Tuesday, 3 December 2013

ಚಮ್ಮಾರನ ಮಗ 'ಅಶೋಕ'ನಂತೆಯೇ ಸಾಮ್ರಾಜ್ಯ ಕಟ್ಟಿದ!


ಚಮ್ಮಾರನ ಮಗ 'ಅಶೋಕ'ನಂತೆಯೇ ಸಾಮ್ರಾಜ್ಯ ಕಟ್ಟಿದ!

ಭಾವತೀರಯಾನ- ಎ.ಆರ್.ಮಣಿಕಾಂತ್

ಅವನ ಹೆಸರು ಅಶೋಕ್ ಖಾಡೆ. ಆತ ಚಮ್ಮಾರನ ಮಗ. ದಲಿತರ ಹುಡುಗ ಎಂಬ ಒಂದೇ ಕಾರಣದಿಂದ, ಶಾಲೆಯಲ್ಲಿ ಯಾರೂ ಅವನನ್ನು ಮುಟ್ಟಿಸಿಕೊಳ್ಳಲಿಲ್ಲ. ಹೆಸರು ಕೂಗಿದರೆ ಮೈಲಿಗೆ ಆಗುತ್ತದೆ ಎಂಬ ಕಾರಣದಿಂದ, ಆರನೇ ತರಗತಿಯವರೆಗೂ ಶಿಕ್ಷಕರು ಅವನಿಗೆ ಪ್ರಶ್ನೆಗಳನ್ನೇ ಕೇಳಲಿಲ್ಲ. ಅಟೆಂಡೆನ್ಸ್ ಕೂಗಲಿಲ್ಲ. ಹೀಗೆ, ಹೆಜ್ಜೆಗೊಂದು ಅವಮಾನವಾದರೂ ಆ ಹುಡುಗ ಅಂಜಲಿಲ್ಲ. ಅಧೀರನಾಗಲಿಲ್ಲ. ಬದಲಿಗೆ ಶ್ರದ್ಧೆಯಿಂದ ಓದಿದ. ಶಾಲೆಗೇ ಮೊದಲಿಗ ಅನ್ನಿಸಿಕೊಂಡ. ತನ್ನ ಮುದ್ದಾದ ಅಕ್ಷರಗಳಿಂದ, ಉತ್ತಮ ನಡವಳಿಕೆಯಿಂದ ಶಿಕ್ಷಕರ ಮನಸ್ಸು ಗೆದ್ದ. ಇವತ್ತು ಏನಾಗಿದೆಯೆಂದರೆ- ಆ ದಲಿತರ ಹುಡುಗನೇ ತೈಲ ಬಾವಿಗಳನ್ನು ಕೊರೆಯುವ, ಮೇಲ್ಸೆತುವೆಗಳನ್ನು ನಿರ್ಮಿಸುವ ಬೃಹತ್ ಕಂಪನಿಯೊಂದರ ಬಾಸ್ ಆಗಿದ್ದಾನೆ. ಸಾವಿರ ಕೋಟಿಗಳ ಸರದಾರ ಅನ್ನಿಸಿಕೊಂಡಿದ್ದಾನೆ. ಸೌದಿ ಅರೇಬಿಯಾದ ದೊರೆಗಳೊಂದಿಗೆ ವ್ಯವಹಾರದಲ್ಲಿ ಪಾಲುದಾರಿಕೆ ಹೊಂದಿದ್ದಾನೆ. 4500 ಮಂದಿಗೆ ನೌಕರಿ ನೀಡಿದ್ದಾನೆ. ಆ ಮೂಲಕ ಹಠ, ಛಲ ಮತ್ತು ಪರಿಶ್ರಮದಿಂದ ಒಬ್ಬ ಮನುಷ್ಯ ಯಾವ ಹಂತ ತಲುಪಬಹುದು ಎಂಬುದಕ್ಕೆ ಸಾಕ್ಷಿಯೂ ಆಗಿದ್ದಾನೆ.ಒಂದು ರೀತಿ ತೆಲುಗು ಸಿನಿಮಾದಂತೆಯೇ ಇರುವ ತಮ್ಮ ಬದುಕಿನ ಕಥೆಯನ್ನು, ನಮ್ಮ ಕಥಾನಾಯಕ ಅಶೋಕ್ ಖಾಡೆಯವರು ವಿವರಿಸುವುದು ಹೀಗೆ:'ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ, ತಸ್ಗಾನ್ ತಾಲೂಕಿನ ಪೆಡ್ ಎಂಬುದು ನನ್ನ ಹುಟ್ಟೂರು. ನನ್ನ ತಂದೆ ವೃತ್ತಿಯಿಂದ ಚಮ್ಮಾರರು. ನಾವು 6 ಮಂದಿ ಮಕ್ಕಳು. ದಲಿತರು ಎಂಬ ಒಂದೇ ಕಾರಣದಿಂದ ನಾವು  ಬಾವಿಯ ನೀರು ಮುಟ್ಟುವಂತಿರಲಿಲ್ಲ. ಊರಿಂದ ಎರಡು ಮೈಲಿ ದೂರವಿದ್ದ ನದಿಯ ಬಯಲಿನಲ್ಲಿ ಗುಂಡಿ ತೋಡಿ ಅಲ್ಲಿಂದ ನೀರು ತರಬೇಕಿತ್ತು. ತಂದೆ-ತಾಯಿಗೆ ಮೇಲ್ಜಾತಿಯ ಜನರ ಜಮೀನಿನಲ್ಲಿ ಕೆಲಸ ಸಿಗುತ್ತಿತ್ತು. ಆದರೆ ಇಂತಿಷ್ಟೇ ಕೂಲಿ ಕೇಳುವ ಸ್ವಾತಂತ್ರ್ಯವಿರಲಿಲ್ಲ. ಶ್ರೀಮಂತರು ಅಷ್ಟು ದೂರದಲ್ಲಿ ನಿಂತು ಒಂದು ನಾಣ್ಯ ಎಸೆದರೆ, ಅದನ್ನೇ ಮಹಾಪ್ರಸಾದ ಎಂದು ಸ್ವೀಕರಿಸಿ ಎದ್ದು ಬರಬೇಕಿತ್ತು. ಊರೊಳಗಿನ ಪರಿಸ್ಥಿತಿ ಹೀಗಿದ್ದರೆ ಶಾಲೆಯಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಿತ್ತು. ದಲಿತ ಎಂಬ ಒಂದೇ ಕಾರಣದಿಂದ ನನ್ನನ್ನು ಯಾರೂ ಮುಟ್ಟುತ್ತಿರಲಿಲ್ಲ. ಮಾತಾಡಿಸುತ್ತಿರಲಿಲ್ಲ. ಬಾಗಿಲಿಂದ ಹೊರಗೆ ಕುಳಿತೇ ಪಾಠ ಕೇಳಬೇಕೆಂದು ಶಿಕ್ಷಕರೇ ಆಜ್ಞಾಪಿಸಿದ್ದರು. ಹೆಸರು ಕೂಗಿದರೆ ಮೈಲಿಗೆ ಆಗುತ್ತದೆ ಎಂಬ ಕಾರಣದಿಂದ 6ನೇ ತರಗತಿಯವರೆಗೂ ನನಗೆ ಪ್ರಶ್ನೆಗಳನ್ನೇ ಕೇಳಲಿಲ್ಲ. ಅಟೆಂಡೆನ್ಸ್ ಕೂಗಲಿಲ್ಲ. ಅಂದ ಹಾಗೆ, ಇದೆಲ್ಲಾ ನಡೆದದ್ದು 1965ರಲ್ಲಿ.ಇಂಥ ಸಂದರ್ಭಗಳಲ್ಲೆಲ್ಲ ನನಗೆ ಅಂಬೇಡ್ಕರ್ ನೆನಪಾಗುತ್ತಿದ್ದರು. ಅವರ ಹೋರಾಟದ ಬದುಕು ನೆನಪಾಗುತ್ತಿತ್ತು. ಅಂಬೇಡ್ಕರ್ ಅವರಂತೆಯೇ ಹೆಚ್ಚಿನ ವಿದ್ಯಾಭ್ಯಾಸ ಮಾಡಿ ನೌಕರಿ ಹಿಡಿಯಬೇಕು. ದೊಡ್ಡ ಹೆಸರು ಮಾಡಬೇಕು ಎಂದು ಆಸೆಯಾಗುತ್ತಿತ್ತು. ಆದರೆ, ನನ್ನ ತಂದೆಗೆ ಪುಸ್ತಕ ತೆಗೆದುಕೊಡುವ ಶಕ್ತಿಯೂ ಇರಲಿಲ್ಲ. ನಾವೆಲ್ಲ ಬರೀ ನೀರು ಕುಡಿದು ಮಲಗಿದ ದಿನಗಳಿಗೆ ಲೆಕ್ಕವೇ ಇಲ್ಲ. ಹೊದೆಯಲು ಬೆಡ್‌ಶೀಟ್ ಇಲ್ಲ ಎಂಬ ಕಾರಣಕ್ಕೆ ಚಳಿಗಾಲದಲ್ಲಿ ಚಾಪೆಯನ್ನೇ ಬೆಡ್‌ಶೀಟ್ ಥರಾ ಬಳಸುತ್ತಿದ್ದೆವು. ಇಂಥ ಸಂಕಟದ ಮಧ್ಯೆಯೂ ನಾನು ಶ್ರದ್ಧೆಯಿಂದ ಓದಿದೆ. ಶಾಲೆಗೆ ಮೊದಲಿಗ ಅನ್ನಿಸಿಕೊಂಡೆ. ಏಳನೇ ತರಗತಿಯಲ್ಲಿ ನನ್ನ ಅಂಕಪಟ್ಟಿ ಗಮನಿಸಿದ ಶಿಕ್ಷಕರು 'ವೆರಿಗುಡ್‌' ಎಂದರು. ಒಂದು ಜೊತೆ ಹೊಸ ಬಟ್ಟೆ ಕೊಡಿಸಿ ಬೆನ್ನು ತಟ್ಟಿದರು. ಆ ದಿನಗಳಲ್ಲಿ ಪರೀಕ್ಷೆ ಬರೆಯಲು ನಾವೇ ಹಾಳೆಗಳನ್ನು ಕೊಂಡೊಯ್ಯಬೇಕಿತ್ತು. ಒಂಭತ್ತನೇ ತರಗತಿಯಲ್ಲಿದ್ದಾಗ, ಹಾಳೆ ಖರೀದಿಗೂ ನನ್ನಲ್ಲಿ ಹಣವಿರಲಿಲ್ಲ. ಶಿಕ್ಷಕರ ಮುಂದೆ ಕಣ್ಣೀರು ಸುರಿಸುತ್ತಾ ನಿಂತುಕೊಂಡೆ. ಕರಗಿದ ಅವರು, ಅಟೆಂಡೆನ್ಸ್ ಪುಸ್ತಕದಲ್ಲಿದ್ದ ನಾಲ್ಕು ಹಾಳೆಗಳನ್ನೇ ಹರಿದು ಕೊಟ್ಟರು. ಮುಂದೆ, ಅವರಿವರಲ್ಲಿ ಕಾಡಿಬೇಡಿ ಒಂದೊಂದೇ ಪೈಸೆ ಜೋಡಿಸಿಕೊಂಡು 3 ರು. ಬೆಲೆಯ ಫೌಂಟನ್ ಪೆನ್ ಖರೀದಿಸಿದೆ. ಅದರಲ್ಲಿಯೇ 10ನೇ ತರಗತಿಯ ಪರೀಕ್ಷೆ ಬರೆದು, ಶಾಲೆಗೇ ಮೊದಲಿಗನಾಗಿ ಪಾಸಾದೆ. ಮುಂದೆ ಕಾಲೇಜು ಮುಗಿಸಿ, ಮೆಡಿಕಲ್ ಸೇರಬೇಕೆಂಬುದು ನನ್ನ ಆಸೆಯಾಗಿತ್ತು.ಈ ಮಧ್ಯೆ ತಂದೆಗೆ ವಯಸ್ಸಾಗಿತ್ತು. ಸಂಪಾದನೆಯೂ ಕಡಿಮೆಯಾಗಿತ್ತು. ತಂಗಿಯರು ಬೆಳೆಯುತ್ತಿದ್ದರು. ಈ ಸಂದರ್ಭದಲ್ಲಿ ನನ್ನ ಬಳಿ ಬಂದ ಚಿಕ್ಕಪ್ಪ- ಮನೆಯ ಪರಿಸ್ಥಿತಿ ಸುಧಾರಿಸಬೇಕಾದ್ರೆ ನೀನು ಕೆಲಸಕ್ಕೆ ಸೇರಬೇಕು. ಕಾಲೇಜು ಸೇರುವ ಆಸೆ ಬಿಟ್ಟು ಬಾಂಬೆಗೆ ಹೊರಡು ಅಂದರು. ದೇಶದ ನೌಕಾದಳಕ್ಕೆ ಸಬ್‌ಮೆರಿನ್‌ಗಳು ಹಾಗೂ ಯುದ್ಧ ನೌಕೆಗಳನ್ನು ತಯಾರಿಸುವ ಮಜಗಾನ್ ಡಾಕ್ ಎಂಬ ಕಂಪನಿಯಲ್ಲಿ ಚಿಕ್ಕಪ್ಪನಿಗೆ ನೌಕರಿಯಿತ್ತು. ನನ್ನೊಂದಿಗೆ ಸೋದರರಾದ ದತ್ತಾ ಹಾಗೂ ಸುರೇಶ್‌ಖಾಡೆಯನ್ನೂ ಅವರು ಬಾಂಬೆಗೆ ಕರೆದುಕೊಂಡು ಹೋದರು. ಅವತ್ತಿನ ವೇಳೆಗೆ ನನಗೆ ಚೆನ್ನಾಗಿ ನಕ್ಷೆ ಬಿಡಿಸಲು ಬರುತ್ತಿತ್ತು. ಈ ಕಾರಣದಿಂದ ನನ್ನನ್ನು ಡಿಸೈನರ್ ಎಂದು ನೌಕರಿಗೆ ತೆಗೆದುಕೊಂಡರು. ನಿಜ ಹೇಳಬೇಕೆಂದರೆ, ಕೆಲಸ ಸಿಕ್ಕಿದ್ದರಿಂದ ನನಗೆ ಸಂತೋಷವೇನೂ ಆಗಲಿಲ್ಲ. ಬದಲಿಗೆ, ಡಾಕ್ಟರ್ ಆಗುವ ಕನಸು ಕೈ ತಪ್ಪಿದ್ದಕ್ಕೆ ವಿಪರೀತ ದುಃಖವಾಯಿತು. ಎಷ್ಟೋ ಸಂದರ್ಭದಲ್ಲಿ ಕೆಲಸದ ಸಮಯದಲ್ಲೇ ಅಳು ಬರುತ್ತಿತ್ತು. ಆಗೆಲ್ಲ, ಒಂದು ಮೂಲೆಗೆ ಬಂದು ಸಮಾಧಾನವಾಗುವಷ್ಟು ಅತ್ತು ಹಿಂತಿರುಗುತ್ತಿದ್ದೆ. ಹೀಗೆಯೇ ಒಂಭತ್ತು ವರ್ಷಗಳು ಕಳೆದು ಹೋದವು. ಈ ಮಧ್ಯೆಯೇ ನಾನು ಸಂಜೆ ಕಾಲೇಜು ಸೇರಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮುಗಿಸಿದ್ದೆ. ನೌಕರಿಯಲ್ಲಿ ಪ್ರಮೋಷನ್ ಸಿಕ್ಕಿತ್ತು. 1984ರಲ್ಲಿ ಉನ್ನತ ತರಬೇತಿಗೆಂದು ಕಂಪನಿ ಜರ್ಮನಿಗೆ ಕಳಿಸಿಕೊಟ್ಟಿತು. ತರಬೇತಿ ಮುಗಿಯಲು ಕೆಲವೇ ದಿನಗಳಿವೆ ಎನ್ನುವಾಗ, ಜರ್ಮನಿಯ ನೌಕರನೊಬ್ಬನ ಸ್ಯಾಲರಿ ಸ್ಲಿಪ್ ನೋಡಿದೆ. ಆಶ್ಚರ್ಯವಾಯಿತು: ಕಾರಣ, ನಾನು ಇಡೀ ವರ್ಷ ದುಡಿದು ಸಂಪಾದಿಸುತ್ತಿದ್ದಷ್ಟು ಹಣವನ್ನು ನನ್ನದೇ ಗ್ರೇಡ್‌ನಲ್ಲಿದ್ದ ವಿದೇಶಿ ನೌಕರ ಒಂದೇ ತಿಂಗಳಿನಲ್ಲಿ ಸಂಪಾದಿಸುತ್ತಿದ್ದ! ಅದನ್ನು ನೋಡುತ್ತಿದ್ದಂತೆಯೇ ಬೆಳೆದು ನಿಂತ ತಂಗಿಯರು, ದುಡಿಯಲು ಶಕ್ತಿಯಿಲ್ಲದೆ ನಿತ್ರಾಣರಾಗಿರುವ ಪೋಷಕರ ಚಿತ್ರ ಕಣ್ಮಂದೆ ಬಂತು. ಬೇರೆಯವರ ಕೈ ಕೆಳಗೆ ದುಡಿಯುವ ಬದಲು ನಮ್ಮದೇ ಸ್ವಂತ ಕಂಪನಿ ಆರಂಭಿಸಿದರೆ ಹೆಚ್ಚು ಸಂಪಾದಿಸಬಹುದು ಎಂಬ ಗಟ್ಟಿ ನಿರ್ಧಾರದೊಂದಿಗೇ ಬಾಂಬೆಗೆ ವಾಪಸಾದೆ.ನನ್ನ ಸೋದರರಿಬ್ಬರೂ ಅತ್ಯುತ್ತಮ ವೆಲ್ಡಿಂಗ್ ತಂತ್ರಜ್ಞರು ಎಂದು ಹೆಸರು ಮಾಡಿದ್ದರು. ಈ ವೇಳೆಗೆ, ನಮ್ಮನ್ನು ಬಾಂಬೆಗೆ ಕರೆತಂದು ಹೊಟ್ಟೆಪಾಡಿಗೆ ದಾರಿ ಮಾಡಿಕೊಟ್ಟಿದ್ದ ಚಿಕ್ಕಪ್ಪ ತೀರಿಕೊಂಡಿದ್ದರು. ಪರಿಣಾಮವಾಗಿ, ಅವರ ಮೂರು ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ಜವಾಬ್ದಾರಿಯೂ ನಮ್ಮ ಹೆಗಲಿಗೆ ಬಿದ್ದಿತ್ತು. ಇದು 1991ರ ಮಾತು. ಆಗಲೇ ದೇಶಾದ್ಯಂತ ಆರ್ಥಿಕ ಉದಾರೀಕರಣದ ಗಾಳಿ ಬೀಸಿತು. ಸ್ವಂತ ಉದ್ಯಮ ಆರಂಭಿಸುವವರನ್ನು ಪ್ರೋತ್ಸಾಹಿಸುವ ಹೊಸ ಕಾನೂನು ಜಾರಿಗೆ ಬಂತು. ಆಗಲೇ ನಾನು ಧೈರ್ಯ ಮಾಡಿ ನೌಕರಿ ತೊರೆದೆ. ನನ್ನ ಸೋದರರಿಗೂ ಕೆಲಸ ಬಿಡುವಂತೆ ಹೇಳಿದೆ. ನಂತರ ದತ್ತಾ, ಅಶೋಕ್, ಸುರೇಶ್ ಎಂಬ ಹೆಸರು ಮೊದಲಕ್ಷರಗಳನ್ನು ತೆಗೆದುಕೊಂಡು DAS OFF SHORE company ಆರಂಭಿಸಿದೆ. ಸಮುದ್ರದಲ್ಲಿ ತೈಲಕ್ಕಾಗಿ ಕೊಳವೆ ಬಾವಿ ಕೊರೆಯುವ, ತೈಲವನ್ನು ವಿವಿಧ ಕಂಪನಿಗಳಿಗೆ ಪೂರೈಸುವ ಕೆಲಸ ಮಾಡಲು ನಿರ್ಧರಿಸಿದೆ. ಮಜಗಾನ್ ಡಾಕ್ ಕಂಪನಿಯಲ್ಲಿ 15 ವರ್ಷಗಳ ಸುದೀರ್ಘ ಕಾಲ ಕೆಲಸ ಮಾಡಿದ್ದರಿಂದ ಭವಿಷ್ಯದ ದಿನಗಳಲ್ಲಿ ನಾವು ಮಾಡಬೇಕಿರುವ ಕೆಲಸಗಳ ಬಗ್ಗೆ ನಮಗೆ ಸ್ಪಷ್ಟತೆಯಿತ್ತು. ವಿವಿಧ ಕೆಲಸಗಳಿಗೆ ಕಂಟ್ರಾಕ್ಟ್ ಕೊಡಬಲ್ಲ ನೂರಾರು ಉದ್ಯಮಿಗಳ ಪರಿಚಯವೂ ಇತ್ತು.ಮುಂಚಿತವಾಗಿ ತಿಳಿಸದೆ ದಿಢೀರನೆ ನೌಕರಿ ತೊರೆದಿದ್ದರಿಂದ ಎರಡೆರಡು ತಿಂಗಳ ಸಂಬಳವನ್ನು ನಾವು ಮಜಗಾನ್ ಡಾಕ್ ಕಂಪನಿಗೆ ದಂಡದ ರೂಪದಲ್ಲಿ ಕಟ್ಟಬೇಕಾಯಿತು. ನಿಜವಾಗಿ, ಅದು ಕೈ ಖಾಲಿಯಾದ ಸಂದರ್ಭ. ಅದರರ್ಥ, ಒಂದು ಉದ್ದಿಮೆ ಆರಂಭಿಸಲು ಬೇಕಾದಷ್ಟು ಮೂಲ ಬಂಡವಾಳ ಇಲ್ಲದೇ ನಾವು ಕಂಪನಿ ಆರಂಭಿಸಿದ್ದೆವು. ಈ ಸಂದರ್ಭದಲ್ಲಿ, ಕಂಪನಿಗೆ ಸೇರಿದ್ದ ನೌಕರರೆಲ್ಲ ನೆರವಿಗೆ ಬಂದರು. ತಮ್ಮಲ್ಲಿದ್ದ ಹಣವನ್ನೆಲ್ಲ ಉದಾರವಾಗಿ ನೀಡಿ ತೈಲ ಬಾವಿ ಕೊರೆಯಲು ಆಗತ್ಯವಿರುವ ಭಾರಿ ಯಂತ್ರಗಳನ್ನು ಖರೀದಿಸಿ ಎಂದರು.ಇದೇ ವೇಳೆಗೆ ನೂರಾರು ಮಂದಿ ಹಿತೈಷಿಗಳ ನೆರವೂ ಸಿಕ್ಕಿತು.ಹೀಗೆ, ಮೂಲ ಬಂಡವಾಳವೇ ಇಲ್ಲದೆ ಆರಂಭವಾದ DAS OFF SHORE ಕಂಪನಿಗೆ ಮೊದಲ ಕಂಟ್ರ್ಯಾಕ್ಟ್ ಬಂದಿದ್ದು ಈ ಮೊದಲು ನಾವು ಕೆಲಸ ಮಾಡಿದ ಮಜಗಾನ್ ಡಾಕ್ ಕಂಪನಿಯಿಂದಲೇ. ಅದು 1.25 ಕೋಟಿ ರೂ.