Tuesday, 3 December 2013

ವರ್ಷಕ್ಕೊಂದು ಹೊಸ ಸಾಹಸ, ಅದುವೇ 'ಸ್ವಾಮಿ' ಬದುಕು!


ವರ್ಷಕ್ಕೊಂದು ಹೊಸ ಸಾಹಸ, ಅದುವೇ 'ಸ್ವಾಮಿ' ಬದುಕು!
ಭಾವತೀರಯಾನ- ಎ.ಆರ್.ಮಣಿಕಾಂತ್


ನಮ್ಮ ಕಥಾನಾಯಕನ ಹೆಸರು ಕೆ. ಸ್ವಾಮಿನಾಥನ್. ಚೆನ್ನೈ ಮೂಲದ ಈತ ಒಂದರ ಹಿಂದೊಂದರಂತೆ ಬಿಜಿನೆಸ್‌ಗೆ ಕೈ ಹಾಕಿ ಗೆಲುವು ಕಂಡಾತ. ರು. 20 ಬಂಡವಾಳದಿಂದ ಬಿಜಿನೆಸ್ ಆರಂಭಿಸಿ, ಈಗ 100 ಕೋಟಿ ಸಂಪಾದಿಸುವ ಉದ್ಯಮಿ ಅನ್ನಿಸಿಕೊಂಡಿರುವುದು ಅವರ ಹೆಗ್ಗಳಿಕೆ. ಒಂದರ್ಥದಲ್ಲಿ ಅವರ ಬದುಕಿನ ಕಥೆ, ತಮಿಳು ಸಿನಿಮಾದ ಎಲ್ಲ ರೋಚಕತೆಯನ್ನೂ ಹೊಂದಿದೆ. ಅದನ್ನೆಲ್ಲ ಸ್ವತಃ ಸ್ವಾಮಿನಾಥನ್ ಅವರೇ ವಿವರಿಸಿದ್ದು ಹೀಗೆ:
'ನಮ್ಮದು ಮಧ್ಯಮ ವರ್ಗದ ಕುಟುಂಬ. ಅಪ್ಪ, ಒಂದು ಕಂಪನಿಯಲ್ಲಿ ಸೇಲ್ಸ್ ಮೆನೇಜರ್ ಆಗಿದ್ದರು. ಅಪ್ಪ ಖಂಡಿತವಾದಿ. ಅನಿಸಿದ್ದನ್ನು ಮುಖಕ್ಕೆ ಹೊಡೆದಂತೆ ಹೇಳಿ ಬಿಡುವ ಗುಣ ಅವರದು. ಅವರ ನೇರ ನಿಷ್ಠುರ ಮಾತುಗಳು ಹೆಚ್ಚಿನವರಿಗೆ ಇಷ್ಟವಾಗುತ್ತಿರಲಿಲ್ಲ. ಈ ಕಾರಣದಿಂದಲೇ ಯಾವುದೇ ಕಂಪನಿಗೂ ಅವರು ಅನಿವಾರ್ಯ ಅನ್ನಿಸಲಿಲ್ಲ. ಹಾಗಾಗಿ, ಆರು ತಿಂಗಳು ಕೆಲಸ ಮಾಡಿದರೆ, ಉಳಿದ ಆರು ತಿಂಗಳುಗಳನ್ನು (ತಾವಾಗಿಯೇ ಕೆಲಸ ಬಿಟ್ಟು ಅಥವಾ ಕೆಲಸ ಕಳೆದುಕೊಂಡು) ಮನೇಲಿದ್ದು ಕಳೆಯುತ್ತಿದ್ದರು. ಪರಿಣಾಮವಾಗಿ, ಕಷ್ಟಗಳ ಮಧ್ಯೆಯೇ, ಹಣಕಾಸಿನ ತೊಂದರೆಯ ಮಧ್ಯೆಯೇ ನಮ್ಮ ಕುಟುಂಬ ಉಳಿಯುವಂತಾಯಿತು. ಕೊನೆಗೊಮ್ಮೆ ಈ ಪರಿಸ್ಥಿತಿಗೆ ಎಲ್ಲಿಗೆ ಮುಟ್ಟಿತೆಂದರೆ- ನಮ್ಮ ಸ್ಕೂಲ್‌ನ ಫೀ ಕೊಡಲಿಕ್ಕೂ ತಂದೆಯವರ ಬಳಿ ಹಣವಿರಲಿಲ್ಲ. ಅಪ್ಪನ ಸಂಪಾದನೆಯ ಮೇಲೆ ಡಿಪೆಂಡ್ ಆಗದೆ ನನ್ನ ವಿದ್ಯಾಭ್ಯಾಸಕ್ಕೆ ಆಗುವಷ್ಟು ಹಣ ಸಂಪಾದಿಸಬೇಕು ಎಂಬ ನಿರ್ಧಾರಕ್ಕೆ ನಾನು ಬಂದಿದ್ದೇ ಈ ಸಂದರ್ಭದಲ್ಲಿ. ನೆನಪಿಸಿಕೊಂಡರೆ, ಈಗ ನನಗೂ ಆಶ್ಚರ್ಯವಾಗುತ್ತದೆ. ಏಕೆಂದರೆ, ಇಂಥದೊಂದು ಮಹತ್ವದ ನಿರ್ಧಾರ ಕೈಗೊಂಡಾಗ ನಾನು 7ನೇ ತರಗತಿಯ ವಿದ್ಯಾರ್ಥಿಯಾಗಿದ್ದೆ!
