Tuesday, 3 December 2013

ದುಡ್ಡಿದ್ದೋರೆಲ್ಲ ದೊಡ್ಡವರಲ್ಲ, ಆದರೆ ರತೀಶ್ ಹಾಗಲ್ಲ


ದುಡ್ಡಿದ್ದೋರೆಲ್ಲ ದೊಡ್ಡವರಲ್ಲ, ಆದರೆ ರತೀಶ್ ಹಾಗಲ್ಲ!

ಭಾವತೀರಯಾನ- ಎ.ಆರ್.ಮಣಿಕಾಂತ್


ಈ ಹುಡುಗನ ಹೆಸರು ರತೀಶ್ ಪದ್ಮನಾಭನ್. ಈತ ಹುಟ್ಟಿದ್ದು ಶ್ರೀಲಂಕಾದಲ್ಲಿ. ಬೆಳೆದದ್ದು ಮದುರೈನಲ್ಲಿ. ಈಗ ವಾಸವಾಗಿರುವುದು ಲಂಡನ್‌ನಲ್ಲಿ! 35 ವರ್ಷ ವಯೋವಾನದ ಈತ ಯುರೋಪ್‌ನ ದೈತ್ಯ ಕಂಪನಿಯಾದ  LEBARA ದ ಸಿಇಓ. ಇಬ್ಬರು ಗೆಳೆಯರೊಂದಿಗೆ ಸೇರಿಕೊಂಡು ತನ್ನ 25ನೇ ವಯಸ್ಸಿನಲ್ಲಿಯೇ LEBARA ಟೆಲಿಕಾಂ ಕಂಪನಿ ಆರಂಭಿಸಿ, ನಂತರದ 10 ವರ್ಷದಲ್ಲಿ ಕಂಪನಿಯ ಒಟ್ಟು ಆದಾಯ ರೂಪಾಯಿ ಲೆಕ್ಕದಲ್ಲಿ 5000 ಕೋಟಿಗೆ ತಲುಪುವಂತೆ ಮಾಡಿದ್ದು ರತೀಶ್‌ನ ಹೆಚ್ಚುಗಾರಿಕೆ. ಇಂಥ ಹಿನ್ನೆಲೆಯ ರತೀಶ್, ತನ್ನ ಕಂಪನಿಯ ಒಟ್ಟು ಆದಾಯದಲ್ಲಿ ಅರ್ಧದಷ್ಟನ್ನು ಶ್ರೀಲಂಕಾ-ಭಾರತದಲ್ಲಿರುವ ಸುನಾಮಿ ಸಂತ್ರಸ್ತರು, ಅನಾಥ-ಬಡಮಕ್ಕಳ ಏಳಿಗೆಗೆ ದಾನ ಮಾಡುವ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದಾರೆ. ಗೆಲುವಿಗಾಗಿ ಹಂಬಲಿಸುವವರಿಗೆ, ಗೆದ್ದ ನಂತರ ಹೇಗೆ ಬದುಕಬೇಕು ಎಂದು ಪ್ರಶ್ನಿಸುವವರಿಗೆ ರತೀಶ್‌ನ ಬದುಕೇ ಒಂದು ಪಾಠವಾಗಬಲ್ಲದು. ರತೀಶ್‌ನ ಯಶೋಗಾಥೆಯನ್ನು ಅವನದೇ ಮಾತುಗಳಲ್ಲಿ ಕೇಳೋಣ ಬನ್ನಿ.
----
'ನನ್ನ ತಂದೆ ತಮಿಳ್ನಾಡಿನಿಂದ ಶ್ರೀಲಂಕಾಕ್ಕೆ ವಲಸೆ ಬಂದವರು. ನಂತರ, ಹೊಟ್ಟೆಪಾಡಿನ ಕಾರಣಕ್ಕೆ ಲಂಡನ್‌ಗೆ ಹೋಗಿ, ಅಲ್ಲಿನ ಬಟ್ಟೆ ಅಂಗಡಿಯೊಂದರಲ್ಲಿ ಅಕೌಂಟೆಂಟ್ ಕೆಲಸಕ್ಕೆ ಸೇರಿಕೊಂಡರು. ಶ್ರೀಲಂಕಾದ ಮನೆಯಲ್ಲಿದ್ದುದು ಇಬ್ಬರೇ: ಅಮ್ಮ ಮತ್ತು ನಾನು. ನನಗೆ 10 ವರ್ಷವಿದ್ದಾಗಲೇ ಶ್ರೀಲಂಕಾದಲ್ಲಿ ಜನಾಂಗೀಯ ಕಲಹ ಶುರುವಾಯಿತು. ವಲಸೆ ಬಂದ ಕುಟುಂಬದ ಸದಸ್ಯರ ಮೇಲೆ ಹಲ್ಲೆ ಮಾಡುವುದು ಮಾಮೂಲಾಯಿತು. ಶ್ರೀಲಂಕಾದಲ್ಲಿಯೇ ಉಳಿದುಕೊಂಡರೆ ಬದುಕು ದುರ್ಭರವಾಗುತ್ತದೆ ಅನ್ನಿಸಿದಾಗ, ಮದುರೈನಲ್ಲಿರುವ ವಿ.ಕೆ.ಕೆ. ಹಾಸ್ಟೆಲ್‌ಗೆ ನನ್ನನ್ನು ಸೇರಿಸಲಾಯಿತು. ಅನಾಥ ಹಾಗೂ ಆಶ್ರಯ ಬಯಸಿದ ವಿದ್ಯಾರ್ಥಿ ಎಂಬ ಹಣೆಪಟ್ಟಿಯೊಂದಿಗೆ ನಾನು ವಿ.ಕೆ.ಕೆ ಗ್ರೂಪ್‌ನ ಶಾಲೆ ಕಂ ಹಾಸ್ಟೆಲ್‌ಗೆ ಸೇರಿಕೊಂಡಿದ್ದೆ.
