Tuesday, 3 December 2013

ಇದು, ಗಂಡೊಂದು ಹೆಣ್ಣಾಗಿ ಬದಲಾದ 'ಗಜಲ್‌'


ಇದು, ಗಂಡೊಂದು ಹೆಣ್ಣಾಗಿ ಬದಲಾದ 'ಗಜಲ್‌'

ಭಾವತೀರಯಾನ- ಎ.ಆರ್.ಮಣಿಕಾಂತ್


ನೋಡಲು ಗಂಡಿನಂತಿದ್ದರೂ ಹೆಣ್ಣಿನಂತೆ ವರ್ತಿಸುವವರಿಗೆ 'ಹೆಣ್ಣಿಗ' ಅನ್ನುತ್ತಾರೆ. ಹೆಣ್ಣಿಗರ ವಕ್ರನೋಟ, ವಿಚಿತ್ರ ನಗು ಹಾಗೂ ವಿಲಕ್ಷಣ ವರ್ತನೆಗಳು ಕೆಲವೊಮ್ಮೆ ಭಯ ಹುಟ್ಟಿಸುವುದಂಟು. ಇಂಥ ಸಂದರ್ಭದಲ್ಲಿ ಲಿಂಗ ಬದಲಾವಣೆಯ ಮೂಲಕ ಹೆಣ್ಣಾಗಿ, ಡಬ್ಬಿಂಗ್ ಆರ್ಟಿಸ್ಟ್, ಆ್ಯಂಕರ್, ಡೈರೆಕ್ಟರ್, ಡೈಲಾಗ್ ರೈಟರ್ ಎಂದೆಲ್ಲಾ ಹೆಸರಾಗಿರುವ ಗಜಲ್‌ಳ ಬದುಕಿನ ಕಥೆ ಇಲ್ಲಿದೆ. ಓದಿಕೊಳ್ಳಿ:
***
'ಪಂಜಾಬ್‌ನ ರಾಜಧಾನಿ ಚಂಡೀಗಡಕ್ಕೆ ಹತ್ತಿರವಿರುವ ಪಾಟಿಯಾಲ ನನ್ನೂರು. ಅಣ್ಣ, ತಂಗಿ, ಅಕ್ಕಂದಿರಿಂದ ಕೂಡಿದ ತುಂಬು ಕುಟುಂಬ ನನ್ನದು. ಗುಣರಾಜ್ ಎಂಬುದು ನನಗಿದ್ದ ಹೆಸರು. ಗಂಡು ಮಕ್ಕಳ ಪೈಕಿ ನಾನೇ ಕೊನೆಯವನು. ಯಾಕೋ ಗೊತ್ತಿಲ್ಲ; ಚಿಕ್ಕಂದಿನಿಂದಲೂ ನನಗೆ ಹುಡುಗಿಯರಂತೆಯೇ ಮಾತಾಡುವುದು ಅಭ್ಯಾಸವಾಗಿತ್ತು. ಮನೆಯಲ್ಲಿ ಯಾರೂ ಇಲ್ಲದಿದ್ದಾಗ, ಅಮ್ಮನ ಸೀರೆ ಸುತ್ತಿಕೊಂಡು ಹೆಂಗಸರಂತೆ ವಯ್ಯಾರದಿಂದ ಅಡ್ಡಾಡುವುದು ಮೆಚ್ಚಿನ ಹವ್ಯಾಸವಾಗಿತ್ತು. ನನ್ನ ಈ  ವಿಲಕ್ಷಣ ವರ್ತನೆಯನ್ನು ಅದೊಮ್ಮೆ ಆಕಸ್ಮಿಕವಾಗಿ ಗಮನಿಸಿದ ಚಿಕ್ಕಮ್ಮ -'ಏನಿದು ಅಸಹ್ಯ? ಇದನ್ನೆಲ್ಲ ಈಗಿಂದೀಗ್ಲೇ ನಿಲ್ಲಿಸ್ಬೇಕು' ಎಂದು ಗದರಿಸಿದರು. ಅವರ ಮಾತು ನನಗೂ ಇಷ್ಟವಾಗಲಿಲ್ಲ. ತಕ್ಷಣವೇ -'ನಾನು ಮುಂದೆ ಹುಡುಗಿ ಥರಾನೇ ಬದುಕ್ತೇನೆ' ಅಂದುಬಿಟ್ಟೆ. ಈ ಮಾತು ಕೇಳಿ ಚಿಕ್ಕಮ್ಮನ ಸಿಟ್ಟು ನೆತ್ತಿಗೇರಿತು. ಆಕೆ ನನ್ನನ್ನು ಹತ್ತಿರ ಕರೆದು, ಕೆನ್ನೆಗೆ ಛಟೀರ್ ಎಂದು ಹೊಡೆದರು. ನಂತರ, ಕುಟುಂಬದ ಎಲ್ಲರ ಮುಂದೆಯೂ ನನ್ನ ವಿಲಕ್ಷಣ ವರ್ತನೆಯ ಬಗ್ಗೆ ವಿವರಿಸಿ ಛೀಮಾರಿ ಹಾಕಿದರು.
