ಅತ್ತೆ, ಅಮ್ಮನಾದ ಘಳಿಗೆಯಲ್ಲೇ ಪ್ರೀತಿಯ ಹೂವರಳಿತ್ತು!

ಭಾವತೀರಯಾನ
ಪ್ರಕಾಶ ಸ್ಪಷ್ಟವಾಗಿ ಹೇಳಿದ್ದ: ನೋಡು ರೇಖಾ, ಮದುವೆಗೆ ನಾನಂತೂ ರೆಡಿ. ಸಿಂಪಲ್ಲಾಗಿ ಮದುವೆಯಾಗೋಣ. ಗ್ರ್ಯಾಂಡ್ ಆಗಿ ಬದುಕೋಣ. ಆದರೆ ನಮ್ಮ ಅಮ್ಮನಿಗೆ ಲವ್ ಮ್ಯಾರೇಜ್ ಇಷ್ಟವಾಗಲ್ಲ. ಆಕೆ ಹಳೇ ಕಾಲದ ಹೆಂಗಸು. ಮುಂಗೋಪಿ. ಆದ್ರೆ ಮನಸ್ಸು ಒಳ್ಳೆಯದಿದೆ. ಸಂಬಂಧದಲ್ಲಿಯೇ ಯಾವುದಾದ್ರೂ ಹುಡುಗೀನ ನೋಡಿದ್ರಾಯ್ತು ಎಂದೆಲ್ಲಾ ಆಕೆ ಯೋಚಿಸಿರ್ತಾಳೆ. ನನ್ನ ನಿರ್ಧಾರದಿಂದ ಅಮ್ಮನಿಗೆ ಶಾಕ್ ಆಗುತ್ತೆ. ಆದರೆ ಮದುವೆಯನ್ನೇ ಧಿಕ್ಕರಿಸುವಂಥ ಕೆಟ್ಟ ಮನಸ್ಸು ಆಕೆಗಿಲ್ಲ. ಹೆಚ್ಚೆಂದರೆ, ಆರೇಳು ತಿಂಗಳು ಮುಖ ಗಂಟಿಕ್ಕಿಕೊಂಡು ಉಳಿಯಬಹುದು. ಮನೆಗೊಂದು ಮೊಮ್ಮಗು ಬರ್ತಿದೆ ಅಂತ ಗೊತ್ತಾದ್ರೆ ಎಲ್ಲವನ್ನೂ ಮರೆತು ಅಮ್ಮ ಓಡಿ ಬರ್ತಾಳೆ. ಲವ್ ಮ್ಯಾರೇಜ್ ಆಗುವ ಪ್ರತಿಯೊಂದು ಫ್ಯಾಮಿಲಿಯ ಕಥೇನೂ ಹೀಗೇ ಇರುತ್ತೆ. ಹಾಗಾಗಿ ಯಾವುದೇ ಕಾರಣಕ್ಕೂ ಗಾಬರಿ ಆಗಬೇಡ.'ಪ್ರಕಾಶನ ಮಾತುಗಳಲ್ಲಿ ರೇಖಾಗೆ ನಂಬಿಕೆಯಿತ್ತು. ಎಂಥ ಸಂದರ್ಭ ಬಂದರೂ ಆತ ತನ್ನ ಕೈ ಬಿಡಲಾರ ಎಂಬ ಭರವಸೆಯಿತ್ತು. ಹಾಗಾಗಿ ಯಾವುದೇ ಹಿಂಜರಿಕೆಯಿಲ್ಲದೆ ಆಕೆ ಮದುವೆಗೆ ಒಪ್ಪಿಕೊಂಡಳು. ಪರಿಣಾಮ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯೂ, ಒಂದು ಹೋಟೆಲಿನಲ್ಲಿ ಆರತಕ್ಷತೆಯೂ ನಡೆದು ಹೋಯಿತು. ಮಗ ಲವ್ ಮ್ಯಾರೇಜ್ ಮಾಡಿಕೊಳ್ಳುವ ಸುದ್ದಿ ಕೇಳಿದಾಗ ಪ್ರಕಾಶನ ತಾಯಿ ಗಿರಿಜಮ್ಮ ಒಂದೆರಡು ದಿನ ಕಣ್ಣೀರು ಸುರಿಸಿದಳು. ಕುಟುಂಬದ ಹಿರಿಯರನ್ನು ಕರೆದು ಮಗನ ಮನಸ್ಸು ಬದಲಿಸಲು ಪ್ರಯತ್ನಿಸಿದಳು. ಹೀಗೆಲ್ಲ ಆಗಬಹುದೆಂದು ಮೊದಲೇ ಅಂದಾಜು ಮಾಡಿಕೊಂಡಿದ್ದ ಪ್ರಕಾಶ-'ಯಾರು ಒಪ್ಪಲಿ ಬಿಡಲಿ, ಯಾರು ಬರಲಿ, ಬಾರದೇ ಇರಲಿ, ನನ್ನ ಮದುವೆಯಂತೂ ನಡೆಯುತ್ತೆ' ಎಂದು ನಿಷ್ಠುರವಾಗಿ ಹೇಳಿಬಿಟ್ಟಿದ್ದ. ಮಗನ ಮಾತಿಗೆ ಹೇಗೆ ಪ್ರತಿಕ್ರಿಯಿಸುವುದೆಂದು ತಿಳಿಯದಿದ್ದರಿಂದ ಗಿರಿಜಮ್ಮ ಮೌನವಾಗಿದ್ದರು. ಮನಸ್ಸಿಲ್ಲದ ಮನಸ್ಸಿನಿಂದಲೇ ಮದುವೆಯನ್ನು ಒಪ್ಪಿಕೊಂಡಿದ್ದರು.ಗಿರಿಜಮ್ಮನಿಗೆ ಮುಂಗೋಪ ಮಾತ್ರವಲ್ಲ; ಅತೀ ಎಂಬಂಥ ಹಠವೂ ಇತ್ತು. ಪ್ರತಿ ಸಂದರ್ಭದಲ್ಲೂ ತನ್ನ ಮಾತೇ ನಡೆಯಬೇಕು, ತಾನು ಹೇಳಿದ್ದೇ ಆಗಬೇಕು ಎಂದು ಆಕೆ ಪಟ್ಟು ಹಿಡಿಯುತ್ತಿದ್ದರು. ಸೊಸೆಯಾದವಳು ಪ್ರತಿ ಸಂದರ್ಭದಲ್ಲೂ ನನ್ನ ಆದೇಶವನ್ನು ಪಾಲಿಸಬೇಕು. ಯಾವುದೇ ಕಾರಣಕ್ಕೂ ಆಕೆ ತಿರುಗಿ ಮಾತಾಡಬಾರದು, ವಾದಕ್ಕೆ ನಿಲ್ಲಬಾರದು ಎಂದೆಲ್ಲಾ ಅಪೇಕ್ಷಿಸಿದ್ದರು. ಆದರೆ ಈಗಿನ ಕಾಲದ ಎಲ್ಲ ಹುಡುಗಿಯರಂತಿದ್ದ ರೇಖಾ, ಮದುವೆಯಾಗಿ ಎರಡು ತಿಂಗಳು ಕಳೆಯುವುದರೊಳಗೆ ತಿರುಗಿ ಮಾತಾಡಿದ್ದೂ ಅಲ್ಲದೆ, ಒಂದು ರೌಂಡ್ ಜಗಳವನ್ನೂ ಆಡಿಬಿಟ್ಟಳು. 'ಓಹ್, ಇವರಿಬ್ಬರೂ ಹೊಂದಾಣಿಕೆ ಮಾಡಿಕೊಂಡು ಬದುಕುವುದು ಕಷ್ಟ' ಎಂಬ ಸತ್ಯ ಪ್ರಕಾಶನಿಗೆ ಅವತ್ತೇ ಅರ್ಥವಾಗಿ ಹೋಯಿತು.
ಆನಂತರದಲ್ಲಿ ಹಳ್ಳಿಯಲ್ಲಿದ್ದ ಅತ್ತೆಯ ಮನೆಗೆ ಹೋಗುವುದನ್ನೇ ರೇಖಾ ಕಡಿಮೆ ಮಾಡಿದಳು. ಪ್ರಕಾಶ ಮಾತ್ರ ಪ್ರತಿ ತಿಂಗಳೂ ಹೋಗಿ ಬರುತ್ತಿದ್ದ. ಹೀಗಿರುವಾಗಲೇ ಅದೊಂದು ರಾತ್ರಿ ಮಗನಿಗೆ ಫೋನ್ ಮಾಡಿದ ಗಿರಿಜಮ್ಮ- 'ಸಾವಿರ ರೂಪಾಯಿ ಬೇಕು ಮಗಾ. ಸ್ವಲ್ಪ ಖರ್ಚಿದೆ' ಅಂದಳು. ಪ್ರಕಾಶ ತಕ್ಷಣವೇ ಆಯ್ತಮ್ಮಾ. ನಾಳೆನೇ ಕಳಿಸ್ತೇನೆ ಎಂದ. ಅಲ್ಲಿಗೆ, ಅಮ್ಮ-ಮಗನ ಮಾತುಕತೆ ಮುಗಿದಿರಬಹುದು ಎಂದು ಭಾವಿಸಿದ ರೇಖಾ-'ಅಲ್ಲಾರೀ, ಅವರು ಕೇಳಿದಷ್ಟನ್ನೂ ಕೊಡ್ತೀನಿ ಅಂತೀರಲ್ಲ; ನಿಮ್ಗೆ ಸ್ವಲ್ಪಾನೂ ವ್ಯವಹಾರ ಜ್ಞಾನ ಇಲ್ಲ. ಮೊದಲು ಕೈ ಬಿಗಿ ಹಿಡಿದು ಖರ್ಚು ಮಾಡಲು ಕಲಿತ್ಕೊಳ್ಳಿ' ಎಂದು ಬಿಟ್ಟಳು. ಆಗಿನ್ನೂ ಲೈನ್‌ನಲ್ಲೇ ಇದ್ದ ಗಿರಿಜಮ್ಮನವರಿಗೆ ಈ ಮಾತುಗಳೆಲ್ಲಾ ಕೇಳಿಸಿದ್ದರಿಂದ ಆಕೆ ಕೆರಳಿದರು. ಮರುದಿನವೇ ಸೊಸೆಗೆ ಫೋನ್ ಮಾಡಿ ಗ್ರಹಚಾರ ಬಿಡಿಸಿದರು.