ಅವತ್ತಿಗೆ ಸ್ಕೂಲ್‌ಫೀ, ಯೂನಿಫಾರ್ಮ್ ಹಾಗೂ ಪುಸ್ತಕ ಖರೀದಿಗೆ ಅಗತ್ಯವಿರುವಷ್ಟು ಹಣ ಸಂಪಾದಿಸುವುದು ನನ್ನ ಉದ್ದೇಶವಾಗಿತ್ತು. ಈ ಸಂದರ್ಭದಲ್ಲಿ ಹೊಳೆದದ್ದೇ-ಸರ್ಕ್ಯೂಲೇಟಿಂಗ್ ಲೈಬ್ರರಿ ಮಾಡಬೇಕೆಂಬ ಐಡಿಯಾ. ನನ್ನ ವಾರಿಗೆಯ, ನನ್ನದೇ ತರಗತಿಯ ಹುಡುಗರೆಲ್ಲ ಅಮರ ಚಿತ್ರಕಥೆ, ಚಂದಮಾಮ, ಬಾಲಮಿತ್ರ, ಟ್ವಿಂಕಲ್ ಮುಂತಾದ ಪುಸ್ತಕಗಳನ್ನು ಓದಲು ಹಾತೊರೆಯುತ್ತಿದ್ದರು. ಆದರೆ, ಅವುಗಳನ್ನು ಖರೀದಿಸುವ ಶಕ್ತಿ ಯಾರಿಗೂ ಇರಲಿಲ್ಲ. ಈ ಎಲ್ಲ ಪುಸ್ತಕಗಳನ್ನು ಖರೀದಿಸುವುದು. ಅವುಗಳನ್ನು ದಿನಕ್ಕೆ 25 ಪೈಸೆ ಬಾಡಿಗೆಗೆ ಓದಲು ಕೊಡುವುದು. ಮುಂದೆ ಲಾಭದ ರೂಪದಲ್ಲಿ ಸಿಗುವ ಹಣದಿಂದ ಶಿಕ್ಷಣದ ಖರ್ಚು ನಿಭಾಯಿಸುವುದು ನನ್ನ ಪ್ಲಾನ್ ಆಗಿತ್ತು. ಅಮ್ಮನ ಮುಂದೆ ನಿಂತು ಎಲ್ಲವನ್ನೂ ವಿವರಿಸಿದೆ. ಆಕೆ ತನ್ನಲ್ಲಿದ್ದ ರು. 20ಗಳನ್ನು ನನ್ನ ಕೈಗಿಟ್ಟು-ಒಳ್ಳೆಯದಾಗಲಿ ಎಂದಳು. ಮುಂದಿನ ಎರಡು ವರ್ಷಗಳವರೆಗೂ ನನ್ನ ಶಾಲಾ ಖರ್ಚು ನಿಭಾಯಿಸಲು ಸಾಧ್ಯವಾದದ್ದು ಸರ್ಕ್ಯುಲೇಟಿಂಗ್ ಲೈಬ್ರರಿ ಹಣದ ದುಡಿಮೆಯಿಂದಲೇ.
ಒಂಭತ್ತನೇ ತರಗತಿಗೆ ಬಂದಾಗ, ತೀರಾ ಅನಿರೀಕ್ಷಿತವಾಗಿ ಪಟಾಕಿ ಮಾರಾಟದ ಬಿಜಿನೆಸ್‌ಗೆ ಕೈ ಹಾಕಿದೆ. ಅದಕ್ಕೆ ಕಾರಣವಾದವರು ನಮ್ಮ ಏರಿಯಾದಲ್ಲಿದ್ದ, ಐಐಟಿಯಲ್ಲಿ ಓದುತ್ತಿದ್ದ ಹಿರಿಯ ವಿದ್ಯಾರ್ಥಿಗಳು. ಟೆಸ್ಟ್, ಅಸೈನ್‌ಮೆಂಟ್‌ಗಳ ಕಾರಣದಿಂದ ವಿಪರೀತ ಬ್ಯುಸಿ ಆಗಿರುತ್ತಿದ್ದ ಅವರಿಗೆ, ಪಟಾಕಿ ತರಲು ಸಮಯವೇ ಇರುತ್ತಿರಲಿಲ್ಲ. ಹಾಗಂತ, ಪಟಾಕಿಗಳಿಲ್ಲದೆ ದೀಪಾವಳಿ ಆಚರಿಸುವುದೂ ಸಾಧ್ಯವಿರಲಿಲ್ಲ. ಈ ಸಂದರ್ಭದಲ್ಲಿ ಅವರೆಲ್ಲ,ಪಟಾಕಿ ತಂದು ಕೊಟ್ಟರೆ, 10 ಪರ್ಸೆಂಟ್ ಕಮಿಷನ್ ನೀಡುವುದಾಗಿ ಹೇಳಿದರು. ನಾನು ಖುಷಿಯಿಂದಲೇ ಒಪ್ಪಿಕೊಂಡೆ. ಪಟಾಕಿಗಳನ್ನು ಹೋಲ್‌ಸೇಲ್‌ನಲ್ಲಿ ಮಾರುತ್ತಿದ್ದ ಚೆನ್ನೈನ ಪ್ಯಾರೀಸ್ ಕಾರ್ನರ್‌ಗೆ ಹೋದವನು, ಒಂದರೆಕ್ಷಣ ಮಾತೇ ಹೊರಡದೆ ನಿಂತುಬಿಟ್ಟೆ. ಕಾರಣ, 80 ಹಾಗೂ 90 ಪರ್ಸೆಂಟ್ ರಿಯಾಯಿತಿ ದರಕ್ಕೆ ಅಲ್ಲಿ ಪಟಾಕಿಗಳನ್ನು ಮಾರುತ್ತಿದ್ದರು. ಈ ಬಿಜಿನೆಸ್‌ನಲ್ಲಿ ವಿಪರೀತ ಲಾಭವಿತ್ತು. ಹಾಗಾಗಿ ಸತತ 5 ವರ್ಷಗಳ ಕಾಲ ಪಟಾಕಿ ಮಾರುತ್ತಲೇ ಬದುಕು ಕಟ್ಟಿಕೊಂಡೆ. ಪಟಾಕಿ ಮಾರಾಟದಿಂದ ಭರ್ತಿ 75 ಸಾವಿರ ರೂಪಾಯಿ ಲಾಭವಾಗಿತ್ತು.
ಇದು 90ರ ದಶಕದ ಮಾತು. ಹುಂಡೈ, ಫೋರ್ಡ್ ಸೇರಿದಂತೆ ಹತ್ತಾರು ಬಹುರಾಷ್ಟ್ರೀಯ ಕಂಪನಿಗಳು ಚೆನ್ನೈಗೆ ಬಂದ ಸಂದರ್ಭ ಅದು. ಈ ಕಂಪನಿಗಳಿಗೆ ದೊಡ್ಡ ಹುದ್ದೆಯ ಅಧಿಕಾರಿಗಳಾಗಿ ಬಂದರಲ್ಲ; ಅವರಿಗೆಲ್ಲ ವಾಸಕ್ಕೆ ಚೆಂದದ ಮನೆಗಳ ಅಗತ್ಯವಿತ್ತು. ಈ ಅಧಿಕಾರಿಗಳಿಗೆ ಇಂಗ್ಲೀಷ್ ಮಾತ್ರ ಬರುತ್ತಿತ್ತು. ಅವತ್ತಿನ ಸಂಧರ್ಭದಲ್ಲಿ, ಚೆನ್ನೈನಲ್ಲಿದ್ದ ಮನೆ ತೋರಿಸುವ ಬ್ರೋಕರ್‌ಗಳು ತಮಿಳಿನಲ್ಲಿ ಮಾತ್ರ ವ್ಯವಹರಿಸುತ್ತಿದ್ದರು. ಹಾಗಾಗಿ ಅವರ ಮಾತು ಇವರಿಗೆ, ಇವರ ಮಾತು ಅವರಿಗೆ ಅರ್ಥವಾಗುತ್ತಿರಲಿಲ್ಲ. ಪಟಾಕಿ ಬಿಜಿನೆಸ್‌ಗೆ ಗುಡ್‌ಬೈ ಹೇಳಿ, ಮನೆ ತೋರಿಸುವ ಬ್ರೋಕರ್ ಕೆಲಸಕ್ಕೆ ಕೈ ಹಾಕಬೇಕು ಅನಿಸಿದ್ದೇ ಆಗ. ಈ ಯೋಚನೆ ಬಂದ ವಾರದೊಳಗೆ ಮನೆಗೆ ಫೋನ್ ಹಾಕಿಸಿಕೊಂಡೆ. ಹಿಂದೆಯೇ, ಸೈಕಲ್ ಹಾಗೂ ಕ್ಯಾಮರಾ ಖರೀದಿಸಿದೆ.
ಕಾಲೇಜು ಮುಗಿದ ತಕ್ಷಣ, ಸೈಕಲ್ ಹತ್ತಿ ಖಾಲಿ ಇರುವ ಮನೆಗಳನ್ನು ಹುಡುಕುತ್ತಿದ್ದೆ. ಎಲ್ಲ ಮನೆಗಳ ವರಾಂಡ, ಬೆಡ್‌ರೂಂ, ಅಡುಗೆ ಮನೆ, ಹಾಲ್, ಸ್ವಲ್ಪ ದೂರದಿಂದ ಕಾಣುವ ಮನೆಯ ನೋಟಗಳ ಫೋಟೋ ತೆಗೆಯುತ್ತಿದ್ದೆ. ಕಡಿಮೆಯೆಂದರೂ ಐದು ಮನೆಗಳ ಚಿತ್ರಗಳನ್ನು ಆಲ್ಬಂಗೆ ಹಾಕಿಕೊಂಡು ಬಾಡಿಗೆ ಮನೆಗಾಗಿ ಹಂಬಲಿಸುತ್ತಿದ್ದ ಅಧಿಕಾರಿಗಳ ಮುಂದೆ ನಿಲ್ಲುತ್ತಿದ್ದೆ. ಐದು ಮನೆಗಳ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಅವರಿಗಿತ್ತು. ಆ ಮನೆಗೆ ಸಂಬಂಧಿಸಿದ ಎಲ್ಲ ಸಂಗತಿಯನ್ನೂ ನಿರರ್ಗಳ ಇಂಗ್ಲೀಷಿನಲ್ಲಿ ವಿವರಿಸುತ್ತಿದ್ದೆ. ಇದರಿಂದ, ಸಹಜವಾಗಿಯೇ ಅವರು ಇಂಪ್ರೆಸ್ ಆಗುತ್ತಿದ್ದರು. ಅವರು ಬಾಡಿಗೆಗೆ ಹೋಗಲು ಒಪ್ಪಿದರೆ, ಒಂದೂವರೆ ತಿಂಗಳ ಬಾಡಿಗೆ ಹಣ ನನಗೆ ಕಮಿಷನ್ ರೂಪದಲ್ಲಿ ಸಿಗುತ್ತಿತ್ತು. ಕಲಿಕೆ ಮತ್ತು ಗಳಿಕೆ ಎರಡೂ ಚೆನ್ನಾಗಿದ್ದ ಈ ಸಂದರ್ಭದಲ್ಲಿಯೇ ನನ್ನ ಬಿ.ಕಾಂ. ಮುಗಿಯಿತು.
ಡಿಗ್ರಿ ಮುಗೀತಿದ್ದಂತೆ ಎನ್‌ಐಎಸ್ (ನೆಟ್‌ವರ್ಕ್ ಇನ್‌ಫರ್ಮೇಷನ್ ಸರ್ವೀಸ್) ನಲ್ಲಿ ಲೆಕ್ಚರರ್ ಕೆಲಸ ಸಿಕ್ಕಿತು. ಮೂರು ವರ್ಷ ಮೇಷ್ಟ್ರಾಗಿ ಕೆಲಸ ಮಾಡಿದೆ. ಮೇಲಿಂದ ಮೇಲೆ ರಿಸ್ಕ್ ತೆಗೆದುಕೊಳ್ಳುವುದು, ಸವಾಲುಗಳಿಗೆ ಮುಖ ಮಾಡಿ ನಿಲ್ಲುವುದು ನನ್ನ ಹುಟ್ಟುಗುಣ. ಆದರೆ ಮೇಷ್ಟ್ರ ಕೆಲಸದಲ್ಲಿ ಸವಾಲುಗಳೇ ಇರಲಿಲ್ಲ. ಪರಿಣಾಮ, 3 ವರ್ಷಕ್ಕೇ ಆ ಕೆಲಸ ಬೋರ್ ಅನ್ನಿಸಿತು. ಒನ್ ಫೈನ್ ಡೇ, ಆ ಕೆಲಸಕ್ಕೆ ಗುಡ್‌ಬೈ ಹೇಳಿದೆ. ನಂತರದ ಕೆಲವೇ ದಿನಗಳಲ್ಲಿ ನನ್ನ ಗೆಳೆಯರು ಸೇರಿಕೊಂಡು egurukool.com  ಎಂಬ ಆನ್‌ಲೈನ್ ಸರ್ವೀಸ್ ಆರಂಭಿಸಿ, ಅದಕ್ಕೆ ಬಿಜಿನೆಸ್ ವಿಭಾಗದ ಮುಖ್ಯಸ್ಥನಾಗುವಂತೆ ಒತ್ತಾಯಿಸಿದರು. ಭಾರತದಲ್ಲಿ ಆನ್‌ಲೈನ್ ಸೇವೆ ಜನಪ್ರಿಯವಾಗುತ್ತಿದ್ದ ಸಂದರ್ಭ ಅದು. ಆಗ, ದಿನಕ್ಕೊಂದು ಸವಾಲು ಎದುರಾಗುತ್ತಿತ್ತು. ಒಂದೊಂದು ಸಮಸ್ಯೆ ಎದುರಾದಂತೆಲ್ಲ ನನ್ನ ಉತ್ಸಾಹವೂ ಹೆಚ್ಚುತ್ತಿತ್ತು. ಸಮಯದ ಪರಿವೆಯಿಲ್ಲದೆ ದುಡಿದೆ. ಐದು ಜನರ ಕೆಲಸವನ್ನು ಒಬ್ಬನೇ ಮಾಡಿದೆ. ಸ್ವಂತ ಉದ್ಯಮ ಆರಂಭಿಸಿದರೂ ನಾನು ಗೆಲ್ಲಬಲ್ಲೆ ಅನಿಸಿದ್ದೇ ಆಗ. egurukool.com  ಕಂಪನಿ ಭರ್ಜರಿ ಲಾಭದಲ್ಲಿದೆ ಅಂದುಕೊಂಡಾಗಲೇ, ಅದನ್ನು ಎನ್‌ಐಐಟಿ ಖರೀದಿಸಿ ಬಿಟ್ಟಿತು.
ನಂತರದ ಕೆಲವೇ ದಿನಗಳಲ್ಲಿ Pookaikani.com ಎಂಬ ಆನ್‌ಲೈನ್ ಬಿಜಿನೆಸ್ ಆರಂಭಿಸಿದೆ. ತಾಜಾ ತಾಜಾ ಹಣ್ಣು ಹಾಗೂ ತರಕಾರಿಯನ್ನು ಆನ್‌ಲೈನ್ ಮೂಲಕ ಆರ್ಡರ್ ಪಡೆದು ಸರಬರಾಜು ಮಾಡುವುದು ನನ್ನ ಉದ್ದೇಶವಾಗಿತ್ತು. ಇದು 2000ದ ಇಸವಿಯ ಮಾತು. ಆ ಕಾಲಕ್ಕೇ ನನಗೆ 3000 ಗ್ರಾಹಕರಿದ್ದರು. ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನ ಊಟದ ವೇಳೆಗೆ ತಾಜಾ ತರಕಾರಿ ಬೇಕೆಂದು ಮೇಲಿಂದ ಮೇಲೆ ಆರ್ಡರ್‌ಗಳು ಬಂದವು. ದುರಾದೃಷ್ಟಕ್ಕೆ, ಹೂ ಮತ್ತು ತರಕಾರಿಯನ್ನು ಸಪ್ಲೈ ಮಾಡಬೇಕಿದ್ದ ಆಟೋ ಡ್ರೈವರ್‌ಗಳು ಹೇಳದೇ ಕೇಳದೆ ರಜೆ ಹಾಕಿಬಿಡುತ್ತಿದ್ದರು. ಪರಿಣಾಮ, ಕಂಪನಿಯ ಸಿಇಒ ಆಗಿದ್ದ ನಾನೇ ಹಲವು ಬಾರಿ ಡ್ರೈವರ್ ವೇಷ ಧರಿಸಿ ತರಕಾರಿ ಸಪ್ಲೈ ಮಾಡಿದೆ. ನೌಕರರ ಕೊರತೆಯಿಂದ ಹೆಚ್ಚಿನ ಬಾರಿ ನಮ್ಮಿಂದಲೇ ಲೇಟ್ ಆಗುತ್ತಿತ್ತು. ಹಾಗಾಗಿ ಗ್ರಾಹಕರು-'ತರಕಾರಿ ಬೇಡ' ಎಂದು ತಿರಸ್ಕರಿಸುತ್ತಿದ್ದರು. ಮುಂದೆ ಒಂದೆರಡು ದಿನ ಆರ್ಡರ್ ಬರದಿದ್ದರೆ ಅಷ್ಟೂ ತರಕಾರಿ ಹಾಳಾಗುತ್ತಿತ್ತು. ಇಂಥ ಕಾರಣಗಳಿಂದಾಗಲೇ Pookaikani.com ನಿಂದ 9 ತಿಂಗಳಲ್ಲಿ 12 ಲಕ್ಷ ರೂ. ಕೈ ತಪ್ಪಿತು. ಒಂದು ದಿನ ಅದಕ್ಕೂ ಗುಡ್‌ಬೈ ಅಂದೆ.
