ಇಕ್ಬಾಲ್ ಮಾಶಿಯ ಕನಸು ಮಾಸಲು ಕ್ರೆಗ್ ಬಿಡಲಿಲ್ಲ!

ಭಾವತೀರಯಾನ
ತುಂಬ ಹಿಂದೇನಲ್ಲ, ಬರೀ 20 ವರ್ಷಗಳ ಹಿಂದೆ ನಡೆದು ಹೋದ, ಕ್ರೌರ್ಯ ಮತ್ತು ಕರುಣೆಯ ಸಮ್ಮಿಶ್ರದ ಪ್ರಸಂಗವಿದು.
ಈ ಕಥನದ ಹೀರೋ ಇಕ್ಬಾಲ್ ಮಾಶಿ. 1982ರಲ್ಲಿ ಜನಿಸಿದ ಈತ, ಪಾಕಿಸ್ತಾನದ ಮುಖ್ಯ ಪಟ್ಟಣವಾದ ಲಾಹೋರ್‌ನಿಂದ 17 ಕಿಲೋ ಮೀಟರ್ ದೂರದಲ್ಲಿರುವ ಮಾರಿಡ್ಕೆ ಎಂಬ ಹಳ್ಳಿಯವನು. ಸೈಫ್ ಮಾಶಿ-ಇನಾಯತ್, ಇಕ್ಬಾಲ್‌ನ ತಂದೆ-ತಾಯಿ. ಬಡತನವನ್ನೇ ಹಾಸಿ ಹೊದ್ದುಕೊಂಡಿದ್ದ ಈ ದಂಪತಿಗೆ ಮನೆ ತುಂಬ ಮಕ್ಕಳು. ಇವರಿಗೆ ಸ್ವಂತ ಜಮೀನಿರಲಿಲ್ಲ. ಹಾಗಾಗಿ, ಇಬ್ಬರೂ ಕೂಲಿಗೆ ಹೋಗುತ್ತಿದ್ದರು. ದುಡಿಮೆಯ ಮಧ್ಯೆಯೇ ಬದುಕು ಕಳೆಯುತ್ತಾ, ಜಗತ್ತಿನ ಕೋಟ್ಯಾನುಕೋಟಿ ಕಡು ಬಡವರ ಪೈಕಿ ತಾವೂ ಒಬ್ಬರಾಗಿ ಉಳಿದುಕೊಂಡಿದ್ದ ಈ ದಂಪತಿಯ ಮಧ್ಯೆಯೂ ಅದೊಮ್ಮೆ ವಿನಾಕಾರಣ ಜಗಳವಾಯಿತು. ಅದನ್ನೇ ಮಹಾಪರಾಧವೆಂದು ಭಾವಿಸಿದ ಸೈಫ್ ಮಾಶಿ, ಮರುದಿನವೇ ಹೆಂಡತಿ ಮಕ್ಕಳನ್ನು ಬಿಟ್ಟು ಹೋಗಿ ಬಿಟ್ಟ. ಕುಟುಂಬದ ಹಿರಿಯ ಅನ್ನಿಸಿಕೊಂಡವನು, ಮನೆ ಹಾಗೂ ಎಲ್ಲರ ಮನಸ್ಸಿನಿಂದ ಎದ್ದು ಹೋದಾಗ, ಇಕ್ಬಾಲ್ ಮಾಶಿಗೆ ಬರೀ 3 ವರ್ಷ!
ಮರುದಿನದಿಂದ ಸಂಸಾರ ನಿರ್ವಹಣೆಯ ಜವಾಬ್ದಾರಿ ಇನಾಯತ್‌ಳ ಮೇಲೆ ಬಿತ್ತು. ಆಕೆ ಮಾಡುತ್ತಿದ್ದುದು ಮನೆಮನೆಯಲ್ಲಿ ಕಸ-ಮುಸುರೆ ತೊಳೆವ ಕೆಲಸ. ಅದರಿಂದ ಸಿಗುವ ಪುಡಿಗಾಸಿನಲ್ಲಿ ಕುಟುಂಬ ನಿರ್ವಹಣೆ ಸಾಧ್ಯವಿಲ್ಲ ಅನ್ನಿಸಿದಾಗಲೇ, ಹಿರಿಯ ಮಗನಿಗೆ ಮದುವೆ ಮಾಡಲು ನಿರ್ಧರಿಸಿದಳು ಇನಾಯತ್. (ಸೊಸೆ ಮನೆಗೆ ಬಂದರೆ, ಜವಾಬ್ದಾರಿ ಹೊರಲು ಮತ್ತೊಬ್ಬರು ಸಿಕ್ಕಂತಾಗತ್ತದೆ ಎಂಬುದು ಅವಳ ಲೆಕ್ಕಾಚಾರ.) ಆದರೆ ಮದುವೆ ಎಂದರೆ ಸುಮ್ಮನೆ ಮಾತೆ? ಏನೇ ಬಡತನ ಅಂದುಕೊಂಡರೂ ಹತ್ತು ಜನಕ್ಕೆ ಊಟ ಹಾಕದೆ ಮದುವೆ ಮಾಡಲು ಸಾಧ್ಯವಾ? ಹೀಗೆಲ್ಲ ಲೆಕ್ಕ ಹಾಕಿ, 600 ರೂಪಾಯಿಗಳ ಖರ್ಚಿನಲ್ಲಿ ಮಗನ ಮದುವೆ ಮಾಡಲು ನಿರ್ಧರಿಸಿದಳು ಇನಾಯತ್. ಅಷ್ಟು ಹಣವೂ ಅವಳಲ್ಲಿ ಇರಲಿಲ್ಲ. ಈ ಸಂದರ್ಭದಲ್ಲಿ, ಅದೇ ಊರಲ್ಲಿದ್ದ ಆರ್ಷದ್ ಎಂಬ ಶ್ರೀಮಂತನ ಬಳಿ ಸಾಲ ಕೇಳುವುದೆಂದೂ, ಅದನ್ನು ತೀರಿಸಲು ಕೊನೆಯ ಮಗ ಇಕ್ಬಾಲ್ ಮಾಶಿಯನ್ನು ಎರಡು ವರ್ಷದ ಅವಧಿಗೆ ಜೀತಕ್ಕೆ ಇರಿಸುವುದೆಂದೂ ನಿರ್ಧರಿಸಿದಳು. ಹೀಗೆ, ನಾಲ್ಕು ವರ್ಷದ ಎಳವೆಯಲ್ಲೇ ಇಕ್ಬಾಲ್ ಮಾಶಿ ಹತ್ತಿ ಗಿರಣಿಯ ಕಾರ್ಮಿಕನಾದ!
