Tuesday, 3 December 2013

ದೇವರಂಥ ಮನುಷ್ಯರ ಪ್ರಾರ್ಥನೆಯೇ ನನ್ನನ್ನು ಉಳಿಸಿದೆ...

ದೇವರಂಥ ಮನುಷ್ಯರ ಪ್ರಾರ್ಥನೆಯೇ ನನ್ನನ್ನು ಉಳಿಸಿದೆ...

ಭಾವತೀರಯಾನ- ಎ.ಆರ್.ಮಣಿಕಾಂತ್

ಪ್ರಸಂಗ 1: ಇಂಗ್ಲೆಂಡ್ ವಿರುದ್ಧದ ಮ್ಯಾಚ್ ಗೆದ್ದ ಖುಷಿಗೆ ಸೌರವ್ ಗಂಗೂಲಿ, ಜೆರ್ಸಿ ಬಿಚ್ಚಿ ಅದನ್ನು ಗಿರಗಿರನೆ ತಿರುಗಿಸಿ ಗೆಲುವಿನ ಕೇಕೆ ಹಾಕಿದ್ದನಲ್ಲ; ಆ ಪಂದ್ಯವನ್ನೊಮ್ಮೆ ನೆನಪಿಸಿಕೊಳ್ಳಿ. ಅವತ್ತು ಭಾರತದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ಕಡಿಮೆ ಸ್ಕೋರ್‌ಗೆ ಔಟಾಗಿದ್ದ ಸಂದರ್ಭದಲ್ಲಿ ಕ್ರೀಸ್‌ಗೆ ಬಂದವನು ಯುವರಾಜ್‌ಸಿಂಗ್. ನಂತರದ ಸ್ವಲ್ಪ ಹೊತ್ತಿಗೇ ಈತನಿಗೆ ಜೊತೆಯಾದವನು ಮೊಹಮ್ಮದ್ ಕೈಫ್. ಮುಂದೇನಾಯ್ತು ಎಂಬುದೀಗ ಇತಿಹಾಸ. ಇವರಿಬ್ಬರ ಅಪರೂಪದ ಜೊತೆಯಾಟ ಇಂಗ್ಲೆಂಡಿನ ಎಲ್ಲಾ ನಿರೀಕ್ಷೆಗಳನ್ನೂ ಉಲ್ಟಾ ಮಾಡಿತು. ಗೆಲ್ಲಲು ಇನ್ನೂ 42 ರನ್‌ಗಳ ಅಗತ್ಯವಿದ್ದಾಗಲೇ ಯುವರಾಜ್‌ಸಿಂಗ್ ಔಟಾಗಿಬಿಟ್ಟ. ಗೆಲುವಿನ ರನ್ ಹೊಡೆವ ತನಕ ಕ್ರೀಸ್‌ನಲ್ಲಿ ಇರಲು ಆಗಲಿಲ್ಲವಲ್ಲ ಎಂಬ ಸಂಕಟದಿಂದ ಕಣ್ಣೀರು ಹಾಕುತ್ತಾ, ಪೆವಿಲಿಯನ್‌ಗೆ ನಡೆದು ಬಂದ. ಅದನ್ನು ಕಂಡವರು- 'ಛೆ, ಯುವಿ ಅಳ್ತಾ ಇದಾನಲ್ರೀ' ಎನ್ನುತ್ತ ತಾವೂ ಕಣ್ತುಂಬಿಕೊಂಡಿದ್ದರು.ಪ್ರಸಂಗ:2- 2007ರಲ್ಲಿ ನಡೆದ ಟ್ವೆಂಟಿ -20 ಪಂದ್ಯದ ಸಂದರ್ಭ. ಅವತ್ತು, ಬೌಂಡರಿ ಹೊಡೆದ ಎಂಬ ಕಾರಣಕ್ಕೆ ಯುವರಾಜ್‌ಸಿಂಗ್‌ನನ್ನು ವಿನಾಕಾರಣ ಹಂಗಿಸಿದವನು ಇಂಗ್ಲೆಂಡ್‌ನ ಆಂಡ್ರ್ಯೂ ಫ್ಲಿಂಟಾಫ್. ಅವಕಾಶ ಸಿಕ್ಕಿದ್ದರೆ, ಫ್ಲಿಂಟಾಫ್‌ಗೆ ಮೈದಾನದಲ್ಲೇ ನಾಲ್ಕು ಲಾತಾ ಕೊಡಲು ಯುವಿ ಸಿದ್ಧನಾಗಿದ್ದ. ಆದರೆ ಅಂಪೈರ್ ಅದಕ್ಕೆ ಅವಕಾಶ ಕೊಡಲಿಲ್ಲ. ಪರಿಣಾಮ, ಫ್ಲಿಂಟಾಫ್ ಮೇಲಿನ ಸಿಟ್ಟನ್ನು ಯುವಿ ಬೌಲರ್ ಸ್ಟುವರ್ಟ್ ಬ್ರಾಡ್ ಮೇಲೆ ತೀರಿಸಿಕೊಂಡ. ಆ ಓವರ್‌ನ ಆರು ಎಸೆತಗಳನ್ನೂ ಯುವಿ ಸಿಕ್ಸರ್‌ಗೆ ಅಟ್ಟಿದಾಗ ಭಾರತೀಯರು ಮಾತ್ರವಲ್ಲ, ಇಂಗ್ಲೆಂಡಿನ ಜನರು ಉದ್ಗರಿಸಿದ್ದರು; ಯವ್ವಿ ಯುವ್ವೀ...ಪ್ರಸಂಗ 3:- 2011ರಲ್ಲಿ ಭಾರತ ವಿಶ್ವಕಪ್ ಗೆದ್ದ ಸಂದರ್ಭ. ಉಳಿದ ಆಟಗಾರರೆಲ್ಲ ಗೆಲುವಿನ ಹುಮ್ಮಸ್ಸಿನಿಂದ ಕೇಕೆ ಹಾಕಿ ಕುಣಿಯುತ್ತಿದ್ದರೆ, ಒಬ್ಬ ಯುವರಾಜ್‌ಸಿಂಗ್ ಮಾತ್ರ, ಗೆಳೆಯ ಹರಭಜನ್‌ಸಿಂಗ್‌ನನ್ನು ತಬ್ಬಿಕೊಂಡು ಭಾವುಕನಾಗಿ ಕಣ್ಣೀರು ಹಾಕುತ್ತಿದ್ದ. ಅದನ್ನು ಕಂಡವರೆಲ್ಲ ಸಂತೋಷ ತಡೆಯಲಿಕ್ಕಾಗದೆ ಅಳ್ತಾ ಇದಾನೆ ಕಣ್ರೀ ಎಂದು ಕಮೆಂಟ್ ಮಾಡಿದ್ದರು. ಎರಡು ತಿಂಗಳ ನಂತರ, ಯುವರಾಜ್‌ಗೆ ಕ್ಯಾನ್ಸರ್ ಇದೆ ಎಂದು ತಿಳಿದಾಗ-'ಈ ಸುದ್ದಿ ಸುಳ್ಳಾಗಲಿ ದೇವ್ರೇ' ಎಂದು ಪ್ರಾರ್ಥಿಸಿದ್ದರು. ಅವನ ಆರೋಗ್ಯ ಸುಧಾರಿಸಲೆಂದು ಪೂಜೆ ಮಾಡಿಸಿದ್ದರು. ಪತ್ರ ಬರೆದು ಶುಭ ಹಾರೈಸಿದ್ದರು. ಮೊದಲ ಹಂತದ ಚಿಕಿತ್ಸೆ ಮುಗಿದಾಗ, ಅಮೆರಿಕದ ಕ್ಯಾನ್ಸರ್ ಆಸ್ಪತ್ರೆಯವರು ಬಿಡುಗಡೆ ಮಾಡಿದ ಯುವರಾಜ್‌ನ ಗುರುತೇ ಸಿಗದಂಥ ಫೋಟೋ ನೋಡಿ-'ಛೆ, ಹೇಗಿದ್ದ ಹುಡುಗ ಹೇಗಾಗಿ ಹೋದನಲ್ಲ?' ಎಂದು ಪೇಚಾಡಿಕೊಂಡಿದ್ದರು. ಪಕ್ಕದ ಮನೆಯ ಹುಡುಗನೇನೋ ಎಂಬಂತೆ ಅವನ ಆರೋಗ್ಯದ ಸುದ್ದಿಯನ್ನು ಮತ್ತೆ ಮತ್ತೆ ವಿಚಾರಿಸಿಕೊಂಡಿದ್ದರು. ಹನ್ನೊಂದು ತಿಂಗಳ ತರುವಾಯ, ಕ್ಯಾನ್ಸರ್‌ನಿಂದ ಗುಣಮುಖನಾಗಿ, ಮತ್ತೆ ಕ್ರಿಕೆಟ್ ಅಂಗಳಕ್ಕೆ ಬಂದು ರಾಕೆಟ್‌ನ ವೇಗದಲ್ಲಿಯೇ ಆತ ಚೆಂಡನ್ನು ಸಿಕ್ಸರ್‌ಗೆ ಎತ್ತಿದಾಗ- 'ಥ್ಯಾಂಕ್ಸ್ ಗಾಡ್, ಯುವಿ ಈಸ್ ಬ್ಯಾಕ್‌' ಎಂದು ಉದ್ಗರಿಸಿದ್ದರು.
