Tuesday, 3 December 2013

ಕೈಕಾಲು ಬಿದ್ದುಹೋದರೂ, ವಿಶ್ವಾಸ ಎದ್ದು ನಿಲ್ಲಿಸಿತು!

ಕೈಕಾಲು ಬಿದ್ದುಹೋದರೂ, ವಿಶ್ವಾಸ ಎದ್ದು ನಿಲ್ಲಿಸಿತು!

ಭಾವತೀರಯಾನ- ಎ.ಆರ್.ಮಣಿಕಾಂತ್


ಅದೊಂದು ಕಾಲವಿತ್ತು. ಆಗೆಲ್ಲ, ಸ್ಟ್ರೋಕ್ ಅಥವಾ ಪಾರ್ಶ್ವವಾಯುವಿನಂಥ ತೊಂದರೆ ಅಮರಿಕೊಳ್ಳುವುದು ಐವತ್ತು ವರ್ಷ ದಾಟಿದವರಿಗೆ ಮಾತ್ರ ಎಂಬ ನಂಬಿಕೆ ಪ್ರಚಲಿತದಲ್ಲಿತ್ತು. ಆದರೀಗ ಕಾಲ ಬದಲಾಗಿದೆ. ಬದಲಾದ ಜೀವನ ಶೈಲಿ ಹಾಗೂ ಕೆಲಸದ ಒತ್ತಡದಿಂದ ಮನುಷ್ಯ ತುಂಬ ಬೇಗ ಉದ್ವೇಗಕ್ಕೆ ಒಳಗಾಗುತ್ತಿದ್ದಾನೆ. ಪರಿಣಾಮ, 35 ವರ್ಷ ದಾಟಿದವರಿಗೂ ಪಾರ್ಶ್ವವಾಯು ಅಮರಿಕೊಳ್ಳುತ್ತಿದೆ!
ಸ್ಟ್ರೋಕ್‌ನ ಕಾರಣಕ್ಕೆ ದೇಹದ ಯಾವುದಾದರೂ ಒಂದು ಅಂಗ ಸ್ವಾಧೀನ ಕಳೆದುಕೊಳ್ಳುವುದರಿಂದ, ಈ ತೊಂದರೆಗೆ ಒಳಗಾದವರು ಮೊದಮೊದಲು ಮನೆಮಂದಿಯ/ಬಂಧುಗಳ ಸಿಂಪಥಿಗೆ ಪಾತ್ರರಾಗುತ್ತಾರೆ. ನಂತರದ ಕೆಲವೇ ದಿನಗಳಲ್ಲಿ ಈ ಸಿಂಪಥಿಯೆಂಬುದು ನಿರ್ಲಕ್ಷ್ಯವಾಗಿ ಬದಲಾಗುತ್ತದೆ. ಆನಂತರದಲ್ಲಿ ಮನೆಯ ಒಂದು ರೂಂ ಪಾರ್ಶ್ವವಾಯು ಪೀಡಿತರ ವಾಸಸ್ಥಾನವಾಗಿ ಬದಲಾಗುತ್ತದೆ. 'ಪಾಪ, ಅವನ ಹಣೆಬರಹವೇ ಸರಿಯಿಲ್ಲ ಅನ್ಸುತ್ತೆ. ಚಿಕ್ಕ ವಯಸ್ಸಿಗೇ ಹೀಗಾಗಿ ಹೋಯ್ತು. ನಾವೂ ಹತ್ತಾರು ಕಡೆ ತೋರಿಸಿದ್ವಿ. ತಿರುಗಿ ತಿರುಗಿ ಚಪ್ಪಲಿ ಸವೆದವು. ದುಡ್ಡು ಖರ್ಚಾಯ್ತು. ಆದರೆ ಇವನ ಆರೋಗ್ಯ ಸುಧಾರಿಸಲಿಲ್ಲ. ಆಸ್ಪತ್ರೆಗೆ ಅಲೆಯುವುದರಿಂದ ಉಪಯೋಗವಿಲ್ಲ ಅನ್ನಿಸಿದ ಮೇಲೆ ಆ ವಿಷಯ ಯೋಚಿಸುವುದನ್ನೇ ನಿಲ್ಸಿದೀವಿ. ಬದುಕಿರುವಷ್ಟು ದಿನ ಇವರನ್ನು ಚೆನ್ನಾಗಿ ನೋಡ್ಕೋಬೇಕು ಅಂತ ತೀರ್ಮಾನಿಸಿದ್ದೀವಿ' ಎಂದು ನಿರ್ಭಾವುಕರಾಗಿ ಹೇಳುವುದು ಕುಟುಂಬದವರಿಗೆ ಅಭ್ಯಾಸವಾಗಿಬಿಡುತ್ತದೆ. ಸ್ವಾರಸ್ಯವೆಂದರೆ, ಸ್ಟ್ರೋಕ್‌ಗೆ ಈಡಾದವರು ಕೂಡ ಈ ಮಾತುಗಳನ್ನು ಒಪ್ಪಿಕೊಳ್ಳುತ್ತಾರೆ. ನಂತರ 'ಲೈಫು ಇಷ್ಟೇನೆ' ಎಂದು ನಿರ್ಧರಿಸಿ ಇದ್ದೂ ಇಲ್ಲದಂತೆ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ.
ಇಂಥ ಮಾತುಗಳಿಗೆ ತದ್ವಿರುದ್ಧ ಎಂಬಂತಿರುವ ಸಾಹಸಿಯ ಹೆಸರು ವಿಜಯ್ ಸಂತಾನಂ. ಸದ್ಯಕ್ಕೆ ಸಿಂಗಪುರದಲ್ಲಿರುವ ವಿಜಯ್, ಚೆನ್ನೈ ಮೂಲದವರು. ಕಾರ್ಪೋರೇಟ್ ಕಂಪನಿಯ ಮುಖ್ಯಸ್ಥರಾಗಿ ದೇಶ-ವಿದೇಶಗಳಲ್ಲಿ ಸುತ್ತಾಡಿಕೊಂಡಿದ್ದ ವಿಜಯ್‌ಗೆ 41 ವರ್ಷಕ್ಕೇ ಸ್ಟ್ರೋಕ್ ಅಮರಿಕೊಂಡಿತು. ದೇಹದ ಒಂದು ಭಾಗ ಸಂಪೂರ್ಣವಾಗಿ ಸ್ವಾಧೀನ ಕಳೆದುಕೊಂಡ ನಂತರವೂ, ಬದುಕುವ ಛಾನ್ಸಸ್ ಬಹಳ ಕಡಿಮೆ ಎಂದು ಹಲವು ವೈದ್ಯರು ಹೇಳಿದ ನಂತರವೂ ಸೂಕ್ತ ಚಿಕಿತ್ಸೆಗಾಗಿ ಹಂಬಲಿಸಿದ ಆತ, ಸತತ ನಾಲ್ಕು ವರ್ಷಗಳ ಹೋರಾಟದ ನಂತರ ಪಾರ್ಶ್ವವಾಯುವಿನ ಮೇಲೆ ಗೆಲುವು ಸಾಧಿಸಿದ್ದಾರೆ. ಆ ಮೂಲಕ, ಮನೋಬಲವೊಂದಿದ್ದರೆ ಎಂಥ ಸಮಸ್ಯೆಯನ್ನೂ ಹಿಮ್ಮೆಟ್ಟಿಸಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ.My Stroke of Luck ಎಂಬ ಪುಸ್ತಕ ಬರೆದು, ತಮಗೆ ಎದುರಾದ ಸವಾಲು, ಅದನ್ನು ಎದುರಿಸಲು ತಾವು ಅನುಸರಿಸಿದ ದಾರಿಯ ಬಗ್ಗೆ ವಿವರವಾಗಿ ಹೇಳಿದ್ದಾರೆ. ಆ ಯಶೋಗಾಥೆಯ ಸಂಕ್ಷಿಪ್ತ ವಿವರ ಇಲ್ಲಿದೆ.