ಹತ್ತಿ ಗಿರಣಿಯಲ್ಲಿ, ಇಕ್ಬಾಲ್‌ನ ವಯೋವಾನದ ನೂರಾರು ಹುಡುಗರಿದ್ದರು. ಈ ಮಕ್ಕಳನ್ನು ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಳ್ಳಲಾಗುತ್ತಿತ್ತು. ಈ ಮಕ್ಕಳಿಂದ ದಿನಕ್ಕೆ 14 ಗಂಟೆ ಕೆಲಸ ಮಾಡಿಸಲಾಗುತ್ತಿತ್ತು. ಆನಂತರ ಎಲ್ಲರನ್ನೂ ಗಾಳಿ-ಬೆಳಕಿಲ್ಲದ ದೊಡ್ಡ ರೂಂನಲ್ಲಿ ಕೂಡಿ ಹಾಕಲಾಗುತ್ತಿತ್ತು. ಫ್ಯಾಕ್ಟರಿಯಲ್ಲಿ ಸಂಗ್ರಹಿಸಿ ಇಟ್ಟಿರುವ ಹತ್ತಿ ಹಾಳಾಗುತ್ತದೆ ಎಂಬ ಕಾರಣದಿಂದ ಕಿಟಕಿಗಳನ್ನೇ ತೆರೆಯುತ್ತಿರಲಿಲ್ಲ. ಪರಿಣಾಮ, ಇಕ್ಬಾಲ್ ಮತ್ತು ಗೆಳೆಯರು ಗಾಳಿ-ಬೆಳಕನ್ನು ಕಾಣದೆಯೇ ಬೆಳೆದರು. ಇದೇ ಕಾರಣಕ್ಕೆ ಕೆಲವರು ಅನಾರೋಗ್ಯಕ್ಕೆ ತುತ್ತಾದರು. ಹತ್ತಿ ಗಿರಣಿಯ ಮಾಲೀಕ ಆರ್ಷದ್ ಅದೆಂಥ ಧೂರ್ತನೆಂದರೆ, ಜೀತಕ್ಕಿದ್ದ ಮಕ್ಕಳು ಕಾಯಿಲೆಯಿಂದ ಮಲಗಿದರೆ ಅದಕ್ಕೆ ದಂಡ ಹಾಕುತ್ತಿದ್ದ. ಮಧ್ಯಾಹ್ನದ ವೇಳೆ ಮಕ್ಕಳಿಗೆ ಊಟ ಹಾಕಿ ಅದಕ್ಕೂ ಶುಲ್ಕ ಹಾಕುತ್ತಿದ್ದ. ಕೆಲಸದ ಭರದಲ್ಲಿ ಮಕ್ಕಳು ಯಾವುದಾದರೂ ಮೆಷಿನ್‌ಗೆ ಹಾನಿ ಮಾಡಿದರೆ, ಅದರ ರಿಪೇರಿಯ ಹಣವನ್ನೂ ಅವರಿಂದಲೇ ವಸೂಲಿ ಮಾಡುತ್ತಿದ್ದ. ವರ್ಷದ ಕೊನೆಗೆ ಎಲ್ಲ ಮಕ್ಕಳ ಪೋಷಕರನ್ನೂ ಕರೆದು, ಅವರಿಗೆ ಸುಳ್ಳು ಲೆಕ್ಕ ತೋರಿಸಿ, ಎಲ್ಲಾ ಸಾಲ ತೀರಬೇಕು ಅಂದ್ರೆ ಇನ್ನೂ ಐದಾರು ವರ್ಷ ಆಗುತ್ತೆ ಎಂದು ಜಬರ್ದಸ್ತ್ ದನಿಯಲ್ಲಿ ಹೇಳಿ, ಅವರನ್ನು ಬರಿಗೈಲಿ ಕಳಿಸುತ್ತಿದ್ದ. ಆರ್ಷದ್‌ನನ್ನು ಎದುರು ಹಾಕಿಕೊಂಡರೆ ಆ ಊರಲ್ಲಿ ಬದುಕುವುದೇ ಕಷ್ಟವಿತ್ತು. ಹಾಗಾಗಿ, ಯಾರೊಬ್ಬರೂ ತಿರುಗಿ ಮಾತಾಡುತ್ತಿರಲಿಲ್ಲ.
ಹೀಗೇ ಐದು ವರ್ಷ ಕಳೆದವು. ಆ ವರ್ಷದ ಕೊನೆಗೆ ಆರ್ಷದ್‌ನ ಮುಂದೆ ನಿಂತ ಇನಾಯತ್-'ನನ್ನ ಮಗನನ್ನು ಬಿಟ್ಟು ಕಳಿಸಿ ಸ್ವಾಮೀ' ಎಂದಳು. ತಕ್ಷಣವೇ ಅವಳ ಮುಂದೆ ಒಂದು ಕಾಗದ ಪತ್ರ ತೆರೆದಿಟ್ಟ ಆರ್ಷದ್-ನೀನು ಪಡೆದ ಸಾಲ, ಈಗ ಬಡ್ಡಿ, ಚಕ್ರಬಡ್ಡಿ ಸೇರಿ 13000 ರುಪಾಯಿಗಳಾಗಿವೆ. ಅಷ್ಟು ಹಣ ಪಾವತಿಸಿ, ಮಗನನ್ನು ಕರ್ಕೊಂಡು ಹೋಗು' ಎಂದ. ಈ ಬಡಪಾಯಿ ಅಷ್ಟೊಂದು ಹಣವನ್ನು ಎಲ್ಲಿಂದ ತಂದಾಳು? ಆಕೆ, ನಿರಾಶೆಯಿಂದ ಬಿಕ್ಕಳಿಸುತ್ತಲೇ ಮನೆಗೆ ಹೋದಳು.
ಆನಂತರದಲ್ಲಿ ಫ್ಯಾಕ್ಟರಿ ಮಾಲೀಕನ ದಬ್ಬಾಳಿಕೆ ಮತ್ತಷ್ಟು ಹೆಚ್ಚಿತು. ಕೆಲಸಕ್ಕಿದ್ದ ಮಕ್ಕಳು ಸಣ್ಣತಪ್ಪು ಮಾಡಿದರೂ ಸಾಕು; ಆತ ಉಗ್ರವಾಗಿ ಶಿಕ್ಷಿಸುತ್ತಿದ್ದ. ಕಬ್ಬಿಣದ ಸಲಾಕೆಯಿಂದ ಹೊಡೆಯುತ್ತಿದ್ದ. ಅಂಗೈಗೆ ಬರೆ ಹಾಕಿಸುತ್ತಿದ್ದ. ಸರಪಳಿಯಿಂದ ಕಟ್ಟಿ ಹಾಕುತ್ತಿದ್ದ. ಇಂಥ ಶಿಕ್ಷೆಗಳಿಂದ ರೋಸಿ ಹೋದ ಇಕ್ಬಾಲ್, ಅದೊಂದು ದಿನ ಫ್ಯಾಕ್ಟರಿಯ ಗೋಡೆ ಹಾರಿ ಸೀದಾ ಪೊಲೀಸ್ ಠಾಣೆಗೆ ಹೋದ. ಇನ್ಸ್‌ಪೆಕ್ಟರ್‌ನ ಮುಂದೆ ನಿಂತು ತನ್ನ ಮಾಲೀಕನ ಕ್ರೌರ್ಯವನ್ನು ಇಂಚಿಂಚಾಗಿ ಬಿಡಿಸಿ ಹೇಳಿದ. ಅವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದ. 'ನಿಮ್ಮ ಓನರ್‌ಗೆ ಈಗ್ಲೇ ಒದ್ದು ಜೈಲಿಗೆ ಹಾಕ್ತೇನೆ. ನಿಮ್ಮ ಫ್ಯಾಕ್ಟರಿ ತೋರಿಸು' ಎಂದ ಇನ್ಸ್ ಪೆಕ್ಟರ್. ಆದರೆ, ಫ್ಯಾಕ್ಟರಿಯ ಬಳಿ ಬಂದಾಗ ನಡೆದದ್ದೇ ಬೇರೆ. ಇನ್ಸ್‌ಪೆಕ್ಟರ್ ಮತ್ತು ಮಾಲೀಕ ಸೇರಿಕೊಂಡು ಇಕ್ಬಾಲ್‌ಗೆ ಕೈ-ಕಾಲಿನ ಮೂಳೆಗಳು ಮುರಿದು ಹೋಗುವಂತೆ ಹೊಡೆದರು. ದುಡ್ಡಿನ ಆಸೆಯಿಂದ ಇನ್ಸ್‌ಪೆಕ್ಟರ್‌ನೂ ಫ್ಯಾಕ್ಟರಿ ಮಾಲೀಕನ ಕಡೆಗೆ ಸೇರಿಕೊಂಡಿದ್ದ !