ಹಾಸ್ಟೆಲಿನಲ್ಲಿದ್ದ ಉಳಿದ ವಿದ್ಯಾರ್ಥಿಗಳು ತಿಂಗಳಿಗೊಮ್ಮೆ ತಂತಮ್ಮ ಊರಿಗೆ ಹೋಗಿ ಬರುತ್ತಿದ್ದರು. ಸಾವಿರ ಮೈಲಿಗೂ ಹೆಚ್ಚು ದೂರವಿರುವ ಶ್ರೀಲಂಕಾಕ್ಕೆ ಹೋಗಿ ಬರುವ ಆರ್ಥಿಕ ಚೈತನ್ಯ ನನಗಿರಲಿಲ್ಲ. ಒಂದು ದಿನ, ಶಾಲೆಯ ಮುಖ್ಯಸ್ಥರಾದ ವಿ.ಕೆ. ಕಲ್ಯಾಣಸುಂದರಂ ಅವರೊಂದಿಗೆ ನನ್ನ ಸಂಕಟ ಹೇಳಿಕೊಂಡು ಬಿಕ್ಕಳಿಸಿದೆ. ತಕ್ಷಣವೇ ನನ್ನ ಕಂಬನಿ ಒರೆಸಿದ ಸುಂದರಂ-ಇವತ್ತಿನಿಂದ ನಮ್ಮ ಮನೆಯ ಸದಸ್ಯರ ಪೈಕಿ ನೀನೂ ಒಬ್ಬ. ನಮ್ಮ ಜೊತೆಯಲ್ಲೇ ಇರು. ನಮ್ಮಲ್ಲಿ ಏನಿರುತ್ತೋ ಅದನ್ನೇ ನಿನಗೂ ಹಂಚ್ತೇವೆ' ಎಂದರು. ಮುಂದೆ, 18 ವರ್ಷ ತುಂಬುವವರೆಗೂ, ಕಲ್ಯಾಣಸುಂದರಂ ಅವರ ಮನೆಯ ಮಗನಂತೆಯೇ ಬೆಳೆದೆ. ಪಿಯುಸಿ ಮುಗಿಯುತ್ತಿದ್ದಂತೆಯೇ, ಡಿಗ್ರಿ ಓದಲು ಇಲ್ಲಿಗೇ ಬಾ ಎಂದು ತಂದೆಯಿಂದ ಕರೆ ಬಂತು. ಕಲ್ಯಾಣಸುಂದರಂ ಅವರ ಒಪ್ಪಿಗೆ ಪಡೆದು ಲಂಡನ್‌ನ ವಿಮಾನ ಹತ್ತಿ ಬಿಟ್ಟೆ. ಅಲ್ಲಿಗೆ ಹೋದ ಮೇಲೆ ಗೊತ್ತಾಯಿತು. ಅಪ್ಪನಿಗೆ, ಇಂಗ್ಲೆಂಡಿನ ದುಬಾರಿ ವಿ.ವಿ.ಗಳಲ್ಲಿ ಓದಿಸುವಂಥ ಆರ್ಥಿಕ ಚೈತನ್ಯವಿರಲಿಲ್ಲ. ಆದರೂ ಭಂಡ ಧೈರ್ಯದೊಂದಿಗೆ 'ಬಾ' ಅಂದಿದ್ದರು. ನಾನು, ಹಿಂದೆ ಮುಂದೆ ಯೋಚಿಸದೆ ಹೋಗಿಬಿಟ್ಟಿದ್ದೆ.