ಕಳೆದ ಒಂದೂವರೆ ದಶಕದಲ್ಲಿ ಕ್ರೀಡಾ ಪ್ರೇಮಿಗಳಿಗೆ ಉಳಿದೆಲ್ಲರಿಗಿಂತ ಹೆಚ್ಚು ಇಷ್ಟವಾದವನು ಯುವರಾಜ್‌ಸಿಂಗ್. ಆತ ಧೋನಿಯಂತೆ ಮಿಸ್ಟರ್ ಕೂಲ್ ಅಲ್ಲ. ತೆಂಡೂಲ್ಕರ್‌ನಂಥ ಮಹಾನ್ ಆಟಗಾರನಲ್ಲ. ಸೆಹ್ವಾಗ್‌ನಂತೆ ಎಕ್ ಮಾರ್ ಧೋ ತುಕಡಾ ಎಂಬಂಥ ಮನೋಭಾವದವನಲ್ಲ. ಕೊಹ್ಲಿಯಂತೆ ರನ್ ಮಿಶನ್ ಅಲ್ಲ. ರಾಹುಲ್ ದ್ರಾವಿಡ್ ಥರದ ಮಹಾನ್ ನಂಬಿಗಸ್ತನೂ ಅಲ್ಲ. ಆದರೆ, ಭಾರತ ಸಂಕಷ್ಟದಲ್ಲಿದೆ ಎಂದುಕೊಂಡಾಗಲೆಲ್ಲ ಈತ ಯಾರೂ ನಿರೀಕ್ಷಿಸದಂಥ ಆಟವಾಡಿದ್ದಾನೆ. ಏಕಾಂಗಿಯಾಗಿ ಹೋರಾಡಿದ್ದಾನೆ. ಆತ ಚೆನ್ನಾಗಿ ಆಡಿದಾಗಲೆಲ್ಲ ಭಾರತ ಗೆದ್ದಿದೆ. ಆತ ಸಿಕ್ಸರ್ ಹೊಡೆದಾಗಲೆಲ್ಲ ನಮ್ಮ ಮನಸ್ಸು ಅರಳಿದೆ. ಎದುರಾಳಿ ಆಟಗಾರರ ಮೇಲೆ ಆತ ಸಿಟ್ಟಾದಾಗ ನಮಗೂ ಕೋಪ ಬಂದಿದೆ. ಮೈದಾನದಲ್ಲಿ 'ಜನಗಣಮನ' ಹೇಳುವ ಸಂದರ್ಭದಲ್ಲಿ ಆತ ಭಾವುಕನಾದಾಗ ನಮಗೂ ಕಣ್ತುಂಬಿಬಂದಿದೆ. ಇಂಥ ಕಾರಣಗಳಿಂದಲೇ ಅವನು ಇಷ್ಟವಾಗ್ತಾನಾ? ಇರಬೇಕು...2011ರ ವಿಶ್ವಕಪ್‌ನಲ್ಲಿ ಮ್ಯಾನ್ ಆಫ್ ದ ಸೀರೀಸ್ ಎಂಬ ಪ್ರಶಸ್ತಿಗೆ ಪಾತ್ರನಾಗುವವರೆಗೂ, ಯುವರಾಜ್‌ಸಿಂಗ್ ಮೇಲೆ ಹಲವು ದೂರುಗಳಿದ್ದವು. 'ಹುಡುಗ ಶೋಕಿಲಾಲನಂತೆ. ಅವನಿಗೆ ಗರ್ಲ್‌ಫ್ರೆಂಡ್ಸ್ ಜಾಸ್ತಿಯಂತೆ. ವಿಪರೀತ ಅಹಂಕಾರವಂತೆ. ಶಿಸ್ತು ಎಂಬುದೇ ಇಲ್ಲವಂತೆ. ಮ್ಯಾಚ್ ಮುಗಿದ ತಕ್ಷಣ ನೈಟ್‌ಕ್ಲಬ್‌ಗೆ ಹೋಗಿ ಬಿಡ್ತಾನಂತೆ. ವಾಪಸ್ ಬರೋದು ಮಧ್ಯರಾತ್ರಿಗಂತೆ. ಯಾರಾದ್ರೂ ಬುದ್ಧಿ ಹೇಳಲು ಹೋದ್ರೆ ತಿರುಗಿ ಮಾತಾಡಿ ಬಿಡ್ತಾನಂತೆ... ಇತ್ಯಾದಿ, ಇತ್ಯಾದಿ...'