ಗಳ ಪ್ರಾಜೆಕ್ಟ್. ನಾವು ತಡ ಮಾಡಲಿಲ್ಲ. ನಮಗಿದು ಸತ್ವ ಪರೀಕ್ಷೆಯ ಕಾಲ ಎಂದುಕೊಂಡೇ ದುಡಿಯಲು ನಿಂತೆವು. ನಿಗದಿತ ಅವಧಿಗಿಂತ ಒಂದು ವಾರ ಮೊದಲೇ ಮಜಗಾನ್ ಡಾಕ್ ಕಂಪನಿಗೆ ಉತ್ಪನ್ನಗಳನ್ನು ಒದಗಿಸಿದೆವು. ನಾವು ತಯಾರಿಸಿದ್ದ ವಸ್ತುಗಳ ಗುಣಮಟ್ಟ ಕಂಡು ಮಜಗಾನ್ ಡಾಕ್ ಕಂಪನಿಯ ಅಧಿಕಾರಿಗಳು ಎಷ್ಟು ಖುಷಿಯಾದರೆಂದರೆ, 1992ರಿಂದ ಸತತ ಎಂಟು ವರ್ಷಗಳ ಕಾಲ ತಮ್ಮ ಕಂಪನಿಗೆ ಬೇಕಿದ್ದ ಬಿಡಿ ಭಾಗಗಳ ತಯಾರಿಕೆಯ ಎಲ್ಲ ಆರ್ಡರ್‌ಗಳನ್ನು ನಮ್ಮ ಉಆಖ ಕಋಋ ಖಏಕಖಊ ಕಂಪನಿಗೇ ನೀಡಿದರು. ಪರಿಣಾಮ, ತೀರಾ ಅಲ್ಪಾವಧಿಯಲ್ಲಿ ನಮ್ಮ ಕಂಪನಿಯ ಟರ್ನ್ ಓವರ್ ಕೋಟಿಗಳನ್ನು ದಾಟಿತು. ಮುಂದೆ ಮುಂಬಯಿಯ ವಿವಿಧ ಕಡೆಗಳಲ್ಲಿ ಮೇಲ್ಸೇತುವೆಗಳನ್ನೂ ನಿರ್ಮಿಸುವ ಕೆಲಸದ ಗುತ್ತಿಗೆ ಕೂಡಾ ನಮ್ಮ ಕಂಪನಿಗೇ ಸಿಕ್ಕಿತು.
ಈಗ ಏನಾಗಿದೆಯೆಂದರೆ, ಭಾರತ ಮಾತ್ರವಲ್ಲದೆ ಜಪಾನ್, ಜರ್ಮನಿ, ಮಲೇಷ್ಯಾ, ಕೊರಿಯಾ, ಇರಾನ್, ನೈಜೀರಿಯಾ... ಹೀಗೆ ಹಲವು ರಾಷ್ಟ್ರಗಳಲ್ಲಿ ನೇರವಾಗಿ ಅಥವಾ ಗುತ್ತಿಗೆ ಆಧಾರದ ಮೇಲೆ ತೈಲ ಬಾವಿ ತೋಡುವ, ಅನಿಲವನ್ನು ತೆಗೆಯುವ ಕೆಲಸವನ್ನು ನಮ್ಮ DAS OFF SHORE Company ಮಾಡುತ್ತಿದೆ. ಇದರೊಂದಿಗೆ ಮೇಲ್ಸೇತುವೆಗಳ ನಿರ್ಮಾಣ ಹಾಗೂ ಅದಕ್ಕೆ ಅಗತ್ಯವಿರುವ ಬಿಡಿ ಭಾಗಗಳ ತಯಾರಿಕೆಯಲ್ಲೂ ನಮ್ಮ ಕಂಪನಿ ಮುಂದಿದೆ.  ಆಯಿಲ್ ಅಂಡ್ ನ್ಯಾಚುಲರ್  ಗ್ಯಾಸ್ ಕಾರ್ಪೊರೇಷನ್‌ಗೆ ಭಾರಿ ಮೊತ್ತದ ಬಿಡಿಭಾಗ ಪೂರೈಸುವ ಕಾಂಟ್ರ್ಯಾಕ್ಟ್ ಸಿಕ್ಕಿದೆ. ಹಾಗಾಗಿ 1992ರಲ್ಲಿ ಕೆಲವೇ ಲಕ್ಷ ರೂ.