ಇದಾಗಿ 15 ದಿನ ಕಳೆಯುವುದರೊಳಗೆ ಬಚ್ಚಲು ಮನೆಯಲ್ಲಿ ಜಾರಿ ಬಿದ್ದು ಕಾಲು ಮುರಿದುಕೊಂಡರು ಗಿರಿಜಮ್ಮ. ಪ್ರಕಾಶನೇ ಅವರ ಏಕೈಕ ಸಂತಾನವಾದ್ದರಿಂದ ಚಿಕಿತ್ಸೆಯ ನೆಪದಲ್ಲಿ ಆಕೆ ಮಗನ ಮನೆಗೇ ಬರಬೇಕಾಯಿತು. ಅಭಿಪ್ರಾಯ ಭೇದದಿಂದ ಮೊದಲೇ ಹಾವು- ಮುಂಗುಸಿಯಂತೆ ಆಡುತ್ತಿದ್ದವರು ಒಂದೇ ಮನೆಯಲ್ಲಿ ಉಳಿದರು ಅಂದ ಮೇಲೆ ಕೇಳಬೇಕೆ? ಮನೆಯೆಂಬುದು ಅಶಾಂತಿಯ ತಾಣವಾಯಿತು. ಅತ್ತೆ-ಸೊಸೆ ಮಧ್ಯೆ ಚಿಕ್ಕಪುಟ್ಟ ಕಾರಣಗಳಿಗೂ ಜಗಳ ನಡೆಯುತ್ತಿತ್ತು. ಹೆಂಡತಿಯ ಪರ ಮಾತಾಡಿದರೆ ಅಮ್ಮನ ಬಯ್ಗುಳಕ್ಕೂ, ಅಮ್ಮನನ್ನು ವಹಿಸಿಕೊಂಡರೆ, ರಾತ್ರಿಯ ವೇಳೆ ಹೆಂಡತಿಯ ಅಸಹಕಾರಕ್ಕೂ ಪ್ರಕಾಶ ತುತ್ತಾಗಬೇಕಿತ್ತು. ಇಬ್ಬರನ್ನೂ ಹೇಗೆ ಸಂಭಾಳಿಸುವುದೋ ಗೊತ್ತಾಗದೆ ಅವನೂ ಹೈರಾಣಾದ.ಅತ್ತೆಯ ಬೈಗುಳದಿಂದ ಸ್ವಲ್ಪ ಮಟ್ಟಿಗಾದರೂ ತಪ್ಪಿಸಿಕೊಳ್ಳಬೇಕು ಎಂದು ಯೋಚಿಸಿದ ರೇಖಾ, ಬೆಳಗಿನ ಹೊತ್ತು ದೇವಸ್ಥಾನಕ್ಕೂ, ಸಂಜೆಯ ವೇಳೆ ತರಕಾರಿ ತರುವ ನೆಪದಲ್ಲಿ ಮಾರ್ಕೆಟ್‌ಗೂ ಹೋಗಲು ಆರಂಭಿಸಿದಳು. ಸೊಸೆಯ ಈ ವರಸೆಯಿಂದ ಗಿರಿಜಮ್ಮ ಉರಿದು ಬಿದ್ದರು. 'ನಾನು ಕಾಯಿಲೆ ಹೆಂಗಸು ಸಾಯ್ತಾ ಬಿದ್ದಿದ್ದೀನಿ. ನಂಗಿಲ್ಲಿ ನೀರು ಕೊಡುವವರೂ ಗತಿ ಇಲ್ಲ. ಥಳಕು ಬಳುಕಿನಿಂದ ನನ್ನ ಮಗನನ್ನು ಮರುಳು ಮಾಡಿದ್ದೂ ಅಲ್ಲದೇ ನನ್ನ ಮೇಲೂ ಸವಾರಿ ಮಾಡೋಕೆ ನೋಡ್ತಿಯೇನೇ ಎಂದು ಅಬ್ಬರಿಸಿದ್ದೂ ಅಲ್ಲದೆ, ಅದೇ ಸಿಟ್ಟಿನಲ್ಲಿ ಒಂದೇಟು ಹಾಕಿಯೂ ಬಿಟ್ಟರು.ರೇಖಾಳ ತಾಳ್ಮೆ ಸಂಪೂರ್ಣವಾಗಿ ಸತ್ತು ಹೋದದ್ದೇ ಆಗ. ಅತ್ತೆಯಿಂದ ಹೊಡೆತ ತಿಂದದ್ದನ್ನು ಆಕೆ ಗಂಡನಿಗೆ ಹೇಳಲಿಲ್ಲ. ಹೇಳಿದರೂ ಗಂಡ ಏನೂ ಮಾತಾಡಲಾರ ಎಂದು ಆಕೆಗೆ ಗೊತ್ತಿತ್ತು. ಅದೇ ಕಾರಣದಿಂದ ಮೌನವಾಗಿಯೇ ರಾತ್ರಿ ಕಳೆದ ಆಕೆ ಬೆಳಗಾಗುವ ವೇಳೆಗೆ ಅತ್ಯಂತ ಕೆಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಳು. ಅದೇನೆಂದರೆ- ಅತ್ತೆಯನ್ನು ಕೊಂದು ಹಾಕುವುದು! ಜೊತೆಗಿದ್ದು ಕೊಂಡು ದಿನವೂ ಕುಸ್ತಿ ಮಾಡಿ ಬಿಕ್ಕಳಿಸುವ ಬದಲು, ಯಾರಿಗೂ ಗೊತ್ತಾಗದಂತೆ ಕೊಲೆ ಮಾಡಿ, ಒಂದೆರಡು ದಿನ ಗೋಳಾಡಿ ಆನಂತರ ನೆಮ್ಮದಿಯಾಗಿರೋದೇ ಬೆಸ್ಟ್ ಎಂದುಕೊಂಡಳು ರೇಖಾ.