Tuesday, 3 December 2013

ಮತದಾನಕ್ಕೂ ಮೊದಲೇ ಮನಸ್ಸುಗಳು ಒಡೆದು ಹೋಗಿವೆ

ಮತದಾನಕ್ಕೂ ಮೊದಲೇ ಮನಸ್ಸುಗಳು ಒಡೆದು ಹೋಗಿವೆ

ಭಾವತೀರಯಾನ- ಎ.ಆರ್.ಮಣಿಕಾಂತ್



ಒಂದೇ ಮಾತಲ್ಲಿ ಹೇಳಿಬಿಡ್ತೇನೆ: 30 ವರ್ಷಗಳ ಹಿಂದೆ, ನಮ್ಮ ಊರು ಹೀಗಿರಲಿಲ್ಲ, ತುಂಬಾ ಚೆನ್ನಾಗಿತ್ತು. ಈಗಿನಂತೆ ಊರಿನ ತುಂಬಾ ಶ್ರೀಮಂತರಿರಲಿಲ್ಲ. ಆದರೆ ಊರು ಶ್ರೀಮಂತವಾಗಿತ್ತು. ಅವತ್ತಿನ ಕಾಲಕ್ಕೆ ನಮಗೆ ಗೊತ್ತಿದ್ದುದು ಎರಡೇ ರಾಜಕೀಯ ಪಕ್ಷಗಳು. ಒಂದು- ಇಂದಿರಾಗಾಂಧಿಯ ಕಾಂಗ್ರೆಸ್ಸು. ಇನ್ನೊಂದು ಐದಾರು ಮಂದಿ ನಾಯಕರುಗಳಿದ್ದ ಜನತಾಪಕ್ಷ. ಅವತ್ತಿನ ಕಾಲಕ್ಕೆ, ಬಿಜೆಪಿಯ ಹೆಸರು,  ಆಗೊಮ್ಮೆ ಈಗೊಮ್ಮೆ ಕೇಳಿ ಬರ್ತಾ ಇತ್ತು. ಆದರೆ ಆ ಪಕ್ಷಕ್ಕೆ ಅಷ್ಟೊಂದು ಜನಬೆಂಬಲ ಇರಲಿಲ್ಲ. ಇದರಿಂದ ಆ ಪಕ್ಷದ ಮುಖಂಡರಿಗೆ ಅಥವಾ ಆ ಪಕ್ಷದಿಂದ ಚುನಾವಣೆಗೆ ನಿಂತಿದ್ದವರಿಗೆ ಬೇಸರ, ಮುಜುಗರ, ಸಂಕೋಚ ಯಾವುದೂ ಇರಲಿಲ್ಲ. ಪಕ್ಷೇತರ ಅಭ್ಯರ್ಥಿಗಳಿಗೂ ಇದೇ ಮಾತು ಅನ್ವಯಿಸುತ್ತಿತ್ತು.30 ವರ್ಷಗಳ ಹಿಂದೆ ಕಾಂಗ್ರೆಸ್‌ನವರಿಗೆ 'ಹಸು ಮತ್ತು ಕರು' ಹಾಗೂ ಜನತಾ ಪಕ್ಷದವರಿಗೆ ನೇಗಿಲು ಹೊತ್ತ ರೈತನ ಚಿತ್ರಗಳು ಚುನಾವಣಾ ಚಿಹ್ನೆಗಳಾಗಿದ್ದವು. ಕಾರಿನ ಮೇಲೆ ಪೋಸ್ಟರ್‌ಗಳನ್ನು ಹಾಕಿಕೊಂಡು, ಗ್ರಾಮಾಫೋನ್ ಕಟ್ಟಿಕೊಂಡು-'ಮಹನೀಯರೆ ಮತ್ತು ಮಹಿಳೆಯರೆ, ಈ ಬಾರಿ ನಿಮ್ಮ ಅಮೂಲ್ಯ ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿ.' ಜನತಾ ಪಕ್ಷದ ನೇಗಿಲು ಹೊತ್ತ ರೈತನ ಗುಂಪಿಗೇ ಮತ ಚಲಾಯಿಸಿ' ಎಂದು ಸಾರುತ್ತಾ ಹೊರಟರೆಂದರೆ, ಚುನಾವಣೆ ಪ್ರಚಾರ ಬಹಳ ಜೋರಾಗಿ ನಡೀತಿದೆ ಎಂದೇ ಭಾವಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಕಾರಿನೊಳಗೆ ಮೈಕ್ ಹಿಡಿದು ಕೂತಿದ್ದವನು ಕಿಲಾಡಿಯಾಗಿದ್ದರೆ- 'ಹಸುವಿಗೆ ಹುಲ್ಲಿಲ್ಲ. ಕರುವಿಗೆ ಹಾಲಿಲ್ಲ. ಇಂದ್ರಾಗಾಂಧಿಯ ಕಾಂಗ್ರೆಸ್‌ಗೆ ವೋಟ್ ಇಲ್ಲ' ಎಂದು ತಮಾಷೆ ಮಾಡುತ್ತಿದ್ದ. ಇದಕ್ಕೆ ಉತ್ತರವಾಗಿ ಕಾಂಗ್ರೆಸ್‌ನ ಪರವಾಗಿ ಮೈಕ್ ಹಿಡಿದಿದ್ದವರು-'ಕಾಂಗ್ರೆಸ್ ಪಕ್ಷಕ್ಕೆ ವೋಟು ಕೊಡಿ, ಜನತಾಪಕ್ಷಕ್ಕೆ ಏಟು ಕೊಡಿ' ಎಂದು ಕೂಗು ಹಾಕುತ್ತಿದ್ದರು.ಅವತ್ತಿನ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿದ್ದರಲ್ಲ; ಆ ರೀತಿ ಕೂಡ ಚೆನ್ನಾಗಿರುತ್ತಿತ್ತು. ಒಬ್ಬಳು ಹೆಂಗಸು, ಒಂದು ಸಂಸಾರವನ್ನು ನಿಭಾಯಿಸುವುದರೊಳಗೆ ಸುಸ್ತಾಗಿ ಹೋಗ್ತಾಳೆ. ಹೀಗಿರುವಾಗ ಇಂದ್ರಾಗಾಂಧಿ ಇಡೀ ದೇಶವನ್ನು ಆಳ್ತಾ ಇದ್ದಾಳೆ ಅಂದ್ರೆ ಅದು ತಮಾಷೆಯ ಮಾತೆ? ಈ ಬಾರಿಯೂ ಇಂದ್ರಮ್ಮನಿಗೆ ಓಟು ಹಾಕೋಣ ಬನ್ನಿ ಎಂದು ಪಟೇಲರು ಅಥವಾ ಶ್ಯಾನುಭೋಗರು ಊರಿನ ದೇವಸ್ಥಾನದ ಮುಂದೆ ನಿಂತು ಹೇಳಿಬಿಟ್ಟರೆ, ಆ ಊರಿನ ಮುಕ್ಕಾಲು ಪಾಲು ಮತಗಳು ಕಾಂಗ್ರೆಸ್‌ನ ಬುಟ್ಟಿಗೆ ಬೀಳುತ್ತಿದ್ದವು. ಕೆಲವು ಊರುಗಳಲ್ಲಿ ಸರದಿಯ ಪ್ರಕಾರವಾಗಿ ಒಂದು ಬಾರಿ ಕಾಂಗ್ರೆಸ್‌ಗೆ, ಮತ್ತೊಂದು ಬಾರಿ ಜನತಾಪಕ್ಷಕ್ಕೆ ಮತ ಹಾಕಲಾಗುತ್ತಿತ್ತು. ಪರಿಣಾಮವಾಗಿ, ಒಮ್ಮೆ ಆ ಪಾರ್ಟಿಯ ನಾಯಕರು, ಇನ್ನೊಮ್ಮೆ ಈ ಪಾರ್ಟಿಯ ನಾಯಕರು ಗೆಲುವು ಕಾಣುತ್ತಿದ್ದರು.