----
'ನಾನು ಹುಟ್ಟಿ ಬೆಳೆದದ್ದೆಲ್ಲ ಚೆನ್ನೈನಲ್ಲಿ. ರೂರ್ಕಿಯಲ್ಲಿರುವ ಐಐಟಿಯಲ್ಲಿ ಡಿಗ್ರಿ ಮುಗಿಸುತ್ತಿದ್ದಂತೆಯೇ ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಅದರ ಮುಖ್ಯ ಕಚೇರಿ ಇದ್ದುದು ಸಿಂಗಪುರದಲ್ಲಿ. ಪರಿಣಾಮ, ನಾನು ಚೆನ್ನೈಗೆ ಗುಡ್‌ಬೈ ಹೇಳಿ ಸಿಂಗಪುರಕ್ಕೆ ಹಾರಿದೆ. ಹತ್ತು ವರ್ಷಗಳ ನಂತರ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥನಾದೆ. ಮುಂದೆ, ಖೈನಾಜ್ ಎಂಬಾಕೆಯೊಂದಿಗೆ ಮದುವೆಯಾಯಿತು. ಝರೀಸ್ ಎಂಬ ಮಗನೂ ನಮ್ಮ ಬದುಕಿಗೆ ಬಂದ. ಕಾರ್ಪೊರೇಟ್ ವಿಭಾಗದ, ಅದೂ ಎಂಎನ್‌ಸಿ ಕಂಪನಿಯ ಕೆಲಸ ಅಂದ ಮೇಲೆ ಕೇಳಬೇಕೆ? ನಾನು ಸದಾ ಬ್ಯುಸಿಯಾಗಿರುತ್ತಿದ್ದೆ. ಆಫೀಸ್ ಕೆಲಸದ ಕಾರಣಕ್ಕೆ ವಾರಕ್ಕೊಮ್ಮೆ ವಿದೇಶಕ್ಕೆ ತೆರಳುತ್ತಿದ್ದೆ. ನನ್ನ ಬ್ಯುಸಿ ಬದುಕನ್ನು ಕುಟುಂಬದವರೆಲ್ಲ ಒಪ್ಪಿಕೊಂಡಿದ್ದರು.
ನನಗಿದ್ದ ಬಹು ದೊಡ್ಡ ಹುಚ್ಚು ಅಂದರೆ, ಸ್ಟೇಡಿಯಂಗೆ ಹೋಗಿ ಕ್ರಿಕೆಟ್ ನೋಡುವುದು. ಸಚಿನ್ ತೆಂಡೂಲ್ಕರ್, ನನ್ನ ಮೆಚ್ಚಿನ ಆಟಗಾರ. ತೆಂಡೂಲ್ಕರ್ ಆಟ ನೋಡಲಿಕ್ಕೆಂದೇ ಸಿಂಗಾಪುರದಿಂದ ಭಾರತ ಹಾಗೂ ವಿದೇಶಗಳಲ್ಲಿರುವ ಸ್ಟೇಡಿಯಂಗಳಿಗೆ ಅದೆಷ್ಟು ಬಾರಿ ಹೋಗಿ ಬಂದಿರುವೆನೋ ಲೆಕ್ಕವಿಲ್ಲ. ಕ್ರಿಕೆಟ್ ಬಿಟ್ಟರೆ, ಗಣಿತದ ಸಮಸ್ಯೆಗಳೊಂದಿಗೆ ಆಟವಾಡುವುದು, ಪದ ಬಂಧಗಳನ್ನು ತುಂಬುವುದು, ಚೆಸ್ ಆಡುವುದು, ಟೆನಿಸ್ ನೋಡುವುದು... ಇದಿಷ್ಟೇ ನನ್ನ ಪ್ರಪಂಚವಾಗಿತ್ತು. ಐಷಾರಾಮಿ ಬದುಕಿಗೆ ಆಗುವಷ್ಟು ಹಣವಿದೆ. ಆದೇಶ ಪಾಲಿಸಲು ಸಿಬ್ಬಂದಿಗಳಿದ್ದಾರೆ. ಹೊಂದಿಕೊಂಡು ಹೋಗುವ ಹೆಂಡತಿಯಿದ್ದಾಳೆ. ಅಂದ ಮೇಲೆ, ಈ ಜಗತ್ತಿನಲ್ಲಿ ನಾನೇ ಸುಖೀ ಪುರುಷ ಎಂದು ಬೀಗುತ್ತಿರುವಾಗಲೇ, ಅನಾಹುತವೊಂದು ನಡೆದು ಹೋಯಿತು. ಆಗಸ್ಟ್ 28, 2006ರಂದು ನಡೆದ ಆ ದುರ್ಘಟನೆ, ನನ್ನ ಎಲ್ಲ ಲೆಕ್ಕಾಚಾರಗಳನ್ನೂ ಉಲ್ಟಾಪಲ್ಟಾ ಮಾಡಿ ಬಿಡುತ್ತದೆ ಎಂಬ ಅಂದಾಜು ನನಗಂತೂ ಇರಲಿಲ್ಲ.