ಗಳ ಬಂಡವಾಳದೊಂದಿಗೆ ಆರಂಭವಾದ ಕಂಪನಿಯ ವಾರ್ಷಿಕ ಲಾಭವೀಗ ಸಾವಿರ ಕೋಟಿಗೆ ಬಂದು ನಿಂತಿದೆ. ದೇಶದ ಅತಿ ಶ್ರೀಮಂತ ದಲಿತ ಕೈಗಾರಿಕೋದ್ಯಮಿ ಎಂಬ ಹೆಗ್ಗಳಿಕೆ ನನ್ನದಾಗಿದೆ. ಅರಬ್ ರಾಷ್ಟ್ರಗಳ ದೊರೆಗಳೊಂದಿಗೆ ತೈಲೋದ್ಯಮ ವ್ಯವಹಾರದಲ್ಲಿ ಪಾಲುದಾರಿಕೆ ಆರಂಭಿಸುವ ಮಟ್ಟಕ್ಕೆ ನಾನೀಗ ತಲುಪಿದ್ದೇನೆ. ಈ ಮಾತನ್ನು ಸಂಕೋಚ ಮತ್ತು ಹೆಮ್ಮೆಯಿಂದಲೇ ಹೇಳುತ್ತಿದ್ದೇನೆ.ನನ್ನ ಈ ಯಶಸ್ಸು ಹಲವರ ಕಣ್ತೆರೆಸಿದೆ. ಮುಖ್ಯವಾಗಿ, ಹುಟ್ಟೂರಿನ ಜನ ನನ್ನ ಯಶೋಗಾಥೆಯನ್ನು ಗಮನಿಸಿದ್ದಾರೆ. ಕೇವಲ ನಲವತ್ತು ವರ್ಷಗಳ ಹಿಂದೆ ನನ್ನನ್ನು ಮುಟ್ಟಲು ಹಿಂಜರಿಯುತ್ತಿದ್ದವರೇ ಇವತ್ತು ಹಾರ ಹಾಕಿ ಸನ್ಮಾನಿಸುತ್ತಿದ್ದಾರೆ. ಒಂದು ಕಾಲದಲ್ಲಿ ನಮಗೆ ಊರಿನ ಸಿದ್ಧೇಶ್ವರ ದೇವಾಲಯಕ್ಕೆ ಪ್ರವೇಶವಿರಲಿಲ್ಲ. ಮುಂದೊಂದು ದಿನ ಅದೇ ದೇವಾಲಯದ ಜೀರ್ಣೋದ್ಧಾರಕ್ಕೆ ನೆರವಾಗುವಂತೆ ಊರ ಜನ ಕೇಳಿಕೊಂಡರು. ಜೀರ್ಣೋದ್ಧಾರಕ್ಕೆ ಕೋಟಿ ರೂಪಾಯಿ ಖರ್ಚಾದರೂ ಪರವಾಗಿಲ್ಲ, ನಾನು ಕೊಡುತ್ತೇನೆ. ಆದರೆ ದೇವಾಲಯದಲ್ಲಿ ಎಲ್ಲ ಜಾತಿಯವರಿಗೂ ಪ್ರವೇಶ ಸಿಗಬೇಕು ಎಂಬ ಬೇಡಿಕೆಯಿಟ್ಟೆ. ಜನ ಒಪ್ಪಿದರು. ಈಗ ನಮ್ಮ ಹುಟ್ಟೂರಿನಲ್ಲಿ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಪ್ರಯತ್ನಕ್ಕೂ ಕೈ ಹಾಕಿದ್ದೇವೆ. ಜೊತೆಗೆ ಹುಟ್ಟೂರಿನ ಸುತ್ತಮುತ್ತ ಇರುವ 20ಕ್ಕೂ ಹೆಚ್ಚು ಹಳ್ಳಿಗಳ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ದಾಸ್ ಆಫ್ ಶೋರ್ ಕಂಪನಿಯೇ ವಹಿಸಿಕೊಂಡಿದೆ. ನಮ್ಮ ತಾಲ್ಲೂಕಿನ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಮುಂದಾದರೆ, ಆ ಖರ್ಚನ್ನೂ ಕಂಪನಿಯೇ ವಹಿಸಿಕೊಳ್ಳುತ್ತದೆ. ಎಂಜಿನಿಯರಿಂಗ್ ಮುಗಿಸಿದವರಿಗೆ ಉದ್ಯೋಗ ನೀಡುವುದರಲ್ಲೂ ನಮ್ಮ ಕಂಪನಿ ಮುಂದಿದೆ. ಇದೆಲ್ಲಾ ಹುಟ್ಟೂರಿಗೆ ನನ್ನ ಅಳಿಲು ಸೇವೆ ಅಷ್ಟೆ. ನೌಕರಿ ನೀಡುವ ವಿಷಯಕ್ಕೆ ಬಂದರೆ ಮೆರಿಟ್ ಪಡೆದವರಿಗೆ ಮೊದಲ ಆದ್ಯತೆ. ಭವಿಷ್ಯದ ದಿನಗಳಲ್ಲಿ ದಾಸ್ ಆಫ್ ಶೋರ್ ಕಂಪನಿಯ ಹೆಸರು ಉಳಿಯಬೇಕೆಂದರೆ ಇಂಥ ನಿಯಮಗಳ ಪಾಲನೆ ಅತ್ಯಗತ್ಯ.