ಇಂಥದೊಂದು 'ಸೀನ್‌' ಏಕಾಏಕಿ ಬದಲಾದದ್ದು 20 ವರ್ಷಗಳ ಹಿಂದೆ. ಆಗ ಏನಾಯ್ತು ಅಂದರೆ, ಪಕ್ಷಗಳ ನಾಯಕರು ಬದಲಾಗಿದ್ದರು. ಚಿನ್ಹೆಗಳೂ. ಹೀಗಿರುವಾಗಲೇ ಪ್ರಮುಖ ಪಕ್ಷದ ಜನಪ್ರತಿನಿಧಿ, ಅಕ್ರಮವಾಗಿ ಹಣ ಮಾಡುತ್ತಿದ್ದಾನೆ ಎಂದು ಹಲವು ಯುವಕರಿಗೆ ಗೊತ್ತಾಯಿತು. ಅವರು ತಾವೇ ತನಿಖೆಗೆ ನಿಂತರು. ನಾಲ್ಕಾರು ಕಡೆಯಿಂದ ಗಾಳಿ ಸುದ್ದಿಯಂತೆ ಕೇಳಿ ಬಂದ ಮಾತುಗಳೆಲ್ಲ ನಿಜ ಎಂದು ಗೊತ್ತಾದಾಗ, ಎಲ್ಲವನ್ನೂ ಜನತೆಗೆ ತಿಳಿಸುವ ನಿರ್ಧಾರಕ್ಕೆ ಬಂದರು. ಹೀಗಿರುವಾಗಲೇ ಅನಾಹುತ ನಡೆದು ಹೋಯಿತು. ಹೀಗೆ, ಜನಜಾಗೃತಿಗೆ ಹೊರಟಿದ್ದ ಯುವಕರ ಗುಂಪಿನ ಮುಖಂಡ ಅದೊಂದು ಮಟಮಟ ಮಧ್ಯಾಹ್ನವೇ ಕೊಲೆಯಾಗಿ ಹೋದ. ಈ ಕೊಲೆಯ ಹಿಂದೆ ಇದ್ದವನು ಜನಪ್ರತಿನಿಧಿಯೇ ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೂ ಅವನನ್ನು ಯಾರೂ ಪ್ರಶ್ನಿಸಲು ಹೋಗಲಿಲ್ಲ. ದೂರದ ಊರಲ್ಲಿದ್ದ ಒಂದಿಬ್ಬರು ಗಾಂಧಿವಾದಿಗಳು, ಈ ಘಟನೆಯನ್ನು ಖಂಡಿಸಿ ಕೋರ್ಟಿಗೆ ಹೋದರು. ಜನಪ್ರತಿನಿಧಿಯ ಮೇಲೆ ಮೊಕದ್ದಮೆ ದಾಖಲಿಸಿದರು. ಅದರಿಂದ ನಯಾ ಪೈಸೆಯ ಉಪಯೋಗವಾಗಲಿಲ್ಲ. ಹಣವನ್ನು ನೀರಿನಂತೆ ಚೆಲ್ಲಿದ ಜನಪ್ರತಿನಿಧಿ, ಖ್ಯಾತ ಕ್ರಿಮಿನಲ್ ಲಾಯರ್ ಒಬ್ಬರನ್ನು ಇಟ್ಟುಕೊಂಡು ನಿರಾಯಾಸವಾಗಿ ಕೇಸ್ ಗೆದ್ದು ಬಿಟ್ಟ. ಕೋರ್ಟಿಂದ ಹೊರಗೆ ಬಂದವನು, ನನ್ನ ತಂಟೆಗೆ ಯಾರಾದ್ರೂ ಬಂದ್ರೆ ಉಳಿದವರಿಗೂ ಹೀಗೇ ಗತಿ ಕಾಣಿಸ್ತೇನೆ ಎಂದು ಗುಟುರು ಹಾಕಿದ.ಅದುವರೆಗೂ, ಜನಪ್ರತಿನಿಧಿ ಅಂದರೆ ಊರ ಪಟೇಲರಿಗಿಂತ ಹೆಚ್ಚು ಅಧಿಕಾರ ಹೊಂದಿರುವ ಇನ್ನೊಬ್ಬ ಆತ್ಮೀಯ ಎಂದು ಭಾವಿಸಿದ್ದ ಊರಜನ ಈಗ ಗಾಬರಿಬಿದ್ದರು. ಗಟ್ಟಿಯಾಗಿ ಮಾತಾಡಿದರೂ ಕಷ್ಟ. ಮಾತಾಡದೆ ಸುಮ್ಮನಿದ್ರೆ ಇನ್ನೂ ಕಷ್ಟ ಎಂಬುದು ಅವರ ಅಳಲಾಗಿತ್ತು. ಆಕಸ್ಮಿಕವಾಗಿ ನಡೆದು ಹೋದ ಕೊಲೆಯಿಂದಾಗಿ ತನ್ನ ಇಮೇಜಿಗೆ ಕಪ್ಪು ಮಸಿ ಅಂಟಿಕೊಂಡಿರುವುದು ಈ ವೇಳೆಗೆ ಜನಪ್ರತಿನಿಧಿಗೂ ಅರ್ಥವಾಗಿತ್ತು. ಆಗಿದ್ದು ಆಗಿಹೋಗಿದೆ. ಈಗ ಹಳೆಯ ವಿಷಯ ಕೆದಕಿದರೆ ಲಾಭಕ್ಕಿಂತ ನಷ್ಟವೇ ಜಾಸ್ತಿ. ಹಾಗಾಗಿ, ಬೇರೆ ಯಾವುದಾದರೂ ದಾರಿ ಹುಡುಕಿ ಜನರ ಕಣ್ಣಲ್ಲಿ ಹೀರೋ ಆಗಬೇಕು ಎಂದು ಆತ ಯೋಚಿಸಿದ. ಆಗಲೇ ಅವನಿಗೆ ಒಂದು ಐಡಿಯಾ ಬಂತು. ತನ್ನ ಕ್ಷೇತ್ರದ ಜನರಿಗೆ ಪೌರಾಣಿಕ  ನಾಟಕಗಳನ್ನು ಆಡುವ ಹುಚ್ಚಿರುವ ಸಂಗತಿ ಅವನಿಗೂ ತಿಳಿದಿತ್ತಷ್ಟೆ: ಅದನ್ನೇ ಮುಂದಿಟ್ಟುಕೊಂಡು ಮೊದಲು ಒಂದೆರಡು ಊರಿನ ಮುಖಂಡರನ್ನು ಕರೆಸಿಕೊಂಡ. ಅವರೊಂದಿಗೆ ಲೋಕಾಭಿರಾಮವಾಗಿ ಹರಟುತ್ತಾ-'ಈ ಬಾರಿ ದಸರಾ ರಜೆ ಬಂದಾಗ ಊರಲ್ಲಿ ನಾಟಕ ಮಾಡಿಸ್ರಪ್ಪಾ. ಖರ್ಚಿನ ಬಗ್ಗೆ ನಿಮಗೆ ಚಿಂತೆ ಬೇಡ. ಅದನ್ನು ನಾನು ವಹಿಸ್ಕೋತೇನೆ. ಮುಖ್ಯ ಅತಿಥಿಯಾಗಿ ಒಬ್ಬಳು ಸಿನಿಮಾ ನಟಿಯನ್ನು ಬೆಂಗ್ಳೂರಿಂದ ಕರೆಸೋಣ. ಆ ಖರ್ಚೂ ನನಗೇ ಇರಲಿ. ನನಗೆ ನೀವು ಮುಖ್ಯ. ನಿಮ್ಮ ಖುಷಿ ಮುಖ್ಯ. ನಾಟಕ ಆಡುವುದು ಯಾವತ್ತು ಅಂತ ಒಂದು ತಿಂಗಳು ಮೊದಲೇ ಹೇಳಿದ್ರೆ ಸಾಕು. ನಾನೂ ಬರ್ತೇನೆ. ಅರ್ಧ ಗಂಟೆ ನಿಮ್ಮ ಜೊತೇಲಿದ್ದು ಹೋಗ್ತೇನೆ' ಎಂದು ನೈಸ್‌ನೈಸಾಗಿ ಮಾತಾಡಿದ. ಉಳಿದೆಲ್ಲಾ ಮಾತುಗಳಿಗಿಂತ, ಎಲ್ಲ ಖರ್ಚನ್ನೂ ವಹಿಸಿಕೊಳ್ತೇನೆ. ನಾಟಕಕ್ಕೆ ಅತಿಥಿಯೆಂದು ಚಿತ್ರ ನಟೀನ ಕರ್ಕೋಂಡು ಬರ್ತೇನೆ ಅಂದನಲ್ಲ; ಆ ಮಾತಿಗೇ ಜನ ಮರುಳಾಗಿ ಹೋದರು.