'ಇದಾಗಿ ಕೆಲವೇ ದಿನಗಳಲ್ಲಿ ಶಾಲಾ ವಾರ್ಷಿಕೋತ್ಸವ ನಡೆಯಿತು. ಅವತ್ತು ಪ್ರದರ್ಶಿಸಿದ ನಾಟಕದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ನನ್ನ ಪಾಲಾಯಿತು. ಪದಕದೊಂದಿಗೆ ಒಂದೇ ಓಟದಲ್ಲಿ ಮನೆ ತಲುಪಿ ಅಪ್ಪನ ಮುಂದೆ ನಿಂತು ಹೇಳಿದೆ; 'ಅಪ್ಪಾ, ನಂಗೆ ಅತ್ಯುತ್ತಮ ನಟಿ ಪ್ರಶಸ್ತಿ ಬಂತು. ಕಂಗ್ರಾಟ್ಸ್ ಹೇಳಿ ಪಪ್ಪಾ...' ಅವಸರದಲ್ಲಿ ನಾನು ಬಾಯ್ತಪ್ಪಿ ಮಾತಾಡಿರಬಹುದೆಂದು ಭಾವಿಸಿದ ಅಪ್ಪ ತಿದ್ದಿದರು. 'ನೀನು ಹುಡುಗ ಕಣೋ. ನಿಂಗೆ ಅತ್ಯುತ್ತಮ ನಟ' ಪ್ರಶಸ್ತಿ ಕೊಡ್ತಾರೆ. ನಟಿ ಅಂತ ಕೊಡಲ್ಲ...' ತಕ್ಷಣವೇ ನಾನು ತುಂಬ ಸ್ಪಷ್ಟವಾಗಿ ಹೇಳಿದೆ: ಪಪ್ಪಾ, ನಾನು ಹೆಣ್ಣಿನ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಗಂಡಿನ ಪಾತ್ರಕ್ಕಲ್ಲ...' ಈ ಮಾತು ಕೇಳುತ್ತಿದ್ದಂತೆಯೇ ಅಪ್ಪನ ಮುಖ ಕಳೆಗುಂದಿತು. ಅವರು ಮಾತೇ ಆಡಲಿಲ್ಲ. ಇದೆಲ್ಲಾ ನಡೆದಾಗ ನನಗೆ 9 ವರ್ಷ ತುಂಬಿತ್ತು.
ಮುಂದೆ ವರ್ಷಗಳು ಕಳೆದಂತೆಲ್ಲ ಹೆಚ್ಚಾಗಿ ಹುಡುಗಿಯರೊಂದಿಗೇ ಫ್ರೆಂಡ್ಲಿಯಾಗಿ ಇರತೊಡಗಿದೆ. ಒಂದರ್ಥದಲ್ಲಿ, ಹುಡುಗರಿಂದ ದೂರವೇ ಉಳಿದಿದ್ದೆ. ಇದನ್ನೆಲ್ಲ ಗಮನಿಸಿದ ಪೋಷಕರು ಕಂಗಾಲಾದರು. ನೀನು ಹುಡುಗ. ಹುಡುಗರ ಥರಾನೇ ಇರಬೇಕು ಎಂದು ಬುದ್ಧಿ ಹೇಳಿದರು. ಬಂಧುಗಳಿಂದಲೂ ಹೇಳಿಸಿದರು. ಉಹುಂ, ನಾನು ಬದಲಾಗಲಿಲ್ಲ. ತಕ್ಷಣವೇ ಐದಾರು ಕಡೆ ಕೌನ್ಸಿಲಿಂಗ್‌ಗೆ ಕರೆದೊಯ್ದರು. ಇದೆಲ್ಲಾ ಕಿರಿಕಿರಿ ಅನ್ನಿಸತೊಡಗಿತು. ಅದೊಂದು ದಿನ-'ನನ್ನಿಷ್ಟದಂತೆ ಬದುಕಲು ಅವಕಾಶ ಇಲ್ಲದ್ದರಿಂದ ಮನೆ ಬಿಟ್ಟು ಹೋಗುತ್ತಿದ್ದೇನೆ' ಎಂದು ಚೀಟಿ ಬರೆದಿಟ್ಟು ಓಡಿಹೋದೆ. ಐದು ದಿನಗಳ ಹುಡುಕಾಟದ ನಂತರ ನನ್ನನ್ನು ಪತ್ತೆ ಹಚ್ಚಿದ ಪೋಷಕರು, ಮನೆಗೆ ಕರೆ ತಂದಾಗ, ಅಪ್ಪನ ಮುಂದೆ ನಿಂತು ಸಂಕೋಚದಿಂದ ಹೇಳಿದೆ:'ಹುಡುಗಿ ಥರಾ ಇರಬೇಕು, ಹುಡುಗೀನೇ ಆಗಿಬಿಡಬೇಕು ಅನ್ನೋದು ನನ್ನಾಸೆ. ನಿಮಗೆ ಹೊರೆಯಾಗದಂತೆ, ಮನೆಯ ಮರ್ಯಾದೆಗೆ ಕುಂದು ತರದಂತೆ ಬದುಕ್ತೀನಿ. ಸಪೋರ್ಟ್ ಮಾಡಪ್ಪಾ...' ಅಪ್ಪ ಆಶೀರ್ವದಿಸಲಿಲ್ಲ. ಬದಲಿಗೆ, ಎಲ್ಲವೂ ದೈವೇಚ್ಛೆ ಎಂದು ಸುಮ್ಮನಾದರು.