ಇದೇ ಸಂದರ್ಭಕ್ಕೆ ಪಾಕಿಸ್ತಾನದಲ್ಲಿದ್ದ ಮಾನವ ಹಕ್ಕುಗಳ ಕಾರ್ಯಕರ್ತರು, ದೇಶದಲ್ಲಿ ಇನ್ನೂ ಉಳಿದಿರುವ ಜೀತ ಹಾಗೂ ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸುವಂತೆ, ಬಾಲಕಾರ್ಮಿಕರ ಪೋಷಕರು, ಶ್ರೀಮಂತರಿಂದ ಪಡೆದ ಸಾಲವನ್ನು ಮನ್ನಾ ಮಾಡುವಂತೆ ಅಲ್ಲಿನ ಸರ್ಕಾರವನ್ನು ಪದೇ ಪದೆ ಒತ್ತಾಯಿಸಿದರು. ಪರಿಣಾಮವಾಗಿ, ಬಾಲಕಾರ್ಮಿಕರ ಮೇಲಿದ್ದ ಎಲ್ಲ ಸಾಲವನ್ನೂ ಮನ್ನಾ ಮಾಡಿದ ಸರ್ಕಾರ, ಎಲ್ಲ ಮಕ್ಕಳನ್ನೂ ತಕ್ಷಣವೇ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿತು. ಫ್ಯಾಕ್ಟರಿ ಮಾಲೀಕ ಆರ್ಷದ್ ಅದೆಂಥ ಧೂರ್ತನೆಂದರೆ, ಈ ಸುದ್ದಿ ತನ್ನೂರಿನ ಯಾರನ್ನೂ ತಲುಪದಂತೆ ನೋಡಿಕೊಂಡ. ಪರಿಣಾಮವಾಗಿ, ಇಕ್ಬಾಲ್ ಮತ್ತು ಸಂಗಡಿಗರು ಕತ್ತಲೆಯ ಮಧ್ಯೆಯೇ ಉಳಿದು ಹೋದರು.
ಇದಾಗಿ ನಾಲ್ಕು ತಿಂಗಳ ನಂತರ, ಕಾರ್ಮಿಕ ಸಂಘಟನೆಗಳಿಂದ ಬೃಹತ್ ರ್ಯಾಲಿ ನಡೆವ ವಿಷಯ ಇಕ್ಬಾಲ್‌ನ ಕಿವಿಗೆ ಬಿತ್ತು. ಈ ಹುಡುಗ, ತನ್ನಮಾಲೀಕ ಹಾಗೂ ಸೆಕ್ಯೂರಿಟಿಯವರ ಕಣ್ತಪ್ಪಿಸಿ ರ್ಯಾಲಿಗೆ ಹೋದ. ಮಕ್ಕಳ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಕಾರ್ಮಿಕ ಮುಖಂಡರನ್ನು ಭೇಟಿಯಾದ. ತನ್ನ ಪರಿಚಯ, ಸಂಕಟ ಹಾಗೂ ಆ ಕ್ಷಣದ ವಾಸ್ತವವನ್ನು ಹೇಳಿಕೊಂಡ. ತಮ್ಮ ದೇಶದಲ್ಲಿ ನಡೆಯುತ್ತಿರುವ ಕ್ರೌರ್ಯದ ಕಥೆಗಳನ್ನು ಕೇಳಿ, ಕಾರ್ಮಿಕ ನಾಯಕರು ತತ್ತರಿಸಿ ಹೋದರು. ರ್ಯಾಲಿಯಲ್ಲಿ ಇಕ್ಬಾಲ್‌ನದೇ ಮುಖ್ಯ ಭಾಷಣ ಎಂದು ಘೋಷಿಸಿದರು. ಈ ಹುಡುಗ, ಹತ್ತಿ ಗಿರಣಿಯಲ್ಲಿ ನಡೆಯುತ್ತಿದ್ದ ಕ್ರೌರ್ಯ ಹಾಗೂ ಮಾಲೀಕರ 'ಲೆಕ್ಕಾಚಾರ'ವನ್ನು ಎಳೆಎಳೆಯಾಗಿ ವಿವರಿಸಿದ. ಮರುದಿನವೇ ಇಕ್ಬಾಲ್‌ನ ಫ್ಯಾಕ್ಟರಿಗೆ ನುಗ್ಗಿದ ಕಾರ್ಮಿಕ ನಾಯಕರು, ಅಲ್ಲಿದ್ದ ಎಲ್ಲಾ ಬಾಲಕಾರ್ಮಿಕರನ್ನು ಬಿಡುಗಡೆ ಮಾಡಿಸಿದರು. ಇಕ್ಬಾಲ್ ಸೇರಿ ಎಲ್ಲ ಮಕ್ಕಳನ್ನೂ ಶಾಲೆಗೂ ಸೇರಿಸಿದರು. ಈ ವೇಳೆಗೆ ಇಕ್ಬಾಲ್‌ನ ಭಾಷಣ ದೇಶ ವಿದೇಶಗಳಲ್ಲೂ ಸಂಚಲನ ಉಂಟು ಮಾಡಿತ್ತು.