ಏನಾಯಿತೆಂದರೆ, ಅವತ್ತು ಆಫೀಸ್‌ನಲ್ಲಿದ್ದಾಗಲೇ, ವಿಪರೀತ ತಲೆ ನೋವು ಶುರುವಾಯಿತು. ಕೆಲಸ ಮುಗಿಸಿಕೊಂಡು ಮನೆಗೆ ಬಂದವನೇ, ಮಾತ್ರೆ ನುಂಗಿ ಮಲಗಿ ಬಿಟ್ಟೆ. ಮತ್ತೆ ಎಚ್ಚರವಾದಾಗ ರಾತ್ರಿ 10 ಗಂಟೆ. ಆಗಲೂ ತಲೆನೋವು ಬಿಟ್ಟಿರಲಿಲ್ಲ. ಊಟ ಮುಗಿಸಿ, ಇನ್ನೊಂದು ಮಾತ್ರೆ ನುಂಗಿ ಮಲಗಿದೆ. ಮರುದಿನವೂ ತಲೆನೋವು ಬಿಡಲಿಲ್ಲ. ಸಂಜೆಯ ವೇಳೆಗೆ ಸರಿಯಾಗಬಹುದು ಎಂದುಕೊಂಡು ಮತ್ತೊಂದು ಮಾತ್ರೆ ನುಂಗಿ ಆಫೀಸಿಗೆ ಹೋದೆ. ಅವತ್ತು ಇಡೀ ದಿನ ಮೀಟಿಂಗುಗಳಲ್ಲಿ ಕಳೆದು ಹೋದೆ. ಸಂಜೆ ಕಾರ್ ಓಡಿಸಿಕೊಂಡು ಹೇಗೆ ಬಂದೆನೋ; ಭಗವಂತ ಬಲ್ಲ. ಹೊಸ್ತಿಲು ದಾಟುತ್ತಿದ್ದಂತೆಯೇ ಒಂದೇ ಸಮನೆ ವಾಂತಿಯಾಗ ತೊಡಗಿತು. ಸ್ವಲ್ಪ ಹೊತ್ತಿನ ನಂತರ ಮಾರ್ಕೆಟ್‌ನಿಂದ ಬಂದ ಹೆಂಡತಿ ನನ್ನ ಅವಸ್ಥೆ ಕಂಡು ಕಂಗಾಲಾದಳು. ಆಕೆ ಗಾಬರಿಯಿಂದ ಹತ್ತಾರು ಮಂದಿಗೆ ಫೋನ್ ಮಾಡುತ್ತಿರುವುದು ಗೊತ್ತಾಯಿತು. ಅವಳಿಗೆ ಏನೋ ಹೇಳಲು ಹೋದೆ. ಮಾತು ಹೊರಡಲಿಲ್ಲ.
      ಮತ್ತೆ ಎಚ್ಚರವಾದಾಗ, ನಾನಿರುವುದು ಆಸ್ಪತ್ರೆಯಲ್ಲಿ ಎಂದು ಅರ್ಥವಾಯಿತು. ಹೆಂಡತಿ ತುಂಬಾ ದುಗುಡದಿಂದ- 'ನಿಮ್ಮ ಮಿದುಳಿನ ಎಡಭಾಗಕ್ಕೆ ಬಲವಾದ ಸ್ಟ್ರೋಕ್ ಆಗಿದೆಯಂತೆ. ಹಾಗಾಗಿ, ದೇಹದ ಬಲಭಾಗ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆಯಂತೆ' ಎಂದಳು. ಅವಳ ಮಾತು ಕೇಳಿ ನಂಬಿಕೆಯೇ ಬರಲಿಲ್ಲ. ಕಾರಣ, ನನಗೆ ಆಗಷ್ಟೇ 40 ವರ್ಷ ತುಂಬಿತ್ತು. ಇಷ್ಟು ಚಿಕ್ಕ ವಯಸ್ಸಿಗೆ ಪಾರ್ಶ್ವವಾಯು ಬರಲು ಸಾಧ್ಯವೇ ಇಲ್ಲ ಎಂದು ನನಗೆ ನಾನೇ ಹೇಳಿಕೊಂಡೆ. ನಂತರ, ನನಗೇನೂ ಆಗಿಲ್ಲ ಎಂದು ತೋರಿಸಲು ಬಲಗೈ ಎತ್ತಲು ಪ್ರಯತ್ನಿಸಿದೆ. ಅಷ್ಟೆ: ಭಾರೀ ತೂಕದ ಸಲಾಕೆಯೊಂದು ಬಲಗೈಗೆ ಅಂಟಿಕೊಂಡಿರುವಂತೆ ಭಾಸವಾಯಿತು. ಕೈ ಎತ್ತುವುದಿರಲಿ, ಅದನ್ನು ಸುಮ್ಮನೆ ಅಲುಗಾಡಿಸಲೂ ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಉಳಿದವರೆಲ್ಲ ನನ್ನ ಮೇಲಿನ ಆಸೆಯನ್ನೇ ಕೈ ಬಿಟ್ಟಿದ್ದರು. ಆದರೆ ಮಿದುಳಿನ ಒಂದು ಭಾಗ ಚಟುವಟಿಕೆಯಿಂದ ಇದ್ದುದರಿಂದ ಉಳಿದೆಲ್ಲರಂತೆಯೇ ಯೋಚಿಸುವುದು ನನಗೂ ಸಾಧ್ಯವಿತ್ತು. ಆಸ್ಪತ್ರೆಯಲ್ಲಿ ನನ್ನಷ್ಟಕ್ಕೆ ನಾನೇ ಗೊಣಗಿಕೊಂಡೆ: ಉಹುಂ, ನಾನು ಸಾಯಬಾರದು...