ಅವತ್ತೊಂದು ದಿನ ಎಂಎಲ್‌ಎ ಸಾಹೇಬನ ಕೃಪಾಶ್ರಯದಲ್ಲಿ ನಾಟಕ ನಡೆದೇ ಹೋಯಿತು. ಮಧ್ಯರಾತ್ರಿಯ ವೇಳೆಗೆ, ಎಂಎಲ್‌ಎಯ ಹಡಗಿನಂಥ ಕಾರಿನಲ್ಲಿ ಲಕಲಕ ಹೊಳೆಯುತ್ತಿದ್ದ ನಟಿಯೊಬ್ಬಳು ಬಂದೇ ಬಿಟ್ಟಳು. ಎರಡು ನಿಮಿಷ ಮಾತಾಡಿ, ಒಂದು ಹಾಡಿಗೆ ಝಂಕಣಕ ಝಂಕಣಕ ಎಂದು ಕುಣಿದು, ಹೋಗುವ ಮುನ್ನ ಹಳ್ಳಿಯ ಎಲ್ಲರಿಗೂ ಫ್ಲೈಯಿಂಗ್ ಕಿಸ್ ಬಿಸಾಕಿ ಹೋದಳು. ಚಿತ್ರನಟಿಯ ಈ ಬಿಂದಾಸ್ ವರ್ತನೆಯಿಂದ ಹಳ್ಳಿಗಳ ಪಡ್ಡೆಗಳು ಥ್ರಿಲ್ಲಾಗಿ ಹೋದರು. ಮರುದಿನದಿಂದಲೇ ಒಂದೊಂದು ಊರಿನ ಯುವಕರು ಎಂಎಲ್‌ಎ ಮನೆಯ ಬಾಗಿಲು ಬಡಿದು, ನಾಟಕ ಮಾಡಿಸುವ ಪ್ರಸ್ತಾಪ ಮುಂದಿಡುತ್ತಿದ್ದರು. ಅದರ ಖರ್ಚು ವಹಿಸಿಕೊಳ್ಳಿ ಹಾಗೂ ನಾಟಕದ ದಿನ ಅತಿಥಿಯಾಗಿ ಚಿತ್ರನಟಿಯನ್ನು ಕರ್ಕೊಂಡು ಬನ್ನಿ ಎಂದೂ ಡಿಮ್ಯಾಂಡ್ ಮಾಡುತ್ತಿದ್ದರೆಂದು ಬಿಡಿಸಿ ಹೇಳಬೇಕಿಲ್ಲ ತಾನೆ?ಪರಿಣಾಮ ಏನಾಯಿತೆಂದರೆ, ಕೆಲವೇ ವರ್ಷಗಳ ಹಿಂದೆ ಒಂದು ಕೊಲೆ ಮಾಡಿಸಿದ್ದ ಪುಣ್ಯಾತ್ಮನೇ ಬಡವರ ಬಂಧು, ಕಲಾಪೋಷಕ ಎಂದು ಹೆಸರಾಗಿ ಹೋದ. ಅವನ ಜನಪ್ರಿಯತೆಯ ಗ್ರಾಫ್ ದಿನೇ ದಿನೇ ಏರತೊಡಗಿತು. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಇನ್ನೊಂದು ಪಕ್ಷದ ನಾಯಕರು ಈಗ ಚುರುಕಾದರು. ತಮ್ಮ ನಡುವೆಯೇ ಇದ್ದ ಒಬ್ಬನನ್ನು ಮುಂದೆಬಿಟ್ಟರು. ಈಗ ಇರುವ ಎಂಎಲ್‌ಎ ಥರಾನೇ ಖರ್ಚು ಮಾಡಿದ್ರೆ, ಮುಂದಿನ ಬಾರಿ ನೀನೇ ಎಂಎಲ್‌ಎ. ಒಂದ್ಸಲ ಗೆದ್ದರೆ ಸಾಕು, ಕೋಟಿ ಕೋಟಿ ಬಾಚಿಕೊಳ್ಳಬಹುದು. ಟ್ರೈ ಮಾಡು ಎಂದು ಆಸೆ ಹುಟ್ಟಿಸಿದರು.ಮುಂದೆ ಏನಾಯಿತೆಂದರೆ ಎಂಎಲ್‌ಎಗೆ ಪ್ರತಿಸ್ಪರ್ಧಿಯೊಬ್ಬಹುಟ್ಟಿಕೊಂಡ. ಇವನ ಬಳಿಯೂ ವಿಪರೀತ ಹಣವಿದ್ದ ಕಾರಣ, ಕೆಲವೇ ದಿನಗಳಲ್ಲಿ ಅವನಿಗೂ ಬೆಂಬಲಿಗರು, ಅಭಿಮಾನಿಗಳು ಹುಟ್ಟಿಕೊಂಡರು. ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿದರು. ಅಲ್ಲಿನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿಸಿದರು. ಊರಿನ ಎಲ್ಲರಿಗೂ ಪ್ರಸಾದ ಹಂಚಿದರು. ವರ್ಷಕ್ಕೆ ಒಂದು ಬಾರಿ ನಾಟಕ ಮಾಡಿಸೋದು ಹಳೆಯ ಟ್ರೆಂಡು. ಅದನ್ನು ಬಿಟ್ಹಾಕಿ. ನಮ್ಮ ಲೀಡ್ರು ಖರ್ಚು ವಹಿಸ್ಕೋತಾರೆ. ಗಣೇಶನ ಉತ್ಸವಕ್ಕೆ ಒಮ್ಮೆ, ರಾಜ್ಯೋತ್ಸವಕ್ಕೆ ಇನ್ನೊಮ್ಮೆ ಆರ್ಕೆಸ್ಟ್ರಾ ಮಾಡಿಸೋಣ. ಬೆಂಗಳೂರಿಂದ ಡ್ಯಾನ್ಸರ್‌ಗಳನ್ನು ಕರೆಸೋಣ ಎಂದರು. ಅಷ್ಟಕ್ಕೇ ಸುಮ್ಮನಾಗದೆ, ಹಾಲಿ ಎಂಎಲ್‌ಎಗೆ ಬೆಂಬಲಿಗರಿದ್ದರಲ್ಲ; ಅವರ ಬಂಧುಗಳನ್ನೇ ಕರೆಸಿ ಹೇಳಿದರು: 'ನೋಡಿ ಯಜಮಾನ್ರೆ, ಹದಿನೈದು ವರ್ಷದಿಂದ ನಿಮ್ಮ ಸಂಬಂಧಿಕರೇ ರಾಜಕೀಯದಲ್ಲಿ ಮಿಂಚ್ತಾ ಇದಾರೆ. ಅವರು ಸಾಕಷ್ಟು ದುಡ್ಡೂ ಮಾಡಿಕೊಂಡಿದಾರೆ. ನಿಮ್ಮ ಕತೆ ಏನು? ಎದ್ದೇಳಿ. ಈಗಲಾದ್ರೂ ಮನಸ್ಸು ಮಾಡಿ. ನಮ್ಮ ಲೀಡ್ರು ದೇವರಂಥ ಮನುಷ್ಯ. ನಿಮಗೆ, ನಿಮ್ಮ ಊರಿಗೆ, ನಿಮ್ಮ ಜೊತೆಯಲ್ಲಿರುವ ಜನಕ್ಕೆ ಖಂಡಿತ ಒಳ್ಳೆಯದು ಮಾಡ್ತಾರೆ. ಮುಖ್ಯವಾಗಿ ನೀವು ಮನಸ್ಸು ಮಾಡಬೇಕು ಸ್ವಾಮೀ...' ಒಬ್ಬ ಲೀಡರ್ ಜೊತೆ ಆರಾಮಾಗಿ ಓಡಾಡ್ತಾ ಇದ್ದರೆ ಕಾಸು, ಮರ್ಯಾದೆ ಎರಡೂ ಸಿಗುತ್ತೆ ಅನ್ನಿಸಿದ ತಕ್ಷಣ ಪ್ರತಿಯೊಂದು ಹಳ್ಳಿಯಲ್ಲೂ ಹಾಂ ಹೂಂ ಎನ್ನುವುದರೊಳಗೆ ಬದಲಾವಣೆಗಳು ಆಗಿಹೋದವು. ಒಂದೇ ಕುಟುಂಬದ ಅಣ್ಣತಮ್ಮಂದಿರ ಪೈಕಿ ಅಣ್ಣನ ಮನೆಯವರೇ ಒಂದು ಪಕ್ಷ, ತಮ್ಮನ ಮನೆಯವರು ಇನ್ನೊಂದು ಪಕ್ಷವಾಗಿ ಹೋದರು.'ಇಷ್ಟಾದ ಮೇಲೆ, ನಾಡೆಂಬೋ ನಾಡು ವಿಪರೀತ ಬದಲಾಗಿ ಹೋಗಿದೆ. ಪ್ರತಿ ಹಳ್ಳಿಗಳಲ್ಲೂ ಗಣೇಶ ಉತ್ಸವಗಳು ನಡೆಯುತ್ತಿವೆ. ಆ ಸಂದರ್ಭಕ್ಕೆಂದೇ ಬೆಂಗಳೂರಿಂದ ಆರ್ಕೆಸ್ಟ್ರಾ ಮತ್ತು ಥೈಯ್ಯಥೈಯ್ಯ ಕುಣಿಯುವ ಹುಡುಗಿಯರೂ ಬರುತ್ತಾರೆ. ಅವತ್ತೇ ನಾಯಕನ ಬೆಂಬಲಿಗರೆಲ್ಲ ಕಂಠಪೂರ್ತಿ ಕುಡಿದು ಬಾಯಿಗೆ ಬಂದಂತೆ ಒದರಾಡುತ್ತಾರೆ. ಒಂದೊಂದು ವೋಟಿಗೂ ರೇಟು ಫಿಕ್ಸ್ ಮಾಡುತ್ತಾರೆ. ಪ್ರತಿಯೊಂದು ಊರಲ್ಲೂ ಎರಡು ಪಾರ್ಟಿಯ ಜನರಿದ್ದಾರೆ. ಈವರೆಗೂ ತನ್ನ ಮಾತು ಕೇಳುತ್ತಿದ್ದ ತಮ್ಮ, ಈಗ ಎದುರಾಳಿ ಪಕ್ಷದ ಕಾರ್ಯಕರ್ತ ಆಗಿರುವುದನ್ನು ಸಹಿಸಿಕೊಳ್ಳಲಿಕ್ಕೆ ಅಣ್ಣನಿಗೆ ಸಾಧ್ಯವಾಗುತ್ತಿಲ್ಲ. ಪಕ್ಷ ಬದಲಾಯಿಸಿದ ಒಂದೇ ಕಾರಣದಿಂದ ಆತ ತನಗೆ ಸರಿಸಮಾನವಾಗಿ ಹಣ ಮಾಡುವ, ಗೌರವ ಸ್ವೀಕರಿಸುವ, ಅದೃಷ್ಟ ಒಲಿದರೆ ಮುಂದೊಂದು ಸಂದರ್ಭದಲ್ಲಿ ನಾಯಕನೂ ಆಗಿಬಿಡುವ ಸಾಧ್ಯತೆಗಳೇ ಅಣ್ಣ-ತಮ್ಮಂದಿರ ಮಧ್ಯೆ ಬಿರುಕು ಸೃಷ್ಟಿಸಿವೆ. ಈ ಮೊದಲು ನಾಟಕಗಳಿಗೆ, ಗಣೇಶೋತ್ಸವಕ್ಕೆ, ಆರ್ಕೆಸ್ಟ್ರಾಕ್ಕೆ ಹಣ ಕೊಡುತ್ತಿದ್ದ ನಾಯಕರು, ಈಗ ಪ್ರತಿ ನಾಲ್ಕು ಊರಿಗೆ ಎರಡರ ಲೆಕ್ಕದಲ್ಲಿ ಬಾರ್‌ಗಳು ಶುರುವಾಗಲೂ ಕಾರಣರಾಗಿದ್ದಾರೆ. ಹಳ್ಳಿಯಲ್ಲಿ ಹತ್ತು ಮಂದಿಯ ಓಟು ಹಾಕಿಸುವಂಥ ತಾಕತ್ತು ಇರುವವನಿಗೆ ಪ್ರತಿ ತಿಂಗಳೂ ಒಂದಿಷ್ಟು ಹಣ ಕೊಟ್ಟು, ನಿಮ್ಮ ಹುಡುಗರನ್ನು ಚೆನ್ನಾಗಿ ನೋಡಿಕೊಳ್ಳಪ್ಪಾ ಎನ್ನುತ್ತಿದ್ದಾರೆ. ಚೆನ್ನಾಗಿ ನೋಡಿಕೊಳ್ಳುವುದು ಎಂದರೆ, ಪಾರ್ಟಿ ಮಾಡುವುದು ಎಂದಷ್ಟೇ ಅರ್ಥಮಾಡಿಕೊಂಡಿರುವ ಹಳ್ಳಿಹಳ್ಳಿಯ ಮರಿ ಪುಡಾರಿಗಳು, ತಾವೂ ಕುಡಿದು, ಜೊತೆಗೆ ಬಂದವರನ್ನೂ ದಾರಿ ತಪ್ಪಿಸುತ್ತಿದ್ದಾರೆ. ಈ ಮಧ್ಯೆ ವರ್ಷಕ್ಕೆ ಎರಡು ಬಾರಿಯಾದರೂ ಎರಡು ಪಕ್ಷಗಳ ಮಧ್ಯೆ ಫೈಟಿಂಗುಗಳು ನಡೆದು ಹೋಗುತ್ತಿವೆ. ಎದುರು ಪಕ್ಷದವರು ಗಣೇಶನ ಉತ್ಸವ ಮಾಡುತ್ತಿದ್ದಾಗಲೇ ವೈರ್ ಕತ್ತರಿಸಿ ಇಡೀ ಕಾರ್ಯಕ್ರಮವನ್ನೇ ಹಾಳು ಮಾಡುವಂಥ ಕಿಡಿಗೇಡಿ ಕೆಲಸಗಳು ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ಎರಡೂ ಪಕ್ಷಗಳ ನಾಯಕರು ತಮಗೆ ಆಗದವರ ಮೇಲೆ ಹಲ್ಲೆ ಮಾಡಿಸಿ ವಾತಾವರಣವನ್ನು ಮತ್ತಷ್ಟು ಹದಗೆಡಿಸುತ್ತಿದ್ದಾರೆ. ಪರಿಣಾಮವಾಗಿ, ಅದೆಷ್ಟೋ ಹಳ್ಳಿಗಳು 30 ವರ್ಷಗಳ ಹಿಂದೆ ಇದ್ದವಲ್ಲ; ಅದೇ ಸ್ಥಿತಿಯಲ್ಲಿ ಈಗಲೂ ಉಳಿದಿವೆ. ಆದರೆ ಅವತ್ತಿನ ಸಂದರ್ಭದಲ್ಲಿ ಏನೂ ಅರಿಯದ ಮುಗ್ಧನಂತಿದ್ದ ಹುಡುಗ, ಇವತ್ತು ಅದೇ ಊರಿನ ಮರಿ ಪುಡಾರಿಯಾಗಿದ್ದಾನೆ. ತನ್ನ ನಾಯಕನಿಗಾಗಿ ಹೋರಾಡುತ್ತಾ ರೌಡಿ ಅನ್ನಿಸಿಕೊಂಡಿದ್ದಾನೆ. ಅಥವಾ ಕುಡಿತ ಕಲಿತು ಇಡೀ ಊರಿನ ಪಾಲಿಗೆ ಶಾಪವಾಗಿದ್ದಾನೆ. ಅಥವಾ ಈ ದರಿದ್ರ ರಾಜಕೀಯದಿಂದ ಬೇಸತ್ತು, ದಿಕ್ಕು ತೋಚದೆ ಕೂತು ಬಿಟ್ಟಿದ್ದಾನೆ.ಇದೆಲ್ಲದರ ಮಧ್ಯೆಯೇ ಮೊನ್ನೆ ಮತದಾನ ಮುಗಿದಿದೆ. ಅದಕ್ಕೂ ಮೊದಲೇ ಹಲವು ಹಳ್ಳಿಗಳಲ್ಲಿ ಮನಸ್ಸುಗಳು ಒಡೆದುಹೋಗಿವೆ. ಪರಸ್ಪರರಿಗೆ ಬುದ್ಧಿ ಕಲಿಸುವ ಅವಕಾಶಕ್ಕಾಗಿ ಎಲ್ಲರೂ ಕಾದು ಕುಳಿತಿದ್ದಾರೆ. ಬಹುಪಾಲು ಹಳ್ಳಿಗಳಲ್ಲಿ ಬೂದಿ ಮುಚ್ಚಿದ ಕೆಂಡದಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ಇಂಥ ಹಸಿಬಿಸಿ ವಾತಾವರಣದ ಮಧ್ಯೆಯೇ ಐದು ವರ್ಷಗಳ ಸುದೀರ್ಘ ಅವಧಿ ಮುಗಿಯಬೇಕಿದೆ. ಅಷ್ಟರೊಳಗೆ ಎಷ್ಟು ಹೊಡೆದಾಟ, ಎಷ್ಟು ಪೊಲೀಸ್ ಕೇಸು, ಎಷ್ಟೆಲ್ಲಾ ಅನಾಹುತಗಳು ನಡೆಯಬಹುದೋ ಎಂಬುದನ್ನು ನೆನಪಿಸಿಕೊಂಡರೇ ಭಯವಾಗುತ್ತಿದೆ. ಅಲ್ಲವೆ?
- ಎ.ಆರ್. ಮಣಿಕಾಂತ್

armanikanth@gmail.com













No comments:

Post a Comment