10ನೇ ವರ್ಷದಲ್ಲಿ ಶಾಲೆಗೆ ಸೇರಿಕೊಂಡ ಇಕ್ಬಾಲ್, ತುಂಬ ಶ್ರದ್ಧೆಯಿಂದ ಓದಲು ಕೂತ. ಈತನ ಆಸಕ್ತಿ ಗಮನಿಸಿದ ಶಿಕ್ಷಕರು, ಎರಡೇ ವರ್ಷದಲ್ಲಿ ನಾಲ್ಕನೇ ತರಗತಿಗೆ ಪ್ರಮೋಷನ್ ನೀಡಿದರು. ಇದೇ ವೇಳೆಗೆ, ತನ್ನ ಸುತ್ತಲ ಪರಿಸರದಲ್ಲಿ ಮಹತ್ವದ ಬದಲಾವಣೆಗೆ ಕಾರಣರಾದವರಿಗೆ ರಿಬಾಕ್ ಕಂಪನಿ ನೀಡುವ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಯೂ ಇಕ್ಬಾಲ್‌ನನ್ನು ಹುಡುಕಿಕೊಂಡು ಬಂತು. ಪ್ರಶಸ್ತಿ ಸ್ವೀಕರಿಸಲು ಅಮೆರಿಕದ ಮೆಸ್ಸಾಚುಸೆಟ್ಸ್ ನಗರಕ್ಕೆ ಹೋದ ಇಕ್ಬಾಲ್. ಪ್ರಶಸ್ತಿ ನೀಡಿದ ಸಂಘಟಕರು, ದೊಡ್ಡವನಾದ ಮೇಲೆ ನೀನು ಏನಾಗ್ತೀಯ ಎಂದು ಕೇಳಿದರು. 'ಕೈಲಿ ಪೆನ್ ಹಿಡಿದು ಅಕ್ಷರ ಬರೆಯಬೇಕಿರೋ ನನ್ನ ವಾರಿಗೆಯ ಮಕ್ಕಳು, ಪಾಕಿಸ್ತಾನದಲ್ಲಿ ನಟ್ಟು, ಸ್ಪಾನರ್ ಹಿಡಿದು ಜೀತ ಮಾಡ್ತಿದ್ದಾರೆ. ಅವರನ್ನೆಲ್ಲ ಜೀತದಿಂದ ಬಿಡುಗಡೆ ಮಾಡಬೇಕು ಎಂಬುದೇ ನನ್ನ ಗುರಿ. ಮುಂದೆ ಲಾಯರ್ ಆಗ್ತೇನೆ. ನೊಂದವರ ಪರವಾಗಿ ಉಚಿತವಾಗಿ ಕೇಸ್ ನಡೆಸ್ತೀನಿ' ಎಂದ ಇಕ್ಬಾಲ್. ಈ ಹುಡುಗನ ನಿಷ್ಕಪಟ ಮಾತುಗಳು ಎಲ್ಲರ ಮನಸ್ಸನ್ನೂ ತಟ್ಟಿದವು. ಮರುದಿನದಿಂದ ಅಮೆರಿಕದ ಹಲವು ಶಾಲೆಗಳಲ್ಲಿ ಭಾಷಣ ಮಾಡಲು, ಬಾಲಕಾರ್ಮಿಕರ ಸ್ಥಿತಿಗತಿ ವಿವರಿಸಲು ಇಕ್ಬಾಲ್‌ಗೆ ಕರೆ ಬಂತು. ಇಕ್ಬಾಲ್, ಎಲ್ಲ ಕಡೆಗೂ ಸಂಭ್ರಮದಿಂದ ಹೋದ. ಸಂಕೋಚವಿಲ್ಲದೆ ತನ್ನ ಅನುಭವ ಹೇಳಿಕೊಂಡ. ಅವನ ಮಾತುಗಳನ್ನೂ ತನ್ಮಯತೆಯಿಂದ ಕೇಳಿದ ಶಾಲೆಯ ಮಕ್ಕಳು- ಇಕ್ಬಾಲ್, ನೀನು ಯಾವ ಹೆಲ್ಪ್ ಬೇಕಿದ್ರೂ ಕೇಳು. ನಾವು ಸಹಾಯ ಮಾಡ್ತೇವೆ ಎಂದು ಪ್ರಾಮಿಸ್ ಮಾಡಿದವು. ಅಮೆರಿಕದ ಹಲವು ಶಾಲೆಗಳಲ್ಲಿ ಇಕ್ಬಾಲ್ ಮಾಡಿದ ಭಾಷಣಗಳು ಅದೆಷ್ಟು ಪಾಪ್ಯುಲರ್ ಆದುವೆಂದರೆ, ಆ ಭಾಷಣದ ಕೆಸೆಟ್‌ಗಳು ಅಮೆರಿಕದಿಂದ ನೇರವಾಗಿ ಪಾಕಿಸ್ತಾನಕ್ಕೆ ಬಂದವು. ಇಕ್ಬಾಲ್‌ನ ಮಾತು, ಅದರ ಹಿಂದಿದ್ದ ಸದಾಶಯ ಬಾಯಿಂದ ಬಾಯಿಗೆ ತಲುಪಿದ್ದರ ಪರಿಣಾಮವಾಗಿ, 1993ರಲ್ಲಿ 6000ಕ್ಕೂ ಹೆಚ್ಚು ಮಕ್ಕಳು, ಪಾಕಿಸ್ತಾನದಲ್ಲಿ ಫ್ಯಾಕ್ಟರಿಗಳ ಕೆಲಸ ತ್ಯಜಿಸಿ ಶಾಲೆಗೆ ಸೇರಿದರು. ಈ ಬೆಳವಣಿಗೆಯಿಂದ ಸಿಟ್ಟಾದ ಫ್ಯಾಕ್ಟರಿಗಳ ಮಾಲೀಕರು, ಇಕ್ಬಾಲ್‌ನ ವಿರುದ್ಧ ನಿಂತಲ್ಲೇ ಹಲ್ಲು ಮಸೆದರು.
ಇದೇನೂ ಗೊತ್ತಿಲ್ಲದ ಇಕ್ಬಾಲ್, ತನ್ನ ವಾರಿಗೆಯ ಹುಡುಗರೊಂದಿಗೆ ಸೈಕಲ್ ಹೊಡೆಯುತ್ತಾ, ಮರಕೋತಿ ಆಟವಾಡುತ್ತಾ ಆರಾಮಾಗಿದ್ದ. ಆಗಲೇ, ಅನಾಹುತ ನಡೆದು ಹೋಯಿತು. 1995ರ ಏಪ್ರಿಲ್ 16ರಂದು, ಗೆಳೆಯರೊಂದಿಗೆ ಸೈಕಲ್ ತುಳಿಯುತ್ತಿದ್ದ ಇಕ್ಬಾಲ್‌ನ ಮೇಲೆ ಅಪರಿಚಿತನೊಬ್ಬ ಗುಂಡು ಹಾರಿಸಿ ಕೊಂದೇ ಬಿಟ್ಟ. ಈ ಕೊಲೆಯ ಹಿಂದೆ ಫ್ಯಾಕ್ಟರಿ ಮಾಲೀಕರುಗಳ ಮಾಫಿಯಾದ ಕೈವಾಡವಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರು ಕೂಗು ಹಾಕಿದರು. ಇಕ್ಬಾಲ್‌ನ ತಾಯಿಯೂ ಹಾಗೇ ಹೇಳಿದಳು. ಏನೂ ಪ್ರಯೋಜನವಾಗಲಿಲ್ಲ. ಇಕ್ಬಾಲ್‌ನದು ಆಕಸ್ಮಿಕ ಸಾವು ಎಂದು ಷರಾ ಬರೆದು ಫೈಲ್ ಮುಚ್ಚಲಾಯಿತು. 10ನೇ ವರ್ಷಕ್ಕೆ ಜಗತ್ಪ್ರಸಿದ್ಧಿ ಪಡೆದು, 12ನೇ ವರ್ಷಕ್ಕೆ ಸತ್ತೇ ಹೋದ ಇಕ್ಬಾಲ್‌ನ ದುರಾದೃಷ್ಟ ಕಂಡ ಪಾಕಿಸ್ತಾನದ ಜನ, ಅಯ್ಯೋ ಪಾಪ ಎಂದು ಲೊಚಗುಟ್ಟಿ, ನಂತರ ಸುಮ್ಮನಾದರು.
'ಬಾಲಕಾರ್ಮಿಕ ವಿಮೋಚನೆಗಾಗಿ ಹೋರಾಡಿದ 12 ವರ್ಷದ ಇಕ್ಬಾಲ್ ಹತ್ಯೆ' ಎಂಬ ಸುದ್ದಿ, ಅಮೆರಿಕದ ಟೊರಾಂಟೋ ಸ್ಟಾರ್ ಪತ್ರಿಕೆಯಲ್ಲೂ ವಿವರವಾಗಿ ಪ್ರಕಟವಾಗಿತ್ತು. ಶಾಲೆಗೆ ತೆರಳುವ ಮುನ್ನ ಕಾರ್ಟೂನ್ ನೋಡುವ ಉದ್ದೇಶದಿಂದ ಕೆನಡಾದಲ್ಲಿದ್ದ ಕ್ರೆಗ್ ಕೇಲ್‌ಬರ್ಗರ್ ಎಂಬ ವಿದ್ಯಾರ್ಥಿ ಆ ಪತ್ರಿಕೆಯನ್ನು ಕೈಗೆತ್ತಿಕೊಂಡ. ಇಕ್ಬಾಲ್‌ನ ಮಾತು, ಆಶಯ ಹಾಗೂ ಅವನ ಈಡೇರದ ಕನಸುಗಳ ಬಗ್ಗೆ ಓದುತ್ತಿದ್ದಂತೆಯೇ ಕ್ರೆಗ್‌ನ ಕಣ್ತುಂಬಿ ಬಂತು. ಆತ ಪತ್ರಿಕೆಯನ್ನು ಶಾಲೆಗೂ ತಂದ. ಮಧ್ಯಾಹ್ನದ ಬಿಡುವಿನಲ್ಲಿ ಗೆಳೆಯರ ಮುಂದೆ ನಿಂತು ಇಕ್ಬಾಲ್‌ನ ಸುದ್ದಿಯನ್ನು ಗಟ್ಟಿಯಾಗಿ ಓದಿದ. ನಂತರ-'ಫ್ರೆಂಡ್ಸ್, ನಮಗೆಲ್ಲಾ ಈಗ 12 ವರ್ಷ. ನಮ್ಮದೇ ವಯಸ್ಸಿನ ಇಕ್ಬಾಲ್ ಒಂದು ಜಾಗೃತಿಯ ಕೆಲಸ ಆರಂಭಿಸಿ, ಅದನ್ನು ಅರ್ಧಕ್ಕೇ ನಿಲ್ಲಿಸಿ ಹೋಗಿದ್ದಾನೆ. ಆತ, ನಮ್ಮೆಲ್ಲರ ಗೆಳೆಯ ಅಂದುಕೊಳ್ಳೋಣ. ಅವನು ಆರಂಭಿಸಿದ ಕೆಲಸ ನಿಲ್ಲದಂತೆ ನೋಡಿಕೊಳ್ಳೋಣ. ಸತ್ತು ಹೋದಾಗ, ಇಕ್ಬಾಲ್‌ಗೆ 12 ವರ್ಷವಾಗಿತ್ತು ಎಂಬುದನ್ನೇ ನೆನಪಿಟ್ಟುಕೊಂಡು, ಪ್ರತಿಯೊಬ್ಬರೂ 12 ಡಾಲರ್ ಹಣವನ್ನು ದೇಣಿಗೆ ನೀಡೋಣ. ಬಾಲಕಾರ್ಮಿಕರ ವಿಮೋಚನೆಗಾಗಿ Free the children ಎಂಬ ಸಂಘಟನೆ ಆರಂಭಿಸೋಣ' ಎಂದ. ಸಹಪಾಠಿಗಳಿಂದ ಕ್ರೆಗ್‌ಗೆ ಭಾರೀ ಬೆಂಬಲ ದೊರೆಯಿತು. ನಾಲ್ಕೇ ದಿನದಲ್ಲಿ 1000 ಡಾಲರ್ ಹಣ ಸಂಗ್ರಹವಾಯಿತು.
ಆನಂತರದಲ್ಲಿ ಕ್ರೆಗ್ ಅಮೆರಿಕದ ಹಲವು ಶಾಲೆಗಳಿಗೆ ಭೇಟಿ ಕೊಟ್ಟ. ಶಾಲೆಯ ಮಕ್ಕಳು ಹಾಗೂ ಮುಖ್ಯಸ್ಥರ ಮುಂದೆ ಇಕ್ಬಾಲ್‌ನ ಕನಸುಗಳ ಬಗ್ಗೆ ಹೇಳಿದ. ಆತ ಹಚ್ಚಿ ಹೋದ ಹಣತೆ ಆರದಂತೆ ನೋಡಿಕೊಳ್ಳೋಣ. ನಿಮ್ಮಿಂದ ಸಾಧ್ಯವಿರುವಷ್ಟು ಸಹಾಯ ಮಾಡಿ ಎಂದು ಪ್ರಾರ್ಥಿಸಿದ. ಸತ್ತು ಹೋಗಿರುವ, ಅಪರಿಚಿತನೂ ಆಗಿದ್ದ ಪಾಕಿಸ್ತಾನದ ಹುಡುಗನ ನೆನಪನ್ನು ಶಾಶ್ವತವಾಗಿಸಲು ಅಮೆರಿಕದ ಹುಡುಗನೊಬ್ಬ ಮುಂದಾಗಿರುವ ಸಂಗತಿ; ದೇಶ, ಭಾಷೆ ಹಾಗೂ ಧರ್ಮದ ವ್ಯಾಪ್ತಿ ಮೀರಿ ಬೆಳೆದ ಈ ಬಾಂಧವ್ಯ ವಿಶ್ವಾದ್ಯಂತ ಸುದ್ದಿಯಾಯಿತು. ಕ್ರೆಗ್ ಆರಂಭಿಸಿದ ಫೌಂಡೇಷನ್‌ಗೆ, ಜಗತ್ತಿನ ಎಲ್ಲೆಡೆಯಿಂದ ದೇಣಿಗೆ ಹರಿದು ಬಂತು. ಇಕ್ಬಾಲ್‌ಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ನೀಡಿದ್ದ ರಿಬಾಕ್ ಕಂಪನಿ 20000 ಡಾಲರ್‌ಗಳನ್ನು ದೇಣಿಗೆಯಾಗಿ ನೀಡಿತು. ಇಕ್ಬಾಲ್‌ನ ನೆನಪನ್ನು ಚಿರವಾಗಿಸುವ ಸದಾಶಯಕ್ಕೆ ಸ್ಪಂದಿಸಿ ಸಂಗ್ರಹವಾದ ಒಟ್ಟು ಹಣ ಎಷ್ಟು ಗೊತ್ತೆ? 1,40,000 ಡಾಲರ್! (ನಮ್ಮ ರೂಪಾಯಿ ಲೆಕ್ಕದಲ್ಲಿ 90 ಲಕ್ಷ!) ಮುಂದೇನಾಯ್ತು ಗೊತ್ತೆ? ಈ ಹಣದೊಂದಿಗೆ ನೇರವಾಗಿ ಪಾಕಿಸ್ತಾನಕ್ಕೆ, ಇಕ್ಬಾಲ್ ಹುಟ್ಟಿದ ಹಳ್ಳಿಗೇ ಹೋದ ಕ್ರೆಗ್, ಆ ಊರಲ್ಲಿ ಇಕ್ಬಾಲ್‌ನ ನೆನಪಿಗೆಂದು ಒಂದು ಶಾಲೆ ಕಟ್ಟಿಸಿದ!