ಹತ್ತಾರು ಕಡೆ ಸಾಲ ಮಾಡಿ ಏರೋನಾಟಿಕಲ್ ಎಂಜಿನಿಯರಿಂಗ್‌ಗೆ ಸೇರಿಕೊಂಡೆ. ಭಾರತದ ಇಂಗ್ಲಿಷ್‌ಗೂ, ಲಂಡನ್‌ನ ಇಂಗ್ಲಿಷ್‌ಗೂ ತುಂಬ ವ್ಯತ್ಯಾಸವಿತ್ತು. ನನ್ನ ತಂದೆಗೂ ಚೆಂದದ ಇಂಗ್ಲಿಷ್ ಬರುತ್ತಿರಲಿಲ್ಲ. ಈ ಸಂದರ್ಭದಲ್ಲಿ ಎದುರಾದವರೆಲ್ಲ ಹಂಗಿಸುತ್ತಿದ್ದರು. ಗೇಲಿ ಮಾಡುತ್ತಿದ್ದರು. ಡರ್ಟಿ ಇಂಡಿಯನ್ ಎಂದು ಬೈಯ್ಯುತ್ತಿದ್ದರು. ಆಗೆಲ್ಲ ಹುಚ್ಚು ಹಿಡಿದಂತಾಗುತ್ತಿತ್ತು. ಮದುರೈಗೆ, ಕಲ್ಯಾಣಸುಂದರಂ ಅವರ ಮನೆಗೆ ವಾಪಸ್ ಹೋಗಿ ಬಿಡುವ ಮನಸ್ಸಾಗುತ್ತಿತ್ತು. 'ಇಂಥಾ ಯೋಚನೆಗಳನ್ನು ಮನಸ್ಸಿನಿಂದ ತೆಗೆದು ಹಾಕು. ಇಂಗ್ಲಿಷರು ಬಳಸುವ ಭಾಷೆಯನ್ನು ನಿನಗೆ ಕಲಿಸ್ತೇನೆ' ಎಂದು ಅಲ್ಲಿಯೇ ನೌಕರಿಗಿದ್ದ ನನ್ನ ಸೋದರಮಾವ ಹೇಳಿದರು. ಮರುದಿನದಿಂದಲೇ, ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿ 1.30 ತನಕ ಇಂಗ್ಲಿಷ್ ಕಲಿಕೆಯ ಪಾಠ ಶುರುವಾಯಿತು.
ಲಂಡನ್‌ನ ಇಂಗ್ಲಿಷ್ ಒಲಿಯಿತಲ್ಲ; ಅದೇ ಸಂದರ್ಭಕ್ಕೆ ನನ್ನ ಡಿಗ್ರಿಯೂ ಮುಗಿದಿತ್ತು. ಮಾಸ್ಟರ್ಸ್ ಡಿಗ್ರಿ ಓದಬೇಕು ಎಂದುಕೊಂಡೆ. ಆದರೆ, ಆರ್ಥಿಕ ಸಮಸ್ಯೆ ಎದುರಾಯಿತು. ಅವತ್ತಿನ ಸಂದರ್ಭದಲ್ಲಿ ಕಾಲೇಜಿನ ಪ್ರವೇಶ ಶುಲ್ಕ ಕಟ್ಟುವ ಶಕ್ತಿ ಕೂಡ ನನಗಿರಲಿಲ್ಲ. ಎರಡು ವರ್ಷ ಎಲ್ಲಾದರೂ ಕೆಲಸ ಮಾಡಿ ಹಣ ಸಂಪಾದಿಸೋಣ. ನಂತರ ಓದು ಮುಂದುವರಿಸಿದರಾಯ್ತು ಎಂದು ಆಗಲೇ ನಿರ್ಧರಿಸಿದ್ದೆ. ಕೆಲವೇ ದಿನಗಳಲ್ಲಿ ಬಾರ್‌ನಲ್ಲಿ ಪರಿಚಾರಕನಾಗಿ ರಾತ್ರಿ ಹೊತ್ತು ಹಾಗೂ ಮೊಬೈಲ್ ಸಿಮ್ ಕಾರ್ಡ್ ಮಾರಾಟಗಾರನಾಗಿ ಬೆಳಗಿನ ಹೊತ್ತು ದುಡಿಮೆಗೆ ಸೇರಿಕೊಂಡೆ.
