದಲ್ಲಿ ಸೊಂಟದಿಂದ ಕೆಳಗಿನ ಭಾಗ ಪಾರ್ಶ್ವವಾಯುವಿಗೆ ತುತ್ತಾಗಿದೆ. ಹಾಗಾಗಿ ಈತ ಉಳಿದೆಲ್ಲರಂತೆ ಎದ್ದು ನಿಲ್ಲಲಾರ. ಓಡಲಾರ. ಜಿಗಿಯಲಾರ. ಇಷ್ಟಾದರೂ, ಅದೇ ವ್ಯಕ್ತಿ ಇವತ್ತು ಡ್ಯಾನ್ಸ್ ಕಿಂಗ್ ಅನ್ನಿಸಿಕೊಂಡಿದ್ದಾನೆ. ಒಂದೆರಡಲ್ಲ, ಸಾವಿರಕ್ಕೂ ಹೆಚ್ಚು ಸ್ಟೇಜ್ ಶೋ ನೀಡಿದ್ದಾನೆ. ಈತನ ಬೊಂಬಾಟ್ ಡ್ಯಾನ್ಸ್ ಕಂಡು ಬಾಲಿವುಡ್‌ನ ಒಂದು ಕಾಲದ ಡಿಸ್ಕೋ ಕಿಂಗ್ ಮಿಥುನ್ ಚಕ್ರವರ್ತಿಯೇ ಬೆರಗಾಗಿದ್ದಾರೆ. ಶಹಬ್ಬಾಶ್ ಎಂದಿದ್ದಾರೆ. ಭಾವುಕರಾಗಿ ಬಿಕ್ಕಳಿಸಿದ್ದಾರೆ. 'ಈತನ ಸಾಧನೆಯ ಮುಂದೆ ನಾನಾಗಲಿ, ತಮಿಳು ಚಿತ್ರರಂಗದ ಪ್ರಭುದೇವ ಆಗಲಿ ನಿಲ್ಲುವುದಕ್ಕೂ ಸಾಧ್ಯವಿಲ್ಲ. ಈತನೇ ದೇಶದ ನಿಜವಾದ ಡ್ಯಾನ್ಸ್ ಕಿಂಗ್' ಎಂದು ಮೆಚ್ಚುಗೆಯ ಮಾತಾಡಿದ್ದಾರೆ. ಅಂದ ಹಾಗೆ, ಮಿಥುನ್ ಚಕ್ರವರ್ತಿಯಿಂದಲೇ ಡ್ಯಾನ್ಸ್ ಕಿಂಗ್ ಅನ್ನಿಸಿಕೊಂಡ ಈತನ ಹೆಸರು ಕಮಲೇಶ್ ಪಟೇಲ್.ಎಲ್ಲರಿಗೂ ಗೊತ್ತಿರುವಂತೆ, ಡ್ಯಾನ್ಸ್ ಮಾಡಬೇಕೆಂದರೆ ಕಾಲುಗಳು ಗಟ್ಟಿಯಾಗಿರಬೇಕು. ವಾಸ್ತವ ಹೀಗಿರುವಾಗ, ಸ್ವಾಧೀನದಲ್ಲಿಲ್ಲದ ಕಾಲುಗಳಿಂದ ಈ ಕಮಲೇಶ್ ಹೇಗೆ(ಅದೂ ಡ್ಯಾನ್ಸ್‌ಕಿಂಗ್ ಅನ್ನಿಸಿಕೊಳ್ಳುವಷ್ಟರ ಮಟ್ಟಿಗೆ) ಡ್ಯಾನ್ಸ್ ಮಾಡುತ್ತಾರೆ? ಇಂಥದೊಂದು ಅಂಗವೈಕಲ್ಯ ಇವರಿಗೆ ಜೊತೆಯಾಗಿದ್ದು ಯಾವಾಗ ಮತ್ತು ಹೇಗೆ? ಅದನ್ನು ಮೆಟ್ಟಿ ನಿಲ್ಲಲು ಸಾಧ್ಯವಾದದ್ದು ಹೇಗೆ? ಈ ಹಂತದಲ್ಲಿ ಅವರು ಎದುರಿಸಿದ ಸವಾಲು- ಸಂಕಟಗಳು ಎಂಥವು ಎಂಬಿತ್ಯಾದಿ ಪ್ರಶ್ನೆಗಳಿಗೆ ಕಮಲೇಶ್ ಪಟೇಲ್ ಅವರೇ ಉತ್ತರಿಸಿದ್ದು ಹೀಗೆ:'ನನ್ನದು ಬರೋಡಾ ರಾಜ್ಯದ ವಡೋದರಾ ಜಿಲ್ಲೆಗೆ ಹತ್ತಿರದ ಒಂದು ಹಳ್ಳಿ. ನಮ್ಮ ತಂದೆ ಕೃಷಿಕ. ಅಮ್ಮ, ಹೌಸ್‌ವೈಫ್. ಐದು ವರ್ಷಗಳವರೆಗೂ ನಾನು ಉಳಿದವರೆಂತೆಯೇ ಚೆನ್ನಾಗಿದ್ದೆ. ಅವತ್ತಿಗೆ ನಮಗಿದ್ದ ಕ್ರೇಜ್ ಅಂದರೆ, ಗಣೇಶೋತ್ಸವದಲ್ಲಿ ಡ್ಯಾನ್ಸ್ ಮಾಡುವುದು. ಡ್ಯಾನ್ಸ್ ಟೀಮ್‌ಗೆ ನಾನೇ ಲೀಡರ್ ಆಗಿದ್ದೆ. ಹೀಗಿರುವಾಗಲೇ ಏನಾಯಿತೆಂದರೆ, ತುಂಬ ಆಕಸ್ಮಿಕವಾಗಿ ನಾನು ಕಾಯಿಲೆ ಬಿದ್ದೆ. ಅಪ್ಪ, ಪರಿಚಯದ ಡಾಕ್ಟರ್ ಬಳಿಗೆ ಕರೆದೊಯ್ದರು. ಅವರು ಒಂದು ಇಂಜೆಕ್ಷನ್ ಚುಚ್ಚಿ, ಎಲ್ಲಾ ಸರಿಯಾಗುತ್ತೆ ಹೋಗಿ ಎಂದರು. ಮನೆಗೆ ಬಂದು ಮಲಗಿಕೊಂಡೆ. ಹೀಗೇ ಇಡೀ ದಿನ ಕಳೆದುಹೋಯಿತು. ಎದ್ದೇಳುವಷ್ಟು ಶಕ್ತಿಯೂ ಇರಲಿಲ್ಲ. ಕಡೆಗೊಮ್ಮೆ ತಡಬಡಾಯಿಸಿಕೊಂಡು ಎದ್ದು ಕೂತೆ, ಮರುಕ್ಷಣವೇ ತಲೆ ತಿರುಗಿ ಬಿದ್ದು ಬಿಟ್ಟೆ. ಗಾಬರಿಯಾದ ತಂದೆ, ತಕ್ಷಣವೇ ಬೇರೆ ಡಾಕ್ಟರ್ ಬಳಿ ಕರೆದೊಯ್ದರು. ಆ ವೈದ್ಯರು ಕೂಲಂಕಷವಾಗಿ ಪರೀಕ್ಷಿಸಿ ವಿಷಾದದಿಂದ ಹೇಳಿದರು: 'ಮಗೂಗೆ ಓವರ್‌ಡೋಸ್ ಔಷಧಿ ಕೊಟ್ಟಿದ್ದಾರೆ. ಜೊತೆಗೆ, ಕೊಟ್ಟಿರುವ ಔಷಧ ಕೂಡ ಹೆಚ್ಚು ಅಡ್ಡ ಪರಿಣಾಮ ಬೀರುವಂಥದ್ದೇ. ಹಾಗಾಗಿ, ಮೆದುಳಿನ ನರವ್ಯೂಹಕ್ಕೆ ಭಾರೀ ಹಾನಿಯಾಗಿದೆ. ಈ ಮಗುವಿನ ಕಾಲುಗಳೆರಡೂ ಸ್ವಾಧೀನ ಕಳೆದುಕೊಂಡಿವೆ. ಮುಂದೆ ಏನಾಗುತ್ತೋ ಹೇಳೋಕಾಗಲ್ಲ...ಅವತ್ತಿನಿಂದ ಒಂದೊಂದೇ ಆಸ್ಪತ್ರೆಗೆ ಅಲೆಯುವುದು ನಮ್ಮ ಕುಟುಂಬದವರ ಕೆಲಸವಾಯಿತು. ಯಾರೋ ಒಬ್ಬರು, ಬೆಂಗಳೂರಲ್ಲಿ ಇಂಥ ಕಾಯಿಲೇನ ವಾಸಿ ಮಾಡ್ತಾರೆ ಅಂದರು. ಮತ್ತೊಬ್ಬರು, ವಿಶಾಖಪಟ್ಟಣದಲ್ಲಿ ಈ ಕಾಯಿಲೆಗೆ ಚಿಕಿತ್ಸೆ ಇದೆ ಅಂದರು. ಇನ್ನೊಬ್ಬರು ಬಾಂಬೆಯ ದಿಕ್ಕಿಗೆ ಬೆರಳು ಮಾಡಿದರು. ಎಲ್ಲ ಕಡೆಗೂ ಹೋಗಿ ಬಂದಿದ್ದಾಯ್ತು. ಏನೂ ಪ್ರಯೋಜನವಾಗಲಿಲ್ಲ. ಆಸ್ಪತ್ರೆ ಸುತ್ತುವ ಕಾರಣದಿಂದಲೇ ಎರಡು ವರ್ಷಗಳು ಕಳೆದುಹೋದವು. ಮುಂದೆ, ತಿರುಚಿಕೊಂಡಿದ್ದ, ಬಿದಿರು ಕಡ್ಡಿಯ ಗಾತ್ರಕ್ಕಿದ್ದ ಕಾಲುಗಳನ್ನು ಎಳೆದುಕೊಂಡೇ ಶಾಲೆಗೆ ಹೋದೆ. ಜೊತೆಗಿದ್ದ ಹುಡುಗರು ನನ್ನನ್ನು ಅನ್ಯಗ್ರಹದ ಜೀವಿಯೇನೋ ಎಂಬಂತೆ ನೋಡಿದರು. ಕುಂಟ ಎಂದು ಗೇಲಿ ಮಾಡಿದರು. ಚೊತ್ತ ಕಾಲಿನ ನನ್ಮಗನೇ ಎಂದು ಹಂಗಿಸಿದರು. ಅಂಥ ಸಂದರ್ಭದಲ್ಲೆಲ್ಲ ಸಂಕಟವಾಗ್ತಿತ್ತು. ಶಾಲೆಯಿಂದ ಹೊರಬಂದವನೇ, ಒಂದು ಕಡೆ ಕೂತು ಸಮಾಧಾನವಾಗುವಷ್ಟು ಅತ್ತುಬಿಡ್ತಿದ್ದೆ.