Tuesday, 3 December 2013

ಇಲ್ಲೇ ಇರು, ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು...


ಇಲ್ಲೇ ಇರು, ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು...

ಭಾವತೀರಯಾನ- ಎ.ಆರ್.ಮಣಿಕಾಂತ್

ಮಹಾಭಾರತದ ವನವಾಸ ಪರ್ವದಲ್ಲಿ ಒಂದು ಪ್ರಸಂಗ ಬರುತ್ತದೆ. ಒಂದು ಮುಂಜಾನೆ ದ್ರೌಪದಿಗೆ ಅಪರೂಪದ ಸುವಾಸನೆ ಹೊಂದಿದ ಹೂವೊಂದು ಸಿಕ್ಕಿಬಿಡುತ್ತದೆ. ಆ ಹೂವಿನ ಪರಿಮಳಕ್ಕೆ ದ್ರೌಪದಿ ಮನಸೋಲುತ್ತಾಳೆ. ಒಂದು ಹೂವಿಗೇ ಇಷ್ಟೊಂದು ಪರಿಮಳ ಇರಬೇಕಾದರೆ ಒಂದಿಡೀ ಗೊಂಚಲಿಗೆ ಅದೆಂಥ ಸುವಾಸನೆಯಿರಬೇಡ ಎಂಬ ಲೆಕ್ಕಾಚಾರ ಅವಳದು. ಹೀಗೆ, ಹೂವಿನ ಪರಿಮಳಕ್ಕೆ ಬೆರಗಾಗಿ, ಮರುಳಾಗಿದ್ದ ಸಂದರ್ಭದಲ್ಲಿಯೇ ಅಂಥ ಹೂಗಳ ಮಾಲೆ ಕಟ್ಟಿ ಮುಡಿದುಕೊಳ್ಳಬೇಕು ಎಂದು ದ್ರೌಪದಿಗೆ ಆಸೆಯಾಗುತ್ತದೆ. ಅಷ್ಟರಲ್ಲಿ, ಆ ಹೂವಿನ ಹೆಸರು-ಸೌಗಂಧಿಕಾ ಪುಷ್ಪ ಎಂದೂ ಅವಳಿಗೆ ತಿಳಿಯುತ್ತದೆ. ತನಗೆ ಸಿಕ್ಕಿದ ಹೂವನ್ನು ಹಿಡಿದುಕೊಂಡೇ ಅವಳು ಭೀಮನ ಬಳಿ ಬರುತ್ತಾಳೆ.  'ಈ ಹೂವಿನ ಪರಿಮಳಕ್ಕೆ ನಾನು ಸೋತು ಹೋಗಿದ್ದೇನೆ. ಇಂಥ ಹೂಗಳ ಮಾಲೆಯೊಂದನ್ನು ಹೆಣೆದು ಅದನ್ನು ಮುಡಿಯಬೇಕೆಂಬ ಆಸೆಯಾಗುತ್ತಿದೆ. ಇಂಥ ಹೂಗಳನ್ನು ತಂದುಕೊಡುವೆಯಾ...' ಎಂದು ಕೇಳುತ್ತಾಳೆ. ಅವಳ ಮಾತಲ್ಲಿ ಪ್ರೀತಿಯಿರುತ್ತದೆ. ಯಾಚನೆಯಿರುತ್ತದೆ. ನಾಚಿಕೆಯಿರುತ್ತದೆ ಮತ್ತು ಕಂಡೂ ಕಾಣದಂಥ ಆಗ್ರಹವಿರುತ್ತದೆ.