ಹೀಗಿರುವಾಗಲೇ, ಆಗ ಪ್ರಧಾನಮಂತ್ರಿಗಳ ವಿಜ್ಞಾನ ಸಲಹೆಗಾರರಾಗಿದ್ದ ಡಾ. ಅಬ್ದುಲ್ ಕಲಾಂ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಚೆನ್ನೈಗೆ ಆಗಮಿಸಿದರು. ತಮ್ಮ ಭಾಷಣದಲ್ಲಿ ಅವರು Indians should aspire to build the country to the next level (ದೇಶದ ನವನಿರ್ಮಾಣಕ್ಕೆ ಭಾರತೀಯರು ಉತ್ಸಾಹ ತೋರಬೇಕು) ಎಂದರು. ಅವರು ಬಳಸಿದ Aspireಎಂಬ ಪದ ನನ್ನನ್ನು ಬಹುವಾಗಿ ಕಾಡಿತು. ಆ ಪದಕ್ಕೆ- ಉತ್ಸಾಹ, ಮಹತ್ವಾಕಾಂಕ್ಷೆ ಎಂಬ ಎರಡು ಅರ್ಥಗಳಿವೆ. ಅದನ್ನು ನೆನಪಿಟ್ಟುಕೊಂಡೇ ಮಧುಮತಿ ಹಾಗೂ ಜಾನ್ ಎಂಬ ಮಿತ್ರರೊಂದಿಗೆ ಸೇರಿ Aspire learning Systems ಎಂಬ ಸಂಸ್ಥೆ ಆರಂಭಿಸಿದೆ. ಎಂಜಿನಿಯರಿಂಗ್ ಹಾಗೂ ಎಂಬಿಬಿಎಸ್ ಎಂಟ್ರೆನ್ಸ್ ಎಕ್ಸಾಂಗೆ ತರಬೇತಿ ನೀಡುವುದು ನಮ್ಮ ಉದ್ದೇಶವಾಗಿತ್ತು. ಮೊದಲ ವರ್ಷದ ಫಲಿತಾಂಶ ಬಂದಾಗ, ಹೆಚ್ಚು ಅಂಕ ಪಡೆದ 10 ಮಂದಿಯ ಪೈಕಿ 3 ಜನ ನಮ್ಮ ಆಸ್ಪೈರ್ ಅಕಾಡೆಮಿಯ ವಿದ್ಯಾರ್ಥಿಗಳಾಗಿದ್ದರು. ಎರಡನೇ ವರ್ಷ ನಾವು ದುಪ್ಪಟ್ಟು ಶ್ರದ್ಧೆಯಿಂದ ಕಲಿಸಲು ನಿಂತೆವು. ಪರಿಣಾಮ, ಆ ವರ್ಷದ ಫಲಿತಾಂಶದಲ್ಲಿ ಎಂಟ್ರೆನ್ಸ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 100 ಮಂದಿ ಪೈಕಿ 93 ಜನ ನಮ್ಮಿಂದ ಟ್ಯೂಶನ್ ಪಡೆದವರೇ ಆಗಿದ್ದರು. ಆನಂತರದಲ್ಲಿ ನಾವು ಹಿಂತಿರುಗಿ ನೋಡಲೇ ಇಲ್ಲ. ಕೆಲವೇ ದಿನಗಳಲ್ಲಿ ಐಐಟಿ-ಜೆಇಇ ಎಂಟ್ರೆನ್ಸ್ ಎಕ್ಸಾಂಗೂ ಕೋಚಿಂಗ್ ಆರಂಭಿಸಿ ಭಾರಿ ಯಶಸ್ಸು ಕಂಡೆವು.
