Tuesday, 3 December 2013

ಕರುಣಾಳು ಬಾ ಬೆಳಕೆ, ಮಸುಕಿದೀ ಮಬ್ಬಿನಲಿ ಕೈ ಹಿಡಿದು...

ಕರುಣಾಳು ಬಾ ಬೆಳಕೆ, ಮಸುಕಿದೀ ಮಬ್ಬಿನಲಿ ಕೈ ಹಿಡಿದು...

ಭಾವತೀರಯಾನ- ಎ.ಆರ್.ಮಣಿಕಾಂತ್


'ಜೆಂಟಲ್‌ಮನ್, ಪ್ಲೀಸ್ ವೆಲ್‌ಕಂ. ನನ್ನ ಹೆಸರು ರಾಜಾರಾಂ. ನಿಮಗೆ ಬಿಡುವಿದೆ ಅಂತಾದ್ರೆ ಸ್ವಲ್ಪ ಹೊತ್ತು ಹರಟೆ ಹೊಡೆಯೋಣ...' ಹೀಗೆಂದ ಆ ವೃದ್ಧರು, ನಾನು ಉತ್ತರಿಸುವ ಮೊದಲೇ ತಮ್ಮ ರೂಂನಲ್ಲಿದ್ದ ಛೇರ್ ತಂದು ಹಾಕಿಯೇಬಿಟ್ಟರು. ಎದುರಿಗಿದ್ದ ಮತ್ತೊಂದು ಕುರ್ಚಿಯಲ್ಲಿ ತಾವೂ ಕೂತರು. ನಿಜ ಹೇಳಬೇಕೆಂದರೆ, ಅವತ್ತು ನನಗೆ ಬಿಡುವಿತ್ತು. ಭಾನುವಾರವಾದ್ದರಿಂದ ಆಫೀಸಿಗೂ ರಜೆಯಿತ್ತು. ಸಂಜೆಯವರೆಗೂ ಎಲ್ಲಾದರೂ ಸುತ್ತಾಡಿಕೊಂಡು ಬರೋಣ. ಇಡೀ ದಿನವನ್ನು ಇಷ್ಟಬಂದಂತೆ ಕಳೆಯೋಣ ಎಂಬ ನಿರ್ಧಾರದೊಂದಿಗೆ ಎದ್ದು ಬಂದಿದ್ದೆ.ಅವರು ಮುಂದುವರಿದು ಹೇಳಿದರು: 'ತುರುವೇಕೆರೆ ಹತ್ತಿರ ಇರುವ ಒಂದು ಕುಗ್ರಾಮ ನಮ್ಮೂರು. ತೋಟಗಾರಿಕೆ ಡಿಪಾರ್ಟ್‌ಮೆಂಟಲ್ಲಿ ಸಣ್ಣದೊಂದು ಹುದ್ದೆಯಲ್ಲಿದ್ದೆ. ರಿಟೈರ್ ಆಗೋಕೆ ಮೂರು ವರ್ಷ ಬಾಕಿಯಿದ್ದಾಗ ಒಂದಷ್ಟು ಸಾಲ ಮಾಡಿ, ಅವರಿವರ ಕಾಲು ಹಿಡಿದು 20-30 ಅಳತೆಯ ಸೈಟ್ ತಗೊಂಡು ಪುಟ್ಟದೊಂದು ಮನೆ ಕಟ್ಟಿಸ್ದೆ. ನನಗೆ ಇಬ್ಬರು ಮಕ್ಕಳು. ಒಂದು ಗಂಡು, ಒಂದು ಹೆಣ್ಣು. 'ಮಗಳು ಯಾವತ್ತಿದ್ರೂ ಬೇರೊಂದು ಮನೆಗೆ ಹೋಗುವವಳೇ. ಇವತ್ತಿನ ಕಾಲದಲ್ಲಿ ಹೆಣ್ಣು ಮಕ್ಕಳು ಜಾಸ್ತಿ ಓದಿದ್ರೆ ಅದರಿಂದ ಕಷ್ಟಗಳೇ ಜಾಸ್ತಿ. ಹಾಗಾಗಿ, ಮಗಳ ಮದುವೆಗೆ ಬಗ್ಗೆ ಯೋಚನೆ ಮಾಡಿ. ಮಗನನ್ನು ಚೆನ್ನಾಗಿ ಓದಿಸಿ ಆಫೀಸರ್ ಮಾಡಿ' ಎಂದು ನನ್ನ ಹೆಂಡತಿ ಉಪದೇಶ ಮಾಡಿದ್ದಳು. ನನಗೂ ಅವಳ ಮಾತು ಸರಿ ಅನ್ನಿಸ್ತು. ಪಿಯುಸಿ ಮುಗೀತಿದ್ದ ಹಾಗೇ ಮಗಳ ಮದುವೆ ಮಾಡಿಬಿಟ್ಟೆ. ಎಂಟು ತಿಂಗಳು ಕಳೆಯುತ್ತಿದ್ದಂತೆಯೇ ಅದೊಮ್ಮೆ ಅಳಿಯನ ಕಡೆಯಿಂದ ಫೋನ್ ಬಂತು: 'ನಿನ್ನೆ ಡಾಕ್ಟರ್ ಹತ್ರ ಚೆಕಪ್‌ಗೆ ಹೋಗಿದ್ವಿ. ಈಗಾಗಲೇ ನಾಲ್ಕನೇ ತಿಂಗಳು ನಡೀತಿದೆ. ಹುಷಾರಾಗಿ ನೋಡಿಕೊಳ್ಳಿ ಎಂದಿದ್ದಾರೆ. ನೀವು ಒಂದ್ಸಲ ಬಂದು ಹೋದ್ರೆ ನಮಗೆಲ್ಲಾ ಖುಷಿಯಾಗುತ್ತೆ...' ಅಳಿಯನ ಮಾತು ಕೇಳಿ ನನ್ನ ಹೆಂಡ್ತಿ ಕುಣಿದಾಡಿ ಬಿಟ್ಳು. ಮಗಳಿಗೆ ಹೊಸ ಬಟ್ಟೆ ತಂದಳು. ನಾಲ್ಕಾರು ಥರದ ಸಿಹಿ ತಿಂಡಿ ಮಾಡಿದ್ಲು. ಆದ್ರೆ, ಮಗಳ ಮನೆಗೆ ಹೋಗಲು ಮೂರು ದಿನ ಬಾಕಿಯಿದೆ ಅನ್ನುವಾಗ ಬಚ್ಚಲು ಮನೇಲಿ ಜಾರಿಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಳು. ಅವಳನ್ನು ಉಳಿಸ್ಕೋಬೇಕು ಅಂತ ಒಂದಲ್ಲ ಎರಡಲ್ಲ, ಐದು ಆಸ್ಪತ್ರೆಗೆ ಹೋಗಿ ಬಂದೆ. ಹಣವನ್ನು ನೀರಿನಂತೆ ಖರ್ಚು ಮಾಡಿದೆ. ಆದ್ರೆ ಅದೃಷ್ಟ ನನ್ನ ಪರವಾಗಿ ಇರಲಿಲ್ಲ...ಹೆಂಡತಿ ಸತ್ತು ಹೋದಳು ಎಂಬ ಸಂಗತಿಯನ್ನು ಬಹಳ ಸೂಕ್ಷ್ಮವಾಗಿ 'ಆ ವೃದ್ಧರು' ಹೇಳಿದ್ದರು. ಒಂದೇ ಸಮನೆ ಮಾತಾಡಿದ್ದರಿಂದ ಹಾಗೂ ಹೆಂಡತಿಯ ನೆನಪಾಗಿ ಉಂಟಾದ ಡಿಪ್ರೆಷನ್‌ನಿಂದ ಅವರಿಗೆ ಬಾಯಾರಿಕೆ ಆಯ್ತೇನೋ. ತಕ್ಷಣವೇ ಹಿಂದೆ ತಿರುಗಿ-'ಗಾಯತ್ರೀ, ಎರಡು ಕಾಫಿ ತಗೊಂಡ್ ಬಾಮ್ಮ' ಎಂದರು. ಅವರಿಗೆ ಮಾತಾಡುವ ಉತ್ಸಾಹವಿತ್ತು. ಅವರು ಹೇಳಿದ ಸಂಕಟದ ಸುದ್ದಿಗೆ ಹೇಗೆ ಪ್ರತಿಕ್ರಿಯಿಸುವುದೋ ಗೊತ್ತಾಗದೆ ಚಡಪಡಿಸುತ್ತಿದ್ದೆ. ಈ ಮಧ್ಯೆಯೇ ನಾಲ್ಕು ನಿಮಿಷ ಕಳೆದು ಹೋಗಿದ್ದವು. ಆದರೆ ಗಾಯತ್ರಿ ಎಂಬಾಕೆ ಬರಲೇ ಇಲ್ಲ. ವೃದ್ಧರು ಅಸಹನೆಯಿಂದ ಮತ್ತೆ ಮತ್ತೆ ಕೂಗು ಹಾಕಿದರು: ಗಾಯತ್ರೀ, ಎರಡು ಕಾಫಿ ಬೇಕು ಅಂತ ಎಷ್ಟ್ ಸಲ ಹೇಳಬೇಕೂ...?'