ಹೆಂಡತಿಯ ಬೇಡಿಕೆಗೆ ಮಣಿಯದ ಗಂಡು ಜಗತ್ತಿನಲ್ಲಿ ಯಾವನಿದ್ದಾನೆ? ಭೀಮನೂ ಇದೇ ಗುಂಪಿಗೆ ಸೇರಿದ್ದ ಎಂದು ಕಾಣುತ್ತದೆ. ಇದೇ ಕಾರಣದಿಂದ ಆತ ಎರಡನೇ ಮಾತೇ ಆಡದೆ ಸೌಗಂಧಿಕಾ ಪುಷ್ಪ ತರಲು ಹೊರಟು ನಿಲ್ಲುತ್ತಾನೆ. ಸ್ವಾರಸ್ಯವೆಂದರೆ, ಆ ಹೂವಿನ ತೋಟ ಎಲ್ಲಿದೆ ಎಂಬುದೇ ಭೀಮನಿಗೆ ತಿಳಿದಿರುವುದಿಲ್ಲ. ಆ ಹೂವಿನ ವಿಳಾಸ ದ್ರೌಪದಿಗೂ ಗೊತ್ತಿರುವುದಿಲ್ಲ. ಯಾವುದೋ ದಿಕ್ಕಿನಿಂದ ಹಾಗೇ ಸುಮ್ಮನೆ ತಂಗಾಳಿಯಲ್ಲಿ ಹಾರಿಬಂದ ಅದರ ವಿಲಾಸಕ್ಕೆ ದ್ರೌಪದಿ ಪರವಶಳಾಗಿರುತ್ತಾಳೆ. ಈ ಭೀಮ, ಆ ಸುವಾಸನೆ ತೇಲಿ ಬಂದ ದಿಕ್ಕಿನ ಜಾಡು ಹಿಡಿಯುತ್ತಾನೆ.
ಹಾಗೆ ಹೊರಟವನಿಗೆ, ದಾರಿಯಲ್ಲಿ ಮಾರುವೇಷದಲ್ಲಿದ್ದ ಆಂಜನೇಯನ ದರ್ಶನವಾಗುತ್ತದೆ. ಆ ಮಟ ಮಟ ಮಧ್ಯಾಹ್ನ, ದಾರಿಗೆ ಅಡ್ಡವಾಗಿ ತನ್ನ ಬಾಲವನ್ನು ಇಟ್ಟುಕೊಂಡೇ ಕುಳಿತಿರುತ್ತಾನೆ ಆಂಜನೇಯ. ಜಗತ್ತಿನಲ್ಲಿ ನಾನೇ ಮಹಾನ್ ಶಕ್ತಿವಂತ ಎಂಬ ಅಹಂಕಾರ ಹೊಂದಿದ್ದ ಭೀಮ-'ಎಲವೋ ಕಪಿಯೇ, ನಾನು ಪಾಂಡು ಪುತ್ರ ಭೀಮ. ಈ ದಾರಿಯಲ್ಲಿ ಮುಂದೆ ಸಾಗ ಬೇಕಿದೆ. ನಿನ್ನ ಬಾಲ ಎತ್ತಿಕೊಂಡು ದಾರಿ ಬಿಡು' ಎಂದು ಆದೇಶಿಸುತ್ತಾನೆ. 'ಅಪ್ಪಾ, ನಾನು ಮುದುಕ. ಬಾಲ ಎತ್ತಿಕೊಳ್ಳುವಷ್ಟೂ ಶಕ್ತಿ ಇಲ್ಲ. ದಯವಿಟ್ಟು ಅದನ್ನು ಎತ್ತಿ ಪಕ್ಕಕ್ಕಿಟ್ಟು ಮುಂದೆ ಹೋಗು ಎನ್ನುತ್ತಾನೆ ಹನುಮಂತ. ಈ ಸಂದರ್ಭದಲ್ಲಿ ಭೀಮ-ಹನುಮರ ಶಕ್ತಿ ಪ್ರದರ್ಶನವಾಗುತ್ತದೆ. ಭೀಮನ ಗರ್ವಭಂಗವಾಗುತ್ತದೆ. ಆಗಲೇ, ಹನುಮನು ತನ್ನ ಹಿರಿಯಣ್ಣ ಎಂಬ ಸತ್ಯವೂ ಭೀಮನಿಗೆ ಗೊತ್ತಾಗುತ್ತದೆ. ಆ ನಂತರದಲ್ಲಿ ಹನುಮಂತನ ವಿಶ್ವರೂಪ ದರ್ಶನವೂ ಆಗುತ್ತದೆ. ಇಷ್ಟೆಲ್ಲಾ ಆದ ನಂತರ, ಕುಬೇರನ ಸಾಮ್ರಾಜ್ಯದಲ್ಲಿ ಆ ಪರಿಮಳದ ಹೂವಿರುವ ಸಂಗತಿಯನ್ನು ಭೀಮನಿಗೆ ಹನುಮಂತನೇ ತಿಳಿಸುತ್ತಾನೆ. ಕುಬೇರನ ಅರಮನೆಗೆ, ಉದ್ಯಾನಕ್ಕೆ ಹೋಗಲು ದಾರಿ ತೋರುತ್ತಾನೆ. ಹೋಗಿ ಬಾ. ನಿನಗೆ ಶುಭವಾಗಲಿ ಎಂದು ಆಶೀರ್ವಾದವನ್ನೂ ಮಾಡುತ್ತಾನೆ. ಇದಿಷ್ಟು ಪ್ರಸಂಗ.