ಹುಡುಗಿಯಂತೆ ವರ್ತಿಸುತ್ತಿದ್ದೆ ಎಂಬುದನ್ನು ಬಿಟ್ಟರೆ, ನನ್ನನ್ನು ದೂರಲು ಕಾರಣಗಳೇ ಇರಲಿಲ್ಲ. ವಿದ್ಯಾರ್ಥಿ ಜೀವನದುದ್ದಕ್ಕೂ ಮೊದಲ ರ್ಯಾಂಕನ್ನು ನಾನು ಯಾರಿಗೂ ಬಿಟ್ಟು ಕೊಡಲಿಲ್ಲ. ಪಿಯುಸಿಯಲ್ಲಿ ಜಿಲ್ಲೆಗೇ ಮೊದಲಿಗನಾಗಿ ಪಾಸಾದೆ. ಜೈಪುರದಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್‌ಗೆ ಸೇರಿಕೊಂಡೆ. ಮೊದಲ ವರ್ಷ ಬಹಳ ಕಷ್ಟವಾಯಿತು. ನಾನು ಹುಡುಗಿಯಂತೆ ವರ್ತಿಸುವುದನ್ನು ವಿದ್ಯಾರ್ಥಿಗಳು ಗಮನಿಸಿದರು. ಅವರ ಕಂಗಳಲ್ಲಿ ಬೆರಗು, ಕುತೂಹಲ ಮತ್ತು ಆಸೆ! ಪರಿಣಾಮ, ಪದೇ ಪದೆ ರ್ಯಾಗಿಂಗ್ ಮಾಡಿದರು. ತಿರುಗಿ ಬಿದ್ದರೆ ಕ್ಯಾಂಪಸ್‌ನ ತುಂಬಾ ಸುದ್ದಿಯಾಗುತ್ತೆ ಎಂಬುದು ಗೊತ್ತಾದಾಗ ಮೌನಿಯಾದೆ. ಅವಮಾನಗಳನ್ನು ಮರೆತು ಶ್ರದ್ಧೆಯಿಂದ ಓದಿ ತರಗತಿಗೇ ಮೊದಲಿಗನಾದೆ.
ನನ್ನ ಮಾರ್ಕ್ಸ್ ಕಾರ್ಡ್ ನೋಡುತ್ತಿದ್ದಂತೆಯೇ ಗೇಲಿ ಮಾಡುವವರು ತೆಪ್ಪಗಾದರು. ತಮ್ಮ ವರ್ತನೆಗಾಗಿ ಕ್ಷಮೆ ಕೇಳಿದರು. ನಿನ್ನ ಬೆಂಬಲಕ್ಕೆ ನಾವಿರ್ತೇವೆ. ನಿಂಗೆ ಹೇಗೆ ಇಷ್ಟವೋ ಹಾಗೆ ಬದುಕು' ಎಂದರು. ಆನಂತರದಲ್ಲಿ ನಾನು ಹಕ್ಕಿಯಂತೆ ಸ್ವಚ್ಛಂದವಾಗಿ ವಿಹರಿಸಿದೆ. ಹಾಡು ಬರೆದೆ. ನಾಟಕ ಬರೆದು, ನಿರ್ದೇಶಿಸಿದೆ. ಭಾಷಣ ಮಾಡಿದೆ. ಪರಿಣಾಮ, ಪದಕಗಳ ರಾಶಿಯೇ ನನ್ನದಾಯಿತು. ಎಂಜಿನಿಯರಿಂಗ್ ಮುಗಿದ ವರ್ಷವೇ ಮೈಸೂರಿನಲ್ಲಿದ್ದ ಎಂಎನ್‌ಸಿ ಕಂಪನಿಯಲ್ಲಿ ಭಾರಿ ಸಂಬಳದ ಕೆಲಸ ಸಿಕ್ಕಿತು.