ಸ್ವಾರಸ್ಯವೆಂದರೆ, ಈ ಯಾವ ಆರೋಪಗಳಿಗೂ ಯುವರಾಜ್ ಉತ್ತರಿಸಲಿಲ್ಲ. ತನ್ನ ಪಾಡಿಗೆ ತಾನು ಬಿಂದಾಸ್ ಆಗಿ ಉಳಿದುಬಿಟ್ಟ. ಆದರೆ, ವಿಶ್ವಕಪ್ ಪಂದ್ಯ ಮುಗಿದು ಐಪಿಎಲ್ ಪಂದ್ಯಗಳು ಶುರುವಾಗಿ, ಅದರ ಬೆನ್ನಿಗೇ ಯುವರಾಜ್‌ಸಿಂಗ್‌ಗೆ ಕ್ಯಾನ್ಸರ್ ಇದೆ ಎಂಬ ಸಂಗತಿ ಮೊದಲು ಗುಟ್ಟಾಗಿ ಕೇಳಿಸಿ, ಕೆಲವೇ ದಿನಗಳಲ್ಲಿ ನಿಜವೂ ಆಗಿಹೋಯ್ತಲ್ಲ; ಅವತ್ತಿನಿಂದಲೇ ಯುವರಾಜ್‌ಸಿಂಗ್ ಎಂಬ ಪರಮ ಕೋಪಿಷ್ಟ, ದಿಢೀರನೆ ಬದಲಾಗಿ ಹೋದ. ಹೀಗೆ ಬದಲಾದ ವ್ಯಕ್ತಿಯೇ ತನ್ನ ಬಾಲ್ಯ, ಬದುಕು, ಕನಸು, ಕಣ್ಣೀರು, ಸಾಧನೆ, ವೇದನೆ ಎಲ್ಲವನ್ನೂ ಹೇಳಿಕೊಂಡಿದ್ದಾನೆ. ಆ ಮಾತುಗಳ ಸಾರಾಂಶ ಇಲ್ಲಿದೆ.'ನನ್ನ ತಂದೆ ಯೋಗರಾಜ್‌ಸಿಂಗ್. ಅವರು, ಕಪಿಲ್‌ದೇವ್ ಜೊತೆಯಲ್ಲೇ ಆಟದ ಅಂಗಳಕ್ಕೆ ಬಂದವರು. ಹಿರಿಯ ಕ್ರಿಕೆಟಿಗರೆಲ್ಲ ಹೇಳುವುದನ್ನೇ ನಂಬುವುದಾದರೆ, ನನ್ನ ತಂದೆ ಕಪಿಲ್‌ಗಿಂತ ಮೂರುಪಟ್ಟು ಹೆಚ್ಚು ಪ್ರತಿಭಾವಂತ. ಆದರೆ ಬ್ಯಾಡ್‌ಲಕ್. ಅವರಿಗೆ ಹೆಚ್ಚು ಅವಕಾಶಗಳೇ ಸಿಗಲಿಲ್ಲ. ಕ್ರಿಕೆಟ್‌ನ ಕೆಟ್ಟ ರಾಜಕೀಯಕ್ಕೆ ಆತ ಬಲಿಯಾದರು. ಭಾರತ ಕ್ರಿಕೆಟ್ ತಂಡದಲ್ಲಿ ತಮಗೆ ಪ್ರವೇಶ ಸಿಗುವುದಿಲ್ಲ ಅನ್ನಿಸಿದಾಗ ನನ್ನ ತಂದೆ ನಿಂತ ನಿಲುವಿನಲ್ಲಿಯೇ ಶಪಥ ಮಾಡಿದರಂತೆ; ನನ್ನ ಮಗ ಇದ್ದಾನೆ. ಅವನನ್ನು ಹೇಗೆ ತಯಾರು ಮಾಡ್ತೀನೋ ನೋಡ್ತಿರಿ. ನಾನು ಬದುಕಲ್ಲಿ ಏನೇನು ಕಳ್ಕೊಂಡಿದೀನೋ ಅದನ್ನೆಲ್ಲ ನನ್ನ ಮಗನ ಮೂಲಕ ಪಡ್ಕೋತೇನೆ...'ನಿಜ ಹೇಳಬೇಕೆಂದರೆ, ಬಾಲ್ಯದಲ್ಲಿ ನನಗೆ ಕ್ರಿಕೆಟ್ ಬಗ್ಗೆ ಆಸಕ್ತಿ ಇರಲಿಲ್ಲ. ಸ್ಕೇಟಿಂಗ್‌ನಲ್ಲಿ ತುಂಬಾ ಆಸಕ್ತಿ ಇತ್ತು. ಮಿಡ್ಲ್ ಸ್ಕೂಲ್‌ನಲ್ಲಿದ್ದಾಗ ಸ್ಕೇಟಿಂಗ್‌ನಲ್ಲಿ ಸ್ಟೇಟ್ ಲೆವೆಲ್ ಚಾಂಪಿಯನ್ ಆಗಿದ್ದೆ. ಹೆಮ್ಮೆಯಿಂದ ಟ್ರೋಫಿ ತಗೊಂಡು ಮನೆಗೆ ಹೋದೆ. ಅದನ್ನು ಕಂಡ ಅಪ್ಪ ಕಿಡಿಕಿಡಿಯಾದ್ರು. ಟ್ರೋಫೀನ ತೆಗೆದು ಬೀದಿಗೆ ಎಸೆದ್ರು. ನನ್ನ ಪಾಲಿಗೆ ಅದು ದೊಡ್ಡ ಶಾಕ್. ಮನೆಯ ಮೂಲೆಯಲ್ಲಿ ನಿಂತು ಬಿಕ್ಕಳಿಸ್ತಾ ಇದ್ದೆ. ಆಗ ಅಪ್ಪ ಬಂದು, ಸಾರಿ ಕೇಳಿ ಹೇಳಿದ್ರು: ನಿನ್ನ ಭವಿಷ್ಯ ಕ್ರಿಕೆಟ್‌ನಲ್ಲಿದೆ ಯುವೀ. ಸ್ಕೇಟಿಂಗ್‌ಗೆ ಖಂಡಿತ ಭವಿಷ್ಯವಿಲ್ಲ. ಅಪ್ಪ ಇಷ್ಟಕ್ಕೇ ಸುಮ್ಮನಾಗಲಿಲ್ಲ. ಮರುದಿನದಿಂದಲೇ ನನಗೆ ಕ್ರಿಕೆಟ್‌ನ ಪಾಠ ಆರಂಭಿಸಿದರು. ಮನೆಯ ಮುಂದಿನ ಹೂದೋಟವನ್ನು ಕ್ರಿಕೆಟ್ ಮೈದಾನವಾಗಿ ಪರಿವರ್ತಿಸಿದರು. ಮಹಡಿಯ ಮೇಲೆ ಫ್ಲಡ್ ಲೈಟ್ ಹಾಕಿಸಿ, ಮಧ್ಯರಾತ್ರಿ ಹನ್ನೆರಡು ಗಂಟೆಯವರೆಗೂ ನನಗೆ ತರಬೇತಿ ಕೊಡ್ತಾ ಇದ್ರು. ಈಗ ಹಗಲು-ರಾತ್ರಿ ಪಂದ್ಯ ಅಂತೀವಲ್ಲ; ಅದರ ಅನುಭವ ನನಗೆ 25 ವರ್ಷ ಮೊದಲೇ ಆಗಿತ್ತು!ಸಂಭ್ರಮದ ಬದುಕಿನಲ್ಲಿ ಒಂದೊಂದೇ ಯಶಸ್ಸು ನನ್ನದಾಗುತ್ತಾ ಬಂತು. 19 ವರ್ಷ ವಯಸ್ಸಿನೊಳಗಿನ ಭಾರತೀಯ ತಂಡಕ್ಕೆ ನಾನು ಕ್ಯಾಪ್ಟನ್ ಆದೆ. ಅದೇ ವೇಳೆಗೆ ನನ್ನ ತಂದೆ-ತಾಯಿ ವಿಚ್ಛೇದನ ಪಡೆದರು. ಬದುಕಲ್ಲಿ ನನಗೆ ಹೊಡೆದ ಮೊದಲ ಬಹುದೊಡ್ಡ ಶಾಕ್ ಇದು. ಮೊದಲಿಂದಲೂ ಅಪ್ಪ-ಅಮ್ಮನಿಗೆ ನಾನು ಮುದ್ದಿನ ಮಗ. ಅವರು ಬೇರೆ ಬೇರೆಯಾದಾಗ, ಮೊದಲು ಅಪ್ಪನೊಂದಿಗೇ ಉಳಿದಿದ್ದೆ. ಆದರೆ ಅಪ್ಪ ನನ್ನಂತೆ ಗಂಡಸು. ಆತ ಕಷ್ಟವನ್ನು ಸಹಿಸಬಲ್ಲ. ಆದರೆ, ಒಂಟಿ ಅನ್ನಿಸಿದ ಸಂದರ್ಭದಲ್ಲಿ ಮಕ್ಕಳ ನೆರವು ಅಮ್ಮನಿಗಿರಬೇಕಿತ್ತು ಅನ್ನಿಸಿತಲ್ಲ; ಅವತ್ತೇ ಅಮ್ಮನ ಬಳಿಗೆ ಹೋಗಿಬಿಟ್ಟೆ. ಅವರಿಬ್ಬರನ್ನೂ ಒಂದು ಮಾಡಲು ತುಂಬಾ ಪ್ರಯತ್ನಿಸಿದೆ. ಆದರೆ ಜತೆಗಿರಲು ಇಬ್ಬರೂ ಆಸಕ್ತಿ ತೋರಲಿಲ್ಲ. ನಾನು ಸಿಕ್ಸರ್ ಹೊಡೆದಾಗ ಸ್ಟೇಡಿಯಂನಲ್ಲಿ ಕೂತ ಅಮ್ಮ ಚಿಕ್ಕ ಮಗುವಿನಂತೆ ಜಿಗಿಯುತ್ತಾಳಲ್ಲ, ಅದನ್ನು ಕಂಡಾಗಲೆಲ್ಲ ಅನ್ನಿಸುತ್ತದೆ: ಈ ಸಂದರ್ಭದಲ್ಲಿ ಅಪ್ಪನೂ ಜೊತೆಗೆ ಇರಬೇಕಿತ್ತು...