ಮುಂದೆ, ಸಿಂಗಾಪುರದ ಹೆಸರಾಂತ ಆಸ್ಪತ್ರೆಗಳಲ್ಲಿ ಒಂದಾದ ಮೌಂಟ್ ಎಲಿಜಬೆತ್‌ಗೆ ಶಿಫ್ಟ್ ಮಾಡಲಾಯಿತು. ಜಗತ್ತಿನ ಶ್ರೇಷ್ಠ ನ್ಯೂರೋಸರ್ಜನ್‌ಗಳಲ್ಲಿ ಒಬ್ಬರು ಎಂದು ಹೆಸರಾದ ಡಾ. ಟಾಂಕ್ ಕಾಕ್ ಫೂ ನನಗೆ ಚಿಕಿತ್ಸೆ ನೀಡಲು ಮುಂದಾದರು. ಹತ್ತಾರು ಬಗೆಯ ಟೆಸ್ಟ್‌ಗಳನ್ನು ಮಾಡಿದ ನಂತರ-'ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿದೆ. ಹಾಗಾಗಿ ಮಿದುಳಿನ ಎಡಭಾಗಕ್ಕೆ ತೀವ್ರ ಹಾನಿಯಾಗಿ ಸ್ಟ್ರೋಕ್ ಆಗಿದೆ. ಎಲ್ಲವೂ ನಾರ್ಮಲ್ ಆಗುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಆದರೆ ಖಂಡಿತ ರಿಸ್ಕ್ ತಗೋಬಹುದು ಎಂದರು. ರಕ್ತಸಂಚಾರ ಸರಾಗವಾಗಿ ನಡೆಯುವಂತಾಗಲು ಫಿಸಿಯೋಥೆರಪಿಯ ಪಟ್ಟುಗಳನ್ನು ಹೇಳಿಕೊಟ್ಟರು.
ದೇಹದ ಬಲ ಭಾಗ ಸಂಪೂರ್ಣವಾಗಿ ಸ್ವಾಧೀನ ಕಳೆದುಕೊಂಡಿದ್ದರಿಂದ, ಇಡೀ ದಿನವನ್ನು ಹಾಸಿಗೆಯಲ್ಲಿಯೇ ಕಳೆಯಬೇಕಿತ್ತು. ಅದುವರೆಗೂ ಯಾವ ಕೆಲಸಕ್ಕೂ ಎಡಗೈ ಬಳಸದ ನಾನು, ಈಗ ಎಲ್ಲ ಕೆಲಸಕ್ಕೂ ಎಡಗೈಯನ್ನು ಆಶ್ರಯಿಸಬೇಕಾಯಿತು. ಹೆಪ್ಪುಗಟ್ಟಿರುವ ರಕ್ತ ಕರಗಿ ಮತ್ತೆ ಸರಾಗವಾಗಿ ಸಂಚರಿಸಬೇಕಾದರೆ ಕೈ-ಕಾಲುಗಳು ಚಟುವಟಿಕೆಯಿಂದ ಇರಲೇಬೇಕು ಎಂದು ವೈದ್ಯರು ಸ್ಪಷ್ಟವಾಗಿ ಹೇಳಿದ್ದರು. ಹಾಗಾಗಿ, ಅದೆಷ್ಟೇ ಹಿಂಸೆ ಅನ್ನಿಸಿದರೂ ಕೈ ಬೆರಳುಗಳನ್ನು ಹಿಗ್ಗಿಸಲು, ಗೋಡೆ ಹಿಡಿದುಕೊಂಡು ನಿಲ್ಲಲು, ಒಂದೆರಡು ಹೆಜ್ಜೆ ನಡೆದು ಹೋಗಲು ಪ್ರಯತ್ನಿಸುತ್ತಲೇ ಇದ್ದೆ. ಈ ಪ್ರಯತ್ನದಲ್ಲಿ ಒಂದೆರಡು ಬಾರಿ ಆಯತಪ್ಪಿ ಬಿದ್ದು ತುಟಿ ಒಡೆಯಿತು. ಕಣ್ಣಿಗೂ ಪೆಟ್ಟಾಯಿತು. ಆದರೆ ನನ್ನ ಉತ್ಸಾಹವನ್ನು ಮನೆ ಮಂದಿ ಮೆಚ್ಚಿಕೊಂಡರು. ಹೌದು. 