'ಹೊರೆ' ಅನ್ನಿಸದಂಥ ಕೆಲಸ, ಕೈ ತುಂಬ ಸಂಬಳ ಹಾಗೂ ವಾಸಕ್ಕೊಂದು ಬಂಗಲೆ-ಮೈಸೂರಿನಲ್ಲಿ ಇದಿಷ್ಟೂ ಸೌಕರ್ಯಗಳಿದ್ದವು. ವರ್ಷದ ಕೊನೆಯಲ್ಲಿ 'ವರ್ಷದ ಅತ್ಯುತ್ತಮ ನೌಕರ' ಎಂಬ ಪ್ರಶಸ್ತಿ ಮತ್ತು ಪ್ರಮೋಷನ್ ಒಟ್ಟಿಗೇ ದೊರೆಯಿತು. ಆದರೂ ಮನಸ್ಸಿಗೆ ನೆಮ್ಮದಿಯಿರಲಿಲ್ಲ. 'ಗುಣರಾಜ್, ನಿನಗೇ ನೀನು  ಮೋಸ ಮಾಡಿಕೊಂಡು ಬದುಕ್ತಾ ಇದೀಯ' ಎಂದು ಒಳಮನಸ್ಸು ಪದೇಪದೆ ಪಿಸುಗುಡಲಾರಂಭಿಸಿತು. ಹುಡುಗನಾಗಿಯೇ ಉಳಿದರೆ ನೆಮ್ಮದಿಯಿಂದಿರಲು ಸಾಧ್ಯವೇ ಇಲ್ಲ ಅನ್ನಿಸಿದಾಗ, ಅದೊಂದು ದಿನ ಗಟ್ಟಿ ಮನಸ್ಸು ಮಾಡಿ ನೌಕರಿಗೆ ರಾಜೀನಾಮೆ ಕೊಟ್ಟೆ. ನಂತರ, ಪುಟ್ಟ ಲಗೇಜು ಮತ್ತು ನೂರೆಂಟು ಕನಸುಗಳನ್ನು ಜೊತೆಗಿಟ್ಟುಕೊಂಡು ನೇರವಾಗಿ ಮುಂಬಯಿಗೆ ಬಂದೆ. ಇದಿಷ್ಟೂ ನಡೆದದ್ದು 2006ರ ಜನವರಿಯಲ್ಲಿ.
ಮುಂಬಯಿಯಲ್ಲಿ, ಫಿಲ್ಮ್ ಮೇಕಿಂಗ್ ಡಿಪ್ಲೋಮಾ ಮಾಡುವುದು ಹಾಗೂ ಹುಡುಗಿಯಾಗಿ ಬದಲಾಗಲು ಇರುವ ಮಾರ್ಗದ ಬಗ್ಗೆ ತಿಳಿಯುವುದು ನನ್ನ ಉದ್ದೇಶವಾಗಿತ್ತು. ಕೋರ್ಸ್‌ಗೆ ಸೇರಿಕೊಂಡ ದಿನವೇ ಸಹಪಾಠಿಗಳೊಂದಿಗೆ ನನ್ನ ಸಮಸ್ಯೆಯ ಬಗ್ಗೆ ಹೇಳಿಕೊಂಡೆ. ಪುಣ್ಯಕ್ಕೆ ಅವರು ಗೇಲಿ ಮಾಡಲಿಲ್ಲ. ನೋ ಪ್ರಾಬ್ಲಂ, ಆರಾಂ ಆಗಿರು ಎಂದರು. ಕೋರ್ಸ್ ಮುಗಿಯುತ್ತಿದ್ದಂತೆಯೇ ಪ್ರಾಜೆಕ್ಟ್‌ನ ರೂಪದಲ್ಲಿ ಶಾರ್ಟ್ ಫಿಲ್ಮ್ ನಿರ್ಮಿಸಬೇಕಿತ್ತು. ನಮ್ಮ ಪುಟ್ಟ ಸಿನಿಮಾಕ್ಕೆ ಯಾವ ಕಥೆ ಇದ್ದರೆ ಚೆಂದ ಎಂದು ಯೋಚಿಸುತ್ತಿದ್ದಾಗ, 'ಗಂಡಿನ ದೇಹ ಪಡೆದರೂ ಹೆಣ್ಣಿನಂತೆಯೇ ವರ್ತಿಸುವವರ ಬಗ್ಗೆಯೇ ಸಿನಿಮಾ ಮಾಡಬಾರದೇಕೆ ಅನ್ನಿಸಿತು. ತಕ್ಷಣವೇ To Be or Not to Be (ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ) ಎಂಬ ಹೆಸರಿಟ್ಟು ಶಾರ್ಟ್‌ಫಿಲಂ ನಿರ್ಮಾಣಕ್ಕೆ ಮುಂದಾದೆ. ಈ ಹೊತ್ತಿಗೆ ಗಂಡಿನ ವೇಷದಲ್ಲಿರುವ ಹಲವು 'ಹೆಣ್ಣಿಗರ' ಪರಿಚಯವಾಗಿತ್ತು. ಅವರನ್ನೂ ಭೇಟಿಯಾದೆ. ನನ್ನ ಸಿನಿಮಾದ ಕಥೆ ಹೇಳಿದೆ. ನಂತರ-'ಬನ್ನಿ, ನೀವೇ ಮುಖ್ಯ ಪಾತ್ರ ಮಾಡಿ' ಎಂದು ಆಹ್ವಾನಿಸಿದೆ.