ಇದು 2001ರ ಮಾತು. ಮೊಬೈಲ್‌ಗಳು ತುಂಬ ಜನಪ್ರಿಯವಾಗುತ್ತಿದ್ದ ಕಾಲ ಅದು. ಮಾರುಕಟ್ಟೆಯಲ್ಲಿ ಲೀಡರ್ ಎನಿಸಿಕೊಳ್ಳುವ ಉದ್ದೇಶದಿಂದ ಒಂದೊಂದು ಕಂಪನಿಯೂ ವಿಶೇಷ ಕೊಡುಗೆಯನ್ನು ಪ್ರಕಟಿಸುತ್ತಿತ್ತು. ಆದರೆ ಸಿಮ್ ಕಾರ್ಡ್ ಮಾರುವವರು ಲೆಕ್ಕಾಚಾರದಲ್ಲಿ ಮೋಸ ಮಾಡುತ್ತಿದ್ದರಿಂದ ಟೆಲಿಕಾಂ ಕಂಪನಿಗಳಿಗೆ ಲಕ್ಷಾಂತರ ಪೌಂಡ್ ನಷ್ಟವಾಗುತ್ತಿತ್ತು. ಅವತ್ತಿನ ಸಂದರ್ಭದಲ್ಲಿ ನಾನೊಬ್ಬ ಪಾರ್ಟ್‌ಟೈಂ ಕೆಲಸಗಾರ. ಆದರೇನಂತೆ? ನಡೆಯುತ್ತಿರುವ ಅನ್ಯಾಯವನ್ನು ಕಂಪನಿಯ ಮುಖ್ಯಸ್ಥರಿಗೆ ಹೇಳಬೇಕು ಅನ್ನಿಸಿತು. ನಾನು ಹೇಳಿದ್ದನ್ನೆಲ್ಲ ತಾಳ್ಮೆಯಿಂದ ಕೇಳಿಸಿಕೊಂಡ ಮುಖ್ಯಸ್ಥರು -ಮುಂದಿನ ವಾರದಿಂದ, ಕಂಪನಿಯ ಮುಖ್ಯ ಕಚೇರಿಯಲ್ಲಿ, ಆಡಳಿತ ವಿಭಾಗದ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುವಿಯಂತೆ ಬಾ' ಎಂದರು. ಇದು ನನ್ನ ಬದುಕಿನ ಮೊದಲ ಟರ್ನಿಂಗ್ ಪಾಯಿಂಟ್. ನನಗೆ ಮುಖ್ಯ ಕಚೇರಿಯಲ್ಲಿ ಕೆಲಸ ನೀಡಿದ ಕಂಪನಿಯ ಹೆಸರು ಐಸಿಎಸ್ ಟೆಲಿಕಾಂ.
ಐಸಿಎಸ್ ಕಂಪನಿಯಲ್ಲಿದ್ದಾಗಲೇ, ಕೇರಳ ಮೂಲದ ಲಿಯೋನ್ ರಾಸಯ್ಯ, ಭಾಸ್ಕರನ್ ಕಂದಯ್ಯ ಎಂಬಿಬ್ಬರ ಪರಿಚಯವಾಯಿತು. ಒಂದೇ ವಯೋವಾನದವರಾದ ಕಾರಣ, ನಾವು ಬಹುಬೇಗ ಆತ್ಮೀಯರಾದೆವು. ಕುಟುಂಬದವರೊಂದಿಗೆ ಪದೇ ಪದೆ ಮಾತಾಡಬೇಕು ಎಂಬ ತುಡಿತ ಮೂವರಿಗೂ ಇತ್ತು. ಆದರೆ ಐಎಸ್‌ಡಿ ಕಾಲ್ ಮಾಡುವ, ಅದಕ್ಕೆ ತಗುಲುವ ದುಬಾರಿ ಬಿಲ್ ನೀಡುವ ಚೈತನ್ಯ ಮೂವರಿಗೂ ಇರಲಿಲ್ಲ. ಯುರೋಪ್ ರಾಷ್ಟ್ರಗಳಲ್ಲಿ ಕೆಲಸ ಮಾಡುವವರ ಪೈಕಿ ಹೆಚ್ಚಿನವರು ವಲಸೆ ಬಂದವರು. ಪ್ರವಾಸಿಗಳ ಸಂಖ್ಯೆಯೂ ಅಲ್ಲಿ ವಿಪರೀತ. ಈ ಎರಡೂ ಗುಂಪಿಗೆ ಸೇರಿದವರು ತಾಯ್ನಾಡಿನಲ್ಲಿರುವ ಬಂಧುಗಳೊಂದಿಗೆ ಕಡಿಮೆ ದರದಲ್ಲಿ ಫೋನ್ ಮಾಡಲು ಸಾಧ್ಯವಾಗುವಂಥ ಯೋಜನೆಯೊಂದನ್ನು ರೂಪಿಸಿದರೆ ಅದರಿಂದ ಲಾಭವಿದೆ ಎಂಬ ವಿಚಿತ್ರ ಐಡಿಯಾ ನಮಗೆ ಬಂತು. ಈ ಸಂದರ್ಭದಲ್ಲಿ ಸಿಮ್ ಕಾರ್ಡ್ ಮಾರಾಟ ಹಾಗೂ ಟೆಲಿಕಾಂ ರಂಗದ ಒಳಹೊರಗನ್ನು ತಿಳಿಯುವ ಉದ್ದೇಶದಿಂದ ಆರು ತಿಂಗಳ ವಿಶೇಷ ಕೋರ್ಸ್‌ಗೆ ಸೇರಿಕೊಂಡೆ. ಅಲ್ಲಿಂದ ಹೊರ ಬಂದ ನಂತರ, ಗೆಳೆಯರಾದ ಲಿಯೋನ್, ಭಾಸ್ಕರನ್ ಅವರ ಹೆಸರಿನ ಮೊದಲ ಎರಡೆರಡು ಅಕ್ಷರಗಳನ್ನು ತೆಗೆದೆ. ಅದರೊಂದಿಗೆ ನನ್ನ ಹೆಸರಿನ ಮೊದಲಿಗಿದ್ದ ಎರಡು ಅಕ್ಷರಗಳನ್ನು ಸೇರಿಸಿ LEBARA ಎಂಬ ಟೆಲಿಕಾಂ ಸಂಸ್ಥೆಯನ್ನು ಆರಂಭಿಸಿಯೇ ಬಿಟ್ಟೆ.