ಈ ಪ್ರಸಂಗದ ಬಗ್ಗೆ ಓದಿದಾಗ ಅಥವಾ ಬೇರೆಯವರಿಂದ ಕೇಳಿದಾಗ ಒಂದು ಪ್ರಶ್ನೆ ಧುತ್ತನೆ ಎದ್ದು ನಿಲ್ಲುತ್ತದೆ. ಏನೆಂದರೆ, ಸೌಗಂಧಿಕಾ ಪುಷ್ಪ ಹುಡುಕಿಕೊಂಡು ಭೀಮ ಹೊರಡುತ್ತಾನಲ್ಲ; ಆಗ ಅವನಿಗೆ ದಾರಿಯೇ ಗೊತ್ತಿರುವುದಿಲ್ಲ. ಅಂಥ ಸಂದರ್ಭದಲ್ಲಿ ಅವನು ದ್ರೌಪದಿಯನ್ನು ಜತೆಗೆ ಕರೆದೊಯ್ಯಬಹುದಿತ್ತು, ಅಲ್ಲವೇ? ಒಂದು ವೇಳೆ ಹಾಗೆ ಮಾಡಿದ್ದರೆ, ನಡೆವ ಆಯಾಸವೂ ಕಡಿಮೆಯಾಗುತ್ತಿತ್ತು. ಪ್ರಯಾಣಕ್ಕೆ ಜತೆ ಸಿಗುತ್ತಿತ್ತು. ದ್ರೌಪದಿಯೊಂದಿಗೆ ತಮಾಷೆ ಮಾಡುತ್ತಾ, ಹುಸಿ ಕೋಪ ನಟಿಸುತ್ತಾ, ಅವಳನ್ನು ರೇಗಿಸುತ್ತಾ, ಆಸೆಯಾದರೆ ಮುದ್ದಿಸುತ್ತಾ, ಮೂಡ್ ಬಂದರೆ ಹಾಡುತ್ತಾ, ಯಾವುದೋ ಕಥೆ ಹೇಳುತ್ತಾ, ಹಾಗೆ ನಡೆಯುತ್ತಿದ್ದಾಗಲೇ ಛಕ್ಕನೆ ಮುತ್ತಿಟ್ಟು ಅವಳನ್ನು ಬೆಚ್ಚಿ ಬೀಳಿಸಬಹುದಿತ್ತು. ಮಿಗಿಲಾಗಿ ಆಂಜನೇಯನ ವಿಶ್ವರೂಪ ತೋರಬಹುದಿತ್ತು. ಅವಳು ಬೆರಗಾಗಿ ನೋಡುತ್ತಿದ್ದಾಗಲೇ ಕೈ ಜಗ್ಗಿ 'ಗೊತ್ತಾ ನಿಂಗೆ? ಇವನು ನಿಂಗೆ ಅಣ್ಣ ಆಗಬೇಕು ದ್ರೌಪದೀ' ಎಂದು ಹೇಳಬಹುದಿತ್ತು. ಆಮೇಲೆ, ಒಂದೇ ಒಂದು ಹೂವಿಗಾಗಿ ಹತ್ತಾರು ಮೈಲಿ ನಡೆಯಬೇಕು ಎಂಬ ಸತ್ಯದರ್ಶನವನ್ನೂ ಅವಳಿಗೆ ಮಾಡಿಸಬಹುದಿತ್ತು. ಆದರೆ ಭೀಮ ತಮಾಷೆಗೂ ಇಂಥ ಪ್ರಯತ್ನ ಮಾಡುವುದಿಲ್ಲ. ಬದಲಿಗೆ - ನೀನು ಇಲ್ಲೇ ಇರು. ನಾನು ಸಂಜೆಯೊಳಗೆ ಈ ಹೂಗಳ ಗೊಂಚಲನ್ನೇ ತಂದುಕೊಡ್ತೀನಿ ಎಂದು ಹೇಳಿ ಹೋಗಿ ಬಿಡುತ್ತಾನೆ.