ನನ್ನ ಮಾತು ಕೇಳಿದ ಜನ ಹೌಹಾರಿದರು. ಹೆಣ್ಣಿಗನಾಗಿ ತೆರೆಯ ಮೇಲೆ ಕಾಣಿಸಿಕೊಂಡರೆ, ನಾನು ಹೆಣ್ಣಿಗ ಎಂದು ಒಪ್ಪಿಕೊಂಡರೆ ಮರ್ಯಾದೆಯಿಂದ ಬದುಕಲು ಸಾಧ್ಯವಾ ಎಂದು ಪ್ರಶ್ನೆ ಹಾಕಿದರು. ಇಪ್ಪತ್ತಕ್ಕೂ ಹೆಚ್ಚು ಜನ ಹೀಗೇ ಮಾಡಿದಾಗ, ಹೀಗೆ ಗೋಸುಂಬೆಗಳಂತೆ ಬದುಕುವ ಬದಲು ಮನಸ್ಸಿನ ಭಾವನೆಯನ್ನು ತೆರೆದಿಡುವುದು ಒಳಿತಲ್ಲವೆ ಅನ್ನಿಸಿತು. ಹಿಂದೆಯೇ, ಹೆಣ್ಣಿಗನಾಗಿ ಬದುಕುತ್ತಿರುವ ನಾನೇ ಮುಖ್ಯ ಪಾತ್ರದಲ್ಲಿ ನಟಿಸಬಾರದೇಕೆ ಅನ್ನಿಸಿತು. ಮರುದಿನದಿಂದಲೇ ಕನ್ನಡಿಯ ಎದುರು ನಿಂತು ರಿಹರ್ಸಲ್ ಆರಂಭಿಸಿದೆ. ಸಿನಿಮಾದ ಹೆಸರನ್ನು To Be- Me (ನನ್ನ ಉಭಯಸಂಕಟ) ಎಂದು ಬದಲಿಸಿದೆ. ಇದೆಲ್ಲಾ ಆದಾಗ ನನಗೆ 21 ವರ್ಷ. ಉಹುಂ, ನಾನು ನಟಿಸಲಿಲ್ಲ. ನನ್ನ ಮನಸ್ಸನ್ನು ಕೆಮೆರಾದ ಮುಂದೆ ಸಂಪೂರ್ಣವಾಗಿ ತೆರೆದಿಟ್ಟೆ. ಪರಿಣಾಮ, ಅಷ್ಟೂ ವರ್ಷ ನಾನು ಅನುಭವಿಸಿದ್ದ ಸಂಕಟ, ನನ್ನ ಮನಸ್ಸಿನ ಒಳಗಿದ್ದ ಮಧುರ ಪಿಸುಮಾತು, ಗಂಡಿನ ದೇಹ ಹೊಂದಿದ ಹೆಣ್ಣಿಗರ ಮನದ ತಳಮಳವೆಲ್ಲ ಪರದೆಯ ಮೇಲೆ ದಾಖಲಾಯಿತು. 2007ರಲ್ಲಿ, ನ್ಯೂಯಾರ್ಕ್‌ನಲ್ಲಿ ನಡೆದ ಏಷ್ಯನ್ ಚಿತ್ರೋತ್ಸವದಲ್ಲಿ ಶ್ರೇಷ್ಠ ಕಿರುಚಿತ್ರ ಎಂಬ ಹೆಗ್ಗಳಿಕೆಗೂ To Be-Me ಪಾತ್ರವಾಯಿತು.
ದೇಶ-ವಿದೇಶದ ಗಣ್ಯರೆಲ್ಲ ನನ್ನ ಸಿನಿಮಾವನ್ನು ಕೊಂಡಾಡಿದರಲ್ಲ; ಆಗ ಅಪ್ಪ ನೆನಪಾದರು. ಮುಂಬಯಿಗೆ ಬಂದವನೇ ಅವರಿಗೂ ಸಿನಿಮಾ ತೋರಿಸಿದೆ. ಸಿನಿಮಾ ಮುಗಿಯುತ್ತಿದ್ದಂತೆಯೇ ಇನ್ನಿಲ್ಲದ ವಾತ್ಸಲ್ಯದಿಂದ ತಲೆ ಸವರಿದ ಅಪ್ಪ ಹೇಳಿದರು: ನಿನ್ನ ಸಂಕಟಗಳು ಇವತ್ತಿಗೇ ಕೊನೆಯಾಗಲಿ. ಹುಡುಗಿಯಾಗಲು ದಿಟ್ಟ ಹೆಜ್ಜೆಯಿಡು. ನಾನು ಸಪೋರ್ಟ್ ಮಾಡ್ತೇನೆ...'
21 ವರ್ಷದ ಹುಡುಗ ಏಕಾಏಕಿ ಹುಡುಗಿಯಾಗಿ ಬದಲಾಗುವುದೆಂದರೆ ತಮಾಷೆಯಲ್ಲ. ಮೊದಲಿಗೆ ಮುಖ ಹಾಗೂ ಕೈ ಕಾಲುಗಳಲ್ಲಿ ರೋಮ ಬೆಳೆಯುವುದು ನಿಲ್ಲಬೇಕು. ಇದು ಸಾಧ್ಯವಾಗಬೇಕಾದರೆ ಎಲೆಕ್ಟ್ರೋಲಿಸಿಸ್ ಚಿಕಿತ್ಸೆ ಪಡೆಯಬೇಕು. ಈ ಚಿಕಿತ್ಸೆಯಲ್ಲಿ ವಿದ್ಯುತ್‌ನ ಸಹಾಯದಿಂದ ರೋಮಗಳ ಬೇರುಗಳನ್ನೇ ತೆಗೆದು ಹಾಕುತ್ತಾರೆ. ಇದಾದ ಮೇಲೆ ಚರ್ಮ ಮೃದುವಾಗಬೇಕು. ಹೀಗೆ ಆಗಬೇಕಾದರೆ, ಬಗೆಬಗೆಯ ಕ್ರೀಂ ಹಾಕಬೇಕು. ಮಸಾಜ್ ಮಾಡಬೇಕು. ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಳ್ಳಬೇಕು. ತಜ್ಞ ವೈದ್ಯರ ಮಾರ್ಗದರ್ಶನದಲ್ಲಿಯೇ ಇದನ್ನೆಲ್ಲ ಮಾಡಿಸಿಕೊಂಡೆ ಒಂಭತ್ತು ತಿಂಗಳ ಸುದೀರ್ಘ ಚಿಕಿತ್ಸೆಯ ನಂತರ ನನ್ನೊಳಗೆ ಹೆಣ್ಣು ದೇಹದ ಸ್ಪಷ್ಟ ಸೂಚನೆಗಳು ಕಾಣಿಸಿದವು. ತುಂಬ ಖುಷಿಯಿಂದ ರಸ್ತೆಗೆ ಬಂದು ನಿಂತರೆ ರಿಕ್ಷಾದವನು ಪ್ರಶ್ನಿಸಿದ: 'ಮೇಡಂ, ನೀವು ಯಾವ ಏರಿಯಾಕ್ಕೆ ಹೋಗಬೇಕು'?
ಯೆಸ್. ಹುಡುಗಿಯಾಗುವ ಪ್ರಯತ್ನದಲ್ಲಿ ನನಗೆ ಮೊದಲ ಗೆಲುವು ದಕ್ಕಿ ಹೋಗಿತ್ತು. ಬಾಕಿಯಿದ್ದದ್ದು ಲಿಂಗ ಬದಲಾವಣೆಯ ಕೆಲಸ. ಅದಕ್ಕಾಗಿ ಬ್ಯಾಂಕಾಕ್‌ಗೆ ಹೋಗಬೇಕಿತ್ತು. ಅಲ್ಲಿನ ಹೆಸರಾಂತ ವೈದ್ಯ ಚೆಟ್ಟೌಟ್, ಪ್ಲಾಸ್ಟಿಕ್ ಸರ್ಜರಿಯ ಮೂಲಕ ಲಿಂಗ ಬದಲಾವಣೆ ಮಾಡುವುದಾಗಿ ಭರವಸೆ ನೀಡಿದ್ದರು. ಗಂಡು ದೇಹದಲ್ಲಿ ಹೆಣ್ತನದ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿ ಕಂಡ ನಂತರವೇ ಶಸ್ತ್ರಚಿಕಿತ್ಸೆ ಸಾಧ್ಯ ಎಂದೂ ಹೇಳಿದ್ದರು.
'ಎಲ್ಲ ರೀತಿಯಿಂದಲೂ ನಾನು ಸಿದ್ಧವಾಗಿ' ಬ್ಯಾಂಕಾಕ್‌ನ ವಿಮಾನ ಹತ್ತುವ ಸಂದರ್ಭದಲ್ಲಿ ಸಂಕಟ ಎದುರಾಯಿತು. ಏನೆಂದರೆ, ನನ್ನ ಬಳಿ ಇದ್ದುದು ಗುಣರಾಜ್ ಹೆಸರಿನ ಪಾಸ್‌ಪೋರ್ಟ್. ಆದರೆ ಹಾರ್ಮೋನ್‌ಗಳ ಬಳಕೆಯಿಂದಾಗಿ ನಾನು ಹೆಣ್ಣಂತೆಯೇ ಕಾಣತೊಡಗಿದ್ದೆ. ದೆಹಲಿಯ ಏರ್‌ಪೋರ್ಟ್ ಅಧಿಕಾರಿಗಳು ತಕರಾರು ತೆಗೆದರು. ಅವರಿಗೆ ನನ್ನ ಕತೆಯನ್ನೆಲ್ಲ ವಿವರಿಸಿದೆ. ಕಡೆಗೂ ಅವರನ್ನು ಒಪ್ಪಿಸಿ ವಿಮಾನ ಹತ್ತಿದ್ದಾಯ್ತು. ಆದರೆ ಬ್ಯಾಂಕಾಕ್ ಏರ್‌ಪೋರ್ಟ್‌ನ ಅಧಿಕಾರಿಗಳು ನಮ್ಮ ಮಾತನ್ನು ನಂಬಲೇ ಇಲ್ಲ. ನನ್ನನ್ನು ಮಾರು ವೇಷದಲ್ಲಿ ಬಂದಿರುವ ಭಯೋತ್ಪಾದಕ ಎಂದೇ ಅವರು ಭಾವಿಸಿದರು. ಹತ್ತು ಬಾರಿ ತಪಾಸಣೆ ನಡೆಸಿದರು. ಕಡೆಗೆ ಡಾಕ್ಟರ್ ಚೆಟ್ಟೌಟ್ ಅವರೇ ಬಂದು ವಿವರಣೆ ನೀಡಿದಾಗ ಏರ್‌ಪೋರ್ಟ್ ಅಧಿಕಾರಿಗಳು ತೆಪ್ಪಗಾದರು.