 ಔಊಇಆಖಆ ದ ಮೂಲಕ ಬಗೆಬಗೆಯ ಫೋನ್ ಕಾರ್ಡ್‌ಗಳನ್ನು ಮಾರಾಟ ಮಾಡುವುದು ನಮ್ಮ ಉದ್ದೇಶವಾಗಿತ್ತು. ಆದರೆ, ಫೋನ್ ಕಾರ್ಡ್‌ಗಳನ್ನು ಖರೀದಿಸಲು ನಮ್ಮಲ್ಲಿ ಹಣವಿರಲಿಲ್ಲ. ಲಾಭದ ಬಗ್ಗೆ ಯಾವುದೇ ಗ್ಯಾರಂಟಿ ಇರಲಿಲ್ಲವಾದ್ದರಿಂದ ಬ್ಯಾಂಕ್‌ಗಳು ಸಾಲ ಕೊಡಲು ನಿರಾಕರಿಸಿದವು. ಅಲ್ಲಿ ಬಂಧುಗಳೂ ಇರಲಿಲ್ಲವಾದದ್ದರಿಂದ 'ಸಹಾಯಹಸ್ತ' ದ ಬಗ್ಗೆ ಯೋಚಿಸುವಂತೆಯೂ ಇರಲಿಲ್ಲ. ಇಷ್ಟಾದರೂ ನಾವು ಧೈರ್ಯಗೆಡಲಿಲ್ಲ. ಮೂವರು ಒಟ್ಟಾಗಿಯೇ ಟೆಲಿಕಾಂ ಕಂಪನಿಗಳ ಮುಂದೆ ನಿಂತೆವು. ಎರಡು ದಿನದ ಮಟ್ಟಿಗೆ ಸಾಲ ಕೊಡಿ ಎಂದು ಪ್ರಾರ್ಥಿಸಿದೆವು. ಕಡೆಗೂ ಒಂದು ಕಂಪನಿ ಸಾಲ ನೀಡಿತು. ಆ ಹಣದಲ್ಲಿ ಐಎಸ್‌ಡಿ ಕಾಲ್‌ನ ಸಿಮ್‌ಕಾರ್ಡ್ ಖರೀದಿಸಿ, ಒಂದೇ ದಿನದಲ್ಲಿ ಎಲ್ಲವನ್ನೂ ಮಾರಿದೆವು. ಈ ಸಂದರ್ಭದಲ್ಲಿ ದೊರೆತ ಕಮಿಷನ್ ಹಣವೇ  LEBARA ದ ಮೂಲ ಬಂಡವಾಳವಾಯಿತು.