ಹೀಗೇ ದಿನಗಳು ಕಳೆಯುತ್ತಿದ್ದವು. ದೈಹಿಕ ಅಂಗವೈಕಲ್ಯದ ಮಧ್ಯೆಯೂ ನಾನು ಚೆನ್ನಾಗಿ ಓದುತ್ತಿದ್ದೆ. ಆಗಲೇ ಒಂದು ದಿನ ನನ್ನೆದುರು ನಿಂತ ಅಪ್ಪ ಹೇಳಿದರು: 'ಭವಿಷ್ಯದಲ್ಲಿ ನೀನು ಯಾರಿಗೂ ಹೊರೆ ಆಗುವುದು ಬೇಡ ಮಗನೇ. ಡಿಗ್ರಿ ಮಾಡ್ಕೊಂಡು ಯಾವುದಾದ್ರೂ ಕೆಲಸಕ್ಕೆ ಸೇರ್ಕೋ.' ಅಪ್ಪನ ಮಾತುಗಳಲ್ಲಿ ಸತ್ಯವಿತ್ತು. ನನ್ನ ಭವಿಷ್ಯ ನನ್ನ ಕೈಲೇ ಇದೆ ಅಂದುಕೊಂಡು ಮತ್ತಷ್ಟು ಶ್ರದ್ಧೆಯಿಂದ ಓದಲು ಆರಂಭಿಸಿದೆ. ನೋಡ ನೋಡುತ್ತಲೇ ವರ್ಷಗಳು ಉರುಳಿದವು. ನಾನು, ಬಿ.ಕಾಂ. ಎರಡನೇ ವರ್ಷಕ್ಕೆ ಬಂದೆ. ನನ್ನ ವಿಕಲಾಂಗ ಬದುಕಿಗೆ ಮೊದಲ ತಿರುವು ಸಿಕ್ಕಿದ್ದೇ ಆಗ. ಪ್ರತಿ ವರ್ಷದಂತೆ ಆ ವರ್ಷವೂ ಗಣೇಶೋತ್ಸವ ಬಂತು. ಸಂಜೆಯಾದರೆ ಸಾಕು, ಸಾಂಸ್ಕೃತಿಕ ಕಾರ್ಯಕ್ರಮಗಳು ಶುರುವಾಗುತ್ತಿದ್ದವು. ಹೆಚ್ಚಿನ ಡಿಮ್ಯಾಂಡ್ ಇದ್ದುದು ಡ್ಯಾನ್ಸ್ ಪ್ರೋಗ್ರಾಂಗಳಿಗೆ. ಒಂದು ಕಾಲಕ್ಕೆ ಡ್ಯಾನ್ಸ್ ಟೀಮ್‌ನ ಹೀರೋ ಅನ್ನಿಸಿಕೊಂಡಿದ್ದ ನಾನು, ಅಂಗವೈಕಲ್ಯದ ಕಾರಣಕ್ಕೆ ಮೂಲೆ ಸೇರಿದ್ದೆ. ನನ್ನ ತಂಡದ ಉಳಿದ ಸದಸ್ಯರೂ ಓದು, ಉದ್ಯೋಗದ ಕಾರಣದಿಂದ ಚದುರಿ ಹೋಗಿದ್ದರು. ಇಂಥ ಸಂದರ್ಭದಲ್ಲಿ ಅಸಹಾಯಕನಾಗಿ ಬೇರೆ ತಂಡದವರ ಕಾರ್ಯಕ್ರಮ ನೋಡುತ್ತ ಕೂರುವುದರ ಹೊರತಾಗಿ ಬೇರೆ ದಾರಿ ಇರಲಿಲ್ಲ. ಅದೊಂದು ಸಂಜೆ ಹೀಗೇ ಗಣೇಶನ ಮುಂದೆ ಕೂತಿದ್ದಾಗ ಯಾಕೆ ಅಂಥ ಫೀಲ್ ಬಂತೋ ಗೊತ್ತಿಲ್ಲ. ಅವತ್ತು ಮಂಗಳಾರತಿ ಮುಗಿಯುತ್ತಿದ್ದಂತೆಯೇ ದೇವರ ಎದುರು ಕೂತು ಕೇಳಿಯೇ ಬಿಟ್ಟೆ: 'ಭಗವಂತಾ, ಪಾರ್ಶ್ವವಾಯುವಿಗೆ ತುತ್ತಾದಾಗ ನನಗೆ ಬರೀ 5 ವರ್ಷ. ಹೆಳವನ ಸ್ಥಿತಿಯಲ್ಲಿಯೇ 17 ವರ್ಷ ಬದುಕಿ ಬಿಟ್ಟೆ. ದೇವರು ದಯಾಮಯಿ. ಆತ ನಮ್ಮಿಂದ ಒಂದು ಅವಕಾಶವನ್ನು ಕಿತ್ಕೊಂಡ್ರೆ ಅದಕ್ಕೆ ಬದಲಾಗಿ ನಾಲ್ಕು ಅವಕಾಶಗಳನ್ನು ಕರುಣಿಸಿರ್ತಾನೆ ಎಂದು ಎಲ್ಲರೂ ಹೇಳ್ತಾರೆ. ಅಂಥದೊಂದು ಅವಕಾಶದ ದಾರಿಯನ್ನು ನನಗೆ ಯಾಕೆ ತೋರಿಸಲಿಲ್ಲ ದೇವರೇ? ಕಾಲುಗಳು ಸ್ವಾಧೀನದಲ್ಲಿ ಇಲ್ಲದೆಯೂ ಡ್ಯಾನ್ಸ್ ಮಾಡುವಂಥ ಶಕ್ತಿ ನನಗೆ ಬರಲಿ ಎಂದು ಯಾಕೆ ಅನುಗ್ರಹಿಸಲಿಲ್ಲ ದೇವರೇ?ಸಂಕಟದಿಂದ, ಅಸಹನೆಯಿಂದ, ಭಕ್ತಿ ಮತ್ತು ಪ್ರೀತಿಯಿಂದ ನಾನು ಪ್ರಶ್ನಿಸುತ್ತಲೇ ಇದ್ದೆ. ದೇವರು ಮೌನವಾಗಿದ್ದ. ಆಗ, ಅದ್ಯಾವ ಪ್ರೇರಣೆಯಾಯಿತೋ ಗೊತ್ತಿಲ್ಲ. ಜೋತಾಡುವಂತಿದ್ದ ಎರಡೂ ಕಾಲುಗಳನ್ನು ಕುತ್ತಿಗೆಯ ಎರಡೂ ಬದಿಗೆ ಹಾಕಿಕೊಂಡೆ. ನಂತರ ಎರಡೂ ಕೈಗಳನ್ನು ನೆಲಕ್ಕೆ ಊರಿಕೊಂಡು ಸಾಕಷ್ಟು ದೂರ ಹೋಗಿಬಿಟ್ಟೆ. ಅಂದರೆ ಈ ಸಂದರ್ಭದಲ್ಲಿ, ಕಾಲುಗಳ ಕೆಲಸವನ್ನು ಕೈಗಳೇ ನಿರ್ವಹಿಸಿದ್ದವು. ಅಂದು ರಾತ್ರಿ ನನ್ನಷ್ಟಕ್ಕೆ ನಾನೇ ಯೋಚಿಸಿದೆ; ಕಾಲುಗಳು ಸರಿಯಾಗಿಲ್ಲ ನಿಜ. ಆದರೆ ಕೈಗಳು ಸರಿಯಾಗಿವೆ. ಗಟ್ಟಿಯಾಗಿವೆ. ಕೈಗಳನ್ನೇ ಕಾಲುಗಳಂತೆ ಬದಲಿಸಿಕೊಂಡು ನಾನೇಕೆ ಡ್ಯಾನ್ಸ್ ಮಾಡಬಾರದು?ನಾನು ತಡ ಮಾಡಲಿಲ್ಲ. ಕಾಲುಗಳನ್ನು ಹೆಗಲ ಮೇಲಕ್ಕೆ ನೂಕಿ ಕೈಗಳ ಸಹಾಯದಿಂದಲೇ ಸರಭರನೆ ನಡೆದಾಡುವುದನ್ನು ಅಭ್ಯಾಸ ಮಾಡಿಕೊಂಡೆ. ಆನಂತರ, ಬರೋಡಾದಲ್ಲಿ ಡ್ಯಾನ್ಸ್ ಕಲಿಸುತ್ತಿದ್ದ ಮನು ಥಾಪಾ ಎಂಬುವರ ಬಳಿ ಹೋಗಿ, ಬೆಸ್ಟ್ ಡ್ಯಾನ್ಸರ್ ಅನ್ನಿಸಿಕೊಳ್ಳಬೇಕು ಅಂತ ಆಸೆಯಿದೆ ಸರ್. ಶ್ರದ್ಧೆಯಿಂದ ಕಲೀತೇನೆ. ದಯವಿಟ್ಟು ನನಗೆ ಡ್ಯಾನ್ಸ್ ಹೇಳಿಕೊಡಿ ಎಂದು ಪ್ರಾರ್ಥಿಸಿದೆ. ಅವರು ನನ್ನನ್ನು ಅನುಕಂಪದಿಂದ ನೋಡಿ ಹೇಳಿದ್ರು: 'ಡ್ಯಾನ್ಸ್ ಮಾಡಲಿಕ್ಕೆ ಕಾಲುಗಳು ಗಟ್ಟಿ ಇರಬೇಕು. ಅಂಥ ಸೌಭಾಗ್ಯ ನಿನಗಿಲ್ಲ. ಹಾಗಾಗಿ ತಪ್ಪು ತಿಳೀಬೇಡಪ್ಪಾ. ವಾಪಸ್ ಹೋಗಿ ಬಿಡು.' ನಾನು ತಕ್ಷಣವೇ -ಸರ್, ಒಮ್ಮೆ ನನ್ನ ಮೂವ್‌ಮೆಂಟ್ಸ್ ನೋಡಿ ಬಿಡಿ. ಆನಂತರ ಉಳಿದ ಮಾತು' ಎಂದವನೇ ಕೈಗಳ ಸಹಾಯದಿಂದಲೇ ನಿಲ್ಲುವ, ಜಿಗಿದಾಡುವ, ಸರಬರ ಓಡಾಡುವುದನ್ನು ತೋರಿಸಿದೆ. ಇದರಿಂದ ಪ್ರಭಾವಿತರಾದ ಮನು ಥಾಪ ಹೇಳಿದರು: 'ನನಗೆ ಗೊತ್ತಿರುವುದನ್ನೆಲ್ಲ ನಿಂಗೆ ಹೇಳಿಕೊಡ್ತೀನಿ. ನಾಳೆಯಿಂದಲೇ ತರಗತಿಗೆ ಬಾ...'ಮನು ಥಾಪ ಅವರು ಇದ್ದುದು ವಡೋದರಾದಲ್ಲಿ. ನಮ್ಮ ಊರಿಂದ ಈ ನಗರಕ್ಕೆ 20 ಕಿ.ಮೀ. ದೂರವಿತ್ತು. ಡ್ಯಾನ್ಸ್ ಕಲಿಯಬೇಕೆಂದರೆ, ದಿನವೂ ಬಸ್‌ನಲ್ಲಿ ಪ್ರಯಾಣಿಸಬೇಕಿತ್ತು. ಡ್ಯಾನ್ಸ್ ಕಲಿಯುತ್ತೇನೆ ಎಂದಿದ್ದರೆ ಮನೆಯಲ್ಲಿ ಒಪ್ಪುತ್ತಿರಲಿಲ್ಲ. ಹಾಗಾಗಿ, ಕಂಪ್ಯೂಟರ್ ಕ್ಲಾಸ್‌ಗೆ ಸೇರಿಕೊಂಡಿದ್ದೇನೆ ಎಂದು ಸುಳ್ಳು ಹೇಳಿದೆ. ಕೆಲವು ಸಂದರ್ಭಗಳಲ್ಲಿ ಡ್ಯಾನ್ಸ್ ತರಗತಿಗೆ ಹೋಗುವಾಗ/ ಬರುವಾಗ, ಬಸ್‌ಗಳು ಮಿಸ್ ಆಗುತ್ತಿದ್ದವು. ಆಗೆಲ್ಲಾ, ಬೈಕ್ ಸವಾರರನ್ನು ವಿನಂತಿಸಿಕೊಂಡು ಹೇಗೋ ಊರು ತಲುಪಿಕೊಳ್ಳುತ್ತಿದ್ದೆ.ಹೀಗೇ ಒಂದು ವರ್ಷ ಕಳೆಯಿತು. ಈ ಹೊತ್ತಿಗೆ, ಕೈಗಳನ್ನೇ ಕಾಲುಗಳಂತೆ ಬದಲಿಸಿಕೊಂಡು ಡ್ಯಾನ್ಸ್ ಮಾಡುವುದರಲ್ಲಿ ಪಳಗಿದ್ದೆ. ಆಗಲೇ ಮನು ಥಾಪ ಹೇಳಿದರು: 'ನೀನು ಕಲಿಯಬೇಕಾದ್ದೆಲ್ಲ ಮುಗಿದಿದೆ. ಈಗ ಒಂದು ಶೋ ಏರ್ಪಡಿಸೋಣ. ನಿನ್ನ ಸಾಮರ್ಥ್ಯ ಏನು ಎಂಬುದನ್ನು ವಡೋದರಾದ ಜನರಿಗೆ ತೋರಿಸೋಣ'. ಮುಂದಿನ ಕೆಲವೇ ದಿನಗಳಲ್ಲಿ ಶೋ ನಡೆದದ್ದು ಮಾತ್ರವಲ್ಲ, ಅದು ಸೂಪರ್‌ಹಿಟ್ ಆಯಿತು. ನನ್ನ ಈ ಹೊಸ ಅವತಾರ, ಅದಕ್ಕೆ ಸಿಕ್ಕ ಪ್ರೋತ್ಸಾಹದಿಂದ ಅಪ್ಪ-ಅಮ್ಮನೂ ಖುಷಿಯಾಗಿದ್ದರು. ಮುಂದೆ ಗಣೇಶೋತ್ಸವವೂ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಲು ಆಹ್ವಾನ ಬರತೊಡಗಿತು. ಆಗಲೇ ನನ್ನ ಬದುಕಿಗೆ ತುಂಬ ಅಗತ್ಯವಿದ್ದ ವ್ಹೀಲ್ ಚೇರ್ ಖರೀದಿಸಿದೆ. ಕಡೆಗೂ ಹತ್ತು ಜನ ಗುರುತಿಸುವಂಥ ಡ್ಯಾನ್ಸರ್ ಆದೆ ಎಂದು ಸಂಭ್ರಮಿಸುತ್ತಿದ್ದಾಗಲೇ ನನ್ನ ಬದುಕಿನ ಬಹುದೊಡ್ಡ ತಿರುವಿಗೆ ಕಾರಣವಾದ ಸಂದರ್ಭವೂ ಜೊತೆಯಾಯಿತು. ಹಿರಿಯರೊಬ್ಬರು ಝೀ ಚಾನೆಲ್‌ನವರು ನಡೆಸುವ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸೂಚಿಸಿದರು. ತಕ್ಷಣವೇ ಅರ್ಜಿ ಹಾಕಿದೆ.ಡ್ಯಾನ್ಸ್ ಇಂಡಿಯಾ ಡ್ಯಾನ್ಸ್‌ನ ಮೊದಲ ಸುತ್ತಿನ ಕಾರ್ಯಕ್ರಮ ನಡೆದದ್ದು ಅಹಮದಾಬಾದ್‌ನಲ್ಲಿ. ಕೈಗಳನ್ನೇ ಕಾಲುಗಳಂತೆ ಬದಲಿಸಿಕೊಂಡು ನಾನು ಡ್ಯಾನ್ಸ್ ಮಾಡುವುದನ್ನು ತೀರ್ಪುಗಾರರು ಒಪ್ಪದಿದ್ದರೆ ಏನು ಮಾಡುವುದು ಎಂಬ ಅಳುಕು ಕಾಡಿತ್ತು. ಆದರೆ ಅಂಥದೇನೂ ಆಗಲಿಲ್ಲ. ನನ್ನ ಪ್ರದರ್ಶನ ಕಂಡು ಖುಷಿಯಾದ ತೀರ್ಪುಗಾರರು ಪೂರ್ಣ ಅಂಕ ನೀಡಿ ಮುಂಬಯಿಯಲ್ಲಿ ನಡೆದ ಅಂತಿಮ ಹಂತದ ಕಾರ್ಯಕ್ರಮಕ್ಕೆ ಕಳಿಸಿದರು. ಅಲ್ಲಿ ತೀರ್ಪುಗಾರರ ಸ್ಥಾನದಲ್ಲಿದ್ದವರು ಬಾಲಿವುಡ್‌ನ ಡಿಸ್ಕೋ ಕಿಂಗ್ ಎಂದೇ ಹೆಸರಾಗಿದ್ದ ಮಿಥುನ್ ಚಕ್ರವರ್ತಿ. ನಾನು ವೇದಿಕೆಗೆ ಹೋದಾಗ, ಮಿಥುನ್ ಅಯ್ಯೋ ಪಾಪ ಎಂಬಂತೆ ನೋಡಿದರು. ಅದು ನನಗೂ ಅರ್ಥವಾಯಿತು. ಇರಲಿ, ಇದೆಲ್ಲಾ ನನ್ನ ಸತ್ವ ಪರೀಕ್ಷೆಯ ಕಾಲ ಎಂದುಕೊಂಡು ತನ್ಮಯನಾಗಿ ಡ್ಯಾನ್ಸ್ ಮಾಡಿದೆ. ಕಾರ್ಯಕ್ರಮ ಮುಗಿದ ತಕ್ಷಣ ಮಿಥುನ್ ಚಕ್ರವರ್ತಿಯವರು ವೇದಿಕೆಯಿಂದ ಸೀದಾ ನನ್ನ ಬಳಿಗೆ ಬಂದರು. ನನ್ನ ಪಕ್ಕದಲ್ಲೇ ಕೂತರು. ಕೈ ಮುಗಿದರು. ಕೈ ಕುಲುಕಿದರು. ಆನಂತರ, ಈ ದೇಶದ ನಿಜವಾದ ಡ್ಯಾನ್ಸ್ ಕಿಂಗ್ ಅಂದರೆ ನೀವೇ. ನಿಮ್ಮ ಸಾಧನೆಯ ಮುಂದೆ ನಾವೆಲ್ಲಾ ಸಣ್ಣವರು ಎಂದರು. ಈ ಕಾರ್ಯಕ್ರಮ, ನನ್ನನ್ನು ದೇಶದ ಮೂಲೆ ಮೂಲೆಗೂ ಪರಿಚಯಿಸಿತು. ಪರಿಣಾಮ, ರಾತ್ರಿ ಕಳೆದು ಬೆಳಗಾಗುವುದರೊಳಗೆ ಸೆಲೆಬ್ರಿಟಿ ಆಗಿಬಿಟ್ಟೆ. ತಮಗೂ ಕಾರ್ಯಕ್ರಮ ನೀಡುವಂತೆ ಸಂಘ- ಸಂಸ್ಥೆಗಳು ದುಂಬಾಲು ಬಿದ್ದವು. ಒಂದು ಕಾಲದಲ್ಲಿ ಬಸ್ ಟಿಕೆಟ್‌ಗೂ ಹಣವಿಲ್ಲದೆ ಪರದಾಡುತ್ತಿದ್ದವನಿಗೆ ವಿಮಾನದಲ್ಲಿ ಓಡಾಡುವ ಸೌಭಾಗ್ಯವೂ ಒದಗಿ ಬಂತು. ಈ ಮಧ್ಯೆ ಸೋನಿ ಚಾನೆಲ್‌ನ ಬೂಗಿ ವೂಗಿ ಡ್ಯಾನ್ಸ್ ಕಾರ್ಯಕ್ರಮದಲ್ಲೂ ಭಾಗವಹಿಸಿದೆ.'ಇದೆಲ್ಲದರ ಒಟ್ಟು ಪರಿಣಾಮ ಎಂಬಂತೆ, ಅಮೆರಿಕ ಹಾಗೂ ಇಂಗ್ಲೆಂಡ್‌ಗಳಿಂದಲೂ ಡ್ಯಾನ್ಸ್ ಶೋ ಕೊಡಲು ಆಹ್ವಾನ ಬಂತು. ಇಂಗ್ಲೆಂಡ್‌ನಲ್ಲಿ ಒಂದು ಸ್ವಾರಸ್ಯ ನಡೆಯಿತು. ಕಾರ್ಯಕ್ರಮ ಮುಗಿದ ನಂತರ ಎಲ್ಲರೂ ಅಭಿನಂದಿಸಲು ಬಂದರು. ಹಾಗೆ ಬಂದವರ ಪೈಕಿ ಕಾಲುಗಳು ಸ್ವಾಧೀನದಲ್ಲಿಲ್ಲದ ಮಹಿಳೆಯೂ ಇದ್ದಳು. ಅದುವರೆಗೂ ಆಕೆ ಕೂತ ಜಾಗದಿಂದ ಕದಲುತ್ತಿರಲ್ಲಿಲ್ಲವಂತೆ. ಅಂಥವಳು, ನನ್ನ ಡ್ಯಾನ್ಸ್ ನೋಡಿದ ನಂತರ, ತೆವಳಲು, ಎದ್ದು ನಿಲ್ಲಲು ಪ್ರಯತ್ನಿಸಿದ್ದಳು. ಅದರಲ್ಲಿ ಯಶಸ್ವಿಯೂ ಆಗಿದ್ದಳು. ಇದನ್ನೆಲ್ಲ ಆಕೆಯ ಕುಟುಂಬದವರು ವಿವರಿಸಿದಾಗ ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ; 'ಭಗವಂತಾ, ನನ್ನ ಮೂಲಕ ಅಂಗವಿಕಲರಿಗೆ ಒಂದು ಚಿಕ್ಕ ಸಂದೇಶ ಕಳಿಸಬೇಕು ಎಂಬ ಸದಾಶಯದಿಂದಲೇ ನನ್ನ ಕಾಲುಗಳ ಬಲವನ್ನು ಕಿತ್ತುಕೊಂಡೆಯಾ?'ಈಗ ಏನಾಗಿದೆ ಗೊತ್ತಾ ಸಾರ್? ಎಲ್ಲ ಅರ್ಥದಲ್ಲೂ ನಾನು ಸೆಲೆಬ್ರಿಟಿ ಆಗಿದ್ದೀನಿ. ಕಾರು ತಗೊಂಡಿದೀನಿ. ಡ್ರೈವರ್, ಮೆನೇಜರ್‌ನ ಇಟ್ಕೊಂಡಿದ್ದಿನಿ. ಒಂದು ಕಾಲದಲ್ಲಿ ಏ ಕುಂಟಾ, ಏ ಹೆಳವಾ ಎಂದು ಕರೆದರಲ್ಲ; ಅದೇ ಜನ ಈಗ ನನ್ನ ಆಟೋಗ್ರಾಫ್‌ಗಾಗಿ ಕ್ಯೂ ನಿಂತಿದ್ದಾರೆ. ಪ್ರಿನ್ಸ್ ಆಫ್ ಬರೋಡ ಎಂಬ ಬಿರುದು ನೀಡಿದ್ದಾರೆ. ರಾಷ್ಟ್ರಪತಿಗಳ ಮುಂದೆ ಪ್ರದರ್ಶನ ನೀಡುವ, ಅವರಿಂದ ಪ್ರಶಸ್ತಿ ಪಡೆವ ಸೌಭಾಗ್ಯವೂ ನನ್ನದಾಗಿದೆ. ಝೀ ಮತ್ತು