ಮೊದಲಿಗೆ, ಶಸ್ತ್ರಚಿಕಿತ್ಸೆಯ ಮೂಲಕ ಪುರುಷ ಜನನಾಂಗವನ್ನು ತೆಗೆದು ಹಾಕ್ತೇವೆ. ಆನಂತರ ನಿನ್ನ ದೇಹದ ಮೃದುವಾದ ಚರ್ಮ ತೆಗೆದು ಪ್ಲಾಸ್ಟಿಕ್ ಸರ್ಜರಿಯ ಮೂಲಕ ಹೆಣ್ಣಿನ ಜನನಾಂಗವನ್ನು ರೂಪಿಸುತ್ತೇವೆ ಎಂದು ಡಾ. ಚೆಟ್ಟೌಟ್ ಹೇಳಿದ್ದಷ್ಟೇ ನೆನಪು. ಆನಂತರದ ಒಂದು ವಾರ ಏನಾಯಿತೆಂದೇ ನನಗೆ ಗೊತ್ತಾಗಲಿಲ್ಲ. ಮುಂದೆ ಸಂಪೂರ್ಣ ಎಚ್ಚರವಾದಾಗ ಎದುರಿಗೆ ನರ್ಸ್‌ಗಳಿದ್ದರು. ನನ್ನ ಕುಟುಂಬದವರಿದ್ದರು. ಎಲ್ಲರೂ ಒಕ್ಕೊರಲಿನಿಂದ ಉದ್ಗರಿಸಿದರು: 'ಆಪರೇಷನ್ ಸಕ್ಸಸ್. ಚಿಯರ್ಸ್...'
ಒಂದಂತೂ ಸತ್ಯ. ಪುರುಷನ ದೇಹ ಹೆಣ್ಣಾಗಿ ಬದಲಾಗುವುದು ವಿಪರೀತ ಕಷ್ಟ. ಪಳಗಿದ ವೈದ್ಯರಿಂದಷ್ಟೇ ಈ ಚಿಕಿತ್ಸೆ ಸಾಧ್ಯ. ಚಿಕಿತ್ಸಾ ವೆಚ್ಚ ಖಂಡಿತ ದುಬಾರಿ. ಅದೆಲ್ಲಕ್ಕಿಂತ ಹೆಚ್ಚಾಗಿ ಇಂಥದ್ದೊಂದು ಬದಲಾವಣೆಗೆ ಮುಂದಾಗುವವರಿಗೆ ಅಪಾರ ತಾಳ್ಮೆ ಮತ್ತು ವಿಲ್ ಪವರ್ ಬೇಕೇ ಬೇಕು. ಅದೆಲ್ಲವೂ ನನ್ನ ಪಾಲಿಗೆ ಒದಗಿ ಬಂದಿದ್ದರಿಂದಲೇ ಹುಡುಗಿಯಾಗುವ ಪ್ರಯತ್ನದಲ್ಲಿ ಎರಡು ವರ್ಷದ ಸುದೀರ್ಘ ಪ್ರಯತ್ನದ ನಂತರ ಯಶಸ್ವಿಯಾದೆ. ಕನಸು ನನಸಾದ ಮೇಲೆ ಗಜಲ್ ಎಂದು ಹೆಸರಿಟ್ಟುಕೊಂಡೆ. ನಮ್ಮ ವಂಶವನ್ನು ಸೂಚಿಸುವ ಧಲಿವಾಲ್ ಎಂಬುದನ್ನೂ ಹೆಸರಿನ ಮುಂದಿಟ್ಟುಕೊಂಡೆ.
ನಾನೀಗ ಮುಂಬಯಿಯಲ್ಲಿದ್ದೇನೆ. ಹೆಸರಾಂತ ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕಿಯಾಗಿದ್ದೇನೆ. ಕಂಠದಾನ ಕಲಾವಿದೆಯಾಗಿ, ನಿರೂಪಕಿಯಾಗಿ, ಡೈಲಾಗ್ ರೈಟರ್ ಆಗಿ ವಿಪರೀತ ಬ್ಯುಸಿಯಾಗಿದ್ದೇನೆ. ಹತ್ತರಲ್ಲಿ ಆರು ಹಿಂದಿ ಸಿನಿಮಾಗಳಲ್ಲಿ ನನ್ನ ಧ್ವನಿ ಬಳಕೆಯಾಗುತ್ತಿದೆ. ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಇತ್ತಲ್ಲ; ಅದಕ್ಕಿಂತ ಎರಡರಷ್ಟು ಸಂಪಾದನೆಯಿದೆ. ಮುಖ್ಯವಾಗಿ ಬದುಕಲ್ಲಿ ಸಂತೃಪ್ತಿಯಿದೆ. ಸ್ವಾರಸ್ಯ ಕೇಳಿ: ಹೆಣ್ಣಾಗಿ ಬದಲಾದ ಮೇಲೆ, ಹೆಸರಾಂತ ನಾಯಕ ನಟರು 'ಐ ಲವ್‌ಯೂ' ಎಂದು ಪಿಸುಗುಟ್ಟಿದ್ದಾರೆ. ಮದುವೆಗೆ ಒಪ್ಪಿಕೋ ಎಂದು ಒತ್ತಾಯಿಸಿದ್ದಾರೆ. 'ಹುಡುಗೀ, ನಮ್ಮ ಮನೆಯ ಸೊಸೆಯಾಗು ಬಾ' ಎಂದು ಶ್ರೀಮಂತ ಉದ್ಯಮಿಗಳು ಆಹ್ವಾನಿಸಿದ್ದಾರೆ. ಅವರೆಲ್ಲರಿಗೂ ನನ್ನ ಕಥೆ ಹೇಳಿಕೊಂಡಿದ್ದೇನೆ. ಬದುಕಿಡೀ ಔಷಧ ಸೇವನೆಯೊಂದಿಗೇ ಇರಬೇಕಾದವಳು ನಾನು. ಹಾಗಾಗಿ ಸದ್ಯಕ್ಕೆ ಒಂಟಿಯಾಗಿರ್ತೇನೆ ಎಂದು ವಿವರಿಸಿದ್ದೇನೆ. ನನ್ನೆಲ್ಲ ದೌರ್ಬಲ್ಯಗಳನ್ನೂ ಅರ್ಥ ಮಾಡಿಕೊಳ್ಳುವವನು ಸಿಕ್ಕಾಗ ಮದುವೆಯ ಮಾತು. ಸರಿ ತಾನೆ? ಸದ್ಯಕ್ಕಂತೂ ನಾನು ಹ್ಯಾಪಿಯಾಗಿದೀನಿ ಎನ್ನುತ್ತಾ ಮಾತು ಮುಗಿಸುತ್ತಾಳೆ ಗಜಲ್.
***
ಉಹುಂ, ಈಕೆ ಯಾರಿಗೂ ಆದರ್ಶವಲ್ಲ. ಶಸ್ತ್ರಚಿಕಿತ್ಸೆಯ ಮೂಲಕ ಗಂಡು ಹೆಣ್ಣಾಗಿದ್ದೂ ದೊಡ್ಡ ಸುದ್ದಿಯಲ್ಲ. ಆದರೆ, ಮನಸ್ಸಿಗೆ ಮೋಸ ಮಾಡಿಕೊಳ್ಳದೆ ಈಕೆ ಒಂದೊಂದೇ 'ಸವಾಲುಗಳಿಗೆ ಎದೆಯೊಡ್ಡಿದಳಲ್ಲ, ಯಾರಿಗೂ 'ಹೊರೆ' ಆಗದಂತೆ ಬದುಕುತ್ತಿದ್ದಾಳಲ್ಲ, ಅದು ಖಂಡಿತಾ ಮೆಚ್ಚಬೇಕಾದ ಸಂಗತಿ. ಇಂಟರ್‌ನೆಟ್‌ನಲ್ಲಿ ಗೂಗಲ್‌ಗೆ ಹೋಗಿ Gazal Dhaliwal ಎಂದು ಹುಡುಕಿದರೆ ಈಕೆಯ ಮುದ್ದಾದ ಫೋಟೋ, ಸಿಎನ್‌ಎನ್ - ಐಬಿಎನ್ ಚಾನೆಲ್ ನಡೆಸಿರುವ ಸಂದರ್ಶನದ ವಿಡಿಯೋ ಸಿಗುತ್ತದೆ. www.gazalhopes.blogspot.com ನಲ್ಲಿ ಹದಿಹರೆಯದವರ ಸಮಸ್ಯೆಗಳಿಗೆ ಗಜಲ್ ಉತ್ತರಿಸುವ ಪ್ರಶ್ನೋತ್ತರ ಮಾಲಿಕೆಯೂ ಇದೆ. ಅದನ್ನೆಲ್ಲ ನೋಡುತ್ತಿದ್ದರೆ, ಈ ಹುಡುಗಿಯ ಕಾಳಜಿ ಮತ್ತು ಸೌಂದರ್ಯದ ಬಗ್ಗೆ ಮೆಚ್ಚುಗೆ ಮತ್ತು ಅಸೂಯೆ ಒಟ್ಟಿಗೇ ಆಗುತ್ತದೆ.


- ಎ.ಆರ್. ಮಣಿಕಾಂತ್
armanikanth@gmail.com






















No comments:

Post a Comment