ಬೇರೆ ಕಂಪನಿಯ ಕಾರ್ಡ್‌ಗಳನ್ನೂ ಮಾರಿದರೆ ಕೇವಲ ಕಮಿಷನ್ ಸಿಗುತ್ತದೆ. ಅದರ ಬದಲು ನಮ್ಮದೇ ಬ್ರಾಂಡ್ ಆರಂಭಿಸಿ, ಅದರ ಮೂಲಕ ಕಾರ್ಡ್ ಮಾರಿದರೆ ದುಪ್ಪಟ್ಟು ಲಾಭ ಸಿಗುತ್ತಿತ್ತು. ನಾವು ತಡ ಮಾಡಲಿಲ್ಲ. ತಕ್ಷಣವೇ ಮೊಬೈಲ್ ನೆಟ್‌ವರ್ಕ್ ಲೈಸೆನ್ಸ್ ಪಡೆದು ಲಾಭ ಹೆಚ್ಚಿಸಿಕೊಂಡೆವು. ನಮ್ಮ ಕಂಪನಿಯ ಕಾರ್ಯವಿಧಾನದ ಬಗ್ಗೆಯೂ ಇಲ್ಲಿ ಹೇಳಿಬಿಡಬೇಕು.  LEBARA ಟೆಲಿಕಾಂ ಕಂಪನಿ, ಮೊಬೈಲ್ ಟವರ್, ಟ್ರಾನ್ಸ್‌ಮೀಟರ್‌ನಂಥ ಉಪಕರಣಗಳನ್ನು ಹೊಂದಿರುವ, ತರಂಗಾಂತರ ಲೈಸೆನ್ಸ್ ಪಡೆದಿರುವ ಏರ್‌ಟೆಲ್, ವೊಡಾಫೋನ್‌ನಂಥ ಕಂಪನಿಗಳ ಸಂಪನ್ಮೂಲ ಬಳಸಿಕೊಂಡು ಗ್ರಾಹಕರಿಗೆ ಅಗತ್ಯವಿರುವ ಸೇವೆಗಳನ್ನು ಒದಗಿಸುತ್ತದೆ. ಇದನ್ನು ಸರಳವಾಗಿ ಹೇಳುವುದಾದರೆ, ಬೇರೆ ಬೇರೆ ಕಂಪನಿಗಳ ಹಾರ್ಡ್‌ವೇರ್ ಬಳಸಿ ತನ್ನ ಸಾಫ್ಟ್‌ವೇರ್ ಮೂಲಕ ಸೇವೆ ಒದಗಿಸುತ್ತದೆ.
ಇಂಗ್ಲೆಂಡಿನಲ್ಲಿ ಬೇರೆ ರಾಷ್ಟ್ರಗಳಿಂದ ವಲಸೆ ಬಂದವರದ್ದೇ ದರ್ಬಾರು. ಅವರೆಲ್ಲ ತಮ್ಮ ಮನೆಯವರೊಂದಿಗೆ ಸಂಪರ್ಕ ಇಟ್ಟುಕೊಳ್ಳಲು ಐಎಸ್‌ಡಿ ಕಾಲ್ ಮಾಡಿದಾಗ ದುಬಾರಿ ಬೆಲೆ ನೀಡಬೇಕಾಗುತ್ತದೆ. ಕಾರಣ, ಟೆಲಿಕಾಂ ಸ್ಪೆಕ್ಟ್ರಂ ಲೈಸೆನ್ಸ್‌ಗಳು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಬದಲಾಗುತ್ತವೆ.  LEBARA ಎರಡೂ ದೇಶಗಳಲ್ಲಿ ಇರುವ ಸರ್ವಿಸ್ ಪ್ರೊವೈಡರ್‌ನಿಂದ ಮೂಲ ಸೌಕರ್ಯಗಳನ್ನು ಬಾಡಿಗೆಗೆ ಪಡೆದಿರುತ್ತದೆ. ಹೀಗಾಗಿ, ದೇಶಗಳೆಂಬ ಭೌಗೋಳಿಕ ಮಿತಿಯನ್ನು ದಾಟಿ, ವಲಸೆ ಬಂದಿರುವ ಆ ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ದೂರವಾಣಿ ಸಂಪರ್ಕ ನೀಡಲು ನಮಗೆ ಸಾಧ್ಯವಾಗಿದೆ. ಜೊತೆಗೆ, ನಮ್ಮ ಕಂಪನಿ Pay-as-you-go ಹೆಸರಿನ, ಅಂದರೆ, ಬಳಸಿದ ಮೇಲೆ ದುಡ್ಡು ಕೊಡಿ ಎಂಬ ಸ್ಕೀಂನಲ್ಲಿ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುತ್ತದೆ. ಈ ಸಿಮ್‌ಕಾರ್ಡ್‌ಗಳನ್ನು ಮೊಬೈಲ್‌ಗೆ ಅಳವಡಿಸಿಕೊಂಡು ಲಂಡನ್‌ನಿಂದ ಹೊರದೇಶಕ್ಕೆ ಕಾಲ್ ಮಾಡಿದರೆ, ಕೇವಲ 30 ಸೆಕೆಂಡ್‌ಗಳ ಅವಧಿಯೊಳಗೆ ಸಂಪರ್ಕ ಸಿಗುವಂತೆ  LEBARA ಕಂಪನಿ ನೋಡಿಕೊಳ್ಳುತ್ತದೆ. ನಮ್ಮ ಕಂಪನಿಗೆ ದೊಡ್ಡ ಮಟ್ಟದ ಯಶಸ್ಸು ದೊರೆಯಲು ಇದೆಲ್ಲಾ ಕಾರಣವಾಗಿರಬಹುದೇನೋ.