ರಾಜಾರಾಂ ಅವರ ಮಾತು ಮುಗಿಯುತ್ತಿದ್ದಂತೆಯೇ ಅಲ್ಲಿಗೆ ಸರಭರನೆ ಕಾಫಿಯೊಂದಿಗೆ ಬಂದ ಹುಡುಗಿಯೊಬ್ಬಳು ಹೇಳಿದಳು: 'ಅಜ್ಜಾ, ನಾನು ಎಲ್ಲಾ ಪೇಷೆಂಟ್‌ಗಳನ್ನು ಬ್ಯಾಲೆನ್ಸ್ ಮಾಡಬೇಕು. ಇಲ್ಲಿರುವ 80 ಜನರೂ ನಿಮ್ಮ ಥರಾನೇ ಕೂಗು ಹಾಕಿದ್ರೆ ನಾನಾದ್ರೂ ಯಾರ ಮಾತಿಗೆ ಓಗೊಡಲಿ? ಸುಮ್ನೆ ಕಿರುಚಬೇಡಿ. ಒಂದ್ಸಲ ಆರ್ಡರ್ ಮಾಡಿ ಸುಮ್ಮನಿರೋದು ಒಳ್ಳೆ ಪೇಷೆಂಟ್‌ಗಳ ಲಕ್ಷಣ' ಎಂದವಳೇ ನನ್ನ ಕಡೆಗೊಮ್ಮೆ ನೋಡಿ-ಅವರಿಗೆ ನೀವಾದ್ರೂ ಸ್ವಲ್ಪ ಹೇಳಿ ಸಾರ್. ದಿನಾಲೂ ಸುಮ್ನೆ ನಮ್ಮ ಪ್ರಾಣ ತಿಂತಾರೆ' ಎಂದು ಬಂದಷ್ಟೇ ವೇಗವಾಗಿ ಹೋಗಿಬಿಟ್ಟಳು.  ಹೌದು. ಅದೊಂದು ವೃದ್ಧಾಶ್ರಮ. ಅಲ್ಲಿ ಪೇಷೆಂಟ್‌ನ ರೂಪದಲ್ಲಿ ಇದ್ದವರು ರಾಜಾರಾಂ. ಅವರೊಂದಿಗೆ ಅದೇ ಮೊದಲ ಭೇಟಿ. ಭಾನುವಾರಗಳಂದು ಕುಟುಂಬ ವರ್ಗದವರೆಲ್ಲ ಬಂದು ಆಶ್ರಮದಲ್ಲಿರುವ ತಮ್ಮವರನ್ನು ಭೇಟಿಯಾಗುವ ಕಾರ್ಯಕ್ರಮವಿತ್ತು. ಅದೇನು ಕಾರಣವೋ ಏನೋ, ರಾಜಾರಾಂ ಅವರ ಮಗನಾಗಲಿ, ಮಗಳಾಗಲಿ ಬಂದಿರಲಿಲ್ಲ. ಈ ಸಂಕಟಕ್ಕಿಂತ ಹೆಚ್ಚಾಗಿ, ಆಶ್ರಮದಲ್ಲಿದ್ದ ಹುಡುಗಿ ತಮ್ಮನ್ನು ಪೇಷೆಂಟ್ ಎಂದು ಕರೆದದ್ದು ರಾಜಾರಾಂ ಅವರಿಗೆ ಕಸಿವಿಸಿ ಉಂಟುಮಾಡಿತ್ತು. ಕಾಫಿ ಕುಡಿದು ಒಂದೆರಡು ಬಾರಿ ನನ್ನನ್ನೇ ದಿಟ್ಟಿಸಿ ನೋಡಿದ ಅವರು 'ಕಥೆ' ಮುಂದುವರಿಸಿದರು.'.....ಹೆಂಡ್ತಿ ಹೋಗಿಬಿಟ್ಟಳಲ್ಲ, ಅದು ಇಡೀ ಕುಟುಂಬದ ಪಾಲಿಗೆ ಬಹುದೊಡ್ಡ ಶಾಕ್. ಈ ವೇಳೆಗೆ ನನ್ನ ಮಗ ಪ್ರಶಾಂತ ಡಿಗ್ರಿ ಮುಗಿಸಿದ್ದ. ಅವನಿಗೆ ಮದುವೆ ಮಾಡಿದ್ರೆ ಎಲ್ಲರನ್ನೂ ಸಂಭಾಳಿಸಲು ಒಂದು ಹೆಣ್ಣಾದ್ರೂ ಮನೇಲಿರುತ್ತೆ ಅಂದುಕೊಂಡೆ. ಅದೇ ವೇಳೆಗೆ ಶ್ರೀಮಂತರೊಬ್ಬರ ಕಡೆಯ ಸಂಬಂಧ ಬಂತು. ನನಗಿಂತ ಮೊದಲೇ, ನನ್ನ ಮಗನೇ ಮಾತುಕತೆ ಮುಗಿಸ್ಕೊಂಡು ಬಂದ. ಅವನ ಖುಷಿಯೇ ನನ್ನ ಖುಷಿ ಅಂದ್ಕೊಂಡು ಸುಮ್ಮನಾದೆ. ಹುಡುಗಿ ಕಡೆಯವರು ಬಹಳ ಶ್ರೀಮಂತರು. ಅವರಿಗೆ ಆರ್ಡರ್ ಮಾಡೋದು ಅಭ್ಯಾಸ. ಸಣ್ಣದೊಂದು ನೌಕರೀಲಿ ಇದ್ದವನಲ್ವ ಸಾರ್ ನಾನು? ಹಂಗಾಗಿ ನನಗೆ ಆರ್ಡರ್‌ಗಳನ್ನು ಪಾಲಿಸಲು ಬರ್ತಿತ್ತು. ಈ ಕಾರಣದಿಂದಲೇ ಸೊಸೆಯ ಕಡೆಯವರು ಏನೇ ಅಂದ್ರೂ ನಾನು ಗಪ್‌ಚುಪ್ಪಾಗಿ ಇದ್ದು ಬಿಡ್ತಿದ್ದೆ.ಮದುವೆಯಾಗಿ 6 ತಿಂಗಳು ಕಳೆದಿಲ್ಲ; ಆಗಲೇ- ಈ ಮನೇನ ಮಾರಿಬಿಡಿ. ಈ ಮನೇಲಿ ಅತ್ತೆ ಸತ್ತು ಹೋಗಿರುವುದರಿಂದ ನಮ್ಮ ಭವಿಷ್ಯಕ್ಕೆ ಗ್ರಹಗತಿಗಳು ಹೊಂದುವುದಿಲ್ಲ ಎಂದು ಸೊಸೆ ತಕರಾರು ತೆಗೆದ್ಲು. ಅವಳಿಗೆ ಸಮಾಧಾನದ ಮಾತು ಹೇಳಬೇಕು ಅಂತಿದ್ದಾಗಲೇ ನನ್ನ ಮಗ ಪ್ರಶಾಂತ, ಮನೆಯನ್ನು ಮಾರಿಬಿಟ್ಟ. ಯಾಕಪ್ಪಾ ಹೀಗೆ ಮಾಡ್ದೆ ಅಂತ ಕೇಳಲು ಮನಸ್ಸಾಗಲಿಲ್ಲ. ಈಗ ಏನಿದ್ರೂ ಅವನ ಕಾಲ. ಅವನು ಖುಷಿಯಾಗಿರ್ಲಿ ಅಂದುಕೊಂಡೆ. ಮುಂದೆ ಒಂದು ಬಾಡಿಗೆ ಮನೆಗೆ ಹೋದ್ವಿ. ಇದಾಗಿ ಎರಡು ವರ್ಷಕ್ಕೆ ನನ್ನ ಬದುಕಿಗೆ ಮೊಮ್ಮಗ ಬಂದ. ಅವತ್ತಿನವರೆಗೂ ಅಂಕಲ್ ರಾಜಾರಾಂ ಆಗಿದ್ದ ನಾನು, ಮೊಮ್ಮಗ ಬಂದ ಕ್ಷಣದಿಂದಲೇ ತಾತಾ ರಾಜಾರಾಂ ಆಗಿಬಿಟ್ಟೆ. ವಯಸ್ಸಾಯ್ತು ನೋಡಿ, ಅದೇ ಕಾರಣಕ್ಕೆ ನನಗೂ ಒಂದೆರಡು ಕಾಯಿಲೆಗಳು ಬಂದ್ವು. ದುರಾದೃಷ್ಟ ಎಂಬುದು ನನ್ನ ಜೊತೆಯಾಗಿದ್ದು ಆ ಕ್ಷಣದಿಂದಲೇ ಅನ್ಸುತ್ತೆ...ಇರಲಿ. ನನ್ನ ಮಗ ಪ್ರಶಾಂತ, ಬಾಲ್ಯದಲ್ಲಿ ಅದೆಷ್ಟು ಹಚ್ಕೊಂಡಿದ್ದ ಗೊತ್ತಾ? ಅವನಿಗೆ ಒಂದು ವರ್ಷವಿದ್ದಾಗ, ಹೆಂಡತಿ ತವರಿಗೆ ಹೋದಳು. ಹತ್ತು ದಿನ ಅಲ್ಲೇ ಉಳಿದಳು. ಅಷ್ಟಕ್ಕೇ ನನ್ನ ಮಗ ಕೊರಗಿ ಕೊರಗಿ ಇಳಿದು ಹೋಗಿದಾನೆ. ಹಾಲು ಕುಡಿಸಿದ್ರೂ ವಾಂತಿ. ಗಂಜಿ ಕುಡಿಸಿದ್ರೂ ವಾಂತಿ. ಮಲಗಿಸಿದ್ರೆ ಮಧ್ಯೆ ಮಧ್ಯೆ ಅಪ್ಪ...