ಈಗ ಕೆನಡಾದಲ್ಲಿರುವ ಕ್ರೆಗ್ ಕೇಲ್ ಬರ್ಗರ್, ಎಂಬಿಎ ಪದವೀಧರ! ಆತ ಈಗಲೂ ಇಕ್ಬಾಲ್‌ನ ಕನಸುಗಳನ್ನು ನನಸು ಮಾಡಲು ಶ್ರಮಿಸುತ್ತಿದ್ದಾನೆ. ಆತ ಆರಂಭಿಸಿರುವ Free the children ಸಂಘಟನೆ, ವಿಶ್ವದ ಹಲವು ನಗರಗಳಲ್ಲಿ 400ಕ್ಕೂ ಹೆಚ್ಚು ಶಾಲೆಗಳನ್ನು ನಿರ್ಮಿಸಿದೆ. ಆಸ್ಪತ್ರೆಗಳನ್ನು ಆರಂಭಿಸಲು ಸಾವಿರಾರು ಡಾಲರ್‌ಗಳನ್ನು ದೇಣಿಗೆಯಾಗಿ ನೀಡಿದೆ. ಬಾಲಕಾರ್ಮಿಕ ಪದ್ಧತಿಯ ವಿಮೋಚನೆಗಾಗಿ ನಿರಂತರ ಶ್ರಮಿಸುತ್ತಿದೆ. ಬ್ರೆಜಿಲ್, ಪಾಕಿಸ್ತಾನ, ಭಾರತ, ಸಿಂಗಾಪುರ, ಆಸ್ಟ್ರೇಲಿಯಾಗಳಲ್ಲಿ ಈ ಸಂಘಟನೆಯ ಶಾಖೆಗಳಿವೆ. ಇದನ್ನು ಗಮನಿಸಿದವರು ಕ್ರೆಗ್‌ನ ಮುಂದೆ ನಿಂತು-'ಯು ಆರ್ ಗ್ರೇಟ್' ಎಂದರೆ, ಆತ ಸಂಕೋಚದಿಂದ ಹೇಳುತ್ತಾನೆ: 'ಒಬ್ಬ ಮನುಷ್ಯ ಹೇಗೆ ಬದುಕಬೇಕು, ಸಮಾಜದಲ್ಲಿ ಹೇಗೆ ಬದಲಾವಣೆ ತರಬೇಕು ಎಂಬುದನ್ನು ಇಕ್ಬಾಲ್ ತೋರಿಸಿಕೊಟ್ಟಿದ್ದಾನೆ. ಅವನು ಹಚ್ಚಿದ ದೀಪ ಆರದಂತೆ ನೋಡಿಕೊಳ್ಳುವ ಕೆಲಸವನ್ನು ಮಾತ್ರ ನಾನು ಮಾಡುತ್ತಿದ್ದೇನೆ. ಇದರಲ್ಲಿ ಹೆಚ್ಚುಗಾರಿಕೆ ಏನೂ ಇಲ್ಲ. ಇಕ್ಬಾಲ್ ನನ್ನ ದೇಶದವನಲ್ಲ, ಧರ್ಮದವನಲ್ಲ, ಆತನನ್ನು ನಾನು ಪ್ರತ್ಯಕ್ಷವಾಗಿ ನೋಡಲೂ ಇಲ್ಲ. ಆದರೂ, ನಮ್ಮ ಕರುಳುಗಳು ಬೆಸೆದುಕೊಂಡಿವೆ. ಮನಸುಗಳು ಮಾತಾಡಿಕೊಂಡಿವೆ. ಬಾಲಕಾರ್ಮಿಕ ಪದ್ಧತಿ ವಿಶ್ವಾದ್ಯಂತ ಕೊನೆಯಾಗಲಿ. ಅಂಥದ್ದೊಂದು ಕ್ಷಣಕ್ಕೆ ಹಂಬಲಿಸಿದ ಇಕ್ಬಾಲ್‌ನ ಆತ್ಮಕ್ಕೆ ಶಾಂತಿ ಸಿಗಲಿ. ಅದಷ್ಟೇ ನನ್ನ ಅನುದಿನದ ಪ್ರಾರ್ಥನೆ'.
ಈಗ ಹೇಳಿ: ಕರುಳು ತಾಕುವಂತಿರುವ ಈ ಮಧುರ ಬಾಂಧವ್ಯಕ್ಕೆ ಯಾವ ಹೆಸರಿಡೋಣ?
- ಎ.ಆರ್. ಮಣಿಕಾಂತ್
No comments:
Post a Comment