41ನೇ ವಯಸ್ಸಿನಲ್ಲಿ ನಾನು ಮತ್ತೊಮ್ಮೆ ಎಳೆಯ ಮಗುವಿನಂತೆಯೇ ತೆವಳಿದ್ದೆ. ನನ್ನ ಮಗ ಆಗಷ್ಟೇ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದ ನಡೆಯುವ, ತೆವಳುವ,  ನಿಲ್ಲುವ ಸಂದರ್ಭದಲ್ಲಿ ನಾನು ಅವನನ್ನು ಮಕ್ಕಿಕಾಮಕ್ಕಿ ಕಾಪಿ ಮಾಡಿದ್ದೆ. ಆನಂತರವೂ ನಾಲ್ಕು ಹೆಜ್ಜೆ ನಡೆಯಲು ಸಾಧ್ಯವಾಗದೇ ಹೋದಾಗ ಬಿಕ್ಕಿ ಬಿಕ್ಕಿ ಅತ್ತೆ.
ಈ ಮಧ್ಯೆಯೇ ಆಸ್ಪತ್ರೆ ಸುತ್ತುವ ಕೆಲಸವೂ ಮುಂದುವರಿದಿತ್ತು. ನಾನಾ ಚಿಕಿತ್ಸೆಯ ಕಾರಣದಿಂದ ಬವಳಿ ಬರುತ್ತಿತ್ತು. ಜೊತೆಯಲ್ಲಿ ಯಾರಿದ್ದಾರೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಕೆಲವು ಸಂದರ್ಭದಲ್ಲಿ ಹೆಂಡತಿಯ ಹೆಸರೂ ಮರೆತು ಹೋಗುತ್ತಿತ್ತು. ಅರೆಪ್ರಜ್ಞೆ- ಅರೆಎಚ್ಚರದ ಸ್ಥಿತಿಯಲ್ಲಿ ನಾನಿರುವಾಗಲೇ ಎರಡು ವರ್ಷ ಕಳೆದಿದ್ದವು. ಆಗ ವೈದ್ಯರು, ಪಿಜಿಯೋಥೆರಪಿಯ ಜೊತೆಗೆ ಈಜು ಹೊಡೆಯಿರಿ. ಆಗ ಕೈ -ಕಾಲು ಆಡಿಸಲು ಸುಲಭವಾಗುತ್ತದೆ ಎಂದರು. ಇರಲಿ, ಇದನ್ನೂ ಪ್ರಯತ್ನಿಸೋಣ ಎಂದುಕೊಂಡು ನೀರಿಗಿಳಿದವನಿಗೆ, ಅದೇನೇ ಹರಸಾಹಸ ಮಾಡಿದರೂ ಕೈ-ಕಾಲು ಆಡಿಸಲು ಸಾಧ್ಯವಾಗಲಿಲ್ಲ. ಪರಿಣಾಮ, ಹತ್ತಕ್ಕೂ ಹೆಚ್ಚು ಬಾರಿ ಮುಳುಗಿ ಹೋಗಿದ್ದೆ. ಪ್ರತಿ ಸಂದರ್ಭದಲ್ಲೂ ತರಬೇತುದಾರರು ಜೀವ ಉಳಿಸಿದ್ದರು. ಹೀಗೆ, ಪಟ್ಟು ಬಿಡದೆ ಅಭ್ಯಾಸ ನಡೆಸಿದ್ದರಿಂದ ಬಲಗೈ ಹಾಗೂ ಕಾಲನ್ನು ಅಲುಗಾಡಿಸಲು, ಕ್ಷಣಕಾಲ ನಿಲ್ಲಲು, ಕಡಿಮೆ ತೂಕದ ವಸ್ತುಗಳನ್ನು ಹಿಡಿದುಕೊಳ್ಳಲು ಸಾಧ್ಯವಾಯಿತು.
ಹೊಸ ಬದುಕಿನೆಡೆಗೆ ನಾನು ಒಂದೊಂದೇ ಹೆಜ್ಜೆ ಇಡುತ್ತಿರುವಾಗಲೇ, ಮುಂಬಯಿಯ ಪೆಪ್ಸಿ ಕಂಪನಿಯಲ್ಲಿದ್ದ ಗೆಳೆಯ ಫೋನ್ ಮಾಡಿ ಹೇಳಿದ: 'ಮುಂದಿನ ವಾರ ನಮ್ಮ ಆಫೀಸಿಗೆ ತೆಂಡೂಲ್ಕರ್ ಬರ್ತಾ ಇದಾರೆ. ನೀನು ಬಂದ್ರೆ ಅವರನ್ನು ಭೇಟಿಯಾಗಬಹುದು...' ತಕ್ಷಣವೇ ಅವನಿಗೆ ನನ್ನ ಪರಿಸ್ಥಿತಿ ವಿವರಿಸಿದೆ. Get well soon ಎಂದು ತೆಂಡೂಲ್ಕರ್ ಕೈಲಿ ಬರೆಸಿಕೊಂಡು ನನಗೆ ಮೇಲ್ ಕಳಿಸು ಪ್ಲೀಸ್ ಎಂದು ವಿನಂತಿಸಿದೆ. ಹತ್ತು ದಿನಗಳ ನಂತರ, ನಂಬಲಾಗದ ಅಚ್ಚರಿಯೊಂದು ಕಣ್ಣೆದುರಿಗಿತ್ತು: 'Get well soon. we are all with you ' ಎಂದು ಶುಭ ಹಾರೈಸಿ ಖುದ್ದು ಸಚಿನ್ ತೆಂಡೂಲ್ಕರ್ ಮೇಲ್ ಕಳಿಸಿದ್ದರು. ನನ್ನ ಸ್ಥಿತಿ ಕಂಡು ಕಂಗಾಲಾಗಿ ಅಮ್ಮ ಬಂದಾಗಲೂ ಅಳದೇ ಇದ್ದವನು, ತೆಂಡೂಲ್ಕರ್ ಕಳಿಸಿದ ಮೇಲ್ ಕಂಡು ಭಾವುಕನಾಗಿ ಅತ್ತು ಬಿಟ್ಟೆ.
ತೆಂಡೂಲ್ಕರ್ ಕಡೆಯಿಂದ ಮೇಲ್ ಬಂತಲ್ಲ; ಅದೇ ನನ್ನ ಬದುಕಿನ ಟರ್ನಿಂಗ್ ಪಾಯಿಂಟ್. ನಾನು ಬದುಕಬೇಕು, ನಾನು ಗೆಲ್ಲಬೇಕು ಎಂಬ ಹಠ ತೀವ್ರವಾಗುತ್ತಾ ಹೋಯಿತು. ಈ ವೇಳೆಗೆ ನೌಕರಿಯಿಂದ ವಿಆರ್‌ಎಸ್ ಪಡೆದಿದ್ದೆ. ವ್ಯವಹಾರದ ಕಾರಣಕ್ಕೆ ಚೆಕ್‌ಗಳಿಗೆ ಸಹಿ ಹಾಕಲೇಬೇಕಿತ್ತು. ಆದರೆ ಸಹಿ ಮಾಡಬೇಕಾದ ಬಲಗೈ ಸ್ವಾಧೀನ ಕಳೆದುಕೊಂಡಿತ್ತು. ನನ್ನ ಹೀರೋ ತೆಂಡೂಲ್ಕರ್ ಸಹಿ ಮಾಡುವುದೂ ಎಡಗೈನಲ್ಲೇ ಎಂಬುದನ್ನು ಮನಸ್ಸಿಗೆ ತಂದುಕೊಂಡು ಎಡಗೈಗೆ ಪೆನ್ನು ಸಿಕ್ಕಿಸಿಕೊಂಡು ಹಾಳೆಯ ಮೇಲೆ, ಗೋಡೆಯ ಮೇಲೆ, ನೆಲದ ಮೇಲೆಲ್ಲ ಬರೆದೆ. ಕಡೆಗೊಂದು ದಿನ ಬಲಗೈಲಿ ಮಾಡುತ್ತಿದ್ದೆನಲ್ಲ; ಅಷ್ಟೇ ಸುಂದರವಾಗಿ ಎಡಗೈಲೂ ಬರೆಯಲು ಕಲಿತೆ. ವರ್ಷವಿಡೀ ಹಾಸಿಗೆಯಲ್ಲಿ ಉಸಿರಾಡುವ ಶವದಂತೆ ಬಿದ್ದಿರುವ ಬದಲು ಕ್ರೀಡೆಗೆ ಸಂಬಂಧಿಸಿದ, ನನ್ನ ಹೀರೋ ಸಚಿನ್ ತೆಂಡೂಲ್ಕರ್‌ಗೆ ಸಂಬಂಧಿಸಿದ ಪುಸ್ತಕವನ್ನು ಬರೆಯಬಾರದೇಕೆ ಅನ್ನಿಸಿತು. ನನ್ನ ಆಪ್ತ ಮಿತ್ರ ಶ್ಯಾಮ್‌ನೊಂದಿಗೆ ಎಲ್ಲವನ್ನೂ ಹೇಳಿಕೊಂಡೆ. ಅದರ ಪರಿಣಾಮವಾಗಿ ಹೊರಬಂದದ್ದೇ - If cricket is a Religion, Sachin is god  ಹಾಗೂ The Business of cricket: The story of sports marketing in Indiaಎಂಬ ಪುಸ್ತಕಗಳು. ಇದಿಷ್ಟೂ ಆಗುವುದರೊಳಗೆ ನಾಲ್ಕು ವರ್ಷಗಳು ಕಳೆದು ಹೋಗಿದ್ದವು. ಈ ಹೊತ್ತಿಗೆ ಸರಾಗವಾಗಿ ನಡೆದಾಡಲು ಸಾಧ್ಯವಾಗುವಂತೆ ನನ್ನ ದೇಹ ಬದಲಾಗಿತ್ತು. ನನ್ನನ್ನು ಪರೀಕ್ಷಿಸಿದ ವೈದ್ಯರು-'ಪಾರ್ಶ್ವವಾಯುವಿನ ವಿರುದ್ಧ ಗೆಲುವು ಸಾಧಿಸಿದ್ದೀ. ಅಭಿನಂದನೆ' ಎಂದರು.
----
ಹೀಗೆ ಮುಗಿಯುತ್ತದೆ ವಿಜಯ್ ಸಂತಾನಂ ಯಶೋಗಾಥೆ. ಎಡಗೈನ ಬೆರಳುಗಳ ಸಹಾಯದಿಂದಲೇ ತನ್ನ ಯಶೋಗಾಥೆ ವಿವರಿಸುವ My stroke of Luck ಎಂಬ ಪುಸ್ತಕ ಬರೆದಿರುವ ವಿಜಯ್ ಈಗ ದೇಶ ವಿದೇಶಗಳ ಐಐಎಂ, ಐಬಿಎಂ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಸ್ಫೂರ್ತಿ ತುಂಬುವ ಭಾಷಣಗಳಿಂದ ಲಕ್ಷಾಂತರ ಮಂದಿಯ ಮನಸ್ಸು ಗೆದ್ದಿದ್ದಾರೆ. ಸ್ಟ್ರೋಕ್ ಆದರೆ ಬದುಕು ಮುಗಿದೇ ಹೋಯ್ತು ಎಂದು ಕಂಗಾಲಾಗುವವರಿಗೆ ಒಂದು ನೀತಿ ಪಾಠವೂ ಆಗಿದ್ದಾರೆ.
ಈ ಸಾಹಸಿಯಿಂದ ನಾವೆಲ್ಲರೂ ಕಲಿಯಬೇಕಾದದ್ದು ಬಹಳಷ್ಟಿದೆ. ಅಲ್ಲವೇ? 

- ಎ.ಆರ್. ಮಣಿಕಾಂತ್

armanikanth@gmail.com





















No comments:

Post a Comment