ಭೀಮ ಹೀಗೇಕೆ ಮಾಡಿದ? ದ್ರೌಪದಿ ಬೇಗ ನಡೆಯೋದಿಲ್ಲ ಎಂಬ ಕಾರಣಕ್ಕೆ ಅವಳನ್ನು ಬಿಟ್ಟು ಹೊರಟನಾ? ದಾರಿಯುದ್ದಕ್ಕೂ ತಾಯಿ ಕುಂತಿಯ ಮೇಲೆ, ಸೋದರರಾದ ಧರ್ಮರಾಯ, ಅರ್ಜುನ, ನಕುಲ ಹಾಗೂ ಸಹದೇವರ ಮೇಲೆ ದ್ರೌಪದಿ ದೂರು ಹೇಳಬಹುದು ಎಂಬ ಅನುಮಾನದಿಂದ ಅವಳನ್ನು ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದನಾ? ಅಥವಾ ಹೆಂಡತಿಯಾದವಳು ಜತೆಗೆ ಬಂದರೆ ಸಂತೋಷಕ್ಕಿಂತ ಕಿರಿಕ್ಕೇ ಜಾಸ್ತಿ ಎಂಬ ತಿಳಿವಳಿಕೆ ಅವನಿಗೂ ಇತ್ತಾ? ನಡೆದು ಅವಳಿಗೆ ಆಯಾಸ ಆಗದಿರಲಿ ಎಂಬುದು ಭೀಮನ ಉದ್ದೇಶವಾಗಿತ್ತಾ? ಯೋಚಿಸುತ್ತಾ ಹೋದಂತೆಲ್ಲಾ ಪ್ರಶ್ನೆಗಳು ಬೆಳೆಯುತ್ತವೆ.
ಹೀಗೆಲ್ಲ ಅಂದುಕೊಳ್ಳುವಾಗಲೇ ನೆನಪಾಗುವುದು ವಿ.ಕೃ. ಗೋಕಾಕ್ ಅವರ 'ಪಯಣ' ಹೆಸರಿನ ಕವಿತೆ. ಅದರಲ್ಲಿ ಗೋಕಾಕ್ ಹೀಗೆ ಬರೆಯುತ್ತಾರೆ. ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು/ನೇಹಕೆಂದು ನಲುಮೆಗೊಂದು ಗುರುತನಿರಿಸಿ ಬರುವೆನು... ಮುಂದೆ ಪದ್ಯ ಹೀಗೆ ಮುಂದುವರಿಯುತ್ತದೆ; ಹೋದ ಮೇಲೆ ಸುತ್ತಬೇಕು ಏಳು ಕೋಟೆ ದ್ವಾರವು/ಹಾದಿಯಲ್ಲಿ ತೀರದಂಥ ದುಃಖವಿಹುದಪಾರವು/ಸಾಧಿಸುತ್ತ ಜಯಿಸುವುದೇ ಬಾಳುವುದರ ಸಾರವು ೤
ಈ ಪದ್ಯ ಓದಿದಾಗಲೂ ಕೈ ಹಿಡಿಯುವುದು ಅದೇ ಪ್ರಶ್ನೆ: ಈ ಕವಿ ಸಾರ್ವಭೌಮ, ಅಲ್ಲಿಗೆ ಹೋಗಿ ಮಲ್ಲಿಗೆ ತರುವೆನು ಎಂದು ಹೇಳುತ್ತಾನೆ ನಿಜ. ಆದರೆ ಇವನು ಮಲ್ಲಿಗೆ ತರಲು ಒಬ್ಬನೇ ಯಾಕೆ ಹೋಗಬೇಕು? ಜತೆಯಲ್ಲಿ ಅವಳನ್ನೂ ಕರೆದೊಯ್ಯಬಹುದಲ್ಲ? ಈ ಪ್ರಶ್ನೆಗೆ ಉತ್ತರಗಳನ್ನು ಹೇಗೆಲ್ಲಾ ಅಂದಾಜು ಮಾಡಿಕೊಳ್ಳಬಹುದೋ ನೋಡಿ: ಬಹುಶಃ ಅವನ ಬಳಿ ಕಾಸಿಲ್ಲದಿರಬಹುದು. ಇದೇನೂ ಗೊತ್ತಿಲ್ಲದ ಆಕೆ-ಮಲ್ಲಿಗೆ ಹೂ ತಗೊಂಡು ಬನ್ರೀ ಎಂದು ಕೇಳಿಬಿಟ್ಟಿದ್ದಾಳೆ. ಮೊಳ ಮಲ್ಲಿಗೆ ಕೇಳಿದಾಗಲೂ ಕಾಸಿಲ್ಲ ಕಣೇ ಅಂದರೆ ಅವಳಿಗೆ ಬೇಜಾರಾಗಬಹುದು. ಹೇಗಿದ್ದರೂ ಮಲ್ಲಿಗೆ ಮಾರುವ ಹೆಂಗಸು ಪರಿಚಯವಿದ್ದಾಳೆ. ಹಾಗಾಗಿ ಅವಳಲ್ಲಿ ಸಾಲ ಹೇಳಿ ಹೂ ತಂದರಾಯ್ತು ಎಂಬ ಕಾರಣದಿಂದಲೇ ಇವನು ಹೆಂಡತಿ/ಗೆಳತಿಯನ್ನು ಒಂದು ಕಡೆ ನಿಲ್ಲಿಸಿ- ಇಲ್ಲೇ ಇರು. ಅಲ್ಲಿ ಹೋಗಿ ಮಲ್ಲಿಗೆ ತರುವೆನು ಎಂದು ಹೇಳಿ ಹೋಗುತ್ತಾನೆ.
ಹೀಗೆ ಅಂದುಕೊಂಡಾಗಲೇ ಇನ್ನೊಂದು ಅನುಮಾನದ ಹೆಡೆ ತಲೆ ಎತ್ತುತ್ತದೆ. ಏನೆಂದರೆ- ಅವನು ಒಬ್ಬನೇ ಹೋಗಿದ್ದು ಹೂವು ತರುವ ನೆಪದಿಂದಲೋ ಅಥವಾ ಹೂವಾಡಗಿತ್ತಿಯ ಜಪದಿಂದಲೋ? ಈ ಹೆಂಡತಿಗೆ ಹೂವಿನ ಮೇಲಿತ್ತಲ್ಲ; ಅಂಥದೇ ಅಥವಾ ಅದಕ್ಕಿಂತಲೂ ಹೆಚ್ಚಿನ ಮೋಹ ಅವನಿಗೆ ಹೂವಾಡಗಿತ್ತಿಯ ಮೇಲೆ ಇತ್ತೋ ಹೇಗೆ? ತನ್ನ ಇನ್ನೊಂದು ಮುಖ ಹೆಂಡತಿಗೆ ಕಾಣದೇ ಇರಲಿ ಎಂಬ ಕಾರಣದಿಂದಲೋ ಅವನು ಹೆಂಡತಿಯನ್ನು ಅಲ್ಲೇ ಬಿಟ್ಟು ಹೋಗಿರಬಾರದೇಕೆ? ಮಲ್ಲಿಗೆಯನು ತರುವೆನು... ಎಂದು ಹೇಳಿ ಇವನು ಹೋಗಿದ್ದೇನೋ ಸರಿ. ಆದರೆ ಮಲ್ಲಿಗೆ ಯಾರಿಗಿಷ್ಟ? ಅವನಿಗೋ ಅಥವಾ ಅವಳಿಗೋ? ಅವಳಿಗೇ ಇಷ್ಟ ಅಂದುಕೊಳ್ಳೋಣ. ಅವನು ತನ್ನನ್ನು ಒಂಟಿಯಾಗಿ ಬಿಟ್ಟು ಹೋಗಿಯಾದರೂ ಮಲ್ಲಿಗೆ ತಂದು ಕೊಡಲಿ ಎನ್ನುವಷ್ಟರ ಮಟ್ಟಿಗೆ ಅವಳು ಆಸೆಬರುಕಿಯಾ? ಅಥವಾ ಮಲ್ಲಿಗೆ ತರಲು ಜತೆಗೆ ಕರೆದೊಯ್ದರೆ ಅವಳು ಸೀರೆ ಕೊಡಿಸಿ, ಬಳೆ ಕೊಡಿಸಿ, ವಾಚ್ ಕೊಡಿಸಿ... ಎಂದೆಲ್ಲಾ ಪೀಡಿಸಬಹುದು. ಹೂವಿನವಳೊಂದಿಗೆ ಚೌಕಾಸಿಗೆ ನಿಂತು ಸುಮ್ಮನೇ ಕಾಲಹರಣ ಮಾಡಬಹುದು ಅಥವಾ ರೇಟು ಕೇಳಿ 'ಅಷ್ಟೊಂದಾ? ಬೇಡ ಬೇಡ ಎಂದು ಜೋರಾಗೇ ಹೇಳಿ, ಗಂಡನಿಗೆ ಹೂವು ಬೇಡ. ಹೋಗೋಣ ಬನ್ನಿ' ಎಂದು ಕಣ್ಸನ್ನೆಯಲ್ಲೇ ಹೆದರಿಸಿ ಬಂದು ಬಿಡಬಹುದು. ಹೀಗೆಲ್ಲ ಯಡವಟ್ಟುಗಳು ಆಗಬಹುದು ಎಂಬ ಅಂದಾಜಿನಿಂದಲೇ ಈ ಮಹರಾಯ ಅವಳನ್ನು ಒಂದು ಕಡೆ ನಿಲ್ಲಿಸಿ ಹೊರಟಿರಬಹುದು...