ಬಿಪಿಓ ಕಚೇರಿಗಳು ಎಲ್ಲೆಲ್ಲೂ ಆರಂಭವಾಗುತ್ತಿದ್ದ ಕಾಲ ಅದು. ಆಗಲೇ, ನಾನೂ ಒಂದು ಬಿಪಿಓ ಆರಂಭಿಸಿ, ಕೆಲವೊಂದು ಸೇವೆಗಳನ್ನು ಹೊರಗುತ್ತಿಗೆ ನೀಡುವ ಮೂಲಕ ಅದೃಷ್ಟ ಪರೀಕ್ಷಿಸಬೇಕು ಅನ್ನಿಸಿತು. ಎಲ್ಲ ಲೆಕ್ಕಾಚಾರಗಳೊಂದಿಗೇ ಆ ಫೀಲ್ಡ್‌ಗೆ ಹೋದೆ. ಆದರೆ ಅಲ್ಲಿ ಗೆಲುವು ಸಿಗಲಿಲ್ಲ. ಒಂದೆರಡಲ್ಲ, 6 ಕೋಟಿ ರೂಪಾಯಿ ಲಾಸ್ ಆಯಿತು. ಬಿಜಿನೆಸ್‌ಗೆ ಸಂಬಂಧಿಸಿದಂತೆ, ನನಗೆ ವ್ಯವಹಾರ ಜ್ಞಾನವಿಲ್ಲ ಅನಿಸಿದ್ದೇ ಆಗ. ತಕ್ಷಣವೇ ಎಂಬಿಎ ಮಾಡಲು ನಿರ್ಧರಿಸಿ 2004ರಲ್ಲಿ ಬೆಂಗಳೂರಿನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಾಲೇಜು ಸೇರಿದೆ. ಅಲ್ಲಿಂದ ಹೊರಬರುವ ವೇಳೆಗೆ ಹಲವು ಹೊಸ ಹೊಸ ಯೋಜನೆಗಳು ನನ್ನ ಕೈ ಜಗ್ಗುತ್ತಿದ್ದವು. ಐಐಟಿ-ಜೆಇಇ, ಎಂಬಿಎ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಪಾಠ ಹೇಳಬೇಕು ಎಂಬುದು ನನ್ನೊಳಗಿದ್ದ ಒಂದು ಕನಸು. ಮೊದಲು ದೇಶದ ಎಲ್ಲಾ ವಿ.ವಿ.ಗಳಲ್ಲಿರುವ ಶ್ರೇಷ್ಠ ಅಧ್ಯಾಪಕರ ಪಾಠವನ್ನು ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವುದು, ನಂತರ ಅದನ್ನು ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸುವುದು. ಅಂದರೆ, ದೆಹಲಿ ಅಥವಾ ಹೈದರಾಬಾದ್ ವಿವಿಯ ಅಧ್ಯಾಪಕರ ಪಾಠವನ್ನು ಚೆನ್ನೈ, ಬೆಂಗಳೂರು ಅಥವಾ ದೇಶದ ಯಾವುದೇ ಭಾಗದ ವಿದ್ಯಾರ್ಥಿ ಯಾವುದೇ ಹೊತ್ತಿನಲ್ಲಿ ಬೇಕಾದರೂ ಕಂಪ್ಯೂಟರಿನ ಮುಂದೆ ಕೂತು ಕೇಳುವಂಥ ಸೌಲಭ್ಯ. ವಿಪರ್ಯಾಸವೆಂದರೆ ನಾನೇ ಆರಂಭಿಸಿದ್ದ ಆಸ್ಪೈರ್ ಸಂಸ್ಥೆಯ ಉಳಿದ ಪದಾಧಿಕಾರಿಗಳು ಈ ಯೋಜನೆಗೆ ಸಮ್ಮತಿ ನೀಡಲಿಲ್ಲ. ಬೇಜಾರಾಯಿತು. ನನ್ನ ಪಾಲಿನ ಷೇರುಗಳನ್ನು ಮಾರಿ ಅಲ್ಲಿಂದ ಎದ್ದು ಬಂದೆ.