ವರ್ಲ್ಡ್‌ಕಪ್ ಟೂರ್ನಿ ಶುರುವಾಗುವ ಮೊದಲೇ ವಿಪರೀತ ಕೆಮ್ಮು ಇತ್ತು. ಒಂದೊಂದ್ಸಲ ಏನು ತಿಂದರೂ ತಕ್ಷಣವೇ ವಾಂತಿ ಆಗ್ತಿತ್ತು. ವಾಂತಿಯ ಜೊತೆ ರಕ್ತವೂ ಬರ್ತಿತ್ತು. ಇಡೀ ದಿನ ಮೈದಾನದಲ್ಲಿರೋದ್ರಿಂದ ಹೀಗೆ ಆಗುತ್ತೇನೋ. ಆಟ ಆಡುವ ಸಂದರ್ಭದಲ್ಲಿ ವಿಪರೀತ ಧೂಳು ಉಸಿರಾಟದೊಂದಿಗೆ ದೇಹ ಸೇರಿರುತ್ತೆ. ಜೊತೆಗೆ ನಾವು ಹೆಚ್ಚಾಗಿ ತಿನ್ನೋದು ಫೈವ್‌ಸ್ಟಾರ್ ಹೋಟೇಲಿನ ಊಟ ತಾನೆ? ಅದೆಲ್ಲಾ ಫ್ರಿಜ್‌ನಲ್ಲಿ ಶೇಖರಿಸಿಟ್ಟು ಮತ್ತೆ ಬಿಸಿ ಮಾಡಿ ಕೊಡುವ ಆಹಾರ. ಹಾಗಾಗಿ ಆರೋಗ್ಯ ಕೆಡ್ತಾ ಇರಬೇಕು ಅಂದುಕೊಂಡೆ. ರೂಂಗೆ ಬಂದ ಮೇಲೆ ಒಂದಲ್ಲ, ಐವತ್ತು ಬಾರಿ ವಾಂತಿಯಾಗಲಿ. ಆದರೆ ಮೈದಾನಕ್ಕೆ ಹೋದ ಮೇಲೆ ವಾಂತಿಯಾಗದ ಹಾಗೆ, ತಲೆ ಸುತ್ತಿ ಬೀಳದ ಹಾಗೆ ನೋಡಿಕೋ ದೇವರೇ ಎಂದು ದಿನವೂ ಪ್ರಾರ್ಥಿಸುತ್ತಿದ್ದೆ. ದೇವರು ಕರುಣಾಮಯಿ. ವರ್ಲ್ಡ್‌ಕಪ್ ಕ್ರಿಕೆಟ್ ಟೂರ್ನಿ ಮುಗಿವವರೆಗೂ ನನ್ನ ಪ್ರಾರ್ಥನೆಯನ್ನು ಕೇಳಿಸಿಕೊಂಡ.ಮುಂದೆ ಐಪಿಎಲ್ ಟೂರ್ನಿ ಶುರುವಾಗುತ್ತಿದ್ದಂತೆ ಕೆಮ್ಮು ವಿಪರೀತವಾಯಿತು. ವಾರಕ್ಕೆ ಎರಡು ಕೆ.ಜಿ.ಯಂತೆ ತೂಕ ಕಡಿಮೆಯಾಯಿತು. ಗಾಬರಿಯಿಂದ ಚೆಕಪ್‌ಗೆ ಹೋದರೆ, ಹದಿನೈದು ದಿನಗಳ ಸತತ ಪರೀಕ್ಷೆಯ ನಂತರು ವೈದ್ಯರು ಸಂಕಟದಿಂದ ಉದ್ಗರಿಸಿದರು: ಮೈ ಗಾಡ್, ಯುವಿಗೆ ಕ್ಯಾನ್ಸರ್ ಇದೆ!ಅದುವರೆಗೂ ಕ್ಯಾನ್ಸರ್ ಪೀಡಿತರ ಬಗ್ಗೆ, ಆ ರೋಗದ ಕರಾಳ ಮುಖದ ಬಗ್ಗೆ ಸಿನಿಮಾಗಳಲ್ಲಿ ನೋಡಿದ್ದೆ. ಪುಸ್ತಕಗಳಲ್ಲಿ ಓದಿದ್ದೆ. ಅವರಿವರಿಂದ ಕೇಳಿದ್ದೆ. ಆದರೆ ಈಗ ನಾನೇ ಕ್ಯಾನ್ಸರ್‌ನ ಕ್ರೌರ್ಯಕ್ಕೆ ತುತ್ತಾಗಿದ್ದೆ. ಮುಂದೆ ಚಿಕಿತ್ಸೆಗೆಂದು ಅಮೆರಿಕಕ್ಕೆ ಹೋದೆ. ಅಲ್ಲಿನ ವೈದ್ಯರು ತುಂಬ ಸ್ಪಷ್ಟವಾಗಿ ಹೇಳಿದ್ದರು: 'ಕಾಯಿಲೆ ಈಗಿನ್ನೂ ಮೊದಲ ಹಂತದಲ್ಲಿದೆ. ಹಾಗಾಗಿ ಚಿಕಿತ್ಸೆಯಿಂದ ಗುಣಪಡಿಸಬಹುದು. ಕ್ಯಾನ್ಸರ್ ಕಣಗಳನ್ನು ಲೇಸರ್ ಕಿರಣಗಳ ಮೂಲಕ ನಾಶ ಮಾಡಿ, ಅಲ್ಲಿ ಹೊಸ ಜೀವಕೋಶಗಳು ಸೃಷ್ಟಿಯಾಗುವಂತೆ ಮಾಡ್ತೇವೆ. ತುಂಬಾ ಹಿಂಸೆಯಾಗುತ್ತೆ. ಬದುಕಬೇಕು ಅನ್ನೋ ಆಸೆಯಿದ್ರೆ ಇದನ್ನು ಸಹಿಸಿಕೊಳ್ಳಲೇಬೇಕು...'ಹೀಗೆ ಆರಂಭವಾದ ಚಿಕಿತ್ಸೆಯೇ ಕೀಮೋಥೆರಪಿ. ಲೇಸರ್ ಕಿರಣಗಳನ್ನು ಹಾಯಿಸಿ ಕ್ಯಾನ್ಸರ್ ಕಣಗಳನ್ನು ನಾಶ ಮಾಡ್ತಾರಲ್ಲ, ಆಗ ಆಗುವ ಹಿಂಸೆಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಕೆಂಪಗೆ ಕಾದ ಕಬ್ಬಿಣದ ಸಲಾಕೆ ಚರ್ಮದ ಮೇಲೆ ಬಿದ್ದಾಗ ಆಗುತ್ತಲ್ಲ, ಅಂಥ ನೋವಾಗುತ್ತೆ. ಈ ನೋವು ಗಂಟೆಗಳ ಕಾಲ ಇರುತ್ತೆ. ಕೀಮೋಥೆರಪಿ ಚಿಕಿತ್ಸೆಯ ರೂಂನಲ್ಲಿ ಇದ್ದಷ್ಟೂ ಹೊತ್ತು ಚರ್ಮ ಸುಟ್ಟಂಥ ವಾಸನೆ ಮೂಗಿಗೆ ಬಡೀತಾ ಇರುತ್ತೆ. ಪರಿಣಾಮ ಕೂತ ಜಾಗದಲ್ಲೇ ಮೇಲಿಂದ ಮೇಲೆ ವಾಂತಿಯಾಗುತ್ತೆ. ಇಂಥ ಅನುಭವ ನನಗೂ ಆಯ್ತು. ಚಿಕಿತ್ಸೆ ಶುರುವಾದ ಕೆಲವೇ ದಿನಗಳಲ್ಲಿ ದೇಹದ ಚರ್ಮವೆಲ್ಲ ಕಪ್ಪಾಯ್ತು. ತಲೆಗೂದಲು ಸಂಪೂರ್ಣ ಉದುರಿ ಹೋಯ್ತು. ಕಣ್ಣು ಗುಳಿ ಬಿದ್ದವು. ಇದೆಲ್ಲಕ್ಕಿಂತ ಮುಖ್ಯವಾಗಿ, ಎದ್ದು ನಿಲ್ಲುವ ಚೈತನ್ಯವೇ ನನ್ನ ದೇಹಕ್ಕೆ ಇರಲಿಲ್ಲ. ಒಂದು ಜೀವಂತ ಶವದಂತೆಯೇ ಅಮೆರಿಕದ ಆಸ್ಪತ್ರೆಯಲ್ಲಿದ್ದೆ. ಮಧ್ಯೆ ಮಧ್ಯೆ ಯಾವಾಗಲೋ ಎಚ್ಚರವಾಗುತ್ತಿತ್ತು. ಎದುರಿಗೆ ಅಮ್ಮ ಕಾಣಿಸುತ್ತಿದ್ದಳು. ಅವಳ ಕಣ್ಣಲ್ಲಿ ಭಯ, ದಿಗಿಲು, ಸಂಕಟ. ಅದನ್ನು ನೋಡುತ್ತಿದ್ದಂತೆಯೇ- ಓಹ್, ನಾನು ಬದುಕುವ ಛಾನ್ಸ್ ಕಡಿಮೆ ಇರಬಹುದು. ಅದಕ್ಕೇ ಅಮ್ಮಾ ಅಳ್ತಾ ಇದಾಳೆ ಅನಿಸುತ್ತಿತ್ತು. ಆಗೆಲ್ಲ ಇದ್ದಕ್ಕಿದ್ದಂತೆ ಅಳು ಬರುತ್ತಿತ್ತು. ಸಣ್ಣ ಮಗುವಿನಂತೆ ಅಮ್ಮನ ಮಡಿಲಲ್ಲಿ ಮುಖವಿಟ್ಟು ಅಳುತ್ತಿದ್ದೆ. ಆಕೆ ನನ್ನ ಬೋಳು ತಲೆ ನೇವರಿಸುತ್ತಾ, ಲಕ್ಷಾಂತರ ಮಂದಿ ಪ್ರಾರ್ಥಿಸಿದ್ದಾರೆ ಯುವೀ. ಅವರ ಪ್ರಾರ್ಥನೆ ಹುಸಿಯಾಗಲ್ಲ ಎನ್ನುತ್ತಿದ್ದಳು.