ಆದರೆ, ಕೊಲೆ ಮಾಡುವುದು ಹೇಗೆ ಎಂಬುದೇ ಆಕೆಗೆ ಗೊತ್ತಾಗಲಿಲ್ಲ. ಸಣ್ಣದೊಂದು ಸುಳಿವನ್ನೂ ಬಿಡದೆ ಕೊಲೆ ಮಾಡಿ ಹೋದವರನ್ನೂ ನಂತರದ ಕೆಲವೇ ದಿನಗಳಲ್ಲಿ ಪೊಲೀಸರು ಹಿಡಿದು ಹಾಕುತ್ತಿದ್ದ ಸುದ್ದಿಗಳನ್ನು ಪತ್ರಿಕೆ, ಟಿ.ವಿ.ಗಳಲ್ಲಿ ನೋಡಿದ್ದಳಲ್ಲ; ಹಾಗಾಗಿ ಸುಪಾರಿ ಕೊಡುವಂಥ ಸಾಹಸಕ್ಕೆ ರೇಖಾ ಮುಂದಾಗಲಿಲ್ಲ. ಹೀಗಿರುವಾಗಲೇ ಮಾಟ ಮಾಡಿಸಿದರೆ ನಮಗೆ ಆಗದವರನ್ನು ನಿವಾರಿಸಿಕೊಳ್ಳಬಹುದು ಎಂದು ಎಲ್ಲೋ ಓದಿದ್ದು ನೆನಪಾಯಿತು. ರೇಖಾ ತಡ ಮಾಡಲಿಲ್ಲ. ಪೂಜೆಯ ನೆಪದಲ್ಲಿ ಸೀದಾ ಕೊಳ್ಳೇಗಾಲಕ್ಕೆ ಬಂದಳು. ಮಂತ್ರವಾದಿಯೊಬ್ಬನ ಬಳಿ ಸಮಸ್ಯೆ ಹೇಳಿಕೊಂಡಳು. ಆತ -'ನೋಡಿ ತಾಯಿ, ನಾವಿಲ್ಲಿ ಕೂತು ಒಂದು ಮಂತ್ರ ಹೇಳಿದ್ರೆ ನಿಮ್ಮ ಎದುರಾಳಿಯ ಪ್ರಾಣಪಕ್ಷಿಯು ಚಟ್ ಪಕಾರ್ ಎಂದು ಹಾರಿಹೋಗುತ್ತೆ. ಯಾರಿಗೂ ಗೊತ್ತಾಗುವುದಿಲ್ಲ' ಎಂದ. ಒಂದು ಜೀವ ತೆಗೆಯುವುದು ಇಷ್ಟೊಂದು ಸುಲಭವಾ ಅನ್ನಿಸಿ ರೇಖಾಗೆ ಆಶ್ಚರ್ಯವಾಯಿತು. ಆಕೆ ಅನುಮಾನದಿಂದಲೇ ಕೇಳಿದಳು: 'ಒಂದು ವೇಳೆ ನಿಮ್ಮ ಮಂತ್ರ ಕೆಲಸ ಮಾಡದೇ ಹೋದ್ರೆ...' ಅವಳ ಮಾತನ್ನು ಅಷ್ಟಕ್ಕೇ ನಿಲ್ಲಿಸಿ ಆ ಮಂತ್ರವಾದಿ ಹೇಳಿದ: ಅಂಥಾ ಛಾನ್ಸೇ ಇಲ್ಲ ತಾಯೀ. ಏನಾದ್ರೂ ಹೆಚ್ಚು ಕಡಿಮೆಯಾದ್ರೆ ನಿಮ್ಮ ವೈರಿಯ ಸುತ್ತಮುತ್ತ ಇದ್ದವರಿಗೆ ಹೊಡೆತ ಬೀಳುತ್ತೇ ವಿನಃ ನಮ್ಮ ಮಂತ್ರ ಫೇಲ್ ಆಗುವ ಛಾನ್ಸೇ ಇಲ್ಲ. ಈ ಮಾತು ಕೇಳಿದಾಕ್ಷಣ ರೇಖಾ ಕಂಪಿಸಿದಳು. ಅತ್ತೆಯನ್ನು ನಿವಾರಿಸಿಕೊಳ್ಳಲು ಹಾಕಿಸಿದ ಮಂತ್ರ, ಅಪ್ಪಿ ತಪ್ಪಿ ಗಂಡನ ಕಡೆಗೇ ತಿರುಗಿಕೊಂಡರೆ ಗತಿಯೇನು ಅನ್ನಿಸಿದಾಗ ಕೂತಲ್ಲೇ ಬೆವೆತು ಹೋದಳು. ನಂತರ ನಡುಗುತ್ತಲೇ ಅಲ್ಲಿಂದ ಎದ್ದು ಬಂದಳು.