ಆನಂತರದಲ್ಲಿ ಕೆ.ಬಿ. ಚಂದ್ರಶೇಖರ್ ಎಂಬ ಉದ್ಯಮಿಯೊಂದಿಗೆ ಸೇರಿ ಆರಂಭಿಸಿದ್ದೇ myBskool.com  ಒಂದರ್ಥದಲ್ಲಿ ಇದು ಮುಕ್ತ ವಿವಿಗಳು ನಡೆಸುವಂಥ ಕೋರ್ಸ್. ನಾವು ಆರಂಭಿಸಿದ್ದು ಒಂದು ವರ್ಷದ ಎಂಬಿಎ ಕೋರ್ಸ್. ಇದಕ್ಕೆ ಇಂದಿರಾಗಾಂಧಿ ಮುಕ್ತ ವಿವಿ, ಯುಜಿಸಿ ಹಾಗೂ ಅಖಿಲ ಭಾರತ ತಾಂತ್ರಿಕ ನಿರ್ದೇಶನಾಲಯದ ಮಾನ್ಯತೆ ಸಿಕ್ಕಿದೆ. ಈ ಕೋರ್ಸ್ ಸೇರಬಯಸುವ ವಿದ್ಯಾರ್ಥಿಗಳು 50000 ರೂ. ಶುಲ್ಕ ನೀಡಿ ಪ್ರವೇಶ ಪಡೆಯಬೇಕು. ಅಂಥವರಿಗೆ ದೇಶದ ಹಲವು ವಿವಿಗಳ ಹೆಸರಾಂತ ಅಧ್ಯಾಪಕರ ಪಾಠವನ್ನು ಆನ್‌ಲೈನ್ ಮೂಲಕ ಕೇಳುವ ಅವಕಾಶವನ್ನು ನಮ್ಮ ಸಂಸ್ಥೆ ಒದಗಿಸುತ್ತದೆ. ದಿನವೂ ಕಾಲೇಜಿಗೆ ಹೋಗಿ ಈ ಕೋರ್ಸ್ ಮಾಡುವವರಿಗೆ ಕಡಿಮೆಯೆಂದರೂ 5 ಲಕ್ಷ ರೂ. ಖರ್ಚಾಗುತ್ತದೆ. ಆದರೆ ನಮ್ಮ ಸಂಸ್ಥೆಯ ಮೂಲಕ ಆನ್‌ಲೈನ್‌ನಲ್ಲಿ ಪಾಠ ಕೇಳಿದರೆ, ಕೇವಲ 50 ಸಾವಿರ ರೂ.ಗಳಲ್ಲಿ ಕೋರ್ಸ್ ಮುಗಿಸಬಹುದು. ನಮ್ಮಲ್ಲೀಗ 3000ಕ್ಕೂ ಹೆಚ್ಚು ಉಪನ್ಯಾಸದ ವಿಡಿಯೋ ಸಂಗ್ರಹವಿದೆ. ಈಗಾಗಲೇ ಆನ್‌ಲೈನ್ ಮೂಲಕ ಎಂಬಿಎ ಕೋರ್ಸ್ ಮಾಡಲು ಮುಂದಾಗಿರುವ ವಿದ್ಯಾರ್ಥಿಗಳ ಸಂಖ್ಯೆ 15000 ವನ್ನು ದಾಟಿದೆ. ಮುಂದಿನ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು 25000 ಮಾಡಿಕೊಳ್ಳುವುದೇ ನನ್ನ ಗುರಿ. 25 ವರ್ಷಗಳ ಹಿಂದೆ ಅಮ್ಮ ಕೊಟ್ಟಿದ್ದ 20 ರೂಪಾಯಿ ಬಂಡವಾಳದಿಂದ ಬಿಜಿನೆಸ್ ಆರಂಭಿಸಿದ ನಾನು, ಇವತ್ತು ಕೋಟ್ಯಂತರ ರೂಪಾಯಿಗಳ ಒಡೆಯ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಅನ್ನುತ್ತಾರೆ ಸ್ವಾಮಿನಾಥನ್.
ಅತಿ ದುಬಾರಿ ಖರ್ಚಿನದ್ದು ಎಂದೇ ಹೆಸರಾಗಿರುವ ಎಂಬಿಎ ಕೋರ್ಸನ್ನು ಅತಿ ಕಡಿಮೆ ಬೆಲೆಯಲ್ಲಿ ನೀಡುತ್ತಿರುವ ಸ್ವಾಮಿನಾಥನ್, 20000ಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ. ಹೊಸದಾಗಿ ಉದ್ಯಮ ಆರಂಭಿಸುವ, ಆ ಮೂಲಕ ಹತ್ತು ಮಂದಿಯ ಬದುಕಿಗೆ ಆಧಾರವಾಗುವ ಯಾರಿಗೇ ಆದರೂ ಮಾರ್ಗದರ್ಶನ ನೀಡಲು ನಾನು ಸಿದ್ಧ ಎನ್ನುತ್ತಾರೆ. ವರ್ಷಕ್ಕೊಂದು ಹೊಸ ಸಾಹಸಕ್ಕೆ ಮುಂದಾಗಿ, ಗೆಲುವಿನ ಕೇಕೆ ಹಾಕಿದ ಅವರಿಗೊಂದು ಅಭಿನಂದನೆ ಹೇಳಬೇಕು ಅನ್ನಿಸಿದರೆ -aspireswaminathan@gmail.com ಗೆ ಮೇಲ್ ಕಳಿಸಿ.


- ಎ.ಆರ್. ಮಣಿಕಾಂತ್
armanikanth@gmail.com














No comments:

Post a Comment