ಅಪ್ಪ, ಎಂಬ ಕನವರಿಕೆ ಬೇರೆ. ಈ ಬೆಳವಣಿಗೆಯಿಂದ ಗಾಬರಿಯಾದ ಹೆಂಡತಿ ತಕ್ಷಣವೇ ಪತ್ರ ಹಾಕಿಸಿದ್ಲು. ನಮ್ಮ ಸಾಹೇಬರ ಕಾಲು ಹಿಡಿದು ಅವತ್ತೇ ಹೆಂಡತಿಯ ಊರು ತಲುಪಿಕೊಂಡೆ. ನಾನು ಮನೆಗೆ ಹೋದಾಗ ರಾತ್ರಿ ಹನ್ನೊಂದು ಗಂಟೆ. ಆಗಲೆ ಮೂಳೆ ಚಕ್ಕಳದಂತಾಗಿದ್ದ ಮಗನನ್ನು ಎತ್ತಿ ಕೊಂಡು-ಕಂದಾ, ಮಗನೇ, ದೊರೇ, ನನ್ನ ಅಪ್ಪಾಜೀ ಎಂದೆಲ್ಲಾ ಕರೆದೆ. ಅಷ್ಟಕ್ಕೇ, ಮಗ ಎಚ್ಚರಗೊಂಡ. ತನ್ನದೇ ತೊದಲು ಭಾಷೆಯಲ್ಲಿ ಅಪ್ಪ, ಅಪ್ಪ ಎಂದ. ಅವನನ್ನು ತೊಡೆ ಮೇಲೆ ಮಲಗಿಸಿಕೊಂಡು ಹಾಲಿನ ಬಾಟಲಿಯನ್ನು ಬಾಯಿಗಿಟ್ಟೆ. ಇಡೀ ಬಾಟಲಿಯನ್ನು ಖಾಲಿ ಮಾಡಿಬಿಟ್ಟ...
ಅವನು ಎಸ್ಸೆಸ್ಸೆಲ್ಸಿಗೆ ಬಂದಾಗ, ಟ್ಯೂಷನ್‌ಗೆ ಹೋಗಿ ಬರಲಿಕ್ಕೆ ಸೈಕಲ್ ತೆಗೆಸಿಕೊಟ್ಟಿದ್ದೆ. ಅದೊಮ್ಮೆ ಯಾರೋ ಬೈಕ್‌ನವನು ಇವನಿಗೆ ಗುದ್ದಿಸಿಬಿಟ್ಟಿದ್ದಾನೆ. ಪ್ರಶಾಂತ ಎಚ್ಚರ ತಪ್ಪಿ ಬಿದ್ದಿದ್ದಾನೆ. ಯಾರೋ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿ ಗಾಯಕ್ಕೆ ಹೊಲಿಗೆ ಹಾಕಲು ಮುಂದಾದರೆ, ನಮ್ಮ ತಂದೆಗೆ ವಿಷಯ ತಿಳಿಸಬೇಡಿ ಡಾಕ್ಟ್ರೇ. ಅವರಿಗೆ ಶಾಕ್ ಆಗುತ್ತೆ ಅಂತ ಬಡಬಡಿಸಿದ. ನಾನಾಗ ಪಕ್ಕದಲ್ಲೇ ಕೂತಿದ್ದೆ. ದುಃಖ ತಡೆಯೋಕಾಗ್ದೆ ಮೆಲ್ಲಗೆ ಬಿಕ್ಕಳಿಸಿದೆ ನೋಡಿ. ತಕ್ಷಣವೇ ಅವನಿಗೆ ಗೊತ್ತಾಗಿ ಹೋಯ್ತು. 'ಅಪ್ಪಾ, ಸಾರಿ ಕಣಪ್ಪ ಎಂದವನೇ ಪ್ರಜ್ಞೆ ಕಳಕೊಂಡಿದ್ದ...ಅವನು ಡಿಗ್ರಿ ಮೊದಲ ವರ್ಷದಲ್ಲಿ ಫೇಲ್ ಆಗಿದ್ದಾಗ, ಒಂದು ಅಡ್ರೆಸ್ ಕೊಟ್ಟು ಇವರನ್ನು ಭೇಟಿಯಾಗಿ ನಾಲ್ಕು ಸಾವಿರ ರುಪಾಯಿ ಕೊಟ್ಟು ಬಿಡಪ್ಪ. ನನ್ನನ್ನು ಪಾಸ್ ಮಾಡ್ತಾರೆ ಎಂದೂ ಕೇಳಿಕೊಂಡಿದ್ದ. ಮಗನ ಸಂತೋಷಕ್ಕಿಂತ ಮಿಗಿಲಾದದ್ದು ನನಗಾದ್ರೂ ಏನಿತ್ತು? ಅವನ ಖುಷಿಗೆ ಅಂತಲೇ ನಡೆದುಹೋಗಿದ್ದೆ. ಒಂದಿಬ್ಬರ ಕಾಲು ಹಿಡಿದಿದ್ದೆ.