ಈ ಮಧ್ಯೆ ಗಿರಿಜಮ್ಮನ ಹಾರಾಟ ಮುಂದುವರಿದಿತ್ತು. ಸೊಸೆ ಸೈಲೆಂಟ್ ಆದಷ್ಟೂ ಆಕೆಯ ಹಠ ಹೆಚ್ಚುತ್ತಿತ್ತು. ಇದಕ್ಕೆಲ್ಲಾ ಒಂದು ಅಂತ್ಯ ಕಾಣಿಸಲೇಬೇಕು ಎಂದು ರೇಖಾ ಎರಡನೇ ಬಾರಿಗೆ ಅಂದುಕೊಂಡಾಗಲೇ ಕುಟುಂಬದ ಮಿತ್ರನಾಗಿದ್ದ ನಾಟಿ ವೈದ್ಯನೊಬ್ಬ ಆಕೆಗೆ ನೆನಪಾಗಿಬಿಟ್ಟ. ಕೆಲವೇ ದಿನಗಳ ನಂತರ ಅವನನ್ನು ಭೇಟಿಯಾದ ರೇಖಾ, ತನ್ನ ಸಂಕಟ ಹೇಳಿಕೊಂಡಳು. ಎಲ್ಲ ಕಿರುಕುಳವನ್ನೂ ಇಷ್ಟು ದಿನ ಹೇಗೋ ಸಹಿಸ್ಕೊಂಡೆ. ಇನ್ಮುಂದೆ ಸಾಧ್ಯವಿಲ್ಲ. ಯಾವುದಾದ್ರೂ ವಿಷ ಇದ್ರೆ ಕೊಡಿ. ಊಟಕ್ಕೆ ಹಾಕಿ ಕೊಟ್ಟು ಬಿಡ್ತೀನಿ. ಅಷ್ಟರ ಮಟ್ಟಿಗೆ ನನ್ನ ಮನಸ್ಸು ಕಲ್ಲಾಗಿ ಹೋಗಿದೆ' ಅಂದಳು.ರೇಖಾ ಹೇಳಿದ್ದೆಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡ ಆ ನಾಟಿವೈದ್ಯ ಒಮ್ಮೆ ವಕ್ರವಾಗಿ ನಕ್ಕು ಹೇಳಿದ: 'ನಾನು ಎತ್ತಿಕೊಂಡು ಬೆಳೆಸಿದ ಕೂಸು ನೀನು. ನನ್ನ ಮಗಳ ಸ್ಥಾನದಲ್ಲಿ ಇದ್ದೀಯ. ನಿನಗೆ ಸಹಾಯ ಮಾಡಬೇಕಿರುವುದು ನನ್ನ ಕರ್ತವ್ಯ. ಬದುಕಲ್ಲಿ ನೋಡಬೇಕಿರುವುದನ್ನೆಲ್ಲ ನಿಮ್ಮ ಅತ್ತೆ ನೋಡಿಯಾಗಿದೆ. ಈಗೇನಿದ್ರೂ ನಿನ್ನ ಕಾಲ. ಊಟಕ್ಕೆ ವಿಷ ಬೆರೆಸಿ ಕೊಡ್ತೀಯಾ ಅಂದ್ಕೋ. ಆಗ ಸಿಕ್ಕಿ ಬಿದ್ದು ಜೈಲು ಪಾಲಾಗ್ತೀಯ. ಈಗ ನಾನು ಹೇಳಿದಂತೆ ಕೇಳಿದ್ರೆ ನಿನ್ನ ಕೆಲಸ ಆಗುತ್ತೆ. ಯಾರಿಗೂ ನಿನ್ನ ಮೇಲೆ ಅನುಮಾನ ಬರೋದಿಲ್ಲ' ಅಂದ. ಈ ಮಾತು ಕೇಳಿ ರೇಖಾಗೆ ಖುಷಿಯಾಯಿತು. 'ಹೇಳಿ ಅಂಕಲ್. ನಾನು ಏನು ಮಾಡಬೇಕೂಂತ ಹೇಳಿ' ಅಂದಳು.ಆ ನಾಟಿ ವೈದ್ಯ ಒಂದೂ ಮಾತಾಡದೆ ಮನೆಯೊಳಗೆ ಹೋದ. ಹತ್ತು ನಿಮಿಷದ ನಂತರ ಹೊರಬಂದವನ ಕೈಯಲ್ಲಿ ಪುಟ್ಟದೊಂದು ಗಂಟಿತ್ತು. ಅದನ್ನು ರೇಖಾಗೆ ಕೊಟ್ಟು ಗಂಭೀರವಾಗಿ ಹೇಳಿದ: 'ನಿನಗೆ ಕೊಟ್ಟಿರೋದು ನಿಧಾನ ವಿಷದ ಪೌಡರ್. ನಾಳೆಯಿಂದ ನಿಮ್ಮ ಅತ್ತೆಗೆ ರುಚಿರುಚಿಯಾದ ತಿಂಡಿ ಮಾಡಿಕೊಡು. ತಟ್ಟೆಗೆ ತಿಂಡಿ ಹಾಕಿದ ಮೇಲೆ ಅದರ ಮೇಲೆ ಒಂದು ಚಮಚೆಯಷ್ಟು ಪ್ರಮಾಣದಲ್ಲಿ ಈ ಪೌಡರ್‌ನ ಉದುರಿಸಬೇಕು. ಹೀಗೆ ಮಾಡಿದ್ರೆ ವಿಷ ನಿಧಾನವಾಗಿ ನಿಮ್ಮ ಅತ್ತೆಯ ಮೈ ಸೇರುತ್ತೆ. ದಿನಕಳೆದಂತೆಲ್ಲಾ ಆಕೆ ತುಂಬು ಆರೋಗ್ಯದಿಂದಲೇ ಇರ್ತಾರೆ. ಆದರೆ ಇದೆಲ್ಲಾ ಎಂಟು ತಿಂಗಳು ಮಾತ್ರ. ಆನಂತರ ಒಂದು ದಿನ ಇದ್ದಕ್ಕಿದ್ದಂತೆಯೇ ಆಕೆಯ ಕಥೆ ಮುಗಿದು ಹೋಗುತ್ತೆ. ಯಾರಿಗೂ ಅನುಮಾನ ಬರೋದಿಲ್ಲ. ಒಂದು ಮಾತು ನೆನಪಿಟ್ಕೋ. ನಾಳೆಯಿಂದ ಯಾವುದೇ ಕಾರಣಕ್ಕೂ ನೀನು ಅತ್ತೆಗೆ ಹಿಂತಿರುಗಿ ಮಾತಾಡಬೇಡ. ಉಲ್ಟಾ ಮಾತಾಡಿದ್ರೆ ನಿನಗೇ ಕೆಟ್ಟ ಹೆಸರು ಬರುತ್ತೆ. ಇನ್ನು ಬರೀ ಎಂಟೇ ತಿಂಗಳು ತಾನೇ. ಎಷ್ಟು ಹಿಂಸೆ ಆದ್ರೂ ಪರ್ವಾಗಿಲ್ಲ. ಸುಮ್ನೆ ಇದ್ದು ಬಿಡು. ನಿಂಗೆ ಒಳ್ಳೆಯದಾಗ್ಲಿ. ಹೋಗಿ ಬಾ...'ಒಂದು ಕೆಟ್ಟ ಕೆಲಸ ಮಾಡಲು ಆ ವೇಳೆಗೆ ಮಾನಸಿಕವಾಗಿ ಸಜ್ಜಾಗಿದ್ದಳು ರೇಖಾ. ಹಾಗಾಗಿ ಅವಳಿಗೆ ಹೆದರಿಕೆಯಾಗಲಿಲ್ಲ. ಪಾಪಪ್ರಜ್ಞೆಯೂ ಕಾಡಲಿಲ್ಲ. ಮರುದಿನದಿಂದಲೇ ದಿನವೂ ರುಚಿರುಚಿಯ ತಿಂಡಿ ಮಾಡಿ, ನಾಟಿ ವೈದ್ಯ ಕೊಟ್ಟಿದ್ದ ಔಷಧಿಯನ್ನು ಗುಟ್ಟಾಗಿ ಬೆರೆಸಿ, ಅದನ್ನು ಅತ್ತೆಗೆ ಕೊಡುವುದು ರೇಖಾಳ ದಿನಚರಿಯಾಯಿತು. ಈ ಕೆಲಸ ಗಂಡನಿಗಾಗಲಿ, ಅತ್ತೆಗಾಗಲಿ ತಿಳಿಯದಂತೆ ಆಕೆ ಎಚ್ಚರ ವಹಿಸಿದಳು. ಈ ನಡುವೆಯೂ ಹಲವು ಸಂದರ್ಭದಲ್ಲಿ ಗಿರಿಜಮ್ಮನವರೇ ಏನಾದರೂ ಕೊಂಕು ನುಡಿಯುತ್ತಿದ್ದರು. ಆಗೆಲ್ಲಾ ತಿರುಗಿ ಮಾತಾಡುವ ಮನಸ್ಸಾದರೂ ನಾಟಿವೈದ್ಯನ ಕಿವಿಮಾತು ನೆನಪಾಗಿ, ತಕ್ಷಣವೇ ಸಂಯಮ ತಂದುಕೊಂಡು ಮೌನವಾಗುತ್ತಿದ್ದಳು ರೇಖಾ.ಸೊಸೆಯ ನಡವಳಿಕೆಯಲ್ಲಿ ಉಂಟಾಗಿರುವ ಬದಲಾವಣೆಯನ್ನು ಗಿರಿಜಮ್ಮ ಗಮನಿಸಿದ್ದರು. ಬಹುಶಃ ಅವಳಿಗೆ ಪ್ರಕಾಶ ಗದರಿಸಿ ಬುದ್ಧಿ ಹೇಳಿರಬೇಕು ಅಂದುಕೊಂಡರು. ಆಕೆ ದಿನವೂ ಮಾಡಿಕೊಡುತ್ತಿದ್ದ ರುಚಿರುಚಿಯಾದ ತಿಂಡಿಯ ನೆನಪಾಗಿ ಖುಷಿಯಾದರು. ತಾನು ಹೇಗೆಲ್ಲಾ ಕನಸು ಕಂಡಿದ್ದೆನೋ ಅದೇ ಥರಾ ಸೇವೆ ಮಾಡುತ್ತಿದ್ದಾಳೆ ಅಂದುಕೊಂಡರು. ಮರುಕ್ಷಣವೇ ಅವಳ ಒಳಮನಸ್ಸು ಮಾತಾಡಿತು: ಸೊಸೆಯನ್ನು ಮಗಳ ಥರಾ ನೋಡ್ಕೋ ಬೇಕು ಅಂತ ಹಿರಿಯರು ಹೇಳಿದ್ದಾರೆ. ಈ ಹುಡುಗೀನ ಒಂದು ದಿನವಾದ್ರೂ ಹಾಗೆ ನೋಡಿಕೊಂಡೆಯಾ? ಸಲ್ಲದ ಮಾತಾಡಿ ಅವಳನ್ನು ಇಂಚಿಂಚಾಗಿ ಕಾಡ್ತಾ ಇದ್ದೀಯಲ್ಲ; ಇದೆಲ್ಲಾ ಸರಿಯಾ? ಇದಕ್ಕೆಲ್ಲಾ ದೇವರು ಶಿಕ್ಷೆ ಕೊಡದೇ ಬಿಡ್ತಾನಾ ಎಂದು ಪ್ರಶ್ನೆ ಹಾಕಿತು. ಪಾಪಪ್ರಜ್ಞೆಯಿಂದ ಕಂಗಾಲಾದ ಗಿರಿಜಮ್ಮ, ಅವತ್ತು ರಾತ್ರಿ ಸೊಸೆ ಮಲಗಿದ್ದಾಳೆ ಎಂಬುದನ್ನು ಎರಡೆರಡು ಬಾರಿ ಖಚಿತಪಡಿಸಿಕೊಂಡು ಮಗನನ್ನು ಎದುರು ಕೂರಿಸಿಕೊಂಡು ಹೇಳಿದರು: 'ನಿನ್ನ ಹೆಂಡ್ತಿ, ದೇವರಂಥ ಹುಡುಗಿ ಕಣೋ ಪ್ರಕಾಶ. ನಾನೇ ದುಡುಕಿಬಿಟ್ಟೆ. ಕೆಟ್ಟ ಮಾತುಗಳಿಂದ ಅವಳನ್ನು ನೋಯಿಸಿಬಿಟ್ಟೆ. ಒಂದೆರಡು ಬಾರಿ ಹೊಡೆದೂ ಬಿಟ್ಟೆ. ಅವತ್ತು ನಂಗೆ ಬುದ್ಧಿ ನೆಟ್ಟಗಿರಲಿಲ್ಲ. ಪಾಪ, ಆ ಹುಡುಗೀಗೆ ಎಷ್ಟು ಬೇಜಾರಾಯ್ತೋ ಏನೋ. ನಾಳೆಯಿಂದ ನಾನೇ ಬದಲಾಗ್ತೇನೆ. ಅವಳನ್ನು ಯಾವುದೇ ಕಾರಣಕ್ಕೂ ಬಯ್ಯೋದಿಲ್ಲ ಕಣೋ...'ಮರುದಿನದಿಂದಲೇ ಕಂಪ್ಲೀಟ್ ಬದಲಾಗಿ ಬಿಟ್ಟರು ಗಿರಿಜಮ್ಮ. ಮನೆಗೆ ಬಂದವರ ಮುಂದೆಲ್ಲ ಸೊಸೆಯನ್ನು ಹಾಡಿ ಹೊಗಳುವುದು ಅವರ ಕೆಲಸವಾಯಿತು. ಇವಳು ನಂಗೆ ಸೊಸೆಯಲ್ಲ ಕಣ್ರೀ. ಮಗಳು ಎಂದೆಲ್ಲಾ ಆಕೆ ಹೇಳುತ್ತಿದ್ದರು. ಅಷ್ಟಕ್ಕೇ ಸುಮ್ಮನಾಗದೆ ದೇವಾಲಯಕ್ಕೆ ಹೋಗಿ ಸೊಸೆಯ ಹೆಸರಲ್ಲಿ ವಿಶೇಷ ಅರ್ಚನೆಯನ್ನೂ ಮಾಡಿಸಿದರು. ಮನೆಗೆ ಬರುವ ದಾರಿಯಲ್ಲಿ ಛಕ್ಕನೆ ರೇಖಾಳ ಕೈ ಹಿಡಿದು -'ಇಷ್ಟು ದಿನ ನಿಂಗೆ ತೊಂದರೆ ಕೊಟ್ಟೆ. ಕ್ಷಮಿಸಿಬಿಡಮ್ಮಾ' ಅಂದೂಬಿಟ್ಟರು. ನಿಜಕ್ಕೂ ಬದಲಾಗಿ ಹೋದ ಅತ್ತೆಯನ್ನು ಕಂಡು, ಆನಂದಭಾಷ್ಪದೊಂದಿಗೆ ಮನೆಗೆ ಬಂದ ರೇಖಾ ಒಮ್ಮೆ ಕ್ಯಾಲೆಂಡರ್ ನೋಡಿದವಳೇ ಮಾತೇ ಹೊರಡದೆ ನಿಂತು ಬಿಟ್ಟಳು: ಏಕೆಂದರೆ, ನಾಟಿವೈದ್ಯ ನೀಡಿದ್ದ ಗಡುವಿನಲ್ಲಿ ಆಗಲೇ ಆರು ತಿಂಗಳು ಕಳೆದು ಹೋಗಿದ್ದವು. ಈ ಅವಧಿಯಲ್ಲಿ ಗಿರಿಜಮ್ಮ ತುಂಬು ಆರೋಗ್ಯದಿಂದ ಕಂಗೊಳಿಸುತ್ತಿದ್ದರು. ಇನ್ನು ಎರಡು ತಿಂಗಳು ಕಳೆದರೆ, ಯಾವಾಗ ಬೇಕಾದರೂ ದಿಢೀರನೆ ಅತ್ತೆ ಸತ್ತು ಹೋಗುತ್ತಾರೆ ಎಂದು ನೆನಪಾಗುತ್ತಿದ್ದಂತೆ ರೇಖಾಗೆ ವಿಪರೀತ ಸಂಕಟವಾಯಿತು. ಅತ್ತೆ ಸತ್ತು ಹೋದರೆ, ಮುಂದೆ ತಿಂಡಿ ತಿನ್ನುವ ಸಂದರ್ಭದಲ್ಲೆಲ್ಲ ಆಕೆಯ ನೆನಪು ಕೈ ಜಗ್ಗುತ್ತದೆ ಅನ್ನಿಸಿತಲ್ಲ; ಆಗಲೇ ರೇಖಾ ಒಂದು ತೀರ್ಮಾನಕ್ಕೆ ಬಂದಳು.ಮರುದಿನವೇ ನಾಟಿವೈದ್ಯನ ಬಳಿಗೆ ಓಡಿಬಂದಳು. ಅತ್ತೆ ಈಗ ಬದಲಾಗಿರುವುದನ್ನೂ, ಸ್ವಂತ ಮಗಳಿಗಿಂತ ಹೆಚ್ಚು ಪ್ರೀತಿಯಿಂದ ನೋಡಿಕೊಳ್ಳುತ್ತಿರುವುದನ್ನು ವಿವರಿಸಿದಳು. ನಾನೂ ಆಕೆಯಲ್ಲಿ ಅಮ್ಮನನ್ನು ಕಾಣುತ್ತಿದ್ದೇನೆ. ಮುಂದೆಯೂ ಆಕೆ ನನಗೆ ಬೇಕು. ಆಕೆಯ ಜೀವಕ್ಕೆ ಯಾವುದೇ ತೊಂದರೆ ಆಗಬಾರ್ದು. ಈವರೆಗೂ ಕೊಟ್ಟಿದ್ದೀವಲ್ಲ; ಅದಕ್ಕೆ ವಿರುದ್ಧವಾಗಿ ಕೆಲಸ ಮಾಡುವ ಔಷಧೀನ ಕೊಡಿ. ಹೇಗಾದ್ರೂ ಮಾಡಿ ನಮ್ಮ ಅತ್ತೆಯ ಜೀವ ಉಳಿಸಿ. ಯಾವುದೋ ಕೆಟ್ಟಗಳಿಗೇಲಿ ನಾನು ಕೆಟ್ಟದಾಗಿ ನಡ್ಕೊಂಡೆ, ನನ್ನನ್ನು ಕ್ಷಮಿಸಿಬಿಡಿ ಎಂದು ಬಿಕ್ಕಳಿಸುತ್ತಾ ನಾಟಿವೈದ್ಯನ ಕಾಲು ಹಿಡಿದುಬಿಟ್ಟಳು.ನಾಟಿವೈದ್ಯ, ಮಮತೆಯಿಂದ ರೇಖಾಳ ತಲೆ ನೇವರಿಸಿದ. ನೀನು ನನ್ನ ಮಗಳ ಸಮಾನ. ನಿಂಗೆ ಸಹಾಯ ಮಾಡ್ತೀನಿ ಎಂದ. ಈ ಮಾತು ಕೇಳಿದ್ದೇ, ರೇಖಾ ಖುಷಿಯಿಂದ ಕೂತಳು. ಆಗ ನಾಟಿ ವೈದ್ಯ ಹೇಳಿದ:' ಮಗಳೇ, ನಿಜ ಹೇಳಬೇಕು ಅಂದ್ರೆ ವಿಷದ ಪ್ರಭಾವ ಹೊಂದಿದ್ದ ಔಷಧವನ್ನು ನಾನು ಕೊಡಲೇ ಇಲ್ಲ. ನಾನು ಕೊಟ್ಟಿದ್ದು ವಿಟಮಿನ್‌ಗಳಿಂದ ತುಂಬಿದ ಔಷಧಿ. ಅದರಿಂದ ಯಾವುದೇ ತೊಂದೆರೆ ಇಲ್ಲ. ವಿಷ ಎಂಬುದು ನಿನ್ನ ಮನದೊಳಗಿತ್ತು. ಅದೀಗ ಅಮೃತವಾಗಿ ಹೊರಗೆ ಬಂದಿದೆ. ಮುಂದೊಂದು ದಿನ ಹೀಗೆ ಆಗೇ ಆಗುತ್ತೆ ಅಂದುಕೊಂಡೇ ಹಾಗೆಲ್ಲಾ ಮಾತಾಡಿದ್ದೆ. ಅದೆಲ್ಲಾ ನಿಜವಾಗಿದೆ. ನಿಂಗೆ ಒಳ್ಳೇದಾಗ್ಲಿ. ಹೋಗಿ ಬಾ...'ಇವತ್ತು ಅತ್ತೆಗೆ ಹೋಳಿಗೆ ಮಾಡಿಕೊಡ್ತೇನೆ ಎಂದು ಹರ್ಷದಿಂದ ಜಿಗಿಯುತ್ತಾ ಮನೆಗೆ ಹೊರಟಳು ರೇಖಾ.
- ಎ.ಆರ್. ಮಣಿಕಾಂತ್armanikanth@gmail.com
No comments:
Post a Comment