ನಮ್ಮದೀಗ ಸಂತೃಪ್ತ, ಸುಖೀ ಕುಟುಂಬ. ಸೋದರಿಯರೆಲ್ಲ ನೆಮ್ಮದಿಯಿಂದ ಇದ್ದಾರೆ. ನಾವು ಸೋದರರೆಲ್ಲ ಬೆಂಜ್ ಕಾರುಗಳಲ್ಲಿ ಓಡಾಡುತ್ತೇವೆ. ಪಂಚತಾರಾ ಹೋಟೆಲುಗಳಲ್ಲಿ ಉಳಿಯುತ್ತೇವೆ. ವ್ಯವಹಾರ ಸಂಬಂಧವಾಗಿ ಕಾಗದ ಪತ್ರಗಳಿಗೆ ಸಹಿ ಹಾಕಲು ಲಕ್ಷರು. ಬೆಲೆಯ ಪೆನ್‌ಗಳನ್ನು ಬಳಸುತ್ತೇವೆ. ಆದರೆ, ಅಂಥ ಸಂದರ್ಭದಲ್ಲೆಲ್ಲ ಹತ್ತನೇ ತರಗತಿಯ ಪರೀಕ್ಷೆ ಬರೆದ 3 ರುಪಾಯಿನ ಪೆನ್ ನೆನಪಾಗುತ್ತದೆ. ಹಳೆಯ ದಿನಗಳು ನೆನಪಾಗಲಿ, ಅಹಂಕಾರ ನನ್ನ ತಲೆಗೇರದಿರಲಿ ಎಂಬ ಉದ್ದೇಶದಿಂದಲೂ ಅದನ್ನು ಈಗಲೂ ಇಟ್ಟುಕೊಂಡಿದ್ದೇನೆ. ದೇಶದ ಯುವಕರಿಗೆ ನನ್ನ ಸಂದೇಶವಿಷ್ಟೇ. ಜಾತಿ ಎಂಬ ಪೆಡಂಭೂತದಿಂದ ಪಾರಾಗಬೇಕೆಂದರೆ ಶ್ರದ್ಧೆಯಿಂದ ಓದಿ. ವಿದ್ಯೆ ಯಾವತ್ತೂ ನಿಮ್ಮ ಕೈ ಬಿಡುವುದಿಲ್ಲ. 50 ವರ್ಷಗಳ ಹಿಂದೆ ತಿಂಗಳಿಡೀ ದುಡಿದರೂ ಕೇವಲ ನಾಲ್ಕು ರುಪಾಯಿ ಸಂಪಾದಿಸಲು ಪರದಾಡುತ್ತಿದ್ದ ಯಕಶ್ಚಿತ್ ಚಮ್ಮಾರನ ಮಗ ನಾನು. ಅಂಥವನು 1500 ಕೋಟಿ ರು. ಲಾಭದ ಕಂಪನಿ ಕಟ್ಟಿದೆ ಎಂಬುದನ್ನು ನೆನೆದಾಗ ಖುಷಿ, ಆಶ್ಚರ್ಯ ಒಟ್ಟಿಗೇ ಆಗುತ್ತದೆ. ಇಂಥದೊಂದು ಬೆಳವಣಿಗೆಗೆ ಕಾರಣರಾದ ಎಲ್ಲರಿಗೂ ಋಣಿ ಎಂದಷ್ಟೇ ಹೇಳಬಲ್ಲೆ. ಅದಕ್ಕಿಂತ ಹೆಚ್ಚಿಗೆ ಹೇಳಲು ನನ್ನಲ್ಲಿ ಶಬ್ದಗಳಿಲ್ಲ...' ಹೀಗೆನ್ನುತ್ತಾ ತಮ್ಮ ಯಶೋಗಾಥೆಯ ವಿವರಣೆಗೆ ಫುಲ್‌ಸ್ಟಾಪ್ ಹಾಕಿದರು ಅಶೋಕ್ ಖಾಡೆ.ಅಂದಹಾಗೆ, ಈ ಅಪ್ರತಿಮ ಸಾಧಕನಿಗೆ ಅಭಿನಂದನೆ ಹೇಳಬೇಕು ಅನ್ನಿಸಿದರೆ ashokkhade4@gmail.com-ಎ.ಆರ್. ಮಣಿಕಾಂತ್armanikanth@gmail.com














No comments:

Post a Comment