ಹೀಗೆ, ಪ್ರತಿಬಾರಿಯೂ ನನ್ನನ್ನೇ ಅವಲಂಬಿಸಿದ್ದ ಪ್ರಶಾಂತ, ಮದುವೆಯಾದ ಮೇಲೆ ಬದಲಾಗಿ ಹೋದ. ವಯಸ್ಸಿನ ಕಾರಣದಿಂದ ಒಂದೆರಡು ಕಾಯಿಲೆಗಳು ಜೊತೆಯಾದವು ಅಂದೆನಲ್ಲ, ಆ ಕಾರಣದಿಂದ ನನಗೆ ದಿನಾದಿನ ಮಾತ್ರೆ ಸೇವಿಸುವುದು ಅನಿವಾರ್ಯವಾಯಿತು. ಊಟಕ್ಕೆ ಕೂತರೆ, ಆನಂತರದಲ್ಲಿ ಸರಾಗವಾಗಿ ಎದ್ದು ಹೋಗಿ ಮಾತ್ರೆಯ ಬಾಕ್ಸ್ ತರಲೂ ಆಗದಷ್ಟು ಸುಸ್ತು, ನಿಶ್ಯಕ್ತಿ. ಅಂಥ ಸಂದರ್ಭದಲ್ಲೆಲ್ಲ ಸೊಸೆಯ ಸಹಾಯ ಬಯಸುತ್ತಿದ್ದೆ. ಒಂದೊಂದು ಸಂದರ್ಭದಲ್ಲಿ ಹಾಸಿಗೆಯಲ್ಲೇ ಮೂತ್ರ ಮಾಡಿಕೊಂಡೆ. ಮರುದಿನ, ನಾನೇ ಮುಂದಾಗಿ ವಿಷಯ ತಿಳಿಸಿ, ಎಲ್ಲ ಬಟ್ಟೆಗಳನ್ನು ಒಗೆದುಹಾಕಿದ್ದೆ. ಅದೊಮ್ಮೆ ಬೆಡ್‌ರೂಂನಲ್ಲಿ ಹೆಂಡತಿಯೊಂದಿಗೆ ಪಿಸಪಿಸ ಮಾತಾಡಿ ಹೊರಬಂದ ಪ್ರಶಾಂತ-'ಅಪ್ಪಾ, ನಿನ್ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕೋದು ಕಷ್ಟ ಆಗುತ್ತೆ. ಅವಳು ಮೊದಲಿಂದ ಬಿಂದಾಸ್ ಆಗಿ ಬೆಳೆದವಳು. ಈಗ ನಮ್ಮ ಮಧ್ಯೆ ಮಗು ಬೇರೆ ಇದೆ. ನೀನು ರಾತ್ರಿ ವೇಳೆ ಇದ್ದಕ್ಕಿದ್ದಂತೆ ಎದ್ದು ಬಂದಾಗ, ಹಗಲಲ್ಲಿ ಏನಾದ್ರೂ ಡಿಮ್ಯಾಂಡ್ ಮಾಡುವಾಗ ಎಲ್ಲರಿಗೂ ಕಿರಿಕಿರಿ ಆಗುತ್ತೆ. ಹೆದರಿಕೇನೂ ಆಗುತ್ತೆ. ಈಗ ಒಂದು ಕೆಲ್ಸ ಮಾಡೋಣ. ಎಲ್ಲಾ ಅನುಕೂಲಗಳಿರೋ ವೃದ್ಧಾಶ್ರಮಕ್ಕೆ ನೀನು ಸೇರಿಕೊಳ್ಳಪ್ಪ. ನಾವು ವಾರವಾರ ಬಂದು ಮಾತಾಡಿಸಿಕೊಂಡು ಬರ್ತೇವೆ...'ಮಗ ಹೀಗೆಲ್ಲ ಮಾತಾಡಿದ್ದನ್ನು ಮಗಳ ಮುಂದೆ ಹೇಳಿಕೊಂಡೆ. ಅವಳೂ ಗಂಡನೊಂದಿಗೆ ಬೆಡ್‌ರೂಂಗೆ ಹೋಗಿ ಏನೋ ಮಾತಾಡಿದ್ಲು. ನಂತರ ಹೊರಬಂದ ಅಳಿಯ- ನೀವು ನಮ್ಮೊಂದಿಗೇ ಇದ್ದು ಬಿಡಿ ಎಂದರು. ವಿಪರ್ಯಾಸ ನೋಡಿ; ಮಗ ಬೆಡ್‌ರೂಂಗೆ ಹೋಗಿ ಬಂದವನೇ, ನನ್ನನ್ನು ಮನೆಯಿಂದ ಹೊರಹಾಕುವ ಮಾತಾಡಿದ್ದ. ಮಗಳು, ಅದೇ ಬೆಡ್‌ರೂಂನಿಂದ ಗಂಡನನ್ನು ಕಳಿಸಿ ನನ್ನನ್ನು ಉಳಿಸಿಕೊಳ್ಳುವ ಮಾತು ಹೇಳಿದ್ಳು. ಆದರೆ, ಮಗಳಿಗೆ ಭಾರ ಆಗಿರೋಕೆ ಮನಸ್ಸು ಒಪ್ಪಲಿಲ್ಲ. ಎರಡು ದಿನಗಳ ನಂತರ ಮಗನ ಮನೆಗೆ ವಾಪಸಾದೆ. ಅವನು, ಅದೊಂದು ಮುಂಜಾನೆ ನನ್ನನ್ನು ವ್ಯಾನ್‌ನಲ್ಲಿ ಕೂರಿಸ್ಕೊಂಡು ಇಲ್ಲಿ ಬಿಟ್ಟು ವಾಪಸ್ ಹೋಗಿಬಿಟ್ಟ.ಇಲ್ಲಿ ಟಿ.ವಿ.ಯಿದೆ. ನರ್ಸ್‌ಗಳಿದ್ದಾರೆ. ವಾರ್ಡನ್ ಇದ್ದಾನೆ. ಮೂರು ಹೊತ್ತು ಊಟ ಸಿಗುತ್ತೆ. ಡಾಕ್ಟರ್‌ಗಳೂ ಬಂದು ಹೋಗ್ತಾರೆ. ಆದರೆ, ಯಾರೂ ಯಾರಿಗೂ ಆತ್ಮಿಯರಲ್ಲ. ಯಾರೂ ಯಾರನ್ನೂ ಹಚ್ಚಿಕೊಂಡಿಲ್ಲ. ವೃದ್ಧಾಪ್ಯದ ಹೊಸ್ತಿಲಲ್ಲಿ ನಿಂತವರಿಗೆ, ಆಗಿಂದ್ದಾಗ್ಗೆ ಕಾಯಿಲೆ ಬೀಳುವ ಆಸೆಯಾಗುತ್ತದೆ. ಮಗನಿಂದ, ಮಗಳಿಂದ, ಸೊಸೆಯಿಂದ, ಬಂಧುಗಳಿಂದ ಸಾಂತ್ವನದ ಮಾತುಗಳನ್ನು ಕೇಳುವ ಆಸೆಯಾಗುತ್ತದೆ. ಸುತ್ತಮುತ್ತಲೂ ತನ್ನನ್ನು ಪ್ರೀತಿಸುವ ಜನ ಇದ್ದಾರೆ. ಬೈ ಛಾನ್ಸ್ ನಾನು ಸತ್ತು ಹೋದರೆ ಇವರೆಲ್ಲ ಗೋಳೋ ಎಂದು ಅಳುತ್ತಾರೆ ಅನ್ನಿಸಿಬಿಟ್ಟಿರೆ, ಹಾಸಿಗೆ ಹಿಡಿದ ಆಸಾಮಿಗೆ ವಿನಾಕಾರಣ ಖುಷಿಯಾಗುತ್ತದೆ. ತಾತ ಬೇಕೂ... ಎಂದು ಮೊಮ್ಮಕ್ಕಳು ಹೇಳುವುದನ್ನು ಕೇಳಿಸಿಕೊಂಡರೆ ಸಾಕು, ಮನಸ್ಸೆಂಬುದು ನವಿಲಾಗುತ್ತದೆ. ವೃದ್ಧಾಪ್ಯದ ನೆಪದಲ್ಲಿ ಕೆಲವೊಮ್ಮೆ ಮಂಗಚೇಷ್ಟೆ ಮಾಡುವ ಉಮೇದಿಯೂ ಬರುತ್ತದೆ. ಅಂಥ ಸಂದರ್ಭಕ್ಕೆ ಜೊತೆಗಾರರ ರೂಪದಲ್ಲಿ ಮೊಮ್ಮಕ್ಕಳು ಬೇಕು. ಮೊಮ್ಮಕ್ಕಳ ಆಟದಲ್ಲಿ,ಅವರ ತೊದಲು ಮಾತಿನಲ್ಲಿ ಪ್ರತಿ ತಂದೆಗೂ ಮಕ್ಕಳ ಬಾಲ್ಯ, ಅವರ ತುಂಟತನ ನೆನಪಾಗುತ್ತದೆ. ಇದೆಲ್ಲವನ್ನೂ ನೋಡುತ್ತಲೇ ಉಹುಂ, ಇಷ್ಟು ಬೇಗ ನಾನು ಸಾಯಬಾರದು ಎಂದು ಪ್ರಾರ್ಥಿಸುವ ಮನಸ್ಸು ಮುದುಕ ಅನ್ನಿಸಿಕೊಂಡವರಿಗೆ ಬಂದು ಬಿಡುತ್ತದೆ.