ಅಥವಾ... ಅವರಿಬ್ಬರೂ ಹೊರಟಿದ್ದು ಮಟಮಟ ಮಧ್ಯಾಹ್ನದ ಹೊತ್ತಿನಲ್ಲಿರಬೇಕು. ಬಿಸಿಲಿಗೆ ಇಬ್ಬರೂ ಬೆವತಿದ್ದರು ಅಂತ ಕಾಣುತ್ತೆ. ಆ ಹೊತ್ತಿನಲ್ಲಿ ಅಂಟಿಕೊಂಡೇ ನಿಂತಾಗ ಒಬ್ಬರ ಬೆವರಿನ ಕೆಟ್ಟ ವಾಸನೆ ಇನ್ನೊಬ್ಬರಿಗೂ ತಲುಪಿ ಹಿಂಸೆ ಅನ್ನಿಸಿರಬೇಕು. ಈ ಸಂದರ್ಭದಲ್ಲಿಯೇ ಅವಳ ಖಾಲಿ ಮುಡಿ ಅವನಿಗೆ ಕಂಡಿರಬೇಕು. ಮುಡಿ ತುಂಬಾ ಮಲ್ಲಿಗೆಯಾದರೂ ಇದ್ದರೆ ಪಯಣದ ಹಾದಿಯುದ್ದಕ್ಕೂ ಸುವಾಸನೆಯ ಪರಿಮಳವಾದರೂ ಜತೆಗಿರುತ್ತದೆ ಎಂಬ ಭಾವ ಅವನಿಗೆ ಬಂದಿರಬೇಕು. ಜತೆಗೆ ಈ ಉರಿ ಬಿಸಿಲಿನಲ್ಲಿ ಅವಳನ್ನು ಕರೆದೊಯ್ದು ದಣಿಸುವುದು ಬೇಡ ಅನ್ನಿಸಿರಬೇಕು. ಈ ಕಾರಣದಿಂದಲೇ ಅವಳನ್ನು ಒಂದು ಕಡೆ ನಿಲ್ಲಿಸಿ ಅವನು ಹೂ ತರಲು ಹೊರಟನಾ? ಅಥವಾ... ಅಥವಾ... ಆಕೆ, ಕುರೂಪಿಯಾಗಿದ್ದಳಾ? ಅವಳೊಂದಿಗೆ ಹೋದರೆ ಜನ ತನ್ನನ್ನು ಗೇಲಿ ಮಾಡಬಹುದು ಎಂಬ ಕಾರಣಕ್ಕೇ ಅವಳನ್ನು ಬಿಟ್ಟು ಹೋದನೋ ಹೇಗೆ? ಅಥವಾ ಮಲ್ಲಿಗೆ ತರುವ ನೆಪದಲ್ಲಿಯೇ ಹತ್ತೇ ನಿಮಿಷದ ಮಟ್ಟಿಗೆ ಬಾರ್‌ಗೂ ಹೋಗಿ ಬರುವ ಮಹೋದ್ದೇಶದಿಂದ ಅವಳನ್ನು ಒಂದು ಕಡೆ ನಿಲ್ಲಿಸಿ ಹೋಗಿ ಬಿಟ್ಟನಾ?
ಮಲ್ಲಿಗೆ ತರಲು ಹೊರಟು ನಿಂತ ಗಂಡ, ಮೊಬೈಲ್ ಫೋನ್‌ಗಳ ಕಾಲದವನು ಎಂದುಕೊಂಡಾಗ ಮಾತ್ರ ಹೆಂಡತಿಯನ್ನು -'ಇಲ್ಲೇ ಇರು, ಅಲ್ಲಿ ಹೋಗಿ...' ಎಂದು ಹೇಳುವುದರಲ್ಲಿ ಖಂಡಿತ ತಪ್ಪಿಲ್ಲ ಅನ್ನಿಸುತ್ತದೆ. ಕಾರಣ, ಮಲ್ಲಿಗೆ ಮಾರುವವರ ಅಂಗಡಿ ದೂರವಿದೆ. ಈ ಬಿರುಬಿಸಿಲಿನಲ್ಲಿ  ಅಲ್ಲಿಯವರೆಗೂ ಹೆಂಡತಿಯನ್ನು ಕರೆದೊಯ್ದರೆ ಐಸ್‌ಕ್ರೀಂ ಅಥವಾ ಜ್ಯೂಸ್ ಕೊಡಿಸಬೇಕಾಗಿ ಬರಬಹುದು. ಅವಳು ಹೇಳುವ ಜ್ಯೂಸ್ ಇವನಿಗೆ, ಇವನು ಹೇಳುವುದು ಅವಳಿಗೆ ಇಷ್ಟವಾಗದೆ ಅದೇ ಕಾರಣಕ್ಕೆ ಮನಸ್ತಾಪ ಉಂಟಾಗಬಹುದು. ಅಂಥ ಸಂದರ್ಭ ಬರುವುದೇ ಬೇಡ ಎಂದು ನಿರ್ಧರಿಸಿಕೊಂಡೇ ಹೋಗುತ್ತಾನೆ. ಅಲ್ಲಿಗೆ ಹೋದವನೇ ಮಾರಾಟಕ್ಕೆ ಇಟ್ಟಿರುವ ಎಲ್ಲ ಫೋಟೋಗಳನ್ನೂ ಮೊಬೈಲ್‌ನಲ್ಲೇ ತೆಗೆದು ಹೆಂಡತಿಗೆ ಫಾರ್ವರ್ಡ್ ಮಾಡುತ್ತಾನೆ. ಹಿಂದೆಯೇ ಫೋನ್ ಮಾಡಿ 'ಹೂವುಗಳ ಫೋಟೋ ಕಳಿಸಿದ್ದೇನೆ. ಚೆಕ್ ಮಾಡು. ನಿನಗೆ ಯಾವ ಹೂವು ಬೇಕೋ, ಬೇಗ ತಿಳಿಸು, ತಂದುಕೊಡ್ತೇನೆ' ಅನ್ನುತ್ತಾನೆ! ಹೌದಲ್ಲವಾ, 'ಇಲ್ಲೇ ಇರು, ಅಲ್ಲಿ ಹೋಗಿ...' ಎಂದು ಗಂಡ ಹೇಳುವ ಮಾತಿನ ಹಿಂದೆ ಹೀಗೂ ಒಂದು ಉದ್ದೇಶವಿದೆ ಎಂದು ಅಂದಾಜು ಮಾಡಿಕೊಳ್ಳಬಹುದು.