ಯಾವ ಸಂದರ್ಭದಲ್ಲೂ ಮೈ ಮರೆಯುವುದು, ಸೋಮಾರಿಗಳಾಗುವುದು ಬೇಡ. ಒಂದು ವೇಳೆ ಈ ಪ್ರಯತ್ನದಲ್ಲಿ ನಾವು ಸೋತು ಹೋದರೆ ಅದನ್ನು ಕಂಡು ದೇವರಿಗೂ ದುಃಖವಾಗಬೇಕು. ನಮ್ಮ ಶ್ರಮ ಆ ಮಟ್ಟದಲ್ಲಿರಬೇಕು ಎಂದು ಕಂಪನಿ ಆರಂಭಿಸಿದ ದಿನವೇ ಜೊತೆಗಾರರಿಗೂ ಹೇಳಿದ್ದೆ. ನನ್ನ ಮಾತನ್ನು ಎಲ್ಲರೂ ಒಪ್ಪಿದ್ದರು. ಈಗ ನಮ್ಮ ಕಂಪನಿಯಲ್ಲಿ 1500 ಮಂದಿ ನೌಕರರಿದ್ದಾರೆ. ಅವರ ಶ್ರಮ ಕಂಪನಿಯನ್ನು ಮೊದಲ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಲಂಡನ್ ಮಾತ್ರವಲ್ಲ, ಆಸ್ಟ್ರೇಲಿಯಾ, ಫ್ರಾನ್ಸ್, ಡೆನ್ಮಾರ್ಕ್, ನೆದರ್‌ಲ್ಯಾಂಡ್, ಜರ್ಮನಿ, ಸ್ಪೇನ್, ಸ್ವಿಜರ್‌ಲ್ಯಾಂಡ್‌ಗಳಲ್ಲೂ LEBARA ದ ಗೆಲುವಿನ ಬಾವುಟ ಹಾರಾಡಿದೆ.
ಕೆಲ ವರ್ಷಗಳ ಹಿಂದೆ ರಜೆ ಕಳೆಯುವ ಉದ್ದೇಶದಿಂದ ಶ್ರೀಲಂಕಾಗೆ ಹೋಗಿದ್ದೆ. ನಾನು ಅಲ್ಲಿದ್ದಾಗಲೇ ಸುನಾಮಿ ಅಪ್ಪಳಿಸಿತು. ಒಂದೇ ದಿನದಲ್ಲಿ ಸಾವಿರಾರು ಜನ ಕೊಚ್ಚಿಕೊಂಡು ಹೋದರು. ಅದೆಷ್ಟೋ ಮಕ್ಕಳು ತಬ್ಬಲಿಗಳಾದವು. ಲಕ್ಷವಲ್ಲ, ಕೋಟಿ ಕೋಟಿ ಹಣವಿದ್ದವರೂ ಸಹ ಪ್ರಕೃತಿಯ ಅಬ್ಬರದ ಮುಂದೆ ಅಸಹಾಯಕರಾಗಿದ್ದರು. ಈ ದುರಂತದ ಹಸಿಹಸಿ ಚಿತ್ರವನ್ನು ಕಣ್ಣೊಳಗೆ ಇಟ್ಟುಕೊಂಡೇ ಲಂಡನ್‌ಗೆ ಹೋದೆ. ನನ್ನ ಗೆಳೆಯರಿಗೆ, ಸಹೋದ್ಯೋಗಿಗಳಿಗೆ ನಡೆದಿದ್ದೆಲ್ಲವನ್ನೂ ವಿವರಿಸಿದೆ. ಇದಾದ ಕೆಲವೇ ದಿನಗಳಲ್ಲಿ ಮದುರೈಗೆ ಬಂದವನು, ಸುನಾಮಿ ಅಬ್ಬರದಿಂದ ನಲುಗಿ ಹೋಗಿದ್ದ ನಾಗಪಟ್ಟಣಂಗೆ ಭೇಟಿ ನೀಡಿದೆ. ಸುನಾಮಿ ಸಂತ್ರಸ್ತರಿಗೆ ನೆರವಾಗಬೇಕು ಎಂಬ ನಿರ್ಧಾರ ಚಿಗುರೊಡೆದಿದ್ದೇ ಈ ಸಂದರ್ಭದಲ್ಲಿ.
   ದೊಡ್ಡ ಖುಷಿಯೆಂದರೆ, LEBARA  ದ ಪಾಲುದಾರರಾದ ಲಿಯೋನ್ ಮತ್ತು ಭಾಸ್ಕರನ್ ನನ್ನ ನಿರ್ಧಾರವನ್ನು ಸ್ವಾಗತಿಸಿದರು. ನಮ್ಮ ಕಂಪನಿಯ ಒಟ್ಟು ಆದಾಯದಲ್ಲಿ ಅರ್ಧದಷ್ಟು ಹಣವನ್ನು ಸುನಾಮಿ ಸಂತ್ರಸ್ತರಿಗೆ, ಬೀದಿ ಮಕ್ಕಳ ಏಳಿಗೆಗೆ, ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೆರವಾಗುವಂಥ ಉದ್ದೇಶಗಳಿಗೆ ಬಳಸೋಣ ಎಂದಾಗ ತಕ್ಷಣವೇ ಒಪ್ಪಿಕೊಂಡರು.
ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ದಾನ ಮಾಡುವ ಅಗತ್ಯವಿತ್ತಾ ಎಂಬುದು ಹಲವರ ಪ್ರಶ್ನೆ. ಅದಕ್ಕೆ ನನ್ನ ಉತ್ತರ ಇಷ್ಟೆ: ನಾವೀಗ 2500 ಕೋಟಿ ರೂ.ಗಳನ್ನು ದಾನ ಮಾಡ್ತೇವೆ ಅಂದರೆ, ಬಾಕಿ 2500 ಕೋಟಿ ರೂ. ನಮ್ಮಲ್ಲಿರುತ್ತೆ ಎಂದಾಯ್ತು. ಈಗಿನ ನಮ್ಮ ಜೀವನ ಶೈಲಿ, ಕಂಪನಿಯ ವಹಿವಾಟು ನಿರ್ವಹಣೆಗೆ ಅದು ಬೇಕಾದಷ್ಟಾಯಿತು. ಹಣ ಹೆಚ್ಚಾಗುವುದರಿಂದ ನಮ್ಮ ಜೀವನ ಶೈಲಿಯಲ್ಲಿ ಯಾವುದೇ ಬದಲಾವಣೆಯೂ ಆಗುವುದಿಲ್ಲ. ಅಂದ ಮೇಲೆ, ಸಂಪತ್ತನ್ನು ಗಂಟು ಮೂಟೆ ಕಟ್ಟಿ ಇಟ್ಟುಕೊಳ್ಳುವುದರಿಂದ ಏನುಪಯೋಗ? ನಾವು ದಾನವಾಗಿ ನೀಡುವ ಹಣದಿಂದ ದಿನಕ್ಕೆ ಅದೆಷ್ಟೋ ಸಾವಿರ ಮಕ್ಕಳಿಗೆ ಊಟ ಸಿಗುತ್ತದೆ. ಸ್ಕಾಲರ್‌ಶಿಪ್ ಯೋಜನೆಯ ಕಾರಣದಿಂದ ಬಡವರ ಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ನಮ್ಮ ಪಾಲಿಗೆ ಇದನ್ನು ಮೀರಿದ ಖುಷಿ ಬೇರೊಂದಿಲ್ಲ. ಒಂದು ಕಾಲದಲ್ಲಿ ಲಂಕಾದಿಂದ ಮದುರೈಗೆ ಅನಾಥನಾಗಿ ಬಂದಿದ್ದ ನನಗೆ ವಿ.ಕೆ. ಕಲ್ಯಾಣಸುಂದರಂ ಕುಟುಂಬದವರು ಆಶ್ರಯ ನೀಡಿದ್ದರು. ನಮ್ಮಲ್ಲಿ ಇರುವುದನ್ನೇ ಹಂಚಿಕೊಂಡು ತಿನ್ನಬೇಕು ಎಂಬ ಕಿವಿಮಾತು ಹೇಳಿದ್ದರು. ಅವರ ಮಾತುಗಳನ್ನೇ ನಾನು ಶಿರಸಾ ವಹಿಸಿ ಪಾಲಿಸಿದ್ದೇನೆ. ನನಗೆ ಆಶ್ರಯ ನೀಡಿದ ಭಾರತದ ನೆಲಕ್ಕೆ ಪುಟ್ಟದೊಂದು ಅಳಿಲು ಸೇವೆ ಸಲ್ಲಿಸಿದ್ದೇನೆ. ರಜೆ ಕಳೆಯಲು ಲಿಯೋನ್ ಹಾಗೂ ಭಾಸ್ಕರನ್ ಜೊತೆ ವರ್ಷಕ್ಕೊಮ್ಮೆ ಕೇರಳಕ್ಕೆ ಬರುವ ನೆಪದಲ್ಲಿ ನಾನೂ ಭಾರತೀಯನೇ ಆಗಿಹೋಗಿದ್ದೇನೆ. ಈವರೆಗಿನ ಸಾಧನೆ ಕುರಿತಂತೆ ನನಗೆ ಹೆಮ್ಮೆಯಿದೆ...'
----
ರತೀಶ್‌ನ ಮಾತುಗಳನ್ನೆಲ್ಲಾ ಕೇಳಿದ ನಂತರ ಅನಿಸಿದ್ದು: ಈ ಹುಡುಗ ನಮ್ಮ ಅಣ್ಣನೋ, ತಮ್ಮನೋ ಆಗಬಾರದಿತ್ತೆ...
- ಎ.ಆರ್. ಮಣಿಕಾಂತ್
armanikanth@gmail.com



















No comments:

Post a Comment