ಸೋನಿ ಚಾನೆಲ್‌ಗಳ ಕೃಪೆಯಿಂದಾಗಿ ದೇಶದ ಹಲವು ನಗರಗಳಿಂದ ಕಾರ್ಯಕ್ರಮ ನೀಡಲು ಆಫರ್ ಬರುತ್ತಿದೆ. ಉಹುಂ, ನನಗೆ ದುಡ್ಡು ಮಾಡಬೇಕೆಂಬ ಆಸೆಯಿಲ್ಲ. ಅಂಗವೈಕಲ್ಯದಿಂದ ಹತಾಶರಾಗಿರುವ ಮಂದಿಗೆ ಬದುಕಲ್ಲಿ ಭರವಸೆ ಮೂಡಿಸಬೇಕು ಎಂಬುದೇ ನನ್ನ ಆಸೆ. ಪ್ರತಿ ಕಾರ್ಯಕ್ರಮದಲ್ಲೂ ನನಗೆ ಸಿಗುತ್ತಲ್ಲ, ಆ ಸಂಭಾವನೆಯಲ್ಲಿ ಅರ್ಧವನ್ನು ಅಂಗವಿಕಲರ ಏಳಿಗೆಗೆ ದುಡಿಯುವ ಸಂಘ ಸಂಸ್ಥೆಗಳಿಗೆ ದಾನ ಮಾಡಿಬಿಡ್ತೀನಿ. ಅಂಗವಿಕಲ ಮಕ್ಕಳ ಸಹಾಯಾರ್ಥ ಕಾರ್ಯಕ್ರಮ ನಡೆಸಿದ್ರೆ ಉಚಿತವಾಗಿ ಶೋ ಕೊಡಲಿಕ್ಕೂ ನಾನು ರೆಡಿ ಇದ್ದೀನಿ...' ಎನ್ನುತ್ತಾ ಮಾತು ಮುಗಿಸಿದರು ಕಮಲೇಶ್ ಪಟೇಲ್.***ಇದಿಷ್ಟನ್ನೂ ಓದಿದವರಿಗೆ ಕಮಲೇಶ್ ಪಟೇಲ್ ಹೇಗೆ ಡ್ಯಾನ್ಸ್ ಮಾಡುತ್ತಾರೆ ಎಂಬ ಪ್ರಶ್ನೆ ಕಾಡಬಹುದು. ಅದಕ್ಕೆ ಸರಳವಾಗಿ ಹೀಗೆ ಉತ್ತರಿಸಬಹುದು. ಆತ, ಕಪ್ಪೆಯಂತೆ ಕುಪ್ಪಳಿಸುತ್ತಲೇ ವೇದಿಕೆಗೆ ಬರುತ್ತಾರೆ. ನಂತರ ನಾವೆಲ್ಲ ಹೆಗಲ ಮೇಲೆ ಟವಲ್ ಎಸೆದುಕೊಳ್ಳುತ್ತೇವಲ್ಲ; ಅಷ್ಟೇ ಸಲೀಸಾಗಿ ತಮ್ಮ ಸೊಟ್ಟಂಪಟ್ಟ ಕಾಲುಗಳನ್ನು ಕುತ್ತಿಗೆಯ ಎರಡೂ ಕಡೆಗೆ ಹಾಕಿಕೊಳ್ಳುತ್ತಾರೆ. ನಂತರದ ಕ್ಷಣದಿಂದಲೇ ಅವರ ಕೈಗಳು 'ಕಾಲುಗಳಾಗಿ' ಬದಲಾಗಿ, ಕುಣಿಯುತ್ತವೆ. ಗುಂಗು ಹಿಡಿಸುತ್ತವೆ. ಒಂದು ಅಪೂರ್ವ ನಾಟ್ಯೋತ್ಸವಕ್ಕೆ ಸಾಕ್ಷಿಯಾಗುತ್ತವೆ. ಇಂಟರ್‌ನೆಟ್‌ನಲ್ಲಿ ಗೂಗಲ್‌ಗೆ ಹೋಗಿ kamlesh patel Dance ಎಂದು ಹುಡುಕಿದರೆ, ಈ ಮಹಾನ್ ಸಾಧಕನ ಡ್ಯಾನ್ಸ್ ಇರುವ ವಿಡಿಯೋ ಸಿಗುತ್ತದೆ. ನೋಡಿ ಕಣ್ತುಂಬಿಸಿಕೊಳ್ಳಿ. 09898399358 ನಂಬರಿನಲ್ಲಿ, dancewithkamlesh3@gmail.com ನಲ್ಲಿ ಈತ ಮಾತಿಗೂ ಸಿಗುತ್ತಾರೆ. ಸಾಧ್ಯವಾದರೆ ಅಭಿನಂದನೆ ಹೇಳಿ.
- ಎ.ಆರ್. ಮಣಿಕಾಂತ್armanikanth@gmail.com
No comments:
Post a Comment