ಆದರೆ ಸಾರ್, ಈ ಆಶ್ರಮದಲ್ಲಿ, ಖಂಡಿತ ಹಾಗನ್ನಿಸ್ತಾ ಇಲ್ಲ. ಇಲ್ಲಿ ಏನಿದ್ರೂ ನಾವು ಪೇಷೆಂಟ್ಸ್ ಥರಾ ಬದುಕಬೇಕು. ಭಾವನೆಗಳೇ ಇಲ್ಲದವರ ಮಧ್ಯೆ ಬದುಕುವುದಾದರೂ ಹೇಗೆ? ನನಗೆ, ನನ್ನಂಥವರಿಗೆ ಇಂಥ ಪರಿಸ್ಥಿತಿ ಬರಲಿಕ್ಕೆ ಸೊಸೆಯೇ ಕಾರಣ ಎನ್ನಲಾರೆ. ಆಕೆ ಮಾತು ತೆಗೆದಾಗಲೇ-'ನನಗೆ ಅಪ್ಪನನ್ನು ಬಿಟ್ಟು ಬದುಕಿಲ್ಲ' ಎಂಬ ಮಾತನ್ನು ಮಗ ಹೇಳಿಬಿಟ್ಟಿದ್ದರೆ, ಆಕೆ ಎರಡನೇ ಮಾತಾಡಲು ಸಾಧ್ಯವೇ ಇರಲಿಲ್ಲ. ನಾನು ಮಗನ ವಿಷಯವಾಗಿ ಒಂದಲ್ಲ, ನೂರು ಕನಸು ಕಂಡೆ. ಮಗನನ್ನು ಹೀಗ್ ಹೀಗೇ ಬೆಳೆಸಬೇಕು ಎಂದು ಯೋಜನೆ ಹಾಕಿಕೊಂಡೆ. ಅವನ ಒಳಿತಿಗಾಗಿ ಪ್ರಾರ್ಥಿಸಿದೆ. ಪೂಜಿಸಿದೆ. ಉಪವಾಸ ಕುಳಿತೆ. ಹರಕೆ ಕಟ್ಟಿಕೊಂಡೆ. ಬಾಲ್ಯದಲ್ಲಿ ವರ್ಷಾನುಗಟ್ಟಲೇ ಅವನು ಹಾಸಿಗೆಯಲ್ಲಿ ಮೂತ್ರ ಮಾಡಿಕೊಂಡರೂ ಬೇಸರಿಸದೆ ಮುದ್ದು ಮಾಡಿದೆ. ಆದರೆ, ಅಪ್ಪನನ್ನು ಹೇಗೆ ನೋಡ್ಕೋಬೇಕು ಎಂಬುದನ್ನು ಅವನು ಕಲಿಯಲೇ ಇಲ್ಲ...'ಬಿಡುವಿಲ್ಲದೆ ಮಾತಾಡಿದ್ದರಿಂದ ರಾಜಾರಾಂ ದಣಿದಿದ್ದರು. ಈ ವೇಳೆಗೆ ಹೊರಗೆ ನಿಧಾನವಾಗಿ ಕತ್ತಲಾಗುತ್ತಿತ್ತು. ಅದೇ ಸಮಯಕ್ಕೆ, ಸಂದರ್ಶನದ ಟೈಂ ಮುಗಿಯಿತೆಂಬ ಅಲಾರಾಂ ಮೊಳಗಿತು. ಆಶ್ರಮದ ಸಿಬ್ಬಂದಿ, ಟೈಂ ಆಗಿದೆ. ಹೊರಡಿ ಎಂದು ಅವಸರಿಸಿದರು. 'ಮತ್ತೆ ಬರ್ತೇನೆ' ಎನ್ನುತ್ತಾ ಎದ್ದು ನಿಂತೆ. ಇದನ್ನೆಲ್ಲಾ ನಾನು ಪ್ರಶಾಂತನಿಗೆ ಹೇಳಬೇಕಿತ್ತು ಎನ್ನುತ್ತಲೇ ರಾಜಾರಾಂ ಅತ್ತ ತಿರುಗಿಕೊಂಡು ಕಣ್ಣೊರೆಸಿಕೊಂಡರು.ಸಮಾಧಾನ ಮಾಡಿಕೊಳ್ಳಿ ಎನ್ನಲು ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ.-ಎ.ಆರ್. ಮಣಿಕಾಂತ್armanikanth@gmail.com


















No comments:

Post a Comment