ಈಗ ಈ ಎಲ್ಲ ಅಂದಾಜುಗಳಿಂದಾಚೆಗೂ ಒಂದೆರಡು ರೀತಿ ಯೋಚಿಸೋಣ ಬನ್ನಿ. ಏನೆಂದರೆ - ಇಲ್ಲಿ ಮಲ್ಲಿಗೆ ಎಂದರೆ ಹೂವಲ್ಲ. ಅದು ಆಸೆ! ಅವಳ ಆಸೆ! ಅದನ್ನು ಈಡೇರಿಸಬೇಕಾದದ್ದು ಅವನ ಕರ್ತವ್ಯ! ನೀನು ಹೇಳಿದಂತೆ ನಾನು ಕೇಳಲ್ಲ  ಹೋಗ್ ಎಂದೇನಾದರೂ ಇವನೂ ಆವಾಜ್ ಬಿಟ್ಟರೆ ಏನಾಗುತ್ತೆ ಹೇಳಿ? ಸಂಸಾರದ ಸಾಮರಸ್ಯ ಹಾಳಾಗುತ್ತದೆ. ಗೆಳೆತನದ ಬಂಧ ಕಳಚಿಕೊಳ್ಳುತ್ತದೆ. ಇಬ್ಬರ ಜಗಳ ಹತ್ತು ಕಿವಿ ತಲುಪಿ ಮನೆಮನೆಯ ಕಥೆ ಆಗುತ್ತದೆ! ಇದೆಲ್ಲಾ ಅವನಿಗೂ ಚೆನ್ನಾಗಿ ಗೊತ್ತಿದೆ. ಹಾಗೆಂದೇ ಅವನು ಅವಳ ಆಸೆ ಈಡೇರಿಸಲೆಂದು ಪಣ ತೊಟ್ಟವನಂತೆ ಒಬ್ಬನೇ ಹೊರಡುತ್ತಾನೆ. ಹಾಗೆ ಹೊರಟವನು - 'ಹೋದ ಮೇಲೆ ಸುತ್ತಬೇಕು ಏಳು ಕೋಟೆ ದ್ವಾರವು/ಹಾದಿಯಲ್ಲಿ ತೀರದಂಥ ದುಃಖವಿಹುದಪಾರವು' ಅನ್ನುತ್ತಾನೆ.
ಅಂದರೆ - ಒಂದು ಚಿಕ್ಕ ಗೆಲುವು ದಕ್ಕಿಸಿಕೊಳ್ಳಲಿಕ್ಕೂ ಬದುಕಲ್ಲಿ ವಿಪರೀತ ಸೈಕಲ್ ಹೊಡೆಯಬೇಕು ಎಂಬುದನ್ನು ಪರೋಕ್ಷವಾಗಿ ಅವನು ಅವನಿಗೆ ಹೇಳಿಯೇ ಹೊರಟಿದ್ದಾನೆ. ಈ ಕೆಲಸದಲ್ಲಿ ಎಷ್ಟೇ ಸಂಕಟ ಎದುರಾದರೂ ನಾನು ಗೆದ್ದು ಬರುತ್ತೇನೆ ಎಂಬ ಭರವಸೆಯ ಮಾತುಗಳನ್ನು ಆಡಿದ್ದಾನೆ. ಆದರೆ ಮಲ್ಲಿಗೆಯನು ತರುವ ತನಕ ಅವಳು ಏನು ಮಾಡಬೇಕು? ಎಂಬುದನ್ನು ಅವನು ಹೇಳುವುದೇ ಇಲ್ಲ! ಅಲ್ಲದೆ, ಮಲ್ಲಿಗೆಯ ಜತೆಗೆ ನಿನಗೆ ಬೇರೇನಾದರೂ ಬೇಕಾ, ನೀನು ಒಬ್ಬಳೇ ಇರ್ತೀಯಾ? ಹೆದರಿಕೆ ಇಲ್ಲ ತಾನೆ? ಎಂದು ಕೇಳುವುದೂ ಇಲ್ಲ!
ಮೊದಲ ಓದಿಗೆ ಕವಿತೆ ಅರ್ಥವಾಗಿದ್ದು ಇಷ್ಟೆ. ಕವಿತೆಯ ಒಟ್ಟು ಅರ್ಥ ಇದೇ ಆಗಿರಬಹುದು. ಅಲ್ಲದೆಯೂ ಇರಬಹುದು. ಆದರೆ ಕೆಲವೇ ಸಾಲುಗಳಲ್ಲಿ ಸಾವಿರ ಅರ್ಥಗಳನ್ನು ಹೊಳೆಯಿಸುವ ಶಕ್ತಿ ಕವಿತೆಗಿದೆ ಎಂಬುದಂತೂ ನಿತ್ಯ ಸತ್ಯ.
ಸದಾ ಬೆಳಗುತ್ತಲೇ ಇರುವ ಕವಿತೆ ಎಂಬ ಹಣತೆಗೆ ನಮಸ್ಕಾರ.
-ಎ.ಆರ್. ಮಣಿಕಾಂತ್
armanikanth@gmail.com
Wednesday, December 04, 2013 12:13 PM IST















No comments:

Post a Comment