ಹೀಗೆ, ಕಣ್ಣೀರಿನ ಮಧ್ಯೆ, ನೋವಿನ ಮಧ್ಯೆ, ಸಂಕಟದ ಮಧ್ಯೆ ಕಳೆದದ್ದು ಎಷ್ಟು ದಿನ, ಎಷ್ಟು ಹಗಲು, ಎಷ್ಟು ರಾತ್ರಿ? ನನಗೆ ನೆನಪಿಲ್ಲ. ಎಚ್ಚರವಾದಾಗ ಮಾತ್ರ-ಅಬ್ಬಾ, ನಾನು ಇನ್ನೂ ಬದುಕಿದ್ದೀನಿ ಅನ್ನಿಸ್ತಿತ್ತು. ಅದೇ ವೇಳೆಗೆ, ನಾಳೇನೂ ನಾನು ಬದುಕಿರ್ತೀನಾ ಎಂಬ ಪ್ರಶ್ನೆಯೂ ಎದ್ದು ನಿಲ್ಲುತ್ತಿತ್ತು. ಆಗೆಲ್ಲ ಅಸಹಾಯಕತೆಯಿಂದ ಅಮ್ಮನನ್ನು ನೋಡಿದರೆ, ಆಕೆ, ಮೇಲಕ್ಕೆ ಕೈ ತೋರಿಸುತ್ತಾ, ದೇವರಿದ್ದಾನೆ ಹೆದರಬೇಡ ಅನ್ನುತ್ತಿದ್ದಳು. ಎರಡನೇ ಮಾತಾಡಲಾಗದೆ ಅಳುತ್ತಿದ್ದಳು. ಆಕೆಯ ಕಣ್ಣೀರು ಒರೆಸೋಣವೆಂದರೆ, ಕೈ ಎತ್ತುವಷ್ಟು ಶಕ್ತಿ ನನಗಿರಲಿಲ್ಲ...ಹೀಗೇ ತಿಂಗಳುಗಳು ಕಳೆದವು. ನಾನು ನಿಧಾನವಾಗಿ ಚೇತರಿಸಿಕೊಂಡೆ. ಅಮ್ಮನ ಮೊಗದಲ್ಲಿ ನಗು ಕಾಣಿಸಿಕೊಂಡಿತು. ಕಡೆಗೊಂದು ದಿನ ವೈದ್ಯರು ಘೋಷಿಸಿದರು: ಯುವೀ, ಯು ಆರ್ ಆಲ್‌ರೈಟ್. ನಿನಗೆ ಪುನರ್ಜನ್ಮ ಸಿಕ್ಕಿದೆ. ಹಳೆಯ ರೂಪು ಮರಳಿ ಬಂದಿದೆ. ದೇವರು ನಿನ್ನನ್ನು ಕಾಪಾಡಿದ್ದಾನೆ...' ಅವರ ಮಾತಿಗೆ ಪ್ರತಿಯಾಗಿ ಹೇಳಿದೆ: ದೇವರು ಮಾತ್ರ ಅಲ್ಲ ಸರ್. ದೇವರಂಥ ಮನುಷ್ಯರ ಪ್ರಾರ್ಥನೆಯಿಂದಲೇ ನಾನು ಮರುಜನ್ಮ ಪಡೆದಿದ್ದೇನೆ...!'-----ವಾರದ ಹಿಂದೆ ಆಕಸ್ಮಿಕವಾಗಿ ಸಿಕ್ಕಿದ್ದು ಮಕರಂದ್ ವೈಗಾಂವ್ಕರ್ ಬರೆದ 'ಯುವಿ' ಹೆಸರಿನ ಪುಸ್ತಕ. ಆನಂತರದಲ್ಲಿ ಯುವರಾಜ್‌ಸಿಂಗ್ ಕುರಿತು ಮತ್ತಷ್ಟು ಬರಹಗಳು, ಆತನ ವಿಡಿಯೋ ಸಂದರ್ಶನಗಳನ್ನು ನೋಡಿದ ಮೇಲೆ, ಆತ ನನ್ನ ಪಾಲಿಗೆ ದಕ್ಕಿದ್ದು ಹೀಗೆ...- ಎ.ಆರ್. ಮಣಿಕಾಂತ್
armanikanth@gmail.com